ಬುಧವಾರ, ಏಪ್ರಿಲ್ 14, 2021
32 °C

ಅಂಗನವಾಡಿ: ಅರ್ಜಿದಾರರಲ್ಲಿ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಿಂಗಸುಗೂರ: ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ಕರೆದಿದ್ದ ಅಂಗನವಾಡಿ ಕೇಂದ್ರಗಳ ಸಹಾಯಕಿಯರ ನೇಮಕಾತಿ ಸಮಿತಿ ಸಭೆ ಏಕಾ ಏಕಿ ಮುಂದೂಡಲ್ಪಟ್ಟಿದೆ. ಪಾರದರ್ಶಕವಾಗಿ ಆಯ್ಕೆ ಪಟ್ಟಿ ಪ್ರಕಟಗೊಳ್ಳಲಿದೆ ಎಂಬ ಮಹಾದಾಸೆಯಿಂದ ಕಚೇರಿ ಮುಂದೆ ನೆರೆದಿದ್ದ ಆಕಾಂಕ್ಷಿ ಅರ್ಜಿದಾರರು ಮುಂದೂಡಲ್ಪಟ್ಟ ವಿಷಯ ಪ್ರಕಟಗೊಳ್ಳುತ್ತಿದ್ದಂತೆ ಅಸಮಾಧಾನ ಜೊತೆಗೆ ಆತಂಕ ವ್ಯಕ್ತಪಡಿಸುತ್ತಿರುವುದು ಕೇಳಿಬಂತು.ಸ್ಥಳೀಯ ಸಿಡಿಪಿಒ ಕಚೇರಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕಿಯರ ನೇಮಕಾತಿ ಪ್ರಕ್ರಿಯೆ ನಡೆದಾಗೊಮ್ಮೆ ಭ್ರಷ್ಟಾಚಾರದ ಹೊಗೆ ಕಾಣಿಸಿಕೊಂಡು ಅಧಿಕಾರಿಗಳು ಅಮಾನತುಗೊಂಡ ಪ್ರಸಂಗಗಳನ್ನು ಇಲ್ಲಿ ಸ್ಮರಿಸಬಹುದಾಗಿದೆ. ಪ್ರಸ್ತುತ ಆಯ್ಕೆಯಲ್ಲಿ ಪಾರದರ್ಶಕತೆ ಕಂಡಿದ್ದ ಅರ್ಜಿದಾರರು ಸಭೆ ಮುಂದೂಡಿರುವುದು ಸಂಭವನೀಯ ಅರ್ಜಿದಾರರಿಂದ ಹಣ ಕೀಳುವ ತಂತ್ರವಾಗಿದೆ ಎಂದು ಲಚಮಮ್ಮ, ಚೆನ್ನಬಸವ ಮತ್ತಿತರರು ಆಕ್ರೋಶ ವ್ಯಕ್ತಪಡಿಸಿದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕರು ಸಭೆಗೆ ಗೈರು ಹಾಜರಾಗುವ ಮೂಲಕ ಆಕಾಂಕ್ಷಿಗಳನ್ನು ಹುಬ್ಬೇರಿಸುವಂತೆ ಮಾಡಿದೆ. ಈಗಾಗಲೆ ಸಂಭವನೀಯ ಪಟ್ಟಿ ಹಿಡಿದುಕೊಂಡು ಹಣ ವಸೂಲಿ ಮಾಡಲು ಕೆಲ ಮಧ್ಯವರ್ತಿಗಳು ಸಂಪರ್ಕಿಸುತ್ತಿರುವ ಬಗ್ಗೆ ಅರ್ಜಿದಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಆಯ್ಕೆ ಸಮಿತಿ ಅಧ್ಯಕ್ಷರೆ ಸಭೆಗೆ ಆಗಮಿಸದಿರುವ ಬಗ್ಗೆ ಆಯ್ಕೆ ಸಮಿತಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿರುವುದು ಹಲವು ಸಂಶಯಗಳಿಗೆ ದಾರಿ ಮಾಡಿಕೊಟ್ಟಿದೆ. ಈ ಕುರಿತಂತೆ ಸಿಡಿಪಿಒ ಪ್ರಭಾಕರ ಅವರನ್ನು ಸಂಪರ್ಕಿಸಿದಾಗ ಕಾರಣಾಂತರಗಳಿಂದ ಉಪನಿರ್ದೇಶಕರು ಸಭೆಗೆ ಹಾಜರಾಗಿಲ್ಲ. ಹಿರಿಯ ಅಧಿಕಾರಿಗಳ ಸಲಹೆ ಮೇರೆಗೆ ಮತ್ತೊಂದು ದಿನಾಂಕ ನಿಗದಿಪಡಿಸಿ ಪಾರದರ್ಶಕವಾಗಿ ನೇಮಕಾತಿ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.