ಸೋಮವಾರ, ಜನವರಿ 20, 2020
26 °C

ಅರಕನಹಳ್ಳಿ: ಕಾಡಾನೆ ದಾಳಿಗೆ ವ್ಯಕ್ತಿ ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶನಿವಾರಸಂತೆ: ಇಲ್ಲಿಗೆ ಸಮೀಪದ ಹಂಪಾಪುರ ಗ್ರಾಮದ ಅರಕನಹಳ್ಳಿಯಲ್ಲಿ ಕಾಡಾನೆ ದಾಳಿಗೆ ಕಾಫಿ ತೋಟದ ರೈಟರ್‌ ಒಬ್ಬರು ಬಲಿಯಾಗಿರುವ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ. ತಮಿಳುನಾಡಿನ ಅಳಗಮಾಯಿ ರಂಗನಾಥ್‌ ಚೆಟ್ಟಿಯಾರ್‌ ಅವರ ವೆಂಕಟೇಶ್ವರ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದ ರೈಟರ್‌ ಕಣ್ಣಪ್ಪ (38) ಕಾಡಾನೆ ದಾಳಿಗೆ ಬಲಿಯಾದವರು.ಕಣ್ಣಪ್ಪ 6 ವರ್ಷಗಳಿಂದ ತನ್ನ ತಾಯಿಯೊಂದಿಗೆ ವೆಂಕಟೇಶ್ವರ ಎಸ್ಟೇಟ್‌ನ ಲೈನ್‌ ಮನೆಯಲ್ಲಿ ವಾಸವಿದ್ದು, ತೋಟದ ರೈಟರ್‌ ಆಗಿ ಕೆಲಸ ಮಾಡುತ್ತಿದ್ದ. ಮಂಗಳವಾರ ಬೆಳಿಗ್ಗೆ ಎಂದಿನಂತೆ ಕಾಫಿ ತೋಟದಲ್ಲಿ ಹಣ್ಣು ಕೊಯಿಸುವ ಕೆಲಸಕ್ಕೆಂದು ತೆರಳಿದ್ದ ಸಮಯದಲ್ಲೇ ಘಟನೆ ನಡೆದಿದೆ.ತೋಟದ ಪಕ್ಕದ ಕೆರೆಯ ದಂಡೆಯಲ್ಲಿ ಎರಡು ಕಾಡಾನೆಗಳು ಗುದ್ದಾಡುತ್ತಿರುವುದನ್ನು ತಿಳಿದ ಅರಣ್ಯ ಇಲಾಖೆಯವರು ಕಾಫಿ ತೋಟಕ್ಕೆ ಕೆಲಸಕ್ಕೆ ಹೋಗುತ್ತಿದ್ದ ಕಾರ್ಮಿಕರಿಗೆ ಸೂಚನೆ ನೀಡಿದ್ದರು. ಅರಕನಹಳ್ಳಿಯ ಗ್ರಾಮಸ್ಥ ಶಾಂತಕುಮಾರ್‌ ಅವರು ರೈಟರ್‌ ಕಣ್ಣಪ್ಪ ಅವರಿಗೆ ದೂರವಾಣಿ ಮೂಲಕ ಕಾಡಾನೆ ತೋಟದೊಳಗೆ ಬಂದಿರುವ ವಿಷಯ ತಿಳಿಸಿ, ಹಣ್ಣು ಕೊಯ್ಯುತ್ತಿದ್ದವರನ್ನು ಹೊರಗೆ ಕಳುಹಿಸುವಂತೆ ತಿಳಿಸಿದರು.  ಅಷ್ಟರಲ್ಲಿ ಒಂದು ಆನೆ ಕಾಫಿ ತೋಟದೊಳಗೆ ರೋಷದಿಂದ ನುಗ್ಗಿತ್ತು. ಅದೇ ಸಮಯಕ್ಕೆ ಮೊಬೈಲ್‌ ಹಿಡಿದು ಮಾತನಾಡುತ್ತ ಬರುತ್ತಿದ್ದ ಕಣ್ಣಪ್ಪನನ್ನು ಸೊಂಡಿಲಿನಿಂದ ಬಳಸಿ ನೆಲಕ್ಕೆ ಅಪ್ಪಳಿಸಿತು ಎನ್ನಲಾಗಿದೆ.ಮುಖ, ಎದೆ, ಕೈಗಳಿಗೆ ಗಂಭೀರ ಪೆಟ್ಟು ಬಿದ್ದು ಕಣ್ಣಪ್ಪ ಸ್ಥಳದಲ್ಲೇ ಮೃತಪಟ್ಟರು. ನಂತರ ಆನೆ ತೋಟದ ಮೇಲ್ಭಾಗದ ಊರಡುವೆ ಕಾಡು ಜಾಗಕ್ಕೆ ತೆರಳಿತು ಎನ್ನಲಾಗಿದೆ. ಹಂಪಾಪುರ ರಸ್ತೆಯಲ್ಲಿ ಎರಡೂವರೆ ವರ್ಷಗಳ ಹಿಂದೆ ಕಾಡಾನೆ ಇಬ್ಬರನ್ನು ಬಲಿ ತೆಗೆದುಕೊಂಡಿತ್ತು.

ಇದೀಗ ಕಣ್ಣಪ್ಪ ಮೂರನೇ ಬಲಿ. ವಿವಾಹಿತ ಕಣ್ಣಪ್ಪನಿಗೆ ಇಬ್ಬರು ಮಕ್ಕಳಿದ್ದು, ಪತ್ನಿ ಕೆಲ ವರ್ಷಗಳ ಹಿಂದೆ ತಮಿಳುನಾಡಿಗೆ ಹೋದವರು ಹಿಂತಿರುಗಿ ಬರಲಿಲ್ಲ.ಲೈನ್‌ ಮನೆಯಲ್ಲಿದ್ದ ತಾಯಿ, ಮಗ ಕಾಡಾನೆ ದಾಳಿಗೆ ಬಲಿಯಾದ ವಿಚಾರ ತಿಳಿದು ‘ಪೋಯಲ ಮೂವ’ ಎಂದು ಗೋಳಾಡುತ್ತಿದ್ದ ದೃಶ್ಯ ಮನ ಕರಗಿಸುವಂತಿತ್ತು. ಅರಣ್ಯ ಇಲಾಖೆ ವತಿಯಿಂದ ಕಣ್ಣಪ್ಪನ ಶವ ಸಂಸ್ಕಾರಕ್ಕೆ ₨ 5 ಸಾವಿರ ನೀಡಲಾಯಿತು. ಸ್ಥಳಕ್ಕೆ ಎಸಿಎಫ್‌ ಶಶಿ, ಆರ್‌ಎಫ್‌ಒ ಅಚ್ಚಯ್ಯ, ಸಬ್‌ಇನ್‌ಸ್ಪೆಕ್ಟರ್‌ ಆನಂದ್‌ಕುಮಾರ್‌, ಅರಣ್ಯ ಇಲಾಖೆ ಮತ್ತು ಪೊಲೀಸ್‌ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.‘ಆನೆಗಳಿಗೆ ಭಯಪಟ್ಟು ಕೆಲವು ತೋಟದ ಮಾಲೀಕರು ತೋಟಗಳನ್ನು ಮಾರಿ ಬೇರೆಡೆಗೆ ಹೋಗುತ್ತಿದ್ದಾರೆ. ಹಂಪಾಪುರ ಪ್ರದೇಶದಲ್ಲಿ ಒಟ್ಟು 30 ಕಾಡಾನೆಗಳಿದ್ದು ಅವುಗಳಲ್ಲಿ ಎರಡು ಒಂಟಿ ಸಲಗಗಳು. ಈ ನರಹಂತಕ ಕೊಡಗಿನಲ್ಲಿ ಹಲವರನ್ನು ಬಲಿ ತೆಗೆದುಕೊಂಡಿದೆ. ಸರ್ಕಾರ ಈ ಕಾಡಾನೆಯನ್ನು ಹಿಡಿಯಲೇಬೇಕು. ಇತ್ತೀಚೆಗೆ ಜಂಟಿ ಕಾರ್ಯಾಚರಣೆಯಲ್ಲಿ ಹಿಡಿದ ಆನೆ ಸಣ್ಣಾನೆ’ ಎಂದು ಸ್ಥಳದಲ್ಲಿ ನೆರೆದಿದ್ದ ಗ್ರಾಮಸ್ಥರು ಅರಣ್ಯ ಇಲಾಖೆಯವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಕ್ರಿಯಿಸಿ (+)