ಕುದುರೆಮುಖ ಅಂದವಾದ ಬಗೆ...

ಗುರುವಾರ , ಮಾರ್ಚ್ 21, 2019
30 °C

ಕುದುರೆಮುಖ ಅಂದವಾದ ಬಗೆ...

Published:
Updated:
Prajavani

ಸಾ ರ್ವಜನಿಕ ವಲಯದ ದೈತ್ಯ ಕಂಪನಿಯಾದ ಕುದುರೆಮುಖ ಕಬ್ಬಿಣ ಅದಿರು ಕಂಪನಿಗೆ 2005ರ ಹೊತ್ತಿಗೆ ಗಣಿಗಾರಿಕೆಯನ್ನು ನಿಲ್ಲಿಸುವಂತೆ ಸುಪ್ರೀಂ ಕೋರ್ಟ್‌ 2002ರಲ್ಲಿ ಆದೇಶ ನೀಡಿತು. ಇದರೊಂದಿಗೆ ಭಾರತದ ಅತಿದೊಡ್ಡ ವನ್ಯಜೀವಿ ಸಂರಕ್ಷಣಾ ವಿಜಯ ಸಾಧಿಸಿದಂತಾಯಿತು. ಈ ಕಾನೂನು ಸಮರವನ್ನು ‘ವೈಲ್ಡ್‌ಲೈಫ್ ಫಸ್ಟ್’ ಆರಂಭಿಸಿತ್ತು. ಇದು ಹುಲಿಗಳು ಮತ್ತು ಸಿಂಗಳೀಕಗಳನ್ನು ಉಳಿಸುವ ಹೋರಾಟ ಮಾತ್ರವಾಗಿರದೆ ಲಕ್ಷಾಂತರ ಸಣ್ಣ ರೈತರು ನೀರಿಗಾಗಿ ಅವಲಂಬಿಸಿದ್ದ ಭದ್ರಾ ನದಿಯನ್ನು ಮಾಲಿನ್ಯದಿಂದ ಮುಕ್ತಗೊಳಿಸುವ ಹೋರಾಟವೂ ಆಗಿತ್ತು.

ಇಷ್ಟಾದರೂ, ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ ⇒ನಂತರವೂ ಒಂದು ದಶಕದ ಕಾಲ ವೈಲ್ಡ್‌ಲೈಫ್ ಫಸ್ಟ್ ಕುದುರೆಮುಖ ರಾಷ್ಟ್ರೀಯ ಉದ್ಯಾನ ಮತ್ತು ಗಣಿಗಾರಿಕೆಯ ಘಾತಕ ದುಷ್ಪರಿಣಾಮಗಳಿಂದ ಸಂರಕ್ಷಿಸಲು ನಡೆಸಿದ ಹೋರಾಟ ಅನೇಕರಿಗೆ ಗೊತ್ತಿಲ್ಲ. ಗಣಿಗಾರಿಕೆಯನ್ನು ನಿಲ್ಲಿಸುವ ಪ್ರಕ್ರಿಯೆಯ ನಿಗಾವಣೆಯನ್ನು ಬೆದರಿಸಿ, ನಿಲ್ಲಿಸಲು ಹದಿನೆಂಟು ಜನ ವನ್ಯಜೀವಿ ಸಂರಕ್ಷಣಾವಾದಿಗಳ ಮೇಲೆ ಹದಿನಾಲ್ಕು ಕ್ರಿಮಿನಲ್ ಮೊಕದ್ದಮೆಗಳನ್ನು ಜಡಿಯಲಾಗಿತ್ತು. ಮುಂಚೂಣಿ ಹೋರಾಟಗಾರರ ಮೇಲೆ ಮಾನನಷ್ಟದ ಕತೆಗಳನ್ನು ಕಟ್ಟಿ ಮಾಧ್ಯಮಗಳಲ್ಲಿ ಹರಿಯಬಿಡಲಾಗಿತ್ತು. ಅದೇನೇ ಇದ್ದರೂ, ಕರ್ನಾಟಕ ಹೈಕೋರ್ಟ್‌ ಮಧ್ಯ ಪ್ರವೇಶಿಸಿ ಹೋರಾಟಗಾರರಿಗೆ ಕಿರುಕುಳ ಕೊಡುವುದನ್ನು ನಿಲ್ಲಿಸಿದ್ದು ಮಾತ್ರವಲ್ಲದೆ ಅವರ ಮೇಲೆ ಹಾಕಲಾಗಿದ್ದ ಎಲ್ಲ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸಲಾಯಿತು. ಒಬ್ಬ ಅರಣ್ಯಾಧಿಕಾರಿಯು ದುರುದ್ದೇಶದಿಂದ ಕಾರ್ಯವೆಸಗಿದ್ದನ್ನು ಗಂಭೀರವಾಗಿ ಗಮನಿಸಿತ್ತು.


2002ರಲ್ಲಿ ತೆಗೆದ ಭದ್ರಾ ನದಿಯ ಚಿತ್ರ

2004ರ ಮಾರ್ಚ್ ಮತ್ತು ನವೆಂಬರ್ ನಡುವಿನ ಅವಧಿಯಲ್ಲಿ, ಹೋರಾಟಗಾರರ ವಿರುದ್ಧ ಹದಿನೆಂಟು ಕೇಸುಗಳನ್ನು ರಭಸದಿಂದ ನಡೆಸಲಾಗುತ್ತಿದ್ದ ಸಂದರ್ಭದಲ್ಲಿ ಗಣಿಗಾರಿಕೆ ಕಂಪನಿ ವನ್ಯಜೀವಿ ಆವಾಸಗಳನ್ನು ಗಂಭೀರವಾಗಿ ಹಾನಿಗೀಡು ಮಾಡುವ ಪ್ರಕರಣಗಳನ್ನು ಪರಿಗಣಿಸದೆ ಬಿಟ್ಟುಬಿಡಲಾಯಿತು. ಕುದುರೆಮುಖ ಅದಿರು ಕಂಪನಿಯಿಂದ ವಿವಿಧ ಉಲ್ಲಂಘನೆಗಳಿಗಾಗಿ ₹ 139 ಕೋಟಿ ವಸೂಲು ಮಾಡಬೇಕಾಗಿದ್ದ ಪ್ರಕರಣಗಳನ್ನು ಮುನ್ನಡೆಸಲು ಕ್ರಮವನ್ನೇ ತೆಗೆದುಕೊಂಡಿರದುದನ್ನು ಜುಲೈ 2009ರಲ್ಲಿ ರಾಜ್ಯ ಶಾಸನಸಭೆಯಲ್ಲಿ ಮಂಡಿಸಲಾದ ಸಾರ್ವಜನಿಕ ಲೆಕ್ಕಪತ್ರ ವರದಿ ಬಯಲು ಮಾಡಿತು. ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಕಠಿಣ ಆದೇಶಗಳ ನಡುವೆಯೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಒಂದು ದಶಕದ ನಂತರವೂ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ.

ಇಷ್ಟರ ನಡುವೆಯೂ ಜನವರಿ 2006ರಿಂದ ಗಣಿಗಾರಿಕೆ ನಿಂತಿದ್ದು ಸುಪ್ರೀಂ ಕೋರ್ಟ್‌ ಮತ್ತು ಕೇಂದ್ರ ಉನ್ನತಾಧಿಕಾರ ಸಮಿತಿ ಗಟ್ಟಿಯಾಗಿ ನಿಂತದ್ದರಿಂದ. ಆದರೂ ಕುದುರೆಮುಖ ಅದಿರು ಕಂಪನಿ ವಾಯಿದೆ ಮುಗಿದಿದ್ದ ಭೋಗ್ಯದ ಸ್ಥಳದಿಂದ ಇಳಿಜಾರಿನ ಭದ್ರತೆ ಮತ್ತು ಭದ್ರಾ ನದಿ ಸಂರಕ್ಷಣೆಯ ನೆಪಹೇಳಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿ 2006ರ ಡಿಸೆಂಬರ್ 15ರಂದು ನೀಡಿದ ಎರಡನೇ ತೀರ್ಪಿನ ನಂತರವೂ ಹೊರಹೋಗಲಿಲ್ಲ. ಕುದುರೆಮುಖ ಅದಿರು ಕಂಪನಿ ಮತ್ತೊಂದು ಮೇಲ್ಮನವಿಯನ್ನು ಸಲ್ಲಿಸಿತು. ಆದರೆ, ಸುಪ್ರೀಂ ಕೋರ್ಟ್‌ ಮಣಿಯಲಿಲ್ಲ.


Caption

ಕುದುರೆಮುಖ ಅದಿರು ಕಂಪನಿಯು ತನ್ನ ಟೌನ್‍ಶಿಪ್‍ಅನ್ನು ಪರಿಸರ ಪ್ರವಾಸೋದ್ಯಮಕ್ಕೆ ಬಳಸಲು ಮಾಡಿದ ಕೋರಿಕೆಯನ್ನೂ ನ್ಯಾಯಾಲಯ ತಿರಸ್ಕರಿಸಿತು. ಕಂಪನಿ ಎರಡನೇ ತೀರ್ಪಿನ ವಿರುದ್ಧ ಮತ್ತೊಂದು ಮೇಲ್ಮನವಿಯನ್ನು ಸಲ್ಲಿಸಿತು. ಆದರೆ ಸುಪ್ರೀಂ ಕೋರ್ಟ್‌ ಮಣಿಯಲಿಲ್ಲ. ತನ್ನ ಮೊಂಡುತನದಿಂದ ಕಾನೂನನ್ನು ಪಾಲಿಸದ ಅದಿರು ಕಂಪನಿ ದಾರಿ ಕಾಣದಂತೆ ಮಾಡಿಕೊಂಡಿತು. ಕಾನೂನಾತ್ಮಕ ಆಯ್ಕೆಗಳು ತೀರಿದ ಮೇಲೆ ಕುದುರೆಮುಖ ಅದಿರು ಕಂಪನಿ, ಕುದುರೆಮುಖ ರಾಷ್ಟ್ರೀಯ ಉದ್ಯಾನದ ಹೃದಯಭಾಗದಲ್ಲಿದ್ದ ತನ್ನ ಗಣಿಗಾರಿಕೆಗೆ ಬಳಸಲಾಗುತ್ತಿದ್ದ ಬೃಹತ್ ಯಂತ್ರೋಪಕರಣಗಳನ್ನು ತೆರೆವುಗೊಳಿಸಬೇಕಾದ ಅನಿವಾರ್ಯ ಸ್ಥಿತಿ ಎದುರಿಸಬೇಕಾಯಿತು. 2014ರ ಗೂಗಲ್ ಉಪಗ್ರಹಚಿತ್ರಗಳು ಅದು ಇನ್ನೂ ತೆರವುಗೊಳಿಸಿರದೇ ಇದ್ದುದನ್ನು ಸ್ಪಷ್ಟವಾಗಿ ತೋರಿಸುತ್ತಿತ್ತು. ಆದರೆ, 2017ರ ಉಪಗ್ರಹ ಚಿತ್ರಗಳಷ್ಟೇ ಗಣಿಗಾರಿಕೆ ಸ್ಥಾವರವನ್ನು ತೆರವುಗೊಳಿಸಿರುವುದನ್ನು ಸ್ಥಿರೀಕರಿಸುತ್ತವೆ.

ಕುದುರೆಮುಖ ಕಂಪನಿಯು ನಿರ್ಲಕ್ಷ್ಯದಿಂದ, ಮಾನ್ಯವಾಗಿದ್ದ ಭೋಗ್ಯವೂ ಇರದೆ, ಆ ಪ್ರದೇಶದ ಮಾಲೀಕನಂತೆ ವರ್ತಿಸುತ್ತಿತ್ತು. ಸುಪ್ರೀಂ ಕೋರ್ಟ್‌ ಎಲ್ಲ ಅಭಿವೃದ್ಧಿ ಚಟುವಟಿಕೆಗಳಿಗೆ ಹೊಸದಾಗಿ ವಿಧಿಸಿದ್ದ ನೆಟ್ ಪ್ರೆಸೆಚಿಟ್ ವ್ಯಾಲ್ಯೂ ತೆರಿಗೆ ಕುದುರೆಮುಖದ ಸಂದರ್ಭದಲ್ಲಿ ಸುಮಾರು ₹ 520 ಕೋಟಿಯಷ್ಟು ವಸೂಲಾಗಬೇಕಾಗಿತ್ತು. ಎಲ್ಲ ಕಾನೂನು ಸೂತ್ರಗಳನ್ನು ನಿರ್ಲಕ್ಷಿಸಿ ಅದರ ಕಟ್ಟಡಗಳನ್ನು ರಾಜಕೀಯ ಒಡನಾಟವಿದ್ದ ವ್ಯಾಪಾರಿಯೊಬ್ಬರಿಗೆ ಉಪಭೋಗ್ಯಕ್ಕೆ ವೈಭವೋಪೇತ ಪರಿಸರ ಪ್ರವಾಸೋದ್ಯಮ ರೆಸಾರ್ಟ್ ನಿರ್ಮಿಸಲು ನೀಡಿತು.

ಬೆಳವಣಿಗೆಗಳನ್ನು ಹತ್ತಿರದಿಂದ ಗಮನಿಸುತ್ತಿದ್ದ ವೈಲ್ಡ್‌ಲೈಫ್ ಫಸ್ಟ್, ಮುಖ್ಯ ಕಾರ್ಯದರ್ಶಿ ಹಾಗೂ ಇತರ ಹಿರಿಯ ಅಧಿಕಾರಿಗಳಿಗೆ ವೈಭವೋಪೇತ ಪರಿಸರ ಪ್ರವಾಸೋದ್ಯಮ ರೆಸಾರ್ಟ್ ಸ್ಥಾಪನೆಯನ್ನು ನಿಲ್ಲಿಸಲು ತುರ್ತಾಗಿ ಮಧ್ಯಪ್ರವೇಶಿಸಬೇಕೆಂಬ ಮನವಿಗಳ ಸರಮಾಲೆಯನ್ನೇ ಸಲ್ಲಿಸಿತು. ಆ ರೆಸಾರ್ಟ್ ವ್ಯಾವಹಾರಿಕವಾಗಿ ಕಾರ್ಯನಿರ್ವಹಿಸಲು ಆರಂಭಿಸಿದಾಗ, ವೈಲ್ಡ್‌ಲೈಫ್ ಫಸ್ಟ್ ಮತ್ತೊಂದು ರಿಟ್ ಅರ್ಜಿಯನ್ನು ಕರ್ನಾಟಕದ ಹೈಕೋರ್ಟ್‌ನಲ್ಲಿ ಸಲ್ಲಿಸಿತು. ಸದರಿ ನ್ಯಾಯಾಲಯವು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು (ಅರಣ್ಯ) ಇವರಿಗೆ ಈ ವಿಷಯವನ್ನು ಪರಿಶೀಲಿಸಿ ಸೂಕ್ತ ಅದೇಶಗಳನ್ನು ನೀಡಲು ನಿರ್ದೇಶಿಸಿತು. ವೈಲ್ಡ್‌ಲೈಫ್ ಫಸ್ಟ್ ಹೆಚ್ಚುವರಿ ಮುಖ್ಯಕಾರ್ಯದರ್ಶಿಗಳ ಮುಂದೆ ದೃಢವಾಗಿ ತನ್ನ ವಾದ ಮಂಡಿಸಿ, ವೈಭವೋಪೇತವಾದ ಎಕೊಟೂರಿಸಂ ರೆಸಾರ್ಟ್ ಸ್ಥಾಪನೆಯು ಕಾನೂನು ವಿರೋಧಿ ಎಂದು ಸಾಧಿಸಿತು. ಇದನ್ನಾಲಿಸಿದ ಹೆಚ್ಚುವರಿ ಕಾರ್ಯದರ್ಶಿಗಳು ಮುಖ್ಯ ವನ್ಯಜೀವಿ ವಾರ್ಡನ್ನರಿಗೆ ಸೂಕ್ತ ಕಾನೂನು ಕ್ರಮ ಜರುಗಿಸಲು ನಿರ್ದೇಶಿಸಿದರು. ಅಂತಿಮವಾಗಿ ಇದು ಆ ರೆಸಾರ್ಟ್ ಮುಚ್ಚಲು ಕಾರಣವಾಯಿತು.

ಸುಪ್ರೀಂ ಕೋರ್ಟ್‌ನ ಈ ಮಹತ್ವದ ತೀರ್ಪುಗಳಿಂದಾಗಿ ಇಲ್ಲಿರುವ ಚಿತ್ರಗಳು ತೋರಿಸುವಂತೆ ಭದ್ರಾ ನದಿ ಪುನಃಶ್ಚೇತನಗೊಂಡಿದೆ. ದೇಶವು ಗಂಭೀರವಾದ ನೀರಿನ ಸಮಸ್ಯೆಯನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಲಕ್ಷಾಂತರ ಮಂದಿ ರೈತರ ಜೀವಸೆಲೆಯಾದ ಭದ್ರಾ ನದಿಯ ಸಂರಕ್ಷಣೆ ರಾಜಕೀಯ ಮತ್ತು ಆಡಳಿತದ ನಾಯಕರು ಅಭಿವೃದ್ಧಿಯ ನೆಪದಲ್ಲಿ ಪರಿವೆಯಿಲ್ಲದೆ ಅನುಮತಿಗಳನ್ನು ಕೊಡಬೇಕಾದ ಸಂದರ್ಭಗಳಲ್ಲಿ ಕಲಿಯಲೇಬೇಕಾದ ಅತಿ ಮುಖ್ಯವಾದ ಪಾಠ.

ಕುದುರೆಮುಖ ಗಣಿಗಾರಿಕೆಯ ವಿರುದ್ಧದ ಹೋರಾಟವು ಗುರುತಿಸಿ ಸರಿಪಡಿಸಬೇಕಾಗಿರುವ, ಯೋಜನಾ ನೀತಿಯಲ್ಲಿನ ಮೂರು ಬಹುಮುಖ್ಯ ದೋಷಗಳನ್ನು ಸ್ಪಷ್ಟವಾಗಿ ಮುನ್ನೆಲೆಗೆ ತಂದಿತು. ಒಂದು, ಅತಿಹೆಚ್ಚು ಮಳೆಬೀಳುವ ಮತ್ತು ಮೂರು ಮುಖ್ಯ ನದಿಗಳ ಉಗಮ ಸ್ಥಾನದಲ್ಲಿ ಕೀಳುದರ್ಜೆಯ ಕಬ್ಬಿಣದ ಅದಿರನ್ನು ಗಣಿಗಾರಿಕೆ ಮಾಡುವುದರಲ್ಲಿನ ಅಪಾಯಗಳು; ಎರಡು, ನೈಸರ್ಗಿಕ ಕಾಡಿನ ನಾಶವನ್ನು ಮರ ನೆಟ್ಟು ಸರಿದೂಗಿಸಬಹುದೆಂಬ ತರ್ಕದೋಷ; ಮತ್ತು ಮೂರು, ಕಬ್ಬಿಣದ ಅದಿರನ್ನು ಕಡಿಮೆ ರಾಯಧನದಲ್ಲಿ ರಫ್ತು ಮಾಡುವುದು ದೇಶದ ದೂರಗಾಮಿ ಹಿತದೃಷ್ಟಿಯಲ್ಲ. ಕುದುರೆಮುಖ ಹೋರಾಟವು ಇದು ಕೇವಲ ‘ಪರಿಸರ ಮತ್ತು ಅಭಿವೃದ್ಧಿ’ಯ ಸಂಘರ್ಷ ಎಂಬ ಕ್ಲೀಷೆಯಲ್ಲ. ಇದೊಂದು ಹಿಂದೆ ಘಟಿಸಿದ, ಜೀವಿವೈವಿಧ್ಯ ಮತ್ತು ನದಿ ವ್ಯವಸ್ಥೆಗೆ ಘಾತಕವಾಗಿ ಪರಿಣಮಿಸಿದ ವಿವೇಕಶೂನ್ಯ ಅಭಿವೃದ್ಧಿ ದೋಷ ಎಂಬುದನ್ನು ಮನವರಿಕೆ ಮಾಡುತ್ತದೆ.

ಅಂತಿಮವಾಗಿ, ಈ ಹೋರಾಟವು ಹೇಗೆ ಶ್ರದ್ಧಾವಂತ, ಬದ್ಧತೆಯುಳ್ಳ ನಾಗರಿಕರ ಒಂದು ಸಣ್ಣ ಗುಂಪು ಸಂವಿಧಾನ ಮತ್ತು ಕಾನೂನಿನಿಂದ ಶಕ್ತಿಪಡೆದು ಅಮೂಲ್ಯವಾದ ರಾಷ್ಟ್ರೀಯ ಸಂಪತ್ತುಗಳಾದ ಮಳೆ ಕಾಡುಗಳು ಮತ್ತು ನದಿಗಳು ಅಭಿವೃದ್ಧಿಯ ನೆಪದಲ್ಲಿ ನಾಶವಾಗುವುದನ್ನು ಸಮರ್ಥವಾಗಿ ತಡೆಯಬಹುದು ಎಂಬುದನ್ನು ತೋರಿಸುತ್ತದೆ.

(ಲೇಖಕ ವೈಲ್ಡ್‌ಲೈಫ್‌ ಫಸ್ಟ್‌ನ ಟ್ರಸ್ಟಿ)

ಬರಹ ಇಷ್ಟವಾಯಿತೆ?

 • 12

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !