ಶುಕ್ರವಾರ, ಮೇ 14, 2021
31 °C

ಅವಳಿ ನಗರದಲ್ಲಿ ಎಲ್ಲೆಲ್ಲೂ ವಾಯುಪುತ್ರನದೇ ಧ್ಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ನಗರವೂ ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳ ಹನುಮನ ದೇವಸ್ಥಾನಗಳಲ್ಲಿ ಶುಕ್ರವಾರ ಹನುಮ ಜಯಂತಿಯನ್ನು ಅದ್ದೂರಿಯಿಂದ ಆಚರಿಸಲಾಯಿತು. ಪ್ರತಿ ದೇವಾಲಯದಲ್ಲಿ ವಾಯುಪುತ್ರನಿಗೆ ತೊಟ್ಟಿಲೋತ್ಸವ ಮಾಡಿ ಸಂಭ್ರಮಿಸಲಾಯಿತು. ಹಲವೆಡೆ ವಿಜೃಂಭಣೆಯಿಂದ ರಥೋತ್ಸವ ನಡೆದರೆ, ಇನ್ನು ಕೆಲವೆಡೆ ಸಾಮೂಹಿಕ ವಿವಾಹ ಸಮಾರಂಭವನ್ನೂ ಏರ್ಪಡಿಸಲಾಗಿತ್ತು.ಭಂಡಿವಾಡ, ಬುಡರಸಿಂಗಿ, ನಾಗಶೆಟ್ಟಿಕೊಪ್ಪ, ಕೇಶ್ವಾಪುರ, ಹೊಸೂರು ಹಾಗೂ ಗದಗ ರಸ್ತೆ ಒಂಟಿ ಹನುಮಪ್ಪನ ದೇವಸ್ಥಾನಗಳಲ್ಲಿ ಬೆಳಗಿನಿಂದಲೇ ವಿಶೇಷ ಕಾರ್ಯಕ್ರಮ ನಡೆದವು. ಭಂಡಿವಾಡ, ನಾಗಶೆಟ್ಟಿಕೊಪ್ಪ ಮತ್ತು ಹೊಸೂರಿನ ದೇವಸ್ಥಾನಗಳಿಂದ ರಥೋತ್ಸವಗಳೂ ಜರುಗಿದವು. ಗದಗ ರಸ್ತೆಯ ಹೊಲಗಳ ಮಧ್ಯದಲ್ಲಿರುವ ಒಂಟಿ ಹನುಮನ ದೇವಸ್ಥಾನದಲ್ಲಿ ಶುಕ್ರವಾರ ದಿನವಿಡೀ ಜನವೋ ಜನ. ನೂರಾರು ಜನ ಪಾದಯಾತ್ರೆಯ ಮೂಲಕವೇ ದೇವಾಲಯಕ್ಕೆ ಆಗಮಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಅಲ್ಲೊಂದು ಜಾತ್ರೆಯೇ ನೆರೆದಿತ್ತು.ಬಹುತೇಕ ಎಲ್ಲ ದೇವಾಲಯಗಳಲ್ಲಿ ವಾಯುಪುತ್ರನನ್ನು ತೊಟ್ಟಿಲಿಗೆ ಹಾಕಿ ನಾಮಕರಣ ಮಾಡುವ ಸಂಪ್ರದಾಯ ಆಚರಿಸಲಾಯಿತು. ಕುಂಕುಮ ಪೂಜೆಯಿಂದ ಕಂಗೊಳಿಸುತ್ತಿದ್ದ ಮಾರುತಿ ಮೂರ್ತಿಗಳನ್ನು ಕಂಡು ಭಕ್ತರೆಲ್ಲ ಭಾವ ಪರವಶರಾಗುತ್ತಿದ್ದರು.ಆಧ್ಯಾಪಕನಗರದಲ್ಲಿ ಉಪಕಾರಾಗೃಹದ ಬಳಿಯಿರುವ ಹನುಮನ ದೇವಸ್ಥಾನದಲ್ಲಿ ಬೆಳಗಿನಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ತೊಟ್ಟಿಲೋತ್ಸವದ ಬಳಿಕ ಉಚಿತ ಸಾಮೂಹಿಕ ವಿವಾಹ ಸಮಾರಂಭವನ್ನೂ ಏರ್ಪಡಿಸಲಾಗಿತ್ತು. ಮಧ್ಯಾಹ್ನ ಬಂದ ಭಕ್ತಾದಿಗಳಿಗೆಲ್ಲ ಅನ್ನ ಸಂತರ್ಪಣೆ ಮಾಡಲಾಯಿತು.ಮಾರುಕಟ್ಟೆ ಪ್ರದೇಶದ ಇಟಗಿ ಮಾರುತಿಗಲ್ಲಿ ದೇವಸ್ಥಾನದಲ್ಲೂ ಹನುಮನ ತೊಟ್ಟಿಲೋತ್ಸವವನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು. ಬೆಳಿಗ್ಗೆ ಆನಂದಾಚಾರ್ಯ ಆಲೂರು ಅವರ ನೇತೃತ್ವದಲ್ಲಿ ದೇವಾಲಯದಲ್ಲೇ ವಿಶೇಷ ಹೋಮ ಮಾಡಲಾಯಿತು. ಭಕ್ತರಿಗೆಲ್ಲ ಪಾನಕ-ಕೋಸಂಬರಿಯ ಸಮಾರಾಧನೆ ಕಾಯುತ್ತಿತ್ತು.ಬಸವೇಶ್ವರನಗರದ ಪ್ರಸನ್ನ ಕಾಲೊನಿ ಮಾರುತಿ ದೇವಸ್ಥಾನದಲ್ಲಿ ಸೇವಾ ಟ್ರಸ್ಟ್‌ನಿಂದ ಸಂಜೆ ಭಕ್ತಿ ಸಂಗೀತ ಸೇವೆ ನಡೆಯಿತು. ಹುಬ್ಬಳ್ಳಿ ತಾಲ್ಲೂಕಿನ ಭಂಡಿವಾಡದಲ್ಲಿ ಮಾರುತಿ ದೇವಸ್ಥಾನ ಟ್ರಸ್ಟ್ ಕಮಿಟಿಯಿಂದ ಮಹಾರಥೋತ್ಸವ ನಡೆಯಿತು. ಸಾವಿರಾರು ಜನ ಉತ್ಸವದಲ್ಲಿ ಭಾಗವಹಿಸಿದ್ದರು. ರಾತ್ರಿ ನಡೆದ ಶಿವಾನುಭವಗೋಷ್ಠಿ ನೇತೃತ್ವವನ್ನು ಗುರುಸಿದ್ದೇಶ್ವರ ಶಿವಾಚಾರ್ಯರು ವಹಿಸಿದ್ದರು. ಶನಿವಾರ ಓಕುಳಿಯಿದ್ದರೆ, ಭಾನುವಾರ ಕಡುಬಿನ ಕಾಳಗ ನಡೆಯಲಿದೆ. ಐದು ದಿನಗಳ ಕಾಲ ಬಯಲು ಕುಸ್ತಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.ಗೋಕುಲ ರಸ್ತೆ ರಾಧಾಕೃಷ್ಣನಗರದ ಮಾರುತಿ ದೇವಸ್ಥಾನದಲ್ಲಿ ಅಭಿಷೇಕ, ಅಲಂಕಾರ ಸೇವೆ ನಡೆಯಿತು. ಕಾಲೊನಿಯಲ್ಲಿ ಪಲ್ಲಕ್ಕಿ ಉತ್ಸವ ಪ್ರದಕ್ಷಿಣೆ ಹಾಕಿತು. ಹೊಸೂರಿನ ಮಾರುತಿ ಸೇವಾ ಸಮಿತಿಯಿಂದ ರಾಮಚಂದ್ರ ಇಬ್ರಾಹಿಂಪುರ ಅವರಿಂದ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಗಲ್ಲಿ-ಗಲ್ಲಿಗಳಲ್ಲಿರುವ ದೇವಾಲಯಗಳಲ್ಲಿ ಹನುಮಾನ್ ಧ್ಯಾನವೇ ತುಂಬಿಹೋಗಿತ್ತು. ಕೆಲವು ದೇವಾಲಯಗಳಿಂದ ಬೆಳಿಗ್ಗೆಯೇ ಮಾರುತಿ ದೇವರ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.ಕಾಟನ್ ಮಾರ್ಕೆಟ್‌ನ ಹನುಮಾನ್ ಮಂದಿರದಲ್ಲೂ ವಿಶೇಷ ಪೂಜೆ ನಡೆಯಿತು. ಹೋಮ-ಹವನಗಳೂ ಜರುಗಿದವು. ಮಧ್ಯಾಹ್ನ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಟ್ರಸ್ಟ್ ಅಧ್ಯಕ್ಷ ರಮೇಶ ಭಾಪನಾ, ಅಜ್ಜಪ್ಪ ಬೆಂಡಿಗೇರಿ, ಮಂಜುನಾಥ ಮುದರೆಡ್ಡಿ, ಭೀಮಣ್ಣಾ ವಾಲಿಕಾರ, ಈರಣ್ಣ ಮಳಗಿ, ಬಸವರಾಜ ಗಾಣಿಗೇರ, ಸುನಿಲ್ ಯಲಬುರ್ಗಿ, ಪ್ರಕಾಶ್ ಜಿಗಳೂರ ಮತ್ತಿತರರು ಪಾಲ್ಗೊಂಡಿದ್ದರು.ಧಾರವಾಡದಲ್ಲಿ ಹನುಮ ಜಯಂತಿ ಆಚರಣೆ

ಧಾರವಾಡ: ಹನುಮ ಜಯಂತಿ ಅಂಗವಾಗಿ ಭಕ್ತರು ಬೆಳಿಗ್ಗೆಯಿಂದಲೇ ದೇವಸ್ಥಾನಗಳಲ್ಲಿ ಹನುಮಂತನ ದರ್ಶನಕ್ಕೆ ಕಾದಿದ್ದರು. ಲೈನ್ ಬಜಾರ್‌ನಲ್ಲಿರುವ ಹನುಮಂತ ದೇವರ ದೇವಸ್ಥಾನ ಹಾಗೂ ನುಗ್ಗಿಕೇರಿ ದೇವಸ್ಥಾನಗಳಲ್ಲಂತೂ ದೇವಸ್ಥಾನದ ಅರ್ಚಕರಿಗೆ ಬಿಡುವಿರಲಿಲ್ಲ.ರೈತರು ನಸುಕಿನಲ್ಲಿಯೇ ಎತ್ತುಗಳ ಮೈತೊಳೆದು ಬಣ್ಣದಿಂದ ಸಿಂಗರಿಸಿ ಚಕ್ಕಡಿ ಹೂಡಿಕೊಂಡು ಹೋಗಿ ನೀರಿನಿಂದ ಹೊಂಡ ತುಂಬಿಸಿದರು.ಹೊಸಯಲ್ಲಾಪುರದ ಹನುಮಂತ ದೇವಸ್ಥಾನ:
ಇಲ್ಲಿ ಹನುಮಂತ ದೇವರಿಗೆ 5 ಹಾಗೂ 10 ರೂಪಾಯಿ ನೋಟುಗಳು ಒಳಗೊಂಡ ಸುಮಾರು 500 ರೂಪಾಯಿಗಳಿಂದ ಸಿಂಗರಿಸಿ ವಿಶೇಷ ಪೂಜೆ ಮಾಡಲಾಯಿತು.

ಲೈನ್ ಬಜಾರ ದೇವಸ್ಥಾನದ ವರದಿ: ವಿಶ್ವಸ್ಥ ಮಂಡಳಿಯವರು ಹನುಮ ಜಯಂತಿ ಹಾಗೂ ರಥೋತ್ಸವದ ಅಂಗವಾಗಿ ಗಣ್ಯರಿಗೆ ಹಾಗೂ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಣಾ ಸಮಾಂರಂಭ ಆಯೋಜಿಸಿ ದ್ದರು.

ಡಾ. ಎಸ್.ಎಸ್.ಬದ್ರಾಪುರ ಅಧ್ಯಕ್ಷತೆ ವಹಿಸಿ ಮಾತನಾಡಿ, 1950ರ ದಶಕದಿಂದಲೂ ಲೈನ್ ಬಜಾರದಲ್ಲಿ ಮಾರುತಿ ದೇವರನ್ನು ಜನರು ಆರಾಧಿಸುತ್ತಾ ಬಂದಿದ್ದಾರೆ. ಇಂಥಹ ಕಾರ್ಯಕ್ರಮದಲ್ಲಿ ಉತ್ತಮ ವಿದ್ಯಾರ್ಥಿಗಳನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ಹಾಗೂ ನಾಟಕ, ಸಂಗೀತ ಮತ್ತು ಪ್ರವಚನದ ಮೂಲಕ ನಿರಂತರವಾದ ಧಾರ್ಮಿಕ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.ವಿಶ್ವಸ್ಥ ಮಂಡಳಿಯ ಅಧ್ಯಕ್ಷ ಎಸ್.ಬಿ.ಪವಾರ, ದೇವಪ್ಪಾ ಸುಣಗಾರ, ಎಸ್.ಬಿ.ಮಲ್ಲಣ್ಣವರ, ಎಸ್.ಬಿ.ಸುಣಗಾರ, ವೈ.ಬಿ.ದಾಸನಕೊಪ್ಪ, ಎಸ್.ಬಿ.ಮಡಿವಾಳರ, ಚಂಪಾಬಾಯಿ ಜಬಡೆ, ಮಹಾದೇವಪ್ಪ ದೊಡವಾಡ, ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ವೀಣಾ ಬಡಿಗೇರ, ಡಾ. ಮಂಜುನಾಥ, ಡಾ. ದೇಸಾಯಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಡಾ. ಎಸ್.ಕೆ.ಮೇಲಕಾ ನಿರೂಪಿಸಿದರು. ಶ್ರೀಕಾಂತ ದೇವಗಿರಿ ವಂದಿಸಿದರು. ವಿದ್ಯಾ ಪತ್ತಾರ ಮತ್ತು ಸಂಗಡಿಗರು ಪ್ರಾರ್ಥಿಸಿದರು.ಉಪ್ಪಿನ ಬೆಟಗೇರಿ

ಧಾರವಾಡ: ತಾಲ್ಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಹನುಮ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು. ರೈತರು ಚಕ್ಕಡಿಗಳನ್ನು ಹೂಡಿಕೊಂಡು ಕೆರೆ, ಬಾವಿಗಳಿಂದ ನೀರು ತಂದು ದೇವಾಲಯದಲ್ಲಿರುವ ನೀರಿನ ಹೊಂಡವನ್ನು ತುಂಬಿಸುವುದರ ಮೂಲಕ ವಿಶಿಷ್ಟ ರೀತಿಯಲ್ಲಿ ಈ ಜಯಂತಿಯನ್ನು ಆಚರಿಸಿದರು.ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ಜನದಟ್ಟನೆ ಇತ್ತು. ದೇವಸ್ಥಾನದಲ್ಲಿ ಪ್ರಸಾದ ವ್ಯವಸ್ಥೆಯನ್ನೂ ಕಲ್ಪಿಸಲಾಗಿತ್ತು.  ದೇವಾಲಯದ ಮುಂಭಾಗದಲ್ಲಿ ನಿರ್ಮಿಸಲಾದ ದ್ವಾರ ಬಾಗಿಲಿನ ಉದ್ಘಾಟನೆಯನ್ನೂ ಇದೇ ಸಂದರ್ಭದಲ್ಲಿ ನೆರವೇರಿಸಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.