ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥೆ: ಸಂವಿಧಾನ ಅಂದದ್ದೇ ಕಾರಣವಾಗಿ...

Published 18 ನವೆಂಬರ್ 2023, 23:47 IST
Last Updated 18 ನವೆಂಬರ್ 2023, 23:47 IST
ಅಕ್ಷರ ಗಾತ್ರ

ಜನಪದ ಕಲಾವಿದರ ಕಾಮಧೇನು, ಅಣ್ಣ ಎಂದೇ ಪ್ರೀತಿಯಿಂದ ಗುರುತಿಸಿಕೊಂಡಿದ್ದ ಶ್ರೀಪಾದರಾಜರು ತಮ್ಮ ಕಚೇರಿಯ ಕ್ಯಾಬಿನ್‍ನಲ್ಲಿದ್ದ ವಾಷ್‍ರೂಂಗೆ ಹೋಗಿ ಮೂತ್ರವಿಸರ್ಜಿಸಿ ಇನ್ನೇನು ಫ್ಲಷ್ ಮಾಡಬೇಕೆಂದುಕೊಳ್ಳವಷ್ಟರಲ್ಲಿ ಅವರ ಫೋನ್ ರಿಂಗಣಿಸಿದ್ದು ಕೇಳಿಸಿತು. ಫೋನನ್ನು ಟೇಬಲ್ ಮೇಲೆ ಇರಿಸಿ ಬಂದಿದ್ದರು. ತಾವು ದೊಡ್ಡ ಸಾಹೇಬರಿಗೆ ಜಂಟಿ ಕಾರ್ಯದರ್ಶಿಯಾಗಿ ಕಾರ್ಯ ಆರಂಭಿಸಿ ‘ಕಾಮಧೇನು’ ಮತ್ತು ‘ಅಣ್ಣ’ ಎಂಬ ಬಿರುದಿಗೆ ಪಾತ್ರರಾದಾಗಿನಿಂದ ಅವರ ಫೋನ್ ರಿಂಗಣಿಸುವುದು ಹೆಚ್ಚಾಗಿತ್ತು. ಒಮ್ಮೊಮ್ಮೆ ಸಂಸ ಸಚಿವರೂ ಶ್ರೀಪಾದರಾಜರ ಕರೆಗೆ ಕಾಯುವಷ್ಟು ಲೈನ್ ಬ್ಯುಸಿಯಾಗಿರುತ್ತಿತ್ತು. ಜಂಟಿ ಕಾರ್ಯದರ್ಶಿಯಾದದ್ದೇ ಆದದ್ದು ಕ್ಯಾಬಿನೆಟ್ ರ‍್ಯಾಂಕಿಂಗ್ ದೊರಕಿ, ಕಾರು, ಕಾರಿಗೊಬ್ಬ ಡ್ರೈವರ್ ಸಿಕ್ಕಿ ವಿಧಾನಸೌಧಕ್ಕೆ ಒಂದೆರಡು ಬಾರಿ ಹೋಗಿ ಬಂದ ಮೇಲೆ ಶ್ರೀಪಾದರಾಜರಿಗೆ ಮಾನ ಸಮ್ಮಾನಗಳ ಅರಿವು ಹೆಚ್ಚಾಗಿತ್ತು. ಕಲಾವಿದರು ಸಲ್ಲಿಸುತ್ತಿದ್ದ ಅರ್ಜಿಗಳನ್ನು ಸ್ಯಾಂಕ್ಷನ್ ಮಾಡಿಯೇ ಕಾಮಧೇನು ಅನಿಸಿಕೊಂಡಿದ್ದ ಅವರಿಗೆ ಬರಬರುತ್ತ ಫೋನ್ ಕರೆಗಳು ರೇಜಿಗೆ ಹುಟ್ಟಿಸಲು ಆರಂಭಿಸಿದ್ದವು. ತಾವು ಕಾಮಧೇನುವಾಗಿದ್ದಕ್ಕೆ ಕಲಾವಿದರ ಜೊತೆಜೊತೆಗೆ ಮರಿಕಲಾವಿದರ ದೊಡ್ಡ ಬಳಗ ಹುಟ್ಟಿಕೊಂಡು ಎಲ್ಲ ಫೇಕ್ ಡಾಕ್ಯುಮೆಂಟ್ಸ್ ಸಲ್ಲಿಸಲು ಆರಂಭಿಸಿ ಮಾತಿಗೆ ಮುಂಚೆ ಅಣ್ಣ ಅಂತನ್ನುವುದನ್ನು ಕೇಳಲು ಅಸಹ್ಯ ಅನಿಸಿತ್ತು. ಇದು ಸಚಿವರ ಗಮನಕ್ಕೂ ಬಂದು ಮೀಟಿಂಗ್‍ನಲ್ಲಿ ಒಮ್ಮೆ ಇದರ ಬಗ್ಗೆ ಪ್ರಸ್ತಾಪಿಸಿ -ಇದಕ್ಕೊಂದು ಕಡಿವಾಣ ಹಾಕಬೇಕು ಅಂತ ನಿರ್ಧರಿಸಿ, ಕಡೆಗೆ ಅದಕ್ಕೆ ಅಂತಲೇ ಒಂದು ಆ್ಯಪ್ ಹುಡುಕಿ, ಇನ್ನುಮುಂದೆ ಕಲಾವಿದರು ತಾವು ನಡೆಸುವ ಕಾರ್ಯಕ್ರಮಗಳನ್ನು ಈ ಆ್ಯಪ್‍ನಿಂದಲೇ ಫೋಟೊ ತೆಗೆದು ಲಗ್ಗತ್ತಿಸಬೇಕು ಎಂದು ಠರಾವು ಹೊರಡಿಸಿದ ಮೇಲೆ ಕೆಲಕಾಲ ಉಪಟಳ ನಿಂತಿತ್ತಾದರೂ ಮತ್ತೆ ಕಾಮಧೇನುವಿಗೆ ಕರೆಗಳು ಬರಲು ಆರಂಭಿಸಿದ್ದವು. ಮೂತ್ರವನ್ನೂ ನಿರಾಳವಾಗಿ ವಿಸರ್ಜಿಸಲು ಬಿಡದ ಅವರ ಅಭಿಮಾನಿ ಬಳಗದ ಬಗ್ಗೆ ಬೇಸರಿಸಿಕೊಂಡಿದ್ದರು. ಈಗ ಇನ್ಯಾರು ಕರೆಮಾಡಿದ್ದಾರೋ ಅಂತ ಫ್ಲಷ್ ಬಟನನ್ನು ಸಿಟ್ಟಿನಲ್ಲಿ ಒತ್ತಿದಾಗ ನೀರು ಚಿಮ್ಮಿ ಪ್ಯಾಂಟ್ ಒದ್ದೆಯಾದಾಗ ಅವರ ಪಿತ್ತ ಕೆರಳಿತು.

ಹೊರಗೆ ಬಂದು ಕಾಲ್ ಲಿಸ್ಟ್ ಚೆಕ್ ಮಾಡಿದರೆ ಸಾಹೇಬರದೇ ಫೋನು! ಕೂಡಲೇ ಅವರಿಗೆ ಫೋನ್ ಮಾಡಿ ‘ ಸಾರಿ ಸಾ ವಾಷ್ ರೂಂಗೆ ಹೋಗಿದ್ದೆ.. ಬರೋಷ್ಟರಲ್ಲಿ ನಿಮ್ಮ ಫೋನು..’ ಅಂತ ಪಶ್ಚಾತ್ತಾಪದ ದನಿಯಲ್ಲಿ ಹೇಳಿ ‘ ಹ್ಞ ಸಾ.. ಈಗಲೇ ಹೊರಟೆ..’ ಅಂತಂದು ಫೋನ್ ಇಟ್ಟರು.

ಅಷ್ಟರಲ್ಲಿ ಅವರ ಆಪ್ತ ಕೇಸ್ ವರ್ಕರ್ ಮುನಿವೆಂಕಟಪ್ಪ ಒಂದಷ್ಟು ಕಡತಗಳನ್ನು ತೆಗೆದುಕೊಂಡು ಬಂದ. ಅವನಿಗೆ ಶ್ರೀಪಾದರಾಜರ ತರಾತುರಿಗಳು ಚೆನ್ನಾಗಿ ಗೊತ್ತು ಮತ್ತು ಅವರು ಆ ಹೊತ್ತು ಯಾವ ಯಾವ ಕಲಾವಿದರ ಕಡತಗಳನ್ನು ಕಡೆಯ ಪರವಾನಿಗೆ ದೊಡ್ಡ ಸಾಹೇಬರ ಬಳಿಗೆ ತೆಗೆದುಕೊಂಡು ಹೋಗುತ್ತಾರೆ ಎನ್ನುವುದೂ ಗೊತ್ತು. ಯಾರದು ಮಿಸ್ಸಾದರೂ ಮಾದಾಪುರ ಚಂದ್ರಪ್ಪನ ಕಡತದ ಕಡೆಗೆ ಶ್ರೀಪಾದರಾಜರ ಲಕ್ಷ್ಯ ಇದ್ದೇ ಇರುತ್ತದೆ ಎನ್ನುವುದು ಅವನ ಅನುಭವ. ಅಷ್ಟು ದೃಢತ್ವದಲ್ಲಿ ಕಡತಗಳನ್ನು ಹಿಡಿದುಕೊಂಡು ಸರಿಯಾದ ಸಮಯಕ್ಕೆ ಕ್ಯಾಬಿನ್‌ ಒಳಗೆ ಬಂದ ಮುನಿವೆಂಕಟಪ್ಪನನ್ನು ಕಂಡ ಶ್ರೀಪಾದರಾಜರು ‘ ಉಳಿದವರ ಕಥೆ ಆಮ್ಯಾಲೆ ಸೂಕ್ಷ್ಮವಾಗಿ ನೋಡುಮ. ಆ ಚಂದ್ರಪ್ಪನ ಕಡತ ಕೊಡಿಲ್ಲಿ’ ಅಂತಂದಾಗ ಮುನಿವೆಂಕಟಪ್ಪ ಒಳಗೇ ನಕ್ಕ. ವಯಸ್ಸಿನಲ್ಲಿ ಕೊಂಚ ಹಿರಿಯನಾಗಿದ್ದರಿಂದ ಮತ್ತು ಶ್ರೀಪಾದರಾಜರು ಅದನ್ನು ಗೌರವಿಸುತ್ತಿದ್ದ ಕಾರಣ ಸಲುಗೆ ಭಾವದಲ್ಲಿ ‘ ಸಾ ನಿಮ್ಮ ಬಾಯಲ್ಲಿ ನೋಡುಮ ಪದವೇ..!’ ಎಂದು ಅಚ್ಚರಿ ವ್ಯಕ್ತಪಡಿಸಿದ.


ಶ್ರೀಪಾದರಾಜರು ನಕ್ಕರು. ಅವನ ಮಾತಿಗೆ ಏನೊಂದೂ ಪ್ರತಿಕ್ರಿಯಿಸದೆ ಸುಮ್ಮನೆ ಕೈಚಾಚಿ ಚಂದ್ರಪ್ಪನ ಕಡತ ತೆಗೆದುಕೊಂಡು ಬಾಗಿಲಿನ ಕಡೆಗೆ ನೋಡಿದರು. ಅದನ್ನು ಅರ್ಥೈಸಿಕೊಂಡ ಮುನಿವೆಂಕಟಪ್ಪ ‘ ಹೊರಗೆ ಹಾಲು ಕರೆದುಕೊಳ್ಳಲಿಕ್ಕೆ ಬಂದವರ ಸಾಲು ಇದೆ ಸಾ..’ ಅಂತಂದು ನಕ್ಕ.


ಹೊರಗೆ ಹೋದರೆ ಕಲಾವಿದರು ತಮ್ಮ ಕಾಲಿಗೇ ಬಿದ್ದುಬಿಡುವ ಸೀನ್‍ಗಳನ್ನು ಆರಂಭಿಸುತ್ತಾರೆ ಎನ್ನುವುದೂ ಗೊತ್ತಿತ್ತು. ಕಚೇರಿ ಕ್ಯಾಬಿನ್‍ಗೆ ಹಿಂದಿನ ಬಾಗಿಲು ಮಾಡಿಸಬೇಕು ಅಂದುಕೊಂಡರು. ಆದರೆ ಅದ್ಯಾವುದೂ ಸುಲಭಕ್ಕೆ ಆಗುವ ಕೆಲಸವಲ್ಲ ಎಂಬುದೂ ಅವರಿಗೆ ಗೊತ್ತಿತ್ತು. ಮುನಿವೆಂಕಟಪ್ಪನ ಕಡೆ ದೈನ್ಯ ದೃಷ್ಟಿ ಬೀರಿ ‘ಅವರನ್ನೆಲ್ಲ ಹೇಗಾದರೂ ಸಾಗಾಕ್ತೀಯಾ..?’ ಎನ್ನುವಂತೆ ನೋಡಿದರು. ಅದನ್ನು ಅರ್ಥೈಸಿಕೊಂಡು ನಕ್ಕ ಅವನು ‘ಚಂದ್ರಪ್ಪನ ಮೇಲೆ ಮಾತ್ರ ಯಾಕಿಷ್ಟು ಅಕ್ಕರೆ ಸಾ ನಿಮಗೆ?’ ಎಂದು ಕೇಳಿದ.


ಅದಕ್ಕೆ ಉತ್ತರಿಸುತ್ತ ನಿಲ್ಲುವಷ್ಟು ಪುರುಸೊತ್ತು ಶ್ರೀಪಾದರಾಜರಿಗೆ ಇರಲಿಲ್ಲ. ‘ಆಮೇಲೆ ವಿಚಾರ ಮಾಡುಮ’ ಅಂತಂದು ಧೈರ್ಯದಲ್ಲಿ ಬಾಗಿಲು ತೆಗೆದುಕೊಂಡು ಹೊರಹೋದರು.


ಅಲ್ಲಿ ಕಾಮಧೇನುವಿನ ದರ್ಶನಕ್ಕೆ ದೊಡ್ಡ ಸಾಲು ನಿಂತಿತ್ತು. ಕಾಮಧೇನು ಕಾಣಿಸಿಕೊಳ್ಳುತ್ತಿದ್ದಂತೆ ಎಲ್ಲರೂ ಮುನ್ನುಗ್ಗಿದರು. ಹೆದರಿದ ಶ್ರೀಪಾದರಾಜರು ಒಮ್ಮೆಗೇ ‘ನಿಮ್ಮ ಸಲುವಾಗೇ ಮಾತಾಡಲಿಕ್ಕೆ ಹೊರಟಿದ್ದೀನಿ.. ಈಗ ಸಮಯ ಇಲ್ಲ..ನಿಮ್ಮ ಕೆಲಸ ಆಯ್ತೂಂತ ತಿಳಿದುಕೊಳ್ಳಿ..’ ಅಂದರು.


ದರ್ಶನಾರ್ಥಿಗಳು ಶ್ರೀಪಾದರಾಜರ ಕೈಯಲ್ಲಿದ್ದ ಕಡತದಲ್ಲಿ ತಮ್ಮ ಬಣ್ಣದ ಕಡತ ಇದೆಯೇ ಎಂದು ಕಣ್ಣಾಡಿಸಿದರು. ಇದರ ಸೂಕ್ಷ್ಮ ತಿಳಿದುಕೊಂಡ ಶ್ರೀಪಾದರಾಜರು ಅವರೆಲ್ಲ ಪ್ರಶ್ನೆ ಎಸೆಯುವ ಮೊದಲೇ ಅಲ್ಲಿಂದ ಆತುರಾತುರವಾಗಿ ಹೆಜ್ಜೆ ಕದಲಿಸಿ ಕಾರಿನ ಒಳಗೆ ಕೂತು ನಿಟ್ಟುಸಿರುಬಿಟ್ಟರು. ಡ್ರೈವರ್ ಶೇಖರ.. ಮಧ್ಯವಯಸ್ಸಿನವನು. ಶ್ರೀಪಾದರಾಜರ ಧಾವಂತ ಕಂಡು ‘ನೀರು ಬೇಕಾ ಸಾ..?’ ಎಂದು ಕೇಳಿದ. ಅದಕ್ಕೆ ಶ್ರೀಪಾದರಾಜರು ‘ಕುಡಿಸ್ತಾವ್ರಲ್ಲಪ್ಪ..’ ಅಂತಂದರು. ಶೇಖರನಿಗೆ ಏನೂ ಅರ್ಥವಾಗದೆ ‘ವಿಧಾನಸೌದಕ್ಕಾ ಸಾ..?’ ಅಂತ ಕೇಳಿದ. ಶ್ರೀಪಾದರಾಜರು ಸುಮ್ಮನೆ ತಲೆ ಆಡಿಸಿದರು.


ಕಾರು ಚಲಿಸಿತು. ಕೊಂಚ ನಿರಾಳವಾದ ಶ್ರೀಪಾದರಾಜರಿಗೆ ತಾವು ಕಚೇರಿಯಿಂದ ಹೊರಡುವಾಗ ಮುನಿವೆಂಕಟಪ್ಪನ ಮುಖದ ಮೇಲೆ ತುಳುಕಿದ್ದ ನಗುವಿನ ಚಿತ್ರ ಕಣ್ಮುಂದೆ ಚಿತ್ರಿತವಾಯಿತು. ಯಾಕೆ ಅವನು ಹಾಗೆ ನಕ್ಕದ್ದು? ತನ್ನ ಭಾಷೆ ಬದಲಿಸಿದೆ ಅಂತೇನೋ ಹೇಳಿದನಲ್ಲವೆ? ಈಚೆಗೆ ತಾನು ಹೋಗುಮ.. ಮಾಡುಮ.. ಅನ್ನಲಿಕ್ಕೆ ಶುರುಮಾಡಿದ್ದೇನೆ. ಇದಕ್ಕೆ ಮೊದಲ ಬಾರಿಗೆ ಹುಬ್ಬು ಏರಿಸಿದ್ದದ್ದು ಹೆಂಡತಿ ಪ್ರಭ. ‘ಹೀಗೆ ಮಾತಾಡೋಕೆ ಯಾವಾಗ ಶುರುಮಾಡಿದ್ರಿ!’ ಎಂದು ಕೇಳಿದ ದಿನ ಶ್ರೀಪಾದರಾಜರು ಲಿಟರಲ್ಲಾಗಿ ನಾಚಿಕೊಂಡಿದ್ದರು. ಪ್ರಭಾಗೆ ಮತ್ತಷ್ಟು ಗೊಂದಲವಾಗಿತ್ತು. ತಮ್ಮ ಕುಟುಂಬದ ಹಿನ್ನೆಲೆ, ಭಾಷಾ ಉಚ್ಚಾರ, ಶುದ್ಧತೆ ಬಗ್ಗೆ ತಿಳಿದಿದ್ದ ಶ್ರೀಪಾದರಾಜರು ತಮಗೇ ಗೊತ್ತಿಲ್ಲದಂತೆ ಮಾದಾಪುರದ ಚಂದ್ರಪ್ಪನ ಪ್ರಭಾವಕ್ಕೆ ಒಳಗಾಗಿದ್ದರು. ಇದು ಅವನದೇ ಭಾಷಾ ಶೈಲಿ. ಅವನೊಬ್ಬನದೇ ಅಲ್ಲ. ಅವನ ಪ್ರಾಂತ್ಯದ್ದು. ಮಂಡ್ಯ ಭಾಷೆಯ ಸೊಗಡು ಮತ್ತು ಸೊಗಸು ಚಂದ್ರಪ್ಪನಲ್ಲಿ ವಿಶೇಷವಾಗಿ ಧ್ವನಿತವಾಗ್ತಿದೆ ಅನಿಸಿತ್ತು ಶ್ರೀಪಾದರಾಜರಿಗೆ. ಆಗಿನ್ನೂ ಅವರು ಜಂಟಿ ಕಾರ್ಯದರ್ಶಿಯಾಗಿದ್ದ ಹೊಸತು. ಇನ್ನೂ ಕಾಮಧೇನು ಆಗಿರದ ಸಮಯ. ಯಾರಿಂದಲೂ ಅಣ್ಣ ಅಂತ ಕರೆಸಿಕೊಂಡಿರಲಿಲ್ಲ. ಅಧಿಕಾರದ ಕುರ್ಚಿ ಮೇಲೆ ಕೂತು ಕಣ್ಣು ಕಿವಿಗಳನ್ನು ತುಂಬ ಆ್ಯಕ್ಟಿವ್ ಆಗಿ ಇಟ್ಟುಕೊಂಡಿದ್ದ ಸಮಯ. ತಮ್ಮನ್ನು ಕಾಣಲು ಬರುತ್ತಿದ್ದ ಪ್ರತಿಯೊಬ್ಬ ಕಲಾವಿದನ ಕಥೆಯನ್ನೂ ತುಂಬ ಗಂಭೀರವಾಗಿ ಕೇಳಿಸಿಕೊಳ್ಳುತ್ತಿದ್ದ ಸಂದರ್ಭ ಅದು. ಕಲಾವಿದರು ತಮ್ಮ ಅಳಲು, ಕನಸುಗಳನ್ನು ಹೇಳಿಕೊಳ್ಳುತ್ತಿದ್ದ ಪರಿಗೆ ‘ ಇವರಿಗೆಲ್ಲ ತಕ್ಷಣ ಏನಾದರೂ ವ್ಯವಸ್ಥೆ ಮಾಡಿಬಿಡಬೇಕು’ ಎನ್ನುವಷ್ಟು ತುಡಿತ ಇರಿಸಿಕೊಂಡಿದ್ದ ಕಾಲ.
ಆ ಹುರುಪಿನಲ್ಲೇ ಅವರು ಬಿರುಸಾಗಿ ಕಾಮಧೇನು ಆಗಿ ಅಣ್ಣ ಅನಿಸಿಕೊಂಡು ಪ್ರಚಾರಕ್ಕೆ ಬಂದದ್ದು. ಇದು ಕೆಲಕಾಲ ಸಾಗಿ ಅವರ ಕಣ್ಣುಗಳೂ ಕೊಂಚ ತಿಳಿಯಾಗಿ ಮತ್ತು ಕಿವಿಗಳು ಕೊಂಚ ಮಾಗುವ ಹೊತ್ತಿಗೆ ಕಾಮಧೇನು ಪಟ್ಟ ಸಾಕುಸಾಕೆನಿಸಿತ್ತು. ಸರಿಸುಮಾರು ಅದೇ ಹೊತ್ತು ಇದೇ ಚಂದ್ರಪ್ಪ ಎಲ್ಲರ ಸಾಲಿನಲ್ಲಿ ತಾನೂ ಒಬ್ಬನಾಗಿ ಬಂದು ಕೂತಾಗ ಶ್ರೀಪಾದರಾಜರಿಗೆ ವಿಶೇಷವೇನೂ ಅನಿಸಿರಲಿಲ್ಲ. ಮೊದಲಾಗಿದ್ದರೆ ತಮ್ಮೆದುರು ಬಂದು ಅರ್ಜಿ ಹಿಡಿದು ಕೂತ ಕಲಾವಿದರಿಂದ ಅರ್ಜಿ ತೆಗೆದುಕೊಂಡು ಕಣ್ಣಾಡಿಸುತ್ತ ಮಾತಿಗೆ ತೊಡಗುತ್ತಿದ್ದರು. ಆದರೆ ಅದು ಬರಬರುತ್ತ ನಿಂತಿತ್ತು. ಚಂದ್ರಪ್ಪ ಎಂಟ್ರಿ ಕೊಡುವ ಹೊತ್ತಿಗೆ ಪೂರಾ ನಿಂತು ಶ್ರೀಪಾದರಾಜರು ಅರ್ಜಿ ಬಿಟ್ಟು ಕೇವಲ ಕಣ್ಣುಗಳನ್ನು ಸತ್ಯದ ಮಾಪಕಗಳಾಗಿ ಅಳೆಯುವ ಘಟ್ಟ ತಲುಪಿದ್ದರು. ಅಂಥ ಸಮಯದಲ್ಲಿ ಎದುರು ಕೂತ ಚಂದ್ರಪ್ಪ ಅರ್ಜಿ ಮುಂದೆ ಹಿಡಿದರೂ ಶ್ರೀಪಾದರಾಜರು ಕೈಚಾಚಿ ತೆಗೆದುಕೊಳ್ಳುವ ಮನಸ್ಸು ಮಾಡಿರಲಿಲ್ಲ. ಆದರೆ ವಿಚಾರಿಸುವ ಧಾಟಿಯಲ್ಲಿ ಕೊಂಚ ವ್ಯಂಗ್ಯ ತಂದುಕೊಂಡಿದ್ದರು. ಈ ಪ್ರಕಾರವಾಗಿ ಚಂದ್ರಪ್ಪನಿಗೆ ‘ನೀವು ಯಾವ ಕಲೆ ಪ್ರದರ್ಶಿಸ್ತೀರಿ!’ ಎಂದು ಕೇಳಿದ್ದರು.


ಚಂದ್ರಪ್ಪನಿಗೆ ಅವರ ವ್ಯಂಗ್ಯ ಅರ್ಥವಾಗಿರಲಿಲ್ಲ. ಅವನು ಸಹಜವಾಗಿ ‘ಸಾವಾದ ಮನೆಯವರು ನನ್ನ ಕರೀತಾರೆ. ಹೋಗಿ ಹಾಡಿ ಬರ್ತೀನಿ ಸಾ..’ ಅಂದಿದ್ದ.


ಶ್ರೀಪಾದರಾಜರ ಕಿವಿಗಳು ಚುರುಕಾದವು. ಏನೊ ಹೊಸದು ಕೇಳಿಸಿದ ಹಾಗಾಯಿತಲ್ಲ! ನಾಟಕ ಮಾಡ್ತೀವಿ.. ಗೌರವ ಧನ ಕೊಡಿಸಿ.. ಪಟ ಕುಣಿತ ಕುಣೀತಿವಿ.. ಕಂಸಾಳೆ.. ಡೊಳ್ಳು.. ಇಂತಿಷ್ಟು ಕಾರ್ಯಕ್ರಮಕ್ಕೆ ಇಷ್ಟಾಗುತ್ತೆ.. ಅಂತ ಹೇಳುತ್ತಿದ್ದ ಮಾತುಗಳಿಗೇ ಒಗ್ಗಿಬಿಟ್ಟಿದ್ದ ಅವರ ಕಿವಿಗಳಿಗೆ ಮೊದಲ ಬಾರಿ ಹೊಸದೇನೋ ಕೇಳಿಸಿತ್ತು.
ಮತ್ತೆ ಖಚಿತಪಡಿಸಿಕೊಳ್ಳಲಿಕ್ಕೆ ಕಣ್ಣರಳಿಸಿ ‘ಏನಂದ್ರಿ..?’ ಎಂದು ಕೇಳಿದ್ದರು ಶ್ರೀಪಾದರಾಜರು. ಚಂದ್ರಪ್ಪ ಮೊದಲಿನಷ್ಟೇ ದೃಢವಾಗಿ ‘ಅದೇ ಸಾ.. ಹಳ್ಳಿಕಡೆ ಸಾವಾದ ಮನೇವ್ರು ನನ್ನ ಹಾಡಾಕೆ ಕರೀತಾರೆ.. ನಾನೂ ಹೋಗಿ ಹಾಡಿ ಬತ್ತ್ತೀವ್ನಿ .. ಅಂಗೂ ಇಂಗೂ ಜೀವ್ನ ಸಾಗೈತೆ..’ ಎಂದು ತಣ್ಣಗೆ ಹೇಳಿದ್ದ.
ಶ್ರೀಪಾದರಾಜರು ಜಂಟಿ ಕಾರ್ಯದರ್ಶಿಯಾದ ಮೇಲೆ ಮೊದಲ ಬಾರಿಗೆ ಹಾಗೆ ನಕ್ಕಿದ್ದರು. ಚಂದ್ರಪ್ಪ ಸಹಜವಾಗಿ ‘ಅದ್ಯಾಕೆ ಅಂಗೆ ನಕ್ಕೀರಿ..!’ ಎಂದು ಕೇಳಿದ್ದ.


ಪುರಾಣ ಕಥೆಗಳು ದಟ್ಟವಾಗಿ ಕೇಳಿಬರುತ್ತಿದ್ದ ಮನೆಯಲ್ಲಿ ಹುಟ್ಟಿದ್ದ ಶ್ರೀಪಾದರಾಜರಿಗೆ ಆ ಕ್ಷಣ ಒಂದು ಪ್ರಸಂಗ ನೆನಪಿಗೆ ನಿಲುಕಿತ್ತು. ಅದು ‘ದಂತ’ ಕಥೆ. ಹರಿಹರ ಮತ್ತು ರಾಘವಾಂಕನಿಗೆ ಸಂಬಂಧಿಸಿದ್ದು. ಅದು ನಿಜವೋ ಸುಳ್ಳೋ.. ಶ್ರೀಪಾದರಾಜರ ಅಪ್ಪ ಅದನ್ನು ಹೇಳಿ ನಕ್ಕಿದ್ದರು. ರಾಘವಾಂಕ ಹರಿಹರನ ಅಳಿಯ. ಆತ ಹರಿಶ್ಚಂದ್ರ ಕಾವ್ಯ ಬರೆದಾಗ ಹರಿಹರನಿಗೆ ಸಿಟ್ಟು ಬಂತಂತೆ. ಸಾವವರ ಮೇಲೆ, ಒಬ್ಬ ರಾಜನ ಮೇಲೆ ಕಾವ್ಯ ಬರೆದದ್ದಕ್ಕೆ ರಾಘವಾಂಕನ ಕಪಾಳಕ್ಕೆ ಹೊಡೆದನಂತೆ. ಅವನು ಹೊಡೆದ ರಭಸಕ್ಕೆ ರಾಘವಾಂಕನ ದವಡೆ ಹಲ್ಲು ಉದುರಿ ಬಿತ್ತಂತೆ!


ಇಷ್ಟನ್ನು ಶ್ರೀಪಾದರಾಜರ ಅಪ್ಪ ಭಾವತುಂಬಿ ಹೇಳಿದ್ದರು. ಊರೂರು ತಿರುಗಿ ಹರಿಕಥೆ ಮಾಡುತ್ತ ಹರಿಕಥಾ ವಿದ್ವಾನ್ ಅನಿಸಿಕೊಂಡಿದ್ದ ಅವರು ಹೇಳಿದ್ದ ಧಾಟಿ ಶ್ರೀಪಾದರಾಜರ ಮನಸ್ಸಿನಲ್ಲಿ ಹಾಗೇ ನೆಲೆನಿಂತುಬಿಟ್ಟಿತ್ತು. ಹಾಗೇ ಚಿಕ್ಕಂದಿನಿಂದ ಹರಿಕಥೆಯ ಲಯಕ್ಕೆ ಮಾರುಹೋಗುತ್ತಿದ್ದ ಶ್ರೀಪಾದರಾಜರನ್ನು ಗಮನಿಸಿದ ಅವರ ಅಪ್ಪ ‘ಈ ಕಥೆ ಎಲ್ಲ ನನ್ನ ಕಾಲಕ್ಕೇ ಕೊನೆ ಆಗಲಿ. ನೀನು ಓದಿ ಅಧಿಕಾರಿ ಆಗು’ ಅಂತಂದು ಚೆನ್ನಾಗಿ ಓದಿಸಿದ್ದರು. ಒಟ್ಟಿನಲ್ಲಿ ಅಪ್ಪ ಹರಿಕಥೆಯಲ್ಲಿ ಸಂಪಾದಿಸಿದ ದುಡ್ಡೇ ತನ್ನನ್ನು ಈ ಹಂತಕ್ಕೆ ತಲುಪಿಸಿದೆ ಎನ್ನುವುದು ಶ್ರೀಪಾದರಾಜರ ಮನಸ್ಸಿನಲ್ಲಿ ಸುಳಿಯುತ್ತಲೇ ಇತ್ತು.


ಚಂದ್ರಪ್ಪ ಪ್ರಶ್ನೆ ಕೇಳಿ ಉತ್ತರಕ್ಕಾಗಿ ನಿರೀಕ್ಷಿಸಿ ಕೂತಿದ್ದರೆ ಶ್ರೀಪಾದರಾಜರು ಭೂತಕಾಲದಲ್ಲಿ ಸಂಚರಿಸುತ್ತಿದ್ದರು. ಸಾಯುವವರ ಮೇಲೆ ಕಾವ್ಯ ಬರೆದದ್ದಕ್ಕೆ ಹಲ್ಲು ಮುರಿಸಿಕೊಂಡ ರಾಘವಾಂಕ ಒಂದು ಕಡೆ; ಸಾವಾದವರ ಮನೆ ಚಂದ್ರಪ್ಪನಿಗೊಂದು ದಾರಿ ತೋರಿಸುತ್ತಿದೆ.. ಒಟ್ನಲ್ಲಿ ಕಾಲ ಬದಲಾಗ್ತಿದೆ.. ಎಂದು ಯೋಚಿಸುವಾಗ ಶ್ರೀಪಾದರಾಜರು ಮತ್ತೆ ಚಂದ್ರಪ್ಪನನ್ನು ನೋಡಿದರು.


ಚಂದ್ರಪ್ಪ ಮೊದಲಿಗೇ ತನ್ನ ಸಹಜತೆಯಿಂದಾಗಿ ಅವರಿಗೆ ತುಂಬ ಇಷ್ಟವಾಗಿಬಿಟ್ಟಿದ್ದ. ಕೊಂಚ ಅವನ ಪೂರ್ವಾಪರ ಕೇಳಿ ತಿಳಿಯುವ ಮನಸ್ಸಾಗಿ ಕೇಳಿದರು.


ಚಂದ್ರಪ್ಪ ತನ್ನ ಬದುಕಿನ ಹಿನ್ನೆಲೆ ಶುರುಮಾಡಿದ್ದ. ಅವನ ಅಪ್ಪ ಶನೈಶ್ವರನ ಕಥೆ ಮಾಡಿ ಪ್ರಸಿದ್ಧಿ ಗಳಿಸಿದ್ದರು. ಅವರ ಊರಿನವರು ಮಾತ್ರವಲ್ಲದೆ ಸುತ್ತಮುತ್ತಲಿನ ಊರಿನವರೂ ಅವರನ್ನೇ ಕರೆಸಿ ಮನೆಯಲ್ಲಿ ಕಥೆ ಓದಿಸುತ್ತಿದ್ದರು. ಅಕ್ಷರ ಬಾರದ ಚಂದ್ರಪ್ಪನ ಅಪ್ಪ ಸಂಗೀತ ಚೆಂದ ಹಾಡುತ್ತಿದ್ದರು. ಆಗಿನ್ನೂ ಚಂದ್ರಪ್ಪನಿಗೆ ಚಿಕ್ಕ ವಯಸ್ಸು. ಅಪ್ಪ ತಾನು ಶನೈಶ್ವರನ ಕಥೆ ಮಾಡಲು ಹೋದ ಊರಿಗೆಲ್ಲ ಮಗನನ್ನು ಕರೆದುಕೊಂಡು ಹೋಗುತ್ತಿದ್ದರು. ಅಪ್ಪನ ಹಾಡುಗಾರಿಕೆ ಕೇಳಿ ಗೊತ್ತಿದ್ದ ಚಂದ್ರಪ್ಪ ಆರಂಭದಲ್ಲಿ ಕೇವಲ ತಲೆದೂಗಲು ಆರಂಭಿಸಿ ತನ್ನ ಆಸಕ್ತಿ ಪ್ರಕಟಿಸಿದ್ದ. ಇದು ಬರಬರುತ್ತ ಅಪ್ಪ ಹಾಡುತ್ತಿದ್ದಾಗ ಮೆಲು ದನಿಯಲ್ಲಿ ಶೃತಿ ಕೂಡಿಸಿ ಹಾಡುವಂತೆ ಪ್ರೇರೇಪಿಸಿತ್ತು. ಅಪ್ಪನಿಗೂ ಮಗ ಹಾಡಲಿ ಎಂದೇ ಮನಸ್ಸಿನಲ್ಲಿ ಇತ್ತೇನೋ. ಹಾಗಾಗಿ ಚಂದ್ರಪ್ಪ ಹಾಡಲು ಆರಂಭಿಸಿದಾಗ ಅವರು ತಮ್ಮ ದನಿ ಕಡಿಮೆ ಮಾಡಿ ಅವನಿಗೆ ಪ್ರೋತ್ಸಾಹ ಕೊಡಲು ಆರಂಭಿಸಿದ್ದರು.


ಹಾಡುಗಾರಿಕೆ ಬಗ್ಗೆ ಒಲವು ಬಂದದ್ದು ಇಂಗೆ ಸಾಮಿ.. ಎಂದು ಚಂದ್ರಪ್ಪ ಹೇಳಿದಾಗ ಶ್ರೀಪಾದರಾಜರಿಗೆ ಕ್ಷಣ ರೋಮಾಂಚನವಾಯಿತು. ತನ್ನ ಹಾಗು ಚಂದ್ರಪ್ಪನ ತಂದೆ ಹರಿಕಥೆಯ ಹಿನ್ನೆಲೆ ಉಳ್ಳವರೇ ಎಂದುಕೊಳ್ಳುವಾಗ ಅವರಿಗೆ ಚಂದ್ರಪ್ಪ ಇನ್ನಷ್ಟು ಹತ್ತಿರವಾದ.


ಈಗಲೇ ಹೆಚ್ಚು ಕೆದಕಲು ಆರಂಭಿಸಿದರೆ ಅದೇ ದೊಡ್ಡ ಕಥೆಯಾದೀತು ಅನಿಸಿ ವಾಸ್ತವಕ್ಕೆ ಬಂದಿದ್ದ ಶ್ರೀಪಾದರಾಜರು ‘ಈಗ ಬಂದದ್ದು..?’ ಎಂದು ಕೇಳಿದ್ದರು.


ಜನ ಸತ್ತಾಗ ಡಿಮ್ಯಾಂಡ್ ಇರುತ್ತೆ. ಸಾಯದೆ ಇದ್ದಾಗ ಖಾಲಿ ಕೂರೋದು ಕಷ್ಟವಾಗ್ತಿದೆ. ಅದಕ್ಕೆ.. ಎಂದು ಮಾತು ಮುಂದುವರಿಸುತ್ತಿದ್ದಾಗ ಶ್ರೀಪಾದರಾಜರು ಅದನ್ನು ತಡೆದು ನಗುತ್ತ ‘ ಚಂದ್ರಪ್ಪ.. ನಿನಗೆ ಡಿಮ್ಯಾಂಡ್ ಯಾಕೆ ಅಷ್ಟೊಂದು..? ಅಂಥದ್ದೇನು ಮಾಡ್ತಿ?’ ಎಂದು ಕೇಳಿದ್ದರು.


ಚಂದ್ರಪ್ಪ ತಣ್ಣಗೆ.. ‘ ನಾನು ಸಾವಿನ ಮನೇಗೆ ಹೋದಾಗ ಸುಮ್ಮನೆ ನನಗೆ ಬಂದ ಪದಗಳನ್ನ ಹಾಡಿ ಬರಲ್ಲ ಸಾಮಿ. ಒಸಿ ಅವರ ಮನೆಯವರ ಬಗ್ಗೆ ವಿಚಾರಿಕೊಳ್ತೀನಿ. ಸತ್ತವರ ಗುಣ ಸ್ವಭಾವಗಳು.. ಅವರು ಊರಿಗೆ ಉಪಕಾರಿ ಆಗಿದ್ದ ಬಗೆ ಎಲ್ಲ ತಿಳ್ಕೊತೀನಿ. ನಾನು ಅವುಗಳನ್ನೇ ಪದಕಟ್ಟಿ ಹಾಡಲಿಕ್ಕೆ ಕೇಳ್ತಿದ್ದೀನಿ ಅಂತ ಹೇಳೋರಿಗೆ ಗೊತ್ತಿರೋದಿಲ್ಲ. ಸುಮ್ಮನೆ ಕಾಳಜಿಯಿಂದ ವಿಚಾರಿಸಿಕೊಳ್ತಿದ್ದೀನಿ ಅಂದುಕೊಂಡು ತಮಗೆ ತಿಳಿದದ್ದನ್ನ ಹೇಳ್ತಾರೆ.. ನಾನು ಅವುಗಳನ್ನೇ ಚೆಂದದ ಪದಕಟ್ಟಿ ಅವರಿಗೇ ಅಚ್ಚರಿ ಆಗುವಂತೆ ಹಾಡ್ತೀನಿ..’ ಅಂದ.
‘ಪದ ಕಟ್ಟೋದು ಹೇಗೆ ಕಲ್ತೆ..?’ ಶ್ರೀಪಾದರಾಜರು ತುಂಬ ಸಹಜವಾಗಿ ಕೇಳಿದ್ದರು.


‘ ನಮ್ಮೂರಿನ ಜನ ಸಾಮಿ. ಒಬ್ಬರಿಗಿಂತ ಒಬ್ಬರು ಚೆಂದ ಹಾಡೋರು. ಒಬ್ಬರನ್ನೊಬ್ಬರು ಜರಿಯೋ ಪದ ಆಗಾಗೇ ಕಟ್ಟಿ ಹಾಡೋರು.. ನಾನು ಆಗಿನ್ನೂ ಹೈದ. ಕಣ್ಣುಬಿಟ್ಟುಕೊಂಡು ಕಿವಿ ತೆರೆದುಕೊಂಡು ಕೇಳ್ತಿದ್ದೆ. ಅವರು ಪದ ಕಟ್ತಿದ್ದದ್ದು ಕೇಳಿ ನನಗೂ ಅದು ಬಂದಿರಬೇಕು ಅಷ್ಟೇ..’


‘ ಏನು ಪದ ಕಟ್ತಿದ್ದರು?’ ಶ್ರೀಪಾದರಾಜರು ಕುತೂಹಲದಿಂದ ಕೇಳಿದರು.


ಚಂದ್ರಪ್ಪ ಒಮ್ಮೆಗೇ ಹಾಡಿ ತೋರಿಸಲು ಮುಂದಾದ: ‘ಹಂತಹಂತದ ಮ್ಯಾಲೆ.. ಆನೆಕೊಂಬಿನ ಮ್ಯಾಲೆ..ಜಂತೋಲೆ ಮ್ಯಾಲೆ ಮಿಣಿ ಮ್ಯಾಲೆ..ಈ ಹೈದ ಪಂಥಕ್ಕೆ ಬರಬಹುದಾ ನನ್ನ ಮ್ಯಾಲೆ..’
ಹಾಡಿನ ಒಂದೊಂದು ಪದವನ್ನೂ ಬಿಡಿಸಿ ಬಿಡಿಸಿ ಚಂದ್ರಪ್ಪ ಅರ್ಥ ಹೇಳಿದ.
ಶ್ರೀಪಾದರಾಜರು ಮಂತ್ರಮುಗ್ಧರಾಗಿಹೋಗಿದ್ದರು.


‘ಸೊ ನೀನೂ ಪದ ಕಟ್ಟಿ ಹಾಡ್ತೀ ಅನ್ನು..’ ಅಂದದ್ದಕ್ಕೆ ಚಂದ್ರಪ್ಪ ‘ನನ್ನ ಹೊಟ್ಟೆ ತುಂಬೋಕೆ ಜನ ಸಾಯ್ತಿರಲಿ ಅಂತ ಬಯಸಬಾರದು.. ಅವರು ಸಾಯದೆ ನಾನು ಖಾಲಿ ಕೂತಾಗ ಬೇರೆ ಹಾಡು ಹಾಡೋಕೆ ಶುರುಮಾಡುಮಾ ಅಂತಿದ್ದೀನಿ. ತಾವು ಬುದ್ಧಿಯೋರು ನನಗೊಂದಿಷ್ಟು ಹಣ ಕೊಡಿಸಬೇಕು ಸರ್ಕಾರದಿಂದ’ ಅಂತ ಕೈಮುಗಿದ.
ಶ್ರೀಪಾದರಾಜರು ಕೈಚಾಚಿ ಅವನ ಕೈಯಲ್ಲಿದ ಅರ್ಜಿ ತೆಗೆದುಕೊಂಡು ಕಣ್ಣಾಡಿಸಿ ಕೂಡಲೇ ಚಿಕ್ಕ ಸಹಿ ಮಾಡಿ ‘ ದುಡ್ಡು ಕೊಡಿಸ್ತೀನಿ.. ಇದು ವಾಗ್ದಾನ’ ಅಂತಂದಿದ್ದರು. ಚಂದ್ರಪ್ಪ ಕಣ್ಣರಳಿಸಿದ್ದ.


ಆದರೆ ಚಂದ್ರಪ್ಪನಲ್ಲಿ ಅದೆಂಥದೋ ದಿವ್ಯತೆ ಕಂಡುಕೊಂಡಿದ್ದ ಶ್ರೀಪಾದರಾಜರು ಅವನ ನೆರವಿಗೆ ನಿಲ್ಲಲೇಬೇಕು ಎಂದು ಸಂಕಲ್ಪಿಸಿ ಅದನ್ನು ಮುಂದೆ ಕಾರ್ಯಗತ ಮಾಡಿ ತೋರಿಸಿದ್ದರು.


ಚಂದ್ರಪ್ಪ ತನ್ನ ಧನ್ಯತಾಭಾವ ಪ್ರಕಟಿಸಿದ್ದ. ಕಾಮಧೇನುವಾಗಿದ್ದಕ್ಕೆ ಶ್ರೀಪಾದರಾಜರಿಗೆ ಮೊದಲ ಬಾರಿಗೆ ಹೆಮ್ಮೆ ಅನಿಸಿತ್ತು. ಸಾಲದ್ದಕ್ಕೆ ಮತ್ತಷ್ಟು ಏನಾದರು ಮಾಡಿ ನೆರವಾಗಬೇಕು ಎಂಬ ತುರಿಕೆ ಹೆಚ್ಚಾಗಿತ್ತು.


ಕೂತಲ್ಲಿ ನಿಂತಲ್ಲಿ ಚಂದ್ರಪ್ಪ ಅವರ ಧ್ಯಾನದ ಕೇಂದ್ರವಾದ. ಅವನ ಭಾಷೆಗೆ ಅವನ ವ್ಯಕ್ತಿತ್ವ ಪ್ರತಿಬಾರಿ ವಿಶೇಷ ಮೆರುಗು ತಂದುಕೊಡುತ್ತಿತ್ತು. ಹಾಗೆ ಪ್ರತಿಬಾರಿ ಮನಸೋಲಲು ಆರಂಭಿಸಿದ ಶ್ರೀಪಾದರಾಜರು ಚಂದ್ರಪ್ಪನ ಕಡತಗಳಿಗೆ ಸಹಿ ಹಾಕುವುದು ಮತ್ತು ದೊಡ್ಡ ಸಾಹೇಬರಿಂದ ಸಹಿ ಹಾಕಿಸಿಕೊಂಡು ಬರುವುದು ರೂಢಿಯಾಗಿಬಿಟ್ಟಿತ್ತು. ಆದರೂ ಅವರ ಹಸಿವು ತಣಿಯಲಿಲ್ಲ.


ಯಾರು ಸಾಯದಿದ್ದರೂ ತನ್ನ ಜೀವನಕ್ಕೊಂದು ದಾರಿ ಆಗುತ್ತಿದೆ ಎಂದು ಖುಷಿಯಾಗಿದ್ದ ಚಂದ್ರಪ್ಪನನ್ನು ಶ್ರೀಪಾದರಾಜರು ಒಮ್ಮೆ ಹೀಗೇ ‘ಎಷ್ಟು ಓದಿದ್ದೀಯಾ ಚಂದ್ರಪ್ಪ ನೀನು?’ ಎಂದು ಕೇಳಿದರು. ಅದಕ್ಕೆ ಅವನು ‘ಎಸ್‍ಎಸ್‍ಎಲ್‍ಸೀಲಿ ಮ್ಯಾಥಮಟಿಕ್ಸ್ ಮತ್ತು ಇಂಗ್ಲೀಷು ಫೇಲಾಗಿದೆ ಸಾ’ ಅಂತಂದ.


ಅವುಗಳನ್ನ ಕಟ್ಟಿ ಪಾಸು ಮಾಡಿಕೊಳ್ಳಲಿಕ್ಕೆ ಮನೇಲಿ ಅಪ್ಪ ಒತ್ತಡ ತಂದಿರಲಿಲ್ಲ. ಹಾಡ್ತಾವನೆ.. ಹೇಗೋ ಬದುಕು ಸಾಗುತ್ತೆ.. ಅಂತಂದುಕೊಂಡು ಸುಮ್ಮನಿದ್ದರು. ಚಂದ್ರಪ್ಪ ಕೂಡ ಕಾರ್ಯಕ್ರಮಗಳಲ್ಲಿ ಬ್ಯುಸಿ ಆಗಲು ಆರಂಭಿಸಿದ್ದ.
‘ ಇಷ್ಟೇ ಆದ್ರೆ ಸಾಲಲ್ಲ’ ಅಂತ ಮನವರಿಕೆ ಮಾಡಿಸಿ ಹಾಗೂ ಹೀಗೂ ಆ ಎರಡು ಸಬ್ಜೆಕ್ಟ್‌ಗಳನ್ನು ಕಟ್ಟಿ ಪಾಸು ಮಾಡಿಕೊಳ್ಳುವಂತೆ ಮಾಡಲು ಶ್ರೀಪಾದರಾಜರು ಶ್ರಮಿಸಿದ್ದರು. ಹಾಗೇ ಕಾರ್ಯಕ್ರಮದಲ್ಲಿ ಚಂದ್ರಪ್ಪ ಹಾಡುವುದನ್ನು ಒಂದೆರಡು ಬಾರಿ ಶ್ರೀಪಾದರಾಜರು ಗಮನಿಸಿದ್ದರು. ಅವನು ಕಂಜಿರ ಹಿಡಿದು ನುಡಿಸುತ್ತ ಹಾಡುತ್ತಿದ್ದ.


‘ ಇಷ್ಟು ಸಾಲಲ್ಲ ಚಂದ್ರಪ್ಪ..’ ಅಂತಂದು ಅವನನ್ನು ರಾಮನಗರದ ಜನಪದ ಲೋಕಕ್ಕೆ ಸೇರಿಸಿ ಅಲ್ಲಿ ಹಾಡುಗಾರಿಕೆ.. ಮತ್ತು ಡಿಪ್ಲಮಾ ಪಡೆಯುವಂತೆ ಮಾಡಿ ಪಟ್ಟುಹಿಡಿದು ಮಾಡಿಸಿ ಯಶಸ್ವಿಯಾಗಿದ್ದರು.
ಆದರೆ ಅಷ್ಟು ಹಾಡುಗಾರಿಕೆಗೆ ಅವರ ಮನಸ್ಸು ತೃಪ್ತಿ ಅನುಭವಿಸಿರಲಿಲ್ಲ. ಸಾಲಲ್ಲ ಇದು ಚಂದ್ರಪ್ಪ.. ಅಂತಂದು... ಕಥೆ ಮಾಡೋದು ನಿನ್ನ ರಕ್ತದಲ್ಲಿ ಬಂದಿರುತ್ತೆ.. ನೀನು ಒಬ್ಬರ ಬಳಿ ಹರಿಕಥೆ ಮಾಡೋದು ಕಲಿ.. ಅಂತಂದು..ತಮಗೆ ನೆನಪಿದ್ದ ತಿಳಿಗೊಳದ ಕೇಶವದಾಸರ ಸಂಪರ್ಕ ದೊರಕಿಸಿಕೊಟ್ಟು ಹರಿಕಥೆಗೆ ಒಗ್ಗಿಸಿದ್ದರು. ಅದರಲ್ಲಿ ಚಂದ್ರಪ್ಪ ಮಾಗುತ್ತಿದ್ದಾನೆ ಅನಿಸುತ್ತಿದ್ದಂತೆ.. ಇನ್ನೂ ಏನಾದರೂ ಮಾಡಬೇಕು ಅನಿಸಿತ್ತು. ಆದರೆ ಏನು ಮಾಡಿದರೂ ಇವನ ಭಾಷೆ ಮಾತ್ರ ತಿದ್ದಬಾರದು ಎನ್ನುವ ಎಚ್ಚರ ಅವರಿಗೆ ಬಂದಿತ್ತು. ಯಾಕೆಂದರೆ ಚಂದ್ರಪ್ಪ ಹರಿಕಥೆಗೆ ಪೇಟ ಕಟ್ಟಿ ನಿಂತರೂ ಅವನ ಕಂಠದಿಂದ ಹೊರಡುತ್ತಿದ್ದದ್ದು ಮಂಡ್ಯ ಪ್ರಾಂತ್ಯದ ಭಾಷೆಯೇ. ತುಂಬ ಸೂಕ್ಷ್ಮಮತಿಯಾಗಿದ್ದ ಶ್ರೀಪಾದರಾಜರು ‘ಇದು ತುಂಬ ಕ್ಯಾಚಿಯಾಗಿದೆ.. ಇದಕ್ಕೆ ಏನಾದರೂ ಮಾಡಬೇಕು’ ಅನಿಸಿ ಚಂದ್ರಪ್ಪನಿಗೆ ಆಧುನಿಕ ಕಾಲಮಾನ ಎಂಥದ್ದು.. ಇದು ಫೇಸ್ಬುಕ್, ಯೂಟ್ಯೂಬ್, ಇನ್ಸ್ಟಾ ಯುಗ.. ಇದರಲ್ಲಿ ನೀನು ಕಾಣಿಸಿಕೊಳ್ಳಬೇಕು ಎಂದು ತಲೆಗೆ ತುಂಬಿದರು. ನೀನು ಕಥೆ ಹೇಳಿದ್ಯೋ ಯಾರೂ ಅಷ್ಟಾಗಿ ಕಿವಿಗೊಡಲ್ಲ. ಯಾಕಂದ್ರೆ ಹರಿಕಥೆಯಲ್ಲಿ ಗುರುರಾಜುಲು ನಾಯ್ಡು ಅವರು ಆಗಲೇ ಗಟ್ಟಿ ಕೂತುಬಿಟ್ಟಿದ್ದಾರೆ. ನೀನು ಒಂದು ಕೆಲಸ ಮಾಡು.. ಚಿಕ್ಕಚಿಕ್ಕ ಹಾಸ್ಯ ಉಪಕಥೆಗಳನ್ನ ತುಂಬ ಕ್ಯಾಚಿಯಾಗಿ ನಿಂದೇ ಭಾಷೇಲಿ ಹೇಳಿ ಹರಿಬಿಡು..’ ಅಂತ ಹುರಿದುಂಬಿಸಿದ್ದರು.


ಚಂದ್ರಪ್ಪನಿಗೆ ಮೊದಮೊದಲು ಇವೆಲ್ಲ ನಡೆದೀತೇ ಅನಿಸಿತ್ತು. ಆದರೂ ಹರಿಕಥೆಯ ಕಲಿಕೆ ಕೇಶವದಾಸರಿಂದ ಆರಂಭ ಆಗಿತ್ತು. ನಂತರ ಫೇಸ್ಬುಕ್‍ಗೆ ಎಂಟ್ರಿ.. ಆಮೇಲೆ ಯೂಟ್ಯೂಬ್.


ಚಂದ್ರಪ್ಪನ ಚಾನೆಲ್ ಚಂದಾದಾರರು ದಿನದಿಂದ ಹೆಚ್ಚುತ್ತಾ ಹೋದರು. ಅವನು ಒಂದು ಚಿಕ್ಕ ಹಾಸ್ಯ ಕಥೆ ಹೇಳಿ ಶೇರ್ ಮಾಡಿದ ವಿಡಿಯೋ ಗಂಟೆಯೊಳಗೆ ಹಲವು ಸಾವಿರಗಳ ಗಡಿ ದಾಟುತ್ತಿತ್ತು.


ತನ್ನ ಜನಪ್ರಿಯತೆ ಹಿಗ್ಗುತ್ತಿದೆ.. ಜನ ತನ್ನ ಮಾತುಗಳನ್ನು ಕೇಳುತ್ತಿದ್ದಾರೆ.. ಕೊಂಚ ದುಡ್ಡು ಕಾಸು ಸರಾಗವಾಗಿ ಓಡಾಡುತ್ತಿದೆ ಅನಿಸುವ ಹೊತ್ತಿಗೆ ಚಂದ್ರಪ್ಪ ಕೊಂಚ ವಾಸ್ತವಕ್ಕೆ ಬಂದಿದ್ದ. ಓದಿರೋದು ಎಸ್‍ಎಸ್‍ಎಲ್‍ಸಿಯಾದರೂ.. ಒಂದು ಡಿಪ್ಲಮಾ ಮಾಡಿಕೊಂಡಿದ್ದರೂ ಹೆಚ್ಚಿಗೆ ಮುಂದಕ್ಕೆ ಓದಬಾರದು ಎಂದೇನೂ ಇಲ್ಲವಲ್ಲ ಅನಿಸಿ ಪುಸ್ತಕ ಖರೀದಿಸಲು ಆರಂಭಿಸಿದ. ಅವುಗಳ ಸಂಖ್ಯೆ ಕೂಡ ಬೆಳೆಯುತ್ತಾ ಹೋಯಿತು. ಇದು ಆಗಿಂದಾಗ್ಗೆ ಶ್ರೀಪಾದರಾಜರಿಗೆ ತಿಳಿಯುತ್ತಿತ್ತು. ಅವರು ಖುಷಿಪಡುತ್ತಿದ್ದರು. ಎಷ್ಟೆಲ್ಲ ಓದಿದರೂ ಬಡ್ಡಿಮಗಂದು ಅವನ ಭಾಷೆ ನೋಡು.. ಅಂಗೇ ಅದೆ... ಎಂದು ಚಂದ್ರಪ್ಪನ ಶೈಲಿಯಲ್ಲೇ ಹೇಳಿ ನಗುತ್ತಿದ್ದರು. ಚಂದ್ರಪ್ಪನ ಭಾಷೆಯೂ ಹಾಗೆಯೇ ಇತ್ತು. ಎಲ್ಲೊ ಅಲ್ಲಲ್ಲಿ ಕೊಂಚ ಸುಧಾರಣೆ ಕಂಡಿರುವುದು ತಿಳಿಯುತ್ತಿತ್ತಾದರೂ ತೀರಾ ಗ್ರಾಮ್ಯದ ಪರಿಧಿ ದಾಟಿ ಆಚೆಗೆ ಸಾಗಿರಲಿಲ್ಲ. ಇದು ಪ್ಲಸ್ ಪಾಯಿಂಟ್ ಎಂದು ಅವನಿಗೆ ತಿಳಿದಿತ್ತೋ ಇಲ್ಲವೋ ಗೊತ್ತಿಲ್ಲ. ಅವನು ತನ್ನ ಭಾಷೆಯ ಮೇಲೇ ಫೋಕಸ್ ಮಾಡಿ ಮಾತಾಡುತ್ತಿದ್ದಾನೆ ಎಂದೇನೂ ಅನಿಸುತ್ತಿರಲಿಲ್ಲ.


ಒಂದೂವರೆಯಿಂದ ಎರಡು ಲಕ್ಷ ರೂಪಾಯಿವರೆಗೆ ವ್ಯಯಿಸಿ ಪುಸ್ತಕ ಸಂಗ್ರಹಿಸಿಟ್ಟುಕೊಂಡಿದ್ದ ಚಂದ್ರಪ್ಪ ಊರು, ತಾಲೂಕು ಕಡೆಗೆ ಜಿಲ್ಲಾ ಮಟ್ಟದಲ್ಲಿ ಹಲವು ಕಲಾವಿದರನ್ನು ಕೂಡಿಕೊಂಡು ದೊಡ್ಡ ಕಾರ್ಯಕ್ರಮಗಳನ್ನು ಆಯೋಜಿಸಲು ಮುಂದಾಗಿದ್ದ. ಅದಕ್ಕೆ ಹೂವಿನ ಸರ ಎತ್ತಿದಂತೆ ಸರ್ಕಾರದಿಂದ ಸಹಾಯ ಶ್ರೀಪಾದರಾಜರಿಂದ ಸಿಕ್ಕಿಬಿಡುತ್ತಿತ್ತು. ಅವನ ಕಾರ್ಯಕ್ರಮದ ವರದಿಗಳು ಪೇಪರ್‍ನಲ್ಲಿ ವರದಿಯಾಗಲು ಆರಂಭಿಸಿದ್ದವು. ಇದರ ಹುರುಪಿನಲ್ಲೇ ಚಂದ್ರಪ್ಪನ ಮತ್ತೊಂದು ಮಹತ್ವಾಕಾಂಕ್ಷೆಯ ದೊಡ್ಡ ಕಾರ್ಯಕ್ರಮಕ್ಕೆ ಶ್ರೀಪಾದರಾಜರು ದೊಡ್ಡ ಸಾಹೇಬರಿಂದ ಸಹಿ ತೆಗೆದುಕೊಂಡು ಬರಲು ಕಾರಿನಲ್ಲಿ ಹೊರಟಿದ್ದರು.


ಇಷ್ಟರ ನಡುವೆ ಶ್ರೀಪಾದರಾಜರ ನಡೆಯನ್ನು ಹಲವರು ಹಲವು ರೀತಿಯಲ್ಲಿ ವಿಮರ್ಶಿಸಿ ವ್ಯಾಖ್ಯಾನಿಸಿದ್ದು ಇದೆ. ಸ್ವಲ್ಪ ನಮ್ಮ ಕಡೆಯವರನ್ನ ಮೇಲಕ್ಕೆ ತರೋ ಕಡೆ ಗಮನ ಹರಿಸು ಶ್ರೀಪಾದರಾಜ...ಬಿಡು ಆ ಚಂದ್ರಪ್ಪನನ್ನ. ನಿನಗೆ ಅವರುಗಳ ಬಗ್ಗೆ ಗೊತ್ತಿಲ್ಲ. ಸುಮ್ಮನೆ ಮೆರೆಸಬೇಡ. ಒಂದು ದಿನ ಗೊತ್ತಾಗುತ್ತೆ ಏನು ಅಂತ..’ ಎಂದು ಸೂಚ್ಯವಾಗಿ ಎಚ್ಚರಿಸಿದ್ದರೂ ಶ್ರೀಪಾದರಾಜರು ನಕ್ಕು ಸುಮ್ಮನಾಗಿದ್ದರು.


ಶ್ರೀಪಾದರಾಜರ ನಿಜವಾದ ವಿರೋಧೀ ಬಣ ಬೇರೆ ಮಾತು ತೆಗೆದಿತ್ತು. ‘ ಇಲ್ಲ ಶ್ರೀಪಾದರಾಜ ತುಂಬ ಚಾಣಾಕ್ಷ. ಅವನಿಗೆ ಈ ಕಾಲ ಎಂಥದ್ದು ಅಂತ ಗೊತ್ತು. ಚಂದ್ರಪ್ಪನಥರದವರು ಮೇಲೆ ಬರಲಿಕ್ಕೆ ಅನುವು ಮಾಡಿಕೊಡ್ತಿರೋದು ಯಾಕೆ ಅಂತ ತಿಳಿದಿದ್ದೀರಿ? ಹಾಗೆ ಮಾಡಿಕೊಟ್ಟರೆ ಕಟ್ಟಕಡೆಗೆ ಈ ಎಲ್ಲ ಉನ್ನತಿಗೆ ಕಾರಣ ಆಗಿದ್ದು ಯಾರು ಅಂತ ಗುರುತಿಸೋವಾಗ ಯಾರ ಹೆಸರು ಬರುತ್ತೆ..? ಅಲ್ಲಿಗೆ ಗೆದ್ದವರು ಯಾರು..?’
ಅಸಲಿಗೆ ಶ್ರೀಪಾದರಾಜರ ಮನಸ್ಸಿನಲ್ಲಿ ಏನು ನಡೆದಿದೆ? ಏನು ಓಡ್ತಿದೆ ಎಂದು ಯಾರೂ ನಿಖರವಾಗಿ ಹೇಳಲು ಸಾಧ್ಯವಾಗಿರಲಿಲ್ಲ. ಅವರು ಅಷ್ಟು ನಿಗೂಢದ ಹಾಗೆ ಇದ್ದರು.


ಕಾರಿನಲ್ಲಿ ಹೋಗುತ್ತಿದ್ದಾಗ ಅವರ ಫೋನ್ ಮತ್ತೆ ರಿಂಗಣಿಸಿತು. ಸಾಹೇಬರದೇ ಇರಬೇಕು ಅಂತ ನೋಡಿದರೆ ಮುನಿವೆಂಕಟಪ್ಪನಿಂದ ಕರೆ. ಕಚೇರಿಯಲ್ಲಿ ಏನಾದರೂ ತುರ್ತು ಏರ್ಪಟ್ಟಿರಬಹುದೇ ಅಂದುಕೊಂಡು ಕರೆ ಸ್ವೀಕರಿಸಿ ‘ ಏನು ವೆಂಕಟಪ್ಪ?’ ಎಂದು ಕೇಳಿದರು.


‘ ನಿಮ್ಮ ಚಂದ್ರಪ್ಪನನ್ನ ಒಬ್ಬರು ಇಂಟರ್‌ವ್ಯೂ ಮಾಡಿದ್ದಾರೆ ಸಾ. ನೋಡಿ. ಯೂಟ್ಯೂಬ್‍ನಲ್ಲಿ ಇದೆ. ಈಗ ಬಂತು ನೋಟಿಫಿಕೇಷನ್. ನೀವು ಮಾಡಿರೊ ಸಹಾಯ ಎಲ್ಲ ಇಂಚಿಂಚೂ ನೆನೆದಿದ್ದಾನೆ. ನೀವು ಅವನ ಕಡತಕ್ಕೆ ಸೈನ್ ಹಾಕಿಸಿಕೊಂಡು ಬರೋಕೆ ತಗೊಂಡು ಹೋಗ್ತಿರೋದು ನ್ಯಾಯವೇ ಇದೆ ಬಿಡಿ..’ ಅಂದ.
‘ಹೌದಾ.. ಅಂಗಾ.. ಹಾಳಾದ್ದು ಟ್ರಾಫಿಕ್ ಜ್ಯಾಮ್. ಸಾಹೇಬರನ್ನ ಭೇಟಿ ಮಾಡೋದು ಇನ್ನೂ ಲೇಟಾಗಬಹುದು. ಸಮಯ ಇದೆ. ನೋಡ್ತೀನಿ ಬಿಡು..’ ಅಂತಂದು ಫೋನಿಟ್ಟರು.


ನಂತರ ಚಂದ್ರಪ್ಪನ ಇಂಟರ್‍ವ್ಯೂ ನೋಡಬೇಕೇ ಬೇಡವೇ ಎಂದು ಗೊಂದಲವಾಯಿತು. ಇಷ್ಟಕ್ಕೂ ಅವನು ಏನು ಹೇಳಿದ್ದಾನೆ ಅಂತ ಮುನಿವೆಂಕಟಪ್ಪನೇ ಹೇಳಿದ್ದಾನೆ. ನಾನು ಮಾಡಿರೋದನ್ನೇ ಚಂದ್ರಪ್ಪ ಹೇಳಿರತಾನೆ. ಒಂದಿಷ್ಟು ಹೆಚ್ಚಿಗೆ ಹೊಗಳಿರಬಹುದು ಅಷ್ಟೇ. ಅದನ್ನೇನು ಕೇಳೋದು ಅಂದುಕೊಂಡು ಸುಮ್ಮನಾದರು.
ಕೆಲಕ್ಷಣ ಬಿಟ್ಟು ಅವರಿಗೆ ಬೇರೆ ಯೋಚನೆ ಬಂತು. ಚಂದ್ರಪ್ಪನ ಹಾಡುಗಾರಿಕೆ ಗೊತ್ತು. ಅವನು ಹೇಳುತ್ತಿದ್ದ ಹಾಸ್ಯ ಉಪಕಥೆಗಳು ಗೊತ್ತು. ಅದು ಬೇರೆ ಬಗೆಯ ಸರಕು. ಚಂದ್ರಪ್ಪ ಈಗ ಸ್ವಂತ ಬದುಕಿನ ಕುರಿತು ಹೇಗೆ ಮಾತಾಡಿದ್ದಾನೆ?


ಕೊಂಚ ಕುತೂಹಲ ಚಿಗುರಿತು. ಏನಾದರೂ ಮಾತಾಡಿರಲಿ.. ಅವನ ಭಾಷೆಗೋಸ್ಕರವಾದರೂ ಕಣ್ಣಾಗಿ ಕೇಳಬೇಕು ಅಂದುಕೊಂಡು ಯೂಟ್ಯೂನ್ ಆನ್ ಮಾಡಿ ಬ್ಲೂಟೂಥ್ ಕಿವಿಗೆ ಸಿಕ್ಕಿಸಿಕೊಂಡರು. ಡ್ರೈವರ್ ಶೇಖರ.. ಹಾಡಾ ಸರ್..? ಎಂದು ಕೇಳಿದ. ‘ ಇಲ್ಲ ಇಂಟರ್‍ವ್ಯೂ’ ಅಂತಂದರು ಶ್ರೀಪಾದರಾಜರು.
ತನಗೆ ಬಂದಿರಬಹುದಾದ ನೋಟಿಫಿಕೇಷನ್ ಹುಡುಕಿ.. ಅದನ್ನು ತೆರೆದರು. ವಿಡಿಯೊ ಆನ್ ಮಾಡಿದಾಗ ಚಂದ್ರಪ್ಪ ಕಾಣಿಸಿಕೊಂಡ. ಶ್ರೀಪಾದರಾಜರು ತನ್ಮಯತೆಯಿಂದ ಕೇಳಿಸಿಕೊಳ್ಳಲು ಆರಂಭಿಸಿದರು.
ಶ್ರೀಪಾದರಾಜರು ಗ್ರಹಿಸಿದಂತೆ ಚಂದ್ರಪ್ಪ ತನ್ನ ಜರ್ನಿಯ ಬಗ್ಗೆ ಮಾತು ಆರಂಭಿಸಿದ್ದ. ಎಲ್ಲ ಅವರಿಗೆ ಗೊತ್ತಿದ್ದ ಸರಕೇ. ಆದರೆ ಅವುಗಳನ್ನು ಮತ್ತೆ ಅವನ ಭಾಷಾ ಟೋನ್‍ನಲ್ಲಿ ಕೇಳಲು ಚೆಂದ. ಅವನ ಬಾಲ್ಯ, ಅಪ್ಪ, ಶನೈಶ್ವರನ ಕಥೆ, ಊರೂರು ಸುತ್ತಾಟ, ತಾನು ದನಿ ಕೂಡಿಸುತ್ತಿದ್ದದ್ದು.. ನಂತರ ಶ್ರೀಪಾದರಾಜರ ಪಾತ್ರ.. ಈಗಿನ ಕಾರ್ಯಕ್ರಮಗಳು.. ಲಕ್ಷಾಂತರ ರೂ ಕೊಟ್ಟು ಸಂಗ್ರಹಿಸಿಟ್ಟಿರುವ ಪುಸ್ತಕಗಳು.. ತನ್ನ ಬ್ಯಾಂಡಿನ ಮಂದಿ.. ಅವರ ಮದುವೆಯಲ್ಲಿ ತಾನು ನೆರವಿಗೆ ನಿಂತದ್ದು.. ಕಾರ್ಯಕ್ರಮ ಕೊಡುವಾಗಲೇ ಪರಿಚಯವಾದ ಹೆಣ್ಣುಮಗಳು ತನ್ನನ್ನು ಪ್ರೀತಿಸಿದ್ದು.. ನಂತರದಲ್ಲಿ ತಾವು ಮದುವೆಯಾದದ್ದು.. ನಂತರದಲ್ಲಿ ಒಂಭತ್ತು ವರ್ಷ ಮಕ್ಕಳಿಲ್ಲದೆ ಹೋದದ್ದು.. ಆನಂತರದಲ್ಲಿ ಮಗುವೊಂದು ಗರ್ಭದಲ್ಲಿ ಕೊನರಿದರೂ ವೈದ್ಯರ ನಿರ್ಲಕ್ಷ್ಯದಿಂದ ಅದು ಹೊಟ್ಟೆಯಲ್ಲಿನ ನೀರು ಕುಡಿದು ಕಡೆಗೆ ಸತ್ತದ್ದು..


ವಿಡಿಯೋ ಪಾಸ್ ಮಾಡಿ ಶ್ರೀಪಾದರಾಜರು ಕೊಂಚ ಭಾವುಕರಾದರು. ಚಂದ್ರಪ್ಪ ಇಷ್ಟು ಕಷ್ಟಪಟ್ಟನೆ? ಇದ್ಯಾವುದೂ ನನಗೆ ಹೇಳಿಲ್ಲವಲ್ಲ ಅವನು.. ಅಂದುಕೊಂಡು ಮತ್ತೆ ವಿಡಿಯೋ ನೋಡಲು ಆರಂಭಿಸಿದರು.
ಚಿತ್ರನಟ ಅಪ್ಪು ತೀರಿಹೋದಾಗ ಇಡೀ ರಾಜ್ಯ ಶೋಕದಲ್ಲಿದ್ದ ಹೊತ್ತು ಚಂದ್ರಪ್ಪ ಕೂಡ ತಾನೂ ತನ್ನ ದುಃಖವನ್ನು ಹೊರಹಾಕಬೇಕು ಅನಿಸಿ ಆಗಿಂದಾಗೇ ಒಂದು ಪದ ಕಟ್ಟಿ ಹಾಡಿ ಅದನ್ನು ವಿಡಿಯೋ ಮಾಡಿ ಹರಿಬಿಟ್ಟಾಗ ಅದಕ್ಕೆ ವ್ಯೂಗಳು ತಾರಕ ಮುಟ್ಟಿದ್ದವು. ಅಪ್ಪು ಬಗ್ಗೆ ಹಾಡಿದ ಒಂದು ಹಾಡು ಚಂದ್ರಪ್ಪನಿಗೆ ಜನಪ್ರಿಯತೆ ತಂದುಕೊಟ್ಟಿತ್ತು. ಒಂದೇ ದಿನಕ್ಕೆ ಹದಿನೈದು ಪ್ರೋಗ್ರಾಂಗಳು ಬುಕ್ ಆಗಿದ್ದವು. ಹಲವು ಊರಿನವರು ಅಪ್ಪು ಬಗ್ಗೆ ಕಾರ್ಯಕ್ರಮ ಆಯೋಜಿಸಿ ಚಂದ್ರಪ್ಪನನ್ನು ಆ ಹಾಡು ಹಾಡಲು ಕರೆಯಲು ಆರಂಭಿಸಿದ್ದರು.


ಶ್ರೀಪಾದರಾಜರು ಮನಸ್ಸಿನಲ್ಲೇ ಭೇಷ್ ಚಂದ್ರಪ್ಪ ಅಂದುಕೊಂಡರು. ಜೊತೆಗೆ ಚಂದ್ರಪ್ಪ ಹೇಳಿದ ಇನ್ನೊಂದು ಸಂಗತಿ ಅವರ ಮನ ಮುಟ್ಟಿತ್ತು. ಎಂಬತ್ತು ದಾಟಿರುವ ಒಂದು ಅಜ್ಜಿ ಚಂದ್ರಪ್ಪನನ್ನು ಕಂಡು ‘ ನಾನು ಸತ್ತಾಗ ನೀನೇ ಬಂದು ಹಾಡಬೇಕು’ ಅಂತ ಕೈಮುಗೀತಂತೆ. ಅದನ್ನು ಧನ್ಯತಾ ಭಾವದಲ್ಲಿ ಚಂದ್ರಪ್ಪ ಸ್ಮರಿಸಿದ್ದನ್ನು ಕಂಡು ಶ್ರೀಪಾದರಾಜರು ಕ್ಷಣ ಭಾವುಕರಾದರು.


ವಿಡಿಯೋ ಇನ್ನು ಒಂದು ನಿಮಿಷ ಬಾಕಿ ಇದೆ ಎನ್ನುವುದನ್ನು ಅವರು ಗಮನಿಸಿದರು. ಇನ್ನೇನು ಇರುತ್ತದೆ.. ಹೇಳಬೇಕಾಗಿರೋದನ್ನೆಲ್ಲ ಹೇಳಿ ಆಗಿದೆ.. ಇನ್ನು ಸಾಕು ನೋಡುವುದು ಅಂದುಕೊಂಡರೂ.. ಇರಲಿ ನೋಡುವ ಅದು ಹೇಗೆ ಮುಕ್ತಾಯ ಮಾಡಿದ್ದಾನೆ.. ಇನ್ನು ಒಂದು ನಿಮಿಷ ತಾನೇ ಅಂದುಕೊಂಡು ನೋಡಲು ಆರಂಭಿಸಿದರು.
ಕಡೆಗೆ ಸಂದರ್ಶಕರು ಚಂದ್ರಪ್ಪನಿಗೆ ‘ ಈ ಪುರಾಣ ಕಥೆಗಳು ನಿಮ್ಮ ಬದುಕಿಗೆ ನೆರವಾಗಿವೆ. ನೀವು ಹರಿಕಥೆ ಆರಂಭಿಸಿ ಯಶಸ್ವಿಯಾಗಿದ್ದೀರಿ. ಇದರ ಬಗ್ಗೆ ಏನು ಹೇಳುತ್ತೀರಿ?’ ಎಂದು ಕೇಳುತ್ತಾರೆ. ಅದಕ್ಕೆ ಚಂದ್ರಪ್ಪ ‘ಈ ಪುರಾಣ ಕಥೆಗಳು ಜೀವನದಲ್ಲಿ ಯಾವುದು ಸರಿ ಯಾವುದು ತಪ್ಪು ಅಂತ ತಿಳಿಸಿ ಹೇಳ್ತಾವೆ. ಅವುಗಳು ಕಾಲ್ಪನಿಕ... ಅಥವಾ ಅವು ಸತ್ಯವಾಗಿಯೂ ನಡೆದಿದೆ.. ಈ ಚರ್ಚೆಗೆ ನಾನು ಇಳಿಯೋದಿಲ್ಲ. ನಾನು ಎಲ್ಲವನ್ನ ತುಂಬ ಆಳವಾಗಿ ನಿಷ್ಕರ್ಷೆ ಮಾಡಿದ ಮೇಲೇನೇ ಒಪ್ಕೊಳ್ಳೋದು. ಈ ಪುರಾಣದ ಕಥೆಗಳು ನನ್ನನ್ನ ಕಾಪಾಡಿವೆ ನಿಜ. ಆದರೆ ನಿಜಕ್ಕೂ ಇವತ್ತು ನಮ್ಮನ್ನ ಕಾಪಾಡ್ತಿರೋದು ಸಂವಿಧಾನ. ಸಂವಿಧಾನದ ಮುಂದೆ ಈ ಪುರಾಣಗಳನ್ನ ನಾನು ತರೋದಿಲ್ಲ. ವಾಸ್ತವದ ಬದುಕಿಗೆ ಬೇಕಿರೋದು ಸಂವಿಧಾನ..’


ಶ್ರೀಪಾದರಾಜರು ಕ್ಷಣ ವಿಡಿಯೋ ಪಾಸ್ ಮಾಡಿದರು. ಮತ್ತೆ ಕರ್ಸರ್ ಕೊಂಚ ಹಿಂದಕ್ಕೆ ತೆಗೆದುಕೊಂಡು ಚಂದ್ರಪ್ಪ ಸಂವಿಧಾನಕ್ಕೆ ಹೆಚ್ಚು ಒತ್ತುಕೊಟ್ಟು ಹೇಳಿದ ಮಾತನ್ನು ಮತ್ತೆ ಕೇಳಿದರು. ಮತ್ತೆ ವಿಡಿಯೋ ಪಾಸ್ ಮಾಡಿದರು. ಮತ್ತೆ ರಿವೈಂಡ್ ಮಾಡಿ ಅದೇ ಮಾತು ಕೇಳಿದರು.


ಟ್ರಾಫಿಕ್ ಜ್ಯಾಮ್ ಕರಗಿ ಕಾರು ಚಲಿಸಲು ಆರಂಭಿಸಿತು. ಶ್ರೀಪಾದರಾಜರ ತಲೆ ಜೇನುಗೂಡಾಗಿತ್ತು. ಚಂದ್ರಪ್ಪನನ್ನು ಎಸ್‍ಎಸ್‍ಎಲ್‍ಸಿ ಪಾಸ್ ಮಾಡಿಸೋವಾಗಿಂದ ಹಿಡಿದು ಅವನು ಲಕ್ಷಾಂತರ ರೂ ಕೊಟ್ಟು ಪುಸ್ತಕ ಖರೀದಿಸುವವರೆಗೆ ತಾನು ಮಾಡಿದ್ದ ಕೆಲಸಗಳು ಕಣ್ಮುಂದೆ ಸುಳಿಯಲು ಆರಂಭಿಸಿದವು. ಜೊತೆಗೆ ಚಂದ್ರಪ್ಪ ಒತ್ತು ಕೊಟ್ಟು ಹೇಳಿದ್ದ ‘ ಸಂವಿಧಾನ’ ಪದವೂ ಮನಸ್ಸಿನಲ್ಲಿ ಅನುರಣಿಸಲು ಶುರುವಾಯಿತು.

**

ವಿಧಾನಸೌಧದ ಒಳಗೆ ಒಂದು ಕೋಣೆ. ದೊಡ್ಡ ಸಾಹೇಬರು ಸಚಿವರಾಗಿ ಕೂತು ಮಾತು ಆರಂಭಿಸಿದ್ದರು. ಅದೊಂದು ತುರ್ತು ಸಭೆ. ಶ್ರೀಪಾದರಾಜರು ಕಲ್ಲಿನಂತೆ ಕೂತಿದ್ದರು. ಕೆಲ ಹೊತ್ತಿನಿಂದ ಇವರನ್ನೇ ಗಮನಿಸುತ್ತಿದ್ದ ಸಚಿವರು ಶ್ರೀಪಾದರಾಜರಿಗೆ ‘ ಯಾಕೆ ರಾಜರೇ.. ಏನಾಯ್ತು..?’ ಎಂದು ಕೇಳಿದರು.
ಶ್ರೀಪಾದರಾಜರು ಪೇಲವವಾಗಿ ನಕ್ಕು ‘ಏನಿಲ್ಲ ಸಾರ್..’ ಅಂತಂದು ಅವರ ಮುಂದಿನ ಮಾತುಗಳಿಗೆ ಕಿವಿಗೊಡುವಂತೆ ನಟಿಸುತ್ತ ಕೂತರು.


ಮಾತುಕಥೆ ಎಲ್ಲ ಮುಗಿದ ಮೇಲೆ ಸಚಿವರು ಶ್ರೀಪಾದರಾಜರ ಕಡೆಗೆ ತಿರುಗಿ ‘ ಇಷ್ಟೇ. ಆಡಿಟ್ ಸಮಸ್ಯೆ ಬರದ ಹಾಗೆ ಎಚ್ಚರ ವಹಿಸಿದರಾಯ್ತು.. ನಿಮ್ಮ ಕಡತಗಳು ಯಾವಾಗ್ಲೂ ಕರೆಕ್ಟಾಗೇ ಇರ್ತಾವೆ..ಬಿಡಿ’ ಅಂತಂದು ನಕ್ಕರು. ಜೊತೆಗೆ ‘ ಯಾವುದಕ್ಕಾದರೂ ನನ್ನ ಸಹಿ ಬೇಕಿತ್ತೇನು..? ಕೈಯಲ್ಲಿ ಯಾವುದೋ ಕಡತ ಇದ್ದ ಹಾಗಿದೆ..’ ಅಂತಂದರು.
‘ಇಲ್ಲ ಸರ್ ಇದು ಸ್ಕ್ರೂಟಿನಿ ಆಗಬೇಕು.. ಬರ್ತಾ ಹಾಗೇ ಕಣ್ಣು ಹಾಯಿಸ್ತಾ ಬಂದೆ. ಸ್ಪಷ್ಟವಾಗೋಯ್ತು..’ ಅಂದರು ಶ್ರೀಪಾದರಾಜರು.
‘ಏನು ಸ್ಪಷ್ಟವಾಗೋಯ್ತು..?’
‘ಈ ಕಡತ ಮೂವ್ ಆಗಲಿಕ್ಕೆ ಲಾಯಕ್ಕಲ್ಲ ಅಂತ..’ ಅಂತ ನಕ್ಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT