7

ಪರಂಪರೆಯ ಸಂಗೀತ ರಸಧಾರೆ

Published:
Updated:
ಮೈಸೂರಿನ ವೀಣೆ ಶೇಷಣ್ಣ ಭವನದಲ್ಲಿ ವಿದುಷಿ ವಾಣಿ ಸತೀಶ್ ಕರ್ನಾಟಕ ಶಾಸ್ತ್ರೀಯ ಸಂಗೀತ ನಡೆಸಿಕೊಟ್ಟರು. ಪಿಟೀಲಿನಲ್ಲಿ ವಿದ್ವಾಂಸ ಅಚ್ಯುತರಾವ್, ಮೃದಂಗದಲ್ಲಿ ಟ್ರಿಚಿ ಅರವಿಂದ್ ಮತ್ತು ಘಟಂನಲ್ಲಿ ಶರತ್ ಕೌಶಿಕ್ ಪಕ್ಕವಾದ್ಯ ಸಹಕಾರ ನೀಡಿದರು

ಮೈಸೂರಿನ ಗಾನಭಾರತೀ ಸಂಸ್ಥೆಯು ವೀಣೆ ಶೇಷಣ್ಣ ಭವನದಲ್ಲಿ ಈಚೆಗೆ ಒಂದು ಆಕರ್ಷಕ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಏರ್ಪಡಿಸಿತ್ತು. ಮೈಸೂರಿನ ಮೂಲದ, ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಯುವ ವಿದುಷಿ ವಾಣಿ ಸತೀಶ್ ಅವರು ಈ ಗಾಯನ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಬಳ್ಳಾರಿ ಸಹೋದರರಲ್ಲಿ ಒಬ್ಬರಾದ ವಿದ್ವಾನ್ ವೆಂಕಟೇಶಾಚಾರ್ ಅವರ ಮಗಳಾದ ವಾಣಿ ತಮ್ಮ ಪರಂಪರಾಗತವಾಗಿ ಬಂದಿರುವ ಸಂಗೀತದ ಬಳುವಳಿಯನ್ನು ಜತನದಿಂದ ಕಾಪಾಡಿಕೊಂಡು, ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಶಾಸ್ತ್ರೀಯತೆಗೆ ಮತ್ತು ಭಾವಪೂರ್ಣತೆಗೆ ಒತ್ತುಕೊಡುವ ಅವರ ಗಾಯನದಲ್ಲಿ ಪ್ರಾಮಾಣಿಕ ಕಳಕಳಿಯನ್ನು ಗುರುತಿಸಬಹುದು. ಇಂಪಾದ ಶಾರೀರ, ಶ್ರುತಿಶುದ್ಧತೆ ಮತ್ತು ಲಯದ ಮೇಲಿನ ಹಿಡಿತಗಳೊಂದಿಗೆ ಅವರ ಪಕ್ವ ಮನೋಧರ್ಮವೂ ಸೇರಿ ಕೇಳುಗರಿಗೆ ಸೊಗಸಾದ ಅನುಭವವನ್ನು ಕಟ್ಟಿಕೊಡುತ್ತವೆ.

ಅವರಿಗೆ ಪಿಟೀಲಿನಲ್ಲಿ ವಿದ್ವಾಂಸ ಅಚ್ಯುತರಾವ್, ಮೃದಂಗದಲ್ಲಿ ಟ್ರಿಚಿ ಅರವಿಂದ್ ಮತ್ತು ಘಟಂನಲ್ಲಿ ಶರತ್ ಕೌಶಿಕ್ ಸಹಕರಿಸಿದರು. ಅಂದಿನ ಕಛೇರಿಗಾಗಿ ವಾಣಿ ಅವರು ಮಾಡಿಕೊಂಡಿದ್ದ ಅಚ್ಚುಕಟ್ಟಾದ ಪೂರ್ವ ಸಿದ್ಧತೆಯು ಅವರ ಪ್ರತಿಯೊಂದು ಪ್ರಸ್ತುತಿಯನ್ನೂ ಔಚಿತ್ಯಪೂರ್ಣವನ್ನಾಗಿಸಲು ಸಹಕಾರಿಯಾಯಿತು. ಅಭೋಗಿ ರಾಗದ ಆದಿತಾಳದ ವರ್ಣ ‘ಯವರಿಬೋಧ’ವನ್ನು ಚುಟುಕಾದ, ಆಕರ್ಷಕವಾದ ಆಲಾಪದೊಂದಿಗೆ ಆರಂಭಿಸಿದ ಅವರು ಕಛೇರಿಯುದ್ದಕ್ಕೂ ಕೃತಿಗೆ ಪೂರಕವಾಗುವಂತೆ ಮನೋಧರ್ಮ ಸಂಗೀತವನ್ನು ಅಳವಡಿಸಿಕೊಂಡಿದ್ದರು.

ಸ್ವಾತಿ ತಿರುನಾಳರ ‘ದೇವ ದೇವ ಕಲಯಾಮಿತೆ’ (ಮಾಯಾಮಾಳವಗೌಳ) ರಚನೆಯು ನೆರವಲ್‌ನೊಡನೆ ಮತ್ತು ಕ್ರಮವಾದ ಆರೋಹಣದ ಕಲ್ಪನಾ ಸ್ವರಗಳೊಡನೆ ಸುಂದರವಾಗಿ ಮೂಡಿಬಂದಿತು. ವಿಳಂಬ ಗತಿಯಲ್ಲಿ ಸುಶ್ರಾವ್ಯವಾಗಿ ಜೀಕುತ್ತಾ ದೇವಿಯನ್ನು ವರ್ಣಿಸುವ ಶಾಮಾ ಶಾಸ್ತ್ರಿಗಳ ಸುಂದರ ಕೃತಿ ‘ಮರಿವೇರೆ ಗತಿ ಎವರಮ್ಮ’ ಕಿವಿಗೆ ಹಿತವಾದ ಅನುಭವ ನೀಡಿತು. ಖಮಾಚ್ ರಾಗವನ್ನು ವಿಸ್ತರಿಸಿದ ರೀತಿಯೇ ತುಸು ಭಿನ್ನವಾಗಿ ಅವರ ಸೃಜನಾತ್ಮಕ ಮನೋಧರ್ಮಕ್ಕೆ ಉದಾಹರಣೆಯಂತಿತ್ತು. ಅದು, ಸ್ವಚ್ಛಂದವಾಗಿ, ಭಾವದೀಪ್ತವಾಗಿ ಗರಿಗೆದರಿದ ಮನೋಧರ್ಮದ ಅಭಿವ್ಯಕ್ತಿ. ತ್ಯಾಗರಾಜರ ‘ಸೀತಾಪತಿ ನಾಮನಸುನ’ ಕೀರ್ತನೆಯು ‘ಪ್ರೇಮಜೂಚಿ ನಾಪೈ ಪೆದ್ದ ಮನಸುಚೇಸಿ’ ಎಂಬಲ್ಲಿ ನೆರವಲ್‌ನ ವಿಸ್ತರಣೆಯೊಡನೆ ಆಕರ್ಷಕವಾಗಿ ಮೂಡಿಬಂದಿತು. ಕಲ್ಪನಾ ಸ್ವರಗಳಲ್ಲಿ ದೈವತ್ವವನ್ನು ಕೇಂದ್ರವಾಗಿಟ್ಟುಕೊಂಡು ಮಾಡಿದ ಕುಸುರಿ ಕೆಲಸವೂ ಸಹ ಗಮನ ಸೆಳೆಯಿತು.

‘ಗೋವಿಂದ ನಿನ್ನ ನಾಮವೆ ಚಂದ’ ದೇವರನಾಮದ ಭಾವಪೂರ್ಣ ಪ್ರಸ್ತುತಿಯು ಅಂದಿನ ಮುಖ್ಯ ರಾಗವಾದ ಷಣ್ಮುಖಪ್ರಿಯಕ್ಕೆ ಎಡೆ ಮಾಡಿಕೊಟ್ಟಿತು. ಎಲ್ಲ ಸ್ಥಾಯಿಗಳಲ್ಲೂ ಸರಾಗವಾಗಿ ಸಂಚರಿಸುವ ಅವರ ಶಾರೀರದಲ್ಲಿ ರಾಗವು ತನ್ನ ವಿವಿಧ ಮಗ್ಗುಲುಗಳನ್ನು, ಅಲಂಕೃತ ಸಂಚಾರಗಳನ್ನೂ ಸಮೃದ್ಧಿಯಾಗಿ ತೋರುತ್ತಾ ಸಾಗಿತು. ವೇಗದ ಸಂಗತಿಗಳೂ ಅವರ ಕಂಠದಲ್ಲಿ ಸ್ಪಷ್ಟವಾಗಿ, ನಿರರ್ಗಳವಾಗಿ ಮೂಡಿ ಬರುತ್ತವೆ. ಪಿಟೀಲಿನಲ್ಲಿ ಅಚ್ಯುತರಾವ್ ಅವರ ರಾಗವೂ ಗಂಭೀರವಾಗಿ, ಮುಖ್ಯ ಗಾಯಕರ ಮನೋಧರ್ಮಕ್ಕೆ ಇಂಬಾಗಿ ಅನುರಣಿಸಿತು. ಕಛೇರಿಯ ಉದ್ದಕ್ಕೂ ಅವರ ಪಿಟೀಲು ಸಹಕಾರವು ಸೌಮ್ಯತೆಯನ್ನೇ ಅನುಸರಿಸಿದಂತಿತ್ತು. ಸ್ವಾತಿ ತಿರುನಾಳರ ಮತ್ತೊಂದು ಕೃತಿ ‘ಮಾಮವ ಕರುಣಯ ಮನುಕುಲ ಲಲಾಮ’ವು ವೇದಿಕೆಯ ಮೇಲೆ ಸೊಗಸಾಗಿ ಪ್ರಸ್ತುತಗೊಂಡಿತು. ‘ಅರಿಗಣ ವಿದಳನ ಪರಮಪಟು ಚರಿತ’ ಎಂಬ ಅರ್ಥಗರ್ಭಿತ ಸಾಲು ಮತ್ತೆ ಮತ್ತೆ ವಿವಿಧ ರೀತಿಗಳಲ್ಲಿ ವಿಕಸಿಸಿತು.

ಯುವ ಮೃದಂಗ ವಾದಕ ಟ್ರಿಚಿ ಅರವಿಂದ್ ಮತ್ತು ಘಟಂನಲ್ಲಿ ಶರತ್ ಕೌಶಿಕ್ ಅವರ ಲಯವಾದ್ಯ ಸಹಕಾರವು ಕಛೇರಿಗೆ ಒತ್ತಾಸೆ ನೀಡಿತ್ತು. ಸ್ವಾತಿ ತಿರುನಾಳರದೇ ಮತ್ತೊಂದು ಅಪರೂಪದ ರಚನೆ ಒಂದು ಪದ ನೀಲಾಂಬರಿ ರಾಗದಲ್ಲಿ ‘ಕಾಂತನೊಡು ಚೆನ್ನುಮೆಲ್ಲೆ’ ಎಂಬುದು ಸುಲಲಿತವಾಗಿ ಮೂಡಿಬಂದಿತು.

‘ಕ್ಷೀರಾಬ್ಧಿ ಕನ್ನಿಕೆ’ ಎಂದು ಆರಂಭಿಸಿ, ‘ಆರಿಗೆ ವಧುವಾದೆ’ ಎಂಬ ಪುರಂದರದಾಸರ ರಚನೆಯೂ ಸಹ ಸ್ಪಷ್ಟ ಉಚ್ಚಾರಣೆಯೊಂದಿಗೆ ಇಂಪಾಗಿ ಪ್ರಸ್ತುತಗೊಂಡಿತು. ವಾಣಿಯವರ ಚಿಕ್ಕಪ್ಪನವರಾದ ವಿದ್ವಾನ್ ಶೇಷಗಿರಿ ಆಚಾರ್ ಅವರ ರಚನೆ ‘ನಿನ್ನ ಮನದ ದೇಗುಲವ ಅರಸಿ’ (ಮಧುವಂತಿ)ಯೊಡನೆ ಅಂದಿನ ಕಛೇರಿಯು ಸಂಪನ್ನಗೊಂಡಿತು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !