ಪಲ್ಲಟ

7

ಪಲ್ಲಟ

Published:
Updated:

ಮಿಥುನದ ಹೊತ್ತು ತುಸು ಮಿಸುಕಾಡಿದ್ದಕ್ಕೆ

ಭಂಗವಾಯಿತೆಂದು ಪಕ್ಕಕ್ಕೆ ಹೊರಳಿದರೆ

ಅವಳ ಕಣ್ಣಂಚಿನ ನೀರು ಕತ್ತಲಾಗುತ್ತದೆ

 

ಮಿಥುನದ ಬೆಳಕನ್ನು ಕಣ್ಣಲ್ಲೆ ಕಾಣಬೇಕಲ್ಲವೆ?

ಅವಳ ಕತ್ತಲಾದ ಕಣ್ಣ ತಳದಲ್ಲಿ

ಕಡಲ ಮೊರೆತದ ಸದ್ದು

ಹುಣ್ಣಿಮೆ ದಿವಸವೂ ಕತ್ತಲನ್ನೆ ಹೊದ್ದು ಮಲಗುವಳು

 

ಕೂಡಿಕೆಯಲ್ಲಿ ಹೆಣ್ಣು ಬಲ ಪ್ರಯೋಗ ಮಾಡಬಾರದಲ್ಲವೆ?

ಗಂಡು ಗಂಡಿನ ಜತೆ ಕೂಡಿದಂತೆನಿಸುತ್ತದೆ

ಮೈಗೂಡಿಸಿಕೊಂಡ ಕಸುವೆಲ್ಲವೂ

ಜರ‍್ರನೆ ಇಳಿದು ಪಾತಾಳ ಸೇರುತ್ತದೆ

ಸುಮ್ಮನಿರಬಾರದೆ ನೀನು ತುಸು ಹೊತ್ತು?- ಕೇಳುತ್ತಾನವನು

ಕಡಲಂತೆ ಮೊರೆಯಬೇಕಾದವನು

 

ಅವಳ ಕಂಗಳೊಳಗಿನ ಕಡಲು ಹೆಪ್ಪುಗಟ್ಟಿ

ತಳದ ನೂರೆಂಟು ಮೀನುಗಳು ಹಿಮಗಟ್ಟಿ ನಿಚ್ಚಲವಾಗುತ್ತವೆ

ಬೆಳದಿಂಗಳ ಚಂದ್ರನ ಹಿಡಿದಿಡಲಾಗದೆ ಸೋತು ಕಣ್ಣು ಮುಚ್ಚುತ್ತಾಳೆ

ಬ್ರಹ್ಮಾಂಡದ ನೀರವ ಸದ್ದು ಇನ್ನಿಲ್ಲದಂತೆ ಕಾಡತೊಡಗುತ್ತದೆ

ತಂಬೂರಿಯಂತೆ!

 

ನನ್ನ ದೇಹದ ಏರಿಳಿತಗಳ ಹಂಗೇಕೆ ನಿನಗೆ

ಕೈ ಕಾಲುಗಳಿಗೆ ಮೊಳೆಗಳ ಜಡಿದುಬಿಡು

ನಿನ್ನಿಷ್ಟದಂತೆಯೆ ನಡೆಯಲಿ

ಮಿಸುಕಾಡಿದರೆ ಕೇಳು ನಿನ್ನಾಣೆ- ವೀಣೆಯಂತೆ ನುಡಿದಳವಳು

 

ಅವನು ಆ ಕತ್ತಲಿನಲ್ಲಿ

ಮೊಳೆಗಳಿಗಾಗಿ ತಡಕಾಡತೊಡಗಿದ

ಇದೆಯಲ್ಲ ನನ್ನದೇ ಸೀರೆ ಮತ್ತೆ ನುಡಿದಳವಳು

 

ಗಂಡು ಹೆಣ್ಣಾಗುವ ಹೆಣ್ಣು ಗಂಡಾಗುವ

ಮೋಜಿನಾಟಕ್ಕೆ ಮೊಳೆಗಳ ಹಂಗೇಕೆ

ನಿನಗಿಂತ ಹೆಣ್ಣೇ ವಾಸಿ ಎಂದು ನುಡಿದು ಎದ್ದು ನಡೆದಳು

 

ಅವನು ಕಲ್ಲಾಗಿ ಹೋದ

ಹಿಮಗಟ್ಟಿದ್ದ ಅವಳ ಕಣ್ಣ ಕಡಲು ಕರಗಿ

ಬೆಳದಿಂಗಳ ಚಂದ್ರನನ್ನು ಹಿಡಿಯಲಾರಂಭಿಸಿತು.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !