ಸೋಮವಾರ, ಮೇ 23, 2022
24 °C

ಅಬಕಾರಿ ಸುಂಕ: ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಕೇಂದ್ರದ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಅವರು ಇತ್ತೀಚೆಗೆ ಮಂಡಿಸಿರುವ ಕೇಂದ್ರ ಬಜೆಟ್‌ನಲ್ಲಿ ಸಿದ್ಧ ಉಡುಪು ಕೈಗಾರಿಕೆಗಳ ಮೇಲೆ ಶೇ 10ರಷ್ಟು ಅಬಕಾರಿ ತೆರಿಗೆ ವಿಧಿಸಿರುವುದನ್ನು ಖಂಡಿಸಿ ಜಿಲ್ಲಾ ಸಿದ್ಧ ಉಡುಪು ತಯಾರಕರ ಸಂಘವು ಸೋಮವಾರ ನಗರದಲ್ಲಿ ಬೃಹತ್ ರ್ಯಾಲಿ ನಡೆಸಿತು.ಸ್ಥಳೀಯ ಮೋತಿ ವೃತ್ತ, ತೇರು ಬೀದಿ, ಬೆಂಗಳೂರು ರಸ್ತೆ ಮಾರ್ಗವಾಗಿ ಜಿಲ್ಲಾಧಿಕಾರಿಗೆ ತೆರಳಿದ ಸಂಘದ ನೂರಾರು ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಅರ್ಪಿಸಿದರು.

ಕೇಂದ್ರ ಸರ್ಕಾರವು ಶೇ. 10ರಷ್ಟು ಸುಂಕ ವಿಧಿಸಿರುವುದು ಸಿದ್ಧ ಉಡುಪು ತಯಾರಕರ ಬದುಕನ್ನು ದುಸ್ತರವಾಗಿಸಲಿದೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಫುಖ್‌ರಾಜ್ ಭೂರತ್ ಆರೋಪಿಸಿದರು.ನಗರದಲ್ಲಿ 10 ಸಾವಿರ ಕುಟುಂಬಗಳು ಸಿದ್ಧ ಉಡುಪು ಉದ್ಯಮವನ್ನು ಅವಲಂಬಿಸಿದ್ದು, ಅನೇಕರು ತೀವ್ರ ಸಂಕಷ್ಟಕ್ಕೆ ಸಿಲುಕಿ ವ್ಯಾಪಾರದ ವಹಿವಾಟು ಮುಚ್ಚಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.ಸಂಘದ ಕಾರ್ಯದರ್ಶಿ ಲಕ್ಕಿ ಎಂ.ಶಾ, ಉಪಾಧ್ಯಕ್ಷ ಯು.ರಾಮಚಂದ್ರ ರಾವ್, ಜಂಟಿ ಕಾರ್ಯದರ್ಶಿ ವಿನಯಕುಮಾರ್ ಜೈನ್, ಡುಂಗರ್ ಚಂದ್, ಖಜಾಂಚಿ ಉತ್ತಮ್ ಚಂದ್ ಮತ್ತಿತರರು ಉಪಸ್ಥಿತರಿದ್ದರು.ಶ್ರೀರಾಮಸೇನೆ ಪ್ರತಿಭಟನೆ

ಬಳ್ಳಾರಿ: ಶ್ರೀರಾಮಸೇನೆಯು ಸ್ಥಳೀಯ ಗಾಂಧಿಭವನದಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಸಮಾವೇಶಕ್ಕೆ ಜಿಲ್ಲಾಡಳಿತವು ತಡೆಯೊಡ್ಡಿರುವುದು ಸೂಕ್ತವಲ್ಲ ಎಂದು ಆರೋಪಿಸಿ, ಸೇನೆಯ ಜಿಲ್ಲಾ ಘಟಕ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿತು.ಸೇನೆಯು ಜಿಲ್ಲಾ ಸಮಾವೇಶ ನಡೆಸುವುದಾಗಿ ಪೊಲೀಸ್ ಇಲಾಖೆಯಿಂದ ಅನುಮತಿಯನ್ನು ಪಡೆದಿದ್ದರೂ ‘ಸಮಾವೇಶ ನಡೆಸಬಾರದು, ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ತಂಗಲು ವಸತಿಗೃಹ ನೀಡಬಾರದು’ ಎಂದು ಇಲಾಖೆಯು ಸೂಚನೆ ನೀಡಿರುವುದರ ಹಿಂದೆ ಯಾವ ಉದ್ದೇಶ ಇದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಸಮಾವೇಶ ನಡೆಯದಂತೆ ಸೂಚಿಸಿದ್ದು ಸರಿಯಲ್ಲ ಎಂದು ಸೇನೆಯ ಮುಖಂಡರಾದ ಅಶೋಕ ಕೌಶಿಕ್, ದರೂರು ಶಾಂತನಗೌಡ, ಕುಂದಾಪೂರ ನಾಗರಾಜ ಮತ್ತಿತರರು ತಿಳಿಸಿದರು. ನಂತ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.