ಗುರುವಾರ , ಡಿಸೆಂಬರ್ 12, 2019
17 °C

ಕಲಾಪ: ಸಾಮಾಜಿಕ ಕಳಕಳಿಯ ಕಲಾಪ್ರದರ್ಶನ

Published:
Updated:

ಗೋ ಡೆಯ ಮೇಲೆ ಹಲ್ಲಿ ರೂಪದಲ್ಲಿ ಹರಿಯುತ್ತಿರುವ ಹುಲಿ, ಪರಿಸರವನ್ನು ಹಾಳುಗೆಡವಿ ಮನುಷ್ಯ ನಿರ್ಮಿಸಿದ ಕೃತಕ ಕೊಳದೊಳಗೆ ಈಜಿ ಸಂಭ್ರಮಿಸುತ್ತಿರುವ ಯುವಕ, ನಶಿಸಿ ಹೋಗುತ್ತಿರುವ ಸಮುದ್ರ ಕುದುರೆಯ ಅಂದದ ರೂಪ, ನೀಲಿ ಬಾನಿನಲ್ಲಿ ಮೂಡಿದ ಚಂದಿರನ ಬೆಳಕಲ್ಲಿ ನಡೆದು ಬರುತ್ತಿರುವ ಬೌದ್ಧ ಸನ್ಯಾಸಿ, ಸ್ಟಾಂಪಿನೊಳಗೆ ಮೂಡಿದ ಮಾನವೀಯತೆಯ ಪ್ರತಿಬಿಂಬ, ಸ್ನೇಹಿತೆಯರ ಸಡಗರ – ಹೀಗೆ ತಮ್ಮ ಮನಸ್ಸಿನಲ್ಲಿ ಮೂಡಿದ ಭಿನ್ನ ಪರಿಕಲ್ಪನೆಯೊಂದಿಗೆ ಸಾಮಾಜಿಕ ಕಳಕಳಿ ಮೂಡಿಸುವಂತಹ ಚಿತ್ರಗಳನ್ನು ಕುಂಚದಲ್ಲಿ ಅರಳಿಸಿದವರು ಒಡಿಶಾ ಮೂಲದ ಏಳು ಕಲಾವಿದರು.

ಇವರ ಕಲಾಕೃತಿಗಳ ಪ್ರದರ್ಶನ ವಸಂತನಗರದ ‘ಆರ್ಟ್ ಹೌಸ್’ ಗ್ಯಾಲರಿಯಲ್ಲಿ ನಡೆಯುತ್ತಿದೆ. ಪೂರ್ಬಾಯಿ ಸಂಸ್ಥೆ ನಡೆಸುತ್ತಿರುವ ಈ ಕಲಾ ಪ್ರದರ್ಶನ ಇದೇ 31ರವರೆಗೆ ನಡೆಯಲಿದೆ. ಈ ಸಂಸ್ಥೆಯು ಬೆಂಗಳೂರಿನಲ್ಲಿ ನಡೆಸುತ್ತಿರುವ ಮೊದಲ ಕಲಾ ಪ್ರದರ್ಶನವಿದು.

ಪ್ರವಾಹಪೀಡಿತ ಕೇರಳ ಹಾಗೂ ಕೊಡಗಿನ ಜನರಿಗೆ ನೆರವು ನೀಡುವ ಸದುದ್ದೇಶದಿಂದ ಈ ಪ್ರದರ್ಶನವನ್ನು ನಡೆಸುತ್ತಿದ್ದಾರೆ. ಆ ಮೂಲಕ ಚಿತ್ರದಲ್ಲಿ ಮಾತ್ರವಲ್ಲದೇ ತಮ್ಮಲ್ಲೂ ಸಾಮಾಜಿಕ ಕಳಕಳಿ ಇದೆ ಎಂಬುದನ್ನು ಸಾರಿದ್ದಾರೆ ಸಪ್ತ ಕಲಾವಿದರು.

ಇವರೆಲ್ಲರೂ ಪ್ರಕೃತಿಯನ್ನೇ ಮೂಲವಾಗಿರಿಸಿಕೊಂಡು ಚಿತ್ರ ರಚಿಸುವುದು ವಿಶೇಷ.

‘ನಾನು ಬಾಲ್ಯದಿಂದಲೂ ಪೆನ್ಸಿಲ್ ಹಿಡಿದು ಹಾಳೆಗಳ ಮೇಲೆ ಗೀಚುತ್ತಿದ್ದೆ. ನಮ್ಮ ತಂದೆ ನನ್ನಲ್ಲಿರುವ ಕಲಾ ಪ್ರತಿಭೆಯನ್ನು ಗುರುತಿಸಿದ್ದರು. ನನ್ನನ್ನು ಕಲೆಯಲ್ಲಿ ಮುಂದುವರಿಯುವಂತೆ ಪ್ರೋತ್ಸಾಹಿಸಿದ್ದರು. ತಂದೆಯ ಸಹಕಾರ ಹಾಗೂ ಪ್ರೋತ್ಸಾಹದಿಂದಲೇ ಇಂದು ನಾನು ಕಲಾಕಾರನಾಗಿದ್ದೇನೆ. ನನಗೆ ಮೊದಲಿನಿಂದಲೂ ಹುಲಿಗಳ ಮೇಲೆ ಒಲವು ಜಾಸ್ತಿ. ಇಂದು ಹುಲಿಗಳ ಪ್ರಮಾಣ ಕ್ರಮೇಣ ಕಡಿಮೆಯಾಗುತ್ತಿದೆ. ಆ ಕಾರಣಕ್ಕೆ ನಾನು ಹುಲಿಗಳ ರಕ್ಷಣೆಯ ಕುರಿತು ಕಾಳಜಿ ಮೂಡಿಸುವ ಚಿತ್ರಗಳನ್ನು ರಚಿಸುತ್ತೇನೆ, ಈ ಬಾರಿ ಕಲಾ ಪ್ರದರ್ಶನದಲ್ಲಿ ಬಂದ ಹಣವನ್ನು ನೆರೆ ಸಂತ್ರಸ್ತರಿಗೆ ನೀಡುತ್ತಿರುವುದು ನಿಜಕ್ಕೂ ನನಗೆ ಖುಷಿ ತಂದಿದೆ’ ಎನ್ನುತ್ತಾರೆ ಕಲಾವಿದರಲ್ಲೊಬ್ಬರಾದ ಜ್ಞಾನೇಶ್ ಮಿಶ್ರಾ.

‘ನನ್ನ ಅಜ್ಜ, ಅಪ್ಪ ಎಲ್ಲರೂ ಕಲಾವಿದರೇ ಆಗಿದ್ದರು. ಹೆಣ್ಣುಮಕ್ಕಳು ಗಟ್ಟಿಗಿತ್ತಿಯರು, ಪ್ರಕೃತಿಯಲ್ಲಿರುವ ಎಲ್ಲಾ ಜೀವಿಗಳಿಗಿಂತಲೂ ಸ್ಟ್ರಾಂಗ್. ಅವರು ಪ್ರಕೃತಿಯನ್ನು ಸೇರಿದಂತೆ ಜಗತ್ತಿನ ಸಮಸ್ತವನ್ನು ಕಾಳಜಿ ಮಾಡುತ್ತಾರೆ. ಈ ಕಾರಣಕ್ಕೆ ನಾನು ಹೆಣ್ಣಿನ ಬದುಕಿನ ವಿವಿಧ ಆಯಾಮಗಳನ್ನು ಚಿತ್ರಿಸಿದ್ದೇನೆ’ ಎನ್ನುತ್ತಾರೆ ಇನ್ನೊಬ್ಬ ಕಲಾವಿದೆ ಉಷಾ ಮಿಶ್ರಾ.

‘ನಾನು ಸಂಪ್ರದಾಯಸ್ಥ ಕುಟುಂಬದಿಂದ ಬಂದವನು. ತಂದೆ ಕಲಾ ಪರಿಣಿತರು, ಬಾಲ್ಯದಲ್ಲಿ ನಾನು ಅವರ ಕಲೆಯನ್ನು ನೋಡುತ್ತಾ ಬೆಳೆದವನು. ಹಾಗೆಯೇ ನನ್ನಲ್ಲೂ ಕಲಾಸಕ್ತಿ ಮೂಡಿತು. ಹೀಗೆ ಆರಂಭವಾದ ನನ್ನ ಕಲಾಪಯಣ ಇಂದಿಗೂ ಮುಂದುವರಿದಿದೆ. ನನ್ನ ಎಲ್ಲಾ ಕಲಾಕೃತಿಗಳು ಮನುಷ್ಯನ ಜೀವನದ ಕತೆಗಳನ್ನು ಹೇಳುವಂತವು. ಸ್ಟಾಂಪ್‌ನ ಒಳಗೆ ಚಿತ್ರಕೃತಿಯನ್ನು ಮೂಡಿಸುವುದು ನನ್ನ ವಿಶೇಷ. ಸಮಾಜಕ್ಕೆ ಸೇವೆ ನೀಡುವ ಕಾಣದ ಕೈಗಳನ್ನು ಚಿತ್ರಗಳಲ್ಲಿ ಮೂಡಿಸುತ್ತೇನೆ. ಈ ಬಾರಿ ನೆರೆ ಪೀಡಿತರಿಗೆ ನಮ್ಮ ಕೈಲಾದ ಸಹಾಯ ಮಾಡುತ್ತಿರುವುದು ಸಮಾಜಕ್ಕೆ ನಮ್ಮ ಕಡೆಯಿಂದ ಪುಟ್ಟ ಕೊಡುಗೆ’ ಎಂದು ಖುಷಿಯಿಂದ ಹೇಳುತ್ತಾರೆ ಕಲಾವಿದ ಸುಧೀರ್ ಮೆಹ್ರಾ.
**
ನೆರೆಪೀಡಿತರಿಗೆ ಕಲಾಕೃತಿಯ ಹಣ: ನೆರೆಪೀಡಿತ ಪ್ರದೇಶಗಳಾದ ಕೇರಳ ಹಾಗೂ ಕೊಡಗಿಗೆ ಅನೇಕ ಕಡೆಗಳಿಂದ ದೇಣಿಗೆ ಹರಿದು ಬರುತ್ತಿದೆ. ಈ ಕಲಾವಿದರು ಕೂಡ ಆ ಪ್ರದೇಶಕ್ಕೆ ತಮ್ಮ ಕೈಲಾದ ಸಹಾಯ ಮಾಡಬೇಕು ಎಂದು ನಿರ್ಧರಿಸಿ 22ಕ್ಕೆ ಮುಗಿಯಬೇಕಿದ್ದ ಕಲಾಪ್ರದರ್ಶನವನ್ನು ಇದೇ 31ರವರೆಗೆ ಮುಂದುವರಿಸಿದೆ. ಪ್ರದರ್ಶನದಿಂದ ಬರುವ ಮೊತ್ತದಲ್ಲಿ ಶೇ40 ರಷ್ಟನ್ನು ನೆರೆಪೀಡಿತ ಪ್ರದೇಶಕ್ಕೆ ದೇಣಿಗೆ ನೀಡುತ್ತಿರುವುದು ವಿಶೇಷ.
**
* ಕಲಾವಿದರು: ಜ್ಞಾನೇಶ್ ಮಿಶ್ರಾ, ಉಷಾ ಮಿಶ್ರಾ, ಸುಧೀರ್ ಮೆಹ್ರಾ, ಸುಜಲ್ ಪಾತ್ರಾ, ಪ್ರಿಯರಂಜನ್, ಪ್ರದೋಶ್ ಸ್ವಾಯಿನ್‌, ಕೇಸು ದಾಸ್ 
* ಸಮಯ: ಬೆಳಿಗ್ಗೆ 11ರಿಂದ ಸಂಜೆ 6 
* ಸ್ಥಳ: ಆರ್ಟ್ ಹೌಸ್, ವಸಂತನಗರ

ಪ್ರತಿಕ್ರಿಯಿಸಿ (+)