ಹೂ ತೋಟದಲ್ಲಿ ‘ಸಿಯಾಚಿನ್‌’ ಕಡೆದವರು

7

ಹೂ ತೋಟದಲ್ಲಿ ‘ಸಿಯಾಚಿನ್‌’ ಕಡೆದವರು

Published:
Updated:

ಭಾರತೀಯ ಸೇನಾ ಪಡೆ ಸಿಯಾಚಿನ್‌ ಹಾಗೂ ದೇಶದ ವಿವಿಧ ಭೌಗೋಳಿಕ ಪ್ರದೇಶಗಳಲ್ಲಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನೀವು ಲಾಲ್‌ಬಾಗ್‌ನಲ್ಲಿ ನಡೆದಿರುವ ಫಲಪುಷ್ಪ ಪ್ರದರ್ಶನದಲ್ಲಿ ನೋಡಿರಬಹುದು. ವರ್ಷಪೂರ್ತಿ ಹಿಮಾವೃತವಾಗಿರುವ, ಹಿಮಾಲಯ ಪರ್ವತಶ್ರೇಣಿಯಲ್ಲಿರುವ ನೀರ್ಗಲ್ಲ ಪ್ರದೇಶವಿದು. 

ಸಿಯಾಚಿನ್‌ ಮಾದರಿಯನ್ನು ಲಾಲ್‌ಬಾಗ್‌ನ ಗಾಜಿನ ಮನೆಯಲ್ಲಿ ನಿರ್ಮಿಸಿರುವವರು ನಾಗರಭಾವಿ ಸಮೀಪದ ಮಾರುತಿನಗರದ ‘ಆಕೃತಿ ಕ್ರಿಯೇಷನ್ಸ್‌’ನ ಕುಶಲಕರ್ಮಿಗಳು. ‘ಆಕೃತಿ’ಯ ಕ್ರಿಯೇಟಿವ್‌ ಡೈರೆಕ್ಟರ್‌ ನಾರಾಯಣ ಟಿ.ಆರ್. ನೇತೃತ್ವದಲ್ಲಿ ಈ ಮಾದರಿ ಸಿದ್ಧವಾಗಿದೆ. ಬೇರೆ ಬೇರೆ ಕಡೆ ವಿವಿಧ ಪರಿಕಲ್ಪನೆ ಆಧರಿತ ಮಾದರಿಗಳನ್ನು ಅಥವಾ ಸೀಕ್ವೆನ್ಸ್‌ ಮಾಡಿದ ಅನುಭವ ನಾರಾಯಣ್‌ ಅವರದು.

‘ಯಾವುದೇ ಪರಿಕಲ್ಪನೆಯ ಮಾದರಿಗಳನ್ನು ಮಾಡಲು ಬೇಡಿಕೆ ಬಂದಾಗ ಅದನ್ನು ಕಂಪ್ಯೂಟರ್‌ನಲ್ಲಿ ತ್ರೀಡಿ ವಿನ್ಯಾಸ ಸಿದ್ಧಪಡಿಸಿ ಆಯೋಜಕರಿಂದ ಒಪ್ಪಿಗೆ ಪಡೆದುಕೊಳ್ಳುತ್ತೇವೆ. ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನದಲ್ಲಿ ಈ ಬಾರಿ ಭಾರತೀಯ ಸೇನಾ ಪಡೆಯ ಕಾರ್ಯಾಚರಣೆಯ ವಿವಿಧ ಆಯಾಮಗಳನ್ನು ಸಿದ್ಧಪಡಿಸುವಂತೆ ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನ ಕಲಾ ಸಂಘ ತಿಳಿಸಿತ್ತು. ನಾವು ಸಿದ್ಧಪಡಿಸಿದ ತ್ರೀಡಿ ವಿನ್ಯಾಸವನ್ನು ಮೆಚ್ಚಿಕೊಂಡರು. ನಮ್ಮ ದೇಶದ ವಿವಿಧ ಭೌಗೋಳಿಕ ಚಿತ್ರಣಗಳನ್ನೂ ಒಳಗೊಂಡಂತೆ ಸೇನೆಯ ಕಾರ್ಯಚಟುವಟಿಕೆಗಳನ್ನು ತೋರಿಸಬೇಕಾದ ಕಾರಣ ನಾವು ಬಳಸುವ ಸಾಮಗ್ರಿಗಳ ಬಗ್ಗೆಯೂ ಚರ್ಚಿಸಿದೆವು’ ಎಂದು ಸಿದ್ಧತೆಯ ಮಾಹಿತಿ ನೀಡುತ್ತಾರೆ, ನಾರಾಯಣ್‌.

ಫಲಪುಷ್ಪ ಪ್ರದರ್ಶನದಲ್ಲಿನ ಮಾದರಿ ರಚನೆಗೆ ಥರ್ಮೊಕೋಲ್‌, ಮರಳು, ಮಣ್ಣು, ಟಾರ್ಪಾಲ್‌, ಮ್ಯಾನಿಕ್ವೀನ್‌ಗಳನ್ನು ಬಳಸಲಾಗಿದೆ. ಥರ್ಮೊಕೋಲ್‌ನ ದೊಡ್ಡ ದೊಡ್ಡ ರೋಲ್‌ಗಳನ್ನು ಕೆತ್ತಿ, ಕೊರೆದು ಬೇಕಾದ ಆಕಾರ ಮತ್ತು ವಿನ್ಯಾಸಗಳನ್ನು ಮಾಡಿದ್ದಾರೆ. ಸಿನಿಮಾ, ಜಾಹೀರಾತು, ಬ್ರ್ಯಾಂಡಿಂಗ್‌ ಕ್ಷೇತ್ರಗಳಿಗೆ ಹಲವಾರು ಮಾದರಿಗಳನ್ನು ನಿರ್ಮಿಸಿದ್ದರೂ ಸೇನಾ ಪಡೆಯ ಸಮಗ್ರ ದರ್ಶನವನ್ನು ಪ್ರಸ್ತುತಪಡಿಸುವ ಅವಕಾಶ ಸಿಕ್ಕಿರುವುದು ಅವರಿಗೆ ಹೆಮ್ಮೆಯ ಸಂಗತಿಯಾಗಿದೆ.

ಕಂಪ್ಯೂಟರ್‌ ಗ್ರಾಫಿಕ್ಸ್‌ ಹಿನ್ನೆಲೆ, ಚಿತ್ರಕಲೆ, ಲೋಹದ ವಿನ್ಯಾಸ ಹಾಗೂ ಥರ್ಮೊಕೋಲ್‌ ವಿನ್ಯಾಸದಲ್ಲಿ ಪಳಗಿರುವ 36 ಮಂದಿ ಈ ಮಾದರಿ ರಚನೆಯಲ್ಲಿ 10 ದಿನ ಹಗಲು ರಾತ್ರಿ ದುಡಿದಿದ್ದಾರೆ ಎಂದು ವಿವರಿಸುತ್ತಾರೆ ನಾರಾಯಣ್‌. ಸವಾಲೆನಿಸುವ ಮಾದರಿಗಳ ರಚನೆಗೆ ತಮ್ಮ ತಂಡ ಸದಾ ಸಿದ್ಧ ಎಂದು ನಗುತ್ತಾರೆ ಅವರು.

ಸಂಪರ್ಕಕ್ಕೆ: narayan@akruticreations.com/www.akruticreations.com

*

-ನಾರಾಯಣ ಟಿ.ಆರ್ 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !