ಭಾನುವಾರ, ಮಾರ್ಚ್ 7, 2021
32 °C
ಕತೆ

ಅಮೀನಾ ಅಬ್ದುಲ್ಲ

ಡಾ. ಮಿರ್ಜಾ ಬಷೀರ್ Updated:

ಅಕ್ಷರ ಗಾತ್ರ : | |

ಅಮೀನಾ ಅಬ್ದುಲ್ಲ

ಪಿಂಜಾರರ ಬುಡ್ಡಮ್ಮ ಸ್ನೇಹಮಯಿ ಹೆಣ್ಣುಮಗಳಾಗಿದ್ದಳು. ಸಂಪರ್ಕಕ್ಕೆ ಬಂದವರೆಲ್ಲರೂ ಅವಳ ಸ್ನೇಹಿತರಾಗಿ ಬಿಡುತ್ತಿದ್ದರು. ಊರಿನ ಬಹಳಷ್ಟು ಜನ ಅವಳನ್ನು ಬಲ್ಲವರೇ ಆಗಿದ್ದರು. ಅವಳ ಹುಟ್ಟು ಹೆಸರು ಅಖ್ತರ್‌ಬಿ. ಆದರೆ ಪುಟ್ಟದೇಹದ ಆಕೆಗೆ ಅವರಪ್ಪ ಪ್ರೀತಿಯಿಂದ ಕರೆಯುತ್ತಿದ್ದ ಬುಡ್ಡಮ್ಮ ಎಂಬ ಹೆಸರೇ ಶಾಶ್ವತವಾಗಿ ಅಂಟಿಕೊಂಡು ನಿಜನಾಮಧೇಯ ಎಲ್ಲರ ಮನಸ್ಸು ಮತ್ತು ನೆನಪಿನಿಂದ ಅಳಿಸಿ ಹೋಗಿತ್ತು.ಅವಳ ಗಂಡ ಸಣ್ಣಹುಸೇನಪ್ಪ ಸರ್ಕಾರಿ ಹೈಸ್ಕೂಲ್‌ನಲ್ಲಿ ಉಪಾಧ್ಯಾಯರಾಗಿದ್ದರು. ಅವರು ಗಂಭೀರ ಪ್ರವೃತ್ತಿಯವರಾಗಿದ್ದರು. ಸ್ಟ್ರಿಕ್ಟ್ ಮೇಷ್ಟ್ರಾಗಿದ್ದು ದಡ್ಡ ವಿದ್ಯಾರ್ಥಿಗಳನ್ನು ಮುಲಾಜಿಲ್ಲದೆ ಫೇಲ್ ಮಾಡುತ್ತಿದ್ದುದರಿಂದ ಅವರನ್ನು ಕಂಡರೆ ಜನರು ಹೆದರುತ್ತಿದ್ದರು.ಇದರ ಮೇಲೆ ಅವರು ದಿನವೂ ಐದು ಹೊತ್ತು ನಮಾಜು ಮಾಡಲು ಮಸೀದಿಗೆ ಹೋಗಿ ಬಂದು ಮಾಡುತ್ತ ಯಾರ ಉಸಾಬರಿಗೂ ಹೋಗುತ್ತಿರಲಿಲ್ಲ. ಆದ್ದರಿಂದ ಜನರು ಅವರಲ್ಲಿ ಬಹಳಷ್ಟು ಗೌರವ ಇಟ್ಟುಕೊಂಡಿದ್ದರಷ್ಟೇ ಅಲ್ಲ ಎಷ್ಟು ಬೇಕೋ ಅಷ್ಟು ಮಾತನಾಡುತ್ತಿದ್ದರು.ಸಾಮಾನ್ಯವಾಗಿ ಮಸೀದಿಗೆ ಬರುವವರಲ್ಲಿ ಕನ್ನಡ ಮಾತನಾಡುವ ಪಿಂಜಾರರು ಕಡಿಮೆ ಇದ್ದು, ಉರ್ದು ಭಾಷಿಕ ಸಾಹೇಬರೇ ಜಾಸ್ತಿ ಇರುತ್ತಿದ್ದರು. ರೋಜಾ ನಮಾಜನ್ನು ಅಷ್ಟಾಗಿ ಅರಿಯದ ಪಿಂಜಾರರು, ಸಾಹೇಬರನ್ನು ಮೀರಿಸುವಂತೆ ರೋಜಾ ನಮಾಜನ್ನು ಕಲಿತಿದ್ದ ಮೇಷ್ಟ್ರ ಬಗ್ಗೆ ಪೂಜ್ಯತಾ ಭಾವವನ್ನೇ ಹೊಂದಿದ್ದರು. ಈ ಯಾವುದರ ಗೊಡವೆಗೂ ಹೋಗದ ಮೇಷ್ಟ್ರು ತಾವಾಯಿತು, ತಮ್ಮ ಶಾಲೆ ಮನೆ ಮಸೀದಿಯಾಯಿತು ಎಂಬಂತೆ ತಮ್ಮ ಪಾಡಿಗೆ ತಾವು ಇದ್ದುಬಿಟ್ಟಿದ್ದರು. ಇತ್ತ ಸ್ನೇಹಮಯಿ ಬುಡ್ಡಮ್ಮ ತನ್ನ ವಿಶಾಲ ಹೃದಯದಿಂದ ಜಾತಿ ಮತ ಭಾಷೆಗಳೆಲ್ಲವನ್ನು ಮೀರಿ ಜನಾನುರಾಗಿಯಾಗಿದ್ದಳು. ಮತ್ತೊಂದು ವಿಶೇಷವೆಂದರೆ ಆಕೆಯ ಕರುಣೆಯ ಮೇಲೆ ಭರವಸೆ ಇಟ್ಟು ಊರಿನ ಸುಮಾರು ಜನ ಭಿಕ್ಷುಕರು ಜೀವನ ಸಾಗಿಸುತ್ತಿದ್ದರು.ಹಸಿವು ಎಂದವರಿಗೆ ಬುಡ್ಡಮ್ಮ ಕೈಗೆ ಸಿಕ್ಕಿದ್ದನ್ನು ಕೊಟ್ಟು ಕಳುಹಿಸುತ್ತಿದ್ದಳು. ತನ್ನ ಊಟವನ್ನೂ ಸಹ ಹಸಿದವರಿಗೆ ಹಿಂದೆ ಮುಂದೆ ನೋಡದೆ ದಾನ ಮಾಡಿದ ಉದಾಹರಣೆ ಗಳು ಸಹ ಸಾಕಷ್ಟಿದ್ದವು. ಸಣ್ಣಹುಸೇನಪ್ಪ ಅಂತಹ ಸ್ಥಿತಿವಂತರಲ್ಲದಿದ್ದರೂ ವಿದ್ಯಾವಂತರೂ, ತಿಳುವಳಿಕಸ್ಥರೂ ಆಗಿದ್ದರು. ಈ ಕಾರಣಕ್ಕೇ ಬುಡ್ಡಮ್ಮನ ತಂದೆ ಒಪ್ಪಿ ಮದುವೆ ಮಾಡಿದ್ದು. ಇದೆಲ್ಲಾ ಈಗ ಹಳೆಯ ಸುದ್ದಿ ಬಿಡಿ.ಸಣ್ಣಹುಸೇನಪ್ಪನವರು ತಾವು ಮದುವೆಯಾದ ಕಾಲಕ್ಕೆ ಯಾವ ವರದಕ್ಷಿಣೆಯನ್ನೂ ಪಡೆದವರಲ್ಲ. ಅನೇಕ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದ ಅವರನ್ನು ಯಾರ ಕೈಲೂ ಸಡಿಲಿಸಲಾಗಿರಲಿಲ್ಲ. ಶ್ರೀಮಂತರಾಗಿದ್ದ ಬುಡ್ಡಮ್ಮನ ತವರಿನವರು ‘ಮನೆ ಮಗಳಿಗೆ ಕೊಡ್ತೀವಿ ಬಿಡಿ ಮೇಷ್ಟ್ರೇ’ ಎಂದು ಸ್ವಂತವಾಗಿ ಬೆಳೆಯುತ್ತಿದ್ದ ರಾಗಿ, ಭತ್ತ, ಕಾಳು, ತೆಂಗಿನಕಾಯಿ, ತರಕಾರಿಗಳನ್ನು ತಂದು ಹಾಕುತ್ತಿದ್ದರು.ಹುಟ್ಟಾ ಶ್ರೀಮಂತಳಾಗಿದ್ದ ಬುಡ್ಡಮ್ಮ ಎಂದೂ ತವರಿನ ಶ್ರೀಮಂತಿಕೆಯನ್ನಾಗಲೀ ಗಂಡನ ಮನೆಯ ಸಾಧಾರಣ ಸ್ಥಿತಿಯನ್ನಾಗಲೀ ಆಡಿಕೊಂಡವಳಲ್ಲ. ತವರಿನ ಪಕ್ಷ ವಹಿಸಿ ಮಾತಾಡಿದವಳಲ್ಲ. ಶ್ರೀಮಂತಿಕೆಯ ಹಿರಿಮೆಯನ್ನಾಗಲೀ ಬಡತನದ ಕೀಳರಿಮೆಯನ್ನಾಗಲೀ ಉಳ್ಳವಳಾಗಿರಲಿಲ್ಲ. ಯಾವುದೇ ಸ್ಥಿತಿಯನ್ನು ಸಹಜವಾಗಿ ಸ್ವೀಕರಿಸಿ ಸುಲಲಿತವಾಗಿ ಹರಿವ ನೀರಿನಂತೆ ಇದ್ದುಬಿಟ್ಟಿದ್ದಳು.ಹೀಗಿರುವಾಗ ಬುಡ್ಡಮ್ಮನಿದ್ದ ಊರಿಗೆ ಚಂದವ್ವಳ ಆಗಮನವಾಯಿತು. ಚಾಂದ್‌ಬಿ ಎಂಬ ಹೆಸರಿನ ಆಕೆ ಬುಡ್ಡಮ್ಮಳಂತೆ ಪಿಂಜಾರರವಳೇ ಆಗಿದ್ದು ಸಂದಿಮೂಲೆಯಲ್ಲಿ ನೋಡಿದರೆ ಕಳ್ಳುಬಳ್ಳಿಯೇ ಆಗಿದ್ದಳು. ಚಂದವ್ವಳ ಗಂಡ ಅದೇ ಊರಿನಲ್ಲಿ ಅಂಚೆ ಪೇದೆಯಾಗಿದ್ದನು. ಅವರಿಗೆ ಮನೆ ತುಂಬ ಮಕ್ಕಳಿದ್ದವು. ಗಂಡನ ಸಂಬಳದ ವಿನಃ ಬೇರೆ ಆದಾಯವಿಲ್ಲದ ಆ ಮನೆಯ ಆರ್ಥಿಕ ಸ್ಥಿತಿಯು ಉತ್ತಮವೇನಾಗಿರಲಿಲ್ಲ. ಚಂದವ್ವನಿಗೆ ಮದುವೆಗೆ ಬಂದಿದ್ದ ಒಬ್ಬ ಮಗಳಿದ್ದು ಆಕೆಯ ಹಿಂದೆ ಆರು ಜನ ಗಂಡು ಮಕ್ಕಳಿದ್ದರು.ಮಗಳ ಮದುವೆ ಎಂಬ ವಿಚಾರವು ಚಂದವ್ವ ಮತ್ತು ಅವಳ ಗಂಡ ಟೀಪಣ್ಣನ ಮನಸ್ಸಿನಲ್ಲಿ ಹೊತ್ತಿ ಉರಿಯುತ್ತಿತ್ತು. ಎಲ್ಲರಂತೆ ವರದಕ್ಷಿಣೆಯ ಕಾಟ ಪಿಂಜಾರರಲ್ಲಿಯೂ ಇತ್ತು. ಟೀಪಣ್ಣ ದುಡಿದದ್ದು ಹೊಟ್ಟೆಗೆ ಬಟ್ಟೆಗೆ ಸಹಿತ ನ್ಯಾರ ಆಗುತ್ತಿರಲಿಲ್ಲ. ‘ಹೆಂಗಪ್ಪ ಮಾಡಾದು, ಅಲ್ಲಾ ಸ್ವಾಮಿ’ ಎಂದು ಗಂಡ ಹೆಂಡತಿ ಇಬ್ರೂ ಕುಂತ್ರೂ ನಿಂತ್ರೂ ಯೋಚನೆ ಮಾಡುತ್ತಿದ್ದರು. ಅವರ ಮಗಳಾದ ಅಮೀನ ಕೈತೊಳೆದು ಮುಟ್ಟುವಂತೆ ಅತಿ ಸುಂದರವಾಗಿದ್ದಳು. ಇಂಥಾ ಸುಂದರಿಯನ್ನು ಯಾರಾದ್ರೂ ಬಂದು ಮದುವೆ ಮಾಡಿಕೊಂಡು ಹೋಗುತ್ತಾರೆ ಎಂದು ಅವರು ಮುಗ್ಧವಾಗಿ ನಂಬಿದ್ದರು. ಆದರೆ ದಿನಕಳೆದಂತೆ ತಾವಾಗಿಯೇ ಯಾರೂ ಮುಂದೆ ಬಂದು ಮದುವೆ ಪ್ರಸ್ತಾಪ ಮಾಡದೇ ಹೋದದ್ದು ಅವರ ನಿದ್ದೆ ಕೆಡಿಸಿತ್ತು.ಚಂದವ್ವನ ತವರಿನವರೂ ಹೇಳಿಕೊಳ್ಳುವಂತ ಸ್ಥಿತಿಯಲ್ಲಿರಲಿಲ್ಲ ಮತ್ತು ಅಲ್ಲಿ ಮದುವೆಗೆ ಬಂದ ಗಂಡುಮಕ್ಕಳು ಸೈತ ಇರಲಿಲ್ಲ. ಇಂಥ ಮನಸ್ಥಿತಿಯಲ್ಲಿ ಹೊಸ ಊರಿಗೆ ಆಗಮಿಸಿದ್ದ ಚಂದವ್ವ, ಬುಡ್ಡಮ್ಮನ ಬೆಸ್ಟ್ ಫ್ರೆಂಡ್ ಆಗಿ ತನ್ನ ಮಾತುಕತೆಯಲ್ಲೆಲ್ಲ ಅಮೀನಾಳ ಮದುವೆಯನ್ನು ಪ್ರಸ್ತಾಪಿಸಿ ನಿಟ್ಟುಸಿರು ಬಿಡುತ್ತಿದ್ದಳು.ಚಂದವ್ವ: ಏನು ಮಾಡಾದೋ ಏನೋ ಕಣಕ್ಕ, ಮಗಳು ದೊಡ್ಡೋಳಾಗಿ ನಾಲ್ಕು ವರ್ಷಾತು. ನಮ್ಮವ್ರು ಇಡೀ ಪಿಂಜಾರ ಪ್ರಪಂಚಾನೇ ಜಾಲಾಡಿಸಿ ಪತ್ರ ಬರೀತಾರೆ. ಒಬ್ನೇ ಒಬ್ಬ ಲಗತ್ತಾದವನು ಇಲ್ವಲ್ಲಕ್ಕ. ಪಿಂಜಾರ್ರಾಗೆ ವರಗಳಿಗೆ ಬರಬಾರದ ಬರ ಬಂದೈತೆ ನೋಡಕ್ಕ!ಬುಡ್ಡಮ್ಮ: ಅಲ್ಲಾ ಸ್ವಾಮಿ ಒಂದು ಹೆಣ್ಣಿಗೆ ಒಂದು ಗಂಡು ಸೃಷ್ಟಿಸಿರ್ತಾನೆ ಕಣವ್ವ. ತಾಳ್ಮೆ ಕಳ್ಕಬ್ಯಾಡ ತಡ್ಕ.ಚಂದವ್ವ: ಕೈಯಲ್ಲಿ ಚಿಕ್ಕಾಸು ಇಲ್ಲ ಕಣಕ್ಕ. ಆದ್ರೂ ಎಲ್ಲಾದ್ರೂ ಸಾಲ ಸೋಲ ಮಾಡಿ ಅಷ್ಟೋ ಇಷ್ಟೋ ಕೊಟ್ಟು ಮದುವೆ ಮಾಡ್ತೀವಿ. ಗಂಡು ಸಿಗ್ಬೇಕಷ್ಟೆ ಎಂದು ಹನಿಗಣ್ಣಾಗುವಳು.ವಾರಕ್ಕೆ ನಾಲ್ಕು ಸಲವಾದರೂ ಬುಡ್ಡಮ್ಮನ ಮನೆಗೆ ಬಂದು ಚಂದವ್ವ ಇವೇ ಮಾತುಗಳನ್ನು ಉರುಳಿಸುತ್ತಿದ್ದಳು. ಬುಡ್ಡಮ್ಮ ತನ್ನ ಪರಿಚಯದ ನೆಂಟರಿಷ್ಟರ ದೊಡ್ಡ ಬಳಗದ ಜಾಲವನ್ನು ಚಂದವ್ವನೆದುರು ಹರಡಿ ಒಂದೊಂದೇ ಗಂಡಿನ ಇತ್ಯೋಪರಿಗಳನ್ನು ವಿವರಿಸುತ್ತಿದ್ದಳು.ಚಂದವ್ವಳ ಗಂಡ ಟೀಪಣ್ಣನ ಪೂರ್ತಿ ಹೆಸರು ಟೀಪು ಸುಲ್ತಾನ್. ಆತನೊಬ್ಬ ಸರಳ ಸಜ್ಜನನಾದರೂ ಬೋಳೆ ಸ್ವಭಾವದವನಾಗಿದ್ದ. ಯಾರು ಏನು ಹೇಳಿದರೂ ಪೂರ್ತಿಯಾಗಿ ನಂಬಿಬಿಡುತ್ತಿದ್ದ ಹುಂಬ. ದೇವರು ಮನುಷ್ಯನನ್ನು ಹುಟ್ಟಿಸಿದ ಮೇಲೆ ಹುಲ್ಲು ತಿನ್ನಿಸಲ್ಲ. ಎಷ್ಟು ಮಕ್ಕಳಾದ್ರೆ ಏನೀಗ, ದೇವರಿದ್ದಾನೆ! ಎಂದು ಯಾರೋ ಹೇಳಿದ ಮಾತನ್ನು ನಂಬಿ ಮನೆ ತುಂಬ ಮಕ್ಕಳನ್ನು ಮಾಡಿಕೊಂಡಿದ್ದ. ನೀವು ಸಾಬ್ರು ಆಪರೇಶನ್ ಮಾಡಿಸ್ಕಳಲ್ಲ. ಸಂಖ್ಯೆಯಲ್ಲಿ ಜಾಸ್ತಿ ಆಗಕ್ಕೆ ಪ್ರಯತ್ನಪಡ್ತೀರಿ ಎಂದು ಯಾರಾದ್ರೂ ಕಿಚಾಯಿಸಿದ್ರೆ ಅವನಿಗೆ ಕಕ್ಕಾಬಿಕ್ಕಿ ಆಗ್ತಿತ್ತು. ಯಾಕೆಂದರೆ ಅವನು ಆ ದಿಕ್ಕಿನಲ್ಲಿ ಯೋಚನೆಯನ್ನೇ ಮಾಡಿರಲಿಲ್ಲ. ಅವನ ಆತ್ಮದಲ್ಲಿ ನರಮನುಷ್ಯರೆಲ್ಲ ಒಂದೇ ಕುಲದವರಂತಿದ್ದು ಹಿಂದೂ ಮುಸ್ಲಿಂ ಎಂಬ ವಿಂಗಡಣೆಗಳೇ ದಾಖಲಾಗಿರಲಿಲ್ಲ.ಹಿಂದೂಗಳಿಗೆ ತಿಪ್ಪೇಸ್ವಾಮಿ ದೇವರಿದ್ದಂಗೆ ತನಗೆ ಅಲ್ಲಾಸ್ವಾಮಿ. ಇಷ್ಟೇ ಅವನ ತಿಳಿವಳಿಕೆ. ಎಂದೂ ಮಸೀದಿಗೆ ಹೋಗದಿದ್ದರೂ ಅಲ್ಲಾಸ್ವಾಮಿಯನ್ನು ತನ್ನ ಮನದಲ್ಲಿ ತುಂಬಿಕೊಂಡಿರುತ್ತಿದ್ದ. ಯಾವ ಕೆಟ್ಟ ಕೆಲಸ ಮಾಡಲೂ ಆ ಅಲ್ಲಾಸ್ವಾಮಿ ಟೀಪಣ್ಣನಿಗೆ ಆಸ್ಪದ ಕೊಡುತ್ತಿರಲಿಲ್ಲ.ಇಂಥ ಟೀಪಣ್ಣ ಬೆಳಿಗ್ಗೆ ಏಳು ಗಂಟೆಗೇ ಮೂರ್ನಾಲ್ಕು ರಾಗಿ ಮುದ್ದೆಗಳ ತಿಂದು ಸಮವಸ್ತ್ರ ಧರಿಸಿಕೊಂಡು ತಲೆಗೆ ಟೋಪಿ ಹಾಕಿಕೊಂಡು ಮಳೆ, ಚಳಿ, ಬಿಸಿಲೆನ್ನದೆ ಇಡೀ ಊರನ್ನು ಅಲೆದು ಟಪಾಲು ಹಂಚುತ್ತಿದ್ದ. ಕೆಲವೊಮ್ಮೆ ಅಕ್ಕಪಕ್ಕದ ಹಳ್ಳಿಗಳಿಗೂ ಹೋಗಬೇಕಾಗುತ್ತಿತ್ತು.ವಾಪಸ್ಸಾಗುವಷ್ಟರಲ್ಲಿ ಹಣ್ಣು ಹಣ್ಣಾಗುತ್ತಿದ್ದ. ಅಂದಿನ ಕೆಲಸವನ್ನು ಅಂದೇ ಮಾಡಿ ಮುಗಿಸಿ ಮನೆ ಸೇರುತ್ತಿದ್ದ. ಎಂದೂ ತನ್ನ ಮೇಲಧಿಕಾರಿಗಳ ಎದುರು ನಿಂತು ಮಾತಾಡಿದವನಲ್ಲ. ಅವರ ಆದೇಶಗಳನ್ನು ಅಸಡ್ಡೆಯಿಂದ ಕಂಡವನಲ್ಲ. ಅಧಿಕಾರಿಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಸಹ ನೋಡಿದವನಲ್ಲ. ಅಧಿಕಾರಿಗಳೇನಾದರೂ ಭೇಷ್ ಕಣಯ್ಯ ಎಂದರೆ ಅವನನ್ನು ಹಿಡಿಯುವವರೇ ಇರುತ್ತಿರಲಿಲ್ಲ. ಒಂದು ವಾರ ಎದುರು ಸಿಕ್ಕವರಿಗೆಲ್ಲಾ ಹೇಳಿಕೊಂಡು ಅಡ್ಡಾಡುತ್ತಿದ್ದ. ಅಕಸ್ಮಾತ್ ಬೈದರೆ, ಮುಖ ಇಳಿಬಿಟ್ಟು ವಾರಗಟ್ಟಲೆ ಯಾರೊಂದಿಗೂ ಮಾತಾಡದೆ ಮೂಕನಾಗಿ ಇದ್ದುಬಿಡುತ್ತಿದ್ದ.ಟೀಪು, ಮಗಳ ಮದುವೆ ಬಗ್ಗೆ– ‘ಮಗಳು ಉತ್ತಮಸ್ತರ ಮನೆ ಸೇರಿಬಿಟ್ರೆ ಸಾಕು ಮಾರಾಯ. ದೌಳರು ಸಿಗ್ದಿದ್ರೆ ಬ್ಯಾಡ’ ಎಂದು ಹಗುರಾಗಿ ಮಾತಾಡ್ತ ಅಡ್ಡಾಡುತ್ತಿದ್ದರೂ ಅವನ ಮನಸ್ಸಿನ ಮೇಲೆ ಮದುವೆ ವಿಚಾರ ಬಂಡೆಯಂತೆ ಅಪ್ಪಳಿಸಿಕೊಂಡು ಬಿದ್ದಿತ್ತು. ಈ ವಿಚಾರದಲ್ಲಿ ಟೀಪಣ್ಣ ಅಸಹಾಯಕನಾಗಿದ್ದ. ದಿನಕಳೆದಂತೆ ಅವನ ಅಸಹಾಯಕತೆ ಹೆಚ್ಚುತ್ತಲೇ ಹೋಯಿತು. ತನ್ನ ಕಚೇರಿಯಿಂದಲೇ ರಾಜ್ಯದ ಮೂಲೆಮೂಲೆಗಳಿಗೆ ಎಲ್ಲೆಲ್ಲಿಂದಲೋ ಮದುವೆ ಗಂಡುಗಳ ವಿಳಾಸ ಪತ್ತೆ ಮಾಡಿ ಪತ್ರ ಬರೆದು ಹಾಕುತ್ತಿದ್ದ.ಪ್ರತಿ ಪತ್ರ ಬರೆಯುವಾಗಲೂ ಖುಷಿಯಿಂದ ಸಂಭ್ರಮಿಸುತ್ತಿದ್ದ. ಈ ಗಂಡು ಗ್ಯಾರಂಟಿ ಒಪ್ಕೊಳ್ತಾನೆ ಕಣ್ರಿ ಎಂದು ಮನೆಯಲ್ಲೆಲ್ಲ ಹುಯಿಲೆಬ್ಬಿಸುತ್ತಿದ್ದ. ಸಂತೋಷದಲ್ಲಿ ಕಣ್ಣು ತುಂಬಿಕೊಳ್ಳುತ್ತಿದ್ದವು. ಆದರೆ ಎಷ್ಟು ದಿನಗಳು ಕಳೆದರೂ ಅತ್ತ ಕಡೆಯಿಂದ ಉತ್ತರಗಳು ಬಾರದೆ, ಅವನು ಒಳಗೊಳಗೇ ಕುಸಿಯುತ್ತಿದ್ದ. ಅಕಸ್ಮಾತ್ ಕೆಲವರು ಮನೆಗೆ ಬಂದರೂ ಮನೆಯ ಬಡತನದ ದರ್ಶನವಾದ ಕೂಡಲೆ ಮತ್ತೆಂದೂ ಬರದಂತೆ ನಾಪತ್ತೆಯಾಗುತ್ತಿದ್ದರು. ಹೆಣ್ಣುಮಕ್ಕಳ ಮದುವೆಗಾಗಿ ಪರಿತಪಿಸುವ ತಂದೆ ತಾಯಿಗಳ ಪಡಿಪಾಟಲು ಸಂಕಟಗಳು ಚಂದವ್ವ – ಟೀಪಣ್ಣನನ್ನು ನೋಡಿದರೆ ಸ್ಪಷ್ಟವಾಗುತ್ತಿದ್ದವು.ಚಂದವ್ವ ಮತ್ತು ಬುಡ್ಡಮ್ಮನ ಬಾಂಧವ್ಯ ಹೆಚ್ಚುತ್ತಾ ಹೋಯಿತು. ಅಮೀನಾ ಬುಡ್ಡಮ್ಮನ ಮನೆಯಲ್ಲಿ ಸ್ವಂತ ಮಗಳಂತೆ ಇರುತ್ತಿದ್ದಳು. ಬುಡ್ಡಮ್ಮನ ಮಕ್ಕಳಾದ ದಾದಾಪೀರ್ ಮತ್ತು ದೂದ್‌ಪೀರ್ ಇವರ ಜೊತೆ ಅಕ್ಕನಂತೆ ಇರತೊಡಗಿದ್ದು ಸ್ನೇಹಪ್ರಿಯೆ ಬುಡ್ಡಮ್ಮನಿಗೆ ಹಿತಕರವೇ ಆಗಿತ್ತು.ಬುಡ್ಡಮ್ಮನಿಗೆ ತನ್ನಣ್ಣ ಸಾಹುಕಾರ್ ಗೂಡುಸಾಹೇಬನು ತನ್ನ ಮಗ ಅಬ್ದುಲ್ಲನಿಗೆ ಹೆಣ್ಣು ಹುಡುಕುತ್ತಿದ್ದುದು ಗೊತ್ತಿತ್ತು. ಆದರೆ ಶ್ರೀಮಂತನಾದ ಅವನು ಬಡವರ ಮನೆಯ ಹೆಣ್ಣಾದ ಅಮೀನಾಳನ್ನು ಒಪ್ಪುತ್ತಾನೆಯೇ ಎಂಬ ಗೊಂದಲಕ್ಕೆ ಬಿದ್ದಿದ್ದಳು. ಆದರೂ ಸಮಯ ಬಂದಾಗ ತಿಳಿಸಿದರಾಯಿತೆಂದು ಸುಮ್ಮನಿದ್ದಳು. ಆದರೆ ಈ ವಿಷಯವನ್ನು ಚಂದವ್ವನ ಗಮನಕ್ಕೆ ತಂದಿರಲಿಲ್ಲ.ಅದೇ ದಿನಗಳಲ್ಲಿ ಗೂಡುಸಾಹೇಬನು ಬಿಡುವು ಮಾಡಿಕೊಂಡು ತಂಗಿಯ ಮನೆಗೆ ಕುಟುಂಬಸಮೇತ ಬಂದಿಳಿದನು. ಬುಡ್ಡಮ್ಮ ಮನೆಗೆ ಬಂದ ತನ್ನಣ್ಣ ಮತ್ತು ಕುಟುಂಬದವರ ಊಟೋಪಚಾರಗಳಲ್ಲಿ ಮುಳುಗಿದಳು. ಅಮೀನಾ ತನ್ನ ಮನೆಗೇ ಬಂದಿರುವ ನೆಂಟರ ರೀತಿ ಸಂಭ್ರಮದಿಂದ ದಾದಾಪೀರ್ ಮತ್ತು ದೂದ್‌ಪೀರ್‌ರ ಜೊತೆ ಮನೆತುಂಬ ಅಡ್ಡಾಡಿಕೊಂಡಿದ್ದಳು. ಬುಡ್ಡಮ್ಮ ಹೇಳಿದ, ಹೇಳದ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುತ್ತ ಮನೆಗೆ ಬಂದವರು ಮೆಚ್ಚುವಂತೆ ಆದರಾತಿಥ್ಯ ಮಾಡಿದಳು.ಅಮೀನಾಳ ನಡೆನುಡಿ ಅಂದಚೆಂದದಿಂದ ಗೂಡುಸಾಹೇಬ ಮತ್ತು ಅವನ ಹೆಂಡತಿ ಖತೀಜಮ್ಮ ಮಾರು ಹೋದರು. ತನ್ನ ಏಕೈಕ ಮಗ ಅಬ್ದುಲ್ಲನಿಗೆ ಇಂತಹ ಹೆಂಡತಿ ಸಿಕ್ಕರೆ ಸಾಕೆಂದು ಖತೀಜಮ್ಮ ಯೋಚಿಸುತ್ತಿದ್ದಳು. ಆದರೇನು ಮಾಡುವುದು– ಮನೆಯ ಹೆಂಗಸರು ತಮ್ಮ ಅಭಿಪ್ರಾಯಗಳನ್ನು ಕೆಳದನಿಯಲ್ಲಿ ಗೊಣಗಬಹುದಿತ್ತೇ ವಿನಃ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವಾಗಲೀ, ಸ್ವಾತಂತ್ರ್ಯವಾಗಲೀ ಇರಲಿಲ್ಲ. ಅದು ಶ್ರೀಮಂತರ ಮನೆತನವಾದರೂ ಶ್ರೀಮತಿಯವರ ಕೈಯಲ್ಲಿ ಕಿಲುಬು ಕಾಸಿರಲಿಲ್ಲ. ಅವರ ವ್ಯಕ್ತಿತ್ವವೇ ಮನೆಯ ನಾಲ್ಕು ಗೋಡೆಯ ನಡುವೆ ಗಂಡಸರ ದಬ್ಬಾಳಿಕೆಯಡಿ ಅಪ್ಪಚ್ಚಿಯಾಗಿ ಹೋಗಿತ್ತು.ಈಗೊಂದೆರಡು ವರ್ಷಗಳಿಂದ ಸರ್ಕಾರಿ ಕೆಲಸ ಸಿಕ್ಕು ತಹಸೀಲ್ದಾರ್ ಕಚೆೇರಿಯಲ್ಲಿ ಸೇವೆ ಸಲ್ಲಿಸುತ್ತಿರುವ ಅಬ್ದುಲ್ಲನಂತೂ ಅಮೀನಾ ಕಣ್ಣಿಗೆ ಬಿದ್ದಾಗಿನಿಂದ ಮಾತು ಕಳೆದುಕೊಂಡವನಂತಿದ್ದ. ಸುಂದರಿ ಅಮೀನಾಳ ಮತ್ತೂ ಸುಂದರವಾದ ನಗು ಮತ್ತು ಕೆನ್ನೆ ಮೇಲಿನ ಗುಳಿ ಅವನನ್ನು ರೋಮಾಂಚನಗೊಳಿಸಿತ್ತು.ಗೂಡುಸಾಹೇಬ: ಬುಡ್ಡಮ್ಮ, ಯಾರವ್ವ ಈ ಹುಡ್ಗಿ? ಎಂಥ ಚಂದದಳೆ!

ಬುಡ್ಡಮ್ಮ: (ಉತ್ತರಿಸಲು ಎಷ್ಟೋ ದಿನದಿಂದ ಕಾದಿದ್ದಳೆಂಬಂತೆ) ಅಮೀನಾ ಅಂತ. ಪೋಸ್ಟ್‌ಮ್ಯಾನ್ ಟೀಪಣ್ಣನ ಮಗಳು. ಇಲ್ಲೇ ಐತೆ ಇವರ್‌ ಮನೆ. ಬೋಲೊಳ್ಳೆ ಹುಡ್ಗಿ.ಗೂಡುಸಾಹೇಬ: ಮದ್ವೆ-ಗಿದ್ವೆ?

ಬುಡ್ಡಮ್ಮ: ಉಹೂಂ. ಇನ್ನೂ ಇಲ್ಲ.ಗೂಡುಸಾಹೇಬ: ಎಲ್ಲಾದ್ರೂ ನೋಡಿದರಾ?

ಬುಡ್ಡಮ್ಮ: ಉಹೂಂ.ಅಮೀನಾಳ ನಡೆನುಡಿ, ಅಚ್ಚುಕಟ್ಟು, ಚಂದವ್ವ ಟೀಪಣ್ಣರ ಒಳ್ಳೆತನದ ಬಗ್ಗೆ ಬುಡ್ಡಮ್ಮ ವಿವರವಾಗಿ ಹೇಳಿದಳು. ಯಾವತ್ತೂ ಹಣವಂತಿಕೆಯ ಬಗ್ಗೆ ತಲೆ ಕೆಡಿಸಿಕೊಳ್ಳದ ಬುಡ್ಡಮ್ಮ, ಚೆಂದವ್ವರ ಮನೆಯ ಗುಣವಂತಿಕೆಯ ಹಾಡಿ ಹೊಗಳಿದಳು. ತನ್ನ ಮಾತುಗಳು ತನ್ನಣ್ಣನ ಮೇಲೆ ಸರಿಯಾದ ಪರಿಣಾಮ ಬೀರುತ್ತಿವೆ ಎಂದು ಅವಳಿಗೆ ಖುಷಿಯಾಯಿತು.ದುಡ್ಡೇ ದೊಡ್ಡಪ್ಪ ಎಂದು ಭಾವಿಸಿದ್ದ ಗೂಡುಸಾಹೇಬ ಬಡತನದಲ್ಲೂ ಒಳ್ಳೆಯತನ ಇರಬಹುದೆ ಎಂದು ಸೋಜಿಗಪಟ್ಟನು. ಬದುಕನ್ನು ಈ ದಿಕ್ಕಿನಲ್ಲಿ ಎಂದೂ ನೋಡಿರದಿದ್ದ ಗೂಡುಸಾಹೇಬನು ತನ್ನ ತಂಗಿಯ ಮಾತುಗಳಿಗೆ ಮೆದುವಾಗತೊಡಗಿದನು.ಅಮೀನಾಳ ಸೌಂದರ್ಯದಿಂದ ರೋಮಾಂಚಿತನಾಗಿದ್ದ ಅಬ್ದುಲ್ಲ ಅವಳ ಗುಣಗಾನ ಕೇಳಿ ನಿಧಾನಕ್ಕೆ ಕರಗತೊಡಗಿದ. ದುಡ್ಡು ಮತ್ತು ದುಡ್ಡಿನಿಂದ ಸಮಾಜದಲ್ಲಿ ಬರಬಹುದಾದ ಸ್ಥಾನಮಾನಗಳು ಕ್ಷುಲ್ಲಕವೆನಿಸತೊಡಗಿದವು. ದುಡ್ಡಿನಿಂದ ಸಿಗುವ ಸುಖ ಅಮೀನಾಳ ಸೌಂದರ್ಯದೆದುರು ಸುಖವೇ ಅಲ್ಲವೆನಿಸಿತು. ಅವನು ಇದುವರೆಗೆ ಓದಿ ಮೆಚ್ಚಿದ್ದ ಅನೇಕ ವಿಚಾರಗಳು ಅವನೆದುರು ನಿಂತು ನಿರ್ದೇಶಿಸತೊಡಗಿದವು. ಇದ್ದಕ್ಕಿದ್ದಂತೆ ಅಬ್ದುಲ್ಲನಿಗೆ ಬದುಕಿನ ಹೊಸ ಹಾದಿ ಕಂಡಂತಾಯಿತು.ಅಮೀನಾಳು ಸೌಂದರ್ಯದ ಜೊತೆ ಸದ್ಗುಣಗಳು ಬೆರೆತ ನಾಯಕಿಯಂತೆಯೂ, ತನ್ನ ಕೈ ಹಿಡಿದು ಮೇಲೆತ್ತಲು ಅವತರಿಸಿರುವ ದೇವತೆಯಂತೆಯೂ ಕಾಣಿಸತೊಡಗಿದಳು. ತಾನೊಬ್ಬ ಭಾಗ್ಯಶಾಲಿ ಎನಿಸಿತು. ಎಲ್ಲ ಹಿಡಿತಗಳಿಂದ ಕಳಚಿಕೊಂಡು ಹಗುರವಾದಂತೆನಿಸಿತು. ಅಮೀನಾಳನ್ನು ಭುಜದ ಮೇಲೆ ಕೂರಿಸಿಕೊಂಡು ಹಾರಿ ಹೋಗುವ ಕನಸು ಕಾಣತೊಡಗಿದ.ಸ್ವಭಾವತಃ ಸರ್ವಾಧಿಕಾರಿಯೂ ಶ್ರೀಮಂತಿಕೆಯ ಆರಾಧಕನೂ ಆಗಿದ್ದ ಗೂಡುಸಾಹೇಬನು ಅಮೀನಾ ಎಂಬ ಯಃಕಶ್ಚಿತ್ ಬಡಹುಡುಗಿಯ ಬಗ್ಗೆ ಆಸಕ್ತಿ ತೋರಿ, ಅವಳ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಉಧ್ಯುಕ್ತನಾಗಿ ಜೀವನದಲ್ಲಿ ಮೊದಲ ಬಾರಿಗೆ ಅನಿರೀಕ್ಷಿತವಾಗಿ ಒಂದು ಒಳ್ಳೆಯ ಕೆಲಸವನ್ನು ಮಾಡುತ್ತಿರುವಂತೆ ಖತೀಜ ಮತ್ತು ಅಬ್ದುಲ್ಲರಿಗೆ ತೋರಿತು. ಇದೆಲ್ಲ ಬದಲಾವಣೆಗೆ ಕಾರಣ ಬುಡ್ಡಮ್ಮಳ ಅಂತಃಕರಣದಿಂದ ಕೂಡಿದ ಮಾತುಗಳಾಗಿದ್ದವು. ಬುಡ್ಡಮ್ಮ ಮೈದುಂಬಿದಂತೆ ಮಾತಾಡುತ್ತಲೇ ಹೋದಳು. ಗೂಡುಸಾಹೇಬನ ದೇಹದೊಳ ಹೊರಗೆ ಪ್ರೀತಿ, ಕರುಣೆ ತುಂಬಿದ ಗಾಳಿ ಆಡತೊಡಗಿತು.ಗೂಡುಸಾಹೇಬನು ಆ ಕ್ಷಣದ ಸಾಕ್ಷಾತ್ಕಾರಕ್ಕೆ ಪಕ್ಕಾದವನಂತೆ ‘ಟೀಪಣ್ಣನ ಮನೆಗೆ ಹೋಗಿ ಬರೋಣ. ನಾಳೆಯೇ ಹೋಗೋಣ. ಅಮೀನಾಳನ್ನು ಸೊಸೆಯಾಗಿ ಪಡೆಯುವ ಬಗ್ಗೆ ಮಾತಾಡಿಕೊಂಡು ಬರೋಣ’ ಎಂದನು.ಗೂಡುಸಾಹೇಬ ಕುಟುಂಬ ಸಮೇತ ಆಗಮಿಸಿದಾಗ ಟೀಪಣ್ಣನ ಮನೆಯವರೆಲ್ಲರ ಸಂಭ್ರಮಕ್ಕೆ ಕೊನೆಯಿರಲಿಲ್ಲ. ಕುಂತಲ್ಲಿ ಕೂರದೆ, ನಿಂತಲ್ಲಿ ನಿಲ್ಲದೆ ಟೀಪಣ್ಣ ಚಡಪಡಿಸುತ್ತಿದ್ದ. ಬಂದ ಬೀಗರು ಎಷ್ಟು ತಿಂದರೂ ಸಾಲದು, ಎಷ್ಟು ಉಂಡರೂ ಸಾಲದು ಎಂಬಂತೆ ಉಪಚರಿಸಿದ. ಚಪಾತಿ, ಕೋಳಿಸಾರು, ಅನ್ನ, ಶಾವಿಗೆ ಹುಗ್ಗಿ ಮಾಡಿ ಯಾವ ಹಬ್ಬದಲ್ಲಿಯೂ ವಹಿಸದ ಎಚ್ಚರ ವಹಿಸಿ ಮಾಡಿದ ಅಡುಗೆ ಅವರ ಜನುಮದ ಅಡುಗೆಯಾಗಿತ್ತು. ಚಂದವ್ವ ಉಬ್ಬಿಹೋಗಿದ್ದಳು. ಬುಡ್ಡಮ್ಮನನ್ನು ಅಂದು ತನ್ನ ಮನೆಯಲ್ಲಿಯೇ ಇರಿಸಿಕೊಂಡು ಅವಳ ಮಾರ್ಗದರ್ಶನದಲ್ಲಿ ಕೆಲಸ ನಿರ್ವಹಿಸಿದಳು. ಅವಳಿಗೆ ಒಂದು ಕಡೆ ಸಂತೋಷವಾದರೆ ಇನ್ನೊಂದು ಕಡೆ ಸಾಹುಕಾರರಾದ ನೆಂಟರಿಗೆ ಬಡವರ ಮನೆ ಊಟ ರುಚಿಸುತ್ತದೋ ಇಲ್ಲವೋ ಎಂಬ ಭಯ! ಗಳಿಗೆಗೊಮ್ಮೆ ಬುಡ್ಡಮ್ಮನ ಸಲಹೆ ಪಡೆದು ಮುಂದುವರೆಯುತ್ತಿದ್ದಳು.ಅಮೀನಾಳು ಪರಿಸ್ಥಿತಿಯ ಗಹನತೆ ಅರಿತು ಹೊರಹೊರಡದೆ ಅಡಿಗೆ ಮನೆಯ ಬಂಧಿಯಾಗಿಬಿಟ್ಟಿದ್ದಳು. ಗೂಡುಸಾಹೇಬ ಮತ್ತು ಖತೀಜಮ್ಮನಿಗೆ ಅಡುಗೆ ಹಿಡಿಸಿತು. ಟೀಪಣ್ಣನ ಒತ್ತಾಯಕ್ಕೆ ತುತ್ತಾಗಿ ಹೊಟ್ಟೆ ಬಿರಿಯುವಂತೆ ಉಂಡರು. ಆದರೆ ಅಮೀನಾಳ ಪ್ರತೀಕ್ಷೆಯಲ್ಲಿ ಅಬ್ದುಲ್ಲನಿಗೆ ಉಂಡದ್ದರ ಬಗ್ಗೆ ಹೆಚ್ಚಿನ ಗಮನ ಹೋಗಲಿಲ್ಲ. ಹೇಗಾದರೂ ಮಾಡಿ ಕದ್ದು ಅಮೀನಾಳ ಮುಖ ಕಾಣುವ ಅವನ ಎಲ್ಲ ಪ್ರಯತ್ನಗಳು ವಿಫಲವಾದವು. ಮರಳಿ ಯತ್ನವ ಮಾಡುತ್ತ ಇಡೀ ಲೋಕಕ್ಕೆ ಅವನು ಕಳೆದು ಹೋದಂತಾಗಿದ್ದ.ಚಂದವ್ವ ಟೀಪಣ್ಣರ ಮನೆಯ ಸರಳ ಶುದ್ಧ ವಾತಾವರಣಕ್ಕೆ ಮತ್ತು ಮನೆಯವರೆಲ್ಲರ ಆದರಾತಿಥ್ಯಕ್ಕೆ ಮಾರುಹೋದ ಗೂಡುಸಾಹೇಬನ ಮನೆಯವರೆಲ್ಲ ಸಂಪ್ರೀತರಾದರು. ಗೂಡುಸಾಹೇಬ ಅಮೀನಾಳನ್ನು ಸೊಸೆಯನ್ನಾಗಿಸಿಕೊಳ್ಳಲು ತಾನೇ ವಿಷಯವನ್ನೆತ್ತಿ ಅಲ್ಲಿಯೇ ಒಪ್ಪಿಗೆ ಸಹ ಕೊಟ್ಟುಬಿಟ್ಟನು. ಟೀಪಣ್ಣನ ಮನೆಯ ಪರಿಸರದಲ್ಲಿ ಬುಡ್ಡಮ್ಮನ ಮಾತುಗಳ ಪ್ರಭಾವಳಿಯಲ್ಲಿ ಗೂಡುಸಾಹೇಬನು ಎತ್ತರಕ್ಕೇರಿದ್ದನೆಂದು ಕಾಣುತ್ತದೆ.ಅದೇ ಪ್ರಥಮ ಬಾರಿಗೆ ಬಡತನ ಮತ್ತು ಒಳ್ಳೆಯತನವನ್ನು ಒಪ್ಪಿಕೊಂಡ ಗಂಡನಲ್ಲಿ ಆದ ಬದಲಾವಣೆ ಕಂಡು ಖತೀಜಮ್ಮ ಆಶ್ಚರ್ಯಚಕಿತಳಾದಳು. ತನ್ನ ತಂದೆಯ ಆಂತರ್ಯದ ಶ್ರೀಮಂತಿಕೆಯು ಇದ್ದಕ್ಕಿದ್ದಂತೆ ಜಗ್ಗನೆ ಹೊಳೆದದ್ದು ಅಬ್ದುಲ್ಲನು ತನ್ನ ತಂದೆಯ ಬಗ್ಗೆ ಹೆಮ್ಮೆಪಡುವಂತೆ ಮಾಡಿತು.ಅಮೀನಾಳ ಪುಟ್ಟ ಮತ್ತು ಸರಳ ಪ್ರಪಂಚದಲ್ಲಿ ಅಬ್ದುಲ್ಲನು ಈಗಾಗಲೇ ನಾಯಕನಾಗಿ ಮೆರೆಯತೊಡಗಿದ್ದ. ತನ್ನ ತಂದೆ ತಾಯಿಯರ ಮೇಲಿದ್ದ ಭಾರ ಇದ್ದಕ್ಕಿದ್ದಂತೆ ಸರಿದು ಹೋಗಿ, ಅಮೀನಾಳು ತನ್ನ ಉಸಿರುಗಟ್ಟಿಸುವ ಪ್ರಪಂಚದಿಂದ ಬಿಡುಗಡೆ ಹೊಂದಿದ್ದಳು. ಭಾರದಿಂದ ನಿಧಾನಕ್ಕೆ ಸರಿಯುತ್ತಿದ್ದ ಭೂಮಿ ಗಿರ್ರನೆ ತಿರುಗಿ ಅಬ್ದುಲ್ಲನೊಡನೆ ತನ್ನ ಮದುವೆಯ ದಿನ ಬೇಗ ಬೇಗ ಬರಬಾರದೆ ಎಂದು ಕಾತರಿಸತೊಡಗಿದಳು.ಬುಡ್ಡಮ್ಮನು ತನ್ನ ಮಕ್ಕಳಾದ ದಾದಾಪೀರ್ ಮತ್ತು ದೂದ್‌ಪೀರ್‌ರನ್ನು ಹತ್ತಿರವಿದ್ದ ಮಹಬೂಬ್ ಷಾವಲಿ ದರ್ಗಾಕ್ಕೆ ಓಡಿಸಿ ಸಕ್ಕರೆ ಓದಿಸಿ ಎಲ್ಲರಿಗೂ ಸಕ್ಕರೆ ಹಂಚಿದಳು. ಆ ವರ್ಷ ಹೊನ್ನೂರ್ ಉರುಸಿಗೆ ಹೋಗಿ ತನ್ನ ಹಿರಿ ಮಗ ದಾದಾಪೀರನ ತೂಕದಷ್ಟು ಬೋರಾ ಸಕ್ಕರೆಯನ್ನು ದರ್ಗಾಕ್ಕೆ ಕೊಡುವ ಹರಕೆ ಹೊತ್ತಳು. ವಿಜಯೀಭಾವ ಜೀವವನ್ನು ತುಂಬಿರಲು ಬುಡ್ಡಮ್ಮ ತನ್ನಣ್ಣನನ್ನು ಊರಿಗೆ ಹೋಗಲು ಮತ್ತೆರಡು ದಿನ ಬಿಡಲೇ ಇಲ್ಲ. ಗೂಡುಸಾಹೇಬನು ಸೈತ ಆನಂದದಿಂದ ತಂಗಿ ಮನೆಯಲ್ಲಿ ಎರಡು ದಿನ ಇದ್ದುಬಿಟ್ಟನು.ಕೊನೆಗೊಮ್ಮೆ ಗೂಡುಸಾಹೇಬ ಸಂಸಾರಸಮೇತ ಊರಿಗೆ ಹೊರಟನು. ಸಾಹುಕಾರ ಗೂಡುಸಾಹೇಬನು ತಂಗಿ ಇದ್ದ ಊರಿನ ಹತ್ತಾರು ಜನರಿಗೆ ಪರಿಚಿತನಿದ್ದನು. ಹಾಗಾಗಿ ರಸ್ತೆಯಲ್ಲಿ ಹಲವು ಜನ ಅವನಿಗೆ ನಮಸ್ಕಾರ, ಸಲಾಂ ಹೇಳುತ್ತಿದ್ದರು. ಗೂಡುಸಾಹೇಬನು ಹಾಕಿದ್ದ ರೇಶಿಮೆಯ ಜುಬ್ಬ, ಪೈಜಾಮ, ಕೋಟು, ಪಂಪ್ ಶೂಸು, ಫೆಜ್ ಟೋಪಿ ಮತ್ತು ಬೆಲೆ ಬಾಳುವ ಸೆಂಟ್ ಶ್ರೀಮಂತನೊಬ್ಬನ ಆಗಮನವನ್ನು ದೂರದಿಂದಲೇ ಸಾರಿ ಹೇಳುತ್ತಿದ್ದವು.ದಾರಿಯಲ್ಲಿ ಎದುರಾಗುವ ಯಾರಾದರೂ ಬಡಪಾಯಿ ಕೈಮುಗಿದರೆ ಕೂಡಲೇ ಅವನಿಗೆ ಎರಡರ ಅಥವಾ ಐದರ ನೋಟೊಂದನ್ನು ಎಸೆದು ಮುಂದುವರೆಯುತ್ತಿದ್ದನು. ಆಗ ಅಕಸ್ಮಾತ್ ಎಂಬಂತೆ ಅದೇ ದಾರಿಯಲ್ಲಿ ತನ್ನ ಹತ್ತಾರು ಜನ ಹಿಂಬಾಲಕರೊಂದಿಗೆ ಆ ಕ್ಷೇತ್ರದ ಶಾಸಕರೂ, ಸಚಿವರೂ ಆದ ಹಾಜಿ ಜನಾಬ್ ಇಮಾಮ್ ಸಾಹೇಬರು ಮಾತಾಡುತ್ತ ನಿಂತಿದ್ದರು. ನಾಲ್ಕಾರು ಕಾರು ಜೀಪುಗಳಿದ್ದವು. ಹಲವಾರು ಜನ ಅಧಿಕಾರಿಗಳು, ಪೊಲೀಸರು ಠಳಾಯಿಸುತ್ತಿದ್ದರು. ಗೂಡುಸಾಹೇಬನನ್ನು ಕಂಡ ಕೂಡಲೆ ‘ಸಲಾಂ ರೀ ಗೂಡುಸಾಹೇಬರೇ, ಏನಿಲ್ಲಿ?’ ಎನ್ನುತ್ತ ಸಚಿವರು ಕುಶಲ ವಿಚಾರಿಸತೊಡಗಿದರು.ಆಗ ಅದೆಲ್ಲಿದ್ದನೋ, ಅದೆಲ್ಲಿಂದ ಪ್ರತ್ಯಕ್ಷನಾದನೋ ಎಂಬಂತೆ ಟೀಪಣ್ಣ ಅಲ್ಲಿ ಪ್ರತ್ಯಕ್ಷನಾದನು. ಎಷ್ಟೋ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ತನ್ನ ಏಕೈಕ ಮಗಳಾದ ಚೆಲುವೆ ಅಮೀನಾಳ ಮದುವೆ ಎಲ್ಲರ ನಿರೀಕ್ಷೆಯನ್ನೂ ಮೀರಿ ದೊಡ್ಡ ಮನೆತನದ, ಸರ್ಕಾರಿ ನೌಕರಿಯಲ್ಲಿರುವ ಅಬ್ದುಲ್ಲನ ಜೊತೆ ಏರ್ಪಟ್ಟಿದ್ದ ಕಾರಣ ಅವನು ಭಾವಾವೇಶಕ್ಕೊಳಗಾಗಿದ್ದನು. ಕಣ್ಣಿಗೆ ಬಿದ್ದವರಿಗೆಲ್ಲ ತನ್ನ ಹೊಸ ನೆಂಟರ ಬಗ್ಗೆ, ಅವರ ಶ್ರೀಮಂತಿಕೆಯ ಬಗ್ಗೆ, ತನ್ನ ಮಗಳ ಅದೃಷ್ಟದ ಬಗ್ಗೆ ಜೋರು ದನಿಯಲ್ಲಿ ವರ್ಣಿಸಲು ತೊಡಗುತ್ತಿದ್ದನು.ಮಂತ್ರಿ ಮತ್ತು ಗೂಡುಸಾಹೇಬರ ಮಧ್ಯೆ ಟೀಪಣ್ಣ ಪ್ರತ್ಯಕ್ಷನಾದಾಗ ಮಧ್ಯಾಹ್ನದ ಬಿಸಿಲು ಹೊತ್ತಿಉರಿಯುತ್ತಿತ್ತು. ಬೆಳಿಗ್ಗೆಯಿಂದ ತನ್ನ ಕರ್ತವ್ಯಕ್ಕೆ ಹಾಜರಾಗಿದ್ದ ಟೀಪಣ್ಣನ ಬಟ್ಟೆ ಬರೆ ಮೆಟ್ಟುಗಳೆಲ್ಲ ದೂಳೆದ್ದು ಹೋಗಿದ್ದವು. ಅವನು ಧರಿಸಿದ್ದ ಟೋಪಿ ತಲೆಯ ಮೇಲೆ ನೇರ ಕೂರದೆ   ಅಡ್ಡಡ್ಡ ಕೂತಿತ್ತು. ಅದೂ ದೂಳು ಹಿಡಿದಿತ್ತು. ಅವನ ಕಣ್ಣುರೆಪ್ಪೆಗಳ ಮೇಲೆ ಸಹ ದೂಳು ಕೂತು ಕೆಂಪಗೆ ವಿಕಾರವಾಗಿ ಕಾಣುತ್ತಿದ್ದ. ಅವನು ತಳ್ಳಿಕೊಂಡು ಬರುತ್ತಿದ್ದ ಸೈಕಲ್ಲು ಲಡಾಸೆದ್ದು ಹೋಗಿತ್ತು. ಟಪಾಲನ್ನು ತುಂಬಿಕೊಂಡು ಭುಜದಿಂದ ನೇತಾಡುತ್ತಿದ್ದ ಚೀಲ ಜೂಲುಜೂಲಾಗಿತ್ತು. ಅವನು ಕೈಯ್ಯಲ್ಲಿ ಹಿಡಿದ ಪತ್ರಗಳು ಹುಚ್ಚನ ಕೈಯಲ್ಲಿನ ರದ್ದಿ ಹಾಳೆಗಳಂತೆ ಕಂಡವು.ಟೀಪಣ್ಣ ಸುಮ್ಮನೆ ಪಕ್ಕದಿಂದ ಸರಿದು ಹೋಗಿದ್ದರೆ ಯಾರೂ ಗಮನಿಸುತ್ತಿರಲಿಲ್ಲ. ಉನ್ಮತ್ತನಾಗಿದ್ದ ಟೀಪಣ್ಣ ಎದುರಾಬದುರು ನಿಂತಿದ್ದ ಮಂತ್ರಿ ಇಮಾಂ ಸಾಹೇಬ್ ಮತ್ತು ಗೂಡುಸಾಹೇಬನ ಮಧ್ಯಕ್ಕೆ ಬಂದವನೇ– ‘ಮಂತ್ರಿ ಮಹಾಶಯರೇ, ನೋಡಿ ನನ್ನ ಮಗಳನ್ನು ಈ ಸಾಹುಕಾರರ ಮಗನಿಗೆ ಕೊಡಲು ಮಾತಾಗಿದೆ. ಅಲ್ಲಾಸ್ವಾಮಿಯ ದಯೆಯಿಂದ ಈಗ ನಾವಿಬ್ಬರೂ ಬೀಗಬೀಗರು ಸಾಹೇಬರೇ’ ಎಂದು ಘೋಷಣೆಯಂತೆ ಕೂಗಿದ. ಟೀಪಣ್ಣನಿಗೆ ಆವೇಶ ತಡೆಯಲಾಗದೆ ಕಣ್ಣಿನಲ್ಲಿ ನೀರು ತುಂಬಿ ಬಂದವು. ಹಣೆಯ ಮೇಲೆ ಕೈಗಳೆರಡನ್ನೂ ಜೋಡಿಸಿ ಇಬ್ಬರಿಗೂ ಕೈಮುಗಿದು ನಿಂತ.ಮಂತ್ರಿ ಮಹಾಶಯರಿಗೆ ಕೂಡಲೆ ಏನಾಗುತ್ತಿದೆ, ಹೀಗೆ ಕೂಗಾಡುತ್ತಿರುವವನು ಯಾರು ಎಂಬುದು ಹೊಳೆಯಲೇ ಇಲ್ಲ. ಮಂತ್ರಿಯ ಹಿಂಬಾಲಕರು ಕೆಲವರು ಮುಂದೆ ಬಂದು ಟೀಪಣ್ಣನನ್ನು ಪಕ್ಕಕ್ಕೆ ಸರಿಸಿದರು. ‘ಏಯ್ ದೂರ ಸರಿಯಯ್ಯ. ದೂರದಿಂದಲೇ ಮಾತಾಡು’ ಎಂದು ಜೋರು ಮಾಡಿದರು. ಪೊಲೀಸರಿಬ್ಬರು ಟೀಪಣ್ಣನ ಅಕ್ಕಪಕ್ಕ ನಿಂತರು. ಅವರು ಟೀಪಣ್ಣನನ್ನು ಹುಚ್ಚನೆಂದು ಬಗೆದರೋ ಏನೋ.ಮಂತ್ರಿಗಳು ಸಾವರಿಸಿ ಕೊಂಡು ‘ಹೌದೇನ್ರಿ ಗೂಡುಸಾಹೇಬ್! ಹಂಗಾರೆ ನೀವು ನಮ್ಮೂರ ನೆಂಟರಾಗ್ತಾ ಯಿದ್ದೀರ!’ ಎಂದರು. ಆದರೆ ಟೀಪಣ್ಣನ ವೇಷ ನೋಡಿ ಅವರಿಗೆ ಸಂಶಯ ಉಂಟಾಯಿತು. ಮಂತ್ರಿಯ ಹಿಂಬಾಲಕರು ಗೂಡುಸಾಹೇಬ ಮತ್ತು ಟೀಪಣ್ಣನನ್ನು ಹೋಲಿಸಿ ನೋಡಿ ಮುಸಿಮುಸಿ ನಕ್ಕಂತಾಯಿತು. ಯಾರೋ ಹುಚ್ಚನ ಮಾತು ನಂಬಿ ನಾನು ಗೂಡುಸಾಹೇಬರ ಅವಮಾನ ಮಾಡಿದೆನೋ ಎಂದು ಕಕ್ಕಾಬಿಕ್ಕಿಯಾಯಿತು ಮಂತ್ರಿಗಳಿಗೆ.ಗೂಡುಸಾಹೇಬನಿಗೆ ಮೈಮೇಲೆ ಬಿಸಿ ನೀರು ಚೆಲ್ಲಿದಂತಾಯಿತು. ಸ್ವಭಾವತಃ ಸೊಕ್ಕಿನವನೂ, ಶ್ರೀಮಂತಿಕೆಯ ಪಕ್ಷಪಾತಿಯೂ, ತನ್ನ ಸ್ಥಾನಮಾನದ ಬಗ್ಗೆ ದುರಭಿಮಾನಿಯೂ ಆಗಿದ್ದ ಆತ ಸಿಟ್ಟಿನಲ್ಲಿ, ಅವಮಾನದಲ್ಲಿ ಬುಸುಗುಡುತ್ತಾ ಟೀಪಣ್ಣನನ್ನು ಕೆಕ್ಕರಿಸಿ ನೋಡುತ್ತ ಮಂತ್ರಿಗಳಿಗೆ ಸಹ ಉತ್ತರಿಸದೆ ಅಲ್ಲಿಂದ ಕಾಲ್ಕಿತ್ತ. ತನಗರಿವಿಲ್ಲದಂತೆ ಎತ್ತರಕ್ಕೇರಿ ಉತ್ತಮ ಮನುಷ್ಯನಾಗಿದ್ದವನು ಟೀಪಣ್ಣನ ಭಿಕಾರಿಯಂತಹ ವೇಷ ಕಂಡು ಇಂಥ ತಿರುಪೆದಾಸನ ಜೊತೆ ನೆಂಟಸ್ತಿಕೆಯೇ ಎಂಬ ಲೆಕ್ಕಾಚಾರದ ವಿಚಾರ ಮನಸ್ಸಿಗೆ ಬಂದದ್ದೇ ಜರ್ರನೇ ಕೆಳಗಿಳಿದು ಮೊದಲಿನ ಮನುಷ್ಯನೇ ಆಗಿಬಿಟ್ಟ.ಬಾಹ್ಯಪ್ರಪಂಚದ ಈ ಆಗುಹೋಗುಗಳು ಮುಗ್ಧ ಟೀಪಣ್ಣನಿಗೆ ಅರ್ಥವಾಗಲಿಲ್ಲ. ಅಲ್ಲಿಗೆ ಸರಿಯಾಗಿ ನಾಲ್ಕನೇ ದಿನಕ್ಕೆ ಚಂದವ್ವ, ಟೀಪಣ್ಣರಿಗೆ ಗೂಡುಸಾಹೇಬನಿಂದ ಬಂದ ಪತ್ರದ ಸಾರಾಂಶ: ‘ನಮ್ಮ ಮಗ ಅಬ್ದುಲ್ಲನಿಗೆ ನಿಮ್ಮ ಮಗಳು ಅಮೀನಾಳನ್ನು ತಂದುಕೊಳ್ಳುವ ಬಗ್ಗೆ ನಾವು ಮಾತನಾಡಿದ ದಿನದಂದು ಅದೇ ಹೊತ್ತಿಗೆ ಸರಿಯಾಗಿ ನಮ್ಮ ಮನೆಯಲ್ಲೊಂದು ಎತ್ತು ಇದ್ದಕ್ಕಿದ್ದಂತೆ ಸತ್ತು ಹೋಗಿ ಅಪಶಕುನವಾದ ಕಾರಣ ನಮ್ಮ ನಡುವೆ ಆದ ಮದುವೆ ಒಪ್ಪಂದ ಮುರಿದು ಬಿದ್ದಿದೆ...’.ಟೀಪಣ್ಣ ತನ್ನ ಸೇವಾ ಅವಧಿಯಲ್ಲಿ ಕಚೆೇರಿ ಕೆಲಸಕ್ಕೆ ಮೊದಲಬಾರಿಗೆ ಅನಾರೋಗ್ಯದ ಕಾರಣದ ಮೇಲೆ ದೀರ್ಘ ರಜಾ ಹಾಕಿದ. ಮನೆಯ ಹೊರಗೆ ಆತ ಯಾರ ಕಣ್ಣಿಗೂ ಬೀಳಲಿಲ್ಲ. ಚಂದವ್ವಳ ಮನೆಯಲ್ಲಿ ಬದುಕೇ ಸ್ತಬ್ಧವಾಯಿತು. ಬುಡ್ಡಮ್ಮ ಚಂದವ್ವರ ಮನಸುಗಳು ಘಾಸಿಗೊಂಡಿದ್ದವು. ಅವು ಪರಸ್ಪರ ಸಂತೈಸಿಕೊಳ್ಳಲು ಹಾತೊರೆಯುತ್ತಿದ್ದರೂ ಸದ್ಯಕ್ಕೆ ಮುಜುಗರ ಸಿಟ್ಟು ಬೇಸರಗಳಿಂದ ದೂರ ಉಳಿದಿದ್ದವು. ಎಲ್ಲವನ್ನು ಕಂಡೂ ಕಾಣದಂತಿದ್ದ ಸಣ್ಣಹುಸೇನಪ್ಪ ಮೇಷ್ಟ್ರು ವ್ಯಗ್ರರಾಗಿದ್ದರು. ಗೂಡುಸಾಹೇಬನು ಠೇಂಕಾರದಿಂದ ಇದ್ದರೆ ಖತೀಜಮ್ಮನು ಅನ್ನಲಾರದೆ ಅನುಭವಿಸಲಾರದೆ ಸೋತು ಸುಣ್ಣವಾಗಿದ್ದಳು. ಅಮೀನಳು ಸೋಲೊಪ್ಪಿಕೊಳ್ಳಲು ನಿರಾಕರಿಸಿ ಸುರಂಗದಾಚೆಯ ಬೆಳಕಿನ ಕಿರಣಕ್ಕೆ ಕಾತರಿಸಿ ಕ್ಷಣಗಳನ್ನು ಎಣಿಸತೊಡಗಿದಳು.ಈ ಎಲ್ಲ ಇಕ್ಕಟ್ಟುಬಿಕ್ಕಟ್ಟುಗಳ ನಡುವೆ ಪ್ರಕೃತಿಯ ಮೂಲಮಂತ್ರವಾದ ಪ್ರೀತಿಯು ಸಹಜವಾಗಿ ಅಮೀನ ಅಬ್ದುಲ್ಲರ ಎಳೆಯ ಹೃದಯಗಳ ಫಲವತ್ತತೆಯಲ್ಲಿ ಕುಡಿಯೊಡೆದಿತ್ತು. ಅದನ್ನು ಚಿವುಟಿ ಹಾಕಲು ಅವರಿಬ್ಬರೂ ತಯಾರಿರಲಿಲ್ಲ. ಮತ್ತೆ ಬೇರೆ ಯಾರಿಗೂ ಅವಕಾಶ ಕೊಡಲಿಲ್ಲ. ಅವರು ಆ ಹಾದಿಯಲ್ಲಿ ಹಿಂದಿರುಗಲಾರದಷ್ಟು ದೂರ ಬಂದಿದ್ದರು. ಪ್ರೀತಿಯೆಂಬುದು ಅವರ ಪಾಲಿಗೆ ಕುರುಡಾಗಿರದೆ ಬಾಳಿನ ಬೆಳಕಾಗಿತ್ತು. ಜಗತ್ತನ್ನೆದುರಿಸುವ ಧೈರ್ಯವಾಗಿತ್ತು. ಮನಸ್ಸಿನ ಶಕ್ತಿಯಾಗಿತ್ತು. ಬದುಕಿನ ಧರ್ಮವಾಗಿತ್ತು. ವಿಕಾರ ಮತ್ತು ಸಣ್ಣತನಗಳನ್ನು ಹೊಡೆದುರುಳಿಸುವ ಅಸ್ತ್ರವಾಗಿತ್ತು. ಯಾರಿಗೂ ಸುಳಿವು ಸಿಗದಂತೆ ಅಮೀನಾ – ಅಬ್ದುಲ್ಲರು ಸಂಪರ್ಕ ಏರ್ಪಡಿಸಿಕೊಂಡು ನಾಪತ್ತೆಯಾಗಲು ಪ್ರೀತಿ ಎನ್ನುವುದು ದೇವಲೋಕದಿಂದ ಇಳಿದುಬಂದ ವಾಹನವಾಗಿತ್ತು.ಮೊದಮೊದಲು ದಿಗಿಲುಕ್ಕಿಸಿದ ಪ್ರೀತಿಯು ದಿನಗಳೆದಂತೆ ಬುಡ್ಡಮ್ಮನ ಆಸೆಯನ್ನು ಈಡೇರಿಸಿತು. ಚಂದವ್ವನ ಕರುಳನ್ನು ಸಂತೈಸಿತು. ಟೀಪಣ್ಣನ ಉನ್ಮಾದವನ್ನು ಶಮನಗೊಳಿಸಿತು. ಖತೀಜಾಳ ಅಸಹಾಯಕತೆಯ ಕೊನೆಗಾಣಿಸಿತ್ತು. ಗೂಡುಸಾಹೇಬನ ಧಿಮಾಕನ್ನು ಹೊಡೆದುರುಳಿಸಿತು. ಸಣ್ಣಹುಸೇನಪ್ಪ ಮೇಷ್ಟ್ರ ಮುಖದ ವ್ಯಗ್ರತೆ ಕಳೆದು ಮುಗುಳ್ನಗೆಯ ಅರಳಿಸಿತು. ನಿಂತ ಬದುಕು ಮತ್ತೊಮ್ಮೆ ಹುರುಪಿನಿಂದ ಮುಂದಕ್ಕೆ ಚಲಿಸತೊಡಗಿತು... 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.