ಮಂಗಳವಾರ, ಜೂನ್ 2, 2020
27 °C

ಕವಿತೆ | ಸೀರೆ ಮಹಲು  

ದಾದಾಪೀರ್ ಜೈಮನ್  Updated:

ಅಕ್ಷರ ಗಾತ್ರ : | |

Prajavani

ಹಣತೆ ತರಲು  ಹೋದ ತಂದೆ 

ಮರಳಿ ದಡ ಸೇರದೆ ಹೋದಾಗ 

ಒಳಗಿದ್ದ ಕಣ್ಣೀರನೇ ಸೀಮೆಯೆಣ್ಣೆಯ ಮಾಡಿ 

ಅಪ್ಪನ ಸಾರಾಯಿ ಸೀಸೆ ಬುಡ್ಡಿದೀಪವಾಗಿಸಿ 

ಇಳಿಬಿಟ್ಟು ಹಳೆ ಸೀರೆ ಸೆರಗಿನ ಚುಂಗುಬತ್ತಿ 

ಜೀವಸತ್ವವ ಹೀರಿ ಛಲದ ಕಿಡಿ ಗೀರಿದಾಗ 

ಗುಡಿಸಲೊಳಗೆಲ್ಲ ಬಂಗಾರದ ಬೆಳಕು 

 

ಬಾಗಿಲ ಪರದೆ, ಮಚ್ಚರದಾನಿ 

ಕಿಟಕಿಗಳ ಕರಟನ್ನು, ಹಾಸಿಹೊದೆಯುವ ಕೌದಿ 

ಒಲೆಮೇಲೆ ಕುದಿವ ದಬರಿಗಳಿಳಿಸುವ ಮಸಿ ಅರಿವೆ 

ಸಂಡಿಗೆ ಹುಟ್ಟುವ ಆಸ್ಪತ್ರೆ 

ನಾಗರಪಂಚಮಿಗೆ ಕಟ್ಟಿಕೊಟ್ಟ ಜೋಕಾಲಿ 

ನೆರಕೆಗಳ ಪೊಳಕು ಮುಚ್ಚುವ ಬಟ್ಟೆ 

ಹೀಗೆ ನಿತ್ಯ  ಸೀರೆಯಿಂದಲೆ ತಯಾರಾಗುತ್ತಿತ್ತು ಸೀರೆಮಹಲು 

ಅಂಚಿಗೆ ಹಬ್ಬಿದ ರಂಗವಲ್ಲಿ 

ಕುಣಿವ ನವಿಲು ಹಾಡೋ ಹಕ್ಕಿ 

ಹೂ ಹಣ್ಣು ಚಂದ್ರ ತಾರೆ ಚುಕ್ಕಿ 

ಏನಿತ್ತು ಏನಿಲ್ಲ ಆ ಸೀರೆಯರಮನೆಯೊಳಗೆ! 

ಕರಿಮಣಿಸರ ಹಸಿರುಗಾಜಿನ ಬಳೆ 

ಜಾತ್ರೆಯಲಿ ಕೊಂಡ ಹೇರ್ ಕ್ಲಿಪ್ಪು 

ಹಬ್ಬಕ್ಕೊಮ್ಮೆ ಹೊರಬರುತ್ತಿದ್ದ ಅತ್ತರು ಮತ್ತು ಸುರ್ಮಾ 

ಇತ್ಯಾದಿಗಳೆಲ್ಲದರ ಸಸ್ತಾ ಉಳಿತಾಯದಲಿ 

ಮಕ್ಕಳು ಬೆಳೆದು ನೌಕರಿ ಹಿಡಿದ ಮುಂದೆಂದಾದರೂ 

ದುಬಾರಿ ಬೆಲೆಯ ಸೀರೆಯುಟ್ಟು ಮೆರೆಯಬೇಕೆಂಬ 

ಅಭಿಲಾಷೆ ಕಣ್ಣಲ್ಲಿ ಮಿನುಗುತ್ತಿದ್ದುದು 

ಬೆಸ್ತವಾರದ ಸಂತೆಯೊಳಗೆ ಉಳಿದವರು 

ಉಟ್ಟುಕೊಂಡ

ಕುಚ್ ಕುಚ್  ಹೋತಾ ಹೈ, ಕನ್ಯಾದಾನ, ಕಾವ್ಯಾಂಜಲಿ

ಧಾರಾವಾಹಿ ಸಿನಿಮಾ ಸೀರೆಗಳನು ಕಂಡಾಗ... 

 

ಈಗ ಗುಡಿಸಲು ತಗಡಿನ ಸೂರಾಗಿದೆ 

ಕಬ್ಬಿಣದ ಟ್ರಂಕು ಬೀರುವಾಗಿ ಬೆಳೆದು ನಿಂತಿದೆ 

ಅಲಮಾರಿನ ಹ್ಯಾಂಗರಿನೊಳಗೆ ಹಾಯಾಗಿ 

ಚಕ್ಕಳ ಮಕ್ಕಳ ಹಾಕಿ ಕುಳಿತಿರುವ 

ಬಣ್ಣಬಣ್ಣದ ಸೀರೆಗಳ ಮುಂದೆ ನಿಂತು ಪ್ರತಿದಿನ 

'ಛೆ... ಉಡಲು ಸೀರೆಗಳೇ ಇಲ್ಲ' ಅಮ್ಮನ 

ಉದ್ಗಾರ ಒಮ್ಮೆಗೆ ಹಲವು ಅರ್ಥಗಳನ್ನು ಹೊಮ್ಮಿಸಿಬಿಡುತ್ತದೆ... 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.