ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಬರೆ

Last Updated 8 ಡಿಸೆಂಬರ್ 2018, 19:45 IST
ಅಕ್ಷರ ಗಾತ್ರ

ಕಾಡೊಳಗಿನ ಊರು; ಊರೊಳಗಿನ ಕಾಡೆಂದರೂ ಉತ್ಪ್ರೇಕ್ಷೆ ಅನಿಸಲಾರದಷ್ಟು ದಟ್ಟವಾದ ಕಾಡು. ಸಮೃದ್ಧವಾದ ಸಂಪತ್ತು. ಆನೆ, ಹುಲಿ, ಕರಡಿ, ಕಡವೆ, ಕಾಡೆಮ್ಮೆಯಂತಹ ಕಾಡುಪ್ರಾಣಿಗಳನ್ನ ತನ್ನ ಮಡಿಲಲ್ಲೊದ್ದು ಮಲಗಿರುವ ಪೊನ್ನಾಚಿ ಶ್ರೀಮಲೆ ಮಹದೇಶ್ವರರ ಪುರಾಣಗಳಲ್ಲಿ ಬರುವ ಎಪ್ಪತ್ತೇಳು ಮಲೆಗಳಲ್ಲಿ ಒಂದು. ಶ್ರೀಗಂಧ, ತೇಗ, ಬೀಟೆ, ಬೆಜ್ಜಲೆ, ಸುರಹೊನ್ನೆಯಂತಹ ಗಜಗಾತ್ರದ ಮರಗಳು. ಸದಾ ಹೆಜ್ಜೇನು, ಕೋಲ್ಜೇನುಗಳನ್ನೊದ್ದು ಜಿನುಗುವ ಗೌಡನ್ಬರೆ, ಕೆಂಬರೆ, ನಾಮ್ದರೆ, ಕಡೆಬೋಳಿಯಂತಹ ಪರ್ವತ ಮಾದರಿ ಬೆಟ್ಟಗಳು.

ಕಾಡಿನೂರಿಗೆ ಕಾಲುಂಗುರ ತೊಡಿಸಿ ಹರಿಯುವ ಉಗನ್ಯ, ದೊಡ್ಡಬಳಪದ ಹೊಳೆಗಳು. ಸಾವಿರಾರು ಹಸು, ಕರುಗಳನ್ನ ಪೋಷಿಸುತ್ತಿರುವ ಬೆಜ್ಜಲಣೆ, ಪಂಚಲಣೆ, ಆಲಂಬಾಡಿ, ಗಾಣಂದಳ್ಳಿಯಂತಹ ದೊಡ್ಡಿಗಳು.ಮಾವು, ಹಲಸು, ನೆಲ್ಲಿ, ನೇರಳೆ, ಪೊಕಳದಣ್ಣು, ಬ್ಯಾಲದಣ್ಣು, ಹುಳಿಜಾಗಡಿಯಂತಹ ತರಹೇವಾರಿ ಹಣ್ಣುಗಳು. ಗೆಡ್ಡೆ- ಗೆಣಸು, ಸಸ್ಯ- ಗಿಡಮೂಲಿಕೆಗಳು. ಊರನ್ನು ಬಿಟ್ಟು ಕಾಡು; ಕಾಡನ್ನು ಬಿಟ್ಟು ಊರು ಬದುಕಲಾರದಷ್ಟು ಗಾಢವಾಗಿ ಬೆಸುಗೆ ಹಾಕಿಕೊಂಡಿವೆ.

‘ಅವ್ವಾ ದೊಡ್ಡಿಗೆ ಬುತ್ತಿ ಕಟ್ಬುಟ್ಯೆ?’

‘ಇಲ್ಲ ಕಾಣೀರಪ್ಪ ಇಷ್ಟೊತ್ತು ರಾಗಿ ಬೀಸಿದ್ದೆ ಆಗ್ಹೋಯ್ತು ಬೀಡಿ ಬೆಂಕಿಪೊಟ್ನ ಬೇರೆ ಇರ್ಲಿಲ್ಲ ನಿಮ್ಮಪ್ಪ ತರುಕ್ಹೋಗವ್ರೆ ಬರ್ಲಿ ಕಟ್ಬುಡ್ತೀನಿ’

‘ಏನೇನು ಕಟ್ಟಬೇಕೊ ಎಲ್ಲಾನು ಎತ್ಕೊಡವ್ವ ನಾನೇ ಕಟ್ಬುಡ್ತೀನಿ’

‘ಇಲ್ಲ ಹೋಗಪ್ಪ ನಾನ್ಕಟ್ತೀನಿ. ಅವ್ರೆಲ್ಲ ಇನ್ನೇನು ಬಂದ್ಬುಡ್ತಾರೆ. ಭಾಗ್ಯ ಒಳ್ಗೆ ಮುದ್ದೆ ಜಡಿತಾಳೆ. ನೀನ್ಹೋಗಿ ಊಟ ಮಾಡ್ಬುಡು’ ಇವರುಗಳು ದೊಡ್ಡಿಗ್ಹೋಗುವುದನ್ನ ನೆನ್ನೆ ದಿನ ಹೊತ್ತಿಗೊತ್ತಲೆ ಹೇಳಿಬಿಟ್ಟಿದ್ದಿದ್ದರೆ ರಾತ್ರಿಯೇ ಎಲ್ಲವನ್ನೂ ಕಟ್ಟಿಬಿಡಬಹುದಿತ್ತು. ಅದನ್ನ ಬಿಟ್ಟು ಎಲ್ಲಾ ಮಲಗುವ ಹೊತ್ತಿಗೆ ಬಂದು ಹೇಳ್ತಾರೆ’ ಅನ್ನುತ್ತಾ ಗೊಣಗಿಕೊಂಡು ಒಳಗ್ಹೋದ ರಾಮಣ್ಣ ಪುನಃ ಏನನ್ನೋ ನೆನಪಿಸಿಕೊಂಡವರಂತೆ ಹೊರಬಂದು ‘ಅವ್ವ, ರಾಗಿಕಲ್ಲಿನ ಮೂಲೆ ಮೇಲಿನ್ತೊಲೆಗೆ ಪ್ಲಾಸ್ಟಿಕ್ ಕವರ್ಗುಳ್ನ ತಗಲಾಕಿವ್ನಿ ತೆಗೆದುಕೊಳ್ಳಿ’ ಅಂದು ಒಳಗ್ಹೋದರು.

ಗಾಣಂದಳ್ಳಿ, ಪೊನ್ನಾಚಿಯಿಂದ ಸುಮಾರು ಒಂಬತ್ತು ಹತ್ತು ಮೈಲಿಯಷ್ಟು ದೂರದಲ್ಲಿರುವ ಕಾಡು. ಹಾಗಾಗಿ ಅದಾಗಲೇ ಕೋಟೆಮಾದಪ್ಪ, ಸಣ್ಣಪ್ಪಿ, ಮಾದಯ್ಯ ಮೂವರು ಬಂದು ಹಟ್ಟಿ ಜಗುಲಿಯ ಮೇಲೆ ಕುಳಿತಿದ್ದರು. ಊಟ ಮಾಡಿ ಹೊರಬಂದ ರಾಮಣ್ಣ ಪಡಸಾಲೆ ಕಣ್ಣಿಯ ಮೇಲಿದ್ದ ಬೆಡ್ಶಿಟ್ ಬಟ್ಟೆಯೊಂದನ್ನ ತೆಗೆದು ಹೆಗಲಿಗಾಕಿಕೊಂಡು ಸಣ್ಣಮ್ಮನವರು ಕೊಟ್ಟ ಬುತ್ತಿ ಹಾಗೂ ಭತ್ಯದ ಚೀಲಗಳನ್ನ ಹಿಡಿದು ನಾಲ್ವರೂ ಅಲ್ಲಿಂದ ಹೊರಟರು.

‘ಇದೇನ್ರಾಮಣ್ಣರೆ ಬೆಳ್ಬೆಳ್ಗ್ಯೆ ತಲೆ ಮೇಲೆ ಇಪಾಟೀಪಾಟಿ ಪೊಟ್ನಗುಳ್ನಿಟ್ಕುಂಡು ಎಲ್ಲಾ ಹಿಂಗ್ಹೋರ್ಟ್ಬುಟ್ಟಿದಿರಿ’. ಹಳೆ ಊರಿನ ಕಡಕಲು ದಾಟುವಾಗ ಪಕ್ಕದಲ್ಲಿದ್ದ ಹುಣಿಸೆ ಮರದ ಕೆಳಗೆ ಕುಳಿತಿದ್ದ ಶಂಕರಪ್ಪ ಕೇಳಿದ.

‘ಓ.. ಇದ್ಯಾರೋ ಅಂದ್ಕುಂಡಿದ್ದೆ ಕಾಣ್ಬಾ ಶಂಕ್ರ, ಎತ್ಗುಳ್ಹೊಡ್ಕುಂಡು ಬರುಕ್ಹೋಯ್ತಿದ್ವಿ ತಡಿ ಇನ್ಯಾಕ ನೇಗಿಲು ಕಟ್ಬುಟ್ರೆ ಹೋಗುಕಾಗ್ನಾರ್ದು ಹಂಗೆ ಮುಂದಿನ ತಿಂಗ್ಳು ಭತ್ಯನೂ ಕೊಟ್ಬುಟ್ಬಂದ್ಬುಡುಮ ಅಂದ್ಬುಟ್ಟು ಎಂತ್ಗುಂಡ್ಹೋಯ್ತಿದ್ವಿ. ನೀನೇನು ಒಬ್ನೆ ಹಗ್ಗ ಪಗ್ಗ ಪಾತ್ರೆ ಪಡ್ಗಗುಳ್ನೆಲ್ಲ ಹಿಂಗ್ಗುಡ್ಡೆ ಹಾಕುಂಡ್ಕುಂತಿದ್ದಾಯಿ?’

‘ನಾನೇಲ್ಗೋಗ್ಲಿ ಬಾ ಸಣ್ಣಪ್ಪರೆ ಕೆಂಬರೆಲಿ ಜೇನದೆ ಅಂತಿದ್ರು ಅದ್ಕೆ ತಡಿ ಹೋಗ್ಬರುಮ ಅಂದ್ಬುಟ್ಟು ಹೋಯ್ತಿದ್ದೆ’

‘ಇಪಾಟಿ ಮೋಡ ಮುಚ್ಗುಂಡದೆ ಅದ್ಹೆಂಗ್ಕಿತ್ತಾಯ? ಹುಳ್ಗುಳು ಎದ್ದವೆ?’ ಆಶ್ಚರ್ಯದಿಂದ ಕೋಟೆ ಮಾದಪ್ಪ ಕೇಳಿದರು.

‘ನಾವು ಅದಕ್ಕೆಲ್ಲ ರಡಿ ಮಾಡಿಟ್ಗುಂಡವಿ ಬುಡು ಪನ್ನಾಡಿ, ಬಡ್ಡಿಮಗ್ನೂವು ಅದ್ಯಾಕ ಎದ್ದೆಳುದಿಲ್ವೋ ನಾನು ನೋಡ್ಬುಡ್ತೀನಿ‘

‘ಯಾರಾದ್ರು ಬಂದರೇನು ಶಂಕ್ರ?’

‘ಇಲ್ಲ ಕಾಣ್ರಾಮಣ್ಣರೆ ನನ್ಗು ಯಾರು ಸಂಗ್ಡ ಇಲ್ವಲ್ಲ ಅಂದ್ಗುಂಡೇ ಕುಂತಿದ್ದೆ ಅಷ್ಟೊತ್ಗೆ ನೀವ್ಬಂದ್ರಿ ನೆಡ್ರಿ ನಾನು ಬತ್ತೀನಿ’

ದೊಡ್ಡಿ ಊರಿನ ಮಾದಪ್ಪ ಅವರ ಅತ್ತಿಗೆಯ ಜೊತೆಯಲ್ಲಿ ಅನೈತಿಕ ಸಂಬಂಧ ಇಟ್ಟುಕೊಂಡಿರುವುದು ಇಡಿ ಊರಿಗೇ ಗೊತ್ತಿರುವ ವಿಷಯ. ಹೀಗೆ ಒಂದು ದಿನ ಮಟಮಟ ಮಧ್ಯಾಹ್ನ ಅವರ ಅತ್ತಿಗೆಯ ಬಳಿಗ್ಹೋಗಿ ಬೇಲಿ ಹಾರಿಕೊಂಡು ಬರುವಾಗ ಅವನ ಹೆಂಡತಿ ಕೈಗೆ ಸಿಕ್ಕಿಬಿದ್ದು, ಈಚಲ ಪೊರಕೆ ತೆಗೆದುಕೊಂಡು ಹೊಡೆಯುತ್ತಿದ್ದುದ್ದನ್ನ ಊರೇ ನಿಂತುಕೊಂಡು ನೋಡುತ್ತಿದ್ದ ಪ್ರಸಂಗವನ್ನ ತುಂಬಾ ಹಾಸ್ಯಭರಿತವಾಗಿ ಸಣ್ಣಪ್ಪಿಯೂ.. ಕಾಡಿನ ವೈಶಿಷ್ಟ್ಯದ ಜೊತೆಗೆ ಜೇನು ಕೀಳುವಾಗಿನ ತಂತ್ರಗಾರಿಕೆಗಳನ್ನ ಕುತೂಹಲಕಾರಿಯಾಗಿ ಶಂಕರಪ್ಪನೂ.. ಹೇಳುವುದನ್ನ ದಾರಿಯುದ್ದಕ್ಕೂ ಕೇಳಿಸಿಕೊಂಡು ಮಧ್ಯಾಹ್ನ ಎರಡು, ಎರಡೂ ಮೂವತ್ತರ ಹೊತ್ತಿಗೆ ಕೆಂಬರೆ ಬಳಿಗೆ ಬಂದವರೆ, ಅದಾಗಲೇ ಊಟದ ಸಮಯವಾಗಿದ್ದರಿಂದ ಬೆಟ್ಟದ ಕೆಳಗಿನ ಹಳ್ಳದ ಕಲ್ಲುಗಳ ಮೇಲೆ ಬುತ್ತಿ ಬಿಚ್ಚಿಕೊಂಡು ಕುಳಿತರು.

‘ಬಾರ್ಲ ಶಂಕ್ರ ಊಟ ಮಾಡುಹೊತ್ಲಿ ನಿನ್ಯಾಕ ಬೀಡಿ ಕಚ್ಗುಂಡು ಕುಂತಿದ್ದಾಯಿ?’

‘ಇಲ್ಲ ನೀವು ಮಾಡ್ರಿ ರಾಮಣ್ಣ ನಾನು ಆಮೇಲ್ಮಾಡ್ತೀನಿ’.

‘ಹೀಗ್ಲೆ ಎರ್ಡ್ಗಂಟೆ ಮೇಲಾಗ್ಹೋಗದೆ ಇನ್ನೆಷ್ಟು ಹೊತ್ತಿಗ್ಮಾಡಾಯಿ ಬಾರ, ಬುತ್ತಿ ಗಿತ್ತಿ ತಂದಿದ್ದಾಯೋ..? ಇಲ್ವೋ..? ಇಲ್ಲಂದ್ರೆ ಪರ್ವಾಗಿಲ್ಲ ಬಾರ ನಾವೆ ಜಾಸ್ತಿ ತಂದವಿ’.

‘ಹಂಗಲ್ಲ ರಾಮಣ್ಣರೆ ತಿಂದ್ಬುಟ್ರೆ ಹತ್ತುಕಾಗನಾರ್ದು ಅದ್ಕೆ ನೀವು ಮಾಡ್ರಿ ನಾನು ಆಮೇಲ್ತಿಂತೀನಿ’. ಅಂದವನೆ ಕೈಲಿದ್ದ ಬೀಡಿಯನ್ನ ಸರಸರ ಅಂತ ಎಳೆದು ಕಲ್ಲಿಗೆ ಚಿವುಟಿ ತುಂಡನ್ನ ಕಿವಿಗೆ ಸಿಕ್ಕಿಸಿಕೊಂಡು ಹಳ್ಳದ ಮೇಲಿದ್ದ ಹಂಚಿ ಹುಲ್ಲನ್ನ ಕುಯ್ದು ಪಂಜಿನಂತೆ ಉದ್ದೂದ್ದವಾಗಿ ಸೂಟೆಗಳನ್ನ ಕಟ್ಟಿದ. ನಂತರ ಬಂದವನೆ ಶರಟು ಹಾಗೂ ಲುಂಗಿಯನ್ನ ಬಿಚ್ಚಿಟ್ಟು ಒಂದು ಪ್ಲಾಸ್ಟಿಕ್ ಕವರಿನಲ್ಲಿ ತುಂಬಿಕೊಂಡು ತಂದಿದ್ದ ಬೂದಿಯನ್ನ ಮುಖ ಮೂತಿ ಕೈಕಾಲುಗಳಿಗೆಲ್ಲ ಸವರಿಕೊಂಡು ಥೇಟ್‌ ಹಿಮಾಲಯದ ಅಘೋರಿಗಳಂತೆ ಹಗ್ಗ ಹಿಡಿದು ನಿಂತ.

ಬೆನ್ನು ಗೂನು ಮಾಡಿಕೊಂಡು ನೋಡಿದರೂ ಒಮ್ಮೆಗೇ ಕಾಣಿಸದಂತಹ ಕಡಿದಾದ ಬೆಟ್ಟ. ಪಟಪಟನೆ ರೆಕ್ಕೆ ಬಡಿದುಕೊಂಡು ಒಮ್ಮಿಂದೊಮ್ಮೆಲೆ ಎದ್ದು ಗಬಕ್ಕನೆ ಮತ್ತೊಂದು ಬರೆಗೆ ಅಂಟಿಕೊಳ್ಳುವ ಬಾವಲಿಗಳು. ಕೋಗಿಲೆಗಳ ನಿನಾದ, ಗೂಬೆಗಳ ಗುಕ್ಗುಕ್ ಸದ್ದು. ಝರಿಗಳ ಜುಳುಜುಳು, ಮರುಗ ಮರಳಿಯ ಘಮಲು, ನಡುವೆ ಗೆರಸಿಯಷ್ಟಗಲದ ಐದಾರು ಜೇನುಗಳು ಇಳಿಬಿದ್ದು ತೂಗುತ್ತಿವೆ.

‘ತ್ಮಾಮ ಬೇರೆ ಕಲ್ಗುಳು ಜಾರ್ತವೆ ಹುಷಾರು ಕಾಣ್ಶಂಕ್ರ’ ಕೆಳಗೆ ನಿಂತು ರಾಮಣ್ಣ ಕೂಗುತ್ತಿರುವುದು ತಡವಾಯ್ತೆಂಬಂತೆ ಹಗ್ಗವನ್ನ ಹೆಗಲಿಗಾಕಿಕೊಂಡು ದಾರ ಕಟ್ಟಿದ ಬಕೆಟ್ಟನ್ನ ಬೆನ್ನಿಂದೆ ಬಿಟ್ಟುಕೊಂಡವನೆ ಸೂಟೆಗಳನ್ನಿಡಿದು ಸರಸರ ಅಂತ ಕ್ಷಣಾರ್ಧದಲ್ಲಿ ಕೆಂಬರೆಯ ತುದಿಯಲ್ಲಿ ಬಂದು ನಿಂತ.

‘ಅಲ್ಲ ಕಾಣ್ಬಾವ ಅವನು ಅಲ್ಲಿ ನಿಂತಿರುದು ನೋಡಿದ್ರೇ ನಮ್ಗಿಲ್ಲಿ ಮೈ ಜುಮ್ಮಂತದೆ ಅಂತದ್ರಲ್ಲಿ ಅವ್ನು ಅಲ್ಲಿ ಹೆಂಗ್ನಿಂತಿದಾನೋ ಏನೋ ಪಾಳೇಗಾರ’

‘ಅದ್ಹೆಂಗೋ ಅದೇನು ಕತ್ಯೋ ಆ ದೇವ್ರೆ ಬಲ್ಲ ಕಾಣು ಹೋಗು ಸಣ್ಣಪ್ಪಿ’. ಬರೆಯ ಹಿಂಬದಿಯ ಕಲ್ಲೊಂದಕ್ಕೆ ಹಗ್ಗ ಬಿಗಿದು ಸೂಟೆ ಕಚ್ಚಿಕೊಂಡು ಇಳಿದವನು ಹತ್ತಾರು ಬಾರಿ ಹತ್ತಾರು ರೀತಿಯ ಸಾಹಸ ಮಾಡಿದನಾದರೂ ಒಂದೋ ಜೇನು ಕಟ್ಟಿದ ಭಾಗ ಸಿಗುತ್ತಿರಲಿಲ್ಲ, ಸಿಕ್ಕರೆ ಸುಡುವುದಕ್ಕೆ ಸರಿಯಾಗುತ್ತಿರಲಿಲ್ಲ. ಇಲ್ಲವೇ ಹಗ್ಗ ತೀರ ಕೆಳಗಿಳಿದುಬಿಟ್ಟಿರುತ್ತಿತ್ತು. ಎಷ್ಟೇ ಬಾರಿ ಸರಿಪಡಿಸಿ ಬಂದರೂ ಎರಡು ಸೂಟೆ ಉರಿದು ಬೂದಿಯಾಗಿದ್ದು ಬಿಟ್ಟರೆ ಬೇರೆ ಏನೂ ಆಗಲಿಲ್ಲ. ಇವನು ಮೇಲೆ ಹಗ್ಗ ಹಿಡಿದು ನೇತಾಡುವುದನ್ನ ನೋಡಿ ಅಲ್ಲಿ ಏನಾಗುತ್ತಿದೆಯೋ ಏನೋ ಅಂತ ಕೆಳಗೆ ನಿಂತವರಿಗೆ ಎಂಟು ಒಂಬತ್ತೆಲ್ಲ ತುಂಬಿ ಹೋಗಿತ್ತು.

ಇವರು ಕೂಗುವುದು ಅವನಿಗೆ ಕೇಳಿಸುತ್ತಿರಲಿಲ್ಲ. ಅವನು ಹೇಳುವುದು ಇವರಿಗೆ ಕೇಳಿಸುತ್ತಿರಲಿಲ್ಲ. ಜೇನೂ ಬೇಡ, ಏನೂ ಬೇಡ ಈ ಪುಣ್ಯಾತ್ಮನನ್ನ ಜೊತೆಯಲ್ಲಿ ಕರೆದುಕೊಂಡು ಬಂದ ತಪ್ಪಿಗೆ ಜೋಪಾನವಾಗಿ ಕೆಳಗಿಳಿದು ಬಂದುಬಿಟ್ಟರೆ ಸಾಕು ಅಂದುಕೊಳ್ಳುತ್ತ ದೇವಾನುದೇವತೆಗಳನ್ನೂ ನೆನಪು ಮಾಡಿಕೊಂಡುಬಿಟ್ಟರು. ಕೆಂಬರೆಯ ಎಡಭಾಗಕ್ಕೆ ಅಂಟಿಕೊಂಡಂತೆ ಬೆಳೆದಿದ್ದ ಬೀಟೆಯ ಮರವನ್ನ ತಬ್ಬಿಕೊಂಡು ಸರಸರ ಅಂತ ಜಾರುತ್ತ ಕೆಳಗಿಳಿದು ಬಂದ ಶಂಕರಪ್ಪ, ‘ನನ್ನ ಜೀವನದ್ಲಿ ಎಷ್ಟೊಂದ್ಜೇನು ಕಿತ್ತವ್ನಿ ನಾಮ್ದರೆ ಬೆಟ್ಟದಂತ ಬೆಟ್ಟವನ್ನೇ ಬುಡ್ಲಿಲ್ಲ. ಅಂತದ್ರಲ್ಲಿ ನನಗ್ಹಿಂಗೆ ಯಾವತ್ತೂ ಆಗಿರ್ಲಿಲ್ಲ ಕಾಣಣ್ಣ ಅಂದ’.

‘ಜೇನೂ ಬೇಡ, ಏನೂ ಬೇಡ ನಿನ್ಬಂದ್ಯಲ್ಲ ಅಷ್ಟು ಸಾಕು ಬಾ ಪುಣ್ಯಾತ್ಮ. ನೀನು ಹತ್ತುದು ಇಳ್ಯುದು ಮಾಡುದ್ನ ನೋಡಿ ನಾವಿಷ್ಟು ಸರ್ತಿ ಉಚ್ಚೆ ಊಯ್ದವಿ ಅಂತ ಲೆಕ್ಕ ಇಲ್ಲ’.

‘ಇಲ್ಲ ಕಾಣಣ್ಣ ಕಲ್ಲು ಸಂದೀಲಿ ಉಡ ಇದ್ದಿದ್ರೆ ಉಡದ ಬಾಲಕ್ಕೆ ಕಟ್ಬುಡ್ತಿದ್ದೆ. ಈ ಹಾಳಾದ ಫಾರಿಸ್ಟ್ನೂರು ಉಡಕ್ಕೆ ಕಟ್ಟಿದ್ರೆ ಬೈತಾರೆ ಅದ್ಕೆ ಕಲ್ಗೆ ಕಟ್ಟಿದ್ದೆ. ಹಂಗಾಗಿ ಅದೊಂದು ಕಡೆಗೆ ಇದೊಂದು ಕಡೆಗೆ ಆಗ್ಬುಡ್ತು ಸರಿ ಹೋಗ್ಲಿಲ್ಲ’.

‘ನಮ್ಗೆ ತಿನ್ನೂ ಅದೃಷ್ಟ ಇಲ್ಲ ಅನುಸ್ತದೆ. ಪಾಪ ನೀನಾದ್ರೂ ಏನು ಮಾಡಾಯಿ, ಇನ್ನೊಂದಿನ ಯಾವಾಗ್ಲಾದ್ರು ಕಿತ್ಕೊಡುವೆ ಬಾ’ ಅಂದು ದೊಡ್ಡಿಯ ಕಡೆಗ್ಹೊರಟರು. ಏನಾದರೂ ಕಥೆ-ಉಪಕಥೆಗಳನ್ನ ಹೇಳಿಕೊಂಡು ಸದಾ ತಮಾಷೆಯಾಗಿರುತ್ತಿದ್ದ ಶಂಕರಪ್ಪ ಅಂದು ಮಾಮೂಲಿನಂತಿರಲಿಲ್ಲ. ‘ಯಾವತ್ತೂ ಬರಿಗೈಲಿ ವಾಪಸ್‌ ಬಂದೂನಲ್ಲ. ಅಂತದ್ರಲ್ಲಿ ಬಡ್ಡಿ ಮಗಂದು ನನ್ಗೇ ಆಟ ಆಡುಸ್ಬುಡ್ತಲ್ಲ’ ಅಂದುಕೊಳ್ಳುತ್ತಾ ಐದತ್ತು ನಿಮಿಷಕ್ಕೊಂದೊಂದು ಬೀಡಿಯನ್ನ ಪುಕಪುಕ ಅಂತ ಸೇದೆಸೆಯುತ್ತ ಭಾರವಾದ ಹೆಜ್ಜೆ ಹಾಕಿದ.

‘ಪರ್ವಾಗಿಲ್ಲ ಕಾಣ್ಮಾದಯ್ಯ. ಹೋದ ಸರ್ತಿ ಬಂದಿದ್ದಾಗ ಮೇವಿಲ್ದೆ ಕಾಡೆಲ್ಲ ಹಂಗೇ ಬಣ್ಗುಡುದು ಈಗೊಳ್ಳೆ ಸೆಂದಾಗ್ಬಂದ್ಬುಟ್ಟದೆ’? ‘ಅಯ್ಯೋ ಆ ಕಣ್ಗೋಟ್ಲೆನ ಅದೇನಕೆ ಹೇಳಾಯಿ ಬುಡು ಪನ್ನಾಡಿ ಶಂಕ್ರಮಾವನ್ನ ಕೇಳಿನೋಡ್ರಿ ಹೊಟ್ಟೆಗೆ ಬೆಂಕಿ ಬಿದ್ದಂಗಾಗುದು ಇಡಿ ಕಾಡು ಸುತ್ತಾಕಿದ್ರೂ ಒಂದ್ಹಿಡಿ ಹುಲ್ಲು ಸಿಕ್ತಿರ್ಲಿಲ್ಲ ಈ ಸರ್ತಿ ಒಂದು ಕಷ್ಟ ಪಟ್ಟಾವಿ ಅಂದ್ರೆ ಹೇಳ್ಬಾರ್ದು’. ‘ಹೀಗೊಂದು ವಾರದ ಕೆಳ್ಗೆ ಒಂದು ದೊಡ್ಮಳೆ ಬರ್ಲಿಲ್ವೆ ರಾಮಣ್ಣರೆ?’

‘ಅದೆ ಕಾಣ್ಬಾವ ತಿಕ್ಕಲು ಶಿವನಮ್ಮನ ಮನೆ ಸೀಟ್ಗುಳು ಹಾರ್ಗುಂಡು ಹೊರಟ್ಹೋಗಿರ್ಲಿಲ್ವೆ, ಆ ಮಳೆ’. ಪಕ್ಕದಲ್ಲಿದ್ದ ಸಣ್ಣಪ್ಪಿ ನೆನಪು ಮಾಡಿದ.

‘ಹ್ಮೂ.. ಹ್ಮೂ.. ಹೇಳು ಆವತ್ತೆ ನಮ್ಮ ಎಮ್ಮೆ ಕೊಟ್ಗೆ ಮಂಚ್ಗ್ಯು ಬಿದ್ಹೋಗಿತ್ತು’.

‘ಆ ಮಳೆ ಬಿದ್ಮೇಲೆ ಸಿಕ್ತಿರೂದು ನೋಡ್ರಿ ಇದೆಲ್ಲ’ ಶಂಕರಪ್ಪ ಹೇಳಿದ. ಹೀಗೆ ಅದೂ ಇದು ಮಾತಾಡಿಕೊಂಡು ಗಾಣಂದಳ್ಳಿಗೆ ಬಂದವರೆ ಹಳ್ಳದಲ್ಲಿ ಕೈ, ಕಾಲು, ಮುಖ ತೊಳೆದುಕೊಂಡು ಸೊಣೆಗಳಲ್ಲಿ ನಿಂತಿದ್ದ ಕಟಿ ಕಟಿ ಅನ್ನುವ ನೀರನ್ನ ಕುಡಿದು ದಣಿವಾರಿಸಿಕೊಂಡು ರಂಗಪ್ಪನ ಗುಡಿಗ್ಹೋಗಿ ಕೈಮುಗಿದು ದೊಡ್ಡಿಗೆ ಬಂದರು.

‘ಹೊತ್ತು ಮುಳ್ಗುಕ್ಬಂತು ದನ್ಗುಳಿನ್ನು ಬರ್ಲೆ ಇಲ್ವಲ್ಲ ಮಾದಯ್ಯ?’ ಸಂಜೆಯಾದರೂ ದನಗಳು ದೊಡ್ಡಿಗೆ ಬರದೆ ಇರುವುದನ್ನ ನೋಡಿ ರಾಮಣ್ಣ ಕೇಳಿದರು.

‘ಎಲ್ಲೋ ಮೇವ್ಗೀವು ಸೆಂದಗಿತ್ತೇನೋ ಬುಟ್ಗುಂಡಿರ್ಬೇಕು ಬತ್ತಾರೆ ಬಾ ಪನ್ನಾಡಿ’. ಸರಿ ಬುಡು ಅಂದು ಸಣ್ಣಪ್ಪಿ ಕೊಟ್ಟ ಟೀ ಕುಡಿಯುತ್ತ ಎಲ್ಲರೂ ಬೆಜ್ಜಲೆ ಮರದ ಕಲ್ಲಿನ ಮೇಲೆ ಕುಳಿತಿರುವಾಗಲೇ ಬಸವ ದನಗಳನ್ನ ಕೂಗಿಕೊಂಡು ಬಂದ.

‘ಏನ್ಬಸ್ವ ಸೆಂದಗಿದ್ದಾಯೆ?’

‘ಹ್ಮೂ ಕಾಣಣ್ಣ ಸೆಂದಗವ್ನಿ. ನೀವು ಎಷ್ಟ್ಹೊತ್ಲಿ ಬಂದ್ರಿ?’

‘ನಾವು ಈಗೊಂದು ಸ್ವಲ್ಪೊತ್ಲಿ ಬಂದ ಬಾ ಬಸ್ವ. ಯಾಕಿಷ್ಟೋತ್ತು?’

‘ಹಾಳಾದ ಕಿರ್ಬ ಕಾಣಣ್ಣ. ಆ ಹಳ್ಳದ ಕೆಳ್ಗೆ ಹಗ್ಗು ಮೇಯಿಸ್ಕುಂಡು ನಿಂತವ್ನಿ, ಅದೆಲ್ಲಿತ್ತೋ ಏನೋ ಬಂದಿ ದನ್ಗುಳ್ಮಧ್ಯಕ್ಕೆ ನುಗ್ಬುಡ್ತು’.

‘ಆಮೇಲೆ..!?’ ಸ್ವಲ್ಪ ಗಾಬರಿಯಿಂದ ರಾಮಣ್ಣ ಕೇಳಿದರು.

‘ಅದೃಷ್ಟಕ್ಕೆ ಭೇರ್ಮಾವ ಬೈಲ್ಗಡೆಗೆ ಅಂದ್ಬುಟ್ಟು ಮೇಲ್ಹೋಗಿತ್ತು, ಅಲ್ಲೆ ನಿಂತ್ಗುಂಡು ಬೋರಿಕ್ತು. ನೋಡು ಹಂಗೆ ಹಳ್ಳದ ಮೇಲಿಂದ ಇಳ್ಗಿ ಹೊಂಟೋಯ್ತು’.

‘ಯಾವ್ಕು ಏನು ಮಾಡ್ಲಿಲ್ವೆ?’ ‘ಅದು ಬಂದ ಏಟ್ಗೆ ಎಲ್ಲಾ ಚೆಲ್ಲಾಂಪಿಲ್ಲಿ ಆಗೋದ. ಪಾಪ, ಅದೊಂದು ಮುದಿ ಹಸ ಗೌರಿ ಸಿಕ್ಬುಡ್ತು ಮೊಡ್ಲುತಾವೊಂದು ಸ್ವಲ್ಪ ಬಾಯಾಕ್ಬುಟ್ಟದೆ’.
ಜಾಸ್ತಿ ಗಾಯ ಆಗ್ಬುಟ್ಟಿದ್ದಾತೆ ಅನ್ನುತ್ತಾ ಟೀ ಲೋಟವನ್ನ ಅಲ್ಲೆ ಕಲ್ಲಿನ ಮೇಲಿಟ್ಟು ಹೋಗಿ ನೋಡಿದ ರಾಮಣ್ಣ, ‘ಹಾಳಾದುವು ಸ್ವಲ್ಪ ದಿನ ಇವ್ಗುಳ್ಪಡೆ ಅಡಗ್ಹೋಗಿತ್ತು, ಈಗ ಮತ್ತೆ ಸುರ್ಮಾಡ್ಕುಂಡ್ವೆ’ ಅನ್ನುತ್ತಾ ಅಲ್ಲೆ ಬೆಜ್ಜಲೆ ಮರಕ್ಕೆ ನೇತು ಹಾಕಿದ್ದ ಪಿನಾಯಿಲ್ ಬಾಟಲಿಯನ್ನ ತಂದು ಬಾಲ ಎತ್ತಿ ಗಾಯವಾಗಿದ್ದ ಭಾಗಕ್ಕೆಲ್ಲ ಹಚ್ಚಿದರು.

ನಡೆದು ಬಂದು ಸುಸ್ತಾಗಿದ್ದರಿಂದ ಎಲ್ಲರಿಗೂ ಹಾಸಿಗೆಯ ಮೇಲೆ ತಲೆಯೂರಿದರೆ ಸಾಕು ಅನ್ನುವಂತಾಗಿತ್ತು. ಹಾಗಾಗಿ ಬೇಗ ಊಟ ಮಾಡಿ ಮಲಗಿಬಿಡಬೇಕು ಅಂದುಕೊಂಡವರೆ ಮುದ್ದೆ, ಅದಕ್ಕೆ ಹಾಲು ಬಿಟ್ಟ ಸೀಗೆಸೊಪ್ಪಿನ ಉದುಕ ಮಾಡಿ ತಿಂದು ಮಲಗಿದರು. ಸುಮಾರು ಒಂದೆರಡು ಗಂಟೆಯಾಗಿದ್ದಿರಬಹುದು ದನಗಳು ‘ಅಂಬಾ... ಅಂಬಾ...’ ಅಂತ ಒಂದೇ ಸಮನೆ ಕೂಗುತ್ತ ಅತ್ತಿಂದಿತ್ತ ಇತ್ತಿಂದತ್ತ ಗುಡುಗಾಡುತ್ತಿದ್ದಾವೆ!?

‘ಯಾಕ್ದನ್ಗುಳೀವತ್ತು ಹಿಂಗಾಡ್ತಿದ್ದವಲ್ಲ ಹಾಳಾದ್ಕಿರ್ಬ ಏನಾದ್ರು ಮತ್ತೆ ಬಂದಿ ನುಗ್ಗಿಗ್ಬುಟ್ಟಿರ್ಬೇಯ್ದೆ?’ ಮರದ ಅಟ್ಟಣೆಯ ಮೇಲೆ ಮಲಗಿದ್ದ ರಾಮಣ್ಣ ಗಬಕ್ಕನೆ ಎದ್ದು ಕುಳಿತರು. ತಕ್ಷಣಕ್ಕೆ ಏನನ್ನೋ ನೆನಪಿಸಿಕೊಂಡವರಂತೆ ‘ಶಂಕ್ರ, ಓ... ಶಂಕ್ರ’ ಅಂತ ಜೋರಾಗಿ ಕೂಗತೊಡಗಿದರು. ತಡ್ಯಪ್ಪ ಕೂಗುವುದನ್ನ ಕೇಳಿಸಿಕೊಂಡು ಮೇಲಕ್ಕೆ ಹತ್ತಿ ಬಿಟ್ಟರೆ ಏನು ಮಾಡುವುದು ಅಂದುಕೊಂಡವರೆ ‘ದನ್ಗುಳು ನೋಡಿದ್ರೆ ಅಷ್ಟೊಂದು ಓಡಾಡ್ತಿದ್ದಾವೆ ಈ ಹಾಳಾದ ಶಂಕ್ರ ಎಲ್ಗೋದ ‘ಶಂಕ್ರ, ಓ.. ಶಂಕ್ರ’ ಅಂತ ಮತ್ತೆ ಸ್ವಲ್ಪ ಸಣ್ಣ ಧ್ವನಿಯಲ್ಲಿ ಗಂಟಲು ಬಿಗಿ ಹಿಡಿದು ಕೂಗಿದರು. ಆ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ.

‘ಈ ಪುಣ್ಯಾತ್ಮನ್ಬಂದಿ ಮೇಲೆ ಮಲಗಪ್ಪ ಅಂದ್ರೂ ಕೇಳಲಿಲ್ಲ, ನನ್ಗೆ ನಿದ್ರೆ ಬನ್ನಾರ್ದು ಅಂದ್ಬುಟ್ಟು ಅರೆಮೇಲೆ ಮಲ್ಕುಂಡ ಅವನನ್ನೇನಾದರೂ..!?’ ರಾಮಣ್ಣನಿಗೆ ಊಹಿಸಿಕೊಳ್ಳುವುದಕ್ಕೂ ಆಗದೆ ಮೈ ಎಲ್ಲಾ ಬೆವೆತು ನಡುಗಲಾರಂಭಿಸಿತು. ‘ಸಣ್ಣಪ್ಪಿ... ಸಣ್ಣಪ್ಪಿ...’ ಪಕ್ಕದಲ್ಲಿ ಮಲಗಿದ್ದ ಸಣ್ಣಪ್ಪಿಯನ್ನ ಕೂಗಿದರಾದರೂ ಇದು ಯಾವುದರ ಅರಿವೇ ಇಲ್ಲದಂತೆ ಗೊರಕೆ ಹೊಡೆದುಕೊಂಡು ಮಲಗಿದ್ದ ಸಣ್ಣಪ್ಪಿ ಕನಸಿನಲ್ಲಿ ಕೇಳಿಸಿಕೊಂಡವನಂತೆ ಮಗ್ಗಲು ಬದಲಿಸಿ ಮಲಗಿದ. ಮೊದಲೇ ಭಯದಲ್ಲಿದ್ದ ರಾಮಣ್ಣ ಎಚ್ಚರ ಪಚ್ಚರವಿಲ್ಲದೆ ಮಲಗಿದ್ದ ಸಣ್ಣಪ್ಪಿಯ ತೋಳಿನ ಮೇಲೆ ಕೈ ಇಟ್ಟು ಜೋರಾಗಿ ಅಲುಗಾಡಿಸಿದರು.

‘ಯಾಕ್ಭಾವ, ಯಾಕ್ಭಾವ ಏನಾಯ್ತು?’ ಗಾಬರಿಯಿಂದ ಮೇಲೆದ್ದು ಕಣ್ಣು ಉಜ್ಜಿಕೊಳ್ಳುತ್ತ ಅರ್ಧಂಬರ್ಧ ಕಣ್ಣು ಬಿಟ್ಟುಕೊಂಡು ಕೇಳಿದ.

‘ಯಾಕೋ ದನ್ಗುಳು ಸಿಕ್ಕಾಪಟ್ಟೆ ಗುಡುಗುನಾಡ್ತಿದವೆ ಕಾಣ್ ಸಣ್ಣಪ್ಪಿ, ಕಿರ್ಬಗಿರ್ಬ ಏನಾದ್ರು ಬಂದ್ಬುಟ್ಟಿದ್ದತ್ತೇನೋ? ಈ ಹಾಳಾದ ಶಂಕ್ರ ಬೇರೆ ಕೆಳಗೆ ಮಲ್ಕುಂಡವ್ನೆ ಕೂಗಿದ್ರೂ ಸದ್ದುಸುಳ್ವೆ ಇಲ್ಲ ಇವತ್ಗೀವತ್ಗೆ ಬಸ್ವ, ಮಾದಯ್ಯ ಇಬ್ರು ಕೋಟೆಮಾದ್ಭಾವರ ದೊಡ್ಡಿಗ್ಹೋಗ್ಬುಟ್ಟವ್ರೆ’. ವಿಷಯ ಕೇಳುತ್ತಿದ್ದಂತೆ ಕಣ್ಣಿಗಂಟಿದ್ದ ನಿದ್ರೆಯಲ್ಲ ಹಾಗೇ ಇಳಿದು ಹೋಗಿ ‘ಹೌದೆ, ತಡಿ’ ಅಂದು ಜೋರಾಗಿ ಕೂಗಲೋದವನನ್ನ ತಡೆದು ‘ಕೂಗ್ಬೇಡ ಸುಮ್ನಿರು ಸಣ್ಣಪ್ಪಿ ಆಮೇಲೆ ಮೇಲ್ಗೀಲ್ಬಂದ್ಬುಟ್ಟಾತು’. ‘ಸರಿ, ತಡಿ ಭಾವ ಹಂಗಾದ್ರೆ ಈ ಕಡೆಯಿಂದ ಕಡ್ಡಿಗೀರ್ನೋಡ್ತೀನಿ’.

‘ಹುಷಾರು ಕಾಣ್ ಸಣ್ಣಪ್ಪಿ ಇಲ್ಲಂದ್ರೆ ಸುಮ್ನಿದ್ಬುಡು ಆಮೇಲ್ನೋಡುಮ.’ ‘ಏನು ಆಗ್ನಾರ್ದು ಸುಮ್ನಿರು ಭಾವ, ದನ್ಗುಳು ಸುಮ್ನಾಗ್ಬುಟ್ಟವೆ ಹೋಗ್ಬುಟ್ಟಿರ್ಬೇಯ್ದು’.

‘ಮಂತೆ ಈ ಹಾಳಾದ್ಶಂಕ್ರ ಯಾಕ ಏನು ಮಾತಾಡ್ತಿಲ್ವಲ್ಲ?’

‘ತಡಿ ಅವ್ನು ಭಯಕ್ಕೆ ಯಾವ್ದಾದ್ರು ಮರ ಹತ್ಗಿತ್ತಿ ಕುಂತಿರ್ಬೇಯ್ದು ನೋಡುಮ’ ಅಂದು ಅಟ್ಟಣೆಯ ಹಿಂಭಾಗದಿಂದ ಕಡ್ಡಿಗೀರಿ ಅರೆಯತ್ತ ನೋಡಿದ ಕಾಣಿಸಲಿಲ್ಲ! ಹಿಂದೆಯೇ ಮತ್ತೆರಡು ಕಡ್ಡಿಯನ್ನ ಜೊತೆ ಮಾಡಿ ಗೀರಿ ನೋಡಿದ ಇರಲಿಲ್ಲ. ‘ಶಂಕ್ರ ಇಲ್ವಲ್ಲ ಭಾವ’ ಅನ್ನುತ್ತಿದ್ದಂತೆಯೇ ‘ಓ, ಕಿರ್ಬ ಬಂದಿ ಇವನ್ನೇ ಎತ್ಗುಂಡು ಹೋಗ್ಬುಟ್ಟಿರ್ಬೇಯ್ದು ಕಾಣ್ ಸಣ್ಣಪ್ಪಿ’. ಹತ್ತು, ಹದಿನೈದು ವರ್ಷಗಳ ಹಿಂದೆ ಹೀಗೆ ದೊಡ್ಡಿಯಲ್ಲಿ ಹೊರಗಡೆ ಮಲಗಿದ್ದ ರಾಮೇಗೌಡನಹಳ್ಳಿ ಬೋಳಯ್ಯನನ್ನ ಕಿರುಬ ಎತ್ತಿಕೊಂಡು ಹೋಗಿ ತಿಂದು ಹಾಕಿದ ಘಟನೆಯ ನೆನಪಾಗಿ ಭಯದಿಂದ ರಾಮಣ್ಣ ಹೇಳಿದರು.

‘ಹಂಗೇನು ಆಗಿರ್ನಾರ್ದು ಸುಮ್ನಿರ್ಭಾವ’. ‘ಇತ್ಲಿಂದ್ವೆ ಕಡ್ಡಿಗೀರು ಸಣ್ಣಪ್ಪಿ ನೋಡುಮ? ನಮ್ಮ ದೊಡ್ಡಿ ಬೇರೆ, ಏನಾದರೂ ಆದ್ರೆ ನಮ್ಮ ಮೇಲೆಯೇ ಬರುತ್ತದೆ’ ಅಂದು ಗಟ್ಟಿ ಧೈರ್ಯ ಮಾಡಿ ರಾಮಣ್ಣ ಹೇಳಿದರು.

‘ಸರಿ ತಡಿ ಅದೇನಾಗ್ಬುಟ್ಟಾತೋ ನೋಡ್ಬುಡುಮ’ ಅಂದು ಕಡ್ಡಿ ಗೀರುತಿದ್ದಂತೆಯೇ ಏನನ್ನೋ ತಿನ್ನುತ್ತ ನಿಂತಿದ್ದ ಕಿರುಬ ಎಳೆದುಕೊಂಡು ಓಡತೊಡಗಿತ್ತು. ನಂತರ ಕೆಳಗಿಳಿದು ಬಂದವರು ದನಕರುಗಳ ಕಥೆ ಏನಾದರೂ ಆಗಿರಲಿ ಮೊದಲು ಈ ಪುಣ್ಯಾತ್ಮ ಸಿಕ್ಕರೆ ಸಾಕು ಅಂದುಕೊಂಡು ಅಕ್ಕಪಕ್ಕದಲೆಲ್ಲ ನೋಡಿದರಾದರೂ ಅವನು ಸಿಗಲೇ ಇಲ್ಲ. ಅಷ್ಟೊತ್ತಿಗೆ ಇವರು ಕೂಗಾಡುತ್ತಿರುವ ಶಬ್ದ ಕೇಳಿಸಿಕೊಂಡು ಪಕ್ಕದ ದೊಡ್ಡಿಯಲ್ಲಿ ಮಲಗಿದ್ದವರು ಎದ್ದು ಬಂದು ಸುತ್ತಮುತ್ತಲೆಲ್ಲ ಹುಡಕಾಡಿದರಾದರೂ ಶಂಕರಪ್ಪನ ಸಣ್ಣ ಸುಳಿವೂ ಸಿಗಲಿಲ್ಲ.

‘ಇದೇನ್ಭಾಮೈದ ಹಿಂಗಾಗ್ಹೋಯ್ತು? ದೊಡ್ಡಿ ತುಂಬಾ ಇಷ್ಟೊಂದು ರಕ್ತ ಚೆಲ್ಲಿರುದ್ನೋಡಿದ್ರೆ ಅವನ್ನ ಕಿರ್ಬ ತಿಂದ್ಬುಟ್ಟದೆ ಅನುಸ್ತದೆ, ಬುಟ್ಟಿರ್ನಾರ್ದು’ ಕೋಟೆಮಾದಪ್ಪ ಹೇಳಿದರು. ‘ನನ್ಗು ಹಂಗೆ ಅನುಸ್ತದೆ ಕಾಣ್ಭಾವ ಇಲ್ಲಂದಿದ್ರೆ ಈ ಕಾಡ್ಲಿ ಅವನೆಲ್ಗೋಗ್ಬೇಕು ಹೇಳು?’

‘ಈ ಹಾಳಾದುನು ನಮ್ಗೇ ಬಂದಿ ಎಲ್ಲಿ ಗಂಟ್ಬಿದ್ನೋ ಏನೋ ಇಲ್ಲಂದಿದ್ರೆ ನಮ್ಪಾಡ್ಗೆ ನಾವು ಬಂದಿ ಹೋಗ್ಬುಡ್ಬೇಯ್ದಿತ್ತು’.

‘ಏನು ಮಾಡುಕಾಗ್ನಾರ್ದು ಮಾದಯ್ಯ, ಬಸ್ವ, ಭೇರ ಎಲ್ಲರೂ ಇಲ್ಲೆ ಅವ್ರೆ, ಅವ್ರೂ ನೋಡವ್ರೆ ಇಲ್ಲಿ ಏನು ನಡ್ದದೆ ಅಂತ. ಅವರ ದೈವದುರ್ಗೆ ಅವ್ರೆ ಹೇಳ್ತಾರೆ ಬುಡು’

‘ಸರಿ ಕಾಣ್ಬಸ್ವ ಇನ್ನೇನು ಬೆಳ್ಕರ್ಯು ಹೊತ್ತು ನಿಮ್ಮಣ್ಣ ಇಲ್ಲೆ ಇರ್ಲಿ ನೀನು ಹೊತ್ಗೊತ್ಲೆ ಹೋಗ್ಬುಟ್ಟು ನಿಮ್ಮ ಸೋಲಿಗರ ಪೈಕಿಲಿ ಮುಖ್ಯವಾದುರ್ನ ಕಂಡಿ ನಡ್ದಿದ್ನೆಲ್ಲ ಹೇಳಿ ಸುದ್ದಿ ಮುಟ್ಟಿಸ್ಬುಡು’.

ಆಗ ತಾನೇ ಮೋಡಗಳು ಹರಿದು ಮಂದವಾದ ಬೆಳಕು ಭೂಮಿಯತ್ತ ಬೀಳುತ್ತಿತ್ತು. ತಲೆಮೇಲೆ ಕೈಹೊತ್ತು ಒಬ್ಬರ ಮುಖವನ್ನ ಒಬ್ಬರು ನೋಡಿಕೊಂಡು ಕುಳಿತಿದ್ದವರು ತಡಬಡಾಯಿಸಿ ಎದ್ದುನಿಂತು ಗರಬಡಿದವರಂತೆ ನೋಡುತ್ತಿದ್ದಾರೆ. ಎಲ್ಲರಿಗೂ ಪರಮಾಶ್ಚರ್ಯ, ಏನೋ ಒಂದು ಕಂಟಕ ಕಳೆದುಹೋದ ನಿರಾಳತೆ, ಆಕಾಶ ನೋಡಿಕೊಂಡು ಕೈ ಮುಗಿಯುತ್ತಿದ್ದಾರೆ. ಎದುರಿಗೆ ಹಗ್ಗವನ್ನ ಭುಜದ ಮೇಲ್ಹಾಕಿಕೊಂಡು ಶಂಕರಪ್ಪ ಜೇನು ತುಂಬಿದ ಬಕೆಟ್ ಹಿಡಿದು ನಗು ನಗುತ್ತಾ ಬರುತ್ತಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT