ಭಾನುವಾರ, ಏಪ್ರಿಲ್ 18, 2021
23 °C

ಅಲೆಮಾರಿ ಸಂಚಾರಿಯ ಅಂತರಂಗ ಯಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾರಾನಗರದಲ್ಲಿನ ರಾಮಕೃಷ್ಣ ಮಠ ನಿಧಾನವಾಗಿ ಒಂದು ಸ್ವರೂಪವನ್ನು ಪಡೆಯುತ್ತಿದ್ದ ದಿನಗಳು ಅವು. ಸೋದರ ಸನ್ಯಾಸಿಗಳ ಒಂದು ತಂಡ ಬೇರು ಬಿಡಲು ಆರಂಭಿಸಿತ್ತು; ಮೊದಲ ತಂಡದ ಸನ್ಯಾಸಿಗಳು ನಿಜವಾದ ಸನ್ಯಾಸ ಜೀವನದ ಪ್ರಯೋಗಕ್ಕೆ ಇಳಿದಿದ್ದರು.

 

ಬಾರಾನಗರ ಹಾಗೂ ಕೋಲ್ಕತ್ತ ನಡುವೆ ಸಂಚಾರ ನಿರತರಾಗಿದ್ದ ನರೇಂದ್ರನಾಥರು, ಸನ್ಯಾಸಿಗಳ ತಂಡವನ್ನು ಒಗ್ಗೂಡಿಸಲು ಹೆಚ್ಚಿನ ಸಮಯ ವಿನಿಯೋಗಿಸುತ್ತಿದ್ದರು. ಕೆಲ ದಿನಗಳ ಮಟ್ಟಿಗೆ ಅಲೆಮಾರಿ ಜೀವನ ಸಾಗಿಸಲೆಂದು ಬಹುತೇಕ ಸನ್ಯಾಸಿಗಳು ಮಠವನ್ನು ತೊರೆದು ಹೋಗಿದ್ದರು. ಕೆಲವು ಸನ್ಯಾಸಿಗಳ ಒಂದು ತಂಡ ಮಾತ್ರ ಮಠದಲ್ಲಿಯೇ ಉಳಿದಿತ್ತು. ಜುಲೈ 1890ರಿಂದ ಸುಮಾರು ಏಳು ವರ್ಷಗಳ ಕಾಲ, ಸ್ವತಃ ನರೇಂದ್ರರು ಮಠ ಬಿಟ್ಟು ತೆರಳಿದ್ದರು.ಅಲೆಮಾರಿ ಸಂಚಾರ ಹಾಗೂ ತೀರ್ಥಯಾತ್ರೆಯು ಸನ್ಯಾಸ ಜೀವನದ ಪ್ರಮುಖ ಲಕ್ಷಣಗಳಾಗಿವೆ. ನರೇಂದ್ರರು ಕೂಡ ಇದಕ್ಕೆ ಹೊರತಾಗಿರಲಿಲ್ಲ. ಸಂಚಾರಕ್ಕಾಗಿ ಅವರು ಸದಾ ಚಡಪಡಿಸುತ್ತಿದ್ದರು. ಮಠದಲ್ಲಿ ಸೋದರ ಸನ್ಯಾಸಿಗಳ ತಂಡವನ್ನು ಬೆಳೆಸುವ ಸಂಕಲ್ಪ ಅವರದ್ದಾಗಿತ್ತಾದರೂ, ಸೋದರ ಶಿಷ್ಯರೆಡೆಗಿನ ಈ ಬಾಂಧವ್ಯ ಅವರಿಗೆ ಒಂದು ರೀತಿಯ ಬೇಡಿಯಂತೆ. ಅದು ಚಿನ್ನದ ಬೇಡಿಯೇ ಆದರೂ- ದೇವರನ್ನು ಅರಿಯುವ ತಮ್ಮ ಪ್ರಯತ್ನಕ್ಕೆ ಅಡ್ಡಿ ಎಂಬಂತೆ ಭಾಸವಾಗುತ್ತಿತ್ತು.ಈ ಚಡಪಡಿಕೆ ಅಂತಿಮವಾಗಿ ಅವರಲ್ಲಿ ಸಂಚಾರದ ದೃಢ ಸಂಕಲ್ಪ ಮೂಡಿಸಿತು. ಸನ್ಯಾಸ ಜೀವನದ ಅಜ್ಞಾನ ಹಾಗೂ ಅನಿಶ್ಚಿತ ಹಾದಿಗೆ ಧುಮುಕಲು ಅವರು ನಿಶ್ಚಯಿಸಿದರು. ತಮ್ಮ ಸೋದರ ಶಿಷ್ಯರು ಪದೇಪದೇ ಮಾಡುತ್ತಿದ್ದ ಅಲೆಮಾರಿ ಸಂಚಾರದ ಬಗ್ಗೆ ಅವರಿಗೆ ಕಾಳಜಿ ಇತ್ತಾದರೂ, ಒಮ್ಮೆ `ಎಲ್ಲರಿಗೂ ಸ್ವಯಂ ಅನುಭವಗಳಾಗಲಿ. ಅವರೆಲ್ಲಾ ಮಠವನ್ನು ತೊರೆದು ತಂತಮ್ಮ ಶಕ್ತಿ ಎಷ್ಟೆಂಬುದನ್ನು ತಿಳಿಯಲು ಪರೀಕ್ಷೆಗೆ ಒಡ್ಡಿಕೊಳ್ಳಬೇಕು.

 

ಈ ರೀತಿಯ ಹೊಸ ಜೀವನದ ಅನುಭವಗಳು ಅವರನ್ನು ಇನ್ನಷ್ಟು ದೃಢಗೊಳಿಸುವ ಜತೆಗೆ, ಸಂಪೂರ್ಣ ಭಯಮುಕ್ತರನ್ನಾಗಿ, ಅಪರಾಜಿತರನ್ನಾಗಿ ಹಾಗೂ ಆಧ್ಯಾತ್ಮಿಕವಾಗಿ ಸ್ವತಂತ್ರರನ್ನಾಗಿಸುತ್ತವೆ; ಆ ಮೂಲಕ ಅವರು ಪ್ರಚಂಡರಾಗುತ್ತಾರೆ~ ಎಂದು ಅವರು ಹೇಳಿದ್ದರು.1888ರ ಮಧ್ಯ ಭಾಗದವರೆಗೆ, ಹತ್ತಿರದ ಸ್ಥಳಗಳಿಗೆ ಕಿರು ಅವಧಿಯ ಭೇಟಿಗಳನ್ನು ಬಿಟ್ಟರೆ, ಬಾರಾನಗರ ಮಠ ಬಿಟ್ಟು ಬೇರೆಲ್ಲಿಗೂ ನರೇಂದ್ರರು ತೆರಳಲಿಲ್ಲ. ಆದರೆ 1890ರ ಜುಲೈನಲ್ಲಿ ಮಠ ತೊರೆದ ನರೇಂದ್ರರು, ಪಶ್ಚಿಮ ಜಗತ್ತಿನಲ್ಲಿ ವಿಜಯಪತಾಕೆ ಹಾರಿಸಿದ ನಂತರವಷ್ಟೇ, ಅಂದರೆ 1897ರ ಫೆಬ್ರುವರಿಯಲ್ಲಿ ವಾಪಸಾದರು.ಬಹುಶಃ ಈ ಅವಧಿಯಲ್ಲಿ ಅವರು, ಮಠ ಹಾಗೂ ಸೋದರ ಸನ್ಯಾಸಿಗಳೊಂದಿಗಿನ ತಮ್ಮ ಬಾಂಧವ್ಯದ ಬಂಧನದಿಂದ ಮುಕ್ತರಾಗಲು ಬಯಸಿದ್ದರು ಎನಿಸುತ್ತದೆ. ತಮ್ಮ ಹಾಗೂ ಮಠದ ಇತರರ ಅಂತಃಶಕ್ತಿಯ ಆಳ ಪರೀಕ್ಷಿಸಿಕೊಳ್ಳಲು ಅವರು ನಿಶ್ಚಯಿಸಿದ್ದರು. ಹೀಗೆ ಗೊತ್ತು ಗುರಿಯ ಬಗ್ಗೆ ಖಾತ್ರಿ ಇಲ್ಲದೆ, ನಿತ್ಯ ಜೀವನದ ಅನಿಶ್ಚಿತತೆಗೆ ಒಪ್ಪಿಸಿಕೊಂಡು ಬದುಕಿನ ಮತ್ತೊಂದು ಮಾರ್ಗದ ಅನುಭವಗಳನ್ನು ಅರಸುವುದಕ್ಕೆ ಮುಂದಾಗಿದ್ದು ಅವರ ಇಚ್ಛಾಶಕ್ತಿ ಎಷ್ಟು ಪ್ರಬಲ ಎಂಬುದರ ದ್ಯೋತಕ.ನಮ್ಮನ್ನು ನಾವು ಉನ್ನತ ಶಕ್ತಿಯೊಂದಕ್ಕೆ ಸಂಪೂರ್ಣವಾಗಿ ಒಪ್ಪಿಸಿಕೊಂಡಾಗ ಮಾತ್ರ `ಅನಿಶ್ಚಿತತೆಯಲ್ಲಿ ನಿಶ್ಚಿತತೆ~ಯನ್ನು ಅನುಭವಿಸಲು ಸಾಧ್ಯ. ನರೇಂದ್ರರು ಇದನ್ನು ಖುದ್ದು ಅನುಭವಿಸಲು ನಿರ್ಧರಿಸಿದ್ದರು. ಎಲ್ಲ ಬಗೆಯ ಭಯಗಳಿಂದ ಮುಕ್ತರಾಗಲು ಅವರು ಹಾತೊರೆಯುತ್ತಿದ್ದರು. ಅಷ್ಟು ಮಾತ್ರವಲ್ಲ, ಮಠದಲ್ಲಿನ ಸೋದರ ಶಿಷ್ಯರು ಕೂಡ ಇದೇ ಜಾಡಿನಲ್ಲಿ ಸಾಗಿ ಸ್ವಾವಲಂಬಿಗಳಾಗಬೇಕು ಎಂಬುದು ಅವರ ಇರಾದೆಯಾಗಿತ್ತು.ಒಟ್ಟಾರೆ, ಅವರಿಗೆ ಒಂದೆಡೆ ನಿಸ್ವಾರ್ಥ ಸನ್ಯಾಸಿಗಳ ತಂಡವನ್ನು ಕಟ್ಟುವ ಅಗತ್ಯ ಹಾಗೂ ಇಚ್ಛೆಯಾದರೆ, ಮತ್ತೊಂದೆಡೆ, ಸ್ವಯಂ ಬೆಳವಣಿಗೆ ಮತ್ತು ವಿಕಸನದ ತಹತಹ. ಈ ಇಬ್ಬಗೆಯ ತುಯ್ದಾಟದಲ್ಲಿ ಅವರ ಅಂತರಂಗ ಅದೆಷ್ಟು ತಾಕಲಾಟ ಅನುಭವಿಸಿತ್ತು ಎಂಬುದನ್ನು ಯಾರಾದರೂ ಊಹಿಸಿಕೊಳ್ಳಬಹುದು.ಅಲೆಮಾರಿ ಸನ್ಯಾಸಿಯಾಗಿದ್ದ ವೇಳೆ, ಅವರ ತೋರುಗಾಣಿಕೆ ಬಲು ಆಕರ್ಷಕ ಹಾಗೂ ಪ್ರಭೆಯಿಂದ ಕೂಡಿದ್ದಾಗಿತ್ತು. ಅವರನ್ನು ಆ ಸಂದರ್ಭದಲ್ಲಿ ಕಂಡಿದ್ದವರ ಪ್ರಕಾರ ತುಂಬಾ ಚಲನಶೀಲವಾದ, ಘನತೆಯ ಹಾಗೂ ಆತ್ಮವಿಶ್ವಾಸದ ವ್ಯಕ್ತಿ ಅವರಾಗಿದ್ದರು. ಅವರ ಕಣ್ಣುಗಳ ಮಿಂಚು ಹಾಗೂ ಧೀರೋದಾತ್ತ ವ್ಯಕ್ತಿತ್ವದಿಂದಾಗಿ ಎಲ್ಲಿ ಹೋದರೂ ಅವರು ವಿರಾಜಮಾನರಾಗುತ್ತಿದ್ದರು (ಎದ್ದು ಕಾಣುತ್ತಿದ್ದರು).

 

ಆಗ ಅವರ ಬಳಿ ಇದ್ದುದು ಒಂದು ದಂಡ, ಒಂದು ಕಮಂಡಲು ಹಾಗೂ ಎರಡು ಪುಸ್ತಕಗಳು ಮಾತ್ರ (ಒಂದು `ಭಗವದ್ಗೀತೆ~, ಮತ್ತೊಂದು `ದಿ ಇಮಿಟೇಷನ್ ಆಫ್ ಕ್ರಿಸ್ಟ್~). ಕಾವಿ ಅರಿವೆ ತೊಟ್ಟು ಮೌನಿಯಾಗಿ ದೇಶ ಸಂಚಾರ ಮಾಡಿದರು. ಈ ಸಂಚಾರದ ಅವಧಿಯಲ್ಲಿ ನರೇಂದ್ರರು ಯಾವ ಹೆಸರನ್ನೂ ಹೊಂದಿರದೆ, ತಮ್ಮ ಹೆಸರಿನಿಂದಲೂ ಬಿಡುಗಡೆ ಪಡೆದಿದ್ದರು.ಅವರ ಈ ಏಳು ವರ್ಷಗಳ ಜೀವನಕ್ಕೆ ಸಂಬಂಧಿಸಿದ ಹಲವಾರು ಸಂಗತಿಗಳ ಬಗ್ಗೆ ಯಾವ ಉಲ್ಲೇಖವಾಗಲೀ, ದಾಖಲೆಯಾಗಲೀ ಇಲ್ಲ. ನರೇಂದ್ರರು ಕೂಡ ಆ ದಿನಗಳಲ್ಲಿ ತಮಗಾದ ಅನುಭವಗಳ ಬಗ್ಗೆ ಯಾವ ಲೇಖನವನ್ನಾಗಲೀ, ಟಿಪ್ಪಣಿಯನ್ನಾಗಲೀ ಮಾಡುವ ಗೋಜಿಗೆ ಹೋಗಲಿಲ್ಲ. ಆನಂತರದ ವರ್ಷಗಳಲ್ಲಿ ನೀಡಿದ ಉಪನ್ಯಾಸಗಳಲ್ಲಿ ಎಲ್ಲೋ ಒಮ್ಮಮ್ಮೆ ಈ ದೇಶ ಸಂಚಾರ ಅವಧಿಯ ಕುರಿತು ಅಸ್ಪಷ್ಟವಾಗಿ ಪ್ರಸ್ತಾಪಿಸುತ್ತಿದ್ದರಷ್ಟೆ. ಈ ಸಂದರ್ಭದಲ್ಲಿ ಅವರ ಒಡನಾಟಕ್ಕೆ ಬಂದ ಇತರ ಕೆಲವು ಸನ್ಯಾಸಿಗಳು ಹಾಗೂ ಭೇಟಿಯಾದ ಕೆಲವು ಜನರು, ಆ ವೇಳೆ ನಡೆದ ಸಂವಾದ, ಅದರಿಂದ ತಮಗಾದ ಪ್ರೇರಣೆ ಇತ್ಯಾದಿಗಳ ಬಗ್ಗೆ ಬರೆದಿರುವ ಅತ್ಯಲ್ಪ ಸಂಗತಿಗಳು ಮಾತ್ರ ಲಭ್ಯ ಇವೆ. ಇದೇ ವೇಳೆ ನರೇಂದ್ರರು, ಸೋದರ ಶಿಷ್ಯರು ಹಾಗೂ ಇನ್ನಿತರ ಕೆಲವರಿಗೆ ಬರೆದ ಕೆಲ ಪತ್ರಗಳು ಇವೆ.ಈ ಏಳು ವರ್ಷಗಳ ಕಾಲ ನರೇಂದ್ರರು ತಮ್ಮ ಅಧ್ಯಯನ ಹಾಗೂ ಬೌದ್ಧಿಕ ಪ್ರಭೆಯನ್ನೆಲ್ಲಾ ಮರೆಮಾಚಿ, ಸಾಮಾನ್ಯ ಸನ್ಯಾಸಿಯಂತೆ ಅಲೆಮಾರಿಯಾಗಿದ್ದರು. ಅವರಿಗೆ ಇಂಗ್ಲಿಷ್ ಮೇಲೆ ಎಷ್ಟು ಹಿಡಿತವಿತ್ತು ಎಂಬುದು ಅವರು ಮಾತನಾಡದ ಹೊರತು ಗೊತ್ತೇ ಆಗುತ್ತಿರಲಿಲ್ಲ. ಅಗೋಚರತೆಯೆಂಬುದು ತಮ್ಮ ಪಾಲಿಗೆ ಏನನ್ನು ನೀಡುತ್ತದೋ ಅದನ್ನಷ್ಟೇ ಸ್ವೀಕರಿಸಬೇಕೆಂದು ಆ ದಿನಗಳಲ್ಲಿ ಅವರು ನಿರ್ಧರಿಸಿದ್ದರು.ಮನೆ ಮನೆಗೆ ತೆರಳಿ ಆಹಾರ ಯಾಚಿಸಿದ್ದರು. ಆಗ ಅತಿ ದೀರ್ಘವೆಂದರೆ, ಐದು ದಿನಗಳ ಕಾಲ ತಮಗೆ ಯಾವ ಆಹಾರವೂ ಲಭ್ಯವಾಗಿರಲಿಲ್ಲ ಎಂಬುದನ್ನು ಅವರೇ ಒಮ್ಮೆ ತಿಳಿಸಿದ್ದರು.ಈ ರಾಷ್ಟ್ರ ಸಂಚಾರದ ವೇಳೆ ಅವರು ಕಾಡಿನಲ್ಲೋ, ದೇವಾಲಯದಲ್ಲೋ ಅಥವಾ ಬೀದಿಬದಿಯ ಶಿಥಿಲ ವಿಶ್ರಾಂತಿ ಗೃಹದಲ್ಲೋ ತಂಗುತ್ತಿದ್ದರು. ಆಗ ಯಾವುದೇ ಹಣ ಮುಟ್ಟದಿರುವ ಸಂಕಲ್ಪ ಮಾಡಿದ್ದರು. ಬಹುತೇಕ ಪ್ರದೇಶವನ್ನು ಕಾಲ್ನಡಿಗೆಯಲ್ಲೇ ಕ್ರಮಿಸಿದ್ದರು.ಕೆಲವೊಮ್ಮೆ ಅವರ ಭಕ್ತರು ಕೊಂಡು ತರುತ್ತಿದ್ದ ರೈಲು ಟಿಕೆಟ್ ಬಳಸಿ ಪ್ರಯಾಣಿಸುತ್ತಿದ್ದರು. ಈ ಅಲೆದಾಟ ನರೇಂದ್ರರಿಗೆ ತಮ್ಮ ಅಂತರಂಗ ಶೋಧಿಸಿಕೊಳ್ಳುವ ಮಾರ್ಗವಾಗುವುದರ ಜತೆಗೆ, ಭಾರತ ಮಾತೆಯನ್ನು ಹಾಗೂ ಆಕೆಯ ಸಮಸ್ಯೆಗಳನ್ನು ಖುದ್ದಾಗಿ ಅರ್ಥೈಸಿಕೊಳ್ಳುವ ಹಾದಿಯೂ ಆಯಿತು.ತಿದ್ದುಪಡಿ

ಜುಲೈ 5ರ ಸಂಚಿಕೆಯಲ್ಲಿ ಪ್ರಕಟವಾದ ಅಂಕಣದಲ್ಲಿ `1984ರ ಜೂನ್‌ನಲ್ಲಿ ಮೈಸೂರು ಮಹಾರಾಜರಿಗೆ ಬರೆದಿರುವ ಪತ್ರದಲ್ಲಿ ನಾವು ಕಾಣಬಹುದು~ ಎಂಬ ವಾಕ್ಯದಲ್ಲಿ ಇಸ್ವಿ 1884 ಎಂದಿರಬೇಕಾಗಿತ್ತು. ಕಣ್ತಪ್ಪಿನಿಂದ ಸಂಭವಿಸಿದ ಈ ತಪ್ಪಿಗಾಗಿ ವಿಷಾದಿಸುತ್ತೇವೆ.

 -ಸಂ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.