ಗುರುವಾರ , ಜನವರಿ 23, 2020
20 °C

ಆಟೊ: ಡಿಜಿಟಲ್ ಮೀಟರ್ ಕಡ್ಡಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿನ ಆಟೊರಿಕ್ಷಾಗಳಿಗೆ ಡಿಜಿಟಲ್ ಮೀಟರ್ ಅಳವಡಿಕೆಯನ್ನು ಕಡ್ಡಾಯಗೊಳಿಸಿದ್ದು, ಈ ಸಂಬಂಧ ಒಂದೆರಡು ದಿನದಲ್ಲಿ ಸರ್ಕಾರಿ ಆದೇಶ ಹೊರಬೀಳಲಿದೆ ಎಂದು ಸಾರಿಗೆ ಸಚಿವ ಆರ್.ಅಶೋಕ ಸೋಮವಾರ ಇಲ್ಲಿ ತಿಳಿಸಿದರು.ಸುಮಾರು 80 ಸಾವಿರ ಆಟೊರಿಕ್ಷಾಗಳಿದ್ದು, ಈ ಪೈಕಿ 25 ಸಾವಿರ ಆಟೊಗಳು ಈಗಾಗಲೇ ಡಿಜಿಟಲ್ ಮೀಟರ್ ಹೊಂದಿವೆ. ಉಳಿದ ಆಟೊಗಳಿಗೂ ಈಗ ಕಡ್ಡಾಯ ಮಾಡಿದ್ದು, ಪ್ರತಿಯೊಂದು ಮೀಟರ್‌ಗೆ ಎರಡು ಸಾವಿರ ರೂಪಾಯಿ ವೆಚ್ಚವಾಗಲಿದೆ. ಸರ್ಕಾರ ಒಂದು ಸಾವಿರ ರೂಪಾಯಿ ಸಬ್ಸಿಡಿ ನೀಡುತ್ತಿದ್ದು, ಉಳಿದ ಹಣವನ್ನು ಮಾಲೀಕರೇ ಭರಿಸಬೇಕಾಗುತ್ತದೆ ಎಂದರು.ಮೀಟರ್ ತಿರುಚುವಿಕೆ ಮೂಲಕ ಗ್ರಾಹಕರಿಂದ ಅಧಿಕ ಹಣ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಡಿಜಿಟಲ್ ಮೀಟರ್ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.2005ರಿಂದ ಈಚೆಗೆ ಪರವಾನಗಿ ಪಡೆದಿರುವ ಆಟೊಗಳಿಗೆ ಹಿಂದೆ ಡಿಜಿಟಲ್ ಮೀಟರ್ ಕಡ್ಡಾಯ ಮಾಡಲಾಗಿತ್ತು. ಈಗ ಅದಕ್ಕೂ ಮುನ್ನ ಪರವಾನಗಿ ಪಡೆದಿರುವ ಆಟೊಗಳಿಗೂ ಡಿಜಿಟಲ್ ಮೀಟರ್ ಕಡ್ಡಾಯ ಮಾಡಲಾಗಿದೆ. ಹೈಕೋರ್ಟ್ ಆದೇಶದಂತೆ ಆಟೊರಿಕ್ಷಾಗಳಿಗಾಗಿಯೇ ಶಾಂತಿನಗರದಲ್ಲಿ ಪ್ರತ್ಯೇಕವಾದ ಪ್ರಾದೇಶಿಕ ಸಾರಿಗೆ ಕಚೇರಿ ತೆರೆಯಲಾಗಿದೆ. ಇದರಿಂದಾಗಿ ಕೆಲಸದ ಒತ್ತಡ ಕಡಿಮೆಯಾಗಿದೆ ಎಂದರು.ತೆರಿಗೆ: ರಾಜ್ಯದಲ್ಲಿ ಕಾಯಂ ಆಗಿ ಉಳಿಯುವ ಕೇಂದ್ರ ಸರ್ಕಾರಿ ನೌಕರರ ವಾಹನಗಳಿಗೆ ಜೀವಿತಾವಧಿ ಶುಲ್ಕ ಪಾವತಿಯನ್ನು ಕಡ್ಡಾಯಗೊಳಿಸಿ ಕಳೆದ ವಿಧಾನ ಮಂಡಲದ ಅಧಿವೇಶನದಲ್ಲಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ರಾಜ್ಯಪಾಲರು ಒಪ್ಪಿಗೆ ಕೊಟ್ಟ ನಂತರ ಇದು ಜಾರಿಯಾಗಲಿದೆ ಎಂದರು.

ಪ್ರತಿಕ್ರಿಯಿಸಿ (+)