ಹುಲಿಸ್ವಾಮಿ ರಹಸ್ಯ

ಶುಕ್ರವಾರ, ಮೇ 24, 2019
25 °C

ಹುಲಿಸ್ವಾಮಿ ರಹಸ್ಯ

Published:
Updated:
Prajavani

ಬಲವಾಗಿ ಪಾದಗಳ ನೆಲಕ್ಕೂರಿದ ಪರಿಣಾಮ ಹೆಜ್ಜೆಗುರುತುಗಳು ಸ್ಪಷ್ಟವಾಗಿ ಬಿದ್ದಿದ್ದವು. ಹೀಗೆ ಭೂಮಿಯ ಒಂದು ಭಾಗ ಜೌಗು ಬಿದ್ದ ಕಾರಣಕ್ಕೆ ಸಿಕ್ಕ ಹೆಜ್ಜೆ ಗುರುತುಗಳು ಕ್ಷಣ ಆತಂಕ ಹುಟ್ಟಿಸಿದವು. ಪಾದದಿಂದ ಚಾಚಿಕೊಂಡಿರುವ ಉಗುರಿನ ಆಕಾರ ಕೂಡ ಸರಿಯಾಗಿ ಅಚ್ಚು ಬಿದ್ದಿರುವುದು ಕಂಡೊಡನೆ ಸ್ವಾಮಿಗೆ ಜೀವ ತಣ್ಣಗಾದ ಅನುಭವವಾಯಿತು. ಕಿವಿಗಳೆರಡು ಗಾಳಿ ಮೂಲಕ ಬರುವ ಪ್ರತಿ ಸದ್ದಿಗೆ ಅಳುಕುತ್ತಿದ್ದವು. ಇವನ ಅನುಭವದ ಪ್ರಕಾರ ಇಲ್ಲಿ ಕಂಡ ಹೆಜ್ಜೆ ಗುರುತುಗಳು ಹುಲಿಯದ್ದೇ ಆಗಿರುವಲ್ಲಿ ಯಾವ ಅನುಮಾನಗಳೂ ಇರಲಿಲ್ಲ.

ಅದು ಈಗಷ್ಟೇ ಕೆಲ ತಾಸುಗಳ ಹಿಂದೆ ಇಲ್ಲಿ ಅಲೆದಾಡಿರುವುದು ಸ್ವಾಮಿಗೆ ನಿಚ್ಚಳವಾಗಲು ತಾನು ಈ ರೀತಿ ಒಬ್ಬನೇ ಬರೀ ಕೈಯಲ್ಲಿ ಜಮೀನಿನ ಕಡೆ ಬಂದಿದ್ದಕ್ಕೆ ವಿಷಾದವಾಯಿತು. ಮನೆ ಬಿಟ್ಟಾಗ ಮೂಡಣದಲ್ಲಿ ಸಣ್ಣಗೆ ಕತ್ತಲು ಕರಗುತ್ತಿರುವ ದೃಶ್ಯವನ್ನ ಕಂಡವನು ಜಮೀನಿಗೆ ಬಂದ ನಂತರದ ಮಂದ ಬೆಳಕಿನಲ್ಲಿ ಕಂಡ ಈ ಹೆಜ್ಜೆ ಗುರುತುಗಳನ್ನು ಮತ್ತೆ ಮತ್ತೆ ಗಾಬರಿಗೊಂಡಂತೆ ಪರೀಕ್ಷಿಸುತ್ತಿದ್ದ. ಹುಲಿ ಎಂಬ ಪದದಿಂದಲೇ ಅವನೊಳಗೆ ತಳಮಳ ಶುರುವಾಗಿತ್ತು. ಮುಂದೆ ಅದರ ಆಕಾರ, ವರ್ತನೆಗಳ ನೆನೆಸಿಕೊಂಡರೆ ಚಡ್ಡಿ ಒದ್ದೆಯಾಗುವ ಕ್ರಿಯೆಗೆ ಭಯಗೊಂಡು ಅದನ್ನು ಅಲ್ಲಿಗೇ ಬಿಟ್ಟ.

ಸ್ವಾಮಿಗೆ ಹುಲಿಯ ಬಗೆಗಿನ ವಾಸ್ತವದ ನಂಬಿಕೆಗಳಿಗಿಂತ ಕಲ್ಪನಾತೀತವಾದ ಅನೇಕ ವಿಷಯಗಳು ಕಾಡುತ್ತಿದ್ದವು. ತನಗೆ ಸಂಬಂಧಿಸಿದ್ದ ಮೂರು ಎಕರೆ ಜಮೀನು ಈ ಕಾಡಂಚಿನ ಸೆರಗಿಗೆ ಬಿದ್ದಿದ್ದಕ್ಕೆ ಅಪಾರ ಕೋಪವಿತ್ತು. ಇದರಿಂದಾಗೇ ಹುಲಿ, ಚಿರತೆಗಳ ಓಡಾಟ ಸಾಮಾನ್ಯವಾಗಿರಲು ತಿಂಗಳಿಗೆ ಒಂದರಂತೆ ಇವುಗಳು ಕಾಣಿಸಿಕೊಂಡ ಬಗ್ಗೆ ಅರಣ್ಯ ಇಲಾಖೆಗೆ ಅರ್ಜಿಗಳು ಬಂದು ಬೀಳುತ್ತಿದ್ದವು. ಈಗಾಗಲೇ ಹುಲಿ, ಚಿರತೆ ದಾಳಿಗೆ ಒಳಗಾದ ಹಲವು ಪ್ರಕರಣಗಳು ದಾಖಲಾಗಲು ಇಲಾಖೆ ಬೇಸ್ತು ಬಿದ್ದಿತ್ತು. ಹುಟ್ಟಿನಿಂದ ನೀತಿ, ನಿಯಮಗಳಿಗೆ ಒಳಪಟ್ಟ ಮನುಷ್ಯ ಮತ್ತು ಇವುಗಳ ಹಂಗಿಗೆ ಸಿಗದ ಪ್ರಾಣಿಗಳ ನಡುವಿನ ಸಂಘರ್ಷವು ತಾರಕ್ಕೇರಿತ್ತು. ಎಲ್ಲಾ ಜೀವಗಳ ನೆಲೆಯಲ್ಲಿ ನೋಡುವುದಾದರೆ ಪರ, ವಿರೋಧದ ನಡುವೆಯೇ ಗೊಂದಲವಾಗುವುದು.

‘ಇದ್ಯಾವ್ ಗ್ರಚಾರ ಏಳೋ ಹೊತ್ತಿಗೆ ಸಾವಿನ ಮನೆ ಬಾಗ್ಲು ಬಡಿದಂಗಾಯ್ತು’ ಎಂದು ಒಳಗೊಳಗೆ ಪೇಚಾಡಿಕೊಳ್ಳುತ್ತಿದ್ದ. ಮನೆಯಿಂದ ಹೊರಟವನಿಗೆ ಜಮೀನು ತಲುಪಿದರೆ ಸಾಕೆಂಬುದರಲ್ಲೇ ಹೊಟ್ಟೆಯಲ್ಲಿ ಗುಡು ಗುಡು ಶುರುವಾಗಿತ್ತು. ಸ್ವಾಮಿ ನಿಂತಲ್ಲೇ ಇರೋಬರೋ ದೇವರು, ದಿಂಡಿರುಗಳ ಪ್ರಾರ್ಥನೆ ಮಾಡುತ್ತಿರಲು... ಆಗಿದ್ದಾಗಲಿ ಎಂದು ನಿಂತಲ್ಲೆ ಕುಳಿತು ಬಿಡುವ ಅನಿಸಿ ಒಂದು ಕ್ಷಣ ಈ ಭಯ, ಅವಸರ, ದುಃಖ, ಕೋಪ, ಸಿಟ್ಟುಗಳೆಲ್ಲ ಸೇರಿಕೊಂಡು ಜೋರಾಗಿ ಕಿರುಚಿಬಿಡುವ ಎಂದುಕೊಂಡ. ಈ ಕೂಗಿಗೆ ಹುಲಿ ಇಲ್ಲೇ ಎಲ್ಲಾದರೂ ಸಮೀಪ ಅಡಗಿ ಕುಳಿತಿದ್ದು ತನ್ನ ಆರ್ತನಾದವನ್ನೇ ಆಹ್ವಾನವೆಂದು ಸ್ವೀಕರಿಸಿ ಬಂದುಬಿಟ್ಟರೆ ಏನು ಗತಿ ಎಂಬ ಆತಂಕದಲ್ಲಿದ್ದ.

ಸ್ವಭಾವತಃ ಅಂಜುಬುರಕನಾದವನಿಗೆ ಒಂಟಿಯಾಗಿ ಬರೀ ಕೈಯಲ್ಲಿ ಹುಲಿಯ ಎದುರಿಸುವುದು ಸವಾಲೇ ಸರಿ. ಹುಲಿ ಅಷ್ಟು ಸುಲಭವಾಗಿ ಮನುಷ್ಯರ ಬಳಿ ಸುಳಿಯುವುದಿಲ್ಲವೆಂದು ಕೇಳಿದ್ದರೂ ಹಸಿದೋ ಇಲ್ಲಾ, ಗಾಯಗೊಂಡಿದ್ದೋ ಆದರೆ ಏನು ಮಾಡುವುದೆಂಬ ಭೀತಿ. ಆ ಭೀತಿಯಲ್ಲೇ ಹುಲಿ ಎಂಥಾದ್ದೆಂದು ಪರೀಕ್ಷಿಸಲು ಹೆಜ್ಜೆಗುರುತುಗಳ ಕಡೆ ದಿಟ್ಟಿಸಿದ. ಭಯಗೊಂಡ ಬುದ್ಧಿಗೆ ಆ ಸೂಕ್ಷ್ಮಗಳ್ಯಾವುವೂ ಹೊಳೆಯಲಿಲ್ಲ. ಇದರ ಮಧ್ಯೆಯೇ ನಿಂತಿದ್ದ ಅವನ ಗ್ರಹಚಾರವೆಂಬಂತೆ ಅಲ್ಲಿನ ಪೊದೆ ಮರೆಯಿಂದ ಹುಲಿ ಘರ್ಜಿಸಿದ ಸದ್ದಾಗಲು ಇವನತ್ತ ತಿರುಗುತ್ತಲೆ ಪೊದೆಗಳ ಅಲುಗಾಟ ಕಣ್ಣಿಗೆ ಬೀಳುತ್ತ ‘ಅವ್ವಲೋ, ಅವ್ವಲೋ ಸತ್ತನಲ್ಲಪ್ಪೋ...’ ಎಂದು ದಿಕ್ಕೆಟ್ಟವನಂತೆ ಓಡಲು ಶುರು ಮಾಡಿದವನು ಜಿರಕಲು ನೆಲದ ಮೇಲೆ ಆಯತಪ್ಪಿ ಬಿದ್ದ. ಇತ್ತ ಬಿದ್ದು ಕಣ್ಣೀರು ಸುರಿಸುತ್ತ ಬಾಯಿ ಬಡಿದುಕೊಳ್ಳುತ್ತಿದ್ದ ಸ್ವಾಮಿ ಕೂಗಿಗೆ ಒಂದಿಬ್ಬರು ಪ್ರತ್ಯಕ್ಷರಾದರು. ಅಲ್ಲಿಗೆ ಬೆಳಕು ಹರಿದಿತ್ತು.

ಸ್ವಾಮಿ ಸ್ಥಿತಿ ಕಂಡವರಿಗೆ ಕ್ಷಣ ಏನು ಹೇಳಬೇಕೋ ತಿಳಿಯಲಿಲ್ಲ. ಬಿದ್ದ ರಭಸಕ್ಕೆ ನಡು ಉಳುಕಿ, ಕೈ– ಕಾಲುಗಳೆಲ್ಲ ತರಚಿದ್ದವು. ಈ ಅವಸ್ಥೆಯಲ್ಲೆ ಸ್ವಾಮಿ ನಡೆದಿದ್ದು ತಿಳಿಸಲು ಬಂದವರು ಅವನು ಹುಲಿ ಕಂಡ ದಿಕ್ಕಿನ ಕಡೆಗೆ ಓಡಿದರು. ಅವರಿಗೆ ಸದ್ಯ  ಸ್ವಾಮಿಯ ಹುಲಿ ಭಯ ಹೋಗಿಸುವ ಇರಾದೆ ಜೊತೆಗೆ ಬಹಳ ತಿಂಗಳುಗಳಿಂದ ಕಾಣಿಸಿಕೊಳ್ಳುತ್ತಿರುವ ಈ ಹುಲಿರಾಯ ಯಾರೆಂಬ ಕುತೂಹಲವಿತ್ತು. ಇಲ್ಲಿ ಒಂದಿಬ್ಬರು ಸೇರಿದಾಗ ಹುಲಿಯನ್ನ ಎದುರಿಸುವ ಭಂಡ ಧೈರ್ಯ ಹುಟ್ಟಿತ್ತು. ಆದರೆ, ಹುಲಿ ಅಲ್ಲಿಂದಾಗಲೇ ಜಾಗ ಖಾಲಿ ಮಾಡಿ ಬರೀಯ ಹೆಜ್ಜೆ ಗುರುತುಗಳ ಮಾತ್ರ ಉಳಿಸಿತ್ತು.

ಸ್ವಾಮಿಗೆ ಬಿದ್ದ ನೋವು ನಿಧಾನವಾಗಿ ಕಾಣಿಸಿಕೊಳ್ಳುತ್ತ ಸಹಾಯಕ್ಕೆ ಬಂದವರು ಅವನ ಎದ್ದು ನಿಲ್ಲಿಸಿದ್ದೆ ಎರಡು, ಮೂರು ಬಿಂದಿಗೆ ನೀರು ತಂದು ಸುರಿದರು. ಈ ಸುದ್ದಿ ತಿಳಿಯುತ್ತಲೆ ಒಬ್ಬೊಬ್ಬರಾಗಿ ಸ್ವಾಮಿ ಮನೆಗೆ ಧಾವಿಸುತ್ತ ಈ ಪ್ರಕರಣವನ್ನ ಹುಲಿ ದಾಳಿ ಎಂದೇ ಗಟ್ಟಿಯಾಗಿ ಬಿಂಬಿಸಿದರು. ತಮಗೆ ಈ ಕಾಡುಪ್ರಾಣಿಗಳಿಂದ ಆಗುತ್ತಿರುವ ಉಪಟಳಕ್ಕೆ ಎಷ್ಟು ಪ್ರತಿಭಟನೆ, ಹೋರಾಟ ಮಾಡಿ ಅರಣ್ಯ ಇಲಾಖೆಗೆ ಮುತ್ತಿಗೆ ಹಾಕಿದರೂ ಅದು ಕೇರ್ ಮಾಡದೆ ಇದ್ದದ್ದು ಗ್ರಾಮಸ್ಥರ ಗಮನಕ್ಕೆ ಬಂದಿತ್ತು. ಅದಕ್ಕೆ ತಕ್ಕ ಸಮಯ ಬರಲೆಂಬಂತೆ ಇವರಿಗೆ ಸರಿಯಾಗಿ ಬುದ್ಧಿ ಕಲಿಸಲು ಕಾದಿದ್ದವರಿಗೆ ಸ್ವಾಮಿಯ ಹುಲಿ ಕಂಡ ಪ್ರಕರಣ ಅಸ್ತ್ರದಂತೆ ಒದಗಿಬಂದಿತ್ತು. ಇದನ್ನ ತಮಗೆ ಉಪಯುಕ್ತವಾಗುವಂತೆ ತಿರುಚಿದ್ದೇ ಹಿಂದಿನೆಲ್ಲಾ ಪ್ರಕರಣಗಳ ಒಟ್ಟು ಮಾಡಿ ಗಂಟು ಕಟ್ಟಿ ಈ ಪ್ರಕರಣಕ್ಕೆ ನೇತು ಹಾಕಿ ಅರಣ್ಯ ಇಲಾಖೆ ಮೇಲೆ ಪ್ರಯೋಗಿಸಿತು.

ಅರಣ್ಯ ಇಲಾಖೆ ಮತ್ತು ಗ್ರಾಮಸ್ಥರ ನಡುವೆ ಕತ್ತಿನ ಪಟ್ಟಿಗೆ ಕೈ ಹಾಕಿ ಮಿಲಾಯಿಸುವ ಹಂತಕ್ಕೆ ವಾಗ್ವಾದಗಳೆದ್ದು ರಂಪಾಟಗಳಾಗಲು ಮನುಷ್ಯ ಮತ್ತು ಕಾಡುಪ್ರಾಣಿಗಳ ಸಂಘರ್ಷಕ್ಕೆ ಹೊಸ ವೇದಿಕೆಯೊಂದು ಸಿದ್ಧವಾಯಿತು. ಎಂದಿನಂತೆ ಈ ಬಾರಿ ಇಲಾಖೆಗೆ ನುಣಚಿಕೊಳ್ಳಲಾಗಲಿಲ್ಲ. ಇಲಾಖೆ ಹುಲಿ ಸ್ವಾಮಿ ಪ್ರಕರಣವನ್ನ ತನ್ನ ಹೆಗಲಿಗೆ ಹಾಕಿಕೊಂಡಿತ್ತು. ಸ್ವಾಮಿಯನ್ನು ನೋಡಲು ಇಲಾಖೆಯವರಿಗೆ ಅಷ್ಟು ಸುಲಭವಾಗಿ ಬಿಡದಂತೆ ಈ ಮೂಲಕ ತಮ್ಮ ಹಳೇ ಆಕ್ರೋಶಗಳ ತೀರಿಸಿಕೊಂಡರು. ಸ್ವಾಮಿಗೂ ಒತ್ತಡ ತಂದು ಅವನ ಹೇಳಿಕೆಗಳಿಗೆ ತಾವೇ ಬಾಯಿಗಳಾದ ಊರವರು ತಮ್ಮ ಕಾರ್ಯ ಸಾಧಿಸಿಕೊಳ್ಳುವ ತನಕ ಜೋಪಾನವಾಗೇ ನಡೆಸಿಕೊಂಡರು.

ಊರಿನ ಸಮಸ್ಯೆಗೆ ಸ್ವಾಮಿ ಪ್ರಕರಣ ಪರಿಹಾರವಾಗಿದ್ದು ಸರಿ ಕಂಡರೂ ಅದರ ಹಿಂದೆಯೇ ಅವನ ಉತ್ತರ ಪೌರುಷದ ಗುಣಗಾನವಾಗುವಾಗಲೂ ಸ್ವಾಮಿಗೆ ಇರಿಸುಮುರಿಸಾಗಿತ್ತು. ಇನ್ನೂ ಮದುವೆಯಾಗದ ಕಾರಣ ಹೆಂಗಸರ ಮುಂದೆ ಈ ರೀತಿ ತನ್ನ ಪ್ರಕರಣ ನಗೆ ಪಾಟಲಿಗೆ ಗುರಿಯಾಗಿದ್ದು ಬೇಸರವಾಗಿತ್ತು. ಎಲ್ಲಾ ಪತ್ರಿಕೆ, ವಾಹಿನಿಗಳಲ್ಲೂ ಈ ಹುಲಿ ದಾಳಿ ಒಂದು ವಿಷಯವಾಗಿ ಬಿತ್ತರವಾಗಲು ಸ್ವಾಮಿ ಮನೆಗೆ ಜನ ಪ್ರವಾಹ ಶುರುವಾಗಿ ಅವನು ಘಟನೆ ವಿವರಿಸುವ ಪೇಚಿಗೆ ಸಿಲುಕಿದ. ಇದು ಅವನ ಮತ್ತೆ ಮತ್ತೆ ಮುಖಭಂಗಗೊಳಿಸಿ ಮುಜುಗರಕ್ಕೆ ತಳ್ಳಿದಂತೆ ಕೇಳಿದವರಿಗೆ ನಗು ಉಕ್ಕಿಸುತ್ತಿತ್ತು.

ಈ ಪ್ರಕರಣ ಒಂದು ಮಟ್ಟದಲ್ಲಿ ದೊಡ್ಡ ಸುದ್ದಿ ಮಾಡಲು ಇಲಾಖೆ ಹುಲಿ ಕಾರ್ಯಾಚರಣೆಗೆ ಸೂಕ್ತ ಕ್ರಮಗಳನ್ನು ಕೈಗೊಂಡಿತ್ತು. ಸ್ವಾಮಿಗೆ ಒಂದಷ್ಟು ಪರಿಹಾರ ಕೊಡಿಸುವ ಭರವಸೆ ನೀಡಿತಾದರೂ ಅವನ ಮೈ ಮೇಲೆ ಬಿದ್ದಿರಬಹುದಾದ ಹುಲಿ ದಾಳಿಯ ಗುರುತುಗಳ ಪತ್ತೆ ಹಚ್ಚಲಾಗಲಿಲ್ಲ.

ಈಗಾಗಲೇ ಅರಣ್ಯ ಇಲಾಖೆಯೊಂದಿಗಿನ ಸಾಕಷ್ಟು ಹೋರಾಟದಲ್ಲಿ ಸೋತು ಸುಣ್ಣವಾಗಿದ್ದವರಿಗೆ ಇದೊಂದು ದೊಡ್ಡ ಜಯವಾಗಿತ್ತು. ಮುಂದೆ ಸ್ವಾಮಿ ಊರಿನವರ ಬಾಯಲ್ಲಿ ‘ಹುಲಿಸ್ವಾಮಿ’ ಎಂದು ಪ್ರಸಿದ್ಧನಾದರೂ ಅದರ ಹಿಂದಿನ ರಹಸ್ಯ ಭೇದಿಸಲು ಕೇಳಿದವರು ಹೊಟ್ಟೆ ಹುಣ್ಣಾಗುವಂತೆ ನಗಾಡುವಂತಾಗಿತ್ತು.

ಬರಹ ಇಷ್ಟವಾಯಿತೆ?

 • 3

  Happy
 • 3

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !