ಸೋಮವಾರ, ಮೇ 16, 2022
29 °C

ಆಡಳಿತಕ್ಕೆ ತಾಯ್ತನದ ಸ್ಪರ್ಶ

ಸಿ.ಜಿ. ಮಂಜುಳಾ Updated:

ಅಕ್ಷರ ಗಾತ್ರ : | |

ಆಡಳಿತಕ್ಕೆ ತಾಯ್ತನದ ಸ್ಪರ್ಶ

1972ರ ಮಾರ್ಚ್ 24 . ಅಂದು ಮೈಸೂರು ರಾಜ್ಯದ ವಿಧಾನಸಭಾಧ್ಯಕ್ಷರಾಗಿ (ಸ್ಪೀಕರ್) ಅಧಿಕಾರ ವಹಿಸಿಕೊಂಡ ಕೆ.ಎಸ್. ನಾಗರತ್ನಮ್ಮ ಅವರು ಹೊಸದೊಂದೇ ಇತಿಹಾಸ ನಿರ್ಮಿಸಿದರು. ರಾಷ್ಟ್ರದಲ್ಲಿ ಈ ಹುದ್ದೆಗೇರಿದ ಎರಡನೇ ಮಹಿಳೆ (ಈ ಮುಂಚೆ ಹರಿಯಾಣ ವಿಧಾನಸಭೆ ಸ್ಪೀಕರ್ ಆಗಿ 1966ರಲ್ಲಿ ಶಾನ್ನೊ ದೇವಿ ಆಯ್ಕೆಯಾಗಿದ್ದರು) ಹಾಗೂ ರಾಜ್ಯದಲ್ಲಿ ಮೊದಲ ಮಹಿಳೆ ಎಂಬಂತಹ ಖ್ಯಾತಿ ನಾಗರತ್ನಮ್ಮ ಅವರದಾಯಿತು.

 

ಐದು ವರ್ಷಗಳ ಕಾಲ (24-3-72ರಿಂದ 17-3-78) ಈ ಹುದ್ದೆಯನ್ನು ಅವರು ಸಮರ್ಥವಾಗಿ ನಿಭಾಯಿಸಿದರು. ನಂತರದ ವರ್ಷಗಳಲ್ಲಿ ರಾಜ್ಯದಲ್ಲಿ ಈವರೆಗೂ ಯಾವ ಮಹಿಳೆಯೂ ಈ ಹುದ್ದೆಯನ್ನಲಂಕರಿಸುವುದು ಸಾಧ್ಯವಾಗಿಲ್ಲ.ಈ ಹುದ್ದೆಗೆ ಏರುವಷ್ಟರೊಳಗೇ ನಾಗರತ್ನಮ್ಮನವರು ನುರಿತ ಸಂಸದೀಯ ಪಟುವಾಗಿದ್ದರು. ಮೈಸೂರು ಜಿಲ್ಲೆ ಗುಂಡ್ಲುಪೇಟೆಯಿಂದ ಸತತವಾಗಿ ನಾಲ್ಕು ಬಾರಿ ಚುನಾಯಿತರಾಗಿ ವಿಧಾನಸಭೆಯ ಹಿರಿಯ ಸದಸ್ಯೆಯಾಗಿದ್ದರು. `14 ವರ್ಷಗಳ ಸಂಸದೀಯ ವೃತ್ತಿಯಲ್ಲಿ ಅವರೆಂದೂ ಹಿಂದಿನ ಬೆಂಚಿನವರಾಗಿರಲಿಲ್ಲ.ತಮ್ಮ ನೇರ ಹಾಗೂ ನಿಖರ ಮಾತುಗಳಿಗೆ ಅವರು ಹೆಸರುವಾಸಿಯಾಗಿದ್ದಾರೆ~ ಎಂದು ಆ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಅವರು ಶ್ಲಾಘಿಸಿದ್ದರು.

ಸಂಸದೀಯ ಬದುಕಿನಲ್ಲಿ ಸಭಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುವುದು ಒಂದು ವಿಶೇಷ ಗೌರವ. ಅದರಲ್ಲಿನ ಯಶಸ್ಸಿಗೆ ಸಭಾಧ್ಯಕ್ಷರ ವ್ಯಕ್ತಿತ್ವ ಬಹಳ ಮುಖ್ಯ.ವಿವೇಚನೆ, ತಾಳ್ಮೆ, ಸೂಕ್ತ ನಿರ್ಧಾರಗಳು ಇಲ್ಲಿ ಬಹುಮುಖ್ಯವಾಗುತ್ತವೆ. ಇಂತಹ ಸ್ಥಾನದಲ್ಲಿ ಐದು ವರ್ಷ ಕಾರ್ಯ ನಿರ್ವಹಿಸಲು ಸಫಲರಾದವರು ನಾಗರತ್ನಮ್ಮ. ಅದು ವೈಯಕ್ತಿಕವಾಗಿ ಅವರಿಗೂ ಒಟ್ಟಾರೆ ಮಹಿಳಾ ಸಮುದಾಯಕ್ಕೂ ದೊಡ್ಡ ಹೆಗ್ಗಳಿಕೆ.  ಯಾವುದೇ ಮರ್ಜಿ, ದಾಕ್ಷಿಣ್ಯಕ್ಕೊಳಗಾಗದೇ ಸ್ಪೀಕರ್ ಸ್ಥಾನದ ಕರ್ತವ್ಯಗಳನ್ನು ನಿರ್ವಹಿಸಿದವರು ಅವರು.ಹೀಗೆಂದೇ ಮುಖ್ಯಮಂತ್ರಿ ದೇವರಾಜ ಅರಸು ಅಳಿಯ ಎಂ.ಡಿ. ನಟರಾಜರವರ ಬಗ್ಗೆ ಸದನದಲ್ಲಿ ಹಕ್ಕುಚ್ಯುತಿ ಮಂಡನೆಯಾದಾಗ ಸಭಾಧ್ಯಕ್ಷರಾಗಿ, ಹುದ್ದೆಯ ಘನತೆಗೆ ತಕ್ಕ ಪಕ್ಷಾತೀತ ನಿಲುವನ್ನು ಅವರು ತಳೆದದ್ದು ಐತಿಹಾಸಿಕ. ಯಾವುದೇ ಮುಲಾಜಿಲ್ಲದೆ, ಮುಖ್ಯಮಂತ್ರಿ ಅಳಿಯನ ವಿರುದ್ಧದ ಹಕ್ಕುಚ್ಯುತಿ ನಿಲುವಳಿ ಸೂಚನೆಯನ್ನು ಅಂಗೀಕರಿಸಿ ಅದನ್ನು ಹಕ್ಕುಚ್ಯುತಿ ಸಮಿತಿಗೆ ಒಪ್ಪಿಸಿ ಅವರು ನೀಡಿದ ತೀರ್ಪು ಅವರ ನಿಷ್ಠುರ ಕಾರ್ಯವೈಖರಿಗೆ ಸಾಕ್ಷಿ.ಸದನದಲ್ಲಿ ಸಂದರ್ಭ ನೋಡಿ ಸದಸ್ಯರನ್ನು ನಿಯಂತ್ರಿಸುತ್ತಿದ್ದ ಪರಿ ಹಾಗೂ ಪ್ರೇಕ್ಷಕರ ಗ್ಯಾಲರಿಯಲ್ಲಿ ಚಪ್ಪಾಳೆ ತಟ್ಟುವುದು, ಘೋಷಣೆ ಕೂಗುವುದು ಮೊದಲಾದ ಅನಪೇಕ್ಷಿತ ವರ್ತನೆಗಳನ್ನು ಅವರು ತಡೆಗಟ್ಟುತಿದ್ದ ರೀತಿ ಅವರ ಕಾರ್ಯದಕ್ಷತೆಯನ್ನು ಎತ್ತಿ ತೋರುತ್ತಿತ್ತು.ಸ್ವಾತಂತ್ರ್ಯೋತ್ತರ ಕಾಲದ ಮೊದಲ ತಲೆಮಾರಿನ ಮಹಿಳಾ ರಾಜಕಾರಣಿಗಳ ಸಾಲಿಗೆ ಸೇರಿದವರು ನಾಗರತ್ನಮ್ಮ. ಶಾಸಕಿ, ವಿಧಾನಸಭಾಧ್ಯಕ್ಷರು, ಸಚಿವೆ ಹಾಗೂ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕಿ (29-1-1987ರಿಂದ 21-4-1989ರವರೆಗೆ)- ಹೀಗೆ ಮೂರು ದಶಕಗಳಿಗೂ ಹೆಚ್ಚು ಕಾಲ ವಿವಿಧ ಜವಾಬ್ದಾರಿ ಸ್ಥಾನಗಳನ್ನು ನಿರ್ವಹಿಸಿದವರು.

 

ಹರಿತವಾದ ಮಾತುಗಳು ಹಾಗೂ ನಿರ್ಭೀತ ನಡೆನುಡಿಗಳಿಂದ ಸದನಕ್ಕೆ ವಿಶೇಷ ಮೆರುಗು ನೀಡುತ್ತಿದ್ದ ವಿರಳ ಮಹಿಳಾಸಂಸದೀಯ ಪಟು ಅವರು.ನಾಗರತ್ನಮ್ಮನವರ ಜನನ 1923 ನ.23ರಂದು (ನಿ: 1993). ತಂದೆ ಎಂಜಿನಿಯರ್. ಬೆಂಗಳೂರಿನ ಒಳ್ಳೆಯ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ. ಆದರೆ 11ನೇ ವಯಸ್ಸಿಗೇ ಅವರು ಗುಂಡ್ಲುಪೇಟೆ ತಾಲ್ಲೂಕಿನ ಕಬ್ಬಳ್ಳಿ ಸಾಹುಕಾರ್ ಚನ್ನಬಸಪ್ಪನವರ ಮಗ ಕೆ.ಸಿ. ಸುಬ್ಬಣ್ಣನವರ ಎರಡನೇ ಪತ್ನಿಯಾಗುವ ಪ್ರಸಂಗ ಒದಗಿತು.ಸುಬ್ಬಣ್ಣನವರ ಮೊದಲ ಪತ್ನಿ ತೀರಿಕೊಂಡಿದ್ದರು. ನಾಗರತ್ನಮ್ಮನವರ ಮಾವ ಕಬ್ಬಳ್ಳಿ ಚನ್ನಬಸಪ್ಪನವರ ಶ್ರೀಮಂತಿಕೆ ಮನೆಮಾತಾಗಿತ್ತು. ಹಳ್ಳಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲು ಮೈಸೂರಿನಲ್ಲಿ ಸ್ಥಾಪಿಸಿದ್ದ ಸಾಹುಕಾರ್ ಕಬ್ಬಳ್ಳಿ ಚನ್ನಬಸಪ್ಪ ವೀರಶೈವ ವಿದ್ಯಾರ್ಥಿ ನಿಲಯ ಹೆಸರುವಾಸಿಯಾದದ್ದು.1947ರ ಆಗಸ್ಟ್ ತಿಂಗಳಲ್ಲಿ ರಾಷ್ಟ್ರಕ್ಕೆ ಸ್ವಾತಂತ್ರ್ಯ ಬಂದ ತಿಂಗಳಲ್ಲೇ ಸುಬ್ಬಣ್ಣನವರು  ತೀರಿಕೊಂಡರು. ಆಗ ಅವರಿಗೆ 36 ವರ್ಷ. ಈ ಬಹು ದೊಡ್ಡ ಮನೆತನದ ಜವಾಬ್ದಾರಿಗಳು ಆಗಿನ್ನೂ 24ರ ಹರೆಯದಲ್ಲಿದ್ದ ನಾಗರತ್ನಮ್ಮನವರ ಹೆಗಲಿಗೆ ಬಿದ್ದವು. ಈ ದಂಪತಿಗೆ ಸಂತಾನ ಇರಲಿಲ್ಲ.ಕೆ.ಎಸ್. ನಾಗರತ್ನಮ್ಮ ಎಂದರೆ ಕಬ್ಬಳ್ಳಿ ಸುಬ್ಬಣ್ಣ ನಾಗರತ್ನಮ್ಮ. ಆ ಕಾಲದಲ್ಲಿ ಹೆಣ್ಣುಮಗಳು ಅದೂ ಪ್ರಾಯದ ವಿಧವೆ ಸಾರ್ವಜನಿಕ ಕ್ಷೇತ್ರದಲ್ಲಿ ಸಕ್ರಿಯವಾಗಿರುವುದು ಸಾಹಸದ ವಿಷಯವೇ ಆಗಿತ್ತು. 1957ರ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ, ಕ್ಷೇತ್ರದ ಜನತೆಯಿಂದ ಬಂದ ಒತ್ತಡಕ್ಕೆ ಸ್ಪಂದಿಸಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದರು ಅವರು. ಇದು ಸ್ವಾತಂತ್ರ್ಯ ಬಂದ ನಂತರದ ಎರಡನೆಯ ಮಹಾ ಚುನಾವಣೆ.

 

ಹೀಗಾಗಿ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಗೆಲುವು ಅನಾಯಾಸ ಅನ್ನುವಂತಿತ್ತು. ಅಂತಹದರಲ್ಲಿ ಕಾಂಗ್ರೆಸ್‌ನ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಅದೂ ಮಹಿಳೆಯೊಬ್ಬರು ಸ್ಪರ್ಧಿಸಿ ಚುನಾವಣೆಯನ್ನು ಗೆಲ್ಲಬೇಕೆಂದರೆ ಭಾರಿ ಧೈರ್ಯವೇ ಬೇಕಾಗಿತ್ತು. ಆಗಿನ ಕಾಂಗ್ರೆಸ್ ಅಭ್ಯರ್ಥಿಯನ್ನು 12 ಸಾವಿರ ಮತಗಳಿಂದ ಸೋಲಿಸಿದ ನಾಗರತ್ನಮ್ಮ ಪ್ರಥಮ ಪ್ರಯತ್ನದಲ್ಲೇ ಸಫಲರಾಗಿ ಕರ್ನಾಟಕದ ವಿಧಾನಸಭಾ ಸದಸ್ಯರಾದರು.

 

ಆಗ ಅವರ ವಯಸ್ಸು 34. ನಂತರ ಮುಂದಿನ ಮೂರು ದಶಕಗಳಿಗೂ ಹೆಚ್ಚಿನ ಅವಧಿಯಲ್ಲಿ ನಿರಂತರವಾಗಿ ವಿಧಾನಸಭೆಗೆ ಚುನಾಯಿತರಾಗುತ್ತಾ ಬಂದರು. ತುರ್ತುಪರಿಸ್ಥಿತಿಯ ನಂತರ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಾತ್ರ ಸೋಲು ಅನುಭವಿಸಿದರು.

ಮೊದಲ ಬಾರಿ ಪಕ್ಷೇತರರಾಗಿ ಚುನಾಯಿತರಾದುದರಿಂದ ಯಾವ ರಾಜಕೀಯ ಪಕ್ಷದ ಅಂಕೆಯೂ ನಾಗರತ್ನಮ್ಮನವರಿಗೆ ಇರಲಿಲ್ಲ. ಸರ್ಕಾರದ ದೋಷಗಳನ್ನು ಸ್ಪಷ್ಟ ಮಾತುಗಳಲ್ಲಿ ಟೀಕಿಸುತ್ತಿದ್ದರು. 1960ರ ದಶಕದಲ್ಲಿ ಎಸ್. ನಿಜಲಿಂಗಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ಅವರು ಕಾಂಗ್ರೆಸ್ ಸೇರಿದರು. ಆಗಲೂ ನಾಗರತ್ನಮ್ಮನವರು ಜನರ ಕಷ್ಟಗಳನ್ನು ವಿಧಾನಸಭೆಯ ಕಲಾಪಗಳಲ್ಲಿ ಪ್ರಸ್ತಾಪಿಸುತ್ತ ಸರ್ಕಾರವನ್ನು ನಿಷ್ಠುರವಾಗಿಯೇ ಟೀಕಿಸುತ್ತಿದ್ದರು. ಕಾಂಗ್ರೆಸ್ ಪಕ್ಷವು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಇಬ್ಭಾಗವಾದಾಗ ಅವರು ಇಂದಿರಾಗಾಂಧಿ ನೇತೃತ್ವದ ಮೂಲ ಕಾಂಗ್ರೆಸ್‌ನಲ್ಲೇ ಉಳಿದುಕೊಂಡರು.ಸದನದಲ್ಲಿ ದಿನನಿತ್ಯದ ವಾಸ್ತವ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಡಿಸಿ ವಿವರಿಸುತ್ತಿದ್ದುದು ನಾಗರತ್ನಮ್ಮನವರ ವೈಶಿಷ್ಟ್ಯ. ಅವರ ಮಾತುಗಳು ಅವರ ಕ್ಷೇತ್ರದ ಕುಂದುಕೊರತೆಗಳಿಗಷ್ಟೇ ಸೀಮಿತವಾಗಿರುತ್ತಿರಲಿಲ್ಲ. ಪಿಂಚಣಿ, ನಿರುದ್ಯೋಗ, ಕೃಷಿ, ಕೈಗಾರಿಕೆ, ಗ್ರಾಮೀಣ ರಸ್ತೆಗಳು, ನೀರಾವರಿ, ಮಹಿಳೆಯರ ಅಭಿವೃದ್ಧಿ- ಹೀಗೆ ವಿವಿಧ ವಿಷಯಗಳನ್ನೆತ್ತಿಕೊಂಡು ವಿಚಾರಗಳನ್ನು ಮಂಡಿಸುತ್ತಿದ್ದರು. ಗಾದೆಗಳನ್ನು ಬಳಸಿ ಮಾತುಗಳನ್ನು ರಂಜನೀಯವಾಗಿಸುತ್ತಿದ್ದರು.`ಚೋಟುದ್ದ ಹುಡುಗ, ಸುಮ್ನೆ ಕೂತ್ಕೊಳ್ರಿ~ ಎಂದೆಲ್ಲಾ ತರಾಟೆಗೆ ತೆಗೆದುಕೊಳ್ಳುತ್ತಾ ಶಾಸಕರನ್ನು ನಿಭಾಯಿಸುವ ಶಕ್ತಿ ಪಡೆದಿದ್ದವರು ನಾಗರತ್ನಮ್ಮನವರು. ಹೀಗಿದ್ದೂ ಎಸ್.ಬಂಗಾರಪ್ಪನವರ ಕಾಲದಲ್ಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಯ ಸಚಿವೆಯಾಗಿದ್ದಾಗ, ಗರ್ಭಿಣಿಯರ ಕುರಿತ ಕಾರ್ಯಕ್ರಮದ ಚರ್ಚೆ ಸಂದರ್ಭದಲ್ಲಿ ತೂರಿ ಬಂದಿದ್ದ `ಬಂಜೆಗೇನು ಗೊತ್ತು ಹೆರಿಗೆ ಬೇನೆ~ ಎಂಬಂತಹ ಮಾತುಗಳಿಂದ ನೊಂದುಕೊಂಡಿದ್ದಂತಹ ಸಂದರ್ಭಗಳೂ ಇದ್ದವು ಎಂಬುದನ್ನು ಅವರನ್ನು ಹತ್ತಿರದಿಂದ ಬಲ್ಲ ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್ ನೆನೆಯುತ್ತಾರೆ.

 

ಸದಾ ದೊಡ್ಡ ಅಂಚುಗಳ ಸೀರೆ ತೊಟ್ಟು ಮೇಕಪ್‌ನಲ್ಲಿ ಕಂಗೊಳಿಸುತ್ತಿದ್ದ ಅವರನ್ನು `ತೊಟ್ಟ ಬಾಣ ತೊಡುವುದಿಲ್ಲ ಎಂದು ಕರ್ಣ ಹೇಳಿದಂತೆ ಉಟ್ಟ ಸೀರೆ ಉಡುವುದಿಲ್ಲ ಎಂದೇನು ಪ್ರತಿಜ್ಞೆ ಮಾಡಿದ್ದೀರಾ~ ಎಂದು ತಾವೆಲ್ಲಾ ತಮಾಷೆ ಮಾಡುತ್ತಿದ್ದುದನ್ನೂ ಅವರು ನೆನೆಯುತ್ತಾರೆ. ಸೀರೆಗಳ ಮೋಹದೊಂದಿಗೇ ನಾಗರತ್ನಮ್ಮನವರಿಗಿದ್ದ ಮತ್ತೊಂದು ವ್ಯಾಮೋಹ ಚಾಕೊಲೆಟ್ ತಿನ್ನುವುದು.`ಸದನದ ಸಭಾಧ್ಯಕ್ಷ ಪೀಠದ ತುಂಬ ಕುಳಿತುಕೊಳ್ಳುತ್ತಿದ್ದ ಎತ್ತರದ ನಾಗರತ್ನಮ್ಮನವರು ಎದ್ದು ನಿಂತರೆ ಸದನದಲ್ಲಿ ಒಂದು ರೀತಿಯ ಶಕ್ತಿ ಸಂಚಾರವಾಗುತ್ತಿತ್ತು. ಅವರ ವ್ಯಕ್ತಿತ್ವದ ವರ್ಚಸ್ಸು ಹಿರಿದಾದದ್ದು~ ಎಂದು ಹಿರಿಯ ರಾಜಕಾರಣಿ ವಾಟಾಳ್ ನಾಗರಾಜ್ ನೆನಪಿಸಿಕೊಳ್ಳುತ್ತಾರೆ.“ವಾಸ್ತವವಾಗಿ ಡಿ.ದೇವರಾಜ ಅರಸು ಅವರನ್ನು ಇಂದಿರಾಗಾಂಧಿಗೆ ಪರಿಚಯಿಸಿ ಅವರ ರಾಜಕೀಯ ಬೆಳವಣಿಗೆಗೆ ಕಾರಣರಾದವರೇ ನಾಗರತ್ನಮ್ಮನವರು. ಅರಸು ಅವರ ಪರಿಚಯ ಅಷ್ಟಾಗಿ ಇರದಿದ್ದ ಇಂದಿರಾಗಾಂಧಿ, ಅರಸು ಅವರನ್ನು ಅನೇಕ ಸಭೆಗಳಲ್ಲಿ `ಉರಸ್~ ಎಂದು ಕರೆಯುತ್ತಿದ್ದರು.ಹೀಗಾಗಿ ಇಂದಿರಾ ಅವರಿಗೆ ಅರಸು ಹೆಸರಿನ ಸರಿಯಾದ ಉಚ್ಚಾರಣೆಯನ್ನು ಕೆ.ಎಚ್. ಪಾಟೀಲರು ಸಭೆಯೊಂದರಲ್ಲಿ ತಿಳಿಹೇಳಿದ್ದರು” ಎಂದು ನಾಗರತ್ನಮ್ಮ ಸ್ಪೀಕರ್ ಆಗಿದ್ದಾಗ ಸಾತನೂರು ಕ್ಷೇತ್ರದ ಶಾಸಕರಾಗಿದ್ದ ಎಚ್. ಪುಟ್ಟದಾಸ್ ನೆನಪಿಸಿಕೊಳ್ಳುತ್ತಾರೆ. “ಆ ಕಾಲದಲ್ಲಿ ಕರ್ನಾಟಕದ ಮೊದಲ ಮಹಿಳಾ ಮುಖ್ಯಮಂತ್ರಿ ಆಗಿರಬಹುದಾಗಿದ್ದ ಅವಕಾಶವನ್ನು ಬಿಟ್ಟುಕೊಟ್ಟಂತಹವರು ಅವರು.ನೋಡಲಿಕ್ಕೆ ಒರಟಾಗಿ ಕಂಡರೂ ಕರುಣಾಹೃದಯಿಯಾಗಿದ್ದರು. ಭ್ರಷ್ಟಾಚಾರ ಇಲ್ಲದ ಸ್ವಚ್ಛ ಆಡಳಿತ ಅವರದು. ಎಲ್ಲರಿಗೂ ತಾಯಿಯಂತಿದ್ದ `ಅನರ್ಘ್ಯ ರತ್ನ~ ಈ ಅಮ್ಮ~~ ಎನ್ನುತ್ತಿದ್ದಂತೇ ಭಾವುಕರಾದ ಅವರು, ಸಾರ್ವಜನಿಕ ಆಡಳಿತಕ್ಕೆ ಅಗತ್ಯವಾದ `ತಾಯ್ತನ~ದ ಮೌಲ್ಯದ ಎಳೆಗಳನ್ನೂ ನಾಗರತ್ನಮ್ಮನವರು ಪರೋಕ್ಷವಾಗಿ ಪ್ರತಿಪಾದಿಸ್ದ್ದಿದನ್ನು ನೆನಪಿಸಿಕೊಂಡರು.ನಾಗರತ್ನಮ್ಮನವರ ಮಾನಸ ಪುತ್ರನಂತ್ದ್ದಿದ, ಗ್ರಾಮೀಣ ಆಡಳಿತಕ್ಕೆ ಹೊಸ ಚೇತನ ನೀಡಿದ ನಜೀರ್ ಸಾಬ್ ಕರ್ನಾಟಕ ರಾಜಕೀಯಕ್ಕೆ ಈ `ಅಮ್ಮ~ನ ಕೊಡುಗೆ ಎಂಬುದನ್ನು ನೆನೆದರೆ, ರಂಪ-ರಗಳೆಗಳ ಇಂದಿನ ರಾಜಕೀಯ ಸಂದರ್ಭದಲ್ಲಿ ಶ್ರೇಷ್ಠ ಮುತ್ಸದ್ದಿತನದ ಆದರ್ಶ ಎದ್ದುಕಾಣಿಸುತ್ತದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.