ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದ್ದುಕಾಕು

Last Updated 22 ಡಿಸೆಂಬರ್ 2018, 19:44 IST
ಅಕ್ಷರ ಗಾತ್ರ

ಪದ್ದುಕಾಕು ಮತ್ತು ಗಂಗವ್ವಳ ಸ್ನೇಹ ಭಾಳಾ ಹಳೆಯದು. ಹಾಗೆ ನೋಡಿದರೆ ಗಂಗವ್ವಳು ಪದ್ದು ಉರ್ಫ ಪದ್ಮಾವತಿಗಿಂತ ವಯಸ್ಸು ಮತ್ತು ಜೀವನಾನುಭವದಿಂದ ಹಿರಿಯಳು. ವೃದ್ಧಾಪ್ಯದಿಂದ ಹಾಸಿಗೆ ಹಿಡಿದು ಮೂಲೆ ಸೇರಿದ್ದಾಳೆ. ಗಂಗವ್ವನ ಗಂಡ್ಮಕ್ಕಳು ದೂರದೂರದಿಂದ ಕಳಿಸೋ ದುಡ್ಡಿನೊಳಗ ಬದುಕನ್ನು ದೂಡುತಿರೋಳು. ಅವಳ ಮೊಳಕಾಲಿಗೆ ಅದ್ಯಾವುದೋ ಸುಡುಗಾಡ ರೋಗ ಬಡಿದು ಏಳಕ್ಕೂ ಆಗದ ಕೂರಕ್ಕೂ ಆಗದ ವಿಚಿತ್ರ ಚಡಪಡಿಕೆಯಲ್ಲೇ ಬದುಕನ್ನು ಬಹು ಆಶಾವಾದದಿಂದಲೇ ನೂಕುತಿರುವವಳು.

ಪದ್ದುಕಾಕು ಕಿರಿಯರೊಳಗ ಪದ್ದುಕಾಕು ಎಂತಲೋ ದೊಡ್ಡವರೊಳಗ ಪದ್ಮವ್ವ, ಪದ್ಮಾವತಿ ಎಂತಲೋ ಪರಿಚಿತಳು. ಈಗ ಅರವತ್ತರ ಅಂಚಿನೊಗನೂ ಇಷ್ಟು ಛಂದಾನ ಅಂಗಸೌಷ್ಟವ ಇಟ್ಟುಕೊಂಡವಳು. ಇನ್ನು ಹರೆಯದರ ಆಚೀಚೆ ವಯೋಮಾನದ ಪುರುಷರ ತೊಡಿಸಂದೀಲಿ ಚೇಳು ಕುಟಿಕಿದಂಗ ಮಾಡಿದ್ದರಲ್ಲಿ ಅಚ್ಚರಿಪಡಬೇಕಿಲ್ಲ! ಚೇಳು ಕಡಿಸಿಕೊಂಡವರ ಕತಿಗಳು ಅವಳ ಸುತ್ತ ಗಿರಕಿ ಹೊಡಿತಿರತವೆ. ಅದಕ್ಕ ಕಾರಣ ಆಕೆ ಗಂಡ ಜಿನ್ನಪ್ಪನ ಅತಿಯಾದ ಇಂದ್ರಿಯ ನಿಗ್ರಹಗಳ ವ್ರತಾಚಾರ.

ಇಷ್ಟೆಲ್ಲ ಘನಘೋರ ಹತೋಟೆಯ ಪ್ರಯೋಗಗಳ ನಡುವ ಪದ್ದುಗ ಒಬ್ಬ ಮಗನ್ನ ಮತ್ತ ಒಬ್ಬಳು ಮಗಳನ್ನ ಜಿನ್ನಪ್ಪ ದಯಪಾಲಿಸಿದ್ದ. ಅವುಗಳು ಸಂತಾನ ರೂಪದೊಳಗ ಈ ಜಗತ್ತಿಗಿ ಅವತರಿಸಿದ ಮ್ಯಾಲ ಆಡಿಕೊಳ್ಳುವರ ಬಾಯಾಗಿನ ತಿನ್ನು ಎಲೀನು ಆದವು. ಹರೇಕ ಬಂದ ಹಿರಿಮಗಳಿಗಿ ಮೊದಲು ಬಾಸಿಂಗ ಬಿಗಿದು ಕಳಿಸಿದೋಳು ನಂತರ ಭಾಳಷ್ಟ ಮಳಿ, ಬಿಸಿಲಗಳ ಮ್ಯಾಲ ಮಗನಿಗಿ ಮದುವಿಗಿ ಕನ್ಯಾ ತಂದು ಬಾಸಿಂಗ ಕಟ್ಟೋದು ಮಾಡಾಕ ಮಹಾಯುದ್ಧಾನ ಮಾಡಬೇಕಾತು. ಯುದ್ಧ ಮುಗಿದರೂ ಬಂದ ಸೊಸಿಯ ತಿವಿತಗಳಿಗಿ ಗಂಗವ್ವ, ಅಕನವ್ವ ಮತ್ತಿತರ ಮನಿಗಳ ಅಡಗಿ-ಭಾಂಡಿ ಕೆಲಸ ಮಾಡಿ ಹೊಟ್ಟಿ ತುಂಬಿಕೋ ಹೋರಾಟದ ಪದ್ದು ಮಾತ್ರ ಏನೂ ನಡದೇ ಇಲ್ಲ ಅನ್ನುವವರ ಹಾಂಗ ನಗುನಗುತ ಬಾಳೆ ಸಾಗಿಸುತಿದಾಳ.

ಅವತ್ತು ಅಪರೂಪಕ್ಕ ಗಂಗವ್ವನ ಮಗ ಬಸೂ ಮತ್ತ ಸೊಸಿ ಭಾಳ ದಿನಗಳ ಬಳಿಕ ನೋಡಲಿಕ್ಕ ಅಂತ ಬಂದಿದ್ದರು. ಒಳಗ ಪದ್ದುಕಾಕು ಉಪ್ಪಿಟ್ಟು ಮಾಡುವ ತಜಿಬಿಜಿಯಲ್ಲಿದ್ದಳು. ಗಂಗವ್ವಗ ದಿನ ಹರಿವತ್ತಿನ್ಯಾಗ ನ್ಯಾಹರಿಗೆ ಒಂದೇನಾರ ಮಾಡಿ ಇಬ್ಬರು ಊರ ಉಸಾಬರಿ ಮಾತಾಡತಾನ ತಿಂದು ಬಿಡುತ್ತಿದ್ದರು. ತಿಂದ ಪಾತ್ರೆಗಳನ್ನ ತೊಳೆದಿಟ್ಟು ಹೋಗುವುದು ಪದ್ದುನ ದಿನನಿತ್ಯದ ಕಾಯಕ. ಅವತ್ತು ಪದ್ದುಕಾಕು ಈ ಅತ್ತೆ, ಸೊಸೆಯಂದಿರ ಮಾತು ಕೇಳುತ್ತ ರವೆ ಹುರಿಯುತ್ತಿದ್ದಳು. ಮಗ ಬಸೂ ಪಡಸಾಲೆಯಲ್ಲಿ ಪತ್ರಿಕೆ ಓದುತ್ತಿದ್ದ. ಅತ್ತೆ, ಸೊಸೆಯರ ಮಾತುಗಳು ತೀವ್ರತೆಯಲ್ಲಿದ್ದಾಗ ಉಪ್ಪಿಟ್ಟು ಮಾಡತಿದ್ದ ಕಾಕು ನಡುವ ಬಾಯಿ ಹಾಕಿ ಸ್ವಭಾವ ದೋಷದಿಂದ ಏನೋ ಹೇಳಲು ಹೋದಳು. ತಟ್ಟನ ಗಂಗವ್ವ ತನ್ನ ದುರ್ನಡೆ ಸ್ವಭಾವದ ಹಂಗ ಠಸ್ಸನೆ ಪದ್ದುಗ ಸಿಟ್ಟಿಗಿ ಬಂದಳು.

‘ನಡುವ ಯಾಕ ಬಾಯ ಹಾಕತಿ? ನಿಂಗ ತಿಳ್ಯಾಂಗಿಲ್ಲ- ಬಿಡಾಂಗಿಲ್ಲ...’ ಎಂದು. ಆ ಗಂಗವ್ವನ ಸಿಡುಕಿನ ಮಾತಿಗಿ ಪದ್ದುಕಾಕು ಅವಮಾನಿತಳಾದಂಗ ಎದ್ದು ಸೆಟಕೊಂಡ ಉಪ್ಪಿಟ್ಟನ್ನ ಅರ್ಧಕ್ಕ ಬಿಟ್ಟು ಕವಣ್ಯಾಗಿನ ಕಲ್ಲು ರೊಂಯ್ಯನ ಹ್ವಾದಂಗ ಹೋದಳು. ಬಸೂ ಪತ್ರಿಕೆ ತೆಗೆದಿಟ್ಟು ತುಸು ಸಿಟ್ಟಲೆ ಅವನವ್ವಗ ಅಂದ- ಒಂದ್ಯಾನೋ ಮಾತಂತ ನಡುವ ಅಂದಳು... ‘ಅದಕ್ಕ ಹಿಂಗ ಠಸ್ಸಂತ ನೀ ಸಿಟ್ಟಿಗಿ ಬಂದರ ಹೆಂಗ? ಆಕಿಗಿ ನಮ್ಮ ಮುಂದ ಅವಮಾನ ಆದಂಗ ಅನಿಸೋದಿಲ್ಲ ಯಾನ? ನಾವ ದೂರ ಇರೋರು.. ಇಲ್ಲಿ ನಿನಗ ನೋಡುವಾಕಿ ಆಕೀನ..!’ ಕೊಂಚ ಸಾವರಿಸಿಕೊಂಡ ಬಸೂ ಗಂಗವ್ವಗ ತಣ್ಣಗ ಹೇಳಿದ- ‘ನಾ ಹಿಂಗ ಅಂದ್ನಿ ಅಂತ ತಪ್ಪ ತಿಳಿಬ್ಯಾಡ. ಇರುವಿ ಹಂತ ಇರುವಿಗಿ ಸಿಟ್ಟಿರತದ. ಆಕೀಯಂತು ಮನಸ್ಯಾಳು’ ಅಂದಾಗ ಗಂಗವ್ವಗೂ ತನ್ನ ದುಡುಕಿನ ಅರಿವು ಆಗಿತ್ತು.

ಸ್ವಲ್ಪ ಸಾವರಿಸಿಕೊಂಡ ಗಂಗವ್ವ- ‘ಆಕೀಗಿ ನನಗ ಬಿಟ್ಟಿದ್ದಿಲ್ಲ.. ಆಕೀ ಎಲ್ಲೂ ಹೊಗೊಲ್ಲ ತಗೊ.. ಸಿಟ್ಟಿಳಿದ ಮ್ಯಾಲ ಬಂದ ಬರತಾಳ..’ ಆತ್ಮವಿಶ್ವಾಸದಿಂದ ಅಂದಳು. ಹೌದು. ಸಾಕಷ್ಟು ಸಾರೆ ಗಂಗವ್ವ- ಪದ್ದುಕಾಕೂನ ಇಂಥ ಪ್ರಸಂಗಗಳು ನಡೆದ್ದಾವು.

ಕೋಮು, ಜಾತಿ ಹೆಸರಿಂದ ಜಗತ್ತು ಜಗಳಕ್ಕಿಳಿದರ ಈ ಊರು ತಣ್ಣಗ ಕೂಡಿ ಬಾಳೋದರೋಳಗ ಮಾಹೀರ್ ಐತಿ. ಅದಕ್ಕ ಕಾರಣ ಗ್ರಾಮದೇವರು ಸಿದರಾಯ. ಊರಿನ ಎಲ್ಲ ಜಾತಿ ಜಮಾತಿನವರ ಆರಾಧ್ಯದೈವ. ಅದಕ್ಕ ಅವನ ಬಗ್ಗೆ ಒಂದು ಮಾತದ. ಸಿದರಾಯನ ಪಾಂಡರ‍್ಯಾಗ ಎಚ್ಚರಲೇ ಬಾಳೇ ಮಾಡಬೇಕು ಮತ್ತ... ಇಲ್ಲದಿದ್ದರ ಅಂವ ಲಗಾ ಹೊಡಸತಾನ.. ಅಂತ ಸಕಲ ಕುಲಾದಿ ಜನಗಳು ಭಯಭಕ್ತಿಯಿಂದ ಬಾಳತಿದ್ದರು. ಈ ಭಯ, ಭಕುತಿ ಒಮ್ಮೊಮ್ಮಿ ಮತ್ತು ಸಾಕಷ್ಟು ಸಾರೆ ಅತಿರೇಕಕ್ಕ- ಮೌಢ್ಯಕ್ಕೂ ಹೊರಳಿದ್ದುಂಟು. ಆದರ ಮಿಥ್ಯಾದೇವರಿಗಿ ನಡಕೊಳ್ಳಬಾರದು ಅನ್ನೋ ತಾತ್ವಿಕತೆಯ ಪದ್ದುಕಾಕು, ಆಕೆ ಇಂದ್ರಿಯ ನಿಗ್ರಹದ ಗಂಡ ಮತ್ತು ಆ ಸಮುದಾಯವರೂ ಸಹ ಸಿದರಾಯಗ ಅದ ಭಕ್ತಿಲೇ ನಡಕೋತಿದ್ದರು. ಊರ ದೇವರ ಭಯ ಬಿಟ್ಟಿದ್ದಲ್ಲ. ಅಥವಾ ದ್ಯಾವರೆಲ್ಲ ಒಂದ ಎಂಬೋ ಭಾವನ ಕೂಡ ಕಾರಣವಾಗಿರಬಹುದು.

***

ಪದ್ದುಕಾಕು ತನ್ನ ಗಂಡ ಜಿನ್ನಪ್ಪಗ ಜೋರು ಮಾಡಿದಳು. ಒಂದು ಗುಡ್ಯಾಗ ಹೋಗಿ ಕಸಬರಿಗಿ ತಗೊಂಡು ಇಡೀ ಪೌಳಿಗಳನ್ನ ಗುಡಿಸೋದು. ಇಲ್ಲಂದರ ಬಸದಿ ಕಡೆ ಹೋಗಿ ಮುನಿಗಳ ಪ್ರವಚನ ಕೇಳೋದು. ಇದನ್ನ ಮಾಡತ ಮನೀನ ನಿರ್ಲಕ್ಷ್ಯ ಮಾಡೋದು ಅವನ ಗುಣಸ್ವಭಾವ ಆಗಿತ್ತು. ಒಂದ ನಮೂನಿ ಹೊಣಿಗಾರಿಕೆಯಿಂದ ಪಲಾಯನ ಗೈಯ್ಯೋರ ಹಂಗ.

‘ಮಗ.. ದೊಡ್ಡಾಂವ ಆದ ಆದಂತ ಹೇಳಿ ನನ್ನ ಬಾಯಿ ಹರದು ಹೋತು.. ಪೋರೀನ ತಗಿವಲ್ಲಿ.. ಈಗಂವಾ ಪಸ್ತೀಸ ವರ್ಷದಂವ ಆದ.. ಬಿಡಿನ್ನ ಗುಡಿ-ಬಸದಿಗಳ ತಿರಗೋದು..’ ಪದ್ದುಕಾಕು ಸೆಡವಿಂದ ಅಂದಳು.

ಮೊಳಕಾಲೊಳಗ ಮಾರಿ ಹಾಕಿ ಕೂತಿದ್ದ ಜಿನ್ನಪ್ಪ ಮಾರಿ ಹೊರ ತೆಗೆದು ಅದ ಜೋರಿಂದ ಉತ್ತರಿಸಿದ- ‘ನಮ್ಮ ಜಾತ್ಯಾಗ ಪೋರಿಗೋಳ ಎಲ್ಲಿ ಅದಾವು.. ಪೈಲೆ ಹೆಂಗ ಹಿರೇರು ಹೆಣ್ಣಿಗಿ ತೆರಕೊಟ್ಟ ತರತಿದ್ದರಲ್ಲ, ಹಂಗ ಈಗ ಲಕ್ಷ ಲಕ್ಷ ಕೊಟ್ಟ ತರಬೇಕಾದ ಪರಿಸ್ಥಿತಿ ಐತಿ. ಅದೂ ಸಹ ಬ್ಯಾರೆ ಜಾತಿಯಾಗಿನ ಪೋರಿಗಳನ್ನ, ನಿನಗೂ ಗೊತ್ತೈತಿ ಮತ್ತ ಕೇಳತಿಯಲ್ಲ!?’ ದುಸುಮುಸು ಮಾಡುತ್ತ ಜಿನ್ನಪ್ಪ ಅಂದ. ಇಬ್ಬರೂ ಅಸಹಾಯಕರು. ಇಬ್ಬರಷ್ಟ ಅಲ್ಲ ಇಡೀ ಸಮಾಜವೇ ಹಿಂದಿನವರು ಗೈದ ನಡೆಗೆ ಬೆಲೆತೆರಬೇಕಾಗೇದ. ಹೆಣ್ಣುಗಳ ಬರದಿಂದ ಸಮುದಾಯ ತತ್ತರಿಸಿದೆ. ಅಸಹಾಯತನದಿಂದ ಜರ್ಜರಿತಗೊಂಡಿದೆ.

ಹೌದು. ಎರಡಿಪ್ಪತ್ತ ಮಳಿಗಾಲಗಳ ಹಿಂದ ನಡೆದ ದೊಡ್ಡ ಪ್ರಮಾಣದ ಈ ಸಮುದಾಯದೊಳಗಿನ ಘೋರಪರಾಧ. ಆಸ್ತಿ ಅಳಿಯನ ಪಾಲಾದೀತು, ಹೊಳಿಸಾಲ ಹೊಲಗದ್ದೆಗಳು ಕೈತಪ್ಪ್ಯಾವು ಎಂಬ ಗಂಡು ಸಂತಾನದ ವ್ಯಾಮೋಹಗಳ ಪ್ರತಿಫಲದಿ ಹೊಸಕಿಹಾಕಿದ ಸ್ತ್ರೀಭ್ರೂಣಗಳು; ಇವತ್ತು ಮದುವಿ ಗಂಡುಗಳಿಗಿ ಭೂತಗಳಾಗಿ ಕಾಡತಿದಾವು. ಅದು, ಆ ಗಂಡುಪ್ರಾಣಿಗಳು ಮದುವಿ ಹೆಣ್ಣುಗಳಿಗಾಗಿ ಪರಿತಪಿಸೋ ಕಾಲ ಬಂದೊದಗುವ ಹಂಗ ಮಾಡೇದ. ಹಂಗ ನೋಡಿದರ ಇದು ಉಳಿದ ಜಾತಿಗಳನ್ನು ಅಷ್ಟು ಕಾಡಿಲ್ಲ. ದೊಡ್ಡ ಮತ್ತು ಚಿಕ್ಕ ಪ್ರಮಾಣದ ಸ್ಥಿರಾಸ್ತಿ ಹೊಂದಿದ ಅತ್ಯಂತ ಮಡಿವಂತಿಕೆಯ ಈ ಸಮುದಾಯವು ಈ ಸಂಕಷ್ಟಕ್ಕ ಸಿಲುಕಿದೆ. ಹೀಗಾಗಿ ಕಠೋರವಾದ ಮಡಿಮೈಲಿಗೆ ಮರೆತು ಬೇರೆ ಜಾತಿಯ ಮದುವೆ ಹೆಣ್ಣುಗಳನ್ನು ತೆರಕೊಟ್ಟು ತರುತ್ತಿದೆ. ದೀಕ್ಷೆ ನೀಡಿ ಧರ್ಮಕ್ಕೆ ಸೇರಿಸಿಕೊಳ್ಳುತ್ತಿದೆ. ಕಬ್ಬು ಬೆಳೆಯ ಆರ್ಥಿಕ ವಲಯದ ಪ್ರದೇಶಗಳಲ್ಲಿ ಇದರ ಶಾಖ ತೀವ್ರವಾಗಿ ತಟ್ಟಿದೆ.

ಸಾಂಗಲಿ, ಕೊಲ್ಲಾಪುರ, ಬೆಳಗಾವಿ ಗಡಿಯಂಚಿನ ನತದೃಷ್ಟ ಗಂಡುಗಳು ಹರೆಯನ್ನ ಹಕನಾಕ ಹಾಳು ಮಾಡಿಕೊಂಡು ಸೊರಗುತಿದಾವೆ, ಹಿಂದಿನವರಿಗಿ ಸಾವಿರ ಸಾವಿರ ಶಾಪ ಹಾಕುತಿವೆ. ಹೆಣ್ಣು- ಗಂಡುಗಳ ಶೋಧದ ಮೆಟ್ರಿಮೊನಿಯಲ್ ಸಂಸ್ಥೆ ತರಹ ಈ ಸಮುದಾಯಕ್ಕ ಹೆಣ್ಣುಗಳನ್ನು ಪೂರೈಸುವವರು ಸಿದ್ಧಗೊಂಡು ವ್ಯವಹಾರ ಚುರುಕುಗೊಳಿಸ್ಯಾರ. ಇದು ಅವರಿಗೆ ಛಲೊ ಲಾಭದ ಕಾಯಕ. ನಡುವಯಸ್ಸಿನ ಮಹಿಳೆಯರು ಇದಕ್ಕ ಮಧ್ಯಸ್ಥರು. ಇದೆಷ್ಟು ಮಹಾಸುದ್ದಿ ಆತಂದರ ಮುನಿಗಳು, ಮಹಾಸ್ವಾಮಿಗಳು. ರಾಜಕೀಯ ನೇತಾರರು ಮುಂದಿನ ಪೀಳಿಗೆಯಾದರು ಕಷ್ಟಕ್ಕೀಡಾಗದಿರಲಿ ಅಂತ ಜನಜಾಗರಣೆ ಅಭಿಯಾನವನ್ನು ಶುರುವು ಮಾಡಿದರು.

ಪದ್ದುಕಾಕುನು ಅವರಿವರು ಪೈ-ಪಾವುಣ್ಯಾರಗಳಿಗಿ ಹೇಳಿಕಿ ಕೊಟ್ಟ ಹುಡುಕಾಟ ನಡಿಸಿದರೂನು ತನ್ನ ಸುಪುತ್ರನಿಗಿ ಮಾತ್ರ ಕನ್ಯಾ ಸಿಗತಿಲ್ಲ. ಕೊನಿಗಿ ಬ್ಯಾಸತ್ತು ಒಬ್ಬ ಏಜೆಂಟ್ ತರಹದ ಮಹಿಳಾಮಣಿಯನ್ನ ಹುಡುಕಿ ಹಿಡಿದು ದೂರದ ನಾಡಿನ ಕನ್ಯೆ ತೆಗೆದಳು. ನೋಡೋದಕ್ಕ ಛಂದಾನಚಲುವಿ ಆದ ಆಕಿ ಮನಿತನಕ್ಕ ಎರಡ ಲಕ್ಷ ಮತ್ತ ಹೆಣ್ಣು ತೆಗೆದಾಕಿಗಿ ಐವತ್ತು ಸಾವಿರ ಬಡಿದು ಸಿಂಪಲ್ಲಾಗಿ ಯಾದಿ ಪೇ ಶಾದಿ ಮಾಡಿ ಮನಿತುಂಬಿಸಿಕೊಂಡಳು. ಸೊಸಿಯ ಬಿಸಿರೊಟ್ಟಿ ತಿನ್ನೋದಕ್ಕ ಸಿದ್ಧಳಾದಳು.

ಆದರ ಆದದ್ದನ ಬ್ಯಾರೆ. ಸೊಸಿ ಪದ್ದುಕಾಕು ತಿಳಕೊಂಡಂಗಿರಲಿಲ್ಲ. ಭಾಳ ಘಟವಾನಿ ಆಗಿದ್ದಳು. ಅತ್ತಿ ಪದ್ದುಕಾಕುನ ಸುತರಾಮ ಸೇರತಿರಲಿಲ್ಲ. ನಿತ್ಯ ಜಗಳ- ಕದನ ಆರಂಭಗೊಂಡವು. ಬಿಸಿರೊಟ್ಟಿ ಹಾಳಾಗಲಿ, ತಂಗಳ ರೊಟ್ಟಿಗೂ ಪಿರಿಯಾದಳು. ಪದ್ದೂನ ಸ್ವಾಟಿಗಿಗೆ ತಿವಿದು ಮಾತಾಡೋವಷ್ಟ ಜೋರಿದ್ದಳು. ಮಗ ಪೂರ್ತಿ ಅವಳ ಚಲುವಿಗಿ ಮಳ್ಳಾಗಿ ಪರವಶನಾಗಿದ್ದ. ಎಂಥ ಸಾಧು ಮನಸಿನ ಗಂಡಸೂ ಸಹ ಒಮ್ಮಿ ಹೋಳ್ಳಿ ನೋಡಬಹುದಾದ ರೂಪವತಿಯಾದ ಅವಳಿಗಿ ಈ ಮಗ ಫೇದ್ರುತರ ದಾಸನಾಗಿ ಬಿಟ್ಟಿದ್ದ.

ಮೊದಲ ಧಾರ್ಮಿಕ ಸೆಳೆತಕ್ಕ ಒಳಗಾದ ಜಿನ್ನಪ್ಪ ಇದೆಲ್ಲ ಜಂಜಡಗಳಿಗಿ ಬ್ಯಾಸತ್ತು ಒಂದು ತೀರ್ಮಾನಕ್ಕ ಬಂದುಬಿಟ್ಟಂಗಿದ್ದ. ಅವ ವ್ರತಾಚಾರಗಳನ್ನು ಅಧಿಕಗೊಳಿಸಿದ. ಹಗಲು ಗುಡಿಯಲ್ಲಿರುವುದು. ಸಂಜೆ ಮುನಿಗಳ ಸಹವಾಸಗಳಲ್ಲಿ ಕಳೆಯುವುದು. ತನ್ನ ಆಹಾರ ಪದ್ಧತಿಯನ್ನು ಇನ್ನೂ ಹಗುರಗೊಳಿಸಿದ. ಪದ್ದುಕಾಕು ಮಾತ್ರ ಪಾತ್ರೆಪಗಡಿಗಳ ಜತೆ ತಡಬಡಂತ ಬದುಕ ಸವೆಯಹತ್ತಿದಳು.

***

ಪದ್ದುಕಾಕು ಮನೆಯಲ್ಲಿ ಏಕಾಂಗಿಯಾಗಿರುತಿದ್ದಳು. ಜಿನ್ನಪ್ಪಂತು ಮನಿಗಿ ಬರೋದನ್ನ ನಿಲ್ಲಿಸಿದ್ದ. ಆಕೆಯ ಮಗ ಹೆಂಡತಿಯನ್ನ ಕರಕೊಂಡು ಬ್ಯಾರೆಯಿದ್ದ. ಪದ್ದುಕಾಕು ಒಮ್ಮೊಮ್ಮಿ ವಾರತನಕ ಗಾಯಬ್ ಆಗಿರತಿದ್ದಳು. ಆಕಿ ಇಚಲಕರಂಜಿಗಿ ಪಾವಣ್ಯಾರ ಕಡೆ ಹೋಗಿದ್ದಾಳಂತ ಓಣಿಯೊಳಗ ಬಾತಮಿಯಿರತಿತ್ತು. ಆಕಿ ಪಾವಣ್ಯಾರ ಕಡೆ ಇದ್ದರೂ ಮಾರವಾಡಿ ಸಾವುಕಾರ ಕಡೆ ಇರತಾಳಂಬೋ ಗಾಸಿಪ್ಪು ಸಿನೆಮಾ ನಟನಟಿಯರಿಗಿದ್ದಂಗ ಇರತಿತ್ತು. ಆಗ ಗಂಗವ್ವ ಹೊಲಮನಿ ಮಾಡಿಕೊಂಡಿದ್ದಳು.

ಊರೋಳಗ ಕಾಕು ಇದ್ದರ ಗಂಗವ್ವನ ಮನಿಗಿ ತಪ್ಪದ ಮಜ್ಜಿಗಿ, ಮೊಸರಕ್ಕ ಬರತಿದ್ದಳು. ಆಗ ಸುಖಾಲಿತ್ತು. ಇಬ್ಬರೂ ಹರಟುತಿದ್ದರು. ಬಸೂ ಅಲ್ಲೇ ಇರತಿದ್ದ. ಅವಗ ನೌಕರಿ ದೊರಿತಿರಲಿಲ್ಲ. ಆಕೆ ಮನಿಗಿ ಬಂದಾಗಲೆಲ್ಲ ಅವನ ನದರು ಪದುಕಾಕುನ ತುಂಬಿದ ಎದಿ, ಅಗಲವಾಗಿ ಹರವಿದ ತಿಕಗಳ ಮೇಲೆ ಸಹಜವಾಗಿ ಬೀಳತಿತ್ತು. ಆಕರ್ಷಣೀಯವಾಗಿದ್ದಳು. ಮುಸುಕ್ಯಾಡೋ ಹೋರಿಯಂತ ಮೈಹುಳಿಯ ಹುರಿ ಒಳೊಳಗ ಹುರಿಗಟ್ಟುತ್ತಿತ್ತು. ಬಸೂ ಊರಿಗಿ ಹ್ವಾದಾಗಲೆಲ್ಲ ಪದ್ದೂ ಕಾಕುನ ಕಣ್ಣಾಗ ಕಣ್ಣಿಟ್ಟು ನೋಡತಿರಲಿಲ್ಲ. ಮಾತಾಡತಿರಲಿಲ್ಲ.

ಇಪ್ಪತ್ತ ವರ್ಷಗಳ ಹಿಂದಿನ ಮಾತು. ಭರ್‍ರ ಬಿಸಿಲಿನ ದಿನಗಳ ಬ್ಯಾಸಗಿ. ಕಾದ ತವೆಯಂತೆ ಸುಡೋ ಸುಡೋ ರಾತ್ರಿಗಳು. ಸ್ವಾಭಾವಿಕವಾಗಿ ಬೇಸಿಗೆಯಲ್ಲಿ ಗುಡಿ ಪೌಳಿಯೊಳಗ ಮಲಗೋದು ಮಾಮೂಲು. ಪೌಳಿಲಿ ಮಲಗಿದ ಬಸೂನಿಗೆ ಅವತ್ತ ಪದ್ದುಕಾಕು ಭಾಳ ಕಾಡಹತ್ತಿದಳು. ತರಾವರಿಯಾಗಿ ಅವಳ ಅಂಗಾಂಗಗಳು ಸಪ್ನದಾಗ ಬಂದು ಹರಿದಾಡಿದಂಗ ಆದವು.

ಮಧ್ಯರಾತ್ರಿ ಜಾರಿತ್ತು. ಬಸೂ ಧಸಕ್ಕನ ಎದ್ದ ಕೂತ. ದೆವ್ವ ಬಡಿದವರ ಹಂಗ. ಮೈಯ್ಯಾಗ ಗಾಳಿ ಸೇರಿದಂಗ ಎದ್ದು ಆಕಿ ಮನಿಕಡಿ ಹೊಂಟ. ಕತ್ತಲ ನೀರವತೆಯೊಳಗ ನಾಯಿಗಳ ಬೊಗಳುವಿಕೆ. ಎದಿ ಲಬ್ ಡಬ್ ಅನತಿತ್ತು. ಅಂವಗ ಮೈಮ್ಯಾಲಿ ಖಬರಿ ಇರಲಿಲ್ಲ. ಕತ್ತಲಲ್ಲಿ ಯಾರೂ ಇರಲಿಲ್ಲ. ಕಂಬದ ದೀಪಗಳು ಮಾತ್ರ ಎಚ್ಚರಿದ್ದು ಸಾಕ್ಷಿಯಾಗಿದ್ದವು. ಪದ್ದುಕಾಕುನ ಮನಿ ಬಂತು. ಅವಳ ಬಾಗಿಲ ಅಂಗಳದೊಳಗ ಕತ್ತಲಿತ್ತು. ಬಸೂ ಬಾಗಿಲ ತೂತಿನಿಂದ ಇಣುಕಿದ. ಒಳಗ ಮಂದ ಬೆಳಕಿತ್ತು. ಚಿಲಕ ಬಾರಿಸಲೋ ಬೇಡವೋ ಗೊಂದಲಕ್ಕೊಳಗಾದ. ಮನಸ್ಸು ಬೇಡ ಎಂದಿತು. ಎರಡು ಹೆಜ್ಜೆ ಹಿಂದಕ್ಕಿಟ್ಟ. ಆದರ ಮೈಮನದೊಳಗ ಹೊಕ್ಕ ಹೋರಿಯ ಹುರಿ ಸಡಿಲಾಗದೆ ಅದು ಬಿರುಸಾತು. ಚಿಲಕ ಬಾರಿಸಲು ಪ್ರೇರೇಪಿಸಿತು. ಚಿಲಕದ ಒಂದೆರಡು ಹೊಡೆತಕ್ಕ ಬಾಗಿಲು ತೆರೆಯಿತು. ಒಳಗೆ ಹೋದ. ಮಂದ ಬೆಳಕಲ್ಲಿ ಬಸೂನ ಕೆಂಡದಂಥ ಮಾರಿಕಂಡ ಪದ್ದುಕಾಕು- ಒಹ್ ನೀನಾ.. ಅಂದು ಎದಿಯೋಳಗ ಅವನ ಮಾರಿ ಒತ್ತಿಕೊಂಡು ಒರಗಿದಳು. ಎಂಥದೋ ಮೈಗಂಧವು ಇಡೀ ಕೋಣೆಯನ್ನೆಲ್ಲ ಪಸರಿಸತಾ ಹೋಗಿ ಅವನನ್ನೂ ಅಡರಿ ನುಂಗಿತು.
ಪಟ್ಟನ ಎಚ್ಚರಾತು. ದಬಕ್ಕನ ಹಾಸಿಗೆಯಲ್ಲಿ ಎದ್ದು ಕೂತ. ಪೂರ‍್ತಿ ಬೆವರಿದ್ದ. ಪೌಳಿತುಂಬ ಪದ್ದುಕಾಕುಗಳು ನಗುತಿದ್ದರು.

***

ಒಂದು ದಿನ ಬೆಳ್ಳನ ಬೆಳಿಗ್ಗೆ ಗಂಗವ್ವನ ಫೋನ್ ಧ್ವನಿಮಾಡಿತು. ಹೇಳವ್ವ.. ಅಂದ. ಗಂಗವ್ವ ಬ್ಯಾಸರದ ಧ್ವನಿಯಿಂದ ಜಿನ್ನಪ್ಪ ಸ್ವಾಮಿ ಆದ.. ಅಂವಾ ದೀಕ್ಷಾ ತಗೊಂಡಂತ.. ಪದ್ಮವ್ವ ಗರಬಡಿದಂಗ ಮನ್ಯಾಗ ಗ್ವಾಡಿಗಿ ಒರಗಿ ಕುಂತುಬಿಟ್ಟಾಳ.. ಹೇಳಿದಳು. ಬಸೂಗ ಕೆಳಗ ಮ್ಯಾಲಿ ತಿಳಿಲಿಲ್ಲ. ಫೋನಿಟ್ಟಬಿಟ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT