ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಭರಣ ಉದ್ಯಮಕ್ಕೆ ವಜ್ರಾಘಾತ

Last Updated 15 ಸೆಪ್ಟೆಂಬರ್ 2015, 19:54 IST
ಅಕ್ಷರ ಗಾತ್ರ

ವಜ್ರಗಳ ಕಥೆ ವಜ್ರಗಳಷ್ಟೇ ಹೊಳಪಿನದ್ದಾಗಿದೆ. ಕೆಲವು ಪ್ರಸಂಗಗಳಲ್ಲಿ ‘ವಜ್ರಾದಪಿ ಕಠೋರಾಣಿ’ ಎಂಬ ಸಂಸ್ಕೃತ ಗುಣವಾಚಕದಂತೆಯೇ ಕಠಿಣವಾಗಿರುವಂತಹುದೂ ಆಗಿದೆ.

ರಾಸಾಯನಿಕವಾಗಿ ಇಂಗಾಲದ ಘನ ರೂಪವಾದ ಈ ವಜ್ರಗಳು ರೂಪುಗೊಳ್ಳುವ ಬಗೆಯೇ ಆಸಕ್ತಿದಾಯಕ ಸಂಗತಿ. ಕಡುಗಪ್ಪು ಗಣಿಗಳ ಆಳದಲ್ಲಿಯೇ ಮಿನುಗುಟ್ಟುತ್ತಿರುವ ಈ ವಜ್ರಗಳನ್ನು ತರಲೆಂದೇ ನೂರಾರು ಮೀಟರ್‌ ಭೂಮಿಯ ಆಳ ಕೊರೆದು ಮನುಷ್ಯ ನಡೆಸುವ ಸಾಹಸದ್ದೂ ಅಷ್ಟೇ ರೋಮಾಂಚನಕಾರಿ.

ಭಾರತದ ಕೊಹಿನೂರ್‌ ವಜ್ರದ್ದೇ ಒಂದು ರೋಚಕ ಕಥೆ. ಅದು ಈಗಲೂ ಸಾಕಷ್ಟು ಕುತೂಹಲ ಕೆರಳಿಸುತ್ತಲೇ ಇದೆ. ಅಷ್ಟೇ ಅಲ್ಲ, ವ್ಯಾಪಕ ಚರ್ಚೆಗೂ ಅವಕಾಶವನ್ನು ಮಾಡಿಕೊಡುತ್ತಲೇ ಇದೆ. ಸದ್ಯ ಬ್ರಿಟನ್‌ನಲ್ಲಿರುವ ಈ ಕೊಹಿನೂರ್‌ ವಜ್ರವನ್ನು ಭಾರತಕ್ಕೆ ವಾಪಸ್‌ ತರುವ ಪ್ರಯತ್ನವೂ ನಡೆಯುತ್ತಲೇ ಇದೆ. ಆಫ್ರಿಕಾ ಖಂಡ, ಕಿಂಬರ್ಲಿ ಗಣಿ ವಜ್ರಗಳ ಸಂಪನ್ಮೂಲದಿಂದಾಗಿಯೇ ಬಹಳ ಹೆಸರುವಾಸಿಯಾಗಿವೆ.

ಭಾರತದಲ್ಲಿನ ವಜ್ರದ ಉದ್ಯಮವೂ ಅಷ್ಟೇ, ಗುಣಮಟ್ಟದಿಂದಾಗಿಯೇ ವಿಶ್ವದೆಲ್ಲೆಡೆ ಪ್ರಸಿದ್ಧಿ ಪಡೆದಿದೆ. ಹಾಗಾಗಿಯೇ ಭಾರತದಲ್ಲಿ ಹೊಳಪು ಪಡೆಯುವ ವಜ್ರಗಳಿಗೆ ಅಮೆರಿಕ, ಚೀನಾ ಸೇರಿದಂತೆ ವಿವಿಧ ದೇಶಗಳಿಂದ ಭಾರಿ ಬೇಡಿಕೆ. ವಜ್ರಗಳು ರಫ್ತು ಆಗುವುದರಿಂದ ದೇಶಕ್ಕೂ ಕೋಟಿಗಳ ಲೆಕ್ಕದಲ್ಲಿ ವಿದೇಶಿ ವಿನಿಮಯ (ವಿವಿಧ ದೇಶಗಳ ಕರೆನ್ಸಿ) ಸಂಗ್ರಹವೂ ಹೆಚ್ಚುತ್ತದೆ. ಇನ್ನೊಂದೆಡೆ, ವಜ್ರವನ್ನು ವಿವಿಧ ಆಕಾರಗಳಲ್ಲಿ ಕೊರೆದು. ಹೊಳಪು ನೀಡುವ ಉದ್ಯಮ ಕ್ಷೇತ್ರದಲ್ಲಿ ಸಾವಿರಾರು ಘಟಕಗಳೂ ಲಕ್ಷಾಂತರ ಕುಶಲಕರ್ಮಿಗಳಿಗೆ ನೌಕರಿಯನ್ನೂ ನೀಡಿವೆ ಎಂಬುದು ಗಮನಾರ್ಹ.

ಇಂತಹ ಭಾರಿ ಹೊಳಪಿರುವ ವಜ್ರ ಉದ್ಯಮಕ್ಕೆ ಈಗ ಆರೋಗ್ಯ ಕೆಡುವಂತಹ ಪರಿಸ್ಥಿತಿ ಎದುರಾಗಿದೆ. ಅದಕ್ಕೆ ಕಾರಣವಾಗಿರುವುದು ನೆರೆಯ ಚೀನಾ! ಚೀನಾ ಶೀನಿದರೆ ಭಾರತವೂ ಆಕ್ಷಿ ಹೊಡೆಯುವ, ಬೀಜಿಂಗ್‌ ಚಳಿಯಲ್ಲಿ ನಡುಗಿದರೆ ದೆಹಲಿ ಕೆಮ್ಮುವಂತಹ ಪರಿಸ್ಥಿತಿ ಈಗಿನದು. ಅಂದರೆ, ಚೀನಾದಲ್ಲಿನ ಪ್ರತಿ ನಡೆಯೂ ಭಾರತದ ಮೇಲೆ ಒಂದಲ್ಲಾ ಒಂದು ರೀತಿಯಲ್ಲಿ ಪ್ರಭಾವವನ್ನು ಬೀರುತ್ತಲೇ ಇದೆ. ಶಾಂಘೈ ಷೇರುಪೇಟೆಯಲ್ಲಿ ಕಂಪನವಾಗಿ, ಸೂಚ್ಯಂಕಗಳು ಕೆಳಕ್ಕಿಳಿದರೆ ಮುಂಬೈ ಷೇರುಪೇಟೆಯಲ್ಲಿಯೂ ತಲ್ಲಣ ಮೂಡುತ್ತದೆ. ಸೂಚ್ಯಂಕಗಳು ಜಾರಲಾರಂಭಿಸುತ್ತವೆ.

ಚೀನಾ ತನ್ನ ಕರೆನ್ಸಿ ಯುವಾನ್‌ ಮೌಲ್ಯವನ್ನು ತಗ್ಗಿಸಿದರೆ ಭಾರತದ ರೂಪಾಯಿಗೂ ಜ್ವರ ಬರುತ್ತದೆ. ಇದೇ ಮಾರ್ಗದಲ್ಲಿ ಭಾರತದ ವಜ್ರ ಉದ್ಯಮವೂ ಚೀನಾದ ಪ್ರಭಾವವನ್ನು ತಪ್ಪಿಸಿಕೊಳ್ಳಲಾಗದೇ ಈಗ ಪರಿತಪಿಸುವಂತಾಗಿದೆ. ಚೀನಾದ ಮಂದಗತಿ ಆರ್ಥಿಕ ಪ್ರಗತಿಯು ಭಾರತದ ಉದ್ಯಮ ಕ್ಷೇತ್ರದ ಮೇಲೆ ಹತ್ತು ಹಲವು ರೀತಿಗಳಲ್ಲಿ ಪರಿಣಾಮ ಬೀರುತ್ತಿದೆ. ಭಾರತದಲ್ಲಿ ಹೊಳಪುಗೊಂಡು ಸಿದ್ಧವಾಗುವ ವಜ್ರಗಳಿಗೆ (ಕಟ್‌ ಡೈಮಂಡ್‌) ಚೀನಾ ಬಹಳ ಮುಖ್ಯವಾದ ಮಾರುಕಟ್ಟೆ. ಆದರೆ, ಸದ್ಯ ಚೀನಾದಲ್ಲಿನ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದೇ ಇರುವುದರಿಂದ ಆ ದೇಶದಿಂದ ವಜ್ರ ಮತ್ತು ವಜ್ರಾಭರಣಗಳಿಗೆ ಬರುತ್ತಿದ್ದ  ಆಮದು ಬೇಡಿಕೆ ಶೇ 40ರಷ್ಟು ಕಡಿಮೆ ಆಗಿದೆ.

ಚೀನಾದ ಆರ್ಥಿಕ ಸ್ಥಿತಿಗತಿ ಭಾರತದ ವಾಣಿಜ್ಯ ಲೋಕ, ಷೇರುಪೇಟೆ ಮೇಲೆ ಖಂಡಿತಾ ಪರಿಣಾಮ ಬೀರುತ್ತದೆ. ಈಗ ಚೀನಾ ವಜ್ರ ಆಮದು ಮಾಡಿಕೊಳ್ಳುವುದನ್ನು ಕಡಿಮೆ ಮಾಡಿದೆ. ಇದು ಭಾರತದ ವಜ್ರ ಉದ್ಯಮದ ಮೇಲೆ ದೊಡ್ಡ ಮಟ್ಟದಲ್ಲಿಯೇ ಪ್ರತಿಕೂಲ ಪರಿಣಾಮ ಬೀರಲಿದೆ. ಅದರಲ್ಲೂ ಗುಜರಾತ್‌ನ ಸೂರತ್‌ ಸುತ್ತಮುತ್ತ ಕೇಂದ್ರೀಕೃತವಾಗಿರುವ ವಜ್ರಕ್ಕೆ ಹೊಳಪು ನೀಡುವ ಉದ್ಯಮಕ್ಕೆ ತೀವ್ರ ಪೆಟ್ಟು ನೀಡಿದೆ ಎನ್ನುತ್ತಾರೆ ಹರಳು ಮತ್ತು ಆಭರಣ ರಫ್ತು ಉತ್ತೇಜನ ಸಮಿತಿ ಅಧ್ಯಕ್ಷ ವಿಪುಲ್‌ ಷಾ.

ಭಾರತದಲ್ಲಿ ಪಾಲಿಷ್‌ ಆಗುವ ವಜ್ರ ಹಾಗೂ ವಜ್ರಗಳಿಂದ ಅಲಂಕರಿಸಿದ ಆಭರಣಗಳಿಗೆ ಬಹಳ ವರ್ಷಗಳಿಂದಲೂ ಚೀನಾ ಪ್ರಮುಖ ಮಾರುಕಟ್ಟೆಯಾಗಿದೆ. ಆದರೆ, ಈಗ ಆ ದೇಶದ ವಜ್ರಾಭರಣ ಆಮದು ಬೇಡಿಕೆ ಏಪ್ರಿಲ್‌ ತಿಂಗಳಿಂದ ಸತತ ಇಳಿಮುಖವಾಗಿದೆ. ಇದರ ಜತೆಗೇ ಮಧ್ಯ ಪ್ರಾಚ್ಯದಿಂದಲೂ ಬೇಡಿಕೆ ತಗ್ಗಿದೆ. ಇದರಿಂದಾಗಿ ವಜ್ರಕ್ಕೆ ಹೊಳಪು ನೀಡುವ ಮತ್ತು ವಜ್ರಾಭರಣ ತಯಾರಿಸುವ ದೇಶಿ ಸಂಸ್ಥೆಗಳು ಚಟುವಟಿಕೆ ತಗ್ಗಿಸಿವೆ ಎಂಬುದು ದೇಶದ ವಜ್ರ ಮತ್ತು ವಜ್ರಾಭರಣ ಉದ್ಯಮಿಗಳ ಕಳವಳಕ್ಕೂ ಕಾರಣವಾಗಿದೆ.

ರಫ್ತು ವಹಿವಾಟು ತೀವ್ರವಾಗಿ ಇಳಿಮುಖವಾಗಿದ್ದರಿಂದ ಗುಜರಾತ್‌ನಲ್ಲಿಯೇ ಸುಮಾರು 1,200 ಘಟಕಗಳು ಇತ್ತೀಚೆಗೆ ಕೆಲಸ ಮಾಡುವುದನ್ನೇ ಸ್ಥಗಿತಗೊಳಿಸಿವೆ. ವರಚ್ಚಾ, ಕತರ್‌ಗಾಮ್‌, ಪುನಗಾಮ್‌, ಮಹಿಧೇರ್‌ಪುರದಲ್ಲಿಯೇ ವಜ್ರಕ್ಕೆ ಹೊಳಪು ನೀಡುವ ನಾಲ್ಕು ಸಾವಿರ ಘಟಕಗಳಿವೆ. ಇವುಗಳಲ್ಲಿ ನಾಲ್ಕು ಲಕ್ಷ ಮಂದಿ ದುಡಿಯುತ್ತಿದ್ದಾರೆ.  

ಇವರಲ್ಲಿ ಬಹಳಷ್ಟು ಮಂದಿ ಈಗ ಕೆಲಸ ಇಲ್ಲದೇ ಮನೆಯಲ್ಲಿ ಸುಮ್ಮನೆ ಕೂರುವಂತಾಗಿದೆ. ಸಾಮರ್ಥ್ಯ ಹೆಚ್ಚಳ, ವಿಸ್ತರಣೆ, ಹೂಡಿಕೆ ಎಂದು ದೇಶದ ವಜ್ರ ಸಂಸ್ಕರಣೆ ಉದ್ಯಮ ಸದ್ಯ ₹650 ಕೋಟಿಗೂ ಅಧಿಕ ಮೊತ್ತದ ಸಾಲದ ಹೊರೆಯನ್ನೂ ಹೊತ್ತಿದೆ ಎಂಬ ಮಾಹಿತಿ ಇದೆ. ಚೀನಾದ ಮಾರುಕಟ್ಟೆ ಪರಿಸ್ಥಿತಿ  ಮಂದಗತಿ ಪ್ರಗತಿಯನ್ನು ಕಾಣುತ್ತಿದೆ. ಅಲ್ಲಿನ ಕರೆನ್ಸಿ ಯುವಾನ್‌ ಮೌಲ್ಯವನ್ನೂ ಚೀನಾ ಸರ್ಕಾರ ತಗ್ಗಿಸಿದೆ. ಇದು  ಸಹ ಅಲ್ಲಿನ ನಾಗರಿಕರ ಖರೀದಿ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ.

ಸಹಜವಾಗಿಯೇ ಐಶಾರಾಮಿ ವಸ್ತುಗಳ ಮಾರಾಟ ವಹಿವಾಟು ಇಳಿಮುಖವಾಗುತ್ತದೆ. ಇದು ವಜ್ರ ಮತ್ತು ವಜ್ರ ಖಚಿತ ಆಭರಗಳ ಮಾರುಕಟ್ಟೆ ಮೇಲೆಯೂ ನಕಾರಾತ್ಮಕ ಪರಿಣಾಮ ಬೀರುತ್ತದೆ. ಚೀನಾ ಬಿಟ್ಟರೆ ಭಾರತದ ವಜ್ರ ಮತ್ತು ವಜ್ರಾಭರಣಗಳಿಗೆ ಮತ್ತೊಂದು ಪ್ರಮುಖ ಮಾರುಕಟ್ಟೆ ಎಂದರೆ ಅಮೆರಿಕ. ಚೀನಾದ ಮಾರುಕಟ್ಟೆಯಲ್ಲಿ ಬೇಡಿಕೆ ತಗ್ಗಿರುವುದರಿಂದ ಭಾರತದ ವಜ್ರಾಭರಣ ತಯಾರಿಕಾ ಉದ್ಯಮವು ಸದ್ಯಕ್ಕಂತೂ ಅಮೆರಿಕ ಮಾರುಕಟ್ಟೆಯನ್ನೇ ಅವಲಂಬಿಸುವಂತಾಗಿದೆ. 


***
ವಜ್ರ ಉದ್ಯಮ ಉದ್ಯೋಗ
ಭಾರತದ ಹರಳು ಮತ್ತು ಆಭರಣಗಳ ತಯಾರಿಕೆ ಮತ್ತು ಮಾರಾಟದ ಉದ್ಯಮ ದೇಶದ ಆರ್ಥಿಕತೆಗೆ ಬಹಳ ಮಹತ್ವದ ಕೊಡುಗೆಯನ್ನೇ ನೀಡುತ್ತಿದೆ. ಒಟ್ಟಾರೆ ಆಂತರಿಕ ಉತ್ಪಾದನೆಗೆ (ಜಿಡಿಪಿಗೆ) ಶೇ 6ರಿಂದ 7ರಷ್ಟು ಕೊಡುಗೆ ಈ ಉದ್ಯಮದಿಂದಲೇ ಬರುತ್ತಿದೆ. ರಫ್ತು ಚಟುವಟಿಕೆಗೂ ದೊಡ್ಡ ಮಟ್ಟದ ಕೊಡುಗೆ ಈ ಉದ್ಯಮದಿಂದ ಸಂದಾಯವಾಗುತ್ತಿದೆ. ದೇಶದಲ್ಲಿನ ಹರಳು ಮತ್ತು ಆಭರಣಗಳ ಉದ್ಯಮವು ವಾರ್ಷಿಕ ₹2.75 ಲಕ್ಷ ಕೋಟಿಗೂ ಅಧಿಕ ಪ್ರಮಾಣದಲ್ಲಿ ವಹಿವಾಟು ನಡೆಸುವಷ್ಟು ದೊಡ್ಡದಿದೆ. 2018ರ ವೇಳೆಗೆ ₹5.30 ಲಕ್ಷ ಕೋಟಿಗಳವರೆಗೆ ಬೆಳೆಯುವ ಸಾಧ್ಯತೆಯೂ ಇದೆ.

ಇಡೀ ವಿಶ್ವದಲ್ಲಿ ಕೊರೆದು, ಹೊಳಪು ಪಡೆದು ಸಿದ್ಧಗೊಂಡ ವಜ್ರಗಳು ರಫ್ತಾಗುವ ಪ್ರಮಾಣದಲ್ಲಿ ಶೇ 95ರಷ್ಟು ಭಾರತದಿಂದಲೇ ನಡೆಯುತ್ತದೆ. ವಿಶ್ವದಲ್ಲಿ ಸಂಸ್ಕರಣೆಗೊಳ್ಳುವ ಪ್ರತಿ 10 ವಜ್ರಗಳಲ್ಲಿ 9 ವಜ್ರಗಳು ಭಾರತದಲ್ಲಿಯೇ ಹೊಳಪು ಪಡೆದಿರುತ್ತವೆ. ಈ ಅಂಕಿ ಅಂಶವನ್ನು ಗಮನಿಸಿದರೆ ವಿಶ್ವದ ಸಿದ್ಧ ವಜ್ರದ ಮಾರುಕಟ್ಟೆಯಲ್ಲಿ ಭಾರತದ  ಪಾಲು ಎಷ್ಟು ದೊಡ್ಡದಿದೆ ಎಂಬುದು ವೇದ್ಯವಾಗುತ್ತದೆ. ಐಶಾರಾಮಿ ಜೀವನ ಶೈಲಿಯನ್ನು ಆಧರಿಸಿದ ಈ ಉದ್ಯಮವು ಇನ್ನೊಂದು ತುದಿಯಲ್ಲಿ ಭಾರಿ ಸಂಖ್ಯೆಯಲ್ಲಿ ಉದ್ಯೋಗಗಳನ್ನೂ ಸೃಷ್ಟಿಸಿಕೊಡುತ್ತಿದೆ.  ಸೂರತ್‌ ಆಸುಪಾಸಿನಲ್ಲೇ ಐದು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ವಜ್ರ ಹೊಳಪು ಘಟಕಗಳಿದ್ದು, ಲಕ್ಷಾಂತರ ಉದ್ಯೋಗ ಕಲ್ಪಿಸಿಕೊಟ್ಟಿವೆ.

ಕಳೆದ ಹಲವು ವರ್ಷಗಳಲ್ಲಿ ವೇಗವಾಗಿ ಬೆಳವಣಿಗೆ ತೋರಿದ ಈ ಆಭರಣ ಉದ್ಯಮವು ರಫ್ತು ವಹಿವಾಟಿನಲ್ಲಿಯೂ ಮುಂದಿದೆ. ಹಾಗಾಗಿಯೇ ಕೇಂದ್ರ ಸರ್ಕಾರವೂ ‘ಕೌಶಲ ಅಭಿವೃದ್ಧಿ ತರಬೇತಿ’ ಕಾರ್ಯಕ್ರಮದಲ್ಲಿ ವಜ್ರವನ್ನು ಕೊರೆದು ಹೊಳಪು ನೀಡುವ ಉದ್ಯಮಕ್ಕೂ ಅವಕಾಶ ಮಾಡಿಕೊಟ್ಟಿದೆ. 2022ರ ವೇಳೆಗೆ 41 ಲಕ್ಷ ಜನರಿಗೆ ವಜ್ರವನ್ನು ಕೊರೆದು ಹೊಳಪು ನೀಡುವ ಕಲೆಯಲ್ಲಿ ತರಬೇತಿ ನೀಡಲು ಯೋಜಿಸಲಾಗಿದೆ. ಏಕೆಂದರೆ ದೇಶದ ವಜ್ರ ಹೊಳಪು ಉದ್ಯಮಕ್ಕೆ ಮುಂಬರುವ ವರ್ಷಗಳಲ್ಲಿ ಅಷ್ಟೊಂದು ಬೃಹತ್‌ ಸಂಖ್ಯೆಯಲ್ಲಿ ಉದ್ಯೋಗಿಗಳ ಅವಶ್ಯಕತೆ ಬೀಳಲಿದೆ ಎಂಬ ಅಂದಾಜಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT