ಹಂಪಿ– ಕಲ್ಯಾಣಗಳಿಗೆ ಹೊಸ ಕನ್ನಡಿ

7
ಪುಸ್ತಕ ವಿಮರ್ಶೆ

ಹಂಪಿ– ಕಲ್ಯಾಣಗಳಿಗೆ ಹೊಸ ಕನ್ನಡಿ

Published:
Updated:
Deccan Herald

ರಾಕ್ಷಸ–ತಂಗಡಿ
ಲೇ: ಗಿರೀಶ ಕಾರ್ನಾಡ
ಪು: 104; ಬೆ: ₹ 100
ಪ್ರ: ಮನೋಹರ ಗ್ರಂಥಮಾಲಾ, ಧಾರವಾಡ

ಪುರಾಣ, ಜಾನಪದ ಹಾಗೂ ಚಾರಿತ್ರಿಕ ಸಂಗತಿಗಳನ್ನು ರಂಗಕೃತಿಗಳ ಮೂಲಕ ಸಮಕಾಲೀನಗೊಳಿಸುವಲ್ಲಿ ಗಿರೀಶ ಕಾರ್ನಾಡರು ಸಿದ್ಧಹಸ್ತರು. ‘ಯಯಾತಿ’, ‘ತುಘಲಕ್‌’ ಅಥವಾ ‘ತಲೆದಂಡ’ ನಾಟಕಗಳ ಮಹತ್ವ ಇರುವುದು, ಅವುಗಳು ತಮ್ಮ ಕಾಲದ ಕಥೆ ಹೇಳುತ್ತಲೇ ಈ ಕಾಲಕ್ಕೂ ಸಲ್ಲುವುದರಲ್ಲಿ ಹಾಗೂ ನಾಟಕಗಳು ಕಾವ್ಯದ ಸೌಂದರ್ಯ ಒಳಗೊಂಡಿರುವುದರಲ್ಲಿ. ಒಲಿಸಿಕೊಂಡಂತೆಲ್ಲ ವಿಭಿನ್ನ ಅರ್ಥಗಳನ್ನು ಬಿಟ್ಟುಕೊಡುವ ಕಾವ್ಯದಂತೆ ಕಾರ್ನಾಡರ ನಾಟಕಗಳು ಪ್ರತಿ ಓದಿಗೂ ನೋಡುವಿಕೆಗೂ ಅರ್ಥಗಳನ್ನು ಬಿಟ್ಟುಕೊಡುವ ಗುಣವುಳ್ಳವು. ಪ್ರಸಕ್ತ ನಾಟಕ ‘ರಾಕ್ಷಸ–ತಂಗಡಿ’ ಗಮನಸೆಳೆಯುವುದು ಕೂಡ ತನ್ನ ಕಾವ್ಯಾಂಶದಿಂದಲೇ.

‘ರಾಕ್ಷಸ–ತಂಗಡಿ’ ನಾಟಕವನ್ನು ‘ತುಘಲಕ್‌’, ‘ತಲೆದಂಡ’ ಮತ್ತು ‘ಟಿಪೂ ಸುಲ್ತಾನ ಕಂಡ ಕನಸು’ ಸಾಲಿನಲ್ಲಿಟ್ಟು ನೋಡಲಿಕ್ಕೆ ಸ್ವತಃ ಕಾರ್ನಾಡರೇ ಒತ್ತಾಯಿಸುತ್ತಾರೆ. ಕಳೆದ ಸಾವಿರ ವರ್ಷಗಳ ಕರ್ನಾಟಕದ ಇತಿಹಾಸದಲ್ಲಿ ಮೂರು ಪ್ರಮುಖ ಘಟನೆಗಳನ್ನು ಅವರು ಗುರ್ತಿಸುತ್ತಾರೆ. ಹನ್ನೆರಡನೇ ಶತಮಾನದ ವಚನ ಕ್ರಾಂತಿ, ಹದಿನಾರನೇ ಶತಮಾನದ ವಿಜಯನಗರ ಯುಗ ಹಾಗೂ ಹದಿನೆಂಟನೇ ಶತಮಾನದ ಟಿಪೂ ಸುಲ್ತಾನನ ರಾಜಕಾರಣ – ಈ ಮೂರೂ ಯುಗಗಳನ್ನು ಕರ್ನಾಟಕ ಅಪೂರ್ವ ಸ್ವಂತಿಕೆ ಕಂಡ ಯುಗಗಳೆಂದೂ ಹಿಂಸೆಯಲ್ಲಿ ಕೊನೆಗೊಂಡ ಯುಗಗಳೆಂದೂ ಗುರ್ತಿಸುತ್ತಾರೆ. ‘ತಲೆದಂಡ’ ಹಾಗೂ ‘ಟಿಪೂ ಸುಲ್ತಾನ ಕಂಡ ಕನಸು’ ನಾಟಕಗಳ ಮೂಲಕ 12 ಹಾಗೂ 18ನೇ ಶತಮಾನಕ್ಕೆ ಸ್ಪಂದಿಸಿದ್ದ ಕಾರ್ನಾಡರು, ಈಗ ವಿಜಯನಗರದ ಕಥೆಯನ್ನು ‘ರಾಕ್ಷಸ–ತಂಗಡಿ’ಯಲ್ಲಿ ಹಿಡಿದಿಡುವ ಮೂಲಕ ನಾಟಕಕಾರನಾಗಿ ತಮಗೆ ಮುಖ್ಯವೆಂದು ಕಂಡ ಇತಿಹಾಸ ಚಕ್ರವೊಂದನ್ನು ಪೂರ್ಣಗೊಳಿಸಿದ್ದಾರೆ.

ಉಳಿದ ನಾಟಕಗಳಲ್ಲಿ ಇರುವಂತೆ ಕಳೆದ ಯುಗಗಳನ್ನು ಇಂದಿನ ಸಂದರ್ಭದಲ್ಲಿ ಅರ್ಥೈಸಿಕೊಳ್ಳುವ ಪ್ರಯತ್ನ ‘ರಾಕ್ಷಸ–ತಂಗಡಿ’ ನಾಟಕದಲ್ಲೂ ಇದೆಯಾದರೂ ‘ತುಘಲಕ್’ ಅಥವಾ ‘ತಲೆದಂಡ’ ನಾಟಕಗಳಷ್ಟು ತೀವ್ರತೆ ಪ್ರಸಕ್ತ ಕೃತಿಯಲ್ಲಿ ಕಾಣಿಸುವುದಿಲ್ಲ. ರಕ್ಕಸತಂಗಡಿ ಅಥವಾ ತಾಳೀಕೋಟೆ ಕದನವನ್ನು ‘ಹಿಂದೂ ಮುಸ್ಲಿಂ ಯುದ್ಧ’ ಎಂದು ಚಿತ್ರಿಸಿರುವ ಜನಪ್ರಿಯ ಇತಿಹಾಸದ ಮತ್ತೊಂದು ಮಗ್ಗುಲನ್ನು ಕಾಣುವ ಪ್ರಯತ್ನವೇ ‘ರಾಕ್ಷಸ–ತಂಗಡಿ’ ಕೃತಿಯಲ್ಲಿ ಮುಖ್ಯವಾಗಿದೆ. ಚರಿತ್ರಕಾರರು ಅಷ್ಟೇನೂ ಮುಖ್ಯವೆಂದು ಭಾವಿಸದ ಅಳಿಯ ರಾಮರಾಯನ ಮುತ್ಸದ್ದಿತನ, ಶೌರ್ಯಗಳ ಜೊತೆಜೊತೆಗೆ ತನ್ನ ವಂಶದ ಕುರಿತು ಅವನೊಳಗೆ ಇರುವ ಶ್ರೇಷ್ಠತೆಯ ವ್ಯಸನವನ್ನು ನಾಟಕ ಕಟ್ಟಿಕೊಡುತ್ತದೆ. ಹಿಂದೂ ಮುಸ್ಲಿಂ ಕದನಕ್ಕಿಂತಲೂ ಮಿಗಿಲಾಗಿ ಮಾನವೀಯ ಸಂಘರ್ಷದ ಕಥನವಾಗಿ ರೂಪುಗೊಂಡಿರುವುದು ಕಾರ್ನಾಡರ ನಾಟಕದ ವಿಶೇಷವಾಗಿದೆ.

ವಿಜಯನಗರ ಸಾಮ್ರಾಜ್ಯಕ್ಕೆ ಸಂಬಂಧಿಸಿದ ಈ ಕಥೆಯ ಕೇಂದ್ರದಲ್ಲಿ ಇರುವುದು ಹಂಪಿಯಲ್ಲ, ಕಲ್ಯಾಣ! ಬಿಜಾಪುರದ ಸುಲ್ತಾನ ಅಲಿ ಆದಿಲಶಹ ಕಲ್ಯಾಣದ ಕೋಟೆಯನ್ನು ಬಯಸುತ್ತಾನೆ. ಅದನ್ನು ಆದಿಲಶಹನಿಗಾಗಿ ರಾಮರಾಯ ಅಹಮದನಗರದ ಸುಲ್ತಾನ ನಿಝಾಮಶಹನಿಂದ ವಶಪಡಿಸಿಕೊಳ್ಳುತ್ತಾನೆ. ಈ ಯುದ್ಧದಲ್ಲಿ ಅಹಮದನಗರವನ್ನು ರಕ್ಷಿಸಲು ಬೀದರದಿಂದ ಬಂದ ಸೇನಾನಿ ಜಹಾಂಗೀರ ಖಾನನ ಶಿರಚ್ಛೇದವಾಗುತ್ತದೆ. ತನ್ನ ಕೋರಿಕೆಯ ಮೇರೆಗೆ ಬಂದ ವ್ಯಕ್ತಿ ತನ್ನ ಕಣ್ಣೆದುರೇ ಶಿರಚ್ಛೇದಕ್ಕೊಳಗಾದುದನ್ನು ನಿಝಾಮಶಹ ಅವಮಾನದಿಂದ, ಅಸಹಾಯಕತೆಯಿಂದ ನೋಡಬೇಕಾಗುತ್ತದೆ. ಈ ಘಟನೆ ತನ್ನ ಸಾಮ್ರಾಜ್ಯಕ್ಕೆ ಕಲಂಕವೆಂದು ಅವನು ಭಾವಿಸುತ್ತಾನೆ. ಜಹಾಂಗೀರಖಾನನ ಸಾವೇ ರಕ್ಕಸ–ತಂಗಡಿ ಯುದ್ಧಕ್ಕೆ ಬೀಜವಾಗುತ್ತದೆ.

ತಾಳೀಕೋಟೆ ಯುದ್ಧದ ಕೊನೆಗೆ ಜಹಾಂಗೀರಖಾನನ ಸ್ಥಾನದಲ್ಲಿ ರಾಮರಾಯ ನಿಲ್ಲುತ್ತಾನೆ. ರೂಮಿಖಾನನ ಸೆರೆಗೊಳಗಾಗಿ ನಿಝಾಮಶಹನ ಎದುರು ನಿಲ್ಲುತ್ತಾನೆ. ಇದು ನಾಟಕದ ಮಹತ್ವದ ಮುಖಾಮುಖಿ. ಬಂದಿಯಾದಾಗಲೂ ರಾಮರಾಯನೇನೂ ಹೆದರುವುದಿಲ್ಲ. ನಿಝಾಮಶಹ ಎರಡು ಸಲ ಸೋತು ಕೈದಿಯಾಗಿದ್ದಾಗ ತಾನು ಗೌರವದಿಂದ ಬಿಟ್ಟು ಕಳಿಸಿದ್ದನ್ನು ನೆನಪಿಸಿಕೊಳ್ಳುವ ಅವನು, ಅದೇ ಔದಾರ್ಯವನ್ನು ಎದುರಾಳಿಯಿಂದಲೂ ಬಯಸುತ್ತಾನೆ. ತನ್ನ ಮಾನಸ ಪುತ್ರ ಆದಿಲಶಹ ರಕ್ಷಿಸಬಹುದೆನ್ನುವ ನಿರೀಕ್ಷೆಯೂ ಅವನಿಗಿದೆ. ಆದರೆ, ನಿಝಾಮಶಹನ ಮನಸ್ಸಿನಲ್ಲಿ ಜಹಾಂಗೀರ ಖಾನನ ಶಿರಚ್ಛೇದದ ಅಪಮಾನವಿದೆ. ಆದಿಲಶಹನ ಕಣ್ಣೆದುರೇ ರಾಮರಾಯನ ತಲೆಯನ್ನು ರೂಮಿಖಾನ ಕತ್ತರಿಸುತ್ತಾನೆ. ಆದಿಲಶಹ ದಿಗ್ಭ್ರಮೆಯಿಂದ ನಿಲ್ಲುತ್ತಾನೆ.

ಗೆಲುವು ಸಾಧಿಸಿದ ನಿಝಾಮಶಹನಿಗೆ ಕೂಡ ಆನಂದವಿಲ್ಲ ಎನ್ನುವುದು ಹಾಗೂ ಯುದ್ಧದ ನಿರರ್ಥಕತೆಯನ್ನು ಸೂಚಿಸುವುದು ಕಾರ್ನಾಡರ ಕೃತಿಯ ಮಹತ್ವದ ಅಂಶ. ‘ಯುದ್ಧವನ್ನು ಸೋತು ಮಾನ ಕಳೆದುಕೊಂಡಿರುವ ರಾಮರಾಯರನ್ನ ಬಿಟ್ಟುಬಿಡೋದೇ ನಿಜವಾದ ಸೇಡಾಗಬಹುದೇನೋ’ ಎಂದು ನಿಝಾಮಶಹನಿಗೆ ಅನ್ನಿಸಿದರೂ ಜಹಾಂಗೀರಖಾನನ ಸಾವನ್ನು ಅವನಿಗೆ ಮರೆಯಲಾಗುವುದಿಲ್ಲ, ಹಕೀಮ ಮತ್ತು ರೂಮಿಖಾನನ ಒತ್ತಾಯಕ್ಕೆ ಮಣಿಯದಿರುವುದೂ ಸಾಧ್ಯವಾಗುವುದಿಲ್ಲ. ರಾಮರಾಯನ ಶಿರಚ್ಛೇದದೊಂದಿಗೆ ನಿಝಾಮಶಹ ಗೆಲುವು ಸಾಧಿಸಿದನೇ ಎಂದರೆ – ಅವನು ಕೂಡ ಸಾವಿನಂಚಿನಲ್ಲಿದ್ದಾನೆ. ‘ಇನ್ನೊಂದು ವಾರದಲ್ಲಿ ಸಾಯತೇನೋ, ಇನ್ನೊಂದು ತಿಂಗಳು ಬದುಕಿರತೇನೋ ನನಗೆ ಗೊತ್ತಿಲ್ಲ’ ಎಂದು ಶತ್ರುವಿನ ಎದುರು ತನ್ನ ಸಂಕಟ ಹೇಳಿಕೊಳ್ಳುತ್ತಾನೆ. ತಾನೇ ಸಾವಿನ ಅಂಚಿನಲ್ಲಿದ್ದರೂ ರಾಮರಾಯನ ಸಾವಿಗೆ ಹಸಿರುನಿಶಾನೆ ತೋರಿಸುತ್ತಾನೆ.

ಬಹುಶಃ, ಕಲ್ಯಾಣದ ಕದನದಲ್ಲಿ ರಾಮರಾಯ ಕೊಂಚ ಔದಾರ್ಯ ತೋರಿಸಿ ಜಹಾಂಗೀರಖಾನನನ್ನು ಕ್ಷಮಿಸಿದ್ದರೆ ವಿಜಯನಗರ ಸಾಮ್ರಾಜ್ಯದ ಇತಿಹಾಸ ಬೇರೆಯದೇ ಆಗುತ್ತಿತ್ತೇನೊ?

ನಿಝಾಮಶಹನ ಬೇಗಮ್ ‘ಬದುಕಲಿಕ್ಕೊಂದು ಭ್ರಾಂತಿ ಬೇಕಾಗಿರತದೆ. ಸುಲ್ತಾನರಿಗೂ ಇರತದೆ. ಪ್ರಜೆಗಳಿಗೂ ಇರತದೆ’ ಎಂದು ತನ್ನ ಗಂಡನನ್ನುದ್ದೇಶಿಸಿ ಹೇಳುತ್ತಾಳೆ. ರಾಮರಾಯನ ಪಾಲಿಗೆ ಕಲ್ಯಾಣ ಹಾಗೂ ಚಾಲುಕ್ಯ ಕುಲದ ಹಿರಿಮೆ ಭ್ರಾಂತಿಯಾದರೆ, ಸುಲ್ತಾನರಿಗೆ ಒಬ್ಬೊಬ್ಬರಿಗೆ ಒಂದೊಂದು ಮೋಹ: ಒಬ್ಬನಿಗೆ ಸಾಮ್ರಾಜ್ಯ–ಯುದ್ಧ, ಮತ್ತೊಬ್ಬನಿಗೆ ನೃತ್ಯ–ಸಂಗೀತ.

ಕಲ್ಯಾಣದ ಮೋಹ ರಾಮರಾಯನನ್ನು ಇನ್ನಿಲ್ಲದಂತೆ ಕಾಡುತ್ತದೆ. ನಾಲ್ವರು ಸುಲ್ತಾನರು ಒಟ್ಟಾಗಿ ದಂಡೆತ್ತಿ ಬರುವಾಗ, ಘಟಿಸಲಿರುವ ಯುದ್ಧ ತನ್ನ ಹಾಗೂ ತನ್ನ ವಂಶದ ಅಸ್ತಿತ್ವದ ಪ್ರಶ್ನೆಯಾಗಿ ಅವನಿಗೆ ಕಾಣಿಸುತ್ತದೆ. ‘ನಲವತ್ತೈದು ವರ್ಷ ಈ ಅಪಮಾನ ಚಿಟಗುಮುಳ್ಳಾಡಿಸುತಾ ಇದೆ. ಪ್ರತಿ ಕ್ಷಣ ಚುಚ್ಚುತಿದೆ. ಸಿಂಹಾಸನದ ಮೇಲೆ ತುಳುವ. ಬಡಿದಾಡಿ ಸಾಯಲಿಕ್ಕೆ ನಾನು ಅರವೀಡು ಬಂಟ. ಸಂಬಳಕ್ಕೆ ತಂದ ಹಾಗೆ ಅಳಿಯ’ ಎನ್ನುವ ಮಾತಿನಲ್ಲಿ ಅವನ ಅಂತರಂಗ ವ್ಯಕ್ತವಾಗುತ್ತದೆ. ‘ನಾಲ್ಕೂ ಸುಲ್ತಾನರು ಒಟ್ಟಾಗಿ ಬರೋದು, ಇದೊಂದು ಶಕುನ. ಹೌದು ಒಳ್ಳೆಯ ಶಕುನ. ಒಂದು ಹೊಸ ಯುಗ ಮೂಡತಿದೆ ನೋಡುತಿರಿ ಚಾಲುಕ್ಯ ಯುಗ!’ ಎನ್ನುವ ಮಾತೂ ‘ನಾನು ಬಡಿದಾಡತಿರೋದು ವಿಜಯನಗರಕ್ಕಾಗಿ ಅಲ್ಲ. ನಮ್ಮ ಅರವೀಡು ವಂಶಕ್ಕಾಗಿ. ಇಲ್ಲಿ ನಡೆಯಲಿರೋದು ನಮ್ಮ ಕುಲಧರ್ಮದ ಪರೀಕ್ಷೆ’ ಎನ್ನುವ ಮಾತೂ – ಯುದ್ಧಕ್ಕೆ ಮೊದಲೇ ವಿಜಯನಗರದ ಪತನವನ್ನು ಸೂಚಿಸುವಂತಿವೆ. ರಾಮರಾಯ ಗೆದ್ದಿದ್ದರೂ ಅದು ಕಲ್ಯಾಣದ ಪುನುರುತ್ಥಾನ ಆಗುತ್ತಿತ್ತೇ ಹೊರತು ವಿಜಯನಗರದ ಅಭ್ಯುದಯವಲ್ಲ ಎನ್ನುವ ಸಾಧ್ಯತೆಯನ್ನೂ ನಾಟಕದ ಓದು ಸೂಚಿಸುವಂತಿದೆ.

ಯುದ್ಧಭೂಮಿಯಲ್ಲಿ ತನ್ನ ಸೇನಾನಿಗಳು ಸೋತಾಗಲೂ ರಾಮರಾಯನ ವಿಶ್ವಾಸ ಕುಸಿಯುವುದಿಲ್ಲ. ‘ಬಂದೆ – ಕಲ್ಯಾಣ ಚಾಲುಕ್ಯ ಕುಲೋತ್ತಮ! ಸಾರ್ವಭೌಮ ಬಂದೆ’ ಎಂದು ಉತ್ಸಾಹ ತೋರುತ್ತಾನೆ.

ಕೃಷ್ಣಾ ನದಿಯ ಉದ್ದಕ್ಕೂ ರಕ್ತ ಹರಿದು ಯುದ್ಧವೇನೋ ಮುಗಿಯಿತು. ಕುಲಮದಗಳೆಲ್ಲ ಮಣ್ಣಾದವು. ಯುದ್ಧದಲ್ಲಿ ಗಾಯಗೊಂಡ ರಾಮರಾಯನ ಸೋದರ ತಿರುಮಲ, ಸಾಮ್ರಾಜ್ಯದ ಖಜಾನೆಯೊಂದಿಗೆ ಕೀಲುಗೊಂಬೆಯಂಥ ಚಕ್ರವರ್ತಿ ಸದಾಶಿವನನ್ನೂ ರಾಣಿವಾಸವನ್ನೂ ಪೆನುಕೊಂಡೆಗೆ ಸಾಗಿಸಲು ಮುಂದಾಗುತ್ತಾನೆ. ಆ ಸಂದರ್ಭದಲ್ಲಿ ಅವರಿಗೆ ಮುಖ್ಯವಾಗುವುದು ಸಂಪತ್ತೇ ಹೊರತು, ಸಂಬಂಧಗಳಲ್ಲ. ಪೆನುಕೊಂಡೆಗೆ ಬರುವುದಿಲ್ಲವೆಂದು ಹಟ ಹಿಡಿದ ಸದಾಶಿವರಾಯನನ್ನು ನರಸಿಂಹ – ‘ನೀನು ನಮಗೆ ಪೆನುಕೊಂಡೆಯಲ್ಲೂ ಬೇಕು. ಸಿಂಹಾಸನದ ಮೇಲೆ ಕುಂಡೆ ಊರಲಿಕ್ಕೆ. (ಕಹಿಯಾಗಿ) ರಾಜವಂಶ. ರಾಜವಂಶದ ಕೊಂಡಿ’ ಎಂದು ಹಗುರ ಮಾತನಾಡುತ್ತಾನೆ. ‘ಅರಮನೆಯ ಒಡವೆಗಳ ಜೊತೆಗೆ ಇನ್ನೊಂದು ಒಡವೆ ಇದು’ ಎನ್ನುತ್ತಾನೆ. ರಾಜಮಾತೆ ತೀರಿಕೊಂಡ ಸುದ್ದಿಗೆ,  ‘ಒಂದು ಗಂಟು ಕಡಿಮೆ ಆಯ್ತು ಪೆನುಕೊಂಡೆಗೆ ಹೊರಲಿಕ್ಕೆ’ ಎನ್ನುವ ಮಾತಿನಲ್ಲಿ, ಸಾಮ್ರಾಜ್ಯದ ಘನತೆಯಲ್ಲಿ ಸಂಬಂಧ–ಸಂಸ್ಕೃತಿಗಿಂತಲೂ ಬಂಗಾರ–ವಜ್ರ–ವೈಢೂರ್ಯಗಳ ಮೌಲ್ಯದ ತೂಕವೇ ಹೆಚ್ಚಾಗಿತ್ತೇನೋ ಅನ್ನಿಸುತ್ತದೆ.

‘ರಾಕ್ಷಸ–ತಂಗಡಿ’ ಕೃತಿ ಯುದ್ಧದ ನಿರರ್ಥಕತೆಯನ್ನೂ ಮತ–ಧರ್ಮಗಳ ಶ್ರೇಷ್ಠತೆಯ ಭ್ರಾಂತಿಯನ್ನೂ ಕಾವ್ಯದ ರೂಪದಲ್ಲಿ ಕಾಣಿಸಲು ಪ್ರಯತ್ನಿಸುತ್ತದೆ. ಸಮಕಾಲೀನ ಸಂದರ್ಭ ಕೂಡ ಇಂತಹುದೇ ಭ್ರಾಂತಿಯಲ್ಲಿ ಮುಳುಗಿದೆ ಎನ್ನುವುದು ಕಾರ್ನಾಡರ ನಾಟಕಕ್ಕೆ ಸಮಕಾಲೀನತೆಯನ್ನು ತಂದುಕೊಟ್ಟಿದೆಯೋ ಅಥವಾ ಈ ಸತ್ಯವನ್ನು ಹೇಳಲಿಕ್ಕಾಗಿಯೇ ಕಾರ್ನಾಡರು ವಿಜಯನಗರ ಸಾಮ್ರಾಜ್ಯದ ನಾಟಕವನ್ನು ಬರೆದರೋ ಎನ್ನುವುದನ್ನು ಬಿಡಿಸಿ ಹೇಳುವುದು ಕಷ್ಟ.

‘ತುಘಲಕ್’, ‘ತಲೆದಂಡ’ ನಾಟಕಗಳಿಗೆ ಹೋಲಿಸಿದರೆ ‘ರಾಕ್ಷಸ–ತಂಗಡಿ’ಯಲ್ಲಿ ಕಾರ್ನಾಡರು ಕಥೆ ಹೇಳುವುದಕ್ಕೆ ಹೆಚ್ಚು ಒತ್ತು ನೀಡಿದಂತೆ ಕಾಣಿಸುತ್ತದೆ. ಆದರೆ, ಅವರದೇ ಆದ ಭಾಷೆಯ ಮಾಯಕತೆ ಹಾಗೂ ಕಾವ್ಯಸ್ಪರ್ಶದಿಂದಾಗಿ ‘ರಾಕ್ಷಸ–ತಂಗಡಿ’ ಇತ್ತೀಚಿನ ಪ್ರಮುಖ ಕೃತಿಗಳ ಸಾಲಿಗೆ ಸೇರುತ್ತದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !