ಅಭಿಯ ಹುಟ್ಟುಹಬ್ಬ

7
ಮಕ್ಕಳ ಕಥೆ

ಅಭಿಯ ಹುಟ್ಟುಹಬ್ಬ

Published:
Updated:
Prajavani

‘ಮೂರರಲ್ಲಿ ಒಂದು. ಯಾವುದನ್ನು ಆರಿಸ್ಕೋತಿಯೋ ನಿಂಗೆ ಬಿಟ್ಟಿದ್ದು’ ಅಭಿಯ ಅಪ್ಪ ಕಡ್ಡಿ ತುಂಡು ಮಾಡಿದಂತೆ ಹೇಳಿದರು. ಅಭಿಗೆ ತಲೆ ಕೆಟ್ಟು ಮೊಸರಾಯ್ತು. ಏನು ತೀರ್ಮಾನ ತೆಗೆದುಕೊಳ್ಳಬೇಕೋ ಅರ್ಥವಾಗದ ಪರಿಸ್ಥಿತಿ. ಅಪ್ಪ ಸ್ನಾನ ಮಾಡುವುದಕ್ಕೆಂದು ಬಚ್ಚಲು ಸೇರಿ ಬಾಗಿಲು ಮುಚ್ಚಿಕೊಳ್ಳುತ್ತಿದ್ದ ಹಾಗೆ ಅಭಿ ಅಮ್ಮನಿಗೆ ದುಂಬಾಲು ಬಿದ್ದ.

‘ಏನು ಮಾಡೋದೂಂತ ಹೇಳು ಅಮ್ಮಾ, ಹೇಳು..’

‘ಹೋಗೋ, ಹತ್ತು ವರ್ಷದ ಕುಂಟೇಕೋಣ ಆಗಿದ್ದಿ. ಎಲ್ಲಾ ನಾನು ಹೇಳ್ಬೇಕಾ? ನೀನೂ ಸ್ವಲ್ಪ ತಲೆ ಉಪಯೋಗಿಸೋದನ್ನು ಕಲಿ..’ ಎಂದು ವೃತ್ತಪತ್ರಿಕೆಯನ್ನು ಮಡಚಿ ಟೀಪಾಯಿಯ ಮೇಲೆ ಹಾಕಿ ಅಮ್ಮ ತಿಂಡಿ ಮಾಡಲು ಎದ್ದು ಒಳಗೆ ಹೋದಳು. ‘ಯಾರಾದ್ರೂ ಫ್ರೆಂಡ್ಸ್‌ ಅನ್ನು ಕೇಳಿದ್ರೆ ಹೇಗೆ?’ ಎನ್ನುವ ಯೋಚನೆ ಬಂತು ಅಭಿಗೆ. ಆದರೆ ಅವರು ಏನು ಹೇಳುತ್ತಾರೆಂದು ಅವರನ್ನು ಕೇಳದೆಯೇ ಅವನು ಊಹೆ ಮಾಡಬಲ್ಲ. ಅಷ್ಟು ಜಾಣತನ ಅವನಿಗುಂಟು. ಒಳ್ಳೆಯ ಹೋಟೆಲಲ್ಲಿ ಪಾರ್ಟಿ ಅಂದರೆ ಯಾರು ಬೇಡ ಅನ್ನುತ್ತಾರೆ? ಸ್ವತಃ ಅಭಿ ಕೂಡಾ ಹೇಳುತ್ತಿರಲಿಲ್ಲ, ಬಹುಶಃ..

***

ಹಿಂದಿನ ವರ್ಷದವರೆಗೆ ಅಭಿಯ ‘ಹ್ಯಾಪಿ ಬರ್ತ್ ಡೇ..’ ಮನೆಯಲ್ಲೇ ನಡೆಯುತ್ತಿತ್ತು. ತನಗೆ ಬೇಕಾದ ಫ್ರೆಂಡ್ಸ್‌ಗಳನ್ನು ಮಾತ್ರವಲ್ಲ, ಅಕ್ಕಪಕ್ಕದಲ್ಲಿದ್ದ ಪುಟ್ಟ ಮಕ್ಕಳನ್ನೂ ಕರೆಯುತ್ತಿದ್ದ. ಒಂದು ವಾರ ಮುಂಚಿನಿಂದಲೇ ಅವನ ಸಂಭ್ರಮ ಉಕ್ಕಿ ಹರಿಯುತ್ತಿತ್ತು. ಹೊಸ ಡ್ರೆಸ್ ಖರೀದಿ ಮಾಡಲು ಸಿಟಿಗೆ ಹೋಗುವುದಕ್ಕೆ ಅವನು ತುದಿಗಾಲಿನಲ್ಲಿ ಕಾದು ನಿಂತಿರುತ್ತಿದ್ದ. ರೆಡಿಮೇಡ್ ಡ್ರೆಸ್ ಖರೀದಿ ಮಾಡಿ, ಹೋಟೆಲಿಗೆ ಹೋಗಿ ಅಭಿಯ ಪಂಚಪ್ರಾಣವಾದ ಪಿಜ್ಜಾ ತಿಂದು, ಐಸ್‍ಕ್ರೀಮ್ ಮೆದ್ದು, ‘ಇನ್ನೆಂತದು ಬರ್ತ್ ಡೇ? ಸಾವಿರಾರು ರೂಪಾಯಿ ಈಗ್ಲೇ ಹುಡಿ ಎದ್ದು ಹೋಯ್ತು..’ ತಮಾಷೆ ಮಾಡುತ್ತಿದ್ದರು ಅಪ್ಪ. ‘ಹ್ಯಾಪಿ ಬರ್ತ್‌ಡೇ’ ದಿನ ಅಭಿಗೆ ಇಷ್ಟ ಆಗದೇ ಇದ್ದದ್ದು ಒಂದೇ; ಮುಖದ ಮೇಲೆ ಇಳಿಯುವಂತೆ ತಲೆಗೆ ಎಣ್ಣೆ ಮೆತ್ತಿ, ಮೈಕೈಗೂ ಬಳಿದು, ಬಿಸಿನೀರಲ್ಲಿ ಅಭ್ಯಂಜನ ಮಾಡಿಸುತ್ತಿದ್ದಳು ಅಮ್ಮ.

‘ಸಾಕು ಬಿಡೇ.., ಸಾಕು ಬಿಡೇ..’ ಎಂದು ಅಭಿ ಬಚ್ಚಲಲ್ಲಿ ಥಕಥೈ ಕುಣಿಯುತ್ತಿದ್ದ. ಅವನು ಕುಣಿದಷ್ಟೂ ಉಜ್ಜಿ ಉಜ್ಜಿ ಮೈ ತಿಕ್ಕಿ, ತಲೆ ತೊಳೆದು, ‘ಎಣ್ಣೆ ಹೋಗೋದು ಬೇಡ್ವಾ?’ ಅಂತ ಅಮ್ಮನ ವಾದ. ‘ಅಷ್ಟು ಎಣ್ಣೆ ಹಚ್ಚಿದ್ದೆಂತಕ್ಕೆ?’ ಎಂದು ಅಭಿಯ ಗಲಾಟೆ.

ತನ್ನ ಕ್ಲಾಸಿನವರಿಗೆಲ್ಲಾ, ಮಿಸ್ಸುಗಳನ್ನೂ ಸೇರಿಸಿಕೊಂಡು, ಚಾಕೊಲೇಟ್ ಹಂಚುತ್ತಿದ್ದ ಅಭಿ. ಸಂಜೆ ಒಬ್ಬೊಬ್ಬರಾಗಿ ಗೆಳೆಯರು ಮನೆಗೆ ಬರುತ್ತಿದ್ದಂತೆಯೇ ಅವನಿಗೆ ಕೋಡು. ಬಂದವರೆಲ್ಲಾ ಏನಾದರೊಂದು ಗಿಫ್ಟ್ ಪ್ಯಾಕನ್ನು ಕೊಟ್ಟಾಗ ‘ಒಳಗೆ ಏನಿದೆಯೋ?’ ಎಂದು ವಿಪರೀತ ಕುತೂಹಲ. ಅಪ್ಪ ಬೇಕರಿಯಿಂದ ದೊಡ್ಡದಾದ ಕೇಕ್ ತಂದಿಟ್ಟಿರುತ್ತಿದ್ದರು. ಉರಿಯುತ್ತಿರುವ ಮೇಣದ ಬತ್ತಿಗಳನ್ನು ಊದಿ ಆರಿಸಿ, ಒಕ್ಕೊರಲಲ್ಲಿ ಎಲ್ಲರೂ ‘ಹ್ಯಾಪಿ ಬರ್ತ್ ಡೇ..’ ಎಂದು ಶುಭಾಶಯ ಹೇಳಿದ ಮೇಲೆ ಅಭಿ ಸ್ಟೈಲಾಗಿ ಚಾಕುವಿನಿಂದ ಕೇಕ್ ಕತ್ತರಿಸುತ್ತಿದ್ದ. ಮೊದಲು ಅವನಿಗೆ ಕೇಕ್ ತಿನ್ನಿಸುತ್ತಿದ್ದಳು ಅಮ್ಮ. ನಂತರ ಅಭಿ ಅಮ್ಮನಿಗೆ, ಅಪ್ಪನಿಗೆ ಕೇಕ್ ತಿನ್ನಿಸಿ, ಬಂದವರಿಗೆಲ್ಲಾ ಪೇಪರ್ ಪ್ಲೇಟಿನಲ್ಲಿ ಕೇಕ್ ಹಂಚಿ, ಹೊರಗಡೆಯಿಂದ ಕೊಂಡು ತಂದಿರುತ್ತಿದ್ದ ಆಲೂ ಚಿಪ್ಸ್‌ಗಳು, ಐಸ್ ಕ್ರೀಮು ಕೊಡುತ್ತಿದ್ದ. ಅಮ್ಮ ಮನೆಯಲ್ಲಿ ಬಿಸಿಬೇಳೆ ಬಾತೋ, ಪುಳಿಯೋಗರೆಯೋ ಮಾಡಿರುತ್ತಿದ್ದಳು. ನಗುತ್ತಾ, ಕಲೆಯುತ್ತಾ ಎಲ್ಲರೂ ಗುಂಪುಗೂಡಿ ಕೂತುಕೊಂಡು ತಿಂಡಿ ತಿಂದು, ಬಂದವರು ಹೊರಟು ಹೋಗುತ್ತಿದ್ದಂತೆ ಗಿಫ್ಟ್ ಪ್ಯಾಕುಗಳನ್ನು ಒಡೆದು ನೋಡುವ ಅತ್ಯುತ್ಸಾಹ. ಕತ್ತರಿ ಹುಡುಕಿಕೊಂಡು ಒಳಗೆ ಓಡುತ್ತಿದ್ದ ಅಭಿ.

***

ನೆರೆಮನೆಗೆ ಹೊಸದಾಗಿ ಬಂದು ಅಭಿಯ ಬೆಸ್ಟ್‌ಫ್ರೆಂಡ್ ಆಗಿದ್ದ ಅನೂಪ್ ಅವನ ‘ಹ್ಯಾಪಿ ಬರ್ತ್ ಡೇ’ ಅಚರಿಸಿಕೊಂಡಿದ್ದು ದೊಡ್ಡ ಹೋಟೆಲಲ್ಲಿ. ಹೀಗೂ ಬರ್ತ್ ಡೇ ನಡೆಯುತ್ತದೆ ಎಂದು ಅಲ್ಲಿಯವರೆಗೆ ಗೊತ್ತಿರಲಿಲ್ಲ ಅಭಿಗೆ. ಮಕ್ಕಳ ಬರ್ತ್ ಡೇ ಆಚರಣೆಗೆಂದೇ ಹೋಟೆಲಲ್ಲಿ ಪ್ರತ್ಯೇಕ ಭಾಗ ಮೀಸಲಿಟ್ಟಿದ್ದರು. ಅಲ್ಲಿ ನಾನಾ ಥರದ ಆಟೋಟಗಳ ಮಜಾ. ಜರ‍್ರನೇ ಮೇಲಿಂದ ಜಾರಿ ಕೆಳಗೆ ರಾಶಿರಾಶಿಯಾಗಿ ಗುಡ್ಡೆ ಹಾಕಿಟ್ಟಿದ್ದ ಬಣ್ಣಬಣ್ಣದ ಚೆಂಡುಗಳ ಮೇಲೆ ಬೀಳುವುದು, ಒಬ್ಬರ ಮೇಲೊಬ್ಬರು ಚೆಂಡು ಎಸೆದು ಕಿರುಚಾಡುವುದು, ಅಭಿಗೆ ಭಾರೀ ಇಷ್ಟವಾಗಿಬಿಟ್ಟಿತ್ತು. ದೊಡ್ಡವರೆಲ್ಲಾ ಮಕ್ಕಳನ್ನು ಕರೆದುಕೊಂಡು ಬಂದು ಬಿಟ್ಟು ಬಿಟ್ಟು ಹೋಗುತ್ತಿದ್ದರು.

ಅದೊಂದು ಮಕ್ಕಳ ರಾಜ್ಯ. ಅವರಿಗೆ ಇಷ್ಟವಾಗುವಂಥ ಆಟದ ಸಾಮಗ್ರಿಗಳು ತುಂಬಿ ತುಳುಕುವಷ್ಟಿದ್ದುವು. ಮಕ್ಕಳೆಲ್ಲಾ ಆಡಿ ಆಡಿ ದಣಿದು ಹೊಟ್ಟೆ ಹಸಿವಿನ ನೆನಪಾಗುತ್ತಿದ್ದಂತೆ ಕೇಕ್ ಕತ್ತರಿಸುವ ಸಂಭ್ರಮ. ನಂತರ ಊಟ. ಮಕ್ಕಳಿಗೆ ಸುಲಭವಾಗಿ ನಿಲುಕುವಂತಾ ಉದ್ದಾನುದ್ದದ ಟೇಬಲ್‍ಗಳು. ಸುತ್ತಲೂ ಹತ್ತೆಂಟು ಜನ ಕೂರುವಂತಾ ಸಣ್ಣ ಸೈಜಿನ ಕುರ್ಚಿಗಳು. ಅಬ್ಬಾ, ಅದೆಷ್ಟೊಂದು ವೆರೈಟಿ ವೆರೈಟಿ ತಿಂಡಿಗಳು. ಕುಡಿಯಲು ನಾನಾ ವಿಧದ ಕೂಲ್ ಡ್ರಿಂಕ್ಸಿನ ಬಾಟಲಿಗಳು. ಸಮವಸ್ತ್ರ ಧರಿದ್ದ ವೈಟರ್‌ಗಳು ಮಕ್ಕಳು ಕೇಳಿದ್ದನ್ನು ಕೇಳಿದಷ್ಟು ತಂದು ತಂದು ಬಡಿಸುತ್ತಿದ್ದರು. ಆ ವೈಭವಕ್ಕೆ ಮರುಳಾಗಿಬಿಟ್ಟಿದ್ದ ಅಭಿ. ಮನೆಗೆ ಬಂದ ಮೇಲೆ ಅಲ್ಲಿ ಮಜಾ ಮಾಡಿದ್ದನ್ನು ಅಮ್ಮನೆದುರು ವರ್ಣಿಸಿದ್ದೇ ವರ್ಣಿಸಿದ್ದು.

‘ಈ ಸಲ ನನ್ನ ಬರ್ತ್ ಡೇ ಅದೇ ಹೋಟೆಲಲ್ಲಿ..’ ಅಂದಿದ್ದ.  ‘ಅಪ್ಪನ್ನ ಕೇಳು..’ ನುಣುಚಿಕೊಂಡಿದ್ದಳು ಅಮ್ಮ.

*** 

‘ಬೇಗ್ ಬೇಗ ರೆಡಿಯಾಗು. ಇವತ್ತು ನಿನ್ನ ಒಂದು ಹೊಸ ಜಾಗಕ್ಕೆ ಕರ್ಕೊಂಡ್ಹೋಗ್ತೀನಿ..’ ಹೇಳಿದರು ಅಪ್ಪ, ಅದೊಂದು ಭಾನುವಾರದ ದಿನ. ಹೊರಗೆಲ್ಲಾದರೂ ಹೋಗುವುದು ಅಂದರೆ ಅವನಿಗೆ ಭಾರಿ ಇಷ್ಟ. ಅಪ್ಪ, ಮಗ ಮಧ್ಯಾಹ್ನದ ಹೊತ್ತಿಗೆ ಹೋಗಿದ್ದು ಒಂದು ಹಳೇ ಬಿಲ್ಡಿಂಗಿಗೆ. ಆಗಲೇ ಅಪ್ಪನ ಫ್ರೆಂಡು ಅವರ ಮಗನ ಜೊತೆ ಅಲ್ಲಿಗೆ ಬಂದಿದ್ದರು. ಅವನು ಅಭಿಗಿಂತಾ ಮೂರ್ನಾಲ್ಕು ವರ್ಷ ದೊಡ್ಡ ಹುಡುಗ. ಅವತ್ತು ಅವನ ಹ್ಯಾಪಿ ಬರ್ತ್ ಡೇ ಅಂತೆ. ಪ್ರತಿ ವರ್ಷ ‘ಅನಾಥ ಮಕ್ಕಳ ಆಶ್ರಯ ಧಾಮ’ದಲ್ಲಿ ಅವನ ಬರ್ತ್ ಡೇ ಮಾಡುತ್ತಾರಂತೆ ಅವನ ಅಪ್ಪ.

ನೆಲದ ಮೇಲೆ ತಟ್ಟೆಯ ಎದುರು ಉದ್ದಾನುದ್ದಕ್ಕೆ ಊಟಕ್ಕೆ ಕೂತ ಮಕ್ಕಳು ಒಕ್ಕೊರಲಿನಲ್ಲಿ ‘ಹ್ಯಾಪಿ ಬರ್ತ್ ಡೇ..’ ಎಂದು ಚಪ್ಪಾಳೆ ತಟ್ಟಿದಾಗ ಅಭಿಗೆ ಮೈ ಜುಮುಜುಮು. ಅಪ್ಪ ಮತ್ತು ಅವರ ಫ್ರೆಂಡ್ ಸೇರಿಕೊಂಡು ಮಕ್ಕಳಿಗೆ ಲಾಡು ಹಂಚಿದರು. ಆಮೇಲೆ ಎಲ್ಲರಿಗೂ ಒಟ್ಟಿಗೆ ಊಟ. ಬಿಸಿಬೇಳೆ ಬಾತು, ಮೊಸರನ್ನ, ಅಂಬೊಡೆ. ಎರಡು ವರ್ಷದವರಿಂದ ಹಿಡಿದು ಹದಿನಾರರವರೆಗಿನ ವಿವಿಧ ವಯೋಮಾನದ ಹುಡುಗರನ್ನು ಕಂಡು ಅಭಿಗೆ ಕುತೂಹಲ. ಮೂವತ್ತು, ಮೂವತ್ತೈದು ಜನ ಇದ್ದರೂ ಗೌಜು, ಗದ್ದಲ ಇಲ್ಲ.

ಅಪ್ಪನ ಫ್ರೆಂಡ್ ಮಗ, ಅವನ ಹೆಸರು ವಿವೇಕ್ ಅಂತೆ, ಅಭಿಗೆ ಪಿಸುದನಿಯಲ್ಲಿ ಎಲ್ಲಾ ವಿವರಿಸಿ ಹೇಳುತ್ತಿದ್ದಾನೆ. ಇವರೆಲ್ಲಾ ಅಪ್ಪ, ಅಮ್ಮ ಯಾರೂ ಇಲ್ಲದ ಅನಾಥ ಮಕ್ಕಳು. ಕೆಲವರನ್ನು ಹುಟ್ಟುತ್ತಿದ್ದ ಹಾಗೆ ಯಾರೋ ತಂದು ಇಲ್ಲಿ ಬಿಟ್ಟು ಹೋಗಿದ್ದಾರೆ. ಇನ್ನು ಕೆಲವರ ಹೆತ್ತವರು ಯಾವುದೋ ಕೆಟ್ಟ ಕೆಲಸ ಮಾಡಿ ಜೈಲು ಸೇರಿ ಮಕ್ಕಳನ್ನು ತಬ್ಬಲಿಗಳನ್ನಾಗಿ ಮಾಡಿದ್ದಾರೆ. ಬೀದಿ ಬದಿಯಲ್ಲಿ ಬಿಟ್ಟು ಹೋಗಿದ್ದ ಮಕ್ಕಳೂ ಇಲ್ಲಿ ಬೆಳೆಯುತ್ತಿದ್ದಾರೆ. ಅನಾಥಾಶ್ರಮದವರು ಇವರನ್ನು ಸಾಕಿ ವಿದ್ಯೆ, ಬುದ್ಧಿ ಕಲಿಸುತ್ತಿದ್ದಾರೆ. ಸರ್ಕಾರದಿಂದ ಸಹಾಯಧನ ಸಿಕ್ಕಿದರೂ ಇಷ್ಟು ಮಕ್ಕಳ ಹೊಟ್ಟೆ ಬಟ್ಟೆ ನೋಡಿಕೊಳ್ಳುವುದು ತಮಾಷೆ ಅಲ್ಲ. ದಾನಿಗಳು ಮಾಡುವ ಸಹಾಯದಿಂದ ಮಕ್ಕಳ ಹೊಟ್ಟೆ ತುಂಬುತ್ತಿದೆ. ಎಲ್ಲಾ ಕೇಳಿ ಅಭಿ ಬೆಚ್ಚಿಬಿದ್ದಿದ್ದ. ತಲೆ ಬಗ್ಗಿಸಿ ಉಣ್ಣುತ್ತಾ ಕೂತವರನ್ನು ನೋಡಿ ಅಭಿಗೆ ಕಣ್ಣೀರು ಬರುವ ಹಾಗಾಯ್ತು. ‘ಅಪ್ಪ ಇಲ್ಲ, ಅಮ್ಮ ಇಲ್ಲ’ ಎನ್ನುವ ಸಂಗತಿ ಅವನ ಕಲ್ಪನೆಗೆ ಮೀರಿದ್ದು. ಅಪ್ಪ, ಅಮ್ಮ, ಮನೆಗಿನೆ ಇಲ್ಲದೆ ಯಾರಾದರೂ ಇರುವುದಕ್ಕೆ ಸಾಧ್ಯವೇ? ಯಾಕೋ ಬಿಗಿಯಿತು ಗಂಟಲು. ವಿವೇಕ ಹೇಳುತ್ತಿದ್ದಾನೆ; ‘ವರ್ಷಕ್ಕೆ ಒಂದೊಂದು ದಿನ ಒಬ್ಬೊಬ್ಬರು ಊಟ ಹಾಕಿಸಿದರೂ ಸಾಕು, ಹೊಟ್ಟೆ ತುಂಬಾ ಇವರು ಉಣ್ಣಬಹುದು, ಅಲ್ವಾ?’

ಅಭಿ ತಲೆ ಆಡಿಸಿದ.

*** 

ಇನ್ನೇನು ಅಭಿಯ ಹುಟ್ಟುಹಬ್ಬ ಹತ್ತಿರ ಹತ್ತಿರ ಬಂದೇಬಿಟ್ಟಿದೆ. ಒಂದು ಕಡೆ ಸ್ಟಾರ್ ಹೋಟೆಲಿನಲ್ಲಿ ಆಚರಿಸಿಕೊಳ್ಳುವ ಗಡದ್ದಿನ ಹುಟ್ಟುಹಬ್ಬ ಅಭಿಯನ್ನು ಎಳೆಯುತ್ತಿದೆ. ಕೈ ತುಂಬಿ ಚೆಲ್ಲುವಷ್ಟು ಉಡುಗೊರೆಗಳು. ಅದರ ಆಕರ್ಷಣೆ ಸುಲಭದಲ್ಲಿ ತಪ್ಪಿಸಿಕೊಳ್ಳುವಂಥದ್ದಲ್ಲ. ಅದು ಬಿಟ್ಟರೆ ಮನೆಯಲ್ಲಿ ನಡೆಸುವ ಹುಟ್ಟುಹಬ್ಬವೂ ಓಕೆ. ಅನಾಥಾಶ್ರಮದಲ್ಲಿ? ‘ಅಷ್ಟು ಮಕ್ಕಳಿಗೆ ಒಂದು ಹೊತ್ತಿನ ಊಟ’ ಅನ್ನುವ ಮಾತು ಪುಟ್ಟ ಹುಡುಗನ ಅಂತರಂಗದಲ್ಲಿ ಬಲವಾಗಿ ಕೂತುಬಿಟ್ಟಿದೆ. ಏನು ಮಾಡಬೇಕು? ನಿರ್ಧಾರ ಮಗನಿಗೇ ಬಿಟ್ಟಿದ್ದಾರೆ ಅಭಿಯ ಅಪ್ಪ, ಅಮ್ಮ..‌

***

ನಿಮ್ಮ ಊಹೆ ಸರಿ. ಈ ಸಲ ಅಭಿಯ ಹುಟ್ಟುಹಬ್ಬ ‘ಅನಾಥಮಕ್ಕಳ ಆಶ್ರಯಧಾಮ’ದಲ್ಲಿ ನಡೆಯಿತು. ಇನ್ನು ಮುಂದೆ ಪ್ರತಿ ಸಲ ಕೂಡಾ ಹೀಗೇ. ಇದು ಅಭಿಯ ನಿರ್ಧಾರ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !