ಸೋಮವಾರ, ಜೂನ್ 21, 2021
30 °C

ಆತಿಥ್ಯಕ್ಕೆ ಮನಸೋತ ಮೆಡೋಸ್ ಟೇಲರ್ ಮೊಮ್ಮಗ...!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುರಪುರ: “ನನ್ನ ಮುತ್ತಾತ ಮೆಡೋಸ್ ಟೇಲರ್ ಬಹಳ ವರ್ಷಗಳ ಕಾಲ ಈ ಊರಿನಲ್ಲಿ ಏಕೆ ಕೆಲಸ ಮಾಡಿದ್ದಾರೆಂದು ನನಗೀಗ ಅರ್ಥವಾಗುತ್ತಿದೆ. ಇಲ್ಲಿನ ಜನರ ಆದರ, ಆತಿಥ್ಯ, ಪ್ರೀತಿ, ವಿಶ್ವಾಸ ಅನನ್ಯ. ಇದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನನಗೆ ಸುರಪುರ ಬಿಟ್ಟು ಹೋಗಲು ಮನಸ್ಸಾಗುತ್ತಿಲ್ಲ. ಮತ್ತೆ ಮುಂದಿನ ವರ್ಷ ನನ್ನ ಹೆಂಡತಿ, ಮಕ್ಕಳೊಂದಿಗೆ ಬರುತ್ತೇನೆ” ಎಂದು ಟೇಲರ್ ಅವರ ಮರಿ ಮೊಮ್ಮಗ ಡಾ. ಅಲ್ಬರ್ಟೋ ಭಾವಪರವಶರಾಗಿ ನುಡಿದರು.ಇಲ್ಲಿನ ಗೋಸಲ ಸಂಸ್ಥಾನದ ಅರಮನೆಯಲ್ಲಿ ಸೋಮವಾರ ತಮಗೆ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, “ನನ್ನ ಮುತ್ತಾತ ಮತ್ತು ಇಲ್ಲಿನ ಅರಸರ ಬೆಸುಗೆ ಅವಿನಾಭಾವವಾದದ್ದು. ಇಲ್ಲಿನ ಪ್ರಜೆಗಳು ಸ್ನೇಹಪರರು, ಇಲ್ಲಿಗೆ ಭೇಟಿ ನೀಡಿ ನನ್ನ ಜನ್ಮ ಸಾರ್ಥಕವಾಯಿತು” ಎಂದು ಹೇಳಿದರು.ನನಗೆ ನನ್ನ ಮುತ್ತಾತನ ಬಗ್ಗೆ ಹೆಚ್ಚೇನೂ ತಿಳಿದಿರಲಿಲ್ಲ. ನಮ್ಮ ಹಿರಿಯರು ಅಲ್ಪಸ್ವಲ್ಪ ಹೇಳುತ್ತಿದ್ದರು. 1890ರಲ್ಲಿ ನನ್ನ ಅಜ್ಜ ಲಂಡನ್‌ದಿಂದ ಅಮೆರಿಕಕ್ಕೆ ವಲಸೆ ಹೋಗಿದ್ದರು. ಈಗ ನಾವು ಅಮೆರಿಕದ ನಿವಾಸಿಗಳು. ಅಂತರಜಾಲದಲ್ಲಿ ಪರ್ತ್ ವಿಶ್ವವಿದ್ಯಾಲಯದ ಆಡಳಿತಾಧಿಕಾರಿ ಸುಪ್ರತೀಕ್ ನನಗೆ ಭೇಟಿಯಾಗಿ ನನ್ನ ಮುತ್ತಾತನ ವೃತ್ತಾಂತ ತಿಳಿಸಿದರು ಎಂದು ಅಲ್ಬರ್ಟೋ ವಿವರಿಸಿದರು.ನನ್ನ ಮುತ್ತಾತ ಬರೆದ ಪುಸ್ತಕಗಳನ್ನು ಓದಿದ್ದೇನೆ. ಇಲ್ಲಿನ ಅರಸರ, ಜನರ ಬಗ್ಗೆ ಅವರು ಉಲ್ಲೇಖಿಸಿದ್ದಾರೆ. ಸುರಪುರ ಇತಿಹಾಸ ಅಧ್ಯಯನ ಸಂಸ್ಥೆಯ ನಿರ್ದೇಶಕ ಭಾಸ್ಕರರಾವ್ ಮುಡಬೂಳ್ ಅವರ ಸಹಾಯದಿಂದ ನಾನು ಇಲ್ಲಿಗೆ ಬರಲು ಸಾಧ್ಯವಾಯಿತು. ನಾನು ಸುರಪುರ ಇತಿಹಾಸದ ಬಗ್ಗೆ ಇನ್ನಷ್ಟು ಮಾಹಿತಿ ಕಲೆ ಹಾಕಲು ಯತ್ನಿಸುತ್ತೇನೆ. ಇಲ್ಲಿನ ಅರಸರ ಮತ್ತು ಜನರೊಡನೆ ಬಾಂಧವ್ಯ ಮುಂದುವರೆಸಲು ಬಯಸುತ್ತೇನೆ ಎಂದು ನುಡಿದ ಅವರು ಎಲ್ಲರಿಗೂ ಧನ್ಯವಾದ ಹೇಳಿದರು.“ಟೇಲರ್ ಮೊಮ್ಮಗ ಇಲ್ಲಿಗೆ ಬಂದದ್ದು ನಮ್ಮ ಸುದೈವ. ಇದರಿಂದ 165 ವರ್ಷಗಳ ಹಿಂದಿನ ಇತಿಹಾಸ ಮತ್ತೆ ಮರುಕಳಿಸುವಂತಾಗಿದೆ. ಹೈದರಾಬಾದ್‌ನ ಸ್ಟಾರ್ ಹೊಟೇಲ್‌ನಲ್ಲಿ ಅಲ್ಬರ್ಟೋಗೆ ನಿದ್ದೆ ಹತ್ತಲಿಲ್ಲ. ಅವರ ಮುತ್ತಾತ ಕಟ್ಟಿಸಿದ ಟೇಲರ್ ಮಂಜಿಲ್‌ದಲ್ಲಿ ಭಾನುವಾರ ಸುಖ ನಿದ್ರೆ ಮಾಡಿದರು. ಅವರ ಮುಖದಲ್ಲಿ ಏನೋ ಸಂತಸ ಭಾವನೆ ಮೂಡಿದೆ” ಎಂದು ಭಾಸ್ಕರರಾವ್ ಮುಡಬೂಳ್ ಹೇಳಿದರು. ಅರಸು ಮನೆತನದ ರಾಜಾ ವೆಂಕಟಪ್ಪನಾಯಕ್ ತಾತಾ ಮತ್ತು ಯುವರಾಜಾ ರಾಜಾ ಕೃಷ್ಟಪ್ಪನಾಯಕ್ ಅಲ್ಬರ್ಟೋ ಅವರನ್ನು ಸನ್ಮಾನಿಸಿದರು.ಮುದ್ದಣ್ಣ ಸರಪಟ್ಟಣಶೆಟ್ಟಿ, ವೇಣುಮಾಧವನಾಯಕ್, ಉಸ್ತಾದ್ ವಜಾಹತ್ ಹುಸೇನ್, ರಾಮಚಂದ್ರ ವರ್ಮಾ, ಲಕ್ಷ್ಮಣರಾವ ನಾಯಕ್, ಲಕ್ಷ್ಮಣ ಇನಾಂದಾರ್, ಬಸವರಾಜ ನಿಷ್ಠಿ ದೇಶಮುಖ, ವೆಂಕಟೇಶ ಭಕ್ರಿ, ರಜಾಕ್ ಭಾಗವಾನ್ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.