ಮಂಗಳವಾರ, ಮಾರ್ಚ್ 9, 2021
18 °C

ಅಸ್ಸಾಂನಲ್ಲಿ ಉಗ್ರರ ದಾಳಿ: 14 ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಸ್ಸಾಂನಲ್ಲಿ ಉಗ್ರರ ದಾಳಿ: 14 ಸಾವು

ಕೋಕರಾಝಾರ್ (ಪಿಟಿಐ): ಅಸ್ಸಾಂನ ಕೋಕರಾಝಾರ್ ಸಮೀಪದ ಜನನಿಬಿಡ ಸಂತೆಯ ಮೇಲೆ ಗುಂಡು, ಗ್ರೆನೇಡ್ ದಾಳಿ ನಡೆಸಿದ ಭಯೋತ್ಪಾದಕರು 14 ಜನರನ್ನು ಕೊಂದಿದ್ದಾರೆ. ಭಯೋತ್ಪಾದಕರು ಬೋಡೊ ಪ್ರತ್ಯೇಕತಾವಾದಿ ಗುಂಪಿಗೆ ಸೇರಿದವರು ಎನ್ನಲಾಗಿದೆ.ದಾಳಿ ನಡೆಸಿದ ಭಯೋತ್ಪಾದಕರ ತಂಡದಲ್ಲಿ ಐದು ಜನ ಇದ್ದರು. ರಕ್ಷಣಾ ಪಡೆಗಳು ನಡೆಸಿದ ಪ್ರತಿದಾಳಿಯಲ್ಲಿ ಇವರಲ್ಲಿ ಒಬ್ಬ ಹತನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಸೈನಿಕರಂತೆ ಉಡುಪು ಧರಿಸಿದ್ದ, ಭಾರಿ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಹೊಂದಿದ್ದ ದಾಳಿಕೋರರು ಕೋಕರಾಝಾರ್‌ನಿಂದ 12 ಕಿ.ಮೀ ದೂರದಲ್ಲಿರುವ ಬಾಲಾಜಾನ್ ತಿನಿಯಾಲಿ ಮಾರುಕಟ್ಟೆ ಪ್ರದೇಶಕ್ಕೆ ವ್ಯಾನಿನಲ್ಲಿ ಮಧ್ಯಾಹ್ನದ ವೇಳೆಗೆ ಬಂದರು. ಶಸ್ತ್ರಧಾರಿಗಳು ನಡೆಸಿದ ಗುಂಡಿನ ದಾಳಿಗೆ 12 ಜನ ಸ್ಥಳದಲ್ಲೇ ಮೃತಪಟ್ಟರು, 20ಕ್ಕೂ ಹೆಚ್ಚು ಜನ ಗಾಯಗೊಂಡರು. ಇನ್ನಿಬ್ಬರು ಆಸ್ಪತ್ರೆಗೆ ಸಾಗಿಸುವ ವೇಳೆ ಪ್ರಾಣ ಬಿಟ್ಟರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಪ್ರಧಾನಿ ನರೇಂದ್ರ ಮೋದಿ ಅವರು ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ‘ದಾಳಿಯ ಸುದ್ದಿ ತಿಳಿದು ಬೇಸರವಾಯಿತು. ಇದನ್ನು ನಾವು ಬಲವಾಗಿ ಖಂಡಿಸುತ್ತೇವೆ.ದಾಳಿಯಲ್ಲಿ ಜೀವ ಕಳೆದುಕೊಂಡವರ ಕುಟುಂಬದವರಿಗಾಗಿ, ಗಾಯಗೊಂಡವರು ಗುಣಮುಖರಾಗಲಿ ಎಂದು ಪ್ರಾರ್ಥಿಸುವೆ’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.ಮೃತರಲ್ಲಿ ಮಹಿಳೆಯೊಬ್ಬರು ಸೇರಿದ್ದಾರೆ. ಅವರ ಗುರುತು ಪತ್ತೆಯಾ ಗಿಲ್ಲ. ಇತರರನ್ನು ಮಝರ್ ಅಲಿ, ಸಲಾಂ ಅಲಿ, ದಂಡಾ ಬಸುಮತಾರಿ, ಮೋನಿರಾಂ ಬಸುಮತಾರಿ, ಪರಮೇಶ್ವರ್ ಬಸುಮತಾರಿ ಮತ್ತು ತಪನ್ ಚಕ್ರವರ್ತಿ ಎಂದು ಗುರುತಿಸಲಾಗಿದೆ.‘ದಾಳಿ ನಡೆಸಿದವರು ಬೋಡೊಲ್ಯಾಂಡ್ ರಾಷ್ಟ್ರೀಯ ಪ್ರಜಾಸತ್ತಾತ್ಮಕ ರಂಗದವರು ಎಂಬ ಶಂಕೆ ವ್ಯಕ್ತವಾಗಿದೆ. ದಾಳಿ ನಡೆದ ಪ್ರದೇಶದಲ್ಲಿ ಪೊಲೀಸ್ ಕಾರ್ಯಾಚರಣೆ ಇನ್ನೂ ಮುಗಿದಿಲ್ಲ. ಗ್ರೆನೇಡ್‌ಗಳಲ್ಲದೆ ಎ.ಕೆ. 56 ಮತ್ತು ಎ.ಕೆ. 47 ಬಂದೂಕುಗಳು ದಾಳಿ ಸ್ಥಳದಲ್ಲಿ ಪತ್ತೆಯಾಗಿವೆ’ ಎಂದು ಅಸ್ಸಾಂ ಪೊಲೀಸ್ ಮಹಾನಿರ್ದೇಶಕ ಮುಕೇಶ್ ಸಹಾಯ್ ತಿಳಿಸಿದ್ದಾರೆ.ಸೈನಿಕರ ಸಮವಸ್ತ್ರದಲ್ಲಿದ್ದ ಐದು ಜನ ಶಸ್ತ್ರಧಾರಿಗಳು 15ರಿಂದ 20 ನಿಮಿಷ ಎಡೆಬಿಡದೆ ಗುಂಡಿನ ದಾಳಿ ನಡೆಸಿದರು. ಅವರು ಮುಖ ಮುಚ್ಚಿಕೊಂಡಿದ್ದರು ಎಂದು ಸಂತೆ ಪ್ರದೇಶದಲ್ಲಿ ಅಂಗಡಿ ಹೊಂದಿರುವ ಮಣಿಕ್ ದೇವನಾಥ್ ವಿವರಿಸಿದರು.‘ದಾಳಿಕೋರರು ಗ್ರೆನೇಡ್ ಎಸೆದಾಗ ಎಂಟು ಅಂಗಡಿಗಳಿಗೆ ಬೆಂಕಿ ತಗುಲಿತು. ಭೀತರಾದ ಜನ ದಿಕ್ಕಾಪಾಲಾಗಿ ಓಡತೊಡಗಿದರು’ ಎಂದು ತಿಳಿಸಿದರು.ದಾಳಿಕೋರರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಅಸ್ಸಾಂ ಮುಖ್ಯಮಂತ್ರಿ ಸರ್ವಾನಂದ ಸೊನೊವಾಲ್ ಹೇಳಿದ್ದಾರೆ.‘ಯಾವುದೇ ಗುಂಪು ಒಡ್ಡುವ ಬೆದರಿಕೆಯನ್ನು ನಾವು ಸಹಿಸುವುದಿಲ್ಲ. ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳುವ ವಿಚಾರದಲ್ಲಿ ಸರ್ಕಾರ ಯಾವ ಒತ್ತಡಕ್ಕೂ ಮಣಿಯುವುದಿಲ್ಲ’ ಎಂದು ಸೊನೊವಾಲ್ ಹೇಳಿದ್ದಾರೆ.ಸ್ವಾತಂತ್ರ್ಯ ದಿನಾಚರಣೆ ಹತ್ತಿರವಾಗುತ್ತಿರುವುದರಿಂದ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕಟ್ಟೆಚ್ಚರದಲ್ಲಿ ಇರುವಂತೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.ದಾಳಿಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ ₹ 5 ಲಕ್ಷ, ಗಂಭೀರವಾಗಿ ಗಾಯಗೊಂಡವರಿಗೆ ತಲಾ ₹ 1 ಲಕ್ಷ ಹಾಗೂ ಸಣ್ಣಪುಟ್ಟ ಗಾಯಗಳಾದವರಿಗೆ ತಲಾ ₹ 20 ಸಾವಿರ ಪರಿಹಾರವನ್ನು ಅಸ್ಸಾಂ ಸರ್ಕಾರ ಘೋಷಿಸಿದೆ.ಈ ದಾಳಿ ನಡೆಸಿದವರು ಯಾರು ಎಂಬುದು ಇನ್ನಷ್ಟೇ ಖಚಿತವಾಗಬೇಕಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೊಭಾಲ್ ಅವರು ಘಟನೆ ಬಗ್ಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ವಿವರ ನೀಡಿದ್ದಾರೆ.***

ಕೇಂದ್ರ ಗೃಹ ಸಚಿವಾಲಯವು ಅಸ್ಸಾಂ ಸರ್ಕಾರದ ಜೊತೆ ಸಂಪರ್ಕದಲ್ಲಿದೆ. ಅಲ್ಲಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದೆ

–ನರೇಂದ್ರ ಮೋದಿ, ಪ್ರಧಾನಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.