ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಿತ ಪಿ.ಎನ್ ಅವರ ಅನುವಾದಿತ ಕಥೆ ‘ಡಾಗ್‌ಫಾದರ್’

ಮೂಲ ಸತೀಶ್ ಚಂದ್ರ
ಅನಿತ ಪಿ.ಎನ್‌.
Published 13 ಏಪ್ರಿಲ್ 2024, 19:57 IST
Last Updated 13 ಏಪ್ರಿಲ್ 2024, 19:57 IST
ಅಕ್ಷರ ಗಾತ್ರ

ನನ್ನ ಸಾವಿನ ಮುಹೂರ್ತ ನಾನೇ ನಿರ್ಣಯಿಸಿದೆ. ಅದು ಇಂದೇ. ಮಟಮಟ ಮಧ್ಯಾಹ್ನ ಹನ್ನೆರಡು ಗಂಟೆ. ಉರಿಬಿಸಿಲಲ್ಲಿ ಗಡಪಾರೆಯನ್ನು ನೇರ ನೆಲಕ್ಕಿಳಿಸಿದರೆ ಅದರ ನೆರಳು ತಗ್ಗುತ್ತಾ ತಗ್ಗುತ್ತಾ ಬಂದು ಮಾಯವಾಗುತ್ತದೆ. ಸರಿಯಾಗಿ ಆಗಲೇ ಸೂರ್ಯ ನಡುನೆತ್ತಿಗೇರುತ್ತಾನೆ.

ಅದೇ ಮುಹೂರ್ತಕ್ಕೆ ನನ್ನ ಕಥೆ ಸುಖಾಂತಗೊಳ್ಳುತ್ತದೆ. ಮುಕ್ತಾಯ ವಿಷಾದವಲ್ಲ. ಪ್ರಯಾಣ ಅರ್ಧಕ್ಕೆ ನಿಲ್ಲುವುದೇ ನಿಜವಾದ ನರಕ.

ನನಗೀಗ ಮರಣವೆಂದರೆ ಕಂದಕದೊಳಗೆ ಜಿಗಿಯುವುದಲ್ಲ. ಪರ್ವತವನ್ನು ಅಧಿರೋಹಿಸುವುದು.
****

ರಾಜ ಮರಣಿಸಿ ಇಂದಿಗೆ ಮೂರನೇ ದಿನ. ರಾಜ ನನ್ನ ನಾಯಿ ಹೆಸರು. ಗಮ್ಮತ್ತು ನೋಡಿದಿರಾ! ನನ್ನ ಹೆಸರೂ ರಾಜನೆಂದೇ.
ನನ್ನ ಹೆಸರನ್ನೇ ನಾಯಿಗೂ ಇಟ್ಟಳು ಅಮ್ಮ. ನನ್ನ ಮೇಲೆ ಕೋಪವೆಂದಲ್ಲ. ನನ್ನ ನಾಯಿ ಮೇಲಿನ ಪ್ರೇಮದಿಂದ.
ರಾಜ ಮೇಲುಜಾತಿಯ ಬೇಟೆನಾಯಿಯಲ್ಲ. ಕನಿಷ್ಠಪಕ್ಷ ಊರ ನಾಯಿಯೂ ಅಲ್ಲ. ಊರ ಹೊರಗಿನ ನಾಯಿ. ಕೀಳುಜಾತಿ ನಾಯಿ!
ರಾತ್ರಿಗೆ ಬಣ್ಣವಿರದ ಹಾಗೆ ನನ್ನ ರಾಜನಿಗೂ ಬಣ್ಣವಿಲ್ಲ. ಲೋಕದ ದೃಷ್ಟಿಯಲ್ಲಿ ಅದೊಂದು ಡರ್ಟಿ ಬ್ಲ್ಯಾಕ್ ಡಾಗ್! ನನಗೂ ನನ್ನ ತಾಯಿಗೂ ಕರಿಬಂಗಾರ.
ನಿನ್ನೆಯಲ್ಲ ಮೊನ್ನೆ, ರಾಜ ಹಾಡಹಗಲೇ ಸತ್ತ. ಅದೂ ಹನ್ನೆರಡು ಗಂಟೆಗೇ. ಚಕ್ರವರ್ತಿಗಳಿಗೆ ಸಹ ಅಂಥ ಸಾವು ಬರದು. ವಿಜಯವನ್ನು ವೀರಸ್ವರ್ಗವನ್ನು ಒಂದೇ ಸಾರಿ ಗಳಿಸಿದ.
ಅವನ ಅಂತಿಮ ಯಾತ್ರೆಯನ್ನು ಘನವಾಗಿ ಮಾಡಿಸಿದೆ. ಟಾಪಿರದ ಜೀಪಿನಲ್ಲಿ ಪೇಟೆಪೇಟೆಯೆಲ್ಲ ಮೆರವಣಿಗೆ ಮಾಡಿದೆ. ನನ್ನ ಮಿತ್ರರೆಲ್ಲರೂ ಬಿಳಿ ಉಡುಪುಗಳಲ್ಲಿ ಸೈನಿಕರಂತೆ ನಡೆದರು. ಎಲ್ಲೆಡೆ ನಿಶ್ಶಬ್ದ! ನಿಶ್ಶಬ್ದವೆಂದೂ ವಿಷಾದ ಸೂಚಕವಲ್ಲ. ಹೊಲದ ಕಾಲುವೆ ಪ್ರವಾಹ ನಿಶ್ಶಬ್ದ. ಮದರ್ ಥೆರೆಸಾ ಕಿರುನಗೆ ನಿಶ್ಶಬ್ದ. ಅಷ್ಟೇ ಏಕೆ? ಹಳ್ಳಿಗಳಲ್ಲಿನ ಮುಂಜಾವೂ ನಿಶ್ಶಬ್ದವೇ.
ಅವನ ಶವಪೆಟ್ಟಿಗೆಯನ್ನು ಸಮಾಧಿಯೊಳಗಿಡುವಾಗ ಮಾತ್ರ ನಿಶ್ಶಬ್ದತೆಗೆ ಭಂಗತಂದೆ. ತಂದೆಯ ಪಿಸ್ತೂಲು ತೆಗೆದು ಮೂರು ಬಾರಿ ಗಾಳಿಯಲ್ಲಿ ಗುಂಡುಹಾರಿಸಿದೆ. ಯಾಕೆ ಹಾಗೆ ಮಾಡಿದೆನೆಂದು ನನಗೇ ತಿಳಿಯದು. ಆ ದಿನ ನಾನು ಸ್ವಚ್ಛಂದತೆಯನ್ನು ಹೊಸದಾಗಿ ಅನುಭವಿಸಿದೆ. ಎಷ್ಟೋ ವರ್ಷಗಳಿಂದ ಬಂಧಿಯಾಗಿರುವ ಗುಲಾಮನ ಬೇಡಿ ಕಳಚಿದರೆ ಅವನು ಹೀಗೇ ವರ್ತಿಸುತ್ತಾನೆಂದು ಭರವಸೆ ಕೊಡಲಾಗದು. ಆತ ಏನಾದರೂ ಮಾಡಬಹುದು. ಜಿಂಕೆಯಂತೆ ಕಾಲುಕೀಳಬಹುದು. ಇಲ್ಲವೇ ಗೋಳಾಡುತ್ತಾ ಕೂರಬಹುದು.

ನಾನು ಗುಂಡು ಹಾರಿಸಿದೆ. ಬಹುಶಃ ತುಪಾಕಿ ಅತ್ತರೆ ಗುಂಡುಗಳೇ ಕಣ್ಣೀರಾಗಬಹುದು. ನಾನು ಹೆಮ್ಮೆಯಿಂದ ಅತ್ತೆನಲ್ಲಾ! ಕಣ್ಣೀರು ನೆಲದ ಮೇಲೆ ಬೀಳದ ಹಾಗೆ ಆಗಸಕ್ಕೆ ಹಾರುವುದೇ ಧರ್ಮ. ಕರಿಯ ರಾಜನಿಗೆ ಬಿಳಿಯ ಸಮಾಧಿ. ಅದರ ಮೇಲೆ ಎರಡೇ ಎರಡು ಪದಗಳ ‘ಎಪಿಟಾಫ್’:
‘ಗಾಯವೇ ಹೃದಯ’
ಹೌದು. ಒಂದು ನಿರಾಡಂಬರ ವಾಕ್ಯ. ‘ಐ ಲವ್‌ ಯೂ’ ಎಂಬಷ್ಟು ಸರ್ವೇ ಸಾಧಾರಣ ವಾಕ್ಯ. ಮೊದಲ ಬಾರಿಗೆ ಹೇಳಿದವರಿಗೆ ಮಾತ್ರವೇ ಅದರಲ್ಲಿನ ನೋವು ತಿಳಿಯುತ್ತದೆ.
ನನ್ನ ಜೀವನಕ್ಕೆ ಕೂಡಾ ಇದೇ ವಾಕ್ಯವನ್ನು ‘ಕೊನೆಯ ಮಾತಾಗಿ’ ಕೆತ್ತಿಸಿಟ್ಟುಕೊಂಡಿದ್ದೇನೆ.
****

ಅರ್ಧ ಎಕರೆ ಹೊಲದ ಪಕ್ಕದಲ್ಲಿ ಸಣ್ಣ ಕೆರೆ. ಆ ಕೆರೆ ಏರಿ ಮೇಲೆ ನನ್ನ ರಾಜನ ಸಮಾಧಿ.
ನನ್ನ ಪ್ರೇಮ ವಿಕಸಿಸಿದ ಬಳಿ ನನ್ನ ರಾಜನಿಗೆ ಸಮಾಧಿ.
ನನ್ನ ದೇವಿ... ಅಲ್ಲ, ಅಲ್ಲ. ರಾಜರಾಜೇಶ್ವರಿ ದೇವಿಯವರು ನನಗಾಗಿ ಆಕಾಶದಿಂದ ಇಳಿದುಬಂದುದು ಇಲ್ಲಿಯೇ.
ಕೆರೆಯಲ್ಲಿನ ನೈದಿಲೆ ಮೊಗ್ಗುಗಳನ್ನು ಕಂಡು ‘ಓಹ್! ಎಷ್ಟೊಂದು ಮೊಗ್ಗುಗಳು!’ ಎನ್ನುತ್ತಾ ನಕ್ಕಳು. ಆಗ ಆಕೆಯ ಕೆನ್ನೆ ಮೇಲೆ ಮೂಡಿದ್ದು ಒಂದೇ ಒಂದು ಗುಳಿ. ಅದೇ ಕುಳಿ.
ನನ್ನ ಜೀವನ ವೇದಿಕೆಗೆ ನಾನು ಮೊದಲಬಾರಿಗೆ ಆಹ್ವಾನಿಸಿದ ಮುಖ್ಯ ಅತಿಥಿ ರಾಜರಾಜೇಶ್ವರಿ ದೇವಿ. ಆ ದಿನ ಆಕೆ ನನ್ನೊಂದಿಗೆ ಇದ್ದದ್ದು ಅರ್ಧಗಂಟೆ ಮಾತ್ರವೇ. ಆದರೆ ಆಕೆ ಆಗೇನು ಮಾಡಿದಳೋ! ಪ್ರತೀ ಕ್ಷಣವನ್ನು ಒಂದು ಅಧ್ಯಾಯದಂತೆ ಬದಲಿಸಿ ಒಂದು ಮಹಾಗ್ರಂಥವನ್ನೇ ಬರೆಯಬಲ್ಲೆ.
ಆಕೆ ಹೊತ್ತು ತಂದ ಇಳಿಹೊತ್ತಿನ ಬೆಳ್ಳಿ ಬೆಳಕಿಂದ ಹಿಡಿದು, ಗಾಳಿಗೆ ಆಕೆ ಬಳಿದು ಹೋದ ಸಣ್ಣ ಜಾಜಿ ಪರಿಮಳದವರೆಗೂ ಎಲ್ಲವೂ ತಾಜಾ ಆಗಿ ನನ್ನ ಬಳಿಯಿವೆ.

ನನ್ನ ಹೃದಯೇಶ್ವರಿ ನನ್ನ ಬಳಿ ಸಾರಿದ ದಿನ ನನ್ನ ಮಿತ್ರರಾರೂ ಹತ್ತಿರವಿರಲಿಲ್ಲ. ನಾನೇ ಬರಬೇಡಿರೆಂದಿದ್ದೆ. ಈ ಅಪೂರ್ವ ಸನ್ನಿವೇಶದಲ್ಲಿ ಇಬ್ಬರೇ ಇಬ್ಬರು ಪ್ರವೇಶಿಸಿದರು. ಒಬ್ಬರು, ನನ್ನ ತಾಯಿ, ಮತ್ತೊಬ್ಬರು, ನನ್ನ ರಾಜ. ನನ್ನ ತಾಯಿ ಆಕೆಯನ್ನು ಸ್ವಾಗತಿಸಿದಳು, ನನ್ನ ರಾಜ ಕರೆದುತಂದ.
ನನ್ನನ್ನು ಒಳಿತಿಂದ ಕಾಣುವವರು ಯಾರೇ ಆದರೂ ನನ್ನ ತಾಯಿಗೆ ಆಪ್ತಬಂಧುಗಳೇ. ದೇವಿ ಕುರಿತು ಕೂಡಾ ಹಾಗೇ ಹೇಳಿದೆ.
‘ನನ್ನ ಮಗ ಹೇಳಿದ ತಾಯಿ, ನಿನ್ನ ಮನಸ್ಸು ಬೆಣ್ಣೆ ಕಣಮ್ಮಾ!’ ಎಂದು ಹೇಳಿ ದೇವಿಯ ಹಣೆ ಮೇಲೆ ಹರಿದ ಮೊದಲ ಬೆವರನ್ನು ತನ್ನ ಮೆತ್ತನೆ ಸೆರಗಿಂದ ಒರೆಸಿ ಆಹ್ವಾನ ನೀಡಿದಳು. ಈ ಭೂಮಂಡಲದಲ್ಲೇ ಅದಕ್ಕಿಂತ ಮಿಗಿಲಾದ ಘನಸ್ವಾಗತವನ್ನು ನಾನು ಊಹಿಸೆನು. ನನ್ನ ರಾಜ ಕಿವಿ ನಿಮಿರಿಸಿ ಮುಂಗಾಲುಗಳನ್ನು ಮೇಲೆತ್ತಿ ದೇವಿಗೆ ನಮನ ಸಲ್ಲಿಸಿ ಆಕೆಯ ಸುತ್ತ ಸುತ್ತಿದ. ಪಾದಗಳನ್ನು ಮೂಸಿದ.
ಪ್ರಪಂಚವನ್ನು ಅರ್ಥ ಮಾಡಿಕೊಳ್ಳುವುದರಲ್ಲಿ, ನನಗೆ, ತಾಯಿಗೆ, ರಾಜನಿಗೆ - ನಮ್ಮ ನಮ್ಮ ಪದ್ದತಿಗಳು ನಮಗಿವೆ. ನಾನು ನೋಡಿ ನಂಬುತ್ತೇನೆ. ಅಮ್ಮ ನೋಡದೆ ನಂಬುತ್ತಾಳೆ. ರಾಜ ವಾಸನೆ ನೋಡಿ ನಂಬುತ್ತಾನೆ.
ನನ್ನ ರಾಜ ನಂಬಿ ಬಾಲ ಆಡಿಸಿದ.
‘ಲೋ ರಾಜಾ! ಬಡಾಯಿ ಸಾಕುಮಾಡಿ ಹುಡುಗೀನ ಕೆರೆ ಏರಿಗೆ ಕರಕೊಂಡೋಗು. ನನ್ನ ಮಗ ದಾರಿ ನೋಡ್ತಿರ್ತಾನೆ’ ಅಮ್ಮ ಆದೇಶಿಸಿದಳು. ಅವನು ಹೊಲದ ಏರಿಯನ್ನು ಕಾಲುಗಂಟೆ ಕಾಲ ರಾಷ್ಟ್ರೀ ಕರಿಸಿದ. ಯಾರೂ ದೇವಿಗೆ ಅಡ್ಡ ಬರುವಂತಿಲ್ಲ, ಪಕ್ಕ ನಡೆಯುವಂತಿಲ್ಲ. ಅವನು ಪೈಲಟ್ಟಿನಂತೆ ಮುಂದೆ ಓಡಿದ. ನಡೆಯುವಾಗ ಆಕೆಯ ಪಾದಗಳಿಗೆ ಅಡ್ಡವಾಗದಿರಲು ಸಣ್ಣ ಕಾಗದದ ಚೂರೂ ಅಲ್ಲಿರದಂತೆ ಬಾಯಿಂದ ಕಾಲುಗಳಿಂದ ಶುಭ್ರಗೊಳಿಸಿದ.
ಯಾರಾದರೂ ಮಂಜಿನಿಂದ ಸೀರೆ ನೇಯ್ತಾರೆಯೇ! ನೇಯ್ದಿರಬೇಕು! ಮಂಜಿನ ಸೀರೆ ತೊಟ್ಟು ಬಂದಳು ನನ್ನ ಸಂಧ್ಯಾ ಸುಂದರಿ ರಾಜರಾಜೇಶ್ವರಿ ದೇವಿ.
ಆಕೆ ನನ್ನನ್ನು ತಲುಪಲು ಇನ್ನೊಂದಿಷ್ಟು ದೂರವಿರುವಾಗಲೇ ಅವನು ನಾಯಿಯಂತಲ್ಲದೇ ಜಿಂಕೆಯಂತೆ ಓಡಹತ್ತಿದ. ನನ್ನತ್ತ ಆಕೆಯತ್ತ ಅಲ್ಲಿಂದಿಲ್ಲಿಗೆ ಓಡುತ್ತಾ ಕ್ರಿಕೆಟ್ ರನ್ನುಗಳನ್ನು ಭಾರಿಸಿದ. ನನ್ನ ದೇವಿ ಬರವಿನಿಂದ ನನ್ನ ಮುಖದಲ್ಲಿ ಮೂಡಿದ ಸ್ವಚ್ಛ ಕಾಂತಿಯನ್ನು ಕಂಡು ನಾಟ್ಯವಾಡಿದ, ಕುಂಯ್‌ಗುಟ್ಟಿದ.
ಅವನ ಭಾಷೆ ನನಗೆ ಗೊತ್ತು. ಅದೊಂದು ಬಗೆಯ ಮಾರ್ಮಿಕ ಕವಿತೆ. ನನ್ನ ಕಣ್ಣುಗಳು ಆರ್ದ್ರವಾದವು. ಅವನ ಎರಡು ಕಿವಿಗಳನ್ನು ನೇವರಿಸಿದೆ. ಅಷ್ಟೇ, ಮರುಕ್ಷಣ ಅಲ್ಲಿದ್ದರೆ ಆಣೆ! ಒಂದೇ ಓಟ. ಯಾಕೆ ಗೊತ್ತಾ? ಕೂಡಲೇ ಮುಟ್ಟಿಸಬೇಕು. ವಾರ್ತೆ! ದೊಡ್ಡ ವಾರ್ತೆ. ಮನುಷ್ಯ ಪ್ರಕಾಶಿಸುವುದು ಅವನಿಗೆ ದೊಡ್ಡ ವಾರ್ತೆ.
ಆಪ್ಯಾಯತೆ ಹೊರಹೊಮ್ಮಿದಾಗ ಮನುಷ್ಯ ಪ್ರಕಾಶಿಸುತ್ತಾನೆ. ಅನುಮಾನವೇ ಇಲ್ಲ, ದೇವಿಯನ್ನು ನೋಡಿ ನಾನು ಅಷ್ಟೋಯಿಷ್ಟೋ ಪ್ರಕಾಶಿಸಿಯೇ ಇರುತ್ತೇನೆ. ಆ ವಿಷಯವನ್ನು ನನ್ನ ತಾಯಿಗೆ ಹೇಳಬೇಕು. ಅದಕ್ಕೇ ಅವನ ಆ ವೇಗ.
ಆ ಹೊತ್ತು ರಾಜೇಶ್ವರಿ ದೇವಿ ನನ್ನ ತಾಯನ್ನು ಹೊಗಳಿದಳು. ರಾಜನನ್ನು ಕೀರ್ತಿಸಿದಳು. ಮತ್ತೆ ನನ್ನನ್ನು? ತಿಳಿಯದು, ಕೇಳಬೇಕೆನಿಸಿತು.
ತಂಗಾಳಿಯನ್ನು, ತರುಣಿಯ ಪ್ರಶಂಸೆಯನ್ನು ಕೇಳಿ ಪಡೆಯಕೂಡದು. ಹಾಯೆನಿಸದು. ಅದಕ್ಕೇ ಆಕೆಯನ್ನೇ ನೋಡಿದೆ. ಕೆನ್ನೆ ಮೇಲಿನ ಗುಳಿ ಸ್ವಲ್ಪವೂ ಚದುರದಿದೆ. ಅಂದರೆ, ಆಕೆ ಇನ್ನೂ ನಗುತ್ತಲೇ ಇದ್ದಳೆಂದರ್ಥ. ನುಗ್ಗಿ ಬಂದ ಸಿಗ್ಗು ಆಕೆಯ ನೋಟವನ್ನು ನೈದಿಲೆ ಮೊಗ್ಗುಗಳ ಕಡೆ ಹೊರಳಿಸಿತು.
"ಚೆನ್ನಾಗಿವೆ" ಕಿಸಕ್ಕೆಂದಳು.
"ಅಂದರೆ ಹೇಗಿವೆ? ಜೋಡಿಸಿದ ಕೈಗಳಂತಿಲ್ಲವೇ! ಎಲ್ಲ ನಮನಗಳೂ ದೇವಿಯವರಿಗೇ" ಎಂದೆ. ಈ ಸಾರಿ ಗಲಗಲನೆ ನಕ್ಕಳು.
"ಮೊಗ್ಗು ಕೊಯ್ದು ತರಲೇ?" ಇಳಿಯಹೋದೆ.
"ಇಳಿಯಬೇಡಿ, ಕೆಸರು ನೀರು" ತಡೆಯಲು ನನ್ನ ಕೈಹಿಡಿದು ತನ್ನೆಡೆಗೆಳೆದುಕೊಂಡಳು. ತನ್ನ ಪ್ರಶಂಸೆಯನ್ನು ನನ್ನ ತುಟಿಗಳ ಮೇಲೆ ತನ್ನ ತುಟಿಗಳಿಂದ ಲಿಖಿತಪೂರ್ವಕ ಬರೆದುಕೊಟ್ಟಳು.
ಮೊದಲ ಮುತ್ತು, ಇಳಿ ಹೊತ್ತು ಒಟ್ಟಿಗೆ ಜಾರಿದವು.
ದೂರದಲ್ಲಿ ನನ್ನ ರಾಜ ನಮ್ಮಿಬ್ಬರ ದಾರಿ ಕಾಯುತ್ತಿದ್ದ. ಆ ದಿನ ದೇವಿಯನ್ನು, ಹಗಲು ಬೆಳಕನ್ನು ಒಂದೇ ಸಾರಿ ಕಳುಹಿಸಿದೆ.
ತಪ್ಪುಒಪ್ಪು ಅರಿಯದ ಅಮ್ಮ ನನಗೆ ಅನ್ನ ಬಡಿಸಿ ನಿದ್ರೆಹೋದಳು. ಆ ಹುಡುಗಿ ಯಾಕೆ ಬಂದಳೆಂದು ಒಂದು ಪ್ರಶ್ನೆಯನ್ನೂ ಕೇಳಲಿಲ್ಲ.
****
ನನ್ನ ದೇವಿ ಬಂದು ಹೋದ ನಂತರ ನನಗೆ ರಾತ್ರಿ ಹಗಲಾಯಿತು, ಹಗಲು ರಾತ್ರಿಯಾಯಿತು. ಅಂಗಳದಲ್ಲಿ ಮಡಚಿದ್ದ ಮಂಚ ಹಾಸಿ ಮಲಗಿದರೆ ಸ್ವರ್ಗ ಇಳಿದು ಬರುತ್ತಿತ್ತು. ಮಂಚದ ಕೆಳಗೆ ಮುದುರಿರುತ್ತಿದ್ದ ರಾಜ.
ಸ್ವಪ್ನಗಳು. ಸುಂದರ ಸ್ವಪ್ನಗಳು. ನನಗೆ ಇಷ್ಟವಾದ ಸ್ವಪ್ನಗಳು. ನನ್ನ ಅಧೀನದಲ್ಲಿರುವ ಸ್ವಪ್ನಗಳು. ತೆರೆದ ಕಣ್ಣುಗಳಿಗೆ ಅಂಥ ಸ್ವಪ್ನಗಳೇ ಬರುವುದು.
ನನಗೆ ಮೌನವೆಷ್ಟು ಇಷ್ಟವೋ, ನನ್ನ ರಾಜನಿಗೆ ಬೊಗಳುವುದೂ ಅಷ್ಟೇ ಇಷ್ಟ. ಎಲೆ ಅಲುಗಿದರೆ ಸಾಕು ಅದೇ ದೊಡ್ಡ ನೆಪ. ತನಿಖೆಗಿಳಿಯುವಂತೆ ಬೊಗಳುತ್ತಾನೆ. ಅಪ್ಪಿತಪ್ಪಿ ಬೇರೆ ನಾಯಿಯೆಲ್ಲಾದರೂ ಬೊಗಳಿದಂತೆ ಅನ್ನಿಸಿತೋ ಅವನನ್ನು ಹಿಡಿಯಲಾರೆವು. ಪರಮ ವೀರೋಚಿತನಾಗಿ ಬೊಗಳುತ್ತಾನೆ.
ಅಮ್ಮ ನಡುನಡುವೆ ಎದ್ದು "ಏನಾಯಿತೋ ಅವನಿಗೆ? ಬಾಯಿ ಮುಚ್ಚಕ್ಕೆ ಹೇಳು" ಎಂದು ಬೊಬ್ಬೆ ಹೊಡೆಯುತ್ತಿದ್ದಳು. ಅಮ್ಮನ ಮಾತಿಗೆ ಕುಯ್‌ಕುಯ್ ರಾಗ ಹಾಡುತ್ತಾ, ಅಮ್ಮ ಸಾರಿಸಿದ ಜಗುಲಿಯನ್ನು ಉಗುರುಗಳಿಂದ ಕೆರೆಯುತ್ತಿದ್ದ.
ಒಂದು ಮಾತಂತೂ ನಿಜ. ರಾತ್ರಿ ಹೊತ್ತು ನಾಯಿಗಳದೇ ಪ್ರಭುತ್ವ. ಅವು ರಾತ್ರಿ ಸಿಂಹಗಳು. ಕೆಲವರು ಅವನ್ನು `ಗ್ರಾಮ ಸಿಂಹಗಳು' ಎನ್ನುತ್ತಾರೆ. ನನ್ನ ರಾಜ `ವಾಡೆ ಸಿಂಹ'. ತನ್ನ ಶುನಕ ಸಾಮ್ರಾಜ್ಯದೊಳಕ್ಕೆ ಒಂದು ಊರನಾಯಿ ಪ್ರವೇಶಿಸಿದರೂ ರಂಪ ಕೀಳುವುದೇ.
ಬೆಳಗಾಗುತ್ತಿದ್ದಂತೆ ನಾನು ನಿದ್ರೆಗೆ ಜಾರುತ್ತಿದ್ದೆ. ನನ್ನ ಸ್ವಪ್ನ ಕರಗುತ್ತಿತ್ತು.
ಕಾಲೇಜಿಗೆ ರಜೆ ಕೊಟ್ಟರಲ್ಲ! ಮತ್ತೆ ಹದಿನೈದು ದಿನಗಳವರೆಗೆ ತೆರೆಯರು. ಈ ನಡುವೆ ದೇವಿ ದರ್ಶನವಿರದು.
ಉತ್ತರ ಬರೆಯುತ್ತೇನೆಂದಳು. ನಿಜ ಹೇಳಬೇಕೆಂದರೆ ನಮ್ಮೂರಿಗೆ, ಅವಳೂರಿಗೆ ಹತ್ತು ಕಿಲೋಮೀಟರು ದೂರ. ಆದರೂ ಹೋಗಬೇಕೆನಿಸುತ್ತಿಲ್ಲ. ನನ್ನ ದೇವಿ ನನ್ನನ್ನು ಹುಡುಕಿ ಬರಬೇಕೆಂಬುದೇ ನನ್ನ ಜೀವನದ ಇಚ್ಛೆ. ಆ ಕೋರಿಕೆ ಸ್ವಲ್ಪ ತೀರಿತು. ಆಕೆಯನ್ನು ಆರಾಧಿಸುವುದು ಬಿಟ್ಟು ನನಗೆ ಬೇರೆ ಕೆಲಸವೇನಿಲ್ಲ.
ಆದರೂ ಆಕೆಯ ಒಂದು ವರ: ಒಂದು ಪತ್ರ! ಆಕೆಯ ಕೈಬರಹ! ನನಗಾಗಿ ತುಟಿ ಬಿಗಿಹಿಡಿದು ಹೆಣೆದ ಅಕ್ಷರ ಮಾಲೆ! ಅದರಲ್ಲಿನ ಪ್ರತೀ ಅಕ್ಷರದಲ್ಲೂ ಎರಡು ತುಟಿಗಳ ಹೊಂದಿಕೆಯನ್ನು ಸುಸ್ಪಷ್ಟವಾಗಿ ನೋಡಬಲ್ಲೆ. ನನಗೊಂದು ಬಲವಾದ ಅನುಮಾನವೂ ಬರತೊಡಗಿದೆ. ಅಸಲಿಗೆ ತೆಲುಗು ಅಕ್ಷರಗಳೆಲ್ಲ ತೆಲುಗು ತರುಣಿಯರ ಅದರಗಳಿಂದ ಹುಟ್ಟಿರಬೇಕು. ಇಲ್ಲವಾದರೆ ಅಕ್ಷರಗಳು ಅಷ್ಟು ದುಂಡಗೆ ಇರಲು ಹೇಗೆ ಸಾಧ್ಯ? ಅದಕ್ಕೇ ಏನೋ, ನನ್ನ ದೇವಿಯ ಅದರ ಮುದ್ರೆಗಳಿಗಾಗಿ ಅಷ್ಟು ನಿರೀಕ್ಷೆ. ನಾನು ದಾರಿ ಕಾಯುವುದು ರಾಜನಿಗೆ ಗೊತ್ತು. ಪೋಸ್ಟ್ಮನ್ ಸೈಕಲ್ ಬೆಲ್ಲು ಕೇಳಿದರೆ ಸಾಕು ಮೇಲೆರಗುತ್ತಿದ್ದ. ಪೋಸ್ಟ್ಮನ್ ದೂರದಿಂದಲೇ ಕೈಮುಗಿದುಬಿಡುತ್ತಿದ್ದ. ನನ್ನ ಪ್ರೇಮ ಆತನಿಗೆ ಸಂಕಟಕ್ಕಿಟ್ಟುಕೊಂಡಿತು. ಎಂದಿನಂತೇ ಪೋಸ್ಟ್ಮನ್ ನನ್ನ ಮನೆ ಹತ್ತಿರ ಇಳಿಯದೆ ಹೋಗುವಾಗ ರಾಜ ಆತನ ಪ್ಯಾಂಟು ಹಿಡಿದ. ಪತ್ರಗಳೆಲ್ಲ ಕೆಳಗೆ ಬಿದ್ದು ಚೆಲ್ಲಾಪಿಲ್ಲಿಯಾದವು. ಅವನ ಮೊಣಕೈಗಳು ತರಿದು, ರಕ್ತ ಒಸರಿತು. ನಾನು ಅಲ್ಲಿಗೆ ಧಾವಿಸಿದೆ. ಆದರೆ, ಆತನನ್ನು ಮೇಲೆತ್ತಲಿಲ್ಲ. ಬದಲಿಗೆ ಕೆಳಗೆ ಬಿದ್ದ ಪತ್ರಗಳನ್ನು ಗಡಿಬಿಡಿಯಿಂದ ತಡಕಾಡಿದೆ. ಎಲ್ಲಿಯೂ ನನ್ನ ವಿಳಾಸವಿಲ್ಲ. ಅಂದಿಗೆ ಒಂದು ವಾರ ಕಳೆಯಿತು. ಒಂದು ದಿನ ನಾನೇ ನನ್ನ ಮೊಪೆಡ್ ಏರಿ ಹೊರಟೆ. ಮೊಪೆಡ್‌ಗಿಂತ ಮುಂದೆ ರಾಜ... ತಲುಪಬೇಕಿದ್ದ ಗ್ರಾಮ ತಲುಪಿದೆವು.

ಊರಿನ ಮಧ್ಯೆ ಬಿಳಲು ಹರಡಿದ್ದ ಆಲದಮರ. ಮರದ ಸುತ್ತಲೂ ಸಿಮೆಂಟು ಕಟ್ಟೆ. ಕಟ್ಟೆ ಮೇಲೆ ವೃದ್ಧ. ನರೆತ, ಸುರುಳೀತ ಮೀಸೆ. ಖದ್ದರು ಪಂಚೆ, ಖದ್ದರು ಬನಿಯನ್ನು. ಚಕ್ಕಂಬಕ್ಕಳ ಹಾಕಿ ಕೂತಿದ್ದ. ಮಂದ ಕನ್ನಡಕದೊಳಗಿಂದ ಪೇಪರು ಓದುತ್ತಿದ್ದ.

ಆ... ಸುಬ್ಬರಾಜನವ್ರ ಮನೆಯೆಲ್ಲಿಯೆಂದು ಕೇಳಿದೆ. ಎದುರಿಗೆ ಕಾಂಪೌಂಡು ಗೋಡೆಯಿದ್ದ ಚಪ್ಪಟೆ ತಾರಸಿ ಮನೆ ತೋರಿಸಿದ. ಗೇಟು ತೆರೆದೇ ಇತ್ತು. ಅತ್ತ ಆತುರದಿಂದ ನೋಡಿದೆ. ನನ್ನ ದೇವಿ ಹೊಸ್ತಿಲ ಮುಂದೆ ರಂಗೋಲಿ ಹಾಕುತ್ತಿದ್ದಾಳೆ. ಮೊದಲು ಆಕೆಯ ಮೃದು ಪಾದಗಳನ್ನು ನೋಡಿದೆ. ಮನಸ್ಸು ಶಾಂತಗೊಂಡಿತು.
ರಾಜ ಆಕೆಯನ್ನು ನೋಡಿದ್ದೇ ದೌಡಾಯಿಸಿ ಆಕೆಯ ಸುತ್ತ ಸುತ್ತಿದ. ಆಕೆ ಕಳವಳಗೊಂಡು ಹೊಡೆಯಲು ಮುಂದಾದಳು.
"ದೇವೀ!" ಕೂಗಿದೆ.
ಹಿಂದೆ ತಿರುಗಿದಳು. ಆಕೆಯ ಮುಖದಲ್ಲಿ ಕಾಮನಬಿಲ್ಲು ಅರಳಲಿಲ್ಲ. ತುಟಿಗಳ ಮೇಲೆ ಯಾವ ಭಾವವೂ ಇಲ್ಲದ ಸರಳ ರೇಖೆ ಕಾಣಿಸಿತು. ನನ್ನ ಹೃದಯ ಜಾರಿದಂತಾಯಿತು. ಹಾಗೇ ನೋಡುತ್ತಾ ಇದ್ದೆ. ಆಕೆ ಒಳಗೆ ಹೋಗಿಬಿಟ್ಟಳು.
ಒಂದು ಅನಾದರಣೆ, ಒಂದು ನಿರ್ಲಕ್ಷ್ಯ, ಒಂದು ತಿರಸ್ಕಾರ!
ಕಣ್ಣುಗಳನ್ನು ಗಟ್ಟಿಯಾಗಿ ಮುಚ್ಚಿಕೊಂಡೆ. ತೆರೆದರೆ ನನ್ನ ಕೆನ್ನೆಗಳು ಒದ್ದೆಯಾಗಿ ಬಿಡುತ್ತವೆ.
"ಯಾ ಊರೋ ಹುಡ್ಗಾ ನಿಂದು?"
ಮರದ ಕೆಳಗಿನ ಮುದಿ ಕಂಠ ಗಂಭೀರವಾಗಿ ಪ್ರಶ್ನಿಸಿತು.
"ಗುಮ್ಮಲೂರು" ಎಂದೆ, ನನ್ನ ಕಣ್ಣ ನೀರನ್ನು ಅದುಮಿಟ್ಟುಕೊಳ್ಳುತ್ತಾ.
"ಯಾರ ಮಗ ನೀನು?"
"ಜಾನ್‌ರತ್ನಂ ಅವ್ರ ಮಗ"
"ತಂದೆ ಏನು ಮಾಡ್ತಾನೆ?"
"ಕುವೈಟಲ್ಲಿ ಇದ್ದಾರೆ"
"ನೀವು ಪಂಚಮರಾ?"
ಆ ಪ್ರಶ್ನೆ ನನ್ನನ್ನು ಬಾಧಿಸಲಿಲ್ಲ. ಅಭ್ಯಾಸವಾದುದೇ. ಆದರೆ ಆತ ನನ್ನನ್ನು ನೋಡಿದ ನೋಟ ತಲೆಯೆತ್ತದಂತೆ ಮಾಡಿತು. ಅಷ್ಟು ನೀಚವಾಗಿತ್ತು. ಆದರೂ ಸರಿಯೇ ಹೌದೆಂಬಂತೆ ತಲೆಯಾಡಿಸಿದೆ. ಅಷ್ಟರಲ್ಲಿ ಕಾಲ ಬಳಿ ರಾಜನ ಸದ್ದು. ಅದರ ಬಾಯಲ್ಲಿ ಒಂದು ಕಾಗದದ ಚೂರು. ಪತ್ರ! ನನ್ನ ದೇವಿ ನನಗಾಗಿ ಕಳಿಸಿದ ‘ಶುನಕ ಸಂದೇಶ’. ಅನುಮಾನಗೊಂಡು ಬರಿಯ, ಹುಸಿ ಆಶೆಯಿಂದ ಪತ್ರ ತೆರೆದೆ.
ರಾಜೂ ಅವರೇ,
ನಿಮಗೂ, ನನಗೂ ಬಹಳ ದೂರ. ಈ ವಿಷಯವನ್ನು ಯಾಕೆ ಮರೆಮಾಚಿದಿರಿ? ನಿಮ್ಮ ಮನೆಗೆ ಬಂದು ನೋಡೋವರೆಗೂ ನಾನು ತಿಳಿಯದೇ ಹೋದೆ. ಯಾವುದೇ ಜಾತಿಯಾಗಿದ್ದರೂ ಸರಿಹೊಂದಿಸಿಕೊಳ್ಳುತ್ತಿದ್ದೆವು. ತೀರಾ ಆ ಜಾತಿಯೇ?
ಬೇಡ. ಇಲ್ಲಿಗೆ ನಿಲ್ಲಿಸಿ.
-ದೇವಿ
ಅಕ್ಷರಗಳಲ್ಲಿ ಅದರಗಳಲ್ಲ. ಸಿಂಬೆ ಸುತ್ತಿದ ಹಾವುಗಳು ಕಾಣಿಸಿದವು. ಆ ಪತ್ರವನ್ನು ಅಲ್ಲೇ ಬಿಟ್ಟೆ. ಮುಚ್ಚಿಡಬೇಕೆಂಬ ಆಸಕ್ತಿ, ಹರಿಯಬೇಕೆಂಬ ಬೇಸರ ಎರಡೂ ಉಂಟಾಗಲಿಲ್ಲ. ನಿರ್ಲಿಪ್ತತೆ. ನಿರ್ಲಿಪ್ತತೆಯಲ್ಲೇ ಮೊಪೆಡ್ ಸ್ಟಾರ್ಟ್ ಮಾಡಿ ಬೆನ್ನುತಿರುಗಿಸಿದೆ.
ನನ್ನ ಗಾಡಿ ನನ್ನನ್ನು ನಡೆಸಿತು. ಶಿವನ ಕಂಠದ ವಿಷದಂತೆ ದುಃಖ ಗಂಟಲಿನಲ್ಲಿ ಮಡುಗಟ್ಟಿತು. ಮನೆಗೆ ಬಂದುಬಿದ್ದೆ.
"ಮಗಾ! ಬಂದ್ಯಾ? ಕಾಲು ತೊಳಕೋ, ಅನ್ನ ಇಕ್ತೀನಿ" ಎನ್ನುತ್ತಾ ಲಗುಬಗೆಯಿಂದ ಅನ್ನ ಬಡಿಸಿದಳು. ಅನ್ನದ ಬಟ್ಟಲಿನ ಕಡೆಯಲ್ಲದೇ, ಆಕೆಯ ಅಂಗೈ ಕಡೆ ನೋಡಿದೆ. ಆ ಕೈಗಳಲ್ಲೇ ಮುಖವಿಟ್ಟು ಗೊಳೋ ಎಂದು ಅತ್ತೆ.
"ಏನಾಯ್ತೋ ತಂದೆ! ಇಷ್ಟು ಕಷ್ಟ ಯಾರು ತಂದ್ರೋ ಕಂದಾ!" ಎಂದು ತಾನೂ ಅಳುತ್ತ ಚಡಪಡಿಸಿದಳು.
ನಾನು ಅತ್ತುಅತ್ತು ಸಾವರಿಸಿಕೊಂಡೆ. ಆಗ ಮಾತ್ರ ಪ್ರಶ್ನಿಸಿದಳು.
"ಅಪ್ಪ ನೆನಪಿಗೆ ಬಂದ" ಎಂದು ಜಾರಿಕೊಂಡೆ.
ಅಷ್ಟೇ. ತನ್ನ ಸೆರಗಿಗೆ ಕಟ್ಟಿದ್ದ ನೂರು ರೂಪಾಯಿ ನೋಟುಗಳಲ್ಲಿ ನಾಲ್ಕನ್ನು ತೆಗೆದು "ಇಕಾ, ಅಪ್ಪನಿಗೆ ಫೋನು ಮಾಡು. ನೋವು ಕಳೀತದೆ" ಎಂದು ತಲೆ ನೇವರಿಸಿದಳು.
ನನಗೆ ತಿಳುವಳಿಕೆ ಬಂದಾಗಿಂದಲೂ ಅಮ್ಮನಿಗೆ ಹೇಳಿದ ಮೊದಲ ಸುಳ್ಳಿದು.
"ನೀನೊಬ್ಬನೇ ಬಂದ್ಯಾ? ಆ ರಾಜ ಎಲ್ಲಿ ಸತ್ತಿದ್ದಾನೆ" ಎಂದು ಕೇಳಿದಳು ಅಮ್ಮ. ಅಲ್ಲಿವರೆಗೂ ನನಗೆ ರಾಜನ ನೆನೆಪೇ ಇರಲಿಲ್ಲ. ಬರುತ್ತಾನೆಂದು ಕಾದೆ.
ಒಂದು ಗಂಟೆ... ಎರಡು ಗಂಟೆ... ಮೂರು ಗಂಟೆ ಕಳೆದರೂ ಬರಲಿಲ್ಲ. ಕತ್ತಲಾವರಿಸಿತು. ಫಲಿತ ಶೂನ್ಯ. ನಾನು ಮೊಪೆಡ್ ಹತ್ತಿ ಮತ್ತೆ ಕೋಡೇರುವರೆಗೂ ಹೋಗಿ ಬಂದೆ. ಕತ್ತಲಲ್ಲಿ ಎಲ್ಲೂ ಕಾಣಲಿಲ್ಲ.
ಈಗ ನನ್ನ ಕಣ್ಣ ಮುಂದೆ ದೇವಿಯಿಲ್ಲ. ನನ್ನ ರಾಜನ ರೂಪವೇ ಸುಳಿದಾಡುತ್ತಿತ್ತು. ಏನಾಯ್ತು? ಎರಡು ದಿನ ಕಳೆಯಿತು. ಮೂರನೇ ದಿನ ಬೆಳಿಗ್ಗೆ ನಾನಿನ್ನೂ ನಿದ್ರೆ ಏಳುವ ಮೊದಲೇ ನನ್ನ ಪಕ್ಕ ಎಂಥದ್ದೋ ದುರ್ವಾಸನೆ. ಕಣ್ಣುಗಳನ್ನು ಮೆಲ್ಲಗೆ ತೆರೆದು ನೋಡಿದೆ.
ನಾಯಿ ಆಕಾರ. ನನ್ನ ರಾಜನೇ. ಮೈ ತುಂಬಾ ಗಾಯಗಳೊಂದಿಗೆ, ಒಂದು ಕಾಲು ಮುರಿದು ಜೋತಾಡುತ್ತಾ, ಪರಮ ಭಯಂಕರವಾಗಿದ್ದ ಅವನು.
"ಅಮ್ಮಾ! ರಾಜ!" ಜೋರಾಗಿ ಕೂಗಿದೆ. ಅಮ್ಮ ಮನೆಯಲ್ಲಿಲ್ಲ.
ರಾಜ ಹತ್ತಿರಕ್ಕೆ ಬರಹೋದ. ಭರಿಸಲಾರದ ವಾಸನೆ. ಅವನ ಗಾಯಗಳೊಳಗಿಂದ ದುರ್ವಾಸನೆ. ದೀನವಾಗಿದ್ದ ಕಣ್ಣುಗಳು. ಅಷ್ಟರಲ್ಲಿ ಅಮ್ಮ ಬಂದವಳೇ, ನೊಂದು, ವ್ಯಥೆಯಿಂದ ಅನ್ನ ತಂದು ಎಂದಿನಂತೇ ಜಗುಲಿ ಮೇಲಿನ ಅವನ ಬಟ್ಟಲಿಗೆ ಹಾಕಿದಳು. ನಾನು ಮೂಗು ಮುಚ್ಚಿಕೊಂಡೆ. ಅದನ್ನು ಗಮನಿಸಿದ ಅಮ್ಮ ರಾಜನ ಬಟ್ಟಲನ್ನು ದೂರದಲ್ಲಿ ಬಾಗಿಲ ಹೊರಗೆ ಇಟ್ಟಳು. ಅವನೂ ಅಗುಳು ಮುಟ್ಟಲಿಲ್ಲ. ನನ್ನ ಕಡೆಯೇ ನೋಡುತ್ತಾ ಇದ್ದುಬಿಟ್ಟ.
ಆ ದೃಶ್ಯವನ್ನು ಭರಿಸಲಾಗದೆ ಮೊಪೆಡ್ ಹತ್ತಿ ಹೊರಹೋದೆ.
"ಮೊನ್ನೆ ನಿಮ್ಮ ರಾಜನ್ನ ಸ್ಕೂಟರ್ ಗುದ್ದಿತಲ್ಲ! ಬದುಕಿತಾ?" ಸ್ಕೂಲಿಂದ ಬರುತ್ತಿದ್ದ ಪೇಟೆ ಹುಡುಗ ಕೇಳಿದ. ನಾನು ಉತ್ತರ ಕೊಡದೆ ಹೊರಟೆ. ಹಾಗೇ ಸುಮ್ಮನೆ ರಸ್ತೆರಸ್ತೆ ಅಡ್ಡಾಡುತ್ತಿದ್ದೆ. ಮಟಮಟ ಮಧ್ಯಾಹ್ನ ಹನ್ನೆರಡು ಗಂಟೆಯಾಗಿತ್ತು. ದುರಸ್ತಿಮಾಡುವ ಹೆಸರಲ್ಲಿ ಒಂದೆಡೆ ರಸ್ತೆ ಅಗೆಯುತ್ತಿದ್ದರು.
ಅಲ್ಲಿ ಗಡಪಾರೆಯನ್ನು ನೇರ ನೆಟ್ಟಿದ್ದನ್ನು ನೋಡಿದೆ. ಅದರ ನೆರಳು ಅದರ ಕೆಳಗೇ ಮಾಯವಾಗಿತ್ತು.
ನನ್ನ ಹಿಂದಿಂದ ಲಾರಿಯೊಂದು ಬರುತ್ತಿತ್ತು. ನಾನು ಸರಿದು ರೈಡ್ ಮಾಡುತ್ತಿದ್ದೇನೆ. ಮುಂದೆ ನೋಡುವಷ್ಟರಲ್ಲಿ ನನ್ನೆದುರು ರಾಜ. ಸ್ರವಿಸುವ ಗಾಯಗಳೊಂದಿಗೆ ರಾಜ. ಜೋತಾಡುತ್ತಿದ್ದ ಕಾಲಿಂದ ಕುಂಟುತ್ತಾ ಬರುತ್ತಿದ್ದ ನನ್ನ ರಾಜ. ಲಾರಿ ಎದುರು!
"ರಾಜಾ" ಕೂಗಿದೆ. ನೋಡಿದ, ಆದರೆ ನಡಿಗೆ ಬದಲಾಗಲಿಲ್ಲ. ಘೋರ ಸಂಭವಿಸಿತು. ಲಾರಿ ರಾಜನ ಮೇಲೆ ಹರಿದುಹೋಯಿತು.
ಕೀಳುಜಾತಿ ನಾಯಿ ಮರಣಿಸಿತು. ಬೇಕೆಂದೇ ಮೃತ್ಯುವನ್ನು ಮುದ್ದಾಡಿತು. ತಲೆಯೆತ್ತಿ ಹೊರಟುಹೋಯಿತು. ಅಭಿಮಾನದಿಂದ ತೆರೆಯೆಳೆದುಕೊಂಡಿತು.
ಒಂದು ಅನಾದರಣೆ, ಒಂದು ನಿರ್ಲಕ್ಷ್ಯ, ಒಂದು ತಿರಸ್ಕಾರ! ಭರಿಸಲಾರದೆ ಮರಣಿಸಿತು.
ಗಾಯವೂ ಮುಟ್ಟಬಾರದ್ದಾಗಿತ್ತೇ? ಈ ಪ್ರಶ್ನೆ ನನ್ನನ್ನು ತಲೆಕೆಳಗು ಮಾಡಿತು. ನಾನು ತೊಟ್ಟಿದ್ದ ಬಿಳಿ ಅಂಗಿ ತೆಗೆದೆ. ಆ ಅಂಗಿಯೊಳಗೆ ರಾಜನ ಮೃತದೇಹ ಎತ್ತಿದೆ.
ನನ್ನ ಪ್ರೇಮ ಸಕಲ ದುರ್ಗಂಧಗಳನ್ನೂ ಜಯಿಸಿತು.
ಹೃದಯ! ಹೃದಯ! ಎನ್ನುತ್ತಾರೆ... ಒಂದೊಮ್ಮೆ ಅದನ್ನು ತೆಗೆದು ಹೊರಗೆ ಪ್ರದರ್ಶಿಸಿದರೆ ಓಡಿಹೋಗುತ್ತಾರೆ. ಪ್ರತಿ ಗಾಯವೂ ಒಂದು ತೆರೆದ ಹೃದಯವೇ.
ನನ್ನ ದೇವಿಯೂ ನನ್ನ ಗಾಯ ನೋಡಿ ಮೂಗು ಮುಚ್ಚಿದಳು. ತಲೆ ಹೊರಳಿಸಿದಳು. ನನ್ನ ನಾಯಿಗಿದ್ದ ಸ್ವಾಭಿಮಾನವೂ ನನಗಿಲ್ಲವೇ? ರಾಜ ಮರಣಿಸಿದ ಮೂರನೇ ದಿನ ನಾನೂ ಕೊನೆಯುಸಿರೆಳೆಯಬೇಕೆಂದು ನಿರ್ಧರಿಸಿದೆ.
****
ನಸುಕಿನಲ್ಲಿ ಎದ್ದೆ. ತಲೆಸ್ನಾನ ಮಾಡಿದೆ. ತಾಯಿ ತನ್ನ ತಣ್ಣನೆ ಕೈಗಳಿಂದ ಹರಸಿದಳು. ಪರೀಕ್ಷೆಗೆ ಹೋಗುತ್ತೀದ್ದೇನೆಂದೆ. ಸುಳ್ಳಲ್ಲವಲ್ಲಾ! "ನೀನು ಗೆಲ್ತೀಯ ಕಣೋ ಕಂದಾ" ಎಂದಳು. ನನ್ನ ಕೋರಿಕೆಯಂತೆ ಸ್ನೇಹಿತ ಜೀಪು ಸಿದ್ಧಮಾಡಿದ್ದ. ತಂದೆಯ ಪಿಸ್ತೂಲನ್ನು ಗುಟ್ಟಾಗಿ ಜೇಬಲ್ಲಿಟ್ಟುಕೊಂಡೆ. ಅಪ್ಪ ಕಲಿಸಿದ ಎಲ್ಲ ವಿದ್ಯೆಗಳೂ ಜೀವನದಲ್ಲಿ ಪ್ರಯೋಜನಕ್ಕೆ ಬಂದವು. ಗುರಿ ತಪ್ಪದಂತೆ ಪಿಸ್ತೂಲು ಹಿಡಿಯುವುದು ಕೂಡಾ ನನ್ನ ಜೀವನದ ಚರಮಾಂಕದಲ್ಲಿ ಉಪಯೋಗಕ್ಕೆ ಬರುತ್ತಿದೆ.

ನನ್ನ ಪ್ರಣಾಳಿಕೆಯ ಅರ್ಧವನ್ನಷ್ಟೇ ಸ್ನೇಹಿತನಿಗೆ ಹೇಳಿದ್ದೆ. ಇಲ್ಲವಾಗಿದ್ದರೆ ಜೀಪಿರಲಿ ಸೈಕಲ್ ಸಹಾಯವನ್ನೂ ಮಾಡುತ್ತಿರಲಿಲ್ಲ. ಹೊಸ ಉಡುಪಿನಲ್ಲಿ ಠಾಕುಠೀಕಾಗಿ ಕಾಣುತ್ತಿದ್ದೇನೆಂದು ಪ್ರಶಂಸಿಸಿದ. ಜೀಪು ಹೊರಟಿತು. ಸ್ನೇಹಿತನೇ ಓಡಿಸಿದ. ನಿಜ ಹೇಳುತ್ತಿದ್ದೇನೆ, ಅದೊಂದು ಅದ್ಭುತ ಪ್ರಯಾಣ. ನನ್ನ ಮನಸ್ಸು ಗಾಳಿಯಲ್ಲಿ ತೇಲುತ್ತಿತ್ತು. ಬಿಳಲುಗಳು ಹರಡಿದ್ದ ಅದೇ ಆಲದಮರದ ಬಳಿ ಜೀಪು ನಿಂತಿತು. ಅದೇ ಮೀಸೆ ವೃದ್ಧ. ಅದೇ ಕನ್ನಡಕ. ಅದೇ ಸನ್ನಿವೇಶ. ನಮ್ಮ ಗ್ರಾಮಗಳಲ್ಲಿ ದೃಶ್ಯಗಳು ಅಷ್ಟು ಸುಲಭವಾಗಿ ಬದಲಾಗವು.

ನಾನು ಇಳಿದೆ. ಮೀಸೆ ವೃದ್ಧ ನಾಲ್ಕು ಕಣ್ಣುಗಳಿಂದ ನೋಡಿದ. ಅದರಲ್ಲಿ ನಾಲ್ಕು ವರ್ಣಗಳು ಕಂಡವು. ನಾನು ಬಹಳ ಗತ್ತಿನಿಂದ, ಸ್ವಾತಂತ್ರ್ಯೋತ್ಸವ ದಿನದಂದು ಪ್ರಧಾನಮಂತ್ರಿ ಕೆಂಪುಕೋಟೆಯನ್ನು ಹತ್ತುವಾಗಿನ ಹಮ್ಮಿನಿಂದ, ರಾಜರಾಜೇಶ್ವರಿ ದೇವಿ ಮನೆ ಹೊಸ್ತಿಲ ಕಡೆ ಧಾವಿಸಿದೆ. ಯಾರೂ ಇಲ್ಲ.
"ದೇವೀ" ಅದೇ ಹೆಸರನ್ನು ಮೂರು ಸಾರಿ ಕೂಗಿಕರೆದೆ.
ಹೊರಗೆ ಬಂದಳು. ಯಾಕೆ ಬರಳು? ಮರ್ಯಾದೆ ಹೋಗುತ್ತದೆಂದು ಓಡೋಡಿ ಬಂದಳು.
"ಯಾಕೆ ಬಂದಿರಿ?" ಗಲಿಬಿಲಿಗೊಂಡು ಕೇಳಿದಳು. ನಕ್ಕೆ ಪೇಲವವಾಗಿ.
ಆ ಪ್ರಶ್ನೆಯನ್ನು ಹತ್ತು ಬಾರಿ ಕೇಳಿದಳು. ಅದೇ ಉತ್ತರ...
ದೃಶ್ಯಕ್ಕೆ ತಕ್ಕಷ್ಟು ಮಂದಿ ಪ್ರೇಕ್ಷಕರು ಸಿದ್ಧರಾದರು. ಗೋಡೆ ಮರೆಯಲ್ಲಿ ಕೆಲವರು. ಬಾಗಿಲ ಪಕ್ಕ ಕೆಲವರು. ಪಬ್ಲಿಕ್ಕಾಗಿ ಮೂವರು ನಾಲ್ವರು. ಅವರಲ್ಲಿ ಮೀಸೆ ವೃದ್ಧನೂ ಒಬ್ಬ.
ಆಕೆಯನ್ನು ಸಮೀಪಿಸಿದೆ. ಏದುಸಿರು ಬಿಡುತ್ತಿದ್ದಾಳೆ, ಹಾವು ಬುಸುಗುಟ್ಟುವಂತೆ. ಆಕೆಯ ಪತ್ರದ ಕೊನೆಯ ಸಾಲು "ತೀರಾ ಆ ಜಾತಿಯೇ?" ಅದುರುತ್ತಿದ್ದ ಆಕೆಯ ಅದರಗಳು ಅದೇ ಸಾಲನ್ನು ಮತ್ತೆಮತ್ತೆ ಹೇಳುತ್ತಿದ್ದಂತೆನ್ನಿಸಿತು.
ಆಕೆಯ ಎರಡೂ ಕಿವಿಗಳನ್ನು ನನ್ನ ಎರಡೂ ಕೈಗಳಿಂದ ಮುಚ್ಚಿ, ಆಕೆಯ ತುಟಿಗಳಿಗೆ ಮುತ್ತಿಟ್ಟೆ.
ಹೌದು. ಆಕೆ ಒಪ್ಪಿಗೆ ನೀಡದಿದ್ದರೂ, ಅನುಮತಿ ಪಡೆಯದೆ ಹಾಗೆ ಮಾಡಿದೆ. ಅಕ್ರಮವೇ. ಅಸಭ್ಯತೆಯೇ. ಐ ಔಟ್ರೇಜ್ಡ್ ಹರ್ ಮಾಡೆಸ್ಟಿ.
ಏನು ಮಾಡಲಿ? ನನ್ನ ಮೃತ್ಯುವನ್ನು ಆಕೆಯ ತುಟಿಗಳ ಮೇಲೆ ಬರೆದುಕೊಂಡೆ.
ಜೀಪು ಸ್ಟಾರ್ಟ್ ಆಯಿತು. ಒಬ್ಬನೇ ಓಡಿಬಂದು ಜೀಪು ಹತ್ತಿದೆ.
"ಆಕೀನ ಓಡಿಸಿಕೊಂಡು ಬರ್ತೀನಂದೆ! ಒಬ್ಬನೇ ಬಂದ್ಯಲ್ಲಾ?" ಕೇಳಿದ ಸ್ಟೀರಿಂಗ್ ಹಿಡಿದಿದ್ದ ಸ್ನೇಹಿತ. ಅವನಿಗೆ ತಿಳಿದಿದ್ದುದಷ್ಟೇ. ಜೀಪನ್ನು ಓಡಿಸೆಂದು ಸನ್ನೆ ಮಾಡಿದೆ. ನನ್ನ ಕೆಲಸ ಮುಗಿಯಿತು. ನಾಗರಹಾವಿನ ಬಾಲ ತುಳಿದೆ. ಇನ್ನು ಕಾಟು ಹಾಕುವುದು ಅದರ ಕೆಲಸ.
ದೇವಿ ತಂದೆ ಸುಬ್ಬರಾಜ ಆ ಗ್ರಾಮದ ಮಾಜಿ ಸರ್ಪಂಚ್. ಆಸ್ತಿ ಹೆಚ್ಚೇನೂ ಇಲ್ಲ. ಆದರೂ ರಾಜಜಾತಿಯವನು ರಾಜನೇ ಅಲ್ಲವೇ! ಮುಟ್ಟಿಸಿಕೊಳ್ಳಬಾರದ ಒಬ್ಬನ ಎಂಜಲಿಂದಾಗಿ ತನ್ನ ಕುಟುಂಬ ನಗೆಪಾಟಲಿಗೀಡಾದ ಮೇಲೆ ಸುಮ್ಮನೆ ನೋಡುತ್ತಾ ಕೂರುತ್ತಾನೆಯೇ? ಕೊಚ್ಚಿ ಸೀಳಿಹಾಕನೇ? ನನಗೆ ಬೇಕಾದ್ದೂ ಅದೇ.

ವಿಜಯೋತ್ಸಾಹದಿಂದ ಮನೆ ಸೇರಿದೆ. ನಾನು ಸತ್ತ ನಂತರ ನನ್ನ ಸಮಾಧಿಯನ್ನು ನನ್ನ ರಾಜನ ಸಮಾಧಿಯ ಪಕ್ಕವೇ ಮಾಡಬೇಕೆಂದು ಹಾಳೆಯ ಮೇಲೆ ಮರಣಪತ್ರ ಬರೆದೆ. ಹನ್ನೊಂದು ಗಂಟೆಯಾಗಿತ್ತು. ಗಡಪಾರೆಯನ್ನು ಹೊರಗೆ ಬೀಸಿ ನಾಟಿದೆ. ಅದರ ನೆರಳು ಗಿಡ್ಡವಾಗಿತ್ತೇ ವಿನಾ ಪೂರ್ಣವಾಗಿ ಮಾಯವಾಗಿರಲಿಲ್ಲ.
ಮರಣಿಸುವ ಮೊದಲು ಕೊನೆಯ ಕೋರಿಕೆ ಏನು?
ನನಗೆ ನಾನೇ ತಲಾರಿಯಾದ್ದರಿಂದ, ನನ್ನನ್ನು ನಾನೇ ಹಾಗೆ ಪ್ರಶ್ನಿಸಿಕೊಂಡೆ.
ಮೊಸರನ್ನದಂಥ ಅಮ್ಮನ ಮುಖ ನೋಡಬೇಕು. ಅಡುಗೆಮನೆಗೆ ಹೋದೆ. ಅಮ್ಮ ಸೀಗಡಿಪಲ್ಯ ಮಾಡುತ್ತಿದ್ದಾಳೆ. ಬಾಣಲೆಯಲ್ಲಿ ಅವು ಪ್ರಶ್ನಾರ್ಥಕ ಚಿಹ್ನೆಗಳಂತೆ ಬೇಯುತ್ತಿದ್ದವು.
ಆಗ ನೆನಪಾಯಿತು. "ಅಮ್ಮಾ! ಪರೀಕ್ಷೆ ಚೆನ್ನಾಗಿ ಬರಿದಿದ್ದೀನಿ" ಎಂದೆ. ನಾನು ಶುಭ ಸಮಾಚಾರ ಹೇಳಿದಾಗೆಲ್ಲ ಅಮ್ಮ ನನಗಿಷ್ಟವಾದ್ದನ್ನು ಮಾಡಿ ಬಡಿಸುತ್ತಾಳೆ.
ನನ್ನ ಸ್ವರದಲ್ಲಿ ಏನು ವ್ಯತ್ಯಾಸ ಕಂಡಳೋ ಏನೋ! ಹಠಾತ್ತನೆ ನನ್ನ ಕಡೆ ತಿರುಗಿದಳು. ಎಂದಾದರೊಮ್ಮೆ ಅಪರೂಪವಾಗಿಯಲ್ಲದೆ ಅಮ್ಮ ನನ್ನ ಮುಖದ ಕಡೆ ನೋಡಳು. ಯಾವಾಗಲೂ ಹೊಟ್ಟೆ ಕಡೆಯೇ ನೋಡುತ್ತಾಳೆ.
ಇಷ್ಟು ತಣ್ಣನೆ ತಾಯಿ ಲೋಕಕ್ಕೆ ಮುಟ್ಟಬಾರದವಳು ಹೇಗಾದಳು? ಕುರ್ಚಿ ತಂದು ಹೊರಗೆ ಕೂತೆ. ಅದು ನನ್ನ ‘ಭಸ್ಮ ಸಿಂಹಾಸನ!’ ಗಡಪಾರೆಯ ಕೆಳಗೆ ತಗ್ಗುತ್ತಿದ್ದ ನೆರಳನ್ನು ಗಮನಿಸುತ್ತಿದ್ದೆ.
ನೆರಳು ಬಹುಮಟ್ಟಿಗೆ ಮಾಯವಾಯಿತು. ಗಡಪಾರೆ ನೇರವಿದೆ! ಜಾತಿ ಮಾಯವಾದರೆ ಮನುಷ್ಯನೂ ಇಷ್ಟೇ ನೇರವಾಗಿ ಕಾಣುತ್ತಾನೆ. ಕಾರು ನಿಂತ ಸಪ್ಪಳ. ತಲೆಯೆತ್ತದೆ ವಾಚು ನೋಡಿದೆ. ಹನ್ನೆರಡಾಗುವುದಕ್ಕೆ ಇನ್ನೂ ಐದು ನಿಮಿಷವಿದೆ.
ನೋ! ನಾನು ಹಾಕಿದ ಮುಹೂರ್ತಕ್ಕಿಂತ ಒಂದು ನಿಮಿಷ ಮೊದಲೂ ನಾನು ಮರಣಿಸುವಂತಿಲ್ಲ.
ನನ್ನ ಜನನ ಹೇಗೂ ನನ್ನ ಕೈಲಿಲ್ಲ. ಇಲ್ಲವಾದರೆ ಜಾತಿಯಿಂದ ರಾಡಿಯಾಗಿರುವ ಈ ನೆಲದಲ್ಲಿ ಹುಟ್ಟುತ್ತಿರಲಿಲ್ಲ. ನನ್ನ ಮರಣವನ್ನು ನನ್ನ ಹಿಡಿತಕ್ಕೆ ತಂದುಕೊಳ್ಳಬೇಕು. ನಾನು ನಿರ್ಣಯಿಸಿದ ವೇಳೆಗೇ ಮರಣಿಸಬೇಕು. ಈ ಐದು ನಿಮಿಷ ನನ್ನ ಪ್ರಾಣ ಉಳಿಸಿಕೊಳ್ಳಲು ಯುದ್ಧವನ್ನಾದರೂ ಮಾಡುತ್ತೇನೆ.

ಹಾಗೆ ತೀರ್ಮಾನಿಸಿ ಪಿಸ್ತೂಲನ್ನು ಕೈಲಿ ಹಿಡಿದು ತಲೆ ಮೇಲೆತ್ತಿದೆ. ಸರಿಯಾಗಿ ಅಲ್ಲೇ ನನ್ನ ತಾಯಿಯಂಥ ಮುಖವುಳ್ಳ ಮತ್ತೊಬ್ಬಳು ಹಿರಿಯ ಹೆಂಗಸು. ಆಕೆಯ ಹಿಂದೆ ರಾಜರಾಜೇಶ್ವರಿ ದೇವಿ.
"ನನ್ನ ಸಾಯಿಸಕ್ಕೆ ನೀವು ಬಂದಿದ್ದೀರಾ?" ಪಿಸ್ತೂಲನ್ನು ಜೇಬೊಳಗಿಟ್ಟು ಕೇಳಿದೆ.
"ಸಾಯಬೇಕಾದ್ದು ನೀನಲ್ಲ, ನಾವು. ಇಂತಾ ಪೇಟೇಲ್ಲಿ... ಈ ಮನೆಗೆ ನನ್ನ ಮಗಳು ಸಂಸಾರಕ್ಕೆ ಬಂದರೆ ಸಾಯಬೇಕಾದ್ದು ಯಾರೋ ನೀನೇ ಹೇಳು?" ಭಾರವಾದ ಗದ್ಗದಿತ ಕಂಠದಿಂದ ಕೇಳಿದಳು ಹಿರಿಹೆಂಗಸು.
ನನ್ನ ನೆತ್ತಿಗೇರಿತು. "ಹಾಗಿದ್ರೇ, ಸಾಯೋದು ಬಿಟ್ಟು ಯಾಕೆ ಬಂದ್ರಿ?" ಕೇಳಿದೆ ಜೋರಾಗಿ.
"ನಾನು ಸಾಯಬಲ್ಲೆನಯ್ಯಾ! ಇವಳನ್ನ ಸಾಯಿಸಲಾರೆನಲ್ಲಾ! ಮನಸ್ಸನ್ನು ಹೆಂಗೂ ಕೊಂದುಕೊಂಡಿದ್ದಾಳೆ. ಪ್ರಾಣವನ್ನು ಕೂಡಾ ಕಳೆದುಕೋ ಎಂದು ಹೆಂಗೆ ಹೇಳಲಯ್ಯಾ?" ಎಂದು ನನ್ನ ಭುಜಕ್ಕೆ ಆನಿ ಗೋಳಾಡಿದಳು. ದೇವಿ ಓಡುತ್ತಾ ನನ್ನ ಮನೆ ಹೊಕ್ಕಳು.
ತನ್ನನ್ನು ತಾನು ಹಳಿದುಕೊಂಡು, ಬಡಿದುಕೊಂಡು, ಸಾವರಿಸಿಕೊಂಡ ದೇವಿಯ ತಾಯಿಯ ಮುಖ ನೋಡಿದೆ. ತೀರಾ ಕನಲಿ, ಬಣ್ಣ ಕಂದಿತ್ತು.
ಸೀಗಡಿ ಬೇಯಿಸುತ್ತಿದ್ದ ನನ್ನ ತಾಯಿ, ಇಬ್ಬರು ಹೆಂಗಸರ ಕಣ್ಣೀರನ್ನು ಒರೆಸಿದಳೇ ವಿನಾ ಒಂದು ಪ್ರಶ್ನೆಯನ್ನೂ ಕೇಳಿರಲಿಲ್ಲ. ಆದರೆ ನಾನು ಕೇಳಿಬಿಟ್ಟಿದ್ದೆ.
"ನೀನು ಮಾಡಿದ ನಗೆಪಾಟಲು ಕೆಲಸಕ್ಕೆ ನಾವಲ್ಲಿಯೇ ಉಳಿದರೆ ನನ್ನ ಗಂಡ ನಿನ್ನ ಸಾಯಿಸ್ತಾನೆ. ಮುಖ ತೋರಿಸಲಾಗದೆ ನನ್ನ ಮಗಳು ಸಾಯ್ತಾಳೆ. ನಾವೇ ಇಲ್ಲಿಗೆ ಬಂದೆವಂತ ತಿಳಿದರೆ... ನನ್ನ ಗಂಡ ನೇಣು ಬಿಗಿದುಕೊಳ್ತಾನೆ. ನನ್ನ ಕರುಳ ಕೂಸಿನ ಸಂತೋಷಕ್ಕೋಸ್ಕರ ನನ್ನ ಗಂಡನ್ನೇ ಸಾಯಿಸ್ತಿದ್ದೀನಯ್ಯಾ!" ಅಳುತ್ತಾ ಹೇಳಿದಳೋ, ಹೇಳುತ್ತಾ ಅತ್ತಳೋ, ಅಂತೂ ಹೇಳಿದಳು ದೇವಿಯ ತಾಯಿ.
ಹನ್ನೆರಡು ಗಂಟೆ ಆಗಿಹೋಯಿತು. ಒಂದು ಮರಣ ಮುಂದಕ್ಕೆ ಹೋಯಿತು.
ನನ್ನ ಗಾಯವನ್ನು ನನ್ನ ದೇವಿ ನೋಡದಂತೆಯೇ, ನನ್ನ ದೇವಿಯ ಗಾಯವನ್ನು ನಾನು ನೋಡದೇ ಹೋದೆ.
ನಾನು ಜಾತಿಯಿಂದ ಪೀಡಿತನಾದವನು. ಆಕೆ ಜಾತಿಯ ಕೈಯಲ್ಲಿ ಬಂಧಿಯಾದವಳು.
ಅಯಾಮ್ ದ ವಿಕ್ಟಿಮ್. ಷಿ ಈಜ್ ದ ಪ್ರಿಜನರ್.
ಮಗಳಿಗಾಗಿ ಜಾತಿಯನ್ನು ತೊರೆದ ನನ್ನ ದೇವಿಯ ತಾಯಿಗೆ ಎರಡೂ ಕೈ ಜೋಡಿಸಿದೆ.
ಮೈ ಡಾಗ್ ಈಸ್ ಆಲ್ವೇಸ್ ರೈಟ್.
ಗಾಯವೇ ಹೃದಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT