ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥೆ: ಚಾವಡಿ ಮತ್ತು ನಡುಮನೆಯ ಮಧ್ಯದಲ್ಲೊಂದು ಆಳ ಕಣಿವೆ

ಅರ್ಪಣ ಎಚ್.ಎಸ್. ಅವರ ಕಥೆ
ಅರ್ಪಣ ಎಚ್.ಎಸ್
Published 25 ನವೆಂಬರ್ 2023, 22:09 IST
Last Updated 25 ನವೆಂಬರ್ 2023, 22:09 IST
ಅಕ್ಷರ ಗಾತ್ರ

ದೀಪಾವಳಿ ಕಥಾಸ್ಪರ್ಧೆ2023ರಲ್ಲಿ ಮೆಚ್ಚುಗೆ ಪಡೆದ ಕಥೆ

--

ದಿನ–1

ಆಕಾಶದುದ್ದಕ್ಕೂ ಜರಡಿ ಹರವಿ ಅತೀ ಮೆಲ್ಲಗೆ ಹಿಟ್ಟು ಆಡಿಸಿದಂತೆ, ಸಣ್ಣ ಹನಿಗಳು ಎರಡು ದಿನಗಳಿಂದಲೂ ನಿರಂತರವಾಗಿ ಉದುರುತ್ತಲೇ ಇದ್ದವು. ಸೂರ್ಯ, ಕರಿಕಂಬಳಿಯಂತಹ ಮೋಡಗಳನ್ನು ಕೌಚಿಕೊಂಡು ಮಲಗಿಬಿಟ್ಟಿದ್ದ. ಹೀಗಾಗಿ, ಅಂದಿನ ಬೆಳಗು ಒಂದು ನಮೂನೆಯ ಔದಾಸ್ಯದಿಂದ ತೂಕಡಿಸುತಿತ್ತು. ಒದ್ದೆ ಸೌದೆಯಿಂದಾಗಿ ನೀರೊಲೆ ಎಬ್ಬಿಸುತ್ತಿದ್ದ ಅಲೆ ಅಲೆಯಾದ ದಪ್ಪ ಕಪ್ಪು ಹೊಗೆ, ಮಬ್ಬು ವಾತಾವರಣವನ್ನು ಮತ್ತಷ್ಟು ಮಂಕಾಗಿಸಿತ್ತು. ಪಿರಿಪಿರಿ ಮಳೆ ಮತ್ತು ಅಮಲಿನಂತಹ ಚಳಿಯಿಂದಾಗಿ ಎಂದಿಗಿಂತ ತಡವಾಗಿ ಎದ್ದಿದ್ದ ಗೌರಿ, ಮಳೆಯ ಹನಿ ತಲೆಯ ಮೇಲೆ ಬೀಳದಂತೆ, ಮಾಡಿನ ಮರೆಯೊಳಗೇ ನಿಂತು, ಬಾಯಿಯಲ್ಲಿ ತುಂಬಿದ್ದ ಟೂತ್‌ಪೇಸ್ಚಿನ ನೊರೆ, ಪಕ್ಕದ ಅಬ್ಬಲ್ಲಿಗೆ ಗಿಡದ ಬುಡಕ್ಕೆ ಹೋಗಿ ಬೀಳುವಂತೆ ಜೋರಾಗಿ ಉಗುಳಿದವಳೇ, ಕತ್ತೆತ್ತಿ ಆಕಾಶ ನೋಡಿದಳು. ಮೊನ್ನೆ ಶಾಲೆಯಲ್ಲಿ ಅನೆಯ ಚಿತ್ರಕ್ಕೆ ಕಲರ್ ಮಾಡಲು, ಶಾಯಿ ಖಾಲಿಯಾಗಿದ್ದ ಕಪ್ಪು ಸ್ಕೆಚ್ ಪೆನ್ನಿನೊಳಗೆ ತಾನು ಕೊಂಚ ನೀರು ಹಾಕಿದಾಗ ಸೃಷ್ಚಿಯಾಗಿದ್ದ ಬೂದು ಕರಿ ಬಣ್ಣವನ್ನೇ ಇಡೀ ಆಕಾಶಕ್ಕೆ ಬಳಿದ ಹಾಗೆ ಕಂಡಿತು ಅವಳಿಗೆ.

ಅಂದು ಶಾಲೆಗೆ ಹೋಗುವ ಮೂಡು ಕಿಂಚಿತ್ತೂ ಇಲ್ಲದ ಗೌರಿ, ಬ್ರಷ್ಶು ಕಚ್ಚಿಕೊಂಡೇ ಅನ್ಯಮನಸ್ಕಳಾಗಿ ನೀರೊಲೆಯ ಮುಂದೆ ಚಳಿ ಕಾಸುತ್ತಾ ಕುಕ್ಕರಗಾಲಲ್ಲಿ ಕೂತಳು. ಒಗೆದು ಮೂರು ದಿನವಾಗಿದ್ದರೂ ಒಣಗಿರದ ಅವಳ ಯೂನಿಫಾರ್ಮಿನ ನೀಲಿ ಲಂಗ, ಹಂಡೆಯ ಮುಚ್ಚಳದ ಮೇಲೆ ಹರಡಿಕೊಂಡು ಬೆಚ್ಚಗಾಗುತ್ತಿತ್ತು. ಮಳೆ ಜೋರಾಗಿಯಾದರೋ ಸುರಿದಿದ್ದರೆ ಶಾಲೆಗೆ ರಜೆ ಸಿಗುತ್ತಿತ್ತೇನೋ. ಈಗ ಅದರ ಸಾಧ್ಯತೆಯೂ ಇಲ್ಲದಿರುವುದು ಅವಳಿಗೆ ಕಿರಿಕಿರಿ ಎನಿಸಿತು. ಬ್ರಷ್ಷು ಹಿಡಿದು ಹಿತ್ತಲಿಗೆ ಹೋದ ಮಗಳು ಗಂಟೆ ಎಂಟಾಗುತ್ತಾ ಬಂದರೂ ಮರಳಿ ಬಾರದಿರುವುದನ್ನು ಕಂಡು, ದೋಸೆ ಮಗಚುವ ಸಟ್ಟುಗದ ಸಮೇತ ಹಿಂಭಾಗಕ್ಕೆ ಬಂದ ಅವಳಮ್ಮ ಭವಾನಿಗೆ, ಗೌರಿ ಒಲೆ ಮುಂದೆ ಬ್ರಷ್ಷು ತಿನ್ನುತ್ತಾ ಧ್ಯಾನಸ್ಥೆಯಂತೆ ಕುಳಿತಿರುವುದು ಕಂಡು ಪಿತ್ತ ನೆತ್ತಿಗೇರಿತು. “ಇದರಲ್ಲೇ ಕಾಸಿ ಬರೆ ಹಾಕ್ತೇನೆ ಈಗ. ಬೇಗ ಸ್ನಾನ ಮಾಡಿ ಹೊರಡ್ತೀಯ ಇಲ್ವಾ?” ಎಂದು ಗದರುತ್ತಲೇ ಗೌರಿಯ ತಲೆಯ ಮೇಲೊಂದು ಜೋರಾಗಿ ಮೊಟಕಿ, ಮತ್ತೆ ಅಡುಗೆಮನೆಯತ್ತ ಓಡಿದಳು.

ಹತ್ತು ನಿಮಿಷದಲ್ಲಿ ಸ್ನಾನ ಮುಗಿಸಿ ಇನ್ನೂ ಪೂರ್ತಿ ಒಣಗಿರದ, ಹೊಗೆಯ ವಾಸನೆ ಸೂಸುವ ನೀಲಿ ಲಂಗ, ಅಲ್ಲಲ್ಲಿ ನೀರು ಕಜೆಯ ಕಪ್ಪು ಚುಕ್ಕೆಗಳಿಂದ ಅಲಂಕೃತವಾದ ಬಿಳಿ ಟಾಪು ತೊಟ್ಟು ಬಂದ ಗೌರಿಯ ಒಳಗೆ ಒಂದು ರೀತಿಯ ಜುಗುಪ್ಸೆ ಪುಟಿದೇಳುತ್ತಿತ್ತು. ತಡವಾಗಿದ್ದರಿಂದ ಭವಾನಿ ಮಗಳಿಗೆ ಸಾವಧಾನವಾಗಿ ದೋಸೆ ತಿನ್ನಲೂ ಅವಕಾಶ ನೀಡದೆ, ಬುತ್ತಿ ಕೈಗಿತ್ತು ಶಾಲೆಗೆ ಓಡಿಸಿಬಿಟ್ಟಳು. ಒಂದು ಫರ್ಲಾಂಗು ದೂರವನ್ನು ನಿರುತ್ಸಾಹದಿಂದ ಕಾಲು ಎಳೆಯುತ್ತಲೇ ಸವೆಸಿದ ಗೌರಿಗೆ, ಸುಶೀಲಳ ಮನೆ ಕಣ್ಣಿಗೆ ಬಿದ್ದದ್ದೇ, ‘ಅರೆ, ಇವತ್ತಾಗಲೇ ಶುಕ್ರವಾರ. ಭಾನುವಾರಕ್ಕೆ ಇನ್ನೆರಡೇ ದಿನ ಬಾಕಿ’ ಎಂಬುದು ನೆನಪಾಗಿ ಸಣ್ಣಗೆ ಉತ್ಸಾಹ ಚಿಗುರತೊಡಗಿತು. ಬಹುತೇಕ ಇದೇ ಸಮಯಕ್ಕೆ ಸುಶೀಲ ಗೇರುಬೀಜದ ಫ್ಯಾಕ್ಟರಿಗೆ ಹೊರಡಲು ಜಡೆ ಹೆಣೆಯುತ್ತಾ ಅಂಗಳದಲ್ಲಿ ನಿಂತಿರುತ್ತಿದ್ದ ಕಾರಣ, ಗೌರಿಯ ಕಣ್ಣುಗಳು ಅವಳಿಗಾಗಿ ಕಾತುರದಿಂದ ಹುಡುಕಿದವು. ಆದರೆ, ಸುಶೀಲ ಕಾಣಲಿಲ್ಲ.

“ಭಾನುವಾರದ ವಿಶೇಷ ಚಲನಚಿತ್ರ. ಮಾಲಾಶ್ರೀ, ಸುನೀಲ್ ಅಭಿನಯದ ಸಾಹಸಿ. ವೀಕ್ಷಿಸಿ ನಿಮ್ಮ ಉದಯ ಟಿವಿಯಲ್ಲಿ” ಎಂಬ ಜಾಹೀರಾತನ್ನು ಕಮ್ತೆರ ಮನೆಯ ಟಿವಿಯಲ್ಲಿ ನೋಡಿದಾಗಲೇ ಸುಶೀಲ ಮತ್ತು ಗೌರಿ ರೋಮಾಂಚಿತರಾಗಿದ್ದರು. ಅವರ ಅಚ್ಚುಮೆಚ್ಚಿನ ಮಾಲಾಶ್ರೀ ಪೊಲೀಸ್ ಡ್ರೆಸ್ಸಿನಲ್ಲಿ ಏಕಕಾಲಕ್ಕೆ ಖಡಕ್ ಆಗಿಯೂ, ಪರಮಸುಂದರಿಯಾಗಿಯೂ ಕಾಣುತ್ತಿದ್ದಳು. ಕಳೆದ ವರ್ಷ ಎಸ್.ಪಿ. ಭಾರ್ಗವಿ ಸಿನಿಮಾವನ್ನು ಟಾಕೀಸಿನಲ್ಲೇ ಮೂರು ಬಾರಿ ನೋಡಿದ್ದ ಸುಶೀಲ, ಜಾಹೀರಾತಿನ ಆಧಾರದ ಮೇಲೆಯೇ ಸಾಹಸಿ ಚಿತ್ರದ ಕತೆಯನ್ನು ಊಹಿಸಿ ಹೇಳಿದ್ದಳು. “ಪಕ್ಕಾ ಇದೇ ಕತೆ ಇರ್ತದೆ. ಮುಂದಿನ ವಾರ ನೋಡು ಬೇಕಾರೆ” ಎಂದು ಛಾಲೆಂಜ್ ಕೂಡ ಮಾಡಿ ತನ್ನ ಬುದ್ಧಿವಂತಿಕೆ ಮತ್ತು ಕಲ್ಪನಾ ಸಾಮರ್ಥ್ಯದ ಬಗ್ಗೆ ಅಪಾರ ವಿಶ್ವಾಸ ವ್ಯಕ್ತಪಡಿಸಿದ್ದಳು.

ಆದರೆ, ಕೂಡಲೇ ಮುಖ ಸಣ್ಣದು ಮಾಡಿಕೊಂಡು “ನನ್ನಮ್ಮ ರಾತ್ರಿ ಇಡೀ ನನ್ನ ಕೈಲಿ ಬೀಡಿ ಕಟ್ಟಿಸದೇ ಇದ್ದಿದ್ರೆ, ಸಮಾ ಕಲ್ತು ನಾನೂ ಕೂಡ ಇನ್ಸ್‌ಪೆಟರ್ ಆಗ್ತಾ ಇದ್ದೆ” ಎಂದು ನಿಟ್ಟುಸಿರು ಬಿಟ್ಟಿದ್ದಳು. ಸುಶೀಲ ಹೀಗೆ, ಬಂಧನ ನೋಡಿದಾಗ ಡಾಕ್ಟರ್ ಆಗುವ ಆಸೆಯನ್ನೂ, ಚಲಿಸುವ ಮೋಡಗಳು ನೋಡಿದಾಗ ಲಾಯರ್ ಆಗುವ ಆಸೆಯನ್ನೂ, ಇಬ್ಬನಿ ಕರಗಿತು ನೋಡಿದಾಗ ಚಂದದ ಶ್ರೀಮಂತನನ್ನು ಮದುವೆಯಾಗಿ ಹೆಂಡತಿಯಾಗುವ ಆಸೆಯನ್ನೂ ವ್ಯಕ್ತಪಡಿಸುತ್ತಿದ್ದಳಾದರೂ, ಅವಳ ಮೂಲ ಮತ್ತು ನೈಜ್ಯ ಕನಸು ಪೋಲೀಸ್ ಆಗುವ ವಿಷಯಕ್ಕೆ ನಿಷ್ಠವಾಗಿದೆ ಎಂಬುದು ಗೌರಿಗೆ ಗೊತ್ತಿತ್ತು. ಏಕೆಂದರೆ, ಉಳಿದೆಲ್ಲವೂ ಆಯಾ ಸಿನಿಮಾ ನೋಡಿದ ಒಂದು ವಾರದವರೆಗೆ ಇರುತ್ತಿದ್ದ ಸೀಸನಲ್ ಬಯಕೆಗಳಾಗಿದ್ದರೆ, ಪೋಲೀಸ್ ಆಗಬೇಕೆಂಬ ಆಸೆ ನಿರಂತರವಾಗಿತ್ತು.

ಆದರೆ ಗ್ರಹಚಾರ. ಸುಶೀಲ ಕಳೆದ ವರ್ಷ ಹತ್ತನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಇಂಗ್ಲಿಷ್ ವಿಷಯದಲ್ಲಿ ಫೇಲಾದ ಬಳಿಕ, ಅವಳಮ್ಮ ಅವಳನ್ನು ಬೆಳಗಿನ ಜಾವ ಗೇರುಬೀಜ ಕಾರ್ಖಾನೆಯ ಕೆಲಸಕ್ಕೂ, ಸಂಜೆ ಮೇಲೆ ಬೀಡಿ ಕಟ್ಟುವುದಕ್ಕೂ ಹಚ್ಚಿದ್ದರು. ತಂದೆ ಇಲ್ಲದ ಮಗಳಿಗೆ ಬೇಗ ಒಂದು ಮದುವೆ ಮಾಡಿ ಮುಗಿಸಬೇಕೆಂಬ ಸಾಧಾರಣ ಆಸೆ ಮಾತ್ರ ಹೊಂದಿದ್ದ ಅವರಿಗೆ ಸುಶೀಲಳ ಪರೀಕ್ಷೆ, ಫಲಿತಾಂಶಗಳಿಂದ ಆಗುವುದೇನೂ ಇರಲಿಲ್ಲ. ಪಾಸ್ ಆಗಿದ್ದರೂ ಅವರು ಸುಶೀಲಳನ್ನು ಕಾಲೇಜಿಗೇನು ಕಳುಹಿಸುತ್ತಿರಲಿಲ್ಲ. ಹೀಗಾಗಿ, ಮತ್ತೆ ಪರೀಕ್ಷೆ ಕಟ್ಟುವುದೇನೂ ಬೇಡ, ಮದುವೆಗೆ ಬೇಕಾದ ಚಿನ್ನಕ್ಕೆ ಹಣವನ್ನು ಆದಷ್ಚು ಬೇಗ ಒಟ್ಟು ಮಾಡು ಸಾಕು ಎಂದು ಆದೇಶಿಸಿದ್ದರು.

“ಗೌರಿ. ನಿಮ್ಮ ಮನೆಯಲ್ಲಿ ಯಾವಾಗ ನೋಡಿದ್ರೂ, ಓದು ಓದು ಅಂತ ಪಿರಿಪಿರಿ ಮಾಡ್ತಾರೆ ಅಂತ ಹೇಳ್ತೀಯಲ್ಲ? ಒಳ್ಳೆದಾಯ್ತ್, ಚಂದಕ್ಕೆ ಓದಿ, ನೀನಾದ್ರೋ ಇನ್ಸ್‌ಪೆಟ್ರ್ ಆಗ್ ಮಾರಾಯ್ತಿ.” ಎಂದು ತನ್ನ ಎದೆಯೊಳಗೆ ಮೊಳೆತಿದ್ದ ಕನಸಿನ ಬಳ್ಳಿಯನ್ನು, ಗೌರಿಯ ಎದೆಯೊಳಗೆ ಹಬ್ಬಿಸಲು ಯತ್ನಿಸಿದ್ದಳು ಸುಶೀಲ. ಪೊಲೀಸ್ ಡ್ರೆಸ್ಸಿನ ಬಗ್ಗೆ ಮೋಹವಿದ್ದರೂ, ಹಾಗೆ ಏಕಾಏಕಿ ಸುಶೀಲಳ ಕನಸನ್ನು ತನ್ನದಾಗಿಸಿಕೊಳ್ಳಲು ಸಿದ್ಧಳಿಲ್ಲದ ಗೌರಿಯ ಮೌನವನ್ನು ತಪ್ಪಾಗಿ ಅರ್ಥೈಸಿಕೊಂಡು “ಮನೆಯಲ್ಲಿ ನೀನು ಪೋಲೀಸಾಗುದಕ್ಕೆ ಒಪ್ಪದಿದ್ರೆ ಬೆಂಗಳೂರಿಗೆ ನನ್ನ ಹತ್ರ ಬಾ. ನಾನು ಎಲ್ಲಾ ವ್ಯನಸ್ಥೆ ಮಾಡ್ತೆ” ಎಂದು ಯಾವುದೋ ಕೆಚ್ಚಿನಲ್ಲಿ ನುಡಿದಿದ್ದಳು. ದಾರಿಯಲ್ಲಿ ಕಂಡ ಸೆಗಣಿ ಹೆಕ್ಕಿಕೊಂಡು, ತನ್ನ ಜೊತೆ ಹೆಜ್ಜೆ ಹಾಕುತ್ತಿರುವ ಈ ಸುಶೀಲ ಅದು ಹೇಗೆ ಏಕಾಏಕಿ ಬೆಂಗಳೂರು ನಿವಾಸಿಯಾದಳು ಎಂಬುದು ಅರಿವಾಗದೆ ಕಕ್ಕಾಬಿಕ್ಕಿಯಾದ ಗೌರಿ ”ಬೆಂಗ್ಳೂರಾ? ನೀನು ಯಾವಾಗ ಬೆಂಗ್ಳೂರಿಗೆ ಹೊರಟಿದ್ದಾ?” ಎಂದು ಆಶ್ಚರ್ಯದಿಂದ ಕೇಳಿದ್ದಳು.

ಸುಶೀಲ ಪಿಸುದನಿಯಲ್ಲಿ “ಮತ್ತೆಂತ? ಯಾವುದಾದರೋ ಯಂಕ, ನಾಣಿಯನ್ನು ಮದುವೆಯಾಗಿ ಇಲ್ಲೇ ಸಾಯ್ತೇನೆ ಅನ್ಕಂಡ್ಯಾ?” ಎಂದು ಕಣ್ಣು ಹೊಡೆದಿದ್ದಳು.

ಸುಶೀಲಳ ಈ ಮಾತುಗಳೆಲ್ಲಾ ಗೌರಿಗೆ ಪೂರ್ತಿ ಅರ್ಥವಾಗಿರದಿದ್ದರೂ, ಈಗ ಸುಶೀಲಳ ಮನೆ ಕಣ್ಣಿಗೆ ಬೀಳುತ್ತಲೇ, ಭಾನುವಾರ ಮಾಲಾಶ್ರೀ ಕೆಟ್ಟವರನ್ನೆಲ್ಲಾ ಚಚ್ಚಿ ಬಿಸಾಕುವ ಸಾಧ್ಯತೆಯ ನೆನಪಾಗಿ ರಕ್ತ ಬಿಸಿಯಾಯಿತು. ಗುಂಡಿಗೆ ನಿಮಿಷಕ್ಕೆ ನಾಲ್ಕು ಭಾರಿ ಹೆಚ್ಚಾಗಿಯೇ ರಕ್ತ ಪಂಪು ಮಾಡಿದ ಕಾರಣ, ದೇಹದಲ್ಲಿ ಹೊಸ ಚೇತನ ಮೂಡಿ, ನಡಿಗೆ ಚುರುಕುಗೊಂಡಿತು. ಅಷ್ಟರಲ್ಲಿ ಮರದ ಉದ್ದನೆಯ ಸ್ಕೇಲನ್ನು ಬೈಕಿನ ಹ್ಯಾಂಡಲ್‌ಬಾರಿನ ರೀತಿ ಹಿಡಿದು, ಡುರ್ರ್.... ಕೀಕ್ ಕೀಕ್ ಎನ್ನುತ್ತಾ ಕಿಟ್ಟಿ ಹಿಂದಿನಿಂದ ಓಡಿ ಬಂದ. ಶಾಲೆಯ ದಾರಿ ಸವೆಸಲು ಜೊತೆಗ್ಯಾರೋ ಸಿಕ್ಕ ಖುಷಿಯಲ್ಲಿ “ಏ ಕಿಟ್ಟಿ… ನಿಲ್ಲಾ.” ಎಂದು ಇವಳು ಕೂಗಿ ಕರೆದರೂ ನಿಲ್ಲದೆ, ಅವ ತನ್ನ ಕಾಲ್ಪನಿಕ ಬೈಕ್ ಓಡಿಸುತ್ತಾ ಹೋಗಿಯೇ ಬಿಟ್ಟ.

ಆದರೆ, ಹೀಗೆ ಓಡಿದ್ದ ಕಿಟ್ಟಿಗೆ, ತನ್ನ ಬೈಕಿಗೆ ಬ್ರೇಕ್ ಹಾಕಿ ಮುಂದಿನ ತಿರುವಿನಲ್ಲೇ ನಿಲ್ಲಿಸಬೇಕಾದ ಅನಿವಾರ್ಯತೆ ಎದುರಾಗಿತ್ತು. ಆತ ತಿರುವಿನಲ್ಲಿ ನಿಂತು ತನ್ನನ್ನು ಕಾಯುತ್ತಿರುವುದು ಕಂಡಾಗ ಗೌರಿ ತನ್ನ ನಡಿಗೆಯನ್ನು ಪೂರ್ತಿ ನಿಧಾನಗೊಳಿಸಿ, ತೋಟದಲ್ಲಿ ವಿಹರಿಸುತ್ತಿರುವ ಯಕ್ಷಗಾನದ ರಾಜಕುಮಾರಿಯ ಲಾಲಿತ್ಯದಲ್ಲಿ ನಡೆಯತೊಡಗಿದಳು. ಕಿಟ್ಟಿ ತಾಳ್ಮೆ ಕಳೆದುಕೊಂಡು “ಬೇಗ ಬಾ ಮಾರಾಯ್ತಿ” ಎಂದು ಕೂಗಿದ. ಶಾಲೆಗೆ ತಡವಾಗುತ್ತಿದ್ದರೂ, ನಾಲ್ಕನೇ ಕ್ಲಾಸಿನ ಕಿಟ್ಟಿ, ಆರನೇ ಕ್ಲಾಸಿನ ತನ್ನ ಕರೆಗೆ ಮರ್ಯಾದೆ ಕೊಡದೆ ನಿರ್ಲಕ್ಷಿಸಿ ಓಡಿದ್ದರಿಂದ ಸಿಟ್ಟಾಗಿದ್ದ ಗೌರಿ, ತನ್ನ ನಡಿಗೆಯನ್ನು ಮತ್ತಷ್ಟು ನಿಧಾನಗೊಳಿಸಿದಳು.

ಕಿಟ್ಟಿ ಹಾಗೆ ನಿಂತದಕ್ಕೆ ಕಾರಣ ಆ ತಿರುವಿನ ಕೊನೆಯಲ್ಲಿ ಅಗಾಧವಾಗಿ ಬೆಳೆದು ನಿಂತಿದ್ದ ಹುಣಸೇಮರ. ಹಿಂದೆ ಅದಕ್ಕೆ ತಾಗಿಕೊಂಡಂತೆಯೇ ಒಂದು ಆಳವಾದ ನೀರಿನ ಹೊಂಡವಿತ್ತಂತೆ. ದನ–ಕರುಗಳಿಗೆ ನೀರಿನ ಆಶ್ರಯ ತಾಣವಾಗಿದ್ದ ಅದನ್ನು ಹತ್ತು ವರ್ಷಗಳ ಹಿಂದೆ ಮುಚ್ಚಲಾಗಿತ್ತು. ಅದರಲ್ಲಿ ಬಿದ್ದು ಬಹಳ ಮಂದಿ ಸತ್ತಿದ್ದಾರೆ ಎಂದು ಸುಶೀಲ, ಗೌರಿಗೆ ಹೇಳಿದ್ದಳು. ಇಂತಹದೇ ಕಾರಣಕ್ಕೋ ಏನೋ ಶಾಲೆಯ ದಾರಿಯಲ್ಲಿದ್ದ ಆ ಎತ್ತರದ ಹುಣಸೇಮರ, ಮಕ್ಕಳ ಪಾಲಿಗೆ ದೆವ್ವದ ಮರವಾಗಿತ್ತು. ಅದರಲ್ಲಿ ಹುಣಸೆ ಬಿಟ್ಟಿದ್ದನ್ನು ಗೌರಿ ಎಂದೂ ನೋಡಿರಲಿಲ್ಲವಾದರೂ, ಕತ್ತೆತ್ತಿ ನೋಡಿದಾಗೆಲ್ಲಾ ಹುಣಸೆಕಾಯಿಗಳ ಬದಲು ದೆವ್ವಗಳೇ ಉಲ್ಟಾ ಜೋತಾಡಿದಂತೆ ಕಂಡು ಎಷ್ಟೋ ಬಾರಿ ಬೆಚ್ಚಿದ್ದಳು. ಅಂತಹ ಮರವನ್ನು ಒಂಟಿಯಾಗಿ ದಾಟಲು ಹೆದರಿಯೇ ಕಿಟ್ಟಿ, ಗೌರಿಗಾಗಿ ಕಾಯುತ್ತಾ ನಿಂತಿದ್ದು. ತಾನು ಬೈಕಿನಲ್ಲಿದ್ದೇನೆ ಎಂಬುದನ್ನು ಈಗ ಸಂಪೂರ್ಣ ಮರೆತಿದ್ದ ಅವನು, ಗೌರಿ ಸಮೀಪಿಸಿದ ತಕ್ಷಣ ಅವಳಿಗೆ ಆತುಕೊಂಡಂತೆ ಹೆಜ್ಜೆ ಹಾಕತೊಡಗಿದ. “ಆಗ ಕರೆದಾಗ ದೊಡ್ಡ ಜನದ ಹಾಗೆ ಓಡಿದೆ. ಈಗ ಎಂತಕ್ಕೆ ನನ್ನ ಜೊತೆ ಬರೂದು?” ಎಂದು ಗೌರಿ ದಬಾಯಿಸಿದಳು. ಆದರೆ, ಮಬ್ಬುಗತ್ತಲು ಜೋಲುಮೋರೆ ಹಾಕಿಕೊಂಡು ಅಡ್ಡಾಡುತ್ತಿರುವಂತಿದ್ದ ಆ ಹಗಲು ಅವಳ ಎದೆಯೂ ಡವಗುಟ್ಟಿ, ಕಿಟ್ಟಿ ಜೊತೆಗಿರುವುದು ಒಳ್ಳೇದಾಯ್ತು ಎನಿಸಿ, ಅವನ ಕೈ ಹಿಡಿದು ಬಿರಬಿರನೆ ಹೆಜ್ಜೆ ಹಾಕಿದಳು.

---------

ಗೌರಿ ಸಂಜೆ ಶಾಲೆಯಿಂದ ವಾಪಸ್ಸು ಬರುವಾಗ, ಎಂದಿನಂತೆ ಸುಶೀಲಳ ಮನೆಯ ನೀರೊಲೆಯಿಂದ ಹೊರಟಿದ್ದ ಹೊಗೆಯ ಏಣಿಯೊಂದು ಉದ್ದಕ್ಕೆ ಬೆಳೆದು, ಆಕಾಶ ಮುಟ್ಟಿತ್ತು. ಹಿಂದೊಮ್ಮೆ ಗೌರಿ ಸುಶೀಲಳನ್ನು ಕೇಳಿದ್ದಳು

“ಇಶ್ಶಿ, ಅದೆಂತಕ್ಕೆ ನೀವು ಬೆಳಗ್ಗೆ ಸ್ನಾನ ಮಾಡುದಿಲ್ಲ ಸುಶೀಲಕ್ಕ?”

ಪ್ರತಿಯಾಗಿ ಸುಶೀಲ “ಇಶ್ಶಿ, ಅದೆಂತಕ್ಕೆ ನೀವು ಸಂಜೆ ಸ್ನಾನ ಮಾಡುದಿಲ್ಲ ಗೌರಿ?” ಎಂದು ಅವಳದೇ ಧಾಟಿಯಲ್ಲಿ

ಅಣಕವಾಡಿದ್ದಳು.

“ಮಾರಾಯ್ತಿ, ನಿಮ್ಮ ಹಾಗೆ ನಮಗೆ ಮನೆಯಲ್ಲಿ ಕೂತು ತಿನ್ನುವ ಯೋಗ ಉಂಟಾ? ಹೊರಗೆ ಹೋಗಿ ದುಡೀಬೇಕಲ್ಲ? ಸಂಜೆ ಬಂದಮೇಲೆ ಸ್ನಾನ ಮಾಡಿದ್ರೆ ಫ್ರೆಶ್ ಆಗ್ತದೆ” ಎಂದು ನಂತರ ನುಡಿದಿದ್ದಳು.

“ನಾವೇನು ಕೂತು ತಿನ್ನುದಿಲ್ಲ ಆಯ್ತಾ? ನನ್ನ ಅಪ್ಪ ಕೂಡ ಕೆಲಸಕ್ಕೆ ಹೋಗ್ತಾರೆ.”

“ಅದು ಹೌದು. ಹೋಮದ ಮುಂದೆ ಕೂತಾಗ ಸಮಾ ಬೆವರ್ತದೆ. ನಿನ್ನ ಅಪ್ಪನಿಗೂ ಸಂಜೆಯೇ ಸ್ನಾನ ಮಾಡ್ಲಿಕ್ಕೆ ಹೇಳ ಗೌರಿ” ಎಂದು ಸುಶೀಲ ಕಿಲಕಿಲ ನಕ್ಕು, ಗೌರಿಗೆ ಸಿಟ್ಟು ತರಿಸಿದ್ದಳು.

ಬೀಡಿ ಬ್ರ್ಯಾಂಚಿಗೆ ಹೋಗುವ ದಿನ, ಗೌರಿ ಸಂಜೆ ಶಾಲೆ ಬಿಟ್ಟು ಬರುವ ವೇಳೆಗೆ, ಸುಶೀಲ ಸ್ನಾನ ಮುಗಿಸಿ ಘಮಘಮಿಸುತ್ತಾ ಬೇಲಿಯ ಬಳಿ ನಿಂತಿರುತ್ತಿದ್ದಳು.

“ಬರ್ತೀಯಾನಾ ಬ್ರೆಂಚಿಗೆ?” ಎಂದು ಕೇಳುತ್ತಿದ್ದಳು.

ಗೌರಿ ಮನೆಗೆ ಓಡಿ, ಚೀಲ ಬಿಸಾಕಿ, ಯುನಿಫಾರ್ಮ್ ಬಿಚ್ಚಿ, ಮುಖವನ್ನೂ ತೊಳೆಯದೇ, ಅಮ್ಮನ ಬಳಿ ಆಡಲು ಹೋಗುತ್ತೇನೆಂದು ಹೇಳಿ, ಬೆವರು ಕೊಳಕು ಮೆತ್ತಿಕೊಂಡ ಮುಖದಲ್ಲೇ ಸುಶೀಲಳಿಗೆ ಜೊತೆಯಾಗುತ್ತಿದ್ದಳು. ಮಗಳು ಸುಶೀಲಳ ಜೊತೆ ಸುತ್ತುವುದು ಇಷ್ಚವಿಲ್ಲದ ಭವಾನಿ “ಆ ಸುಶೀಲ ಜೊತೆ ಸುತ್ಲಿಕ್ಕೆ ಹೋದ್ರೆ, ಸಮಾ ಬೀಳ್ತದೆ” ಎಂದು ಕೂಗುವುದು ಕಿವಿಗೆ ಬೀಳದಂತೆ ಓಡಿರುತ್ತಿದ್ದಳು.

ಬೀಡಿ ಬ್ರ್ಯಾಂಚಿಗೆ ಹೋಗುವ ಅವರ ಇಂತಹ ಸಂಜೆಗಳಲ್ಲೇ ಸುಶೀಲ ಗೌರಿಗೆ ಎಷ್ಟೊಂದು ಸಿನಿಮಾ ಕತೆಗಳನ್ನು, ಕಾದಂಬರಿ ಕತೆಗಳನ್ನು ಹೇಳಿದ್ದಳು! ತಾನು ಲೈಬ್ರರಿಯಿಂದ ತಂದು ಓದುತ್ತಿದ್ದ ರೂಪತಾರ, ವಿಜಯಚಿತ್ರಗಳಲ್ಲಿ ಇರುತ್ತಿದ್ದ ರಂಗು ರಂಗಿನ ಸಿನಿಮಾ ಸುದ್ದಿಗಳನ್ನು ಬಿತ್ತರಿಸುತ್ತಿದ್ದಳು. ಮಾಲಾಶ್ರೀ, ಶಶಿಕುಮಾರ್ ಕಪಾಳಕ್ಕೆ ಹೊಡೆದಿದ್ದು, ಸುನೀಲ್‌ನನ್ನು ಪ್ರೀತಿಸುತ್ತಿರುವುದು, ರಾಜ್‌ಕುಮಾರ್, ವಿಷ್ಣುವರ್ಧನ್ ಒಟ್ಟಾಗಿ ನಟಿಸದೇ ಇರುವುದು, ಅಂಬರೀಷ್ ಲೇಟ್ ಆಗಿ ಶೂಟಿಂಗ್‌ಗೆ ಬರುವುದು, ದ್ವಾರಕೀಶ್‌ಗೆ ಇಬ್ಬರು ಹೆಂಡತಿಯರಿರುವುದು.... ಹೀಗೆ. ಇಂತಹ ಸಂಜೆಗಳಲ್ಲೇ ಮುಟ್ಟಾಗುವುದು ಎಂದರೆ ಏನೆಂಬುದನ್ನು ಸುಶೀಲ, ಗೌರಿಗೆ ಹೇಳಿದ್ದು, ಇಂತಹ ಒಂದು ಸಂಜೆಯಲ್ಲೇ ಬಾಯಿಗೆ ಮುತ್ತಿಟ್ಟರೆ ಮಕ್ಕಳಾಗುತ್ತದೆಂದು ಹೇಳಿ ಸುಶೀಲ ಕಿಸಕಿಸ ನಕ್ಕಿದ್ದು. ಅಂತೂ ಗೌರಿ ಮತ್ತೆಲ್ಲೂ ಕೇಳಲಾರದ ಪ್ರಶ್ನೆಗಳಿಗೆ, ಆಡಲಾರದ ಮಾತುಗಳಿಗೆ ಸುಶೀಲಳ ಜೊತೆಗಿನ ಸಂಜೆಗಳು ವೇದಿಕೆಯಾಗಿದ್ದವು. ಇಂತಹ ಸಂಜೆಗಳಿಗಾಗಿ ಸದಾ ಎದುರು ನೋಡುತ್ತಿದ್ದ ಗೌರಿಗೆ, ಈಗಲೂ ಸುಶೀಲ ಮನೆಯ ಹೊರಗೆ ಕಾಣದಿದ್ದಾಗ, “ಸುಶೀಲಕ್ಕ….” ಎಂದು ಒಂದು ಕೂಗು ಹಾಕುವ ಮನಸ್ಸಾಯಿತು. ಆದರೆ, ಅರೆ ಒದ್ದೆ ಬಟ್ಟೆ, ಚಳಿಯಿಂದಾಗಿ ಒಂದಕ್ಕೆ ವಿಪರೀತ ಅರ್ಜೆಂಟ್ ಆಗಿದ್ದ ಕಾರಣ ಮನೆಗೆ ಓಡಿದಳು.

--------------

ರಾತ್ರಿ ಊಟ ಮುಗಿಯುವ  ವೇಳೆಗೆ ಮಳೆ ಕೊಂಚ ವಿರಾಮ ಕೊಟ್ಟಿತ್ತು. ಅಡುಗೆಮನೆಯಲ್ಲಿದ್ದ ಅಮ್ಮನಿಗೆ “ಚಿತ್ರಮಂಜರಿ ನೋಡ್ಲಿಕ್ಕೆ ಹೋಗ್ತೇನೆ” ಎಂದು ಕೂಗಿ ಹೇಳಿದ ಗೌರಿ, ಉತ್ತರಕ್ಕೂ ಕಾಯದೆ ಹೊರಗೋಡಿದಳು. ಮನೆಯ ಮುಂದಿನ ದೀಪದ ಮಿಣುಕು ಬೆಳಕಲ್ಲೇ ಕಮ್ತೆರ ಮನೆಯ ಹಾದಿ ಹಿಡಿದಳು. ಕಮ್ತೆರ ನಡುಮನೆಯಲ್ಲಿದ್ದ ಆ ಬ್ಲಾಕ್ ಆಂಡ್ ವೈಟ್ ಟಿವಿ ನೋಡಲು ಸುತ್ತಲ ಮೂರು ನಾಲ್ಕು ಮನೆಯವರು ಬರುತ್ತಿದ್ದರು. ಆ ಪೈಕಿ ಗೌರಿಗೆ ಮಾತ್ರ ವಿಶಾಲವಾದ ನಡುಮನೆಯೊಳಗೆ, ಟಿವಿಗೆ ಹತ್ತಿರವಾಗಿ ಕುಳಿತುಕೊಳ್ಳುವ ಅನುಮತಿ ಇತ್ತು. ಸುಶೀಲ, ಕಿಟ್ಟಿಯೂ ಸೇರಿದಂತೆ ಉಳಿದವರೆಲ್ಲಾ ಹೊರಗಿನ ಚಾವಡಿಯ ಬಾಗಿಲಲ್ಲಿ ಕುಳಿತು ಒಳಗೆ ಹಣಿಕಬೇಕಿತ್ತು. ಒಮ್ಮೊಮ್ಮೆ ಅವರೆಲ್ಲಾ ಏನೋ ಮಾತಾಡಿಕೊಂಡು ಕಿಸಿಕಿಸಿ ನಗುವಾಗ, ಗೌರಿಗೂ ಅವರೆಲ್ಲರ ಸಂಗಡವೇ ಕುಳಿತು ಟಿವಿ ನೋಡಬೇಕೆಂಬ ಆಸೆಯಾಗುತ್ತಿತ್ತು. ಆದರೆ, ಅದರಲ್ಲಿ ಹಲವು ಪ್ರಾಯೋಗಿಕ ಮತ್ತು ಸಾಮಾಜಿಕ ತೊಂದರೆಗಳಿದ್ದವು. ಕಮ್ತೆರ ಮನೆಯವರು ಒಳ ಹೊರಗೆ ಓಡಾಡುವಾಗೆಲ್ಲಾ ಬಾಗಿಲಲ್ಲಿ ಕೂತಿರುತಿದ್ದವರು ಸರಿದು ಜಾಗ ಬಿಡಬೇಕಿತ್ತು. ಚಾವಡಿ ಪ್ರೇಕ್ಷಕರು ಹೆಚ್ಚಿದ್ದ ದಿನಗಳಲ್ಲಿ ಬಾಗಿಲಿನ ಬಳಿ ತೀರಾ ಇಕ್ಕಟ್ಟಾಗಿ, ಒಳ್ಳೆಯ ಸ್ಥಾನಕ್ಕಾಗಿ ತಳ್ಳಾಟವಾಗುತ್ತಿತ್ತು. ತನಗೆ ಅನಾಯಾಸವಾಗಿ ದೊರಕಿದ್ದ ಈ ವಿಶೇಷ ಸ್ಥಳದ ಬಗ್ಗೆ ಕೊಂಚ ಹೆಮ್ಮೆ ಮತ್ತು ಖುಷಿ ಇದ್ದ ಗೌರಿಗೆ, ಆ ಸೌಲಭ್ಯ ಬಿಟ್ಟು ಇತರರ ಜೊತೆ ಕೂತರೆ ಅದನ್ನು ಕಮ್ತೆರ ಮನೆಯವರು ಯಾವ ರೀತಿ ಪರಿಭಾವಿಸಿಯಾರು ಎಂಬ ಬಗ್ಗೆ ಅನುಮಾನಗಳಿತ್ತು. ಹೀಗಾಗಿ, ನಡುಮನೆಯೊಳಗಿನ ತನ್ನ ಸ್ಥಳಕ್ಕೆ ಅಂಟಿಕೊಂಡಿದ್ದಳು.

ಕಿಟ್ಟಿ ಆಗಲೇ ಬಂದು ಕೂತಿದ್ದ. ಸುಶೀಲ ಬಂದಿರಲಿಲ್ಲ. ಚಿತ್ರಮಂಜರಿಯ ಮೊದಲನೇ ಹಾಡು ಆಗಲೇ ಆರಂಭವಾಗಿತ್ತು. ‘ಹೇ... ನಿನಗಾಗಿಯೇ....ಸೊಗಸು ನಿನಗಾಗಿಯೇ....ಮನಸು ನಿನಗಾಗಿಯೇ’ ಎಂದು ರಾಜ್‌ಕುಮಾರ್ ಹಾಡುತ್ತಿದ್ದರೆ, ಜಯಂತಿಯ ಸ್ವಿಮ್‌ಸೂಟ್ ಗೌರಿಯ ಗಮನ ಸೆಳೆಯಿತು. ಕನ್ನಡದಲ್ಲಿ ಜಯಂತಿಯೇ ಮೊದಲ ಬಾರಿಗೆ ಈಜುಡುಗೆ ಧರಿಸಿದ್ದಂತೆ. ಸುಶೀಲ ಹೇಳಿದ್ದಳು ಅವಳಿಗೆ. ಜಯಂತಿಯ ಡ್ರೆಸ್ ನೋಡುತ್ತಾ ನೋಡುತ್ತಾ ಗೌರಿಗೆ ‘ಅರೆ ಇದು ಸುಶೀಲ ಅಂದು ತಮ್ಮ ಮನೆಯ ರೂಮಿನಲ್ಲಿ ಗುಟ್ಟಾಗಿ ತೊಟ್ಟ ಡ್ರೆಸ್‌ನಂತೆಯೇ ಇದೆಯಲ್ಲ’ ಎನಿಸಿ ಕಚಗುಳಿ ಇಟ್ಟಂತಾಯ್ತು.

ಗೌರಿಯ ಅಪ್ಪ ಸುಮಾರು ಆರು ತಿಂಗಳ ಹಿಂದೆ ಉದ್ದನೆಯ ನಿಲುವುಗನ್ನಡಿ ಇರುವ ಹೊಸ ಗೋದ್ರೆಜ್ ಅಲ್ಮೆರಾವನ್ನು ತಂದು ಕೋಣೆಯೊಳಗೆ ಪ್ರತಿಷ್ಟಾಪಿಸಿದ್ದರು. ಮನುಷ್ಯರ ಪೂರ್ಣಾಕಾರವನ್ನು ತೋರಿಸುವ ಫಳಪಳ ಹೊಳೆಯುವ ಕನ್ನಡಿಯಿರುವ ಅಷ್ಚು ದೊಡ್ಡನೆಯ ಬೀರುವನ್ನು ತನ್ನ ಒಬ್ಬ ಗೆಳತಿಗಾದರೋ ತೋರಿಸಿ ಮೆರೆಯಬೇಕೆಂಬ ಆಸೆ ಗೌರಿಯದ್ದು. ಆದರೆ, ಅವಳ ಗೆಳತಿಯರ ಪೈಕಿ ಯಾರೂ ಗೌರಿಯ ಮನೆಯ ಚಾವಡಿ ದಾಟಿ ಒಳ ಬಂದವರಲ್ಲ. ಗೌರಿಯ ಮನೆಗೆ ಭೇಟಿ ನೀಡಿದಾಗೆಲ್ಲಾ ಅವಳಮ್ಮ ಕೊಟ್ಟದ್ದನ್ನು ಚಾವಡಿಯಲ್ಲೇ ತಿಂದು, ಕುಡಿದ, ತಮ್ಮ ಲೋಟ, ತಟ್ಟೆ ತಾವೇ ತೊಳೆದಿಟ್ಟು ಹೋಗುತ್ತಿದ್ದರು. ಆ ಬಗ್ಗೆ ಇದುವರೆಗೆ ಏನೂ ಅನಿಸಿರದ ಗೌರಿಗೆ, ಈಗ ಇಂತಹ ಒಂದು ನಿಯಮದಿಂದಾಗಿ ಒಳ ಕೋಣೆಯೊಳಗೆ ಬೆಚ್ಚಗೆ ಕುಳಿತಿರುವ ಹೊಸ ಬೀರುವನ್ನು ತೋರಿಸುವುದು ಸಾಧ್ಯವಾಗದೇ ಕೆಡುಕೆನಿಸಿತು, ಹೀಗಾಗಿಯೇ, ಅಮ್ಮ ಅಪ್ಪ ಇಲ್ಲದ ಸಮಯದಲ್ಲಿ ಗೆಳತಿಯರನ್ನು ಮನೆಯೊಳಗೆ ಕರೆದೊಯ್ಯುವ ಒಂದು ಕ್ರಾಂತಿಕಾರಿ ಯೋಚನೆ, ಯಾವುದೇ ಕ್ರಾಂತಿಕಾರಿ ಉದ್ದೇಶಗಳಿಲ್ಲದೆಯೇ ಅವಳಲ್ಲಿ ಹುಟ್ಟಿದ್ದು. ಆದರೆ, ಈ ಯೋಜನೆಗೆ ಅವಳ ಶಾಲೆಯ ಗೆಳತಿಯರ್ಯಾರೂ ಒಪ್ಪಲಿಲ್ಲ.

ಆ ಉದ್ದನೆಯ ಮಾಯಕ ಕನ್ನಡಿಯ ವರ್ಣನೆಯನ್ನು ಗೌರಿಯ ಬಾಯಲ್ಲಿ ಕೇಳಿದ್ದ ಸುಶೀಲೆ ಮಾತ್ರ, ಗೌರಿಯು ಪ್ರಸ್ತಾಪಿಸದೆಯೇ “ಒಮ್ಮೆ ನೋಡಬೇಕು ಮಾರಾಯ್ತಿ, ನಿನ್ನ ಆ ಅಲ್ಮೆರಾ ಮತ್ತು ಕನ್ನಡಿ” ಎಂದಿದ್ದಳು. ಸಂಜೆ ಅಮ್ಮ ದೇವಸ್ಥಾನಕ್ಕೆ ಹೋದ ವೇಳೆಯಲ್ಲಿ, ಸುಶೀಲೆಯನ್ನು ಕೋಣೆಯೊಳಗೆ ಸಂಭ್ರಮದಿಂದ ಸ್ವಾಗತಿಸಿದ ಗೌರಿ ಬೀರುವನ್ನು ಹೆಮ್ಮೆಯಿಂದ ಪ್ರಸ್ತುತಪಡಿಸಿದಳು. ಸುಶೀಲ ಬೀರುವಿನ ಬಗ್ಗೆ ಏನೊಂದೂ ಹೇಳದೆ ಆ ಉದ್ದ ಕನ್ನಡಿಯ ಮುಂದೆ ನಿಂತು, ಮೊಟ್ಟ ಮೊದಲ ಬಾರಿಗೆ ತನ್ನ ಪೂರ್ತಿ ದೇಹವನ್ನು ತಲೆಯಿಂದ ಕಾಲಿನವರೆಗೆ ಇಡಿಯಾಗಿ ನೋಡಿಕೊಂಡಳು. ಬಲಕ್ಕೊಮ್ಮೆ ಎಡಕ್ಕೊಮ್ಮೆ ತಿರುಗಿ ತನ್ನ ಉಬ್ಬು ತಗ್ಗುಗಳನ್ನು ಪರೀಕ್ಷಿಸಿ ಬೀಗಿದಳು. ಅಲ್ಮೆರಾದ ಬಗ್ಗೆ ಏನೂ ಹೇಳದೆ ತನ್ನ ಅಂದ ಚಂದವನ್ನೇ ಆಸ್ವಾದಿಸುತ್ತಿರುವ ಸುಶೀಲೆಯ ಮೇಲೆ ಗೌರಿಗೆ ಸಣ್ಣ ಅಸಮಾಧಾನವೊಂದು ಏಳುತ್ತಿರುವಾಗಲೇ, ತನ್ನೊಂದಿಗೆ ತಂದಿದ್ದ ಪ್ಲಾಸ್ಟಿಕ್ ಲಕೋಟೆಯಿಂದ ಏನನ್ನೋ ಹೊರತೆಗೆದ ಸುಶೀಲ ಅದನ್ನು ಬಿಡಿಸಿ ಗೌರಿಯ ಕಣ್ಣ ಮುಂದೆ ಹಿಡಿದಳು.

ಹೊಳೆಯುವ ಕಪ್ಪು ಬಣ್ಣದ, ಮೇಲೆ ಬ್ರಾದಂತೆಯೂ ಕೆಳಗೆ ಫ್ರಾಕಿನಂತೆಯೂ ಇದ್ದ, ಗಿಡ್ಡನೆಯ ಡ್ರೆಸ್ಸು!

“ಇದನ್ನೊಮ್ಮೆ ಹಾಕಿಕೊಂಡು ಕನ್ನಡಿಯಲ್ಲಿ ನೋಡ್ತೇನೆ, ನೀನು ಆ ಕಡೆ ತಿರುಗು” ಎಂದ ಸುಶೀಲ, ಗೌರಿಯನ್ನು ಬಾಗಿಲ ಕಡೆಗೆ ತಾನೇ ತಿರುಗಿಸಿದಳು. ಆ ಡ್ರೆಸ್ಸಿನ ವಿನ್ಯಾಸ, ಉದ್ದ ಮುಂತಾದವುಗಳಿಂದ ಕೊಂಚ ಶಾಕ್ ಆಗಿದ್ದ ಗೌರಿ, ಒಂದು ನಿಮಿಷದ ನಂತರ ಇತ್ತ ಕಡೆ ತಿರುಗಿದವಳೆ, ಸುಶೀಲಳನ್ನು ನೋಡಿ ನಾಚಿ ಕಣ್ಣುಮುಚ್ಚಿಕೊಂಡಳು. ತನ್ನ ನೈಟಿ ಕಳಚಿ, ಆ ಪುಟ್ಟ ಕಪ್ಪು ಡ್ರೆಸ್ಸನ್ನು ತೊಟ್ಟಿದ್ದ ಸುಶೀಲ, ಯಾವುದೋ ಸಿನಿಮಾದ ಹೀರೋಯಿನ್, ಹಾದಿ ತಪ್ಪಿ, ಕಮ್ತೆರ ಮನೆಯ ಟಿವಿಯಿಂದ, ಗೌರಿಯ ಮನೆಯ ಆ ಅರೆಗತ್ತಲು ಕೋಣೆಯೊಳಗೆ ಬಂದುಬಿಟ್ಟಂತೆ ಕಾಣುತ್ತಿದ್ದಳು. ಆ ಡ್ರೆಸ್ಸಿನ ಜಾರುವಂತಹ ನುಣುಪು, ಬದಿಗಳಲ್ಲಿದ್ದ ಚಂದನೆಯ ಲೇಸ್, ಭುಜದ ಮೇಲಿದ್ದ ಕಡ್ಡಿಯಂತಹ ಸ್ಟ್ರಾಪ್ ಇವೆಲ್ಲಾ ಸುಶೀಲಳ ನಸುಗಪ್ಪು ಬಣ್ಣದ, ತಿದ್ದಿತೀಡಿದಂತಹ ದೇಹವನ್ನು ಹಗುರವಾಗಿ ಅಪ್ಪಿಕೊಂಡು ಕುಳಿತಿತ್ತು. ಗೌರಿ ಅಚ್ಚರಿ, ನಾಚಿಕೆ, ಹಿಂಜರಿಕೆ ಮತ್ತು ಆಸೆಯಿಂದ ಕದ್ದುಮುಚ್ಚಿ ಸುಶೀಲಳನ್ನು ನೋಡಿಯೇ ನೋಡಿದಳು. ಬಟ್ಟೆಯ ನುಣುಪನ್ನು ಸ್ಪರ್ಶಿಸುವ ಆಸೆಯನ್ನು ಕಷ್ಟಪಟ್ಟು ಅದುಮಿಟ್ಟುಕೊಂಡಳು. ಸುಶೀಲಳಾದರೋ, ಇದ್ಯಾವುದರ ಪರಿವೇ ಇಲ್ಲದೆ ತನ್ನ ಮೇಲೆ ತಾನೇ ಮೋಹಗೊಂಡವಳಂತೆ, ತನ್ನ ದೇಹದ ಮೈಮಾಟವನ್ನು ಹಿಂದೆ-ಮುಂದೆ, ಅಕ್ಕ-ಪಕ್ಕ, ತಿರು-ತಿರುಗಿ ಕನ್ನಡಿಯಲ್ಲಿ ನೋಡಿಕೊಳ್ಳುತ್ತಿದ್ದಳು. ಕಾಲು ಕೊಂಚ ಮೇಲೆತ್ತಿ, ತುಟಿಕೊಂಕಿಸಿ, ಕತ್ತು ಬಳುಕಿಸಿ, ನಾಲಿಗೆ ಕಚ್ಚಿ, ಎದ್ದೆ ಉಬ್ಬಿಸಿ - ಹೀಗೆ ನಾನಾ ಭಂಗಿಗಳಲ್ಲಿ ನೋಡಿ ನೋಡಿ ಕೆರಳಿದಳು.

“ಇದು ಹಾಕ್ಕೊಂಡ್ರೆ ನಾನು ಮಾಲಾಶ್ರೀ ತರ ಕಾಣ್ತೇನಂತೆ, ಹೌದಾ ಗೌರಿ?” ಎಂದು ತೇಲುಗಣ್ಣಿನಲ್ಲಿ, ಮೋಡಿಗೆ ಒಳಗಾದ ದನಿಯಲ್ಲಿ ಕೇಳಿದಳು.

“ಯಾರು ಹೇಳಿದ್ದು?” ಎಂಬ ಗೌರಿಯ ಪ್ರಶ್ನೆಗೆ ಉತ್ತರಿಸದೆ ಮೋಹಕವಾಗಿ ನಕ್ಕಳು.

ಹಲವು ನಿಮಿಷಗಳ ನಂತರ ಸ್ವಪ್ನಲೋಕದಿಂದ ಧರೆಗಿಳಿದಂತೆ ತನ್ನ ಒರಟಾದ, ಜಡ್ಡುಗಟ್ಟಿದ, ಕೊಳೆಯಾದ ಕೈಗಳನ್ನು ನೋಡಿಕೊಂಡು “ನನ್ನಮ್ಮ ರಾತ್ರಿ ಇಡೀ ಬೀಡಿ ಕಟ್ಟಿಸದೇ ಇದ್ದಿದ್ರೆ, ಚೆನ್ನಾಗಿ ಓದಿ ನಾನೂ ಪಿಚ್ಚರ್ ಹೀರೋಯಿನ್ ಆಗ್ತಾ ಇದ್ದೆ” ಎಂದು ತನ್ನ ಮಾಮೂಲು ಡೈಲಾಗನ್ನು ಎಸೆದು, ನಿಟ್ಟುಸಿರುಬಿಟ್ಟು, ತನ್ನ ಹಳೆಯ ನೈಟಿ ಧರಿಸತೊಡಗಿದಳು.

ಸಿಂಡ್ರೆಲ್ಲಾಳ ಲೋಕದಿಂದ ಹೊರಬಂದಿದ್ದ ಗೌರಿ “ಸುಶೀಲಕ್ಕ ಇದು ಎಲ್ಲಿ ತಕ್ಕೊಂಡೆ?” ಎಂದು ಮೆಲ್ಲಗೆ ಕೇಳಿದಳು.

ಸುಶೀಲ ತುಸು ಹೆಮ್ಮೆ, ತುಸು ನಾಚಿಕೆ, ತುಸು ತುಂಟತನದಿಂದ “ಯಾರೋ ನಂಗೆ ಗಿಫ್ಟ್ ಕೊಟ್ಟಿದ್ದು” ಎಂದಳು, ಗೌರಿ ಊರಗಲ ಬಾಯಿ ತೆಗೆದು “ಯಾರದು ಹೇಳು… ಹೇಳು.” ಎಂದು ದುಂಬಾಲು ಬಿದ್ದಳು.

“ಸ್ವಲ್ಪ ದಿನ ತಡಿ ಮಾರಾಯ್ತಿ, ನಿಂಗೇ ಗೊತ್ತಾಗ್ತದೆ” ಎಂದು ನಕ್ಕಿದ್ದ ಸುಶೀಲಳ ನೆನಪಲ್ಲೇ ಚಿತ್ರಮಂಜರಿ ಮುಗಿಸಿ ಮನೆಗೆ ವಾಪಸಾದಳು ಗೌರಿ.

ದಿನ 2

ಮೂರು ದಿನದಿಂದ ಕಟ್ಟಿಕೊಂಡಿದ್ದ ಮೋಡ ಅಂದು ಮುಂಜಾವಿನಿಂದಲೇ ಧಾರಾಕಾರ ಮಳೆಯಾಗಿ ಸುರಿಯುತ್ತಿತ್ತು. ಅಂತಹ ಭೀಕರ ಮಳೆಯಲ್ಲೇ ಶಾಲೆ ತಲುಪಿದ ಗೌರಿ, ಮಳೆಯಿಂದಾಗಿ ರಜೆ ಕೊಟ್ಟಿದ್ದಾರೆ ಎಂಬುದನ್ನು ಮೇಷ್ಚ್ರ ಬಾಯಲ್ಲಿ ಕೇಳಿಕೊಂಡು ಅದೇ ಭೀಕರ ಮಳೆಯಲ್ಲಿ ಮನೆಗೆ ಹಿಂತಿರುಗಿದಳು. ಶಾಲೆಗೆ ಹೋಗುವಾಗಲಾಗಲೀ, ಬರುವಾಗಲಾಗಲೀ ಸುಶೀಲ ಕಾಣಲಿಲ್ಲ. ಮಳೆಯ ಆರ್ಭಟಕ್ಕೆ ಹೆದರಿ ಊರಿನವರೆಲ್ಲಾ ಮನೆಯೊಳಗೆ ಸೇರಿಕೊಂಡಂತಿತ್ತು. ಬಿಸಿ ಗಂಜಿ ಉಂಡು, ಬಾಲಮಂಗಳ ಓದಿಕೊಂಡು, ನಿದ್ದೆ ಮಾಡಿ, ಅಮ್ಮನ ಸೆರಗು ಹಿಡಿದು ಓಡಾಡಿಕೊಂಡು, ಗೌರಿ ರಜೆಯ ಮಜ ಅನುಭವಿಸಿದಳಾದರೂ, ಮಳೆಯ ಆರ್ಭಟ ಕೊಂಚವೂ ತಗ್ಗದೇ, ಕರೆಂಟು ಬೇರೆ ಹೋದಾಗ ಚಿಂತೆಗೆ ಬಿದ್ದಳು. ನಾಳಿನ ಸಿನಿಮಾದ ಟೈಮಿಗೆ ಕರೆಂಟು ಇರದೆಯೋ, ಕೇಬಲ್ ಕೈಕೊಟ್ಟೋ ಪಿಚ್ಚರ್ ನೋಡಲು ಸಾಧ್ಯವಾಗದೇ ಹೋದರೆ ಎಂಬ ಯೋಚನೆ ಅವಳಲ್ಲಿ ಆತಂಕ ಮೂಡಿಸಿತು.

‘ಈ ಸುಶೀಲಕ್ಕ ಬೇರೆ ಎರಡು ದಿನದಿಂದ ಪತ್ತೆಯಿಲ್ಲ’ ಎಂದುಕೊಂಡವಳಿಗೆ ಕೆಲ ತಿಂಗಳಿನಿಂದ ಸುಶೀಲ ಆಗಾಗ್ಗೆ ತನ್ನನ್ನು ತಪ್ಪಿಸಿ ಬೀಡಿ ಬ್ರಾಂಚಿಗೆ ಒಬ್ಬಳೇ ಹೋಗುತ್ತಿದ್ದಾಳಾ ಎಂಬ ಸಂಶಯ ಮೂಡಿತು. ಎಂತಕೋ ವಿಚಿತ್ರವಾಗಿ ಆಡ್ತಾಳೆ ಈ ಸುಶೀಲಕ್ಕ ಇತ್ತೀಚೆಗೆ ಎನಿಸಿತು ಗೌರಿಗೆ. ಅದೆಂತದೇ ಇರಲಿ, ಈ ಸಾಹಸಿ ಪಿಚ್ಚರ್ ಮಾತ್ರ ಅವಳ ಜೊತೆ, ಹೊರಗೆ ಚಾವಡಿಯಲ್ಲಿ ಕೂತೇ ನೋಡುವವಳು ನಾನು. ಒಳಗೆ ಒಬ್ಬಳೇ ಕುಳಿತು ನೋಡುವುದಲ್ಲಿ ಏನೂ ಗಮ್ಮತ್ತಿಲ್ಲ ಎಂದು ನಿರ್ಧರಿಸಿದಳು.

ದಿನ 3

ಭಾನುವಾರ ಗೌರಿ ಕಣ್ಣು ಬಿಟ್ಟಾಗ ಮಳೆ ನಿಂತಿತ್ತು. ಕರೆಂಟು ಬಂದಿತ್ತು. ಆದರೆ, ಮಳೆ ಬಂದು ನಿಂತ ನಂತರದ ಲವಲವಿಕೆ, ತಾಜಾತನ ಕಾಣುತ್ತಿರಲಿಲ್ಲ. ಮೋಡಗಳು ಶೋಕದಿಂದ ಬಿಕ್ಕುತ್ತಿರುವಂತೆ ವಿಚಿತ್ರ ಮ್ಲಾನತೆ ಆವರಿಸಿತ್ತು. ತನ್ನ ಸಿನಿಮಾ ವಿಕ್ಷಣೆಗೆ ಇದ್ದ ಅಡ್ಡಿ-ಆತಂಕಗಳು ಕರಗಿದ ಖುಷಿಯಲ್ಲಿದ್ದ ಗೌರಿಗೆ, ಗೇಟಿನ ಬಳಿ ನಿಂತು ಅಮ್ಮ ಕಮ್ತೆರ ಮನೆಯ ಗೀತಕ್ಕನ ಜೊತೆ ಬೆಳ್-ಬೆಳಗ್ಗೆಯೇ ಏನೋ ಗುಸುಗುಡುತ್ತಿರುವುದು ಕಂಡಿತು.

“ಎದ್ಯಾ? ಹೋಗಿ ಹಲ್ಲುಜ್ಜಿ ಮುಖ ತೊಳಿ” ಎಂದು ಅಮ್ಮ ಎಂದೂ ಇಲ್ಲದ ಮಾರ್ದವತೆಯಲ್ಲಿ ಹೇಳಿದ್ದು ಕಂಡು, ಗೌರಿ ಅಚ್ಚರಿಯಿಂದಲೇ ಹಿತ್ತಲಿನತ್ತ ಹೊರಟಳು.

ಹಲ್ಲುಜ್ಜುತ್ತಾ ನಿಂತಿದ್ದವಳಿಗೆ ಮನೆಯ ಹಿಂಭಾಗದ ಅಡಿಕೆ ತೋಟದ ಅಂಚಿನಲ್ಲಿ ಕಿಟ್ಟಿ ಕಳ್ಳನಂತೆ ನಡೆದು ಹೋಗುತ್ತಿರುವುದು ಕಂಡಿತು. “ಏ ಕಿಟ್ಟಿ…” ಎಂದು ಜೋರಾಗಿ ಕರೆದಳು. ಅವ ಬೆದರಿ ಮನೆಯ ಹಿಂಭಾಗದ ಬೇಲಿಯತ್ತ ಓಡಿ ಬಂದು “ಕಿರುಚ್ ಬೇಡ್ವಾ” ಎಂದು ಪಿಸುಗುಟ್ಟಿದ.

“ಎಂತಕ್ಕೆ? ಎಂತಾಯ್ತು? ಎಲ್ಲಿಗೆ ಸವಾರಿ?” ಎಂದು ಕುತೂಹಲದಿಂದ ಕೇಳಿದಳು ಗೌರಿ.

“ಶಾಲೆಗೆ ಪೊಲೀಸ್ ಬಂದಾರಂತೆ. ಅಪ್ಪಯ್ಯ ಹೋದ. ಮನೆಯಿಂದ ಹೊರಗೆ ಕಾಲಿಡ್ಬೇಡ ಅಂತೇಳಿ ಹೋಗಿದಾನೆ. ಅದಕ್ಕೆ, ನಾನು ಮೆಲ್ಲಗೆ ಹಿಂಬಂದಿಯಿಂದ ಹೋಗ್ತಾ ಇದ್ದೇನೆ.” ಎಂದ.

“ಪೊಲೀಸಾ? ಏ, ನಾನೂ ಬರ್ತೇನೆ” ಎಂದ ಗೌರಿ ಬಾಯಿ ಮುಕ್ಕಳಿಸಿ, ಹಿಂಭಾಗದ ಬೇಲಿ ದಾಟಿ ಅವನನ್ನು ಸೇರಿಕೊಂಡಳು. ಸಾಹಸಿ ಪಿಚ್ಚರ್ ದಿನವೇ ಪೋಲೀಸರು ಊರಿಗೆ ಬಂದಿರುವುದು ಅವಳಿಗೆ ರೋಚಕ ಕಾಕತಾಳೀಯತೆ ಎನಿಸಿತು.

ಇಬ್ಬರು ಕದ್ದು ಮುಚ್ಚಿ ನಡೆಯುತ್ತಾ, ದೆವ್ವದ ಹುಣಸೆಮರ ಸಮೀಪಿಸಿದರು. ಅಲ್ಲಿ ಊರಿನವರೆಲ್ಲಾ ಗುಂಪಾಗಿ ಸೇರಿದ್ದರು. ಪೊಲೀಸ್ ಜೀಪ್, ಪೋಲೀಸ್ ಸಮವಸ್ತ್ರಧಾರಿಗಳೂ ಕಂಡರು. ಗೌರಿಯ ಉತ್ಸಾಹ ಮಾತ್ರ ಏಕೋ ಜರ್ರನೆ ಇಳಿದು, ಹೆಜ್ಜೆ ನಿಧಾನವಾಯ್ತು. ಏನೋ ಕೇಡು ಶಂಕಿಸಿ ಆಕಾಶದೆತ್ತರಕ್ಕೆ ಬೆಳೆದಿದ್ದ ಮರವನ್ನು ಕತ್ತೆತ್ತಿ ನೋಡಿದಳು. ಸುಶೀಲ ಅಲ್ಲಿ ನೇತಾಡುತ್ತಿದ್ದಳು.

“ಮೂರು ತಿಂಗಳಂತೆ. ಜೀವ ತಕ್ಕೊಳ್ಳದೆ ಬೇರೆ ದಾರಿ ಉಂಟಾ?”

“ನಿಂಗೆ ಮಂಡೆ ಸಮ ಇಲ್ವನಾ? ಅಷ್ಚು ಎತ್ತರದ ಮರ ಅವಳಿಗೆ ಹತ್ತಲಿಕ್ಕೆ ಆಗ್ತದಾ?”

“ಪೊಲೀಸರಿಗೆ ತಿನ್ಸಿದಾರೆ. ಕೇಸು ಕ್ಲೋಸ್ ಆಗ್ತದೆ ಅಷ್ಟೇ.”

ಮುಂದೆ ನಿಂತಿದ್ದವರು ಪಿಸುಗುಡುತ್ತಿದ್ದರು. ಗೌರಿ ವಿಭ್ರಾಂತಿಯಿಂದ ಪೊಲೀಸರ ನಡುವೆ ಮಾಲಾಶ್ರೀಯನ್ನು ಹುಡುಕುತ್ತಿದ್ದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT