ಬುಧವಾರ, ಜನವರಿ 29, 2020
28 °C
ಶೈಕ್ಷಣಿಕ ಅಂಗಳ

ಅರುಣ ಕಾಲೇಜಿಗೆ ಸುವರ್ಣ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಸಮೀಪದ ಚೇರಂಬಾಣೆ ಅರುಣ ಪದವಿಪೂರ್ವ ಕಾಲೇಜಿಗೆ ಈಗ ಸುವರ್ಣ ಸಂಭ್ರಮ. ಈ ಹಿನ್ನೆಲೆಯಲ್ಲಿ ಡಿ.21 ಮತ್ತು 22ರಂದು ಸುವರ್ಣ ಸಂಭ್ರಮದ ವೈವಿಧ್ಯಮಯ ಕಾರ್ಯಕ್ರಮಕ್ಕೆ ಈ ಕಾಲೇಜು ಸಜ್ಜಾಗಿದೆ.ಕಳೆದ ಐದು ದಶಕಗಳ ಹಿಂದೆ ಈ ಭಾಗದಲ್ಲಿ ಪ್ರೌಢಶಾಲೆ ಇರಲಿಲ್ಲ. ಈ ಸಂದರ್ಭದಲ್ಲಿ 1960ರಲ್ಲಿ ಹಲವು ದಾನಿಗಳ ನೆರವಿನಿಂದ ಈ ಪ್ರೌಢಶಾಲೆ ಆರಂಭಗೊಂಡಿತು. ಇಂದು ಪದವಿಪೂರ್ವ ಶಿಕ್ಷಣದವರೆಗೆ ಬೆಳೆದುನಿಂತಿದೆ. ಶಾಲೆಯಲ್ಲಿ ಓದಿದ ಸಾಕಷ್ಟು ವಿದ್ಯಾರ್ಥಿಗಳು ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ.ಕೇಚಪ್ಪನ ಮತ್ತು ಬಬ್ಬೀರ ಕುಟುಂಬಸ್ಥರು 10.50 ಎಕರೆ ಜಾಗವನ್ನು ಶಾಲೆಗೆಂದು ದಾನವಾಗಿ ನೀಡಿದರು. ಇಲ್ಲಿ ಆರಂಭವಾದ ಪ್ರೌಢಶಾಲೆ ಹಂತಹಂತವಾಗಿ ಬೆಳೆದು 1969–70ರಲ್ಲಿ ಕಲಾ ವಿಭಾಗದ ಪದವಿ ಪೂರ್ವ ಶಿಕ್ಷಣ ಹಾಗೂ 1976ರಿಂದ ವಾಣಿಜ್ಯ ವಿಭಾಗದ ಕೋರ್ಸ್‌ಗಳನ್ನು ಆರಂಭಿಸಿತು.ಪ್ರಸ್ತುತ 8ರಿಂದ 9ನೇ ತರಗತಿವರೆಗೆ ಇಂಗ್ಲಿಷ್‌ ಮಾಧ್ಯಮವನ್ನು ಆರಂಭಿಸಲಾಗಿದ್ದು, ಮುಂದಿನ ಶೈಕ್ಷಣಿಕ ವರ್ಷದಲ್ಲಿ 10ನೇ ತರಗತಿಗೂ ಇದನ್ನು ವಿಸ್ತರಿಸಲಾಗುತ್ತದೆ. ಪದವಿ ಪೂರ್ವ ಶಿಕ್ಷಣದಲ್ಲಿ ವಿಜ್ಞಾನ ವಿಭಾಗವನ್ನು ತೆರೆಯಲು ಸಿದ್ಧತೆ ನಡೆಸಲಾಗಿದೆ.

ಶಾಲೆಯಲ್ಲಿ ಕಂಪ್ಯೂಟರ್‌ ಶಿಕ್ಷಣ ಸೇರಿದಂತೆ ಸುಸಜ್ಜಿತ ಕಟ್ಟಡದಲ್ಲಿ ಬೋಧನೆ ನಡೆಯುತ್ತಿದ್ದು, ಕಾಲೇಜಿಗೆ ಪ್ರವೇಶ ಪಡೆಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ.ಪ್ರತಿವರ್ಷದ ಫಲಿತಾಂಶದಲ್ಲಿ ಶಾಲೆಯಲ್ಲಿ ಎಸ್‌ಎಸ್ಎಲ್‌ಸಿಯಲ್ಲಿ ಶೇ 83 ಹಾಗೂ ಪದವಿಪೂರ್ವ ಶಿಕ್ಷಣದಲ್ಲಿ ಶೇ 93 ಹಾಗೂ ವಾಣಿಜ್ಯ ವಿಭಾಗದಲ್ಲಿ ಶೇ 100ರಷ್ಟು ಫಲಿತಾಂಶ ಬಂದಿದೆ.2005ರಿಂದ ಈಚೆಗೆ ಶಾಲೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್‌) ಘಟಕವು ಆರಂಭಗೊಂಡಿದ್ದು, ರಾಜ್ಯ ಮಟ್ಟದ ಶಿಬಿರದಲ್ಲಿ 3 ಬಾರಿ ಉತ್ತಮ ಸೇವಾ ಪ್ರಶಸ್ತಿ ಗಳಿಸಿದೆ. ಕ್ರೀಡೆಗೂ ಉತ್ತಮ ಪ್ರೋತ್ಸಾಹ ನೀಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಮಟ್ಟದ ಹಲವು ಕ್ರೀಡಾಕೂಟಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ, ಶಾಲೆಯ ಕೀರ್ತಿ ಪತಾಕೆ ಹಾರಿಸಿದ್ದಾರೆ.ಸಂಸ್ಥೆಯ ಆರ್ಥಿಕ ಪರಿಸ್ಥಿತಿ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳನ್ನು ರೂಪಿಸಲು ಶಾಲೆಯಲ್ಲಿ 15 ಮಂದಿ ಗಣ್ಯರು ₨ 60 ಸಾವಿರಕ್ಕೂ ಹೆಚ್ಚಿನ ಮೊತ್ತದ ದತ್ತಿ ನಿಧಿ ಸ್ಥಾಪಿಸಿದ್ದು, ಇದರ ಬಡ್ಡಿ ಹಣದಿಂದ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಸುವರ್ಣ ಮಹೋತ್ಸವದ ಅಂಗವಾಗಿ ‘ಅಕ್ಷರ’ ಎಂಬ ಸಂಚಿಕೆ ಬಿಡುಗಡೆ ಮಾಡಲಾಗುವುದು. ಇದರ ನಿಮಿತ್ತ ಹಿರಿಯ ವಿದ್ಯಾರ್ಥಿಗಳಿಗೆ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ.ಶಾಲೆಯ ಸಂಭ್ರಮದಲ್ಲಿ ಹಳೆಯ ವಿದ್ಯಾರ್ಥಿಗಳೂ ಆಗಮಿಸುತ್ತಿದ್ದು, ಕಾರ್ಯಕ್ರಮಕ್ಕೆ ಮತ್ತಷ್ಟು ರಂಗು ತರುವ ನಿಟ್ಟಿನಲ್ಲಿ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದವು ಭರ್ಜರಿ ತಯಾರಿ ನಡೆಸಿದೆ.ಸುವರ್ಣ ಮಹೋತ್ಸವದ ಇಂದಿನ ಕಾರ್ಯಕ್ರಮ

ಡಿ.21 ರಂದು ಬೆಳಿಗ್ಗೆ 10.30ಗಂಟೆಗೆ ಕೊಟ್ಟೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಮುಖ್ಯ ಪ್ರವೇಶದ್ವಾರದಿಂದ ವಿದ್ಯಾಸಂಸ್ಥೆಯ ಆವರಣದವರೆಗೆ ಮೆರವಣಿಗೆ ಆಯೋಜಿಸಲಾಗಿದೆ. ಕಾಲೇಜಿನ ಕಾರ್ಯದರ್ಶಿ ಡಿ.ಎಸ್.ಶಿವಾಜಿ ಅವರು ಉದ್ಘಾಟಿಸಲಿದ್ದಾರೆ.

ಮೆರವಣಿಗೆಯಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು ಮತ್ತು ವಿವಿಧ ಸಂಘ ಸಂಸ್ಥೆಗಳು ಹಾಗೂ ವಿದ್ಯಾರ್ಥಿ ಪೋಷಕರು, ಸಾರ್ವಜನಿಕರು, ಕಲಾತಂಡಗಳು ಮತ್ತಿತರರು ಭಾಗವಹಿಸಲಿದ್ದಾರೆ.ಬೆಳಿಗ್ಗೆ 11.30ಗಂಟೆಗೆ ಕಾಲೇಜಿನ ಪ್ರಾಂಶುಪಾಲರಾದ ಪಿ.ಎಂ.ದೇವಕ್ಕಿ ಅವರು ಧ್ವಜಾರೋಹಣ ನೆರವೇರಿಸುವುದರೊಂದಿಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ನಂತರ ಮಧ್ಯಾಹ್ನ 2.30ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಶಾಸಕರಾದ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯರಾದ ಎಂ.ಸಿ. ನಾಣಯ್ಯ, ಟಿ. ಜಾನ್, ಹೈಕೋರ್ಟ್‌ ವಕೀಲ ಎ.ಕೆ. ಸುಬ್ಬಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯೆ ಬಬ್ಬಿರ ಸರಸ್ವತಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಟಿ. ಸ್ವಾಮಿ, ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಪಿ.ಎಸ್. ಸುಬ್ಬಯ್ಯ, ತಾಲ್ಲೂಕು ಪಂಚಾಯಿತಿ ಸದಸ್ಯೆ ಅನಿತಾ ದಿನೇಶ್‌, ಬೇಂಗೂರು  ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಶೀಲಾ ವಸಂತ್‌, ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಸುಜಾ ಕುಶಾಲಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕಾಂತರಾಜು, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶರಾದ ಮಂಗಳ ನಾಯಕ್‌, ನಿವೃತ್ತ ಪ್ರಾಂಶುಪಾಲರಾದ ಎಚ್‌.ಆರ್‌. ಬಸಪ್ಪ, ಕೆ.ವಿ. ಆಚಾರ್‌, ಪಿ.ರಾಜಗೋಪಾಲ ಶಾಸ್ತರೀ, ಕೆ.ಎಂ. ದೊಡ್ಡನಿಂಗಣ್ಣ, ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಸಂಜೆ 6 ಗಂಟೆಗೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಪ್ರತಿಕ್ರಿಯಿಸಿ (+)