ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಡಿಸುವ ಕೊಂಡಿ

Last Updated 14 ಜುಲೈ 2018, 19:30 IST
ಅಕ್ಷರ ಗಾತ್ರ

ನಮ್ಮಜ್ಜಿ ಮಾತೆತ್ತಿದರೆ ನಮ್ಕಾಲ್ದಾಗೆ
ತಾಳೆಹಿಟ್ಟು ಬೈಣಿಹಿಟ್ಟಿನ ಅಂಬಲಿ ಅಂತಾಳೆ
ಅಮ್ಮ ಕೊಚ್ಚಗಕ್ಕಿ ತಣ್ಣೆಗಂಜಿಗೆ ಒಣಮೀನು
ಕಚ್ಚಿಕೊಂಡುಂಡಿದ್ದು ಕಣ್ಮುಂದೆ ಕಂಡಂತೆ
ನಾವೇ ಪರವಾಗಿಲ್ಲ ದೋಸೆ– ಚಟ್ನಿ ಇಡ್ಲಿ– ಸಾಂಬಾರು
ನಮ್ಮಾಚೆಯವರು ಪಿಜ್ಜಾ ಬರ್ಗರ್
ಸೆವೆನ್ಅಪ್ ಪೆಪ್ಸಿ ಕೋಲಾ ಪಪ್ಸು ಪೆಟ್ಟೀಸ್
ಮ್ಯಾಗಿ ಲೇಯ್ಸು ನೂಡಲ್ಸು ಕುರ್ಕುರೆ
ನಮಗೆ ಹೆಸರು ಬಾರದ ಇನ್ನೂ ಏನೇನೋ......

ಅಂಟವಾಳ ದಾಸವಾಳ ಜಜ್ಜಿ ತಲೆ ಮಿಂದ ಅಜ್ಜಿ
ಇನ್ನೇನು ಶತಕ ಬಾರಿಸಿಯೇ ಬಿಡ್ತಾಳೆ
ಇನ್ನೂ ಇದೆ ಬಿಳಿಕೂದಲಿನಲ್ಲಿ ಕರಿಯೆಳೆಗಳು
ಸೊಪ್ಪು ಸೌದೆ ಹೊತ್ತು ಒಳ್ಳು ಒನಕೆ
ಕೊಟ್ಟಿಗೆ ಕಳದಂಗಳ ನೆಟ್ಟಿ ಕೊಯ್ಲೆಂದು
ಬಿಸಿಲಲ್ಲಿ ಸುಟ್ಟುಕೊಂಡ ಅಮ್ಮ
ಐನೂರೊಂದು ಗೆರೆ ಸಬಕಾರ ತಿಕ್ಕಿ ತೊಳೆದ
ನೂಲಿನ ಸೀರೆಯುಟ್ಟು ಹೆರಳು ಸುತ್ತಿ
ಮಲ್ಲಿಗೆ ಮುಡಿದು ನಡೆದರೆ
ಮೂವತ್ತಾರು ಇಪ್ಪತ್ತಾರರ ಸೈಜಿಗೆ
ಬೆರಳು ಕಚ್ಚುತ್ತೇನೆ
ಈಗಲೂ ಬಿಪಿ ಶುಗರ್ ನಾರ್ಮಲ್ಲು

ಕೂತುಂಡು ನಡುದಪ್ಪಗಾದ ನಾನು
ಯಾವ ಎಂಗಲ್ನಲ್ಲೂ ಅಮ್ಮಂಗೆ ಮಗಳಲ್ಲ
ಯಾರೋ ಒಮ್ಮೆ ‘ಅಕ್ಕನಾ ತಂಗಿಯಾ?’
ಅಂದದ್ದು ಮನದಲ್ಲಿ ಸುಳಿದು
ಮಂಡೆ ಬಿಸಿ
ನಾನು ಕೊಲೆಸ್ಟ್ರಾಲ್ ಗೆ ಮಾತ್ರೆ ನುಂಗುವುದು
ಅವಳಿಗೆ ಹೇಳಿಲ್ಲ

‘ಮಮ್ಮೀ...’ ಸೂರು ಕಳಚಿ ಬಿದ್ದಂತೆ
ಕಿರುಚುತ್ತಾಳೆ ಟೀನ್ ಏಜಿನ ಮಗಳು
ಹರ್ಬಲ್ ಶಾಂಪೂ ಕಂಡೀಶ್ನರ್ ಪ್ಯಾಕ್ಸ್‌
ಸ್ಪ್ರೇ ಜೆಲ್ ಹೇರ್ ಆಯ್ಲ್ ಡ್ರೈಯರ್ ಬಳಸಿ
ಸಂಭಾಳಿಸಿದ ಸಿಲ್ಕಿ ಕೂದಲಿನಲ್ಲಿ
ಒಂದೆರಡು ಬೆಳ್ಳಿಯೆಳೆಗಳು
ಡ್ರೆಸ್ಸಿಂಗ್ ಟೇಬಲ್ಲಿನ ಮೇಲೆ ಅಡ್ಡಾದಿಡ್ಡಿ
ಮಲಗಿದ ಫೇಸ್ ವಾಶ್ ಡಿಯೋಡ್ರಂಟು ಮಾಯಿಶ್ಚರೈಸರ್ ಎಸ್ಪಿಎಫ್ ಆ್ಯಂಟಿ ಎಕ್ನೆ
ಲಿಪ್‌ಶೈನರ್ ಲಿಪ್ಮೆಜಿಕ್
ಈಗ ಹೆಚ್ಚು ಮಾರಾಟವಾಗುವುದಿಲ್ಲ
ನನ್ನ ಕಾಲದ ಹಮಾಮು ರೆಕ್ಸೋನಾಗಳು

ಮಗಳ ಕೆನ್ನೆಯ ತುಂಬಾ ಅರಳಲಣಿಯಾದ
ಕರಿಕ್ಯಾನೆಯಂಥ ಮೊಡವೆಗಳು
ನನ್ನ ನೋಡಿ ಅಣಕಿಸಿದರೆ ಈಗಲೂ ಅರಿಶಿನ
ಬಳಿದ ಅಮ್ಮನ ನುಣ್ಪುಗೆನ್ನೆಗಳು
ಮನದಲ್ಲಿ ಮಲಗಿವೆ
ಯಾವುದು ಎಲ್ಲೆಲ್ಲಿದೆ ಎಂದು ಅಂದಾಜಿಸಲಾಗದ ಮಗಳ ರೌಂಡ್ ಶೇಪ್
ಕಂಡಾಗೆಲ್ಲ ಜೀರೋ ಸೈಜಿನ ಅಜ್ಜಿ
ನೆನಪಿನಂಗಳದಲ್ಲಿ ಕ್ಯಾಟ್ ವಾಕ್ ಮಾಡುತ್ತಾಳೆ

ನಡುಮನೆಯಲ್ಲಿ ಸದಾ ಚಾಲೂ ಇರುವ
ಟಿವಿಯಲ್ಲಿ ಹೇರ್ ಡೈ ಆ್ಯಡ್‌ಗಳ ಅಬ್ಬರ
‘ಯೂಸ್ ಹೇರ್ ಕಲರ್’
ತಣ್ಣಗೆ ನುಡಿದು ಹೊರಬರುತ್ತೇನೆ

ಅಮ್ಮ,ಅಜ್ಜಿ, ಅತ್ತೆ ಹಬ್ಬಹರಿದಿನ ಗೌರಿಪೂಜೆ
ಹಳದಿ– ಕುಂಕುಮ ಎಂದು ಹಿಂದಕ್ಕೆಳೆದರೆ
ಮಕ್ಕಳು ಜನರೇಶನ್ ಗ್ಯಾಪಮ್ಮಾ ಎನ್ನುತ್ತ
ಮುಂದಕ್ಕೆಳೆದು ವಾಟ್ಸ್ಯಾಪ್ ಫೇಸ್‌ಬುಕ್‌ಗಳಿಗೆ
ಎಂಟ್ರಿ ಮಾಡಿಸಿ ಗೂಗಲಿಸುವದ
ಹೇಳಿಕೊಡುತ್ತಿದ್ದಾರೆ

ಹಿಂದೆ ಮುಂದೆಗಳ ಕೂಡಿಸುವ ಕೊಂಡಿ ನಾನು
ಹಗ್ಗ ಜಗ್ಗಾಟದಲ್ಲಿ ಸವೆದಿದ್ದೇನೆ
ನಾನು ಅಮ್ಮನೋ ಮಮ್ಮಿಯೋ
ನನ್ನೊಳಗೆ ದ್ವಂದ್ವ
ಸುತ್ತುವ ಕಾಲಗೋಲದಲ್ಲಿ ಅವೇ ಋತುಮಾನಗಳು
ಬದಲಾಗುತ್ತಿವೆ ತಲೆಮಾರುಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT