ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಮಾತೆಗೆ ನಮನ

Last Updated 2 ನವೆಂಬರ್ 2019, 20:00 IST
ಅಕ್ಷರ ಗಾತ್ರ

ನಮ್ಮ ಮನೆಯಲ್ಲಿ ಲಕ್ಷ್ಮಿಯಂತಿದ್ದ ಹಸುವೊಂದಿತ್ತು. ತುಂಬಾ ಸಾಧು ಪ್ರಾಣಿ. ಯಾರಿಗೂ ತನಗಿದ್ದ ಉದ್ದದ ಕೊಂಬುಗಳಿಂದ ತಿವಿದವಳಲ್ಲ. ಯಾರಾದರೂ ಬೇಕಂತಾನೆ ಕೀಟಲೆ ಮಾಡಿದರೂ ಸಹ ಸುಮ್ಮನೆ ತಲೆಯಲ್ಲಾಡಿಸುತ್ತಿತ್ತೇ ವಿನಾ ತೊಂದರೆಯನ್ನಂತೂ ಕೊಡುತ್ತಿರಲಿಲ್ಲ. ಆ ದೊಡ್ಡ ಕೊಟ್ಟಿಗೆಯ ತುಂಬೆಲ್ಲಾ ದನಕರುಗಳು, ಒಂದೊಂದು ಪ್ರಾಣಿಯ ಗುಣವೂ ಒಂದೊಂದು ತೆರನಾಗಿರುತ್ತಿತ್ತು.

ಹಾಲು ಕರೆಯುವ ಹಸುಗಳಲ್ಲಿ ಕಪ್ಪನೆಯ ಒಂದು ಕುಳ್ಳಸು ಇತ್ತು. ಅದು ಹಾಲು ಕೊಡುತ್ತಿದ್ದದ್ದು ಒಂದರ್ಧ ಲೀಟರ್‌ನಷ್ಟೇ ಆದರೂ ಚೇಷ್ಟೆಗೇನೂ ಕಮ್ಮಿ ಇರಲಿಲ್ಲ. ಪಾತ್ರೆಯ ಜೊತೆಗೆ ಮೆಲ್ಲನೆ ಬರುತ್ತಿದ್ದ ಅವ್ವನನ್ನು ದುರುಗುಟ್ಟಿ ನೋಡುತ್ತಿತ್ತು. ಅದರ ಕರುವನ್ನು ಮೊಲೆಯ ಹತ್ತಿರ ಬಿಟ್ಟಾಗ ಮುಖ ಅರಳುತ್ತಿತ್ತು. ತನ್ನ ಕರುವಿನ ಮೈಯನ್ನೆಲ್ಲಾ ಪ್ರೀತಿಯಿಂದ ನೆಕ್ಕುತ್ತಿತ್ತು. ಕರುವನ್ನು ಎಳೆದು ಪಕ್ಕದ ಗೂಟಕ್ಕೆ ಕಟ್ಟಿದಾಗ ಈ ಹಸುವಿನ ಕೋಪ ತಾರಕಕ್ಕೇರುತ್ತಿತ್ತು. ಅವ್ವ ಹಾಲು ಕರೆಯಲು ಶುರು ಮಾಡಿದರೆ ಸಾಕು, ತನ್ನ ಕುಚೇಷ್ಟೆ ಪ್ರಾರಂಭಿಸುತ್ತಿತ್ತು. ‘ನನ್ನ ಕರುವಿಗೆ ಹಾಲು ಇಲ್ಲದಂತೆ ಕರಕೊಳ್ಳುತ್ತಾರಲ್ಲಾ’ ಎಂದೇನೋ ಕಾಣೆ, ಪಟಪಟನೆ ಒದೆಯುತ್ತಿತ್ತು. ಆಗ ಅದರ ಕಾಟ ತಾಳಲಾರದೆ ಅಲ್ಲಿಂದಲೇ ಅವ್ವ ‘ಲೇ....ಯಾರಾರ ಬರ‍್ರೋ.. ಒದಿತಾಐತೆ, ಸೇರಿಸ್ಕತಾಯಿಲ್ಲ’ ಎಂದು ಜೋರಾಗಿ ಕೂಗಿ ನಮ್ಮನ್ನು ಕರೆಯುತ್ತಿದ್ದಳು. ‘ನೀನೋಗು...ನೀನೋಗು’ ಅಂತ ಹಜಾರದಲ್ಲಿ ಟಿ.ವಿ ನೋಡುತ್ತಿದ್ದ ನಾವು ಒಳಗೊಳಗೆ ತಿವಿದಾಡುತ್ತಿದ್ದೆವು. ಸಂಜೆಯಲ್ಲಿ ಅವ್ವ ಹಾಲು ಕರೆಯಲು ಹೋಗಿ ಪಜೀತಿಗೀಡಾದಾಗ ಯಾರೂ ಆಕೆಯ ಸಹಾಯಕ್ಕೆ ಹೋಗಲು ತಯಾರಿರುತ್ತಿರಲಿಲ್ಲ. ‘ಹಾಲ್ಮಾತ್ರ ಕುಡೀ
ಬೇಕೂಂತಿರಿ, ಮಜ್ಗೆ ಇಲ್ದೆ ಇದ್ರೆ ಊಟ ಸೇರಿಕಿಲ್ಲ, ವಸಿ ಹಸೀನಿಡ್ಕಳ್ರಿ ಅಂದ್ರೆ ಯಾರೂ ಬತ್ತಿಲ್ವಲ್ಲಾ ನೋಡ್ದಾ! ಈ ಹಾಳ್ ಟೀಬಿ ತಂದ್ಬುಟ್ಟಿ ಆಗೋ ಕೆಲ್ಸನುವೆ ಆಯ್ತಿಲ್ಲ, ಏನವ್ವ ಮಾಡನೆ....? ಸೊರಾ ಎಳ್ಕಬುಡ್ತುದೆ ಆಮೇಕೆ ಹಾಲ್ಕೊಡಿಕಿಲ್ಲ ನಿಮ್ ದಮ್ಮಯ್ಯಾ ಬರ‍್ರವ್ವಾ’ ಅಂತ ಗೋಗರೆದಾಗ ಅಕ್ಕಾನೋ ಅಥವಾ ನಾನೋ ಹೋಗಿ ಮೆಲ್ಲನೆ ಹಸುವಿನ ಮೂಗುದಾರ ಹಿಡಿದುಕೊಂಡು ಅದರ ಮುಖ ಸವರುತ್ತಾ ಎಷ್ಟೊತ್ತಿಗೆ ಹಾಲು ಕರೆದು ಮೇಲಕ್ಕೇಳುತ್ತಾಳೋಂತ ಕಾಯುತ್ತಿದ್ದೆವು. ಯಾಕೆಂದರೆ ಕಿವಿ ಟಿ.ವಿಯತ್ತ ನೆಟ್ಟಿರುತ್ತಿದ್ದವು. ‘ಸ್! ಹೋಗತ್ಲಾಗಿ. ಕರೀದೆ ಬುಟ್ಬುಟ್ರೂ ಸರೀಯೆ, ಈ ಹಸೀನಲ್ಲಿ ಹಾಲ್ಕರಿಯೋತ್ಗೆ ಮೂರ್ಲೋಕ ತುಂಬೋಯ್ತುದೆ’ ಅನ್ನುತ್ತಲೇ ಉಸಿರೊಯ್ದುಕೊಂಡು ಅವ್ವ ಮೇಲಕ್ಕೇಳೋಷ್ಟರಲ್ಲಿ ಮೂಗುದಾರ ಬಿಟ್ಟು, ಅದರ ಕರು ಬಿಚ್ಚಿ ಸರ‍್ರನೆ ಹಾರಿ ನಾವು ಟಿ.ವಿ ಮುಂದೆ ಮತ್ತೆ ಹಾಜರ್!

ಲಕ್ಷ್ಮಿಯಂತಿದ್ದ ಹಸುವಿನಲ್ಲಿ ಹಾಲು ಕರೆಯುವಾಗ ಮಾತ್ರ ಎಲ್ಲರೂ ನಿರಾಳ. ಅವ್ವ ಒಬ್ಬಳೇ ಹೋಗಿ, ಅದು ಕೊಟ್ಟಷ್ಟು ಹಾಲನ್ನು ಕರಕೊಂಡು ಬರುತ್ತಿದ್ದಳು. ಹಾಲನ್ನು ಸ್ವಲ್ಪವೇ ಕೊಡುತ್ತಿದ್ದರೂ ಸಹ ಒಂಚೂರು ಗಲಾಟೆ ಮಾಡುತ್ತಿರಲಿಲ್ಲ. ನೋಡಲು ದೊಡ್ಡ ರಾಸು. ತಿಳಿಯ ನೀಲಿಯದು ಮೈ ಬಣ್ಣ. ಮನೆಯ ಚಿಕ್ಕಪುಟ್ಟ ಮಕ್ಕಳೂ ಕೂಡಾ ಅದನ್ನು ಹಿಡಿದು ಆಚೆಯ ಗೊಂತಿಗೆ ಕಟ್ಟಬಹುದಿತ್ತು. ನಾವಾಗ ಚಿಕ್ಕವರು. ನಮ್ಮಣ್ಣನದು ಹಸುಗಳನ್ನು ಮೇಯಿಸುವ ಕೆಲಸ. ಹೀಗೆ ಒಂದು ದಿನ ಕಾವಲಿಗದ್ದೆಯ ಮೂಲೆಯಲ್ಲಿ ಹಸುಗಳನ್ನು ಮೇಯಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಲಕ್ಷ್ಮಿಯಂತಿದ್ದ ಹಸು ಗರಗರನೆ ಸುತ್ತಿ ಕೆಳಕ್ಕೆ ಬಿದ್ದುಕೊಂಡಿತಂತೆ! ಆಗ ಅಣ್ಣ ಒಬ್ಬನೆ ಇದ್ದುದರಿಂದ ಗದ್ದೆಯಲ್ಲಿದ್ದ ಅಣ್ಣಂದಿರನ್ನು ಜೋರಾಗಿ ಕೂಗುತ್ತಾ ಗಡಗಡನೆ ನಡುಗುತ್ತಿದ್ದನಂತೆ. ಅವರು ಓಡಿ ಬರುವಷ್ಟರಲ್ಲಿ ಹಸು ಪ್ರಾಣ ಕಳೆದುಕೊಂಡಿತಂತೆ! ಮಟಮಟ ಮಧ್ಯಾಹ್ನ ಹನ್ನೆರಡು ಗಂಟೆ ಆಗಿದ್ದಕ್ಕೆ ಒಂಥರಾ ಗಾಳಿಸೋಂಕು ಎಂದು ಎಲ್ಲರೂ ಮಾತಾಡಿಕೊಂಡು, ಹಸುವಿನ ಕಳೇಬರವನ್ನು ದೊಡ್ಡ ಕಾಲುವೆಯಲ್ಲಿ ಮುಳುಗಿಸಿ ಬಂದರು. ಎಲ್ಲರೂ ಆ ದಿನ ಅತ್ತಿದ್ದೇ ಅತ್ತಿದ್ದು. ಅಣ್ಣನಿಗಂತೂ ದುಃಖ ತಡೆಯಲಾಗಲಿಲ್ಲ. ಅದನ್ನು ಮರೆಯಲು ಆತನಿಗೆ ಬಹಳಷ್ಟು ದಿನಗಳು ಹಿಡಿಯಿತು. ಆದರೆ ನನಗಂತೂ ಇಂದಿಗೂ ಆ ಹಸುವಿನ ಚಿತ್ರ ಕಣ್ಣಿನಲ್ಲಿಯೇ ಕೂತಿದೆ. ಯಾವಾಗ ಬೇಕಾದರೂ ಅದರ ಆಕಾರ, ಗುಣಸ್ವಭಾವ ಜ್ಞಾಪಿಸಬಹುದು ಅಂತಹ ದೇವತಾಸ್ವರೂಪಿ ನಮ್ಮನೆ ಹಸು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT