ಮರೆಯಲಾಗದ ಲಕ್ಕುಂಡಿ ಪ್ರವಾಸದ ನೆನಪು...

7

ಮರೆಯಲಾಗದ ಲಕ್ಕುಂಡಿ ಪ್ರವಾಸದ ನೆನಪು...

Published:
Updated:
Deccan Herald

ಬೆಳಗೆದ್ದರೆ ಪಕ್ಷಿಗಳು, ಕೀಟ, ಸುಳಿದಾಡುವ ತಂಪಾದ ಗಾಳಿಯ ಅಲೆಗೆ ಮೈಯೊಡ್ಡಿ ಉತ್ಸುಕರಾಗಿ ಹಾರಾಡುತ್ತಿದ್ದ ಮನಸ್ಸು ನಗರದ ವಾಹನಗಳ ಕರ್ಕಶ ಶಬ್ದ, ವಾಯುಮಾಲಿನ್ಯದಿಂದ ಉಸಿರು ಕಟ್ಟಿದಂತಾಗುತ್ತದೆ. ಆದರೂ ನಗರ ಜೀವನ ಅನಿವಾರ್ಯ. ಇಂತಹ ಸಂದರ್ಭದಲ್ಲಿ ಯಾವುದಾದರೂ ನಿಸರ್ಗತಾಣಕ್ಕೆ ಭೇಟಿ ನೀಡುವ ತುಡಿತ ಹೆಚ್ಚಾಗುತ್ತಿತ್ತು.

ಒಬ್ಬಳೇ ಪ್ರವಾಸ ಕೈಗೊಳ್ಳಲು ಸಾಕಷ್ಟು ತೊಡಕುಗಳು ಮುಂದಾದವು. ಈ ನಡುವೆ ಅಣ್ಣನಾಡಿದ ಸ್ಫೂರ್ತಿದಾಯಕ ಮಾತು ನನ್ನ ಏಕಾಂಗಿ ಪ್ರವಾಸಕ್ಕೆ ಪ್ರೋತ್ಸಾಹಿಸಿತು. ಒಂದು ರಾತ್ರಿ ಮಾನಸಿಕವಾಗಿ ನನ್ನನ್ನು ನಾನು ಸಿದ್ಧಗೊಳಿಸಿ, ಮರುದಿನ ಬೆಳಿಗ್ಗೆ ನೀರಿನ ಬಾಟಲಿ, ಶರತ್ ಪತ್ರಗಳು, ಪುಸ್ತಕ, ಪೆನ್ನು ಬ್ಯಾಗಿನಲ್ಲಿರಿಸಿ, ಹುಬ್ಬಳ್ಳಿಯಿಂದ ಲಕ್ಕುಂಡಿಗೆ ಪ್ರಯಾಣ ಬೆಳೆಸಿದೆ. 70ಕಿ.ಮೀ.ನ ದೂರದ ರಸ್ತೆಯುದ್ದಕ್ಕೂ ಪ್ರತೀ ಕ್ಷಣವೂ ನನ್ನದು ಮಾತ್ರವೇ ಆಗಿತ್ತು.

ಬಸ್ ಇಳಿಯುತ್ತಲೇ ಅಲ್ಲಿನ ಪ್ರವಾಸಿ ಸ್ಥಳಗಳ ಬಗ್ಗೆ ವಿಚಾರಿಸಿದೆ. ಬಸ್ ನಿಲ್ದಾಣದ ಹಿಂಭಾಗ ಕಾಲು ದಾರಿಯಲ್ಲಿ ಐತಿಹಾಸಿಕ ದೇವಾಲಯವಿದೆ ಯಾರೋ ಒಬ್ಬರು ಅಂದರು. ಹೇಗಿದಿಯೋ ಏನೋ ಎನ್ನುತ್ತಲೇ ಅತ್ತ ಹೆಜ್ಜೆ ಹಾಕಿದೆ.

ಸುತ್ತಲೂ ಹಸಿರು, ನಡುವೆ ನಿಂತಿರುವ 12ನೇ ಶತಮಾನದ ಮುಕುಟೇಶ್ವರ ದೇವಾಲಯ ಹಾಗೂ ಎದುರು ವಿಶಾಲವಾದ ಮುಸುಕಿನ ಬಾವಿ ದೂರದಿಂದಲೇ ಗಮನಸೆಳೆಯಿತು. ನೋಡುತ್ತಿದ್ದಂತೆ ಬಾವಿಯೊಳಗೆ ಇಳಿದು ನೀರೊಳಗಾಡುವ ಮನಸ್ಸಾಯಿತು. ಸುತ್ತಲೂ ಮೆಟ್ಟಿಲು, ಕಲೆಯ ಆಗರದಿಂದ ತುಂಬಿಕೊಂಡಿದ್ದ ಬಾವಿಯೇ ಅಲ್ಲಿನ ಕೇಂದ್ರಬಿಂದುವೆನ್ನಬಹುದು.

ಬಾವಿಯೊಳಗೆ ಇಳಿಯುವುದು ನಿಷೇಧವಿತ್ತು. ಅಲ್ಲಿದ್ದ ಮಹಿಳೆಯೊಬ್ಬಾಕೆ ಖಡಾಖಂಡಿತವಾಗಿ ಬಾವಿಯ ಬಳಿ ಹೋಗದಂತೆ ತಡೆದರು. ಆಸೆ ನಿರಾಸೆಯಾಯಿತು. ಆದರೆ, ಹಿಂತಿರುಗುವಷ್ಟರಲ್ಲಿ ಅವರ ಮನಸ್ಸು ಗೆಲ್ಲುವಲ್ಲಿ ಸಫಲಳಾದೆ. ಎಷ್ಟರಮಟ್ಟಿಗೆ ಎಂದರೆ ಮಧ್ಯಾಹ್ನದ ಊಟಕ್ಕೆ ಅವರ ಮನೆಗೆ ಆಹ್ವಾನವಿತ್ತರು.

ಅಲ್ಲಿಂದ ನೇರವಾಗಿ ಮ್ಯೂಸಿಯಂಗೆ ಹೋದೆ. ಜೈನಬಸದಿಯ ಇತಿಹಾಸವಂತೂ ಕುತೂಹಲ ಕೆರಳಿಸಿತ್ತು. ಅಲ್ಲಿದ್ದ ಗೈಡ್ ನಿರರ್ಗಳವಾಗಿ ಕಲ್ಯಾಣಿ ಚಾಲುಕ್ಯರ ಇತಿಹಾಸವನ್ನು ತೆರೆದಿಟ್ಟರು. ಎಲ್ಲಾ ದೇವಾಲಯಗಳನ್ನು ಸುತ್ತಿದೆ. ಆದರೆ ಆ ದೇವಾಲಯಗಳಿಗೆ ಪೂಜೆ, ಭಕ್ತಿಯ ಭಾವನೆಗಳಂತೂ ಗೈಡ್ ಅಬ್ದುಲ್ ಕಟ್ಟೀಮನಿ ಅವರಿಗೆ ಬಿಟ್ಟರೆ ಬೇರಾರಲ್ಲಿಯೂ ಕಂಡು ಬರಲಿಲ್ಲ.

ಮಧ್ಯಾಹ್ನದ ಬಿಸಿಲು ಹೆಚ್ಚಾಯಿತು. ಹಸಿವು, ದಾಹ, ಆಯಾಸದ ಪರಿವೆಯೂ ಇಲ್ಲದೆ ಛಾಯಾಚಿತ್ರ ತೆಗೆಯುತ್ತಾ, ಒಂದಷ್ಟು ಬರೆಯುತ್ತಾ, ಗಿರಿಗಿಟ್ಟಲೆಯಂತೆ ತಿರುಗುತ್ತಲೇ ಇದ್ದೆ. ಅವರಿಗೆ ಏನ್ನನ್ನಿಸಿತೋ ಕಡೆಗೆ ನನ್ನನ್ನು ಸರ್ಕಾರಿ ಶಾಲೆಗೆ ಕರೆದುಕೊಂಡು ಹೋದರು. ಅಲ್ಲಿ ಶಿಕ್ಷಕರಾಗಿದ್ದ ಅವರ ಸ್ನೇಹಿತರನ್ನು ಪರಿಚಯಿಸಿದರು.

ಊಟಕ್ಕೆ ಕುಳಿತಿದ್ದ ಅವರು ಆತ್ಮೀಯವಾಗಿ ನನಗೂ ಆತಿಥ್ಯ ನೀಡಿದರು. ಉತ್ತರ ಕರ್ನಾಟಕದ ಖಡಕ್ ರೊಟ್ಟಿ, ಚಟ್ನಿಪುಡಿ, ಮೊಸರು ಮಕ್ಕಳೂ ಒಂದೊಂದಾಗಿ ಬಡಿಸಿದರು. ಇಂತಹ ಆತ್ಮೀಯತೆ ಸರ್ಕಾರಿ ಶಾಲೆಗಳಲ್ಲಿ ಅಲ್ಲದೆ ಇನ್ನೆಲ್ಲಿ ನೋಡಲು ಸಾಧ್ಯ. ಎಲ್ಲರೂ ನನಗೆ ಬೀಳ್ಕೊಟ್ಟರು. ಅದೊಂದು ವಿಶಿಷ್ಟ ಅನುಭವ.

ಸುತ್ತಾಡಿ, ಸಾಕಾಗಿ ಹುಬ್ಬಳ್ಳಿ ಬಸ್ ಹತ್ತಿದೆ. ಬಿಸಿಲಿನ ಧಗೆಗೆ ಇಡೀ ದೇಹ ದಣಿದು ಹೋಗಿತ್ತು. ದಾರಿಯಲ್ಲಿ ಮಳೆ ಹನಿಗಳು. ಕಿಟಕಿಬಳಿ ಮುಖಮಾಡಿ ಕುಳಿತೆ. ತಂಪಾದ ಗಾಳಿ, ಮಳೆಹನಿಗಳು ಮುಖದ ಮೇಲಿನ ಹರಿದಾಟ ಅಹ್ಲಾದಕರವಾಗಿತ್ತು. ಏಕಾಂಗಿಯಾಗಿ ಹೋದರೂ ಒಂದಷ್ಟು ಆತ್ಮೀಯರನ್ನು ಕಂಡೆ. ಇಡೀ ದಿನದ ಏಕಾಂಗಿ ಪ್ರವಾಸದ ನೆನಪು ದೇವಾಲಯಗಳಷ್ಟೇ ಶಾಶ್ವತವಾಗಿ ಉಳಿಯುವಂತಾಗಿದೆ.
-ಸಬೀನಾ ಎ., ಮೈಸೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !