ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಧ್ಯಮ ಪಥ್ಯ ಯಾಕೆ? ಹೇಗೆ?

Last Updated 2 ಫೆಬ್ರುವರಿ 2019, 19:45 IST
ಅಕ್ಷರ ಗಾತ್ರ

ವಿದೇಶದಲ್ಲಿ ಇರುವವರೊಂದಿಗೆ ಮೊಬೈಲ್ ಗೇಮ್ ಆಡುವ ರೋಮಾಂಚನ, ಇನ್ನೊಂದು ವಿಡಿಯೊ ನೋಡಿಬಿಡೋಣ ಎನ್ನುವ ಸೆಳೆತ, ಕಳುಹಿಸಿದ ಸಂದೇಶಕ್ಕೆ ಪ್ರತಿಯಾಗಿ ಬರುವ ಉತ್ತರಕ್ಕಾಗಿ ಹಾತೊರೆಯುವ ಭಾವ, ಪೋಷಕರು ಮೊಬೈಲ್ ಕೆಳಗಿಡುವುದನ್ನೇ ಕಾದು, ಕದ್ದು ಸ್ನೇಹಿತರೊಂದಿಗೆ ಚಾಟ್ ಮಾಡುವ, ವಿಡಿಯೊ ನೋಡುವ ತವಕ ಇಂದಿನವರಲ್ಲಿ ಸಾಮಾನ್ಯ. ಮೊಬೈಲ್ ಸ್ಕ್ರೀನ್ ಹಾಗೂ ಟಿ.ವಿ. ರಿಮೋಟ್ ಮೇಲೆ ಬೆರಳುಗಳು ಎಷ್ಟು ವೇಗವಾಗಿ ನರ್ತಿಸುತ್ತವೆಯೋ ಮನಸ್ಸಿನಲ್ಲಿಯೂ ಅಷ್ಟೇ ವೇಗದಲ್ಲಿ ಭಾವನೆಗಳು ಚಿಮ್ಮುತ್ತಿರುತ್ತವೆ.

ಈ ರೀತಿಯಾದ ಮಾಧ್ಯಮ ಬಳಕೆ ಒಂದಿಲ್ಲೊಂದು ಸಮಸ್ಯೆಗೆ ಎಡೆಮಾಡಿಕೊಡುತ್ತಿದೆ. ತಂತ್ರಜ್ಞಾನದ ಅತಿಯಾದ ಬಳಕೆ ಎಲ್ಲ ವಯೋಮಾನದವರ ಮೇಲೆ ಬೇರೆ ಬೇರೆ ಹಂತಗಳಲ್ಲಿ ಋಣಾತ್ಮಕ ಪರಿಣಾಮ ಬೀರುತ್ತಿದೆ. ತಂತ್ರಜ್ಞಾನದಿಂದಾಗುವ ವ್ಯತಿರಿಕ್ತ ಪರಿಣಾಮಕ್ಕೆ ಚಿಕಿತ್ಸೆ ನೀಡಲು ಸರ್ಕಾರ ಹಾಗೂ ಸರ್ಕಾರೇತರ ಸಂಘ ಸಂಸ್ಥೆಗಳು ಶ್ರಮಿಸುತ್ತಲೇ ಇವೆ. ತಂತ್ರಜ್ಞಾನದ ಚಟ ಅನೇಕ ವಿಧದ, ತೀವ್ರ ಮಾನಸಿಕ ಹಾಗೂ ದೈಹಿಕ ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತಿದೆ ಎಂಬುದಕ್ಕೆ ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ತಲೆ ಎತ್ತಿರುವ SHUT (Service for Healthy Use of Technology) ಕ್ಲಿನಿಕ್‌ಗಳೇ ಸಾಕ್ಷಿ.

ಹೆಸರೇ ಸೂಚಿಸುವಂತೆ ತಂತ್ರಜ್ಞಾನದ ಆರೋಗ್ಯಕರ ಉಪಯೋಗ ಇಂದಿನ ತುರ್ತು. ಏಕೆಂದರೆ ಆರು ವರ್ಷಗಳಲ್ಲಿ ಭಾರತದಲ್ಲಿ ಮಾಧ್ಯಮದ ಬಳಕೆ ಅಮೆರಿಕ ಹಾಗೂ ಚೀನಾವನ್ನು ಹಿಂದಿಕ್ಕಿ ಪ್ರತಿ ವ್ಯಕ್ತಿಯ ಮಟ್ಟದಲ್ಲಿ ಶೇಕಡ 9ರಷ್ಟು ಹೆಚ್ಚಾಗಿದೆ. ಡಿಜಿಟಲ್ ಮಾಧ್ಯಮ ಬಳಕೆ ವೇಗವಾಗಿ ಬೆಳೆಯುತ್ತಿರುವುದರೊಂದಿಗೆ ಟಿ.ವಿ. ವೀಕ್ಷಣೆಯೂ ಹೆಚ್ಚುತ್ತಿದೆ. ಮಾಧ್ಯಮ ಲೋಕ ವಿಸ್ತರಣೆಗೆ ಭಾರತದಲ್ಲಿ ಇನ್ನೂ ವಿಪುಲ ಅವಕಾಶವಿದೆ ಎನ್ನುವುದು ವೈಜ್ಞಾನಿಕ ವರದಿಗಳ ಅಭಿಪ್ರಾಯ. ಭಾರತದಲ್ಲಿ ಅಂತರ್ಜಾಲ ಬಳಕೆದಾರರ ಸಂಖ್ಯೆ ಸುಮಾರು 40 ಕೋಟಿ (400 ಮಿಲಿಯನ್) ಇದ್ದು, ಈ ಸಂಖ್ಯೆ ಶೇಕಡ 22ರ ದರದಲ್ಲಿ ಬೆಳೆಯುತ್ತಿದೆ.

‘ಪಥ್ಯ’ ಎನ್ನುವುದು ಆಹಾರ ಪದ್ಧತಿಯ ಅವಿಭಾಜ್ಯ ಅಂಗ. ಆದರೆ, ಮಾಧ್ಯಮ ಪಥ್ಯದ ಬಗ್ಗೆ ಏನಾದರೂ ಯೋಚಿಸಿದ್ದೀರಾ? ಅತಿಯಾದರೆ ಅಮೃತವೂ ವಿಷ ಎನ್ನುವಂತೆ ಮಾಧ್ಯಮದ ಅತಿ ಬಳಕೆ ಅನೇಕ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತಿದೆ ಎನ್ನುವ ಅರಿವು ನಮಗಿದ್ದರೂ ಅದನ್ನು ಹೇಗೆ ನಿಯಂತ್ರಣದಲ್ಲಿಡುವುದು ಎಂಬುದು ಹಲವರನ್ನು ಕಾಡುವ ಮಿಲಿಯನ್ ಡಾಲರ್ ಮೌಲ್ಯದ ಪ್ರಶ್ನೆ.

ಮಕ್ಕಳು ಅತಿಯಾಗಿ ಟಿ.ವಿ. ನೋಡುತ್ತಾರೆ, ಮೊಬೈಲ್ ಬಳಸುತ್ತಾರೆ ಎನ್ನುವುದು ಬಹುಪಾಲು ಪೋಷಕರ ದೂರು. ಶಾಲೆಗಳಲ್ಲಿ ಹಾಗೂ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಆಪ್ತ ಸಮಾಲೋಚಕರು ಕೂಡ ಎದುರಿಸುವ ದೊಡ್ಡ ಸವಾಲೆಂದರೆ ಮಕ್ಕಳಲ್ಲಿರುವ ತಂತ್ರಜ್ಞಾನದ ಚಟ ಬಿಡಿಸುವುದು.

ಎಲ್ಲವೂ ಸಮೃದ್ಧವಾಗಿ ಲಭ್ಯ ಇರುವಾಗ ಮಾನಸಿಕ ನಿಯಂತ್ರಣ ಒಂದು ಸವಾಲು. ಅನಿಯಮಿತ ಮೊಬೈಲ್ ಕರೆಗಳು, ಅನಿಯಮಿತ ಡೇಟಾ, ಲೆಕ್ಕವಿರದಷ್ಟು ಟಿ.ವಿ. ವಾಹಿನಿಗಳು ಸುಲಭವಾಗಿ ಎಲ್ಲರಿಗೂ ಲಭ್ಯ ಇವೆ. ಇಂತಹ ಅನಂತ ಅವಕಾಶಗಳಿರುವಾಗ ಅವುಗಳ ಬಳಕೆ ನಿಯಂತ್ರಿಸುವುದು ಒಂದು ಸಾಹಸ. ಮಾಹಿತಿ ಕ್ರಾಂತಿ ನಮ್ಮ ಮೇಲೆ ಎಷ್ಟು ಪರಿಣಾಮ ಬೀರಿದೆಯೆಂದರೆ ಯಾವುದಾದರೊಂದು ಸಂವಹನ ಉಪಕರಣ ನಮ್ಮೊಂದಿಗಿಲ್ಲದಿದ್ದರೆ ಚಡಪಡಿಸುವ ಕಾಲ ಬಂದಿದೆ.

ಮಾಧ್ಯಮಗಳು ಹೆಚ್ಚೆಚ್ಚು ಬಳಕೆದಾರರನ್ನು ಆಕರ್ಷಿಸಲು ಪೈಪೋಟಿ ನಡೆಸುತ್ತಿವೆ. ಮಾಧ್ಯಮ ಜಗತ್ತಿನ ಪರಮ ಗುರಿಯೇ ಗಮನ ಸೆಳೆಯುವುದು. ಅದರ ಆರ್ಥಿಕತೆ ನಿಂತಿರುವುದೇ ಬಳಕೆದಾರರನ್ನು ಆಕರ್ಷಿಸುವ ಸಾಮರ್ಥ್ಯದ ಮೇಲೆ. ಕೆರಳಿಸುವ ಹಾಗೂ ಭಾವೋದ್ರೇಕಗೊಳಿಸುವ ವಸ್ತು ವಿಷಯಗಳ ಮೂಲಕ ಬಳಕೆದಾರರನ್ನು ಹಿಡಿದಿಡುವ ಪ್ರಯತ್ನ ಸದಾ ನಡೆಯುತ್ತಿರುತ್ತದೆ.

ಮಾಧ್ಯಮ ಒಂದೆಡೆ ಅಗಾಧ ಮಾಹಿತಿಯನ್ನು ನಮ್ಮಲ್ಲಿ ತುಂಬುತ್ತಿದ್ದರೆ ಇನ್ನೊಂದೆಡೆ ನಮಗರಿವಿಲ್ಲದೆ ಅನೇಕ ವಿಚಾರಗಳ ಕುರಿತು ನಮ್ಮ ಅನಿಸಿಕೆ, ಭಾವನೆ, ವಿವೇಚನೆಗಳನ್ನು ರೂಪಿಸುತ್ತಿದೆ.

ಸತ್ಯವಲ್ಲದ ಮಾಹಿತಿಯನ್ನು ಸುದ್ದಿ ಅಥವಾ ಮನರಂಜನೆಯ ರೂಪದಲ್ಲಿ ಕೊಡುವುದರೊಂದಿಗೆ ಮಾಧ್ಯಮವು ಪ್ರಪಂಚದ ಕುರಿತು ವ್ಯತಿರಿಕ್ತ ಅರ್ಥವನ್ನು ಕಲ್ಪಿಸುತ್ತಿದೆ.

ಅಮೆರಿಕದಲ್ಲಿನ ಒಂದು ಅಧ್ಯಯನದ ಪ್ರಕಾರ, ಡಿಜಿಟಲ್ ತಂತ್ರಜ್ಞಾನದ ಬಳಕೆಯಿಂದ ಮಾನಸಿಕ ಒತ್ತಡ ಹೆಚ್ಚಾಗುತ್ತಿದೆ ಎಂದು ಶೇಕಡ 20ರಷ್ಟು ಸ್ಮಾರ್ಟ್ ಫೋನ್ ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ.

ಸುದ್ದಿ ವಾಹಿನಿಗಳು ಹಾಗೂ ಸಾಮಾಜಿಕ ಜಾಲತಾಣಗಳು ನೋಡುಗರಿಗೆ ಪ್ರಪಂಚದ ಕುರಿತಾಗಿ ಖಚಿತವಲ್ಲದ ಮಾಹಿತಿಯನ್ನು ನೀಡುವುದಲ್ಲದೆ ಕೃತಕವಾಗಿ ಸೃಷ್ಟಿಸಿದ ಮಾಹಿತಿಯನ್ನು ನೈಜ ಎಂದು ತೋರಿಸುತ್ತಿವೆ. ಇಂತಹ ವಿಷಯಗಳನ್ನು ‘ವಿಷಯುಕ್ತ’ ಎಂದು ಪರಿಭಾವಿಸಬಹುದು.

‘ಸಮೂಹ ಮಾಧ್ಯಮ ಬಳಕೆದಾರರು ದಿನದಲ್ಲಿ ಕನಿಷ್ಠ ಒಂದೆರಡು ಬಾರಿಯಾದರೂ ವಾಣಿಜ್ಯ ಅಥವಾ ಸೈದ್ಧಾಂತಿಕ ಉದ್ದೇಶದಿಂದ ಪ್ರಚಾರ ಮಾಡುವ ವಿಷಯಗಳನ್ನು ನೈಜ ಎಂದು ಸ್ವೀಕರಿಸುತ್ತಾರೆ. ಇದು ಬಳಕೆದಾರರ ಭಾವನೆಗಳನ್ನು ತೀವ್ರಗೊಳಿಸುವುದಲ್ಲದೆ, ವ್ಯವಸ್ಥಿತವಾಗಿ ಉದ್ದೇಶಿತ ನೆಲೆಯಲ್ಲಿ ಯೋಚಿಸುವಂತೆ ಮಾಡಿ ಆತಂಕಕ್ಕೆ ಒಳಪಡಿಸುತ್ತದೆ. ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾದಂತೆ ಜನ ತಮಗರಿವಿಲ್ಲದೆ ವಾಸ್ತವದಿಂದ ದೂರ ಸರಿಯುತ್ತಾ ಯಾರದೋ ಯೋಜನೆಯ ಕೈಗೊಂಬೆಗಳಾಗುತ್ತಾರೆ’ ಎಂದು ಸಂಶೋಧನೆಗಳು ಹೇಳುತ್ತವೆ.

ಸಂಶೋಧನೆಗಳ ಪ್ರಕಾರ; ತಮ್ಮ ಬಗ್ಗೆ ಅಷ್ಟೇನೂ ಯೋಗ್ಯ ಭಾವನೆ ಇಲ್ಲದ, ತಮ್ಮ ಸಾಮರ್ಥ್ಯದ ಬಗ್ಗೆ ವಿಶ್ವಾಸ ಇಲ್ಲದ (low self- esteem ಇರುವ) ವ್ಯಕ್ತಿಗಳು ನೈಜ ಜಗತ್ತಿಗಿಂತಲೂ ಸಾಮಾಜಿಕ ಜಾಲತಾಣಗಳಲ್ಲಿ ಭಾವನೆಗಳನ್ನು ಹೆಚ್ಚೆಚ್ಚು ವ್ಯಕ್ತಪಡಿಸುತ್ತಾರೆ. ಜಾಲತಾಣಗಳ ಸತತ ಬಳಕೆಯು ಒತ್ತಡ, ಆಲಸ್ಯ, ಆಯಾಸ, ಆತಂಕ ಹಾಗೂ ನಿದ್ರಾಹೀನತೆಗೆ ಕಾರಣವಾಗುತ್ತದೆ.

ಮಾಧ್ಯಮಗಳು ಅಂತರ್‌ವ್ಯಕ್ತಿ ಸಂವಹನ ಸೌಲಭ್ಯ ಒದಗಿಸುತ್ತವೆಯಾದರೂ ಆತಂಕದ ಮೂಲ ಇರುವುದು ಭಾರತದಲ್ಲಿ ನಡೆದ ಹಲವು ಸಂಶೋಧನೆಗಳ ಸಾರಾಂಶದಲ್ಲಿ. ಅನೇಕ ಟಿ.ವಿ ವಾಹಿನಿಗಳು ಲಭ್ಯವಿರುವಾಗ ಪದೇ ಪದೇ ಚಾನಲ್ ಬದಲಾವಣೆ ಮಾಡುತ್ತಾ ಅಸಹನೆಯೂ ಹೆಚ್ಚಾಗುತ್ತಿದೆ. ಅಮೆರಿಕ ಸೈಕಲಾಜಿಕಲ್ ಅಸೋಸಿಯೇಷನ್ ನಡೆಸಿದ ಸಂಶೋಧನೆ ಪ್ರಕಾರ ಎರಡು ವರ್ಷದ ಒಳಗಿನ ಮಕ್ಕಳಿಗೆ ಟಿ.ವಿ ಅಥವಾ ಇನ್ಯಾವುದೇ ಮಾಧ್ಯಮ ಕಾರ‍್ಯಕ್ರಮಗಳು ಯಾವುದೇ ರೀತಿಯ ಶೈಕ್ಷಣಿಕ ಅನುಕೂಲವನ್ನು ಕಲ್ಪಿಸುವುದಿಲ್ಲ. ಮಕ್ಕಳ ಕೊಠಡಿಯಲ್ಲಿ ಟಿ.ವಿ. ಹಾಗೂ ಅಂತರ್ಜಾಲ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಿ ಹೊರಾಂಗಣ ದೈಹಿಕ ಚಟುವಟಿಕೆಗಳಿಗೆ ಹೆಚ್ಚು ಗಮನ ನೀಡಬೇಕು.

ವಾಹಿನಿಗಳನ್ನು, ನಿರ್ದಿಷ್ಟ ಕಾರ್ಯಕ್ರಮಗಳನ್ನು ಹಾಗೂ ಅಂತರ್ಜಾಲದ ವಿಷಯಗಳನ್ನು ಸಕ್ರಿಯವಾಗಿ ಆಯ್ಕೆ ಮಾಡುವುದರ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಒಂದು ವಿಧವಾದ ಮಾಧ್ಯಮ ಬಳಕೆ. ಆಯ್ಕೆ ಧನಾತ್ಮಕವಾಗಿದ್ದರೆ ಪರಿಣಾಮವೂ ಒಳ್ಳೆಯದಾಗಿರುತ್ತದೆ. ಇದು ನಮ್ಮ ನೈತಿಕ ಹಾಗೂ ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸುವುದಲ್ಲದೆ ವಾಸ್ತವವನ್ನು ಎತ್ತಿಹಿಡಿದು ನಾವೇನೆಂಬುದಕ್ಕೆ ಕನ್ನಡಿ ಹಿಡಿಯುತ್ತದೆ.

ಮಾಧ್ಯಮದಿಂದಾಗುವ ವ್ಯತಿರಿಕ್ತ ಪರಿಣಾಮವೊಂದಕ್ಕೆ ಸುಲಭ ಪರಿಹಾರವೆಂದರೆ ಸಕ್ರಿಯ ಮಾಧ್ಯಮ ಆಯ್ಕೆ. ಹಾಗಾಗಬೇಕೆಂದರೆ ನಮ್ಮನ್ನು ನಾವು ಅರಿತು, ನಮ್ಮ ಅಗತ್ಯಗಳ ಆದ್ಯತೆಯನ್ನು ನಿರ್ಧರಿಸುವುದು ಮುಖ್ಯ. ಸಮಾಜ ಶಾಸ್ತ್ರಜ್ಞ ರೋಂಡೆಟ್ ಪ್ರಕಾರ ನಾವು ನಿಖರವಾದ ಉದ್ದೇಶದೊಂದಿಗೆ ಮಾಧ್ಯಮವನ್ನು ಬಳಸುವ ಹಾಗೆ ಇರಬೇಕೆ ಹೊರತು ಮಾಧ್ಯಮ ನಮ್ಮನ್ನು ಬಳಸಲು ಬಿಡಬಾರದು. ಯಾವಾಗ ಮಾಧ್ಯಮದ ಬಳಕೆಯು ನಿತ್ಯದ ಚಟುವಟಿಕೆ ಹಾಗೂ ಸಂಬಂಧಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆಯೋ ಆಗ ‘ಮಾಧ್ಯಮ ಪಥ್ಯ’ ಆರಂಭಿಸಬೇಕು ಎಂದರ್ಥ.

ಸಂತುಲಿತವಾಗಿರಲಿ ಮಾಧ್ಯಮ ಬಳಕೆ

ಆರೋಗ್ಯಕರ ಜೀವನಕ್ಕೆ ಹೇಗೆ ಆಹಾರದ ಪಿರಮಿಡ್ ಇದೆಯೋ ಹಾಗೆಯೇ ಮಾಧ್ಯಮ ಪಥ್ಯ ಪಿರಮಿಡ್ ಸಹ ತಯಾರಿಸಿಕೊಳ್ಳಬೇಕು. ಇಲ್ಲದಿದ್ದರೆ ನಮ್ಮ ಗಮನವೆಲ್ಲ ವ್ಯರ್ಥ.

ಸಂತುಲಿತ ಮಾಧ್ಯಮ ಬಳಕೆ ಕ್ರಮ: ಮಾಧ್ಯಮವೇ ನಮ್ಮ ಸಮಾಜ, ಅದೇ ನಮ್ಮ ಪರಿಸರ ಆಗಿರುವಾಗ ಸಮತೋಲನ ಸ್ವೀಕಾರ ಆಗುತ್ತದೆಯೇ ಅಥವಾ ಅದು ನಮ್ಮನ್ನು ಅಸ್ವಸ್ಥ ಮಾಡುತ್ತಿದೆಯೇ, ಅದರಲ್ಲಿ ಕ್ಯಾಲೊರಿ ಎಷ್ಟಿದೆ, ಸಕ್ಕರೆ, ಉಪ್ಪು, ಕೊಬ್ಬು ಎಷ್ಟಿದೆ ಎಂದು ಯೋಚಿಸಬೇಡವೆ?

ಅದಕ್ಕಾಗಿ ಮಾಧ್ಯಮ ಬಳಕೆಯ ಪಿರಮಿಡ್ ಅನ್ನು ಪ್ರತಿಯೊಬ್ಬರೂ ತಯಾರಿಸಿಕೊಳ್ಳಬೇಕು. ಪಿರಮಿಡ್‌ನ ತುದಿಯಲ್ಲಿ ಬಳಕೆಗೆ ಯೋಗ್ಯವಲ್ಲದ ಅಂಶಗಳನ್ನಿಡಬೇಕು. ಯಾವುದು ಸತ್ಯಕ್ಕೆ ದೂರವಾದದ್ದೋ, ಭಾವನೆಯ ತೀವ್ರತೆಯನ್ನು ಮೂಡಿಸುತ್ತದೆಯೋ, ವಾಸ್ತವದಿಂದ ಹೊರಗೆ ಒಯ್ಯುತ್ತದೋ ಅದು ಒಳ್ಳೆಯದಲ್ಲ. ಮೊಬೈಲ್‌ ಮೂಲಕ ಸಾಮಾಜಿಕ ಜಾಲತಾಣಗಳ ಬಳಕೆ ವ್ಯಸನವಾಗುವ ಸಾಧ್ಯತೆ ಇದ್ದು ಅದನ್ನು ನಿಯಂತ್ರಣ ಮಾಡಲೇಬೇಕು.

ಸಾಮಾಜಿಕ ಜಾಲತಾಣಗಳ ಅತಿ ಉಪಯೋಗ ಹಾಗೂ ಟಿ.ವಿ., ಅಂತರ್ಜಾಲದಲ್ಲಿ ಒದಗುವ ಸುದ್ದಿಗಳು ನಮ್ಮ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತವೆಯಾದ್ದರಿಂದ ಹೆಚ್ಚೆಂದರೆ ದಿನದಲ್ಲಿ 30 ನಿಮಿಷಗಳ ಕಾಲ ಬಳಸಬಹುದು.

ಮೊಬೈಲ್ ಅಪ್ಲಿಕೇಷನ್ ಬಳಸಿ ಅಂತರ್‌ವ್ಯಕ್ತಿ ಸಂವಹನ ನಡೆಸುವುದು ನಿರುಪದ್ರವ ಚಟುವಟಿಕೆ. ದಿನದಲ್ಲಿ ಸುಮಾರು ಒಂದು ಗಂಟೆ ಕಾಲ ಸ್ನೇಹಿತರು ಅಥವಾ ಬಂಧುಗಳೊಂದಿಗೆ ಮಾಹಿತಿ, ಅನಿಸಿಕೆ ಹಂಚಿಕೊಳ್ಳಬಹುದು.

ಮಾಧ್ಯಮದಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳನ್ನು ವಿವೇಚನೆಯಿಂದ, ಆದ್ಯತೆಯ ಮೇರೆಗೆ ಆಯ್ಕೆ ಮಾಡಿಕೊಂಡು ನಿಖರವಾದ ಉದ್ದೇಶದಿಂದ ಸ್ವೀಕರಿಸುವುದಾದರೆ ಸುಮಾರು ಎರಡು ಗಂಟೆಗಳ ಕಾಲ ಮಾಧ್ಯಮ ಬಳಕೆ ಮಾಡಿದರೂ ತೊಂದರೆ ಏನಿಲ್ಲ.

ಮಾಧ್ಯಮವನ್ನು ಶೈಕ್ಷಣಿಕ ಉದ್ದೇಶದಿಂದ, ಹವ್ಯಾಸವನ್ನು ಬೆಳೆಸಿಕೊಳ್ಳಲು ಹಾಗೂ ನೈಜ ಘಟನೆಗಳ ಆಧಾರಿತ ಕಾರ್ಯಕ್ರಮಗಳನ್ನು ನೋಡಲು ಸುಮಾರು ಎರಡು ಗಂಟೆಗಳ ಕಾಲ ಬಳಸಬಹುದು. ಇಲ್ಲಿ ಅಡ್ಡಪರಿಣಾಮಗಳು ಕಡಿಮೆ.

ಇವೆಲ್ಲಕ್ಕೂ ಮಿಗಿಲಾಗಿ ಮಾಧ್ಯಮದಲ್ಲಾಗಿರುವ ಕ್ರಾಂತಿಯನ್ನು ಸಕಾರಾತ್ಮಕವಾಗಿ ಬಳಸಬೇಕು. ಪುಸ್ತಕ ಓದಲು, ಕಲೆ ಹಾಗೂ ಸಾಹಿತ್ಯದ ಕುರಿತಾದ ಜ್ಞಾನ ಹೆಚ್ಚಿಸಿಕೊಳ್ಳಲು ಬಳಸಿದರೆ ಬಹಳ ಉತ್ತಮ. ಈ ಕೆಲಸಕ್ಕಾಗಿ ಪ್ರತಿದಿನ ಎರಡು ಗಂಟೆ ಬಳಕೆ ಮಾಡಬಹುದು.

ಪ್ರತಿಯೊಬ್ಬರೂ ಮಾಧ್ಯಮದ ಬಳಕೆಯ ಆದ್ಯತಾ ಕ್ರಮವನ್ನು ಬರೆದಿಟ್ಟು ಶಿಸ್ತಿನಿಂದ ಅನುಸರಿಸಿದರೆ ಯಾವುದೇ ವ್ಯತಿರಿಕ್ತ ಪರಿಣಾಮ ಇರುವುದಿಲ್ಲ. ಎಲ್ಲವೂ ಒಟ್ಟು ಸೇರಿ ಲೆಕ್ಕ ಹಾಕಿ ನೋಡಿದರೂ ದಿನದಲ್ಲಿ ಎರಡು ಗಂಟೆಗಳಿಗಿಂತ ಹೆಚ್ಚು ಮಾಧ್ಯಮದ ಉಪಯೋಗ ಒಳ್ಳೆಯದಲ್ಲ.

ಪೋಷಕರು ಮಕ್ಕಳ ಮಾಧ್ಯಮದ ಬಳಕೆಯನ್ನು ಆಗಾಗ ಗಮನಿಸಿ, ಪರಿಶೀಲಿಸುವುದು ಒಳ್ಳೆಯದು. ಮಕ್ಕಳಿಗಾಗಿ ಪೋಷಕರು ತಮ್ಮ ಮಾಧ್ಯಮ ಬಳಕೆಯ ಅಭ್ಯಾಸವನ್ನು ಬದಲಾಯಿಸಿಕೊಳ್ಳಬೇಕು.

ಯೋಚನೆ ನಮ್ಮನ್ನು ಮುನ್ನಡೆಸುತ್ತಾ, ಉಪಚರಿಸುತ್ತಾ ಜೀವನದ ತುಂಬೆಲ್ಲಾ ಆವರಿಸಿಕೊಳ್ಳುತ್ತದೆ. ಹುಟ್ಟಿನಿಂದ ಸಾವಿನ ತನಕ ಒಂದು ಕ್ಷಣವೂ ಯೋಚನೆ ಇಲ್ಲದೆ ಮನುಷ್ಯ ಜೀವಿಸಲು ಸಾಧ್ಯವಿಲ್ಲ. ಒಂದು ಹೊತ್ತು ಊಟ ಬಿಡಬಹುದು; ಆದರೆ ಯೋಚನೆಯ ವಿಷಯದಲ್ಲಿ ಹಾಗೆ ಮಾಡಲಾಗದು. ಹೀಗಿರುವಾಗ ನಮ್ಮ ಯೋಚನೆಯನ್ನು ರೂಪಿಸುತ್ತಿರುವ ಮಾಧ್ಯಮ ಬಳಕೆಯನ್ನು ನಿಯಂತ್ರಣದಲ್ಲಿಟ್ಟುಕೊಂಡು ಸಂತುಲಿತ ಪಥ್ಯ ಸ್ವೀಕಾರ ಮಾಡೋಣವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT