ಅನಿಲ ಸೋರಿಕೆ, ಹೆದ್ದಾರಿ ಬಂದ್

ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಶಿರಾಡಿ ಗ್ರಾಮದ ಉದನೆ ಸಮೀಪದ ಪರವರಕೊಟ್ಯ ಎಂಬಲ್ಲಿ ಮಂಗಳವಾರ ಸಂಜೆ ಬುಲೆಟ್ ಟ್ಯಾಂಕರ್ ಸೇತುವೆಗೆ ಡಿಕ್ಕಿ ಹೊಡೆದು ಹೊಳೆಗೆ ಬಿದ್ದಿದ್ದು, ಭಾರೀ ಪ್ರಮಾಣದಲ್ಲಿ ಅನಿಲ ಸೋರಿಕೆ ಆಗತೊಡಗಿದೆ.
ಸೋರಿಕೆ ಆಗುತ್ತಿರುವ ಅನಿಲ ಹೊಳೆ ನೀರಿನೊಂದಿಗೆ ಮಿಶ್ರಣಗೊಂಡು ಹರಿಯುತ್ತಿದೆ. ಹೀಗಾಗಿ ಸಂಭವನೀಯ ಭಾರಿ ಬೆಂಕಿ ದುರಂತ ತಪ್ಪಿದೆ.
ಸೇತುವೆಗೆ ಡಿಕ್ಕಿ ಹೊಡೆದ ಸಂದರ್ಭದಲ್ಲಿ ಟ್ಯಾಂಕರ್ನ ಕೊಂಡಿಯೊಂದು ಸೇತುವೆಗೆ ಸಿಲುಕಿಕೊಂಡು ಟ್ಯಾಂಕರ್ ಮತ್ತು ಎಂಜಿನ್ ಬೇರ್ಪಟ್ಟು, ಎಂಜಿನ್ ಸೇತುವೆ ಮಧ್ಯ ಭಾಗದಲ್ಲಿ ನಿಲುಗಡೆಗೊಂಡಿತು. ಬುಲೆಟ್ ಟ್ಯಾಂಕರ್ ಹೊಳೆಗೆ ಬಿತ್ತು. ಘಟನೆಯಲ್ಲಿ ಟ್ಯಾಂಕರ್ ಚಾಲಕ, ಕ್ಲೀನರ್ ಪಾರಾಗಿದ್ದಾರೆ.
ಗ್ಯಾಸ್ ಸೋರಿಕೆಯಾಗಿ ವಾತಾವರಣ ಸೇರುತ್ತಿರುವುದರಿಂದ ಸುತ್ತಮುತ್ತ ದುರ್ವಾಸನೆ ನೆಲೆಸಿದೆ. ಮುಂಜಾಗ್ರತಾ ಸಲುವಾಗಿ ಮಂಗಳೂರು–ಬೆಂಗಳೂರು ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಅಪಘಾತದ ವೇಳೆ ಸೇತುವೆಗೆ ಧಕ್ಕೆ ಆಗಿರುವ ಸಾಧ್ಯತೆ ಇದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳಕ್ಕೆ ಬಂದು ಸೇತುವೆ ಪರಿಶೀಲಿಸದೆ ವಾಹನ ಸಂಚರಿಸುವಂತಿಲ್ಲ. ಹೀಗಾಗಿ ಬುಧವಾರ ಬೆಳಿಗ್ಗೆ ತನಕ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಳ್ಳಲಿದೆ.
ವಾಹನಗಳಿಗೆ ಗುಂಡ್ಯ–ಸುಬ್ರಹ್ಮಣ್ಯ, ಉಪ್ಪಿನಂಗಡಿ ಮೂಲಕ ಹಾಗೂ ಮಾಣಿ–ಮೈಸೂರು ಮೂಲಕ ತೆರಳುವುದಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಸೋರಿಕೆಯಾದ ಗ್ಯಾಸ್ ಪರಿಸರದ ಎಲ್ಲೆಡೆಯಲ್ಲಿ ಹರಡಿಕೊಂಡಿದ್ದು, ಘಟನೆ ನಡೆದ ಪರಿಸರ ನಿರ್ಜನ ಪ್ರದೇಶ. ಇಲ್ಲಿಗೆ 1 ಕಿ.ಮೀ. ದೂರದಲ್ಲಿ ಉದನೆ ಪೇಟೆ ಮತ್ತು ಶಾಲೆ ಇದೆ.
ನೀರು ಪೂರೈಕೆ ಸ್ಥಗಿಶತ: ಟ್ಯಾಂಕರ್ನಿಂದ ಸೋರಿಕೆಯಾದ ಅನಿಲ ನೀರಿನೊಂದಿಗೆ ಸೇರಿ ಕುಮಾರಧಾರ ನದಿಯನ್ನು ಸೇರಿತ್ತು. ಹೀಗಾಗಿ ಪುತ್ತೂರು ಮತ್ತು ಮಂಗಳೂರು ನಗರಗಳಿಗೆ ನೀರು ಪೂರೈಕೆಯನ್ನು ಬುಧವಾರದವರೆಗೆ ಸ್ಥಗಿತಗೊಳಿಸಲಾಗಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.