ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣೆಕಟ್ಟು-ಕೆರೆ ದುರಸ್ತಿಗೆ ಪ್ರಥಮ ಆದ್ಯತೆ

Last Updated 5 ಫೆಬ್ರುವರಿ 2011, 8:55 IST
ಅಕ್ಷರ ಗಾತ್ರ

ಔರಾದ್: ಒಡೆದು ಹೋದ ಠಾಣಾಕುಶನೂರ ಅಣೆಕಟ್ಟು ದುರಸ್ತಿ, ಭೋಪಾಳಗಢ ಬೆಳಕುಣಿ ಕೆರೆ ಹೂಳೆತ್ತುವುದು, ಠಾಣಾಕುಶನೂರ 110 ಕೆವಿ ಸಾಮರ್ಥ್ಯದ ವಿದ್ಯುತ್ ವಿತರಣಾ ಕೇಂದ್ರದ ಕೆಲಸ ಶೀಘ್ರ ಆರಂಭಿಸುವುದು ಸೇರಿದಂತೆ ಕೆಲ ಮಹತ್ವದ ಕೆಲಸ ಮಾಡುವುದು ನೂತನ ಜಿಲ್ಲಾ ಪಂಚಾಯ್ತಿ ಸದಸ್ಯ ಧೂಳಪ್ಪ ಸೂರಂಗೆ ಅವರ ಮುಂದಿರುವ ಸವಾಲುಗಳಾಗಿವೆ.

ಮಾಜಿ ಸಚಿವ ದಿವಂಗತ ಮಾಣಿಕರಾವ ಪಾಟೀಲ ಅವರು ತಮ್ಮ ಸ್ವಗ್ರಾಮ ಠಾಣಾಕುಶನೂರ್‌ನಲ್ಲಿ ಮೂರು ದಶಕದ ಹಿಂದೆ ಅಣೆಕಟ್ಟು ಕಟ್ಟಿಸಿದ್ದಾರೆ. ಹಲವು ವರ್ಷಗಳ ಕಾಲ ಇಲ್ಲಿಯ ರೈತರು ಈ ಅಣೆಕಟ್ಟೆಯ ಲಾಭ ಪಡೆದುಕೊಂಡಿದ್ದಾರೆ. ಆದರೆ ಕಳೆದ ಐದಾರು ವರ್ಷಗಳ ಹಿಂದೆ ಅತಿವೃಷ್ಟಿ ಬಂದು ಅಣೆಕಟ್ಟೆಯ ಎರಡೂ ಬದಿಯ ಬಂಡ್ ಕೊಚ್ಚಿಕೊಂಡು ಹೋಗಿದೆ. ಇದರಿಂದಾಗಿ ಪ್ರತಿ ವರ್ಷ ಮಳೆಗಾಲದಲ್ಲಿ ಸುತ್ತಲಿನ ಹೊಲಗಳಿಗೆ ನೀರು ನುಗ್ಗಿ ರೈತರು ನಷ್ಟ ಅನುಭವಿಸುತ್ತಿದ್ದಾರೆ.

ಈ ಕುರಿತಂತೆ ಗ್ರಾಮದ ಕೆಲ ಪ್ರಜ್ಞಾವಂತರು ಯುವಕರ ಜೊತೆ ಸೇರಿಕೊಂಡು ಪತ್ರ ವ್ಯವಹಾರ ಮತ್ತು ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಈಗಲೂ ಅಲ್ಲಿಯ ಜನ ಅಣೆಕಟ್ಟು ದುರಸ್ತಿಯಾಗದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಜನರ ಬಹು ವರ್ಷಗಳ ಬೇಡಿಕೆಯಾಗಿದ್ದ 110 ಕೆ.ವಿ. ಸಾಮರ್ಥ್ಯದ ವಿದ್ಯುತ್ ವಿತರಣಾ ಕೇಂದ್ರ ಮಂಜೂರಾಗಿದೆ. ಆದರೆ ಇದಕ್ಕಾಗಿ ಸೂಕ್ತ ಜಮೀನು ದೊರಕದೆ ಇರುವುದರಿಂದ ಕಾಮಗಾರಿ ವಿಳಂಬವಾಗುತ್ತಿದೆ. ನೂತನ ಸದಸ್ಯರು ಈ ಬಗ್ಗೆ ಕಾಳಜಿ ವಹಿಸಿ ಶೀಘ್ರದಲ್ಲಿ ವಿದ್ಯುತ್ ವಿತರಣಾ ಕೇಂದ್ರದ ಕಾಮಗಾರಿ ಆರಂಭಿಸಬೇಕು ಎಂಬುದು ಜನರ ಬಯಕೆಯಾಗಿದೆ.

ದಿವಂಗತ ಮಾಣಿಕರಾವ ಪಾಟೀಲರೇ ನಿರ್ಮಿಸಿಕೊಟ್ಟ ಭೋಪಾಳಗಢ ಬೆಳಕುಣಿ ಕೆರೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಮುಧೋಳ, ಭವಾನಿ ಬಿಜಲಗಾಂವ್, ಬೆಳಕುಣಿ ಗ್ರಾಮಗಳ ರೈತರ ಜಮೀನಿಗೆ ನೀರು ಪೂರೈಸುವ ಈ ಕೆರೆ ಸೂಕ್ತ ನಿರ್ವಹಣೆ ಇಲ್ಲದೆ ಹೂಳು ತುಂಬಿ ಅವನತಿ ಅಂಚಿನಲ್ಲಿರುವುದು ಕೂಡ ಈ ಭಾಗದ ರೈತರು ನೂತನ ಸದಸ್ಯರ ಗಮನ ಸೆಳೆಯುತ್ತಾರೆ.
ಠಾಣಾಕುಶನೂರ ಜಿಲ್ಲಾ ಪಂಚಾಯ್ತಿಯ ಒಟ್ಟು ಏಳು ಗ್ರಾಮ ಪಂಚಾಯ್ತಿಯಲ್ಲಿ ಬರುವ ಬಹುತೇಕ ಗ್ರಾಮಗಳಲ್ಲಿ ಬೇಸಿಗೆ ಬರುತ್ತಿದ್ದಂತೆ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತದೆ. ಬಹಳಷ್ಟು ಕಡೆಗಳಲ್ಲಿ ನೀರಿನ ಮೂಲ ಇದ್ದರೂ ಸಮರ್ಪಕ ಪೂರೈಕೆ ಇಲ್ಲದೆ ಸಮಸ್ಯೆಯಾಗುತ್ತಿದೆ. ಬಯಲು ಶೌಚಾಲಯ ಹೋಗಲಾಡಿಸಬೇಕು. ಈ ನಿಟ್ಟಿನಲ್ಲಿ ಎಲ್ಲ ಗ್ರಾಮಗಳಲ್ಲಿ ಸಾಮೂಹಿಕ ಶೌಚಾಲಯ ನಿರ್ಮಿಸಬೇಕು. ಬಡ ಬಗ್ಗರಿಗೆ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ನೆರವು ಅಗತ್ಯವಾಗಿದೆ ಎಂದು ಠಾಣಾಕುಶನೂರ ಗ್ರಾಪಂ. ಸದಸ್ಯ ರಾಮಶೆಟ್ಟಿ ಪನ್ನಾಳೆ ಹೇಳುತ್ತಾರೆ.

ತೋರ್ಣಾದ ಹೊಸ ಕೆರೆ ಪ್ರಸ್ತಾವನೆಗೆ ಮಂಜೂರಾತಿ, ಅಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸ್ವಂತ ಕಟ್ಟಡ, ಕುಡಿಯುವ ನೀರಿನ ಸಮರ್ಪಕ ಪೂರೈಕೆ, ಶಾಲೆಗಳಿಗೆ ಕಂಪೌಂಡ ಗೋಡೆ, ಪರಿಶಿಷ್ಟರ ಗಲ್ಲಿಯಲ್ಲಿ ಮೂಲ ಸೌಲಭ್ಯ ಕಲ್ಪಿಸಬೇಕಾಗಿದೆ ಎಂದು ಗ್ರಾಮ ಸದಸ್ಯ ರಾಜಹಂಸ ಶೆಟಕಾರ ಬೇಡಿಕೆ ಮಂಡಿಸಿದ್ದಾರೆ.

ಸದಸ್ಯರ ಭರವಸೆ: ತಾಲ್ಲೂಕಿನ ಅಭಿವೃದ್ಧಿಯ ಬಗ್ಗೆ ಕಳಕಳಿ ಹೊಂದಿರುವ ಶಾಸಕ ಪ್ರಭು ಚವ್ಹಾಣ ಅವರ ಸಹಕಾರದಿಂದ ಜನರ ಬೇಡಿಕೆ ಈಡೇರಿಸಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಜಿಪಂ. ಸದಸ್ಯ ಧೂಳಪ್ಪ ಸುರಂಗೆ ಹೇಳುತ್ತಾರೆ.

ಆರು ತಿಂಗಳಲ್ಲಿ ಠಾಣಾಕುಶನೂರ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಲು ಪ್ರಯತ್ನಿಸುತ್ತೇನೆ. ಜನ ಸಹಕಾರ ನೀಡಿದರೆ 110 ಕೆ.ವಿ. ಸಾಮರ್ಥ್ಯದ ವಿದ್ಯುತ್ ವಿತರಣಾ ಕೇಂದ್ರದ ಕಾಮಗಾರಿಯೂ ಶೀಘ್ರದಲ್ಲಿ ಆರಂಭವಾಗುತ್ತದೆ. ಠಾಣಾಕುಶನೂರ್‌ನಲ್ಲಿ ಸರ್ಕಾರಿ ಪದವಿ ಕಾಲೇಜು, ಅಂಗನವಾಡಿಗಳಿಗೆ ಸ್ವಂತ ಕಟ್ಟಡ, ನಿಡೋದಾ ಗ್ರಾಮದ ಸೇತುವೆ ಎತ್ತರ ಹೆಚ್ಚಳ, ಮುಧೋಳನಲ್ಲಿ 33 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರ ಸ್ಥಾಪನೆ, ಶೌಚಾಲಯ ನಿರ್ಮಾಣ, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಪಶು ಆಸ್ಪತ್ರೆಯಲ್ಲಿನ ವೈದ್ಯರ ಕೊರತೆ ನಿವಾರಣೆ, ಹಳೆ ಕೆರೆ ದುರಸ್ತಿ ಮತ್ತು ಅಗತ್ಯವಿರುವೆಡೆ ಹೊಸ ಕೆರೆ ನಿರ್ಮಾಣ, ಶಾಲೆಗಳ ಸುಧಾರಣೆ ಹಾಗೂ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವಂತೆ ನೋಡಿಕೊಳ್ಳುತ್ತೇನೆ. ಇದಕ್ಕಾಗಿ ಸಮಾಜ ಚಿಂತಕರ ಮತ್ತು ಬುದ್ಧಿ ಜೀವಿಗಳ ಸಲಹೆ ಸೂಚನೆ ನಿರೀಕ್ಷಿಸವುದಾಗಿ ಜಿಪಂ. ಸದಸ್ಯ ಧೂಳಪ್ಪ ಸೂರಂಗೆ ಹೇಳಿದ್ದಾರೆ.          

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT