ಭಾನುವಾರ, ಮೇ 22, 2022
21 °C

ಅಮ್ಮಂದಿರಿಗೆ ರೂ 98 ಲಕ್ಷ ಬಾಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಯೋಜನೆಯಡಿ ಪ್ರಸೂತಿ ನಂತರದ ಆರೈಕೆಗಾಗಿ ಜಿಲ್ಲೆಯ ತಾಯಂದಿರಿಗೆ ವಿತರಿಸಲು ಬರಬೇಕಿದ್ದ ಎರಡು ವರ್ಷಗಳ ಅನುದಾನ ರೂ. 98 ಲಕ್ಷ ಇನ್ನೂ ಬಾಕಿಯಾಗಿದೆ ಎನ್ನುವ ವಿಷಯ ಜಿಲ್ಲಾ ಪಂಚಾಯಿತಿ ಪ್ರಥಮ ಸಾಮಾನ್ಯ ಸಭೆಯಲ್ಲಿ ಗಂಭೀರ ಚರ್ಚೆಗೆ ಒಳಗಾಯಿತು.ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿ.ಪಂ ಅಧ್ಯಕ್ಷೆ ಶೈಲಜಾ ಭಟ್ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಆರೋಗ್ಯ ಇಲಾಖೆ, ಕುಡಿಯುವ ನೀರು, ಪಡಿತರ ಚೀಟಿ ಗೊಂದಲ ವಿಷಯದಲ್ಲಿ ಸಾಕಷ್ಟು ಚರ್ಚೆಯಾಯಿತು.ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ಸದಸ್ಯೆ ಮಮತಾ ಗಟ್ಟಿ, ಇದೊಂದು ಗಂಭೀರ ವಿಷಯ. ಈ (ಪ್ರಸೂತಿ ಆರೈಕೆ) ಯೋಜನೆ ಬಗ್ಗೆ ಇಲಾಖೆಯ ಅಧಿಕಾರಿಗಳೇ ಬೇಸರವಾಗುವ ಮಾತು ಆಡುತ್ತಿದ್ದಾರೆ. ಎಷ್ಟು ದಿನಗಳಲ್ಲಿ ಅನುದಾನ ತರಿಸುತ್ತೀರಿ. ಎಷ್ಟೊ ಬಡ ಮಹಿಳೆಯರು ಈ ಬಗ್ಗೆ ವಿಚಾರಿಸುತ್ತಿದ್ದಾರೆ ಎಂದು ಪರಿಸ್ಥಿತಿ ವಿವರಿಸಿದರು.ಈ ಹಿಂದೆ ಯೋಜನೆಯಡಿ ರೂ. 10 ಲಕ್ಷ ವಿತರಿಸಲಾಗಿದೆ. ಇನ್ನೂ ರೂ. 98 ಲಕ್ಷ ಬರಬೇಕಿದ್ದು, ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಶ್ರೀರಂಗಪ್ಪ ಸಭೆಗೆ ಮಾಹಿತಿ ನೀಡಿದರು.ಈ ವಿಷಯವನ್ನು ಆರೋಗ್ಯ ಸಚಿವರ ಗಮನಕ್ಕೆ ತರುವುದಾಗಿ ಸಭೆಯಲ್ಲಿ ಹಾಜರಿದ್ದ ಶಾಸಕ ಯು.ಟಿ.ಖಾದರ್ ಮತ್ತು ಸಂಸತ್ ಸದಸ್ಯ ನಳಿನ್ ಕುಮಾರ್ ಕಟೀಲ್ ಭರವಸೆ ನೀಡಿದರು. ಚರ್ಚೆ ನಡೆಯುವಾಗ ಆರೋಗ್ಯ ಮಿಷನ್ ಜಿಲ್ಲಾ ಯೋಜನಾಧಿಕಾರಿ ಸಭೆಯಲ್ಲಿ ಹಾಜರಿರಲಿಲ್ಲ!ಕುಡಿಯುವ ನೀರು: ಬೇಸಿಗೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ದೀರ್ಘ ಚರ್ಚೆ ನಡೆಯಿತು. ಪಂಚಾಯಿತಿ ಸದಸ್ಯರ ಜತೆಗೆ ಶಾಸಕರಾದ ಬಿ.ರಮಾನಾಥ ರೈ, ಖಾದರ್ ಅವರೂ ಪಾಲ್ಗೊಂಡರು.

ಜಿಲ್ಲೆಯಲ್ಲಿ ಬಹುಗ್ರಾಮಗಳ ಕುಡಿಯುವ ನೀರಿನ ಎರಡು ಯೋಜನೆ ಇದೆ. ಕಿನ್ನಿಗೋಳಿಯ ಬಹು ಗ್ರಾಮ ಯೋಜನೆಯ ಕಾಮಗಾರಿ ಮೇ ತಿಂಗಳಲ್ಲಿ ಪೂರ್ಣವಾಗುವ ಸಾಧ್ಯತೆಯಿದೆ. ಈ ಯೋಜನೆ ಪೂರ್ಣಗೊಂಡಲ್ಲಿ ಸುತ್ತಮುತ್ತಲ 17 ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಯಾಗಲಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್ ಹೇಳಿದರು.

ಕುಂಟುತ್ತ ಸಾಗುತ್ತಿರುವ ಮಂಗಳೂರು ತಾಲ್ಲೂಕಿನ ಮಳವೂರು ಕುಡಿಯುವ ನೀರಿನ ಯೋಜನೆ ಕಾಮಗಾರಿಯೂ ಪ್ರಗತಿಯಲ್ಲಿದ್ದು, ಮುಂದಿನ ವರ್ಷ 11 ಗ್ರಾಮಗಳಿಗೆ ನೀರು ಪೂರೈಸಲಾಗುವುದು. ಆಣೆಕಟ್ಟಿನ ಕೆಲಸವನ್ನು ಮಳೆಗಾಲದ ಒಳಗೆ ಮುಗಿಸಲು ಉದ್ದೇಶಿಸಲಾಗಿದೆ ಎಂದು ಅವರು ವಿವರ ನೀಡಿದರು.ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ನಾವು ಪೂರೈಸುವ ನೀರಿನ ಮೇಲೆ ಅವಲಂಬಿತವಾಗಿರುವವರು 4 ಲಕ್ಷ ಜನ. ಆದರೆ 36 ಲಕ್ಷ ಜನರಿಗೆ ಸಾಕಾಗುವಷ್ಟು ನೀರು ಪೂರೈಕೆ ಆಗುತ್ತಿದೆ. ಅಂದ ಮೇಲೆ ವಿತರಣೆ ವ್ಯವಸ್ಥೆಯಲ್ಲಿ ಆಗುತ್ತಿರುವ ಸಮಸ್ಯೆ ಸರಿಪಡಿಸಬೇಕಾಗಿದೆ. ಹೆಚ್ಚಿನ ಗ್ರಾಮ ಪಂಚಾಯಿತಿಗಳು ವಿದ್ಯುತ್ ಬಿಲ್ ಪಾವತಿ ಮಾಡುವ ಸ್ಥಿತಿಯಲ್ಲಿರುವುದಿಲ್ಲ. ಬಂಟ್ವಾಳ ಮತ್ತು ಮಂಗಳೂರು ತಾಲ್ಲೂಕು 23 ಗ್ರಾಮಗಳಲ್ಲಿ ಬೇಸಿಗೆ ಸಮಯದಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ವಿವರಿಸಿದರು.ಬಹುಗ್ರಾಮ ಕುಡಿಯುವ ನೀರು ಯೋಜನೆ ಅನುಷ್ಠಾನಗೊಳಿಸಬೇಕಾದರೆ, ಅದಕ್ಕಾಗಿ ಸಮೀಕ್ಷೆ ಮಾಡಬೇಕಾಗುತ್ತದೆ. ಇದಕ್ಕೆ ಯೋಜನೆಯ ಒಟ್ಟು ಮೊತ್ತದ ಶೇ. 1ರಷ್ಟು ಹಣ ಬೇಕಾಗುತ್ತದೆ. ಸಮೀಕ್ಷೆಗಾಗಿಯೇ ಹಣ ಕೊಡುವುದಿಲ್ಲ ಎಂದು ಸರ್ಕಾರ ಹೇಳಿದೆ. ಸಮೀಕ್ಷೆಗೆ ಹಣ ಒದಗಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವರಿಗೆ ಮನವಿ ಮಾಡಿಕೊಂಡಿದ್ದೇವೆ ಎಂದು ಅವರು ಹೇಳಿದರು.ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕುಡಿಯುವ ನೀರಿನ ವಿತರಣಾ ವ್ಯವಸ್ಥೆಗೆ ಸಂಬಂಧಿಸಿ ಸೋಮವಾರದಿಂದ ಸಮೀಕ್ಷೆ ನಡೆಸುವುದಾಗಿ ಅವರು ಹೇಳಿದರು. ಈ ಸಮೀಕ್ಷೆ ಸಮರ್ಪಕವಾಗಿರುವಂತೆ ಮಾಡಲು ಜಿ.ಪಂ ಸದಸ್ಯರ ಮೇಲೆ ಹೆಚ್ಚಿನ ಹೊಣೆ ಇದೆ ಎಂದು ಶಿವಶಂಕರ್ ತಿಳಿಸಿದರು.ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಜಿಲ್ಲೆಯ ಶಾಸಕರ ನೆರವೂ ಬೇಕು. ಅವರು ವಿವೇಚನಾ ನಿಧಿಯಿಂದ ತುರ್ತಾಗಿ ಅಗತ್ಯ ಬಂದಿರುವ ಕಡೆ ನೆರವು ಒದಗಿಸಬೇಕು ಎಂದು ಮನವಿ ಮಾಡಿದರು.ರಾಜ್ಯ ಬಜೆಟ್‌ಗೆ ಆಕ್ಷೇಪ: ಶಾಸಕ ಯು.ಟಿ.ಖಾದರ್ ಬಜೆಟ್‌ನಲ್ಲಿ ಪ್ರಸ್ತಾಪಿಸಿದ ಪಶ್ಚಿಮ ವಾಹಿನಿ ಯೋಜನೆಗೆ ವಿರೋಧ ವ್ಯಕ್ತಪಡಿಸಿದರು. ನೇತ್ರಾವತಿ ನದಿ ತಿರುವು ಯೋಜನೆಯನ್ನು ಬಜೆಟ್‌ನಲ್ಲಿ ಪಶ್ಚಿಮ ವಾಹಿನಿ ಕರೆಯಲಾಗಿದೆ. ಇದರ ವಿರುದ್ಧ ಧ್ವನಿ ಎತ್ತಬೇಕು. ಸರ್ವಪಕ್ಷ ಸಭೆ ಕರೆಯಬೇಕು ಎಂದು ಸಲಹೆ ನೀಡಿದರು. ಪೂರಕ ಬಜೆಟ್‌ನಲ್ಲಿ ಇದನ್ನು ಕೈಬಿಡುವಂತೆ ಒತ್ತಡ ಹೇರಲೂ ಅವರು ಮನವಿ ಮಾಡಿದರು.ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಧನಲಕ್ಷ್ಮಿ ಜನಾರ್ದನ, ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.