ಮಂಗಳವಾರ, ಜೂನ್ 22, 2021
23 °C

ಅರಳುವ ಪ್ರತಿಭೆಗೆ ಬೆಂಬಲವೇ ಬಲ!

ಪ್ರಮೋದ್ ಜಿ.ಕೆ. Updated:

ಅಕ್ಷರ ಗಾತ್ರ : | |

`ಜೀವನ ನಡೆಸುವುದೇ ಒಂದು ಸಾಧನೆಯಾದರೆ ಜೀವನ ಬೇಸರ ಎನಿಸಿ ಬಿಡುತ್ತದೆ. ಅಂದುಕೊಂಡಿದ್ದನ್ನು ಸಾಧಿಸುವ ಸಲುವಾಗಿಯೇ ಬದುಕು ಎನ್ನುವ ತತ್ವವನ್ನು ಬಲವಾಗಿ ನಂಬಿಕೊಂಡರೆ, ಜೀವನ ಸಾರ್ಥಕ ಎನಿಸುತ್ತದೆ...~ಈ ಮಾತನ್ನು ಗಟ್ಟಿಯಾಗಿ ನಂಬಿಸಾಧನೆ ಹಾದಿಯಲ್ಲಿ ಸಾಗಿದ್ದು ಎನ್. ಶ್ವೇತಾ. ಬೆಂಗಳೂರಿನ ಎನ್‌ಎಂಕೆಆರ್‌ವಿ ಮಹಿಳಾ ಕಾಲೇಜಿನಲ್ಲಿ ಬಿ.ಎ. ತೃತೀಯ ವರ್ಷ ಓದುತ್ತಿರುವ ಈ ವಿದ್ಯಾರ್ಥಿನಿ ಮಾಡಿರುವ ಸಾಧನೆಗಳೂ ಈ ಮಾತಿಗೆ ಸಾಕ್ಷಿ. 19 ವರ್ಷದ ಒಳಗೆ ನಾಲ್ಕು ಸಲ ವಾಲಿಬಾಲ್ ಸ್ಪರ್ಧೆಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. 18ಕ್ಕೂ ಹೆಚ್ಚು ಸಲ ರಾಷ್ಟ್ರೀಯ ಟೂರ್ನಿಗಳಲ್ಲಿ ಸ್ಪರ್ಧಿಸಿದ್ದಾರೆ. ಈ ಸಾಧನೆಯ ಮೈಲಿಗಲ್ಲುಗಳೇ ಶ್ವೇತಾ ಪರಿಶ್ರಮದ ನೋಟವನ್ನು ಬೆರಗುಗಣ್ಣಿನಿಂದ ನೋಡುವಂತೆ ಮಾಡುತ್ತವೆ.ನಿರಂತರ ಕ್ರೀಡಾಭ್ಯಾಸ ಮಾಡುವುದಕ್ಕೆ ಆದ್ಯತೆ ನೀಡುತ್ತಿರುವ ಈ ಆಟಗಾರ್ತಿಗೆ ಕ್ರೀಡಾ ಕ್ಷೇತ್ರದಲ್ಲಿನ ಸಾಧನೆ ಮೂಲಕ ಬದುಕು ಕಟ್ಟಿಕೊಳ್ಳಬೇಕು ಎನ್ನುವ ಗುರಿ. ಕಾಲೇಜಿನಲ್ಲಿ ನೀಡಿದ ಪ್ರೋತ್ಸಾಹದ ಬಲವೇ ಸಾಧನೆಗೆ ಪ್ರೇರಣೆ. ಹಾಗೆಯೇ ನನ್ನ ಸಾಧನೆಯಲ್ಲಿ ಪಾಲಕರ ಪಾಲೂ ಇದೆ ಎಂದು ಹೇಳುವುದನ್ನು ಶ್ವೇತಾ ಮರೆಯುವುದಿಲ್ಲ.ವಿಯಟ್ನಾಂನಲ್ಲಿ ನಡೆದ 15ನೇ ಜೂನಿಯರ್ ವಾಲಿಬಾಲ್ ಚಾಂಪಿಯನ್‌ಷಿಪ್‌ಗೆ ನಾಯಕಿಯಾಗಿ ಭಾರತ ತಂಡವನ್ನು ಮುನ್ನಡೆಸಿದ್ದರು. ಆಗಲೇ ಆತ್ಮವಿಶ್ವಾಸದ ಚಿಗುರೊಂದು ಈ ಆಟಗಾರ್ತಿಯ ಮನದಲ್ಲಿ ಸಂತಸದ ಹೊನಲು ಹರಿಸಿತ್ತು. ಏಕೆಂದರೆ ಈ ಚಾಂಪಿಯನ್‌ಷಿಪ್ ನಡೆದಿದ್ದು 2010ರಲ್ಲಿ. ಇದಕ್ಕೂ ಮುನ್ನ  ಎರಡು ಸಲ ಮಾತ್ರ ಭಾರತ ತಂಡಕ್ಕೆ ಆಡಿದ್ದರು.ಮೂರನೇ ಸಲ ಪ್ರತಿನಿಧಿಸುವ ವೇಳೆಗೆ ನಾಯಕಿ ಪಟ್ಟ ಲಭಿಸಿದ್ದು ಶ್ವೇತಾ ಸಾಧನೆಯ ಬಲಕ್ಕೆ ಇನ್ನಷ್ಟು ಇಂಬು ನೀಡಿತು. ಇದಕ್ಕೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಎ.ಎಸ್. ಜಲಜಾ ಹಾಗೂ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥೆ ಪದ್ಮಿನಿ ಅವರ ಸಹಕಾರ ಇದೆ ಎಂದು ಶ್ವೇತಾ ಹೇಳುತ್ತಾರೆ.2007ರಲ್ಲಿ ಥಾಯ್ಲೆಂಡ್‌ನಲ್ಲಿ ನಡೆದ 6ನೇ ಏಷ್ಯನ್ ಯೂತ್ ಬಾಲಕಿಯರ ವಾಲಿಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಭಾರತ ತಂಡವನ್ನು ಮೊದಲ ಸಲ ಪ್ರತಿನಿಧಿಸಿದ್ದರು. ಇದಕ್ಕೂ ಮುನ್ನ ಸಾಕಷ್ಟು ರಾಷ್ಟ್ರೀಯ ಟೂರ್ನಿಗಳಲ್ಲಿ ಆಡಿದ್ದಾರೆ. ಇದಾದ ನಂತರ 2009ರಲ್ಲಿ 7ನೇ ಏಷ್ಯನ್ ಯೂತ್ ಬಾಲಕಿಯರ ವಾಲಿಬಾಲ್ ಚಾಂಪಿಯನ್ ಷಿಪ್ ಹಾಗೂ ಕಳೆದ ವರ್ಷ ಚೈನಿಸ್ ತೈಪೆಯಲ್ಲಿ ಜುರುಗಿದ 16ನೇ ಏಷ್ಯನ್ ಸೀನಿಯರ್ ಮಹಿಳಾ ವಾಲಿಬಾಲ್ ಟೂರ್ನಿಯಲ್ಲಿ ಭಾರತ ತಂಡದಲ್ಲಿ ಆಡಿದ್ದರು.ರಾಂಚಿಯಲ್ಲಿ ನಡೆದ 34ನೇ ರಾಷ್ಟ್ರೀಯ ಕ್ರೀಡಾಕೂಟ, ಅದಕ್ಕೂ ಮುನ್ನ 33ನೇ ವರ್ಷದ ರಾಷ್ಟ್ರೀಯ ಕ್ರೀಡಾಕೂಟ, ಬೆಂಗಳೂರು ವಿಶ್ವವಿದ್ಯಾಲಯದ ಪರ, ಜೈಪುರ,      ರಾಯಪುರ, ಅಸ್ಸಾಂನಲ್ಲಿ ನಡೆದ ವಿವಿಧ ರಾಷ್ಟ್ರೀಯ ಟೂರ್ನಿಗಳಲ್ಲಿ ಶ್ವೇತಾ ಆಡಿದ್ದಾರೆ.ಗ್ವಾಲಿಯರ್‌ನಲ್ಲಿ ನಡೆದ 58ನೇ ರಾಷ್ಟ್ರೀಯ ಸೀನಿಯರ್ ವಾಲಿಬಾಲ್ ಚಾಂಪಿಯನ್‌ಷಿಪ್‌ನಲ್ಲಿ ನಾಯಕಿಯಾಗಿ ಕರ್ನಾಟಕ ತಂಡವನ್ನು ಮುನ್ನಡೆಸಿದ್ದರು. ಹೀಗೆ ಹಂತ ಹಂತವಾಗಿ ಬೆಳೆಯುತ್ತಾ ಸಾಧನೆಯ ಹಾದಿಯಲ್ಲಿ ಹೆಜ್ಜೆ ಹಾಕಿರುವ ಬೆಂಗಳೂರಿನ ಈ ಆಟಗಾರ್ತಿಗೆ ಕಾಲೇಜಿನಲ್ಲಿ ಉತ್ತಮ ವಾತಾವರಣ ಲಭಿಸಿದೆ. ಇದರ ಬಲದಿಂದಲೇ ಸಾಧನೆಯ ಹಾದಿಯಲ್ಲಿ ಹೆಜ್ಜೆ ಹಾಕಲು  ಸಾಧ್ಯವಾಗುತ್ತಿದೆ.ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವ ಶ್ವೇತಾಗೆ ಇದೇ ಕ್ರೀಡೆಯಲ್ಲಿ ಇನ್ನಷ್ಟು ಸಾಧನೆ ಮಾಡಬೇಕು ಎನ್ನುವ ಆಸೆ. `ದಿನಕ್ಕೆ ಎರಡರಿಂದ ಮೂರು ಗಂಟೆ ಅಭ್ಯಾಸ. ಟೂರ್ನಿಯಿದ್ದರೆ, ಇದರ ಅವಧಿ ಇನ್ನೂ ಹೆಚ್ಚುತ್ತದೆ. ಗೆಳತಿಯರೊಂದಿಗೆ ಕಾಲೇಜಿನಲ್ಲಿ ಅಭ್ಯಾಸ ಮಾಡುತ್ತೇನೆ. ಇದಕ್ಕೆ ಕಾಲೇಜಿನವರೂ ಎಲ್ಲ ರೀತಿಯಿಂದ ಪ್ರೋತ್ಸಾಹ ನೀಡುತ್ತಾರೆ~ ಎಂದು ಶ್ವೇತಾ ಹೇಳುತ್ತಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.