ಶನಿವಾರ, ಮೇ 28, 2022
24 °C
ಆರು ಜಿಲ್ಲೆಗಳಲ್ಲಿ ಪ್ರವಾಹ ಉಲ್ಬಣ, 200 ಗ್ರಾಮ ಜಲಾವೃತ

ಆಂಧ್ರಪ್ರದೇಶದಲ್ಲಿ ಭಾರಿ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್ (ಐಎಎನ್‌ಎಸ್): ಆಂಧ್ರಪ್ರದೇಶದಲ್ಲಿ ಕಳೆದ ಒಂದು ವಾರದಿಂದ ಎಡಬಿಡದೆ ಸುರಿಯುತ್ತಿರುವ ಮಳೆಗೆ ಆರು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಲ್ಬಣಗೊಂಡಿದ್ದು, ಸುಮಾರು 200ಕ್ಕೂ ಹೆಚ್ಚು ಗ್ರಾಮಗಳು ಜಲಾವೃತಗೊಂಡಿವೆ.ಗೋದಾವರಿ ಸೇರಿದಂತೆ ತೆಲಂಗಾಣ ಭಾಗದ ಜಿಲ್ಲೆಗಳಾದ ಕಮ್ಮಂ, ಅದಿಲಾಬಾದ್, ಕರೀಂನಗರ, ವಾರಂಗಲ್ ಹಾಗೂ ರಾಜಮಂಡ್ರಿಯಲ್ಲಿ ಪ್ರವಾಹ ಸ್ಥಿತಿ ಎದುರಾಗಿದೆ. ಗೋದಾವರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಉತ್ತರ ತೆಲಂಗಾಣ ಭಾಗದ ಸಣ್ಣ ಪುಟ್ಟ ಹಳ್ಳ- ತೊರೆಗಳು ಕೂಡ ತುಂಬಿ ಹರಿಯುತ್ತಿವೆ.ಕರೀಂನಗರ ಜಿಲ್ಲೆ ಪ್ರವಾಹದಿಂದ ಹೆಚ್ಚು ಹಾನಿಗೀಡಾಗಿದ್ದು, ಇಲ್ಲಿನ  40 ಗ್ರಾಮಗಳು ಜಲಾವೃತಗೊಂಡಿವೆ. ಪ್ರವಾಹಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಾಚರಣೆ ಕೈಗೊಳ್ಳಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) ಮೂರು ತಂಡಗಳು ಆಗಮಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಪ್ರವಾಹಪೀಡಿತ ಕರೀಂನಗರದಲ್ಲಿ ಭಾರತೀಯ ವಾಯುಪಡೆಯ ಮೂರು ಹೆಲಿಕಾಪ್ಟರ್‌ಗಳು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಮತ್ತೊಂದನ್ನು ಪಕ್ಕದ ಕಮ್ಮಂ ಜಿಲ್ಲೆಗೆ ನಿಯೋಜಿಸಲಾಗಿದೆ. ಹೆಲಿಕಾಪ್ಟರ್‌ಗಳಿಂದ ಪ್ರವಾಹಪೀಡಿತ ಗ್ರಾಮಗಳಿಗೆ ಆಹಾರ, ನೀರಿನ ಪ್ಯಾಕೆಟ್ ಹಾಗೂ ಔಷಧಿಗಳನ್ನು ಎಸೆಯಲಾಗುತ್ತಿದೆ.`ಪ್ರವಾಹಕ್ಕೆ ತುತ್ತಾಗಿರುವ ಈ ಆರು ಜಿಲ್ಲೆಗಳು ಸೇರಿದಂತೆ ರಾಜ್ಯದಾದ್ಯಂತ ಮಳೆ ಮತ್ತು ಪ್ರವಾಹಕ್ಕೆ ಒಂದು ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ನಾಶವಾಗಿದೆ' ಎಂದು ರಾಜ್ಯ ಕೃಷಿ ಸಚಿವ ಕನ್ನ ಲಕ್ಷ್ಮೀನಾರಾಯಣ ತಿಳಿಸಿದ್ದಾರೆ.ಗೋದಾವರಿ ಜಿಲ್ಲೆಯ ಪ್ರವಾಹಪೀಡಿತ ಪ್ರದೇಶಗಳ ಗ್ರಾಮಗಳ 1,200 ಜನರನ್ನು ಇಲ್ಲಿನ ಜಿಲ್ಲಾಡಳಿತ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿದೆ. ಕಮ್ಮಂ ಜಿಲ್ಲೆಯ ಭದ್ರಾಚಲಂ ನಗರದಲ್ಲಿ ಗೋದಾವರಿ ಒಳಹರಿವಿನ ಮಟ್ಟ ಹೆಚ್ಚಾಗಿದ್ದು, ಇಲ್ಲಿನ ದೇವಸ್ಥಾನ ಜಲಾವೃತಗೊಂಡಿದೆ. ಮುಂಜಾಗ್ರತೆಯಾಗಿ ಇಲ್ಲಿನ ತಗ್ಗುಪ್ರದೇಶದ ಜನರಿಗೆ ಪ್ರವಾಹದ ಎಚ್ಚರಿಕೆ ನೀಡಲಾಗಿದೆ.ರಾಜಮಂಡ್ರಿ ಸಮೀಪದ ಧೂಳೇಶ್ವರಂನಲ್ಲಿ ಕೂಡ ಗೋದಾವರಿ ನದಿಯ ಮಟ್ಟ 15 ಮೀ. ಮೀರಿದ್ದು, ಗೋದಾವರಿಯ ಪೂರ್ವ ಮತ್ತು ಪಶ್ಚಿಮ ಭಾಗದ ಜಿಲ್ಲೆಗಳ ಸುಮಾರು 150 ಹಳ್ಳಿಗಳಿಗೆ ಪ್ರವಾಹ ಬಂದಿದ್ದು, ಇಲ್ಲಿಂದ 16 ಸಾವಿರ ಕ್ಯೂಸೆಕ್‌ಗೂ ಹೆಚ್ಚು ನೀರನ್ನು ಬಂಗಾಳ ಕೊಲ್ಲಿಗೆ ಬಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ರಾಜ್ಯದಲ್ಲಿ ಕಳೆದ ಐದು ದಿನದಿಂದ ಸುರಿದ ಮಳೆಗೆ ಇದುವರೆಗೂ 10 ಮಂದಿ ಮೃತಪಟ್ಟಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಾಚರಣೆ ಕೈಗೊಳ್ಳಲು ಸರ್ಕಾರ ಈಗಾಗಲೇ ವಿಶೇಷ ಅಧಿಕಾರಿಗಳನ್ನು ನಿಯೋಜಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.