ಗುರುವಾರ , ಜೂನ್ 17, 2021
21 °C

ಅಂಗವೈಕಲ್ಯದ ನಾಗಪ್ಪನಿಗೆ ನೆರವಿನ ಅಭಯ ನೀಡಿ...!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಹಾಪುರ: ತಾಲ್ಲೂಕಿನ ವನದುರ್ಗದ ಗ್ರಾಮದ ನತದೃಷ್ಟ ಯುವಕ ನಾಗಪ್ಪ ಹಣಮಂತ (18) (ಬಜರಂಗಬಲಿ) ಅಂಗವೈಕಲ್ಯದಿಂದ ಬಳಲುತ್ತಿದ್ದು ಸರ್ಕಾರದ ಸೌಲಭ್ಯಗಳು ಈತನಿಗೆ ಮರೀಚಿಕೆಯೆ ಸೈ. ತಂದೆ-ತಾಯಿಯನ್ನು ಕಳೆದುಕೊಂಡು ವೃದ್ಧೆ ಅಜ್ಜಿ ತಿಪ್ಪವ್ವನವರ ತುಸು ಆಸರೆಯಲ್ಲಿ ತುತ್ತಿನ ಚೀಲ ತುಂಬಿಕೊಳ್ಳುತ್ತಿದ್ದಾರೆ. ಒಮ್ಮಮ್ಮೆ ಒಪ್ಪತ್ತಿನ ಕೂಳಿಗೂ ಪರದಾಟ.ಇವರು ಇವರು ಬಾಲ್ಯದಲ್ಲಿಯೇ ಅಂಗವೈಕಲ್ಯಕ್ಕೆ ತುತ್ತಾಗಿದ್ದಾರೆ.ನಾಗಪ್ಪ ವರ್ಷದ ಬಾಲಕನಿದ್ದಾಗ ಅನಾರೋಗ್ಯದಿಂದ ಅವರ ತಂದೆ ಹಣಮಂತ ಅಸುನೀಗಿದ. ಐದು ವರ್ಷದವರಿಗೆ ಯಾವುದೇ ತೊಂದರೆ ಬಂದಿರಲಿಲ್ಲ. ಎಲ್ಲರಂತೆ ನಾನು ಮನೆಯ ಮುಂದೆ ಅಂಗಳದಲ್ಲಿ ವಾರಿಗೆಯರ ಜೊತೆಗೆ ಓಡಾಡಿ ಆನಂದ ಪಡುತ್ತಿದ್ದೆ.ಒಂದು ದಿನ ಏಕಾಏಕಿ ನಮ್ಮ ಮನೆ ಗುಡಿಸಲು ಬಾಗಿಲು ಬಡಿದು ಟೊಂಕದ ಹತ್ತಿರ ನೋವು ಆಯಿತು. ಜ್ವರ ಬಂದವು ನಮ್ಮೂರ ವೈದ್ಯರ ಬಳಿ ತೆರಳಿ ಇಂಜೆಕ್ಷನ್ ಪಡೆದೆ ಮರು ದಿವಸ ಎಡಗಾಲು ಕಳೆದುಕೊಂಡಂತೆ ಆಯಿತು. ನಂತರ ನಿಲ್ಲಲ್ಲು ಆಗದೆ ಕುಸಿದು ಬಿಳುತ್ತಿದ್ದೆ. ಟೊಂಕದ ಭಾಗದಿಂದ ಶಕ್ತಿಯೇ ಇಲ್ಲವಾಗಿದೆ ಎಂದು ಕಣ್ಣೀರು ಸುರಿಸುತ್ತಾ ನುಡಿಯುತ್ತಾನೆ.ಬಳಿಕ ನನ್ನ ತಾಯಿ ಬಟ್ಟೆ ತೊಳೆಯಲು ಕಾಲುವೆಗೆ ತೆರಳಿದ್ದಾಗ ಕಾಲು ಜಾರಿ ಕಾಲುವೆಯಲ್ಲಿ ಬಿದ್ದು ಮೃತಪಟ್ಟರು. ತಂದೆ-ತಾಯಿಯನ್ನು ಕಳೆದುಕೊಂಡು ಅನಾಥನಾಗಿಬಿಟ್ಟೆ. ಗ್ರಾಮದ ಹೊರವಲಯದ ಹೊಸಕೇರ ದೊಡ್ಡಿಯಲ್ಲಿ ಅಜ್ಜಿಯ ಆಶ್ರಯದಲ್ಲಿ ಕಾಲ ಕಳೆಯುತ್ತಿರುವೆ. ಮನೆಯಿಲ್ಲ. ಅದೇ ಚೋಟುದ್ದ ಗುಡಿಸಲು. ಅದೇ ಸ್ವರ್ಗವಾಗಿದೆ. ಮಳೆ ಬಂದಾಗ ನೈಸರ್ಗಿಕ ಕ್ರಿಯೆಗಳನ್ನು ಮಗಿಸಲು ತುಂಬಾ ತೊಂದರೆ ಅನುಭವಿಸುವಂತಾಗಿದೆ ಎಂಬ ನೋವು ಹೊರ ಹಾಕಿದ.5ನೇ ತರಗತಿಯವರಿಗೆ ಅಭ್ಯಾಸ ಮಾಡಿರುವ ನಾನು ಅಂಗವೈಕಲ್ಯದ ಸಲುವಾಗಿ ಮಾಸಾಶನಕ್ಕೆ ಅರ್ಜಿ ಸಲ್ಲಿಸಿದೆ. ಇಲ್ಲದ ಕಾಗದ ಪತ್ರವನ್ನು ಕೇಳಿದರು.ಕೈಗಳನ್ನು ನೆಲದ ಮೇಲೆ ಇಟ್ಟು ಸುಡುವ ನೆಲದಿಂದ ತಪ್ಪಿಸಿಕೊಳ್ಳಲು ಕೈಗಳಲ್ಲಿಯೇ ಪಾದರಕ್ಷೆಗಳನ್ನು ಸಿಕ್ಕಿಸಿಕೊಂಡು ಒಂಟಿ ಕಾಲಿನಲ್ಲಿ ತೆವಳುತ್ತಾ ಒಂದಿಷ್ಟು ದೂರ ನಡೆಯಬಲ್ಲೆ. ಕೈಗಳು ಪಾದವಾಗಿರುವಾಗ ಎಲ್ಲಿಂದ ಕಾಗದ ಪತ್ರ ತರಲಿ ಎಂದು ಪ್ರಶ್ನಿಸುತ್ತಾರೆ ನಾಗಪ್ಪ.ಕೊನೆ ಪಕ್ಷ ಅಂಗವಿಕಲರಿಗೆ ದೊರೆಯುವ ತ್ರಿಚಕ್ರ ಸೈಕಲ್, ಊರುಗೋಲು ಯಾವುದನ್ನು ಕೂಡಾ ಗ್ರಾಮ ಪಂಚಾಯಿತಿಯವರು ನೀಡಿಲ್ಲ. ಗ್ರಾಮದಿಂದ ಪಟ್ಟಣಕ್ಕೆ ಬರುವುದು ಕೂಡಾ ಕನಸ್ಸಿನ ಮಾತು ಆಗಿದೆ. ಜೀವಿಸುವ ಸಲುವಾಗಿ ಪಡಿತರ ಚೀಟಿಯ ಮೂಲಕ ಆಹಾರ ಧಾನ್ಯ ನೀಡಿ.ಬೆಚ್ಚನೆಗಾಗಿ ಸೂರು ಒದಗಿಸಿ. ನ್ಯಾಯಬದ್ದವಾಗಿ ಅಂಗವೈಕಲ್ಯದ ಮಾಸಾಶನವನ್ನು ನೀಡಿ ಎಂಬ ಬದುಕಿನ ಆಸೆಯನ್ನು ಹೊತ್ತ ನಾಗಪ್ಪ `ಪ್ರಜಾವಾಣಿ~ಯ ಮುಂದೆ ನಿವೇದಿಸಿಕೊಂಡ.ಸಾಮಾಜಿಕ ಕಳಕಳಿಯ ಮನಸ್ಸಿನವರು ನೆರವಿನ ಆಸರೆಯಾಗಿ. ಅನಾಥ ಅಂಗವೈಕಲ್ಯದಿಂದ ಬಳಲುತ್ತಿರುವ ನಾಗಪ್ಪನಿಗೆ ಆಸರೆಯ ಅಭಯ ನೀಡಿ. ನಾಗಪ್ಪನ ಬ್ಯಾಂಕ್‌ಖಾತೆ ಸಂಖ್ಯೆ (ಎಸ್.ಬಿ. 74004715175.ಕೆ.ಜಿ.ಬಿ ಶಹಾಪುರ).

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.