ಭಾನುವಾರ, ಮೇ 22, 2022
26 °C
ರಾಮನಗರದಲ್ಲಿ ರೈತ ಹುತಾತ್ಮ ದಿನಾಚರಣೆ

`ಅಭಿವೃದ್ಧಿ ಹೆಸರಿನಲ್ಲಿ ಜಮೀನು ಒತ್ತುವರಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: `ಸ್ವಾತಂತ್ರ್ಯ ಬಂದು 65 ವರ್ಷ ದಾಟಿದರೂ ರೈತರ ಬದುಕನ್ನು ಸುಭದ್ರಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಪ್ರಾಮಾಣಿಕ ಪ್ರಯತ್ನ ನಡೆಸಿಲ್ಲ' ಎಂದು ಕರ್ನಾಟಕ ಶ್ರಮಿಕ ಶಕ್ತಿಯ ರಾಜ್ಯ ಘಟಕದ ಅಧ್ಯಕ್ಷ ಡಾ. ವಾಸು ವಿಷಾದ ವ್ಯಕ್ತಪಡಿಸಿದರು.ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕ ನಗರದ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ರೈತ ಹುತಾತ್ಮ ದಿನಾಚರಣೆ ಮತ್ತು ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ರೈತರ ಸಮಸ್ಯೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸ್ಪಂದಿಸುತ್ತಿಲ್ಲ. ಇದುವರೆಗೂ ರೈತ ಬೆಳೆದ ಬೆಳೆಗೆ ಸಮರ್ಪಕ ಬೆಲೆ ನಿರ್ಧರಿಸಲು ಸಾಧ್ಯವಾಗಿಲ್ಲ. ಅಲ್ಲದೆ ಅಭಿವೃದ್ಧಿ ಹೆಸರಿನಲ್ಲಿ ರೈತರ ಜಮೀನು ಒತ್ತುವರಿ ಮಾಡುತ್ತಿದ್ದಾರೆ. ಒಟ್ಟಾರೆ ರೈತರ ಬದುಕು ಇಂದಿಗೂ ಮುರಾಬಟ್ಟೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಚಿಂತಕ ವೀರಭದ್ರಪ್ಪ ಬಿಸ್ಲಳ್ಳಿ ಮಾತನಾಡಿ, `ರೈತರ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಲೇ ಇವೆ. ಆದರೂ ರೈತ ಮಾತ್ರ ಎದೆಗುಂದದೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾನೆ. ತನ್ನ ಸಹನೆಯ ಕಟ್ಟೆಯೊಡೆದು ಬೀದಿಗಿಳಿದು ಪ್ರತಿಭಟಿಸಿದಾಗ ಪೊಲೀಸರ ಲಾಠಿ, ಬೂಟಿನ ಏಟಿನ ರುಚಿ ಅನುಭವಿಸುತ್ತಲೇ ಇದ್ದಾನೆ. ಪ್ರತಿ ವರ್ಷ ಕೃಷಿ ಅಭಿವೃದ್ಧಿಗಾಗಿಯೇ ಸರ್ಕಾರ ಕೋಟ್ಯಾಂತರ ರೂಪಾಯಿಗಳನ್ನು ಬಿಡುಗಡೆ ಮಾಡುತ್ತಿದೆ. ಆದರೂ ರೈತನ ಬದುಕು ಬದಲಾಗಿಯೇ ಇಲ್ಲ' ಎಂದು ತಿಳಿಸಿದರು.ಪಶು ಆಹಾರ ತಜ್ಞ ಡಾ. ನಾಗೇಶ್ ಮಾತನಾಡಿ, `ರೈತರಿಗೆ ಶೇ.30ರಷ್ಟು ಆದಾಯ ಹೈನುಗಾರಿಕೆಯಿಂದ ಬರುತ್ತಿದೆ. ಹಸುಗಳನ್ನು ಹಾಲು ಕೊಡುವ ಯಂತ್ರಗಳನ್ನಾಗಿ ನೋಡದೆ ಅವುಗಳಿಗೆ ಸಮತೋಲನ ಪಶು ಆಹಾರವನ್ನು ನೀಡಬೇಕು. ಕಾರ್ಖಾನೆಗಳು ತಯಾರಿಸುವ ಪಶು ಆಹಾರಗಳ ಬದಲಾಗಿ ರೈತರು ಸ್ವತಃ ಪಶು ಆಹಾರವನ್ನು ತಯಾರು ಮಾಡಿಕೊಳ್ಳಬಹುದು. ಇದರಿಂದ ಗುಣಮಟ್ಟವನ್ನು ಕಾಯ್ದುಕೊಳ್ಳಲು ಸಹಕಾರಿಯಾಗುತ್ತದೆ. ಹಸುಗಳು ಬಗ್ಗೆ ಕ್ರಮಬದ್ಧವಾಗಿ ತಿಳಿದುಕೊಂಡರೆ ಹೈನೋದ್ಯಮದಲ್ಲಿ ಪ್ರಗತಿ ಸಾಧಿಸಬಹುದು' ಎಂದು ತಿಳಿಸಿದರು.ರಾಜ್ಯ ರೈತ ಸಂಘದ ಕಾರ್ಯದರ್ಶಿ ಸಿ.ಪುಟ್ಟಸ್ವಾಮಿ ಮಾತನಾಡಿ, ದೇಶದಲ್ಲಿ ನಿರಂತರವಾಗಿ ರೈತರ ಆತ್ಮಹತ್ಯೆ ನಡೆಯುತ್ತಿದ್ದರೂ ಚುನಾಯಿತ ಪ್ರತಿನಿಧಿಗಳು ಮೊಸಳೆ ಕಣ್ಣೀರು ಸುರಿಸಿಕೊಂಡು ತೆಪ್ಪಗಿದ್ದಾರೆ. ಸ್ವಾತಂತ್ರ್ಯ ಬಂದು ಅರ್ಧ ಶತಮಾನ ಕಳೆದರೂ ರೈತ ಸಮುದಾಯದ ಅತಂತ್ರ ಸ್ಥಿತಿಯಲ್ಲಿ ಬದುಕು ನಡೆಸುತ್ತಿದೆ ಎಂದರು.ಡಬ್ಲೂಟಿಒ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಸಹಿ ಹಾಕಿ ರೈತರ ಬದುಕಿಗೆ ಇತಿಶ್ರೀ ಹಾಡಿದಂತಾಯಿತು. ಈ ಒಪ್ಪಂದದಿಂದ ವಿದೇಶಿ ಸರಕುಗಳು ಅಡೆತಡೆಯಿಲ್ಲದೆ ನಮ್ಮ ಮಾರುಕಟ್ಟೆಯನ್ನು ಪ್ರವೇಶಿಸಿದವು. ಅವುಗಳೊಡನೆ ಪೈಪೋಟಿಗೆ ನಿಲ್ಲಲಾರದೆ ನಮ್ಮ ಕೈಗಾರಿಕಾ ವಸ್ತುಗಳು ನೆಲಕಚ್ಚಿದವು. ಕಚ್ಚಾವಸ್ತುಗಳ ಉತ್ಪಾದಕರಾದ ರೈತರನ್ನು ಇಂದು ಕೇಳುವವರೇ ಇಲ್ಲವಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಗಾಯಕ ಬಿ. ವಿನಯ್‌ಕುಮಾರ್ ರೈತ ಗೀತೆಗಳನ್ನು ಹಾಡಿದರು. ಕೆಎಂಎಫ್ ನಿರ್ದೇಶಕ ಪಿ. ನಾಗರಾಜ್, ಬಮುಲ್ ನಿರ್ದೇಶಕರಾದ ನರಸಿಂಹಮೂರ್ತಿ, ಲಿಂಗೇಶ್‌ಕುಮಾರ್, ಪ್ರಗತಿಪರ ಚಿಂತಕ ಕುಮಾರಸ್ವಾಮಿ, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್. ಲಕ್ಷ್ಮಣಸ್ವಾಮಿ, ಕಾರ್ಯಾಧ್ಯಕ್ಷ ಸಂಪತ್‌ಕುಮಾರ್, ಉಪಾಧ್ಯಕ್ಷ ಹೊಂಬಾಳೇಗೌಡ, ಪ್ರಧಾನ ಕಾರ್ಯದರ್ಶಿ ಎ.ಎಲ್.ಬೈರೇಗೌಡ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸುಶೀಲಮ್ಮ, ತಾಲ್ಲೂಕು ಘಟಕದ ಅಧ್ಯಕ್ಷ ಎಂ. ಪುಟ್ಟಸ್ವಾಮಿ, ಸಂಚಾಲಕರಾದ ಸೀಬೆಕಟ್ಟೆಕೃಷ್ಣಪ್ಪ, ನಂಜಪ್ಪ, ಸುಂದರೇಶ್, ಕರ್ನಾಟಕ ಸಮತಾ ಸೈನಿಕ ದಳದ ಜಿಲ್ಲಾ ಘಟಕದ ಅಧ್ಯಕ್ಷ ಚಕ್ಕಲೂರು ಚೌಡಯ್ಯ ಇತರರುಇತರರು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.