ಗುರುವಾರ , ಜನವರಿ 23, 2020
20 °C

ಅರ್ಜಿ ಬರೆಯುವ ಕಾಯಕದಲ್ಲಿ ಅಂಗವಿಕಲರು

ಬಸವರಾಜ ಮರಳಿಹಳ್ಳಿ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ಅಂಗವೈಕಲ್ಯದ ನಡು­ವೆಯೂ ಅನೇಕರು ಸಾಧನೆ ಮಾಡಿ­ದ್ದಾರೆ ಹಾಗೂ ಜೀವನ ನಡೆಸುತ್ತಿದ್ದಾರೆ. ಆದರೆ ಇನ್ನು ಕೆಲವರು ಅಂಗವೈಕ­ಲ್ಯವನ್ನೇ ಅಸ್ತ್ರವನ್ನಾಗಿಸಿಕೊಂಡು ಭಿಕ್ಷೆ ಬೇಡುವುದರಲ್ಲಿ ನಿರತರಾಗಿದ್ದಾರೆ. ಆದರೆ ನಗರದ ತಹಶೀಲ್ದಾರ್‌ ಕಚೇರಿ ಆವರಣ­ದಲ್ಲಿರುವ ನಾಲ್ವರು ಅಂಗವಿ­ಕಲರು ಸ್ವಾವಲಂಬಿ­ಯಾಗಿ ಜೀವನ ನಡೆಸುತ್ತಾ ಇತರರಿಗೆ ಮಾದರಿ­ಯಾಗಿದ್ದಾರೆ.ಹೌದು ! ಮಳೆ ಇರಲಿ, ಬಿಸಿಲಿರಲಿ, ಕಳೆದ 15–20 ವರ್ಷಗಳಿಂದ ಅರ್ಜಿ ಬರೆಯುವ ಕಾರ್ಯದಲ್ಲಿ ನಿರತರಾಗಿ­ರುವ ನಾಲ್ವರು ಅಂಗವಿಕಲರು ಸ್ವಾವಲಂಭಿ ಜೀನವಕ್ಕೆ ಭಿನ್ನ ಮಾರ್ಗ ತುಳಿದಿದ್ದಾರೆ. ಬಿ.ಬಸವರಾಜಪ್ಪ, ಬಿ.ಯುಸೂಫ್‌, ತಿಪ್ಪಯ್ಯ ಹಾಗೂ ಶಮೀನಾ ಕೌಸರ್‌ ಅವರೆ ಸಾರ್ವ­ಜನಿಕರಿಗೆ ಅರ್ಜಿ ಬರೆದುಕೊಡುತ್ತಾ ಜೀವನ ಸಾಗಿಸುತ್ತಿರುವ ಅಂಗವಿಕಲರು. ಇವರು ತಮ್ಮ ಅಂಗವೈಕಲ್ಯವನ್ನು ಅಸಹಾಯಕತೆ ಎಂದು ಯಾವಾಗಲೂ ಅಂದು­ಕೊಂಡಿಲ್ಲ. ಬದಲಾಗಿ ಜೀವನ ನಡೆಸಲು ಇದೊಂದು ಮೆಟ್ಟಿಲು ಎಂದು ತಿಳಿದುಕೊಂಡಿದ್ದಾರೆ.ಪ್ರತಿ ದಿನ ಬೆಳಿಗ್ಗೆ 10ಗಂಟೆಗೆ ತಹಶೀಲ್ದಾರ್‌ ಕಚೇರಿಗೆ ಆವರಣಕ್ಕೆ ಬರುತ್ತಾರೆ. ಆವರಣದಲ್ಲಿರುವ ಮರಗಳ ನೆರಳಲ್ಲಿ ತಮ್ಮ ತ್ರಿಚಕ್ರ ವಾಹನಗಳನ್ನು ನಿಲ್ಲಿಸಿ ಅದರಲ್ಲೆ ಕುಳಿತು ತಮ್ಮ ಕೆಲಸವನ್ನು ಆರಂಭಿಸುತ್ತಾರೆ. ಗ್ರಾಮೀಣ ಪ್ರದೇಶದಿಂದ ತಹಶೀಲ್ದಾರ್‌ ಕಚೇರಿಗೆ ಬರುವ ಸಾರ್ವಜನಿಕರಿಗೆ ಮೊದಲು ತಿಳಿವಳಿಕೆ ನೀಡು­ವುದು ಇವರ ಕೆಲಸ. ನಂತರ ಅಗತ್ಯವಿರುವ ಸಾರ್ವ­ಜನಿಕರಿಗೆ ಅರ್ಜಿಗಳನ್ನು ಬರೆದು­ಕೊಡುತ್ತಾರೆ. ರಹವಾಸಿ, ಮ್ಯುಟಿಲೇಶನ್‌, ವಿಧವಾ ವೇತನ, ಜಮೀನಿನ ನಕ್ಷೆ ಸೇರಿದಂತೆ ಮತ್ತಿತರ ವಿಷಯಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಬರೆದುಕೊಡುತ್ತಾರೆ.ಇವರು ಮಾಡುವ ಈ ಕಾರ್ಯಕ್ಕೆ ಪ್ರತಿಯಾಗಿ ಸಾರ್ವಜನಿಕರಿಂದ ₨ 20–30 ಪಡೆಯುತ್ತಾರೆ. ಹೀಗೆ ಅರ್ಜಿ ಬರೆಯುವ ಮೂಲಕ ದಿನಕ್ಕೆ ₨ 150ರಿಂದ 200 ಸಂಪಾದಿಸುತ್ತಿದ್ದು, ಇದೇ ಇವರ ಜೀನವಕ್ಕೆ ಆಧಾರ. ಅದು ಸರ್ಕಾರಿ ರಜೆ ಬಂದರೆ ಈ ಆದಾಯವೂ ಇರುವುದಿಲ್ಲ. ಇದರಿಂದ ತಹಶೀಲ್ದಾರ್‌ ಕಚೇರಿಗೆ ಬರುವ ಗ್ರಾಮೀಣ ಪ್ರದೇಶದ ಅನಕ್ಷರಸ್ಥರಿಗೂ ಅನುಕೂಲವಾಗಲಿದ್ದು, ಇವರಿಗೂ ಒಂದು ದುಡಿಮೆಯಾಗುತ್ತದೆ.ಸ್ವಾವಲಂಬಿಯಾಗಿ ಬದುಕಲು ಅರ್ಜಿ ಬರೆಯುವ ಕಾಯಕದಲ್ಲಿ ಈ ಅಂಗವಿಕಲರು ನಿರತರಾಗಿದ್ದಾರೆ. ನ್ಯಾಯಯುತ ದುಡಿಮೆಯಿಂದ ಬರುವ ಅಲ್ಪ ಆದಾಯದಲ್ಲಿಯೇ ತಮ್ಮ ಜೀವನವನ್ನು ರೂಪಿಸಿಕೊಂಡಿದ್ದಾರೆ.ಈ ಕಾಯಕದಲ್ಲಿ ನಿರತರಾಗಿರುವ ಅಂಗವಿಕಲರು ಕೇವಲ ಅರ್ಜಿ ಬರೆಯು­ವುದಕ್ಕೆ ಮಾತ್ರ ಸೀಮಿತರಾಗಿದ್ದಾರೆಯೇ ಹೊರತು, ಕಚೇರಿ ಕೆಲಸಗಳನ್ನು ಮಾಡಿಸಿಕೊಡುವ ಏಜೆಂಟರಲ್ಲ. ಅಲ್ಲದೆ ಕೆಲಸ ಮಾಡಿಸಿಕೊಡುತ್ತೇವೆ ಎಂದು ಹೇಳಿಕೊಂಡು ಯಾರ ಬಳಿಯೂ ಹಣ ಪಡೆಯುವುದಿಲ್ಲ. ಈ ಕಾರಣದಿಂದ ಅರ್ಜಿ ಬರೆಯುವ ಕಾಯಕದಲ್ಲಿ ನಿರತ­ರಾ­ಗಿರುವ ಅಂಗವಿಕಲರಿಗೆ ತಹಶೀ­ಲ್ದಾರ್‌ ಕಚೇರಿಯ ಅಧಿಕಾರಿಗಳಿಂದ ಯಾವ ತೊಂದರೆಯೂ ಎದುರಾಗಿಲ್ಲ.ಕಳೆದ 15 ವರ್ಷಗಳಿಂದ ಕಚೇರಿ ಆವರಣದಲ್ಲಿ ಬಿ.ಬಸವರಾಜಪ್ಪ ಅರ್ಜಿ ಸಾರ್ವಜನಿಕರಿಗೆ ಬರೆದು ಕೊಡುತ್ತಿದ್ದಾರೆ. ಚಿಕೂನ್‌ಗುನ್ಯಾ, ಮಲೇರಿಯಾ ಹಾಗೂ ಡೆಂಗೆ ಜ್ವರ ಕಾಯಿಲೆ ಏಕಕಾಲಕ್ಕೆ ಆವರಿಸಿದ್ದರಿಂದ ಅಂಗವೈಕಲ್ಯ ಇವರ ಹೆಗಲೇರಿತು. ಅಲ್ಲಿಯವರೆಗೂ ಚೆನ್ನಾಗಿಯೆ ಇದ್ದ ಬಸವರಾಜಪ್ಪ ಅವರು ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ನಂತರ ಕಾಯಿಲೆಯಿಂದ ಬಂದ ಅಂಗವಿಕಲತೆಯಿಂದ ಆರ್ಥಿಕವಾಗಿ ಕಂಗಾಲಾದ ಇವರು ಆಯ್ದುಕೊಂಡಿದ್ದು, ಅರ್ಜಿ ಬರೆಯುವ ವೃತ್ತಿಯನ್ನು. ಬಸವರಾಜಪ್ಪ ಅವರು ತಮ್ಮ ಆದಾಯದಿಂದಲೇ ತಮ್ಮ ಮೂರು ಮಕ್ಕಳ ವಿದ್ಯಾಭ್ಯಾಸ ಮಾಡಿಸಿದ್ದಾರೆ. ಮೊದಲನೆ ಮಗ ಬಿ.ಕಾಂ ಮುಗಿಸಿ ಸ್ಪರ್ಧಾತ್ಮ ಪರೀಕ್ಷೆ ಬರೆಯಲು ತಯಾರಿ ನಡೆಸಿದ್ದಾರೆ.ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಬಸವರಾಜಪ್ಪ, ‘ಮಧ್ಯೆದಲ್ಲಿ ಬಂದ ಅಂಗವೈಕಲ್ಯದಿಂದ ಚಿಂತಾಕ್ರಾಂತನಾಗಿ ಮನೆಯಲ್ಲಿ ಕುಳಿತಿದ್ದೆ. ಭಿಕ್ಷೆ ಬೇಡಲು ಮನಸ್ಸು ಒಪ್ಪಲಿಲ್ಲ. ನಂತರ ಅರ್ಜಿ ಬರೆಯುವ ಕಾಯಕವನ್ನು ಆಯ್ದುಕೊಂಡು ಇಲ್ಲಿಗೆ ಬಂದೆ. ಇದರಿಂದ ಬರುವ ಅಲ್ಪ ಆದಾಯದಿಂದ ಜೀವನ ನಡೆಸುತ್ತಿದ್ದೇವೆ. ನಮಗೆ ಇಲ್ಲಿ ಯಾವ ಅಧಿಕಾರಿಗಳು ತೊಂದರೆ ನೀಡುವುದಿಲ್ಲ. ಎಲ್ಲರೂ ಪ್ರೀತಿಯಿಂದ ಕಾಣುತ್ತಾರೆ’ ಎಂದು ಹೇಳುತ್ತಾರೆ.ಅಂಗವೈಕಲ್ಯವನ್ನೇ ಅಸಹಾಯಕತೆ ಎಂದುಕೊಂಡು ಭಿಕ್ಷೆ ಬೇಡುವ ಹಲವರಿಗಿಂತ ಹೀಗೆ ಸ್ವಾವಲಂಬಿಯಾಗಿ ಬದುಕುವ ಇವರು ಮಾದರಿ ಅಲ್ಲವೆ?

ಪ್ರತಿಕ್ರಿಯಿಸಿ (+)