ಭಾನುವಾರ, ಜೂನ್ 13, 2021
21 °C
ಕುಟುಂಬ ರಾಜಕಾರಣದ ಬೇರು–ಬಿಳಲು

ಅಪ್ಪ ನೆಟ್ಟ ಆಲದ ಮರಕ್ಕೆ...

ಹೊನಕೆರೆ ನಂಜುಂಡೇಗೌಡ Updated:

ಅಕ್ಷರ ಗಾತ್ರ : | |

ಕುಟುಂಬ ರಾಜಕಾರಣ ಮತ್ತು ಮತೀಯ ರಾಜಕಾರಣ ಎರಡು ಅತಿರೇಕಗಳು. ಬಹುಶಃ ಇವೆರಡೂ ಶಾಪ­ಗಳು ಭಾರತದ ಪ್ರಜಾಪ್ರಭುತ್ವಕ್ಕೆ ಅಂಟಿರದಿದ್ದರೆ ನಮ್ಮ ವ್ಯವಸ್ಥೆಯಷ್ಟು ಸೊಗಸಾದುದು ಮತ್ತೊಂದು ಇರುತ್ತಿರ­ಲಿಲ್ಲವೇನೊ! ಸುಮಾರು ಐದು ದಶಕಗಳ ಇತಿಹಾಸವಿರುವ ಕುಟುಂಬ ರಾಜಕಾರಣ ಮತ್ತು ಸ್ವಾತಂತ್ರ್ಯಪೂರ್ವ­ದಿಂದಲೂ ‘ಗುಮ್ಮ’­ನಂತೆ ಹಿಂಬಾಲಿಸುತ್ತಿರುವ ಮತೀಯ ರಾಜಕಾರಣ ಇವೆರಡ­ರಲ್ಲಿ ಯಾವುದು ಹೆಚ್ಚು  ಅಥವಾ ಯಾವುದು ಕಡಿಮೆ ಹಾನಿಕರ ಎಂದು ತೀರ್ಮಾನಿಸುವುದು ಕಷ್ಟ.ಮತೀಯ ರಾಜಕಾರಣ ಮತ್ತು ಕುಟುಂಬ ರಾಜಕಾರಣ ನಡುವಿನ ಜಿದ್ದಾಜಿದ್ದಿಗೆ ಏಪ್ರಿಲ್‌–ಮೇ ಲೋಕಸಭೆ ಚುನಾವಣೆ ಸಾಕ್ಷಿಯಾಗಲಿದೆ. ಭ್ರಷ್ಟಾಚಾರ ಹಗರಣಗಳು, ಬೆಲೆ ಏರಿಕೆ ಮತ್ತಿ­ತರ ಸಮಸ್ಯೆಗಳು ಊಟಕ್ಕಿರುವ ಉಪ್ಪಿನ­ಕಾಯಿಯಂತೆ. ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರು ಈಗಾಗಲೇ ಪರಸ್ಪರ ಕೆಸರು ಎರಚಾಟದಲ್ಲಿ ತೊಡಗಿ­ದ್ದಾರೆ. ನೆಹರೂ– ಗಾಂಧಿ ಕುಟುಂಬದ ಕುಡಿ ರಾಹುಲ್‌ ಗಾಂಧಿ, ಬಿಜೆಪಿ ಪ್ರಧಾನಿ ಅಭ್ಯರ್ಥಿ  ನರೇಂದ್ರ ಮೋದಿ ಚುನಾವಣಾ ಸಮರದಲ್ಲಿ ಮುಖಾ­ಮುಖಿ ಆಗಿದ್ದಾರೆ.ಹಿರಿಯ ಪೀಳಿಗೆ ಜನ ಮಾಜಿ ಪ್ರಧಾನಿ ಜವಾಹರಲಾಲ್‌ ನೆಹರೂ ಅವರಿಂದ ಹಿಡಿದು ರಾಹುಲ್‌ ಗಾಂಧಿವರೆಗೆ ನೆಹರೂ­–ಗಾಂಧಿ ಮನೆತನದ ನಾಲ್ಕು ತಲೆಮಾರುಗಳನ್ನು ಕಂಡಿದ್ದಾರೆ. ಅವರ ರಾಜಕೀಯ ವರಸೆಗಳು– ತಂತ್ರಗಳನ್ನು ಗಮನಿಸಿದ್ದಾರೆ. ರಾಹುಲ್‌ ತಮ್ಮ ತಂದೆ, ಅಜ್ಜಿ ಹಾಗೂ ಮುತ್ತಜ್ಜನಂತೆ ಪ್ರಧಾನಿ ಹುದ್ದೆಗೆ ಏರುವರೇ ಎಂದು ಭವಿಷ್ಯ ಹೇಳುವುದು ಕಷ್ಟ. ಕಾಲವೇ ಇದಕ್ಕೆಲ್ಲ ಉತ್ತರಿಸ­ಬೇಕು. ಆದರೆ, ಜನ ನೆಹರೂ– ಗಾಂಧಿ ಕುಟುಂಬದ ಮೇಲೆ ಪ್ರೀತಿ ತೋರುತ್ತಾ ಬಂದಿದ್ದಾರೆ. ಅವರ ರಾಜ­ಕಾರಣಕ್ಕೆ ಒಪ್ಪಿಗೆಯ ಮುದ್ರೆ ಒತ್ತುತ್ತಾ ಬಂದಿ­ದ್ದಾರೆ. ಯಾವುದೋ ಒಂದು ಚುನಾವಣೆಯಲ್ಲಿ ಕೈಬಿಟ್ಟರೆ ಮತ್ತೊಂದು ಚುನಾವಣೆ­ಯಲ್ಲಿ ಕೈ ಹಿಡಿದಿದ್ದಾರೆ.ಆಧುನಿಕ ಭಾರತದ ರೂವಾರಿ ನೆಹರೂ 1964ರ ಮೇನಲ್ಲಿ ನಿಧನರಾದಾಗ ಉತ್ತರಾಧಿಕಾರಿ ಯಾರಾಗ­ಬೇಕು ಎಂಬ ಪ್ರಶ್ನೆ ಕಾಂಗ್ರೆಸ್ಸಿನ ಹಿರಿಯ ನಾಯಕರಿಗೆ ಎದುರಾ­ಯಿತು. ಲಾಲ್‌­ಬಹದ್ದೂರ್‌ ಶಾಸ್ತ್ರಿ ಮತ್ತು ಮೊರಾರ್ಜಿ ದೇಸಾಯಿ ಹಕ್ಕು ಮಂಡಿ­ಸಿದರು. ಮೊರಾರ್ಜಿ ವಯಸ್ಸಿನಲ್ಲಿ ದೊಡ್ಡವರು. ರಾಜಕೀಯ ಅನುಭವ ಇದ್ದವರು. ನೇರ– ನಿಷ್ಠುರ, ಯಾರಿಗೂ ಸೊಪ್ಪು ಹಾಕದ ಅವರ ನಡವಳಿಕೆ ಬಹುತೇಕ ಕಾಂಗ್ರೆಸ್ಸಿಗರಿಗೆ ಹಿಡಿಸುತ್ತಿ­ರಲಿಲ್ಲ. ಹೀಗಾಗಿ ಮೃದು ಸ್ವಭಾವದ ಶಾಸ್ತ್ರಿ ಅವರಿಗೆ ಅದೃಷ್ಟ ಒಲಿಯಿತು.ಕಾಂಗ್ರೆಸ್‌ ಅಧ್ಯಕ್ಷರಾಗಿದ್ದ ಕಾಮರಾಜ್‌, ಬಂಗಾಳದ ಅತುಲ್ಯ ಘೋಷ್‌, ಮುಂಬೈನ ಎಸ್‌.ಕೆ. ಪಾಟೀಲ, ಆಂಧ್ರ  ಪ್ರದೇಶದ ನೀಲಂ ಸಂಜೀವ ರೆಡ್ಡಿ, ಆಗಿನ ಮೈಸೂರು ರಾಜ್ಯದ ಎಸ್.­ನಿಜಲಿಂಗಪ್ಪ ಅವರನ್ನೊಳಗೊಂಡಿದ್ದ ‘ಸಿಂಡಿ­ಕೇಟ್‌’ ಮಾರ್ಗ­ದರ್ಶನದಲ್ಲಿ ಶಾಸ್ತ್ರಿ ಪ್ರಧಾನಿಯಾಗಿ ಅವಿರೋಧವಾಗಿ ಆಯ್ಕೆ­ಯಾದರು. ಸಿಂಡಿಕೇಟ್‌ ನಾಯಕ­ರಿಗೆ ತಮ್ಮ ಅಧೀನ­ದಲ್ಲಿ ಕೆಲಸ ಮಾಡುವ ವ್ಯಕ್ತಿ ಬೇಕಿತ್ತು. ಹೀಗಾಗಿ ಶಾಸ್ತ್ರಿ ನೇಮಕ ಅನಿವಾರ್ಯವಾಯಿತು. ಆಗ ಮೊರಾರ್ಜಿ ಮನಸು ಮಾಡಿದ್ದರೆ ಪಕ್ಷ ಒಡೆಯ­ಬಹು­ದಿತ್ತು. ಹಾಗೆ ಮಾಡದೆ ಘನತೆಯಿಂದ ನಡೆದುಕೊಂಡರು.ಶಾಸ್ತ್ರಿ 1964ರ ಜೂನ್‌ ಎರಡರಂದು ಅಧಿಕಾರ ವಹಿಸಿ­ಕೊಂಡರು. ಹೆಚ್ಚುಕಡಿಮೆ ನೆಹರೂ ಸಂಪುಟ ಸದಸ್ಯರೇ ಶಾಸ್ತ್ರಿ ಸಂಪುಟದಲ್ಲೂ ಮುಂದುವರಿದರು. ನೆಹರೂ ಅವರ ಪುತ್ರಿ ಇಂದಿರಾ ಗಾಂಧಿ ಅವರನ್ನು  ಹೊಸದಾಗಿ ಸಚಿವರಾಗಿ ನೇಮಕ ಮಾಡಿಕೊಂಡರು. ವಾರ್ತಾ ಮತ್ತು ಪ್ರಸಾರ ಖಾತೆಯ ಹೊಣೆ ಕೊಟ್ಟರು. ಒಂದು ಅರ್ಥದಲ್ಲಿ ಕುಟುಂಬ ರಾಜಕಾರಣದ ಬೀಜ ಬಿತ್ತಿದವರೇ  ಶಾಸ್ತ್ರಿ! ಅಕಸ್ಮಾತ್‌ ಆಗ ಇಂದಿರಾ ಅವ­ರನ್ನು ಕರೆತಂದು ಮಂತ್ರಿ ಮಾಡಿರದಿದ್ದರೆ ನೆಹರೂ–ಗಾಂಧಿ ಕುಟುಂಬ ರಾಜಕೀಯ­ವಾಗಿ ಏನಾಗುತ್ತಿತ್ತೋ? ನೆಹರೂ ಮನೆತನದ ರಾಜಕಾರಣ ಅಲ್ಲಿಗೇ ಮುಗಿಯುತ್ತಿತ್ತೇನೋ?ಶಾಸ್ತ್ರಿ ಯುಗ ಕೇವಲ ಹತ್ತೊಂಬತ್ತು ತಿಂಗಳಲ್ಲಿ ಅಂತ್ಯ­ವಾಯಿತು. ತಾಷ್ಕೆಂಟ್‌ಗೆ ತೆರಳಿದ್ದ ಶಾಸ್ತ್ರಿ 1966ರ ಜನವರಿಯಲ್ಲಿ ಹೃದಯಾಘಾತದಿಂದ ನಿಧನರಾದರು.  ಎರಡು ವರ್ಷ­ದಲ್ಲಿ ಎರಡನೇ ಬಾರಿಗೆ ‘ಪ್ರಧಾನಿ ಯಾರು?’ ಎನ್ನುವ ಪ್ರಶ್ನೆ ಉದ್ಭವಿಸಿತು.  ಪುನಃ ಮೊರಾರ್ಜಿ ಹೆಸರು ಮುಂಚೂ­ಣಿಗೆ ಬಂತು. ಕಾಮರಾಜ್‌ ಸಿಂಡಿಕೇಟ್‌ ಹೊಸಬರಿಗಾಗಿ ಹುಡು­ಕಾಟ ನಡೆಸಿದಾಗ ಕಂಡಿದ್ದು ಇಂದಿರಾ ಗಾಂಧಿ. ಆಗಲೂ ಮೊರಾರ್ಜಿ ಅವರಿಗೆ ಅದೃಷ್ಟ ಕೈಕೊಟ್ಟಿತು. ಒಟ್ಟು ಹದಿ­ನಾಲ್ಕ­ರಲ್ಲಿ ಹನ್ನೆರಡು ಮುಖ್ಯಮಂತ್ರಿಗಳು ಇಂದಿರಾ ಅವರ ಬೆಂಬಲಕ್ಕೆ ಬಂದರು. ಇಂದಿರಾ ತಮ್ಮ ನೆರಳಲ್ಲೇ ಮುನ್ನಡೆಯಬೇಕು ಎನ್ನು­ವುದು ಕಾಂಗ್ರೆಸ್‌ ಸಿಂಡಿಕೇಟ್‌ ಅಪೇಕ್ಷೆ ಆಗಿತ್ತು. ಆದರೆ, ನಡೆ­ದಿದ್ದೇ ಬೇರೆ. ಇಂದಿರಾ ಕ್ರಮೇಣ ಸಿಂಡಿಕೇಟ್‌ ಅನ್ನು ದುರ್ಬ­ಲ­ಗೊಳಿ­ಸಿ­ದರು. ಕಾಂಗ್ರೆಸ್‌ ಪಕ್ಷದ ಮೇಲೆ ಹಿಡಿತ ಸಾಧಿಸಿದರು.ಇಂದಿರಾ ಅವರ ಎರಡನೇ ಪುತ್ರ ಸಂಜಯ್‌ ಅಮ್ಮನ ಆಸರೆ­­ಯಲ್ಲಿ ರಾಜಕೀಯ ಹೆಜ್ಜೆ ಇಡಲಾರಂಭಿಸಿದರು. ತಮ್ಮ ನಂತರ ಸಂಜಯ್‌ ದೇಶದ ಚುಕ್ಕಾಣಿ ಹಿಡಿಯಬೇಕು ಎನ್ನುವುದು ಮಾಜಿ ಪ್ರಧಾನಿ ಕನಸಾಗಿತ್ತೇನೋ. ಆದರೆ, 1980ರಲ್ಲಿ ಸಂಜಯ್‌ ವಿಮಾನ ಅಪಘಾತದಲ್ಲಿ ಮೃತ­ಪಟ್ಟರು. ಆಗ ಇಂದಿರಾ ಅವರು ಪೈಲಟ್‌ ಆಗಿದ್ದ ರಾಜೀವ್‌ ಗಾಂಧಿ ಅವರನ್ನು ರಾಜಕಾರಣಕ್ಕೆ ಬಲವಂತ­ವಾಗಿ ಕರೆತಂದರು. ಎಳೆದು ತಂದ­ರೆಂದು ಹೇಳಿದರೂ ತಪ್ಪಲ್ಲ. ಒಲ್ಲದ ಮನಸ್ಸಿನಿಂದಲೇ ಅಮ್ಮ­ನನ್ನು ಹಿಂಬಾಲಿಸಿದ ರಾಜೀವ್‌, ಸಂಜಯ್‌ ನಿಧನದಿಂದ ತೆರ­ವಾ­ಗಿದ್ದ ಅಮೇಠಿ ಲೋಕಸಭೆ ಕ್ಷೇತ್ರದಿಂದ ಆಯ್ಕೆಯಾದರು. ಪಕ್ಷ ಕೊಟ್ಟ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿ­ದರು.1984ರ ಅಕ್ಟೋಬರ್‌ 31ರಂದು ಬೆಳಿಗ್ಗೆ ಇಂದಿರಾ ತಮ್ಮ ಭದ್ರತಾ ಪಡೆ ಸಿಬ್ಬಂದಿ ಗುಂಡಿಗೆ ಬಲಿಯಾದರು. ಅಂದೇ ರಾಜೀವ್‌ ತಾಯಿಯ ಉತ್ತರಾಧಿಕಾರಿ ಆದರು. ನಂತರ ಅಕಾಲಿಕ ಸಾವು  ಅವರನ್ನೂ ಬಿಡದೆ ಹಿಂಬಾಲಿ­ಸಿತು. 1991ರ ಮೇ 21ರಂದು ತಮಿಳುನಾಡಿನ ಶ್ರೀಪೆರಂಬ­ದೂರಿನಲ್ಲಿ ಸಂಭವಿ­ಸಿದ ಬಾಂಬ್‌ ಸ್ಫೋಟಕ್ಕೆ ರಾಜೀವ್‌ ಬಲಿಯಾದರು. ಹನ್ನೊಂದು ವರ್ಷದಲ್ಲಿ ಗಾಂಧಿ ಕುಟುಂಬ ತನ್ನ ಮೂವರು ಸದಸ್ಯರನ್ನು ಕಳೆದು­ಕೊಂಡು ಆತಂಕಕ್ಕೊಳಗಾಯಿತು. ಏಳು ವರ್ಷ ರಾಜಕೀಯ ಅಜ್ಞಾತವಾಸ ಅನುಭವಿಸಲು ಇದೂ ಕಾರಣ­­ವಿರ­ಬಹುದು.ಏಳು ವರ್ಷ ಕುಟುಂಬ ರಾಜಕಾರಣ­ದಿಂದ ಮುಕ್ತ­ವಾಗಿದ್ದ ಕಾಂಗ್ರೆಸ್‌ ಪುನಃ ಗಾಂಧಿ ಕುಟುಂಬದ ಹಿಡಿತಕ್ಕೆ ಮರಳಿತು. ಐದು ವರ್ಷ ಪಿ.ವಿ. ನರಸಿಂಹ ರಾವ್‌ ನೇತೃತ್ವದ ಸರ್ಕಾರ ಆಡಳಿತ ನಡೆಸಿತು. ಆರ್ಥಿಕ ಸುಧಾರಣೆ ಕ್ರಮಗಳಿಗೆ ರಾವ್‌ ನಾಂದಿ ಹಾಡಿದರು.  ತೀವ್ರ ವಿರೋಧದ ನಡುವೆಯೂ ಉದಾರೀಕರಣ–ಜಾಗತೀಕರಣಕ್ಕೆ ಬಾಗಿಲು ತೆರೆದರು. ಏಳು ವರ್ಷಗಳಲ್ಲಿ ಕಾಂಗ್ರೆಸ್‌ ಪಕ್ಷದೊಳಗೆ ಬಹ­ಳಷ್ಟು ಬೆಳವಣಿಗೆಗಳು ಆಗಿದ್ದವು. ಗಾಂಧಿ ಕುಟುಂಬದ ಸದಸ್ಯ­ರಿ­ಲ್ಲದೆ ಪಕ್ಷ ಮುನ್ನಡೆಸುವುದು ಕಷ್ಟವೆಂಬ ವಾತಾ­ವರಣ ಸೃಷ್ಟಿ­ಯಾಗಿತ್ತು. ರಾಜಕಾರಣ ಬೇಡವೆನ್ನುತ್ತಿದ್ದ ಸೋನಿಯಾ ಅವ­ರನ್ನು ಮನವೊಲಿಸಿ 1998ರಲ್ಲಿ ಅವರಿಗೆ ಪಕ್ಷದ ನಾಯಕತ್ವ ವಹಿಸಲಾಯಿತು.ಸೋನಿಯಾ ಅವರ ಹಿಂದೆಯೇ ರಾಜಕೀಯ ಪ್ರವೇಶ ಮಾಡಿ­ದ ರಾಹುಲ್‌ ಪಕ್ಷದ ಉಪಾಧ್ಯಕ್ಷ. ಲೋಕಸಭೆ ಚುನಾವಣೆ ಪ್ರಚಾರದ ನೇತೃತ್ವವನ್ನು ಅವರಿಗೆ ವಹಿಸ­ಲಾಗಿದೆ. ನೆಹರೂ, ಇಂದಿರಾ ಹಾಗೂ ರಾಜೀವ್‌ ಗಾಂಧಿ ಅವರ ನೇತೃತ್ವ­ದಲ್ಲಿ ಏರುಗತಿಯಲ್ಲಿ ಸಾಗಿದ್ದ ಕಾಂಗ್ರೆಸ್‌ ಪಕ್ಷ ಸೋನಿಯಾ ಮತ್ತು ರಾಹುಲ್‌ ನಾಯಕತ್ವದಲ್ಲಿ ಸೊರಗಿದೆ. ಒಂದರ ಹಿಂದೆ ಮತ್ತೊಂದರಂತೆ ಬಂದೆರಗಿದ ಭ್ರಷ್ಟಾಚಾರ ಹಗರಣಗಳು ಪಕ್ಷ ಮತ್ತು ಸರ್ಕಾರದ ವರ್ಚಸ್ಸನ್ನು ಕುಗ್ಗಿಸಿವೆ. ಹಿರಿಯ ತಲೆ­ಮಾರಿನ ಜನ ಸೋನಿಯಾ ಮತ್ತು ರಾಹುಲ್‌ ಸಾಮರ್ಥ್ಯವನ್ನು ಇಂದಿರಾ, ರಾಜೀವ್‌ ಜತೆ ಹೋಲಿಕೆ ಮಾಡುತ್ತಿದ್ದಾರೆ.ರಾಜೀವ್‌ ಸರ್ಕಾರದಲ್ಲೂ ಬೊಫೋರ್ಸ್‌ ಹಗರಣ ನಡೆ­ದಿತ್ತು. ಇಂದಿರಾ  ಮೇಲೂ ಭ್ರಷ್ಟಾಚಾರ ಆರೋಪ­ಗಳು ಕೇಳಿ­ಬಂದಿತ್ತು. ಆದರೂ ಪಕ್ಷ ಇಷ್ಟೊಂದು ಅಧೋ­ಗತಿಗೆ ಇಳಿದಿರ­ಲಿಲ್ಲ. ಈಗ ತಾಯಿ– ಮಗನ ನೇತೃತ್ವದಲ್ಲಿ ಪಕ್ಷ ಚೇತರಿಸಿ­ಕೊಳ್ಳಲು ಸಾಧ್ಯವಿಲ್ಲವೇನೊ ಎನ್ನುವ ಸ್ಥಿತಿಗೆ ತಲು­ಪಿದೆ. ಕಾಂಗ್ರೆಸ್‌ ಕಥೆ ಮುಗಿಯಿತು ಎಂಬಂತೆ ಮಾಧ್ಯ­ಮ­ಗಳಲ್ಲಿ ಪ್ರಚಾರ ನಡೆದಿದೆ. ಒಂದು ದಶ­ಕದ ಯುಪಿಎ ಆಡಳಿತ ಜನರಲ್ಲಿ ಹತಾಶೆ ಮೂಡಿಸಿದೆ ಎನ್ನು­ವುದು ಅತಿಶಯೋಕ್ತಿ ಅಲ್ಲ.‘ಊರು ದೋಚಿದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬ ಗಾದೆ ಯಂತೆ ಸೋನಿಯಾ ಮತ್ತು ರಾಹುಲ್‌ ಕೊನೆ ಗಳಿಗೆ­ಯಲ್ಲಿ ಎಚ್ಚೆತ್ತುಕೊಂಡಿದ್ದಾರೆ. ಆಹಾರ ಭದ್ರತೆ ಕಾಯ್ದೆ, ಲೋಕಪಾಲ ಮಸೂದೆ ಜಾರಿಯಂಥ ಕ್ರಮ ಕೈ­ಗೊಂಡಿದ್ದಾರೆ. ಇವು ಸರ್ಕಾರದ ನೇತೃತ್ವ ವಹಿಸಿರುವ ಪಕ್ಷದ ನೆರವಿಗೆ ಬರುವುದೇ ಎಂಬ ಪ್ರಶ್ನೆಗೆ ಮತದಾರರೇ ಉತ್ತರ ಹೇಳಬೇಕು. ಉತ್ತರ ಸಿಗಲು ಚುನಾವಣೆ ಫಲಿತಾಂಶ ಬರುವವರೆಗೂ ಕಾಯಬೇಕು.ಮರಳಿ ಕುಟುಂಬ ರಾಜಕಾರಣದ ವಿಷಯಕ್ಕೆ ಬಂದರೆ, ಇದು ನೆಹರೂ ಕುಟುಂಬಕ್ಕೆ ಮತ್ತು ಕಾಂಗ್ರೆಸ್‌ಗೆ ಸೀಮಿತ­ವಾಗಿಲ್ಲ. ಮತೀಯ ರಾಜಕಾರಣಕ್ಕೆ ಜೋತು ಬಿದ್ದಿರುವ ಬಿಜೆಪಿ­­ಯಲ್ಲೂ ನೆಹರೂ–ಗಾಂಧಿ ಕುಟುಂಬದ ಸದಸ್ಯ­ರಿದ್ದಾರೆ. ಸಂಜಯ್‌ ಗಾಂಧಿ ಅವರ ಪತ್ನಿ ಮೇನಕಾ ಗಾಂಧಿ, ಪುತ್ರ ವರುಣ್‌ ಗಾಂಧಿ ಬಿಜೆಪಿಯ ಪ್ರಮುಖ ನಾಯಕರು.ರಾಜೀವ್‌ ಪುತ್ರಿ ಪ್ರಿಯಾಂಕಾ ಗಾಂಧಿ ಅವರನ್ನೂ ರಾಜಕಾ­ರ­ಣಕ್ಕೆ ಕರೆತರಬೇಕು ಎಂಬ ಬೇಡಿಕೆ ಪಕ್ಷದ ಕಾರ್ಯ­ಕರ್ತರು ಮತ್ತು ಕೆಲವು ಮುಖಂಡರಿಂದ ಬಂದಿತ್ತು. ಸೋನಿಯಾ ಅವ­ರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಪ್ರಿಯಾಂಕಾ ಸಂಸ­ದರಲ್ಲದಿದ್ದರೂ ತಾಯಿ ಮತ್ತು ಸೋದರನ ಕ್ಷೇತ್ರಗಳ ಜವಾಬ್ದಾರಿ ನಿಭಾಯಿಸುವ ಹೊಣೆ ಹೊತ್ತಿದ್ದಾರೆ. 2014ರ ಚುನಾವಣೆಯಲ್ಲೂ ಅವರು ಕುಟುಂಬ ಸದಸ್ಯರ ಪರವಾಗಿ ಪ್ರಚಾರ ಮಾಡಲಿದ್ದಾರೆ.ತಮ್ಮ ಮಕ್ಕಳು, ಮೊಮ್ಮಕ್ಕಳನ್ನು ರಾಜಕಾರಣಕ್ಕೆ ಪರಿಚ­ಯಿ­ಸಲು ನೇತಾರರಲ್ಲಿ ಪೈಪೋಟಿ ನಡೆದಿದೆ.  ರಾಜಕಾರಣ ತಮ್ಮ ಆಜನ್ಮ ಸಿದ್ಧ ಹಕ್ಕು ಎಂಬಂತೆ ನಡೆದು­ಕೊಳ್ಳುತ್ತಿ­ದ್ದಾರೆ. ಇಂಥ ಮನೋಧರ್ಮದ ನಾಯಕರು ಎಲ್ಲ ಕಾಲ­ದಲ್ಲೂ ಎಲ್ಲ ಪಕ್ಷ­ಗಳಲ್ಲೂ ಇದ್ದಾರೆ. ರಾಜ­ಕಾರಣ ಸ್ವಂತ ಆಸ್ತಿ­ಯಲ್ಲ. ಎಲ್ಲರಿಗೂ ಅವಕಾಶ ಸಿಗಬೇಕು ಎಂದು ಪ್ರತಿ­ಪಾದಿ­ಸುವ ನಾಯಕರು ಅಲ್ಲೊ­ಬ್ಬರು, ಇಲ್ಲೊಬ್ಬರು ಸಿಗು­ತ್ತಾರೆ. ಅವರೂ ಸಂಕುಚಿತ ಮನೋ­ಧರ್ಮದ  ರಾಜಕಾ­ರ­ಣಿ­ಗಳಂತೆ ಆಲೋಚನೆ ಮಾಡಿ­ದರೆ ಪ್ರಜಾಪ್ರಭುತ್ವ ಅರ್ಥ–ಮೌಲ್ಯ ಕಳೆದುಕೊಳ್ಳುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.