ಸೋಮವಾರ, ಜನವರಿ 27, 2020
24 °C

ಅಡಿಕೆ ಬೆಳೆ ನಿಷೇಧ ಪ್ರಾಸ್ತಾವ ಕೇಂದ್ರದ ಮುಂದಿಲ್ಲ: ಜಯಪ್ರಕಾಶ ಹೆಗ್ಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಂದಾಪುರ: ಕಳೆದ ಕೆಲವು ದಿನಗಳಿಂದ ಅಡಿಕೆ ಬೆಳೆಗಾರರನ್ನು ಕಾಡುತ್ತಿರುವ ‘ಅಡಿಕೆ ಬೆಳೆ ನಿಷೇಧ’ದ ಕುರಿತು ಖಚಿತ ಮಾತುಗಳಲ್ಲಿ ಸ್ವಷ್ಟನೆ ನೀಡಿರುವ ಚಿಕ್ಕಮಗಳೂರು-–ಉಡುಪಿ ಲೋಕಸಭಾ ಕ್ಷೇತ್ರದ ಸಂಸದ ಕೆ.ಜಯಪ್ರಕಾಶ ಹೆಗ್ಡೆ ಅವರು, ಕೇಂದ್ರ ಸರ್ಕಾರಕ್ಕೆ ಅಡಿಕೆ ಬೆಳೆಯನ್ನು ನಿಷೇಧಿಸುವ ಕುರಿತು ಈ ವರೆಗೂ ಯಾವುದೆ ರೀತಿಯ ಆದೇಶ ಬಂದಿಲ್ಲ ಹಾಗೂ ಸರ್ಕಾರದ ಮುಂದೆ ಅಡಿಕೆ ಬೆಳೆ ನಿಷೇಧಿಸುವ ಯಾವುದೆ ಪ್ರಾಸ್ತಾವನೆಗಳು ಇಲ್ಲ ಎಂದು ಹೇಳಿದ್ದಾರೆ.ಕುಂದಾಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಕಳೆದ ಕೆಲವು ದಿನಗಳಿಂದ ಅನಗತ್ಯವಾಗಿ ಅಡಿಕೆ ಬೆಳೆಗಾರರಲ್ಲಿ ಗೊಂದಲಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಅಡಿಕೆ ನಿಷೇಧ ಮಾಡ್ತಾರಂತೆ ಎನ್ನುವ ಊಹಾಪೋಹದ ಪ್ರಶ್ನೆಗಳು ಎದುರಾದಾಗ ಕೇಂದ್ರ ಆರೋಗ್ಯ ಸಚಿವರಾದ ಗುಲಾಂ ನಬಿ ಆಜಾದ್ ಹಾಗೂ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ದೇಶಿರಾಜ್ ಅವರನ್ನು ಭೇಟಿ ಮಾಡಿ ಅಡಿಕೆ ಬೆಳೆ ನಿಷೇಧ ಮಾಡುವ ತೀರ್ಮಾನಗಳು ಸರ್ಕಾರದ ಮುಂದಿದೆಯೇ ಎಂದು ಕೇಳಿದಾಗ ಅವರಿಬ್ಬರೂ ಸ್ಪಷ್ಟ ಮಾತುಗಳಲ್ಲಿ ಇಂತಹ ಪ್ರಸ್ತಾವನೆ ಇಲ್ಲ ಹಾಗೂ ಸದ್ಯಕ್ಕೆ ನಿಷೇಧದ ಪ್ರಶ್ನೆಯೇ ಉದ್ಬವವಾಗುವುದಿಲ್ಲ ಎಂದು ತಿಳಿಸಿರುವುದಾಗಿ ಅವರು ಹೇಳಿದರು.ಅಂಕುಲ್ ಎನ್ನುವ ಗುಟ್ಕಾ ಕಂಪೆನಿಯೊಂದು ಗುಟ್ಕಾ ನಿಷೇಧದ ಕುರಿತಂತೆ ಸುಪ್ರೀಂ ಕೋರ್ಟಿನಲ್ಲಿ ಹೂಡಲಾದ ದಾವೆಯೊಂದರ ವಿಚಾರಣೆಯ ವೇಳೆಯಲ್ಲಿ ಗುಟ್ಕಾ ಉತ್ಪನ್ನಗಳ ಕುರಿತಂತೆ ನ್ಯಾಯಾಲಯ ಕೇಳಿದ ಕೆಲವೊಂದು ಸ್ವಷ್ಟನೆಯ ಆಧಾರದಲ್ಲಿ ಹಾನಿಕಾರಕ ಅಂಶಗಳ ಕುರಿತು ವರದಿಯಲ್ಲಿ ಪ್ರಾಸ್ತಾಪಿಸಲಾಗಿದೆಯೇ ಹೊರತು, ಅಡಿಕೆಯನ್ನು ನಿಷೇಧಿಸುವ ಕುರಿತು ವರದಿಯಲ್ಲಿ ಯಾವುದೇ ಉಲ್ಲೇಖಗಳಿಲ್ಲ. ರಾಜಕೀಯ ಕಾರಣಗಳಿಗಾಗಿ ಈ ವಿಚಾರಗಳನ್ನೇ ಬೇರೆ ಆಯಾಮಗಳಿಂದ ವಿಶ್ಲೇಷಣೆ ಮಾಡಿ ಅಡಿಕೆ ಬೆಳೆಗಾರರನ್ನು ಗೊಂದಲಕ್ಕೀಡು ಮಾಡುವ ಪ್ರಯತ್ನ ಸರಿಯಲ್ಲ ಎಂದು ಹೆಗ್ಡೆ ನುಡಿದರು.ಕರ್ನಾಟಕ, ಕೇರಳ ಸೇರಿದಂತೆ ದೇಶದ 7 ರಾಜ್ಯಗಳಲ್ಲಿ ಅಡಿಕೆ ಬೆಳೆಯನ್ನು ಬೆಳೆಯುತ್ತಿದ್ದರೂ, ಕರ್ನಾಟಕ ಬಿಟ್ಟು ಉಳಿದ ಕಡೆಯ ಬೆಳೆಗಾರರು ಈ ಬೆಳವಣಿಗೆಯ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ರಾಜ್ಯದಲ್ಲಿ ಗುಟ್ಕಾ ಮಾರಾಟ ಹಾಗೂ ತಯಾರಿಕೆ ನಿಷೇಧ ಮಾಡಿದ್ದರಿಂದ ಸುಪ್ರೀಂ ಕೋರ್ಟಿನಲ್ಲಿ ನಡೆಯುತ್ತಿರುವ ಪ್ರಕರಣದಲ್ಲಿ ರಾಜ್ಯದ ವಕೀಲರ ಉಪಸ್ಥಿತಿ ಅನಗತ್ಯ ಎನ್ನುವ ಕಾರಣಕ್ಕಾಗಿ ಅವರನ್ನು ಹಿಂದಕ್ಕೆ ಕರೆಸಿಕೊಳ್ಳಲಾಗಿದೆಯೇ ಹೊರತು, ಇದರ ಹಿಂದೆ ಯಾವುದೇ ಷಡ್ಯಂತ್ರ ನಡೆದಿಲ್ಲ ಎನ್ನುವುದನ್ನು ಬೆಳೆಗಾರರು ಅರ್ಥ ಮಾಡಿಕೊಳ್ಳಬೇಕು ಎಂದು ವಿನಂತಿಸಿದ ಅವರು ಇದೀಗ ಪ್ರಕರಣದ ವಿಚಾರಣೆಯ ಹಂತದಲ್ಲಿ ಹಾನಿಕರ ಎನ್ನುವ ಅಂಶಗಳು ಉಲ್ಲೇಖವಾಗಿರುವುದರಿಂದ, ರಾಜ್ಯದ ಹಿತಾಸಕ್ತಿಯನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲು ರಾಜ್ಯದಿಂದ ವಕೀಲರನ್ನು  ನೇಮಕ ಮಾಡಲು ಹಾಗೂ ಪ್ರಕರಣದಲ್ಲಿ ಕಾನೂನು ಆಸಕ್ತಿಗೆ ಮುಂದಾಗುವಂತೆ ಮುಖ್ಯಮಂತ್ರಿಗಳನ್ನು ಹಾಗೂ ಕಾನೂನು ಸಚಿವರನ್ನು ಕೋರಿಕೊಂಡಿದ್ದು, ಅವರು ಅದಕ್ಕೆ ಸ್ಪಂದಿಸಿದ್ದಾರೆ ಎಂದರು.ಕುಂದಾಪುರದ ಪುರಸಭಾ ಸದಸ್ಯರಾದ ಕೆ,ಚಂದ್ರಶೇಖರ ಖಾವರ್, ಶ್ರೀಧರ ಶೇರುಗಾರ, ಕಾಂಗ್ರೆಸ್ ಪಕ್ಷದ ಪ್ರಮುಖರಾದ ಬುದ್ದರಾಜ್ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ವಿಜಯಾನಂದ ಪೂಜಾರಿ ಮುಂತಾದವರಿದ್ದರು.

ಪ್ರತಿಕ್ರಿಯಿಸಿ (+)