ಸೋಮವಾರ, ಜನವರಿ 27, 2020
14 °C

ಆರ್‌ಡಿಪಿಆರ್‌ಗೆ ಪ್ರತ್ಯೇಕ ಆಯುಕ್ತಾಲಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಪಂಚಾಯತ್ ರಾಜ್ ಇಲಾಖೆ ಹೆಚ್ಚು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಲು ಪೂರಕವಾಗುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಪ್ರತ್ಯೇಕ ಆಯುಕ್ತಾಲಯ ಹಾಗೂ ನಿರ್ದೇಶನಾಲಯ ರಚಿಸುವ ಪ್ರಸ್ತಾವ ಸರ್ಕಾರದ ಮುಂದಿದೆ. ಸರ್ಕಾರ ಸೂಕ್ತ ಸಂದರ್ಭದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಅಮಿತಾ ಪ್ರಸಾದ್ ತಿಳಿಸಿದರು.ತಾಲ್ಲೂಕಿನ ಬಿಡದಿಯಲ್ಲಿ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನೌಕರರ ಸಂಘದ ಜಿಲ್ಲಾ ಶಾಖೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಪ್ರಸಕ್ತ ಸಾಲಿನ ದಿನಚರಿ ಬಿಡುಗಡೆಗೊಳಿಸಿ ಮಾತನಾಡಿದರು.ಪ್ರಸ್ತುತ ಇಲಾಖೆಯಲ್ಲಿ 29 ಬಗೆಯ ಸಿಬ್ಬಂದಿ ಹುದ್ದೆಗಳು ಖಾಲಿ ಇವೆ. ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಕೆಲ ಮಾರ್ಪಾಡುಗಳನ್ನು ಮಾಡಿ, ಬಡ್ತಿ ಮತ್ತಿತರ ಸೌಲಭ್ಯ ಎಲ್ಲರಿಗೂ ಸೂಕ್ತ ಸಮಯದಲ್ಲಿ ದೊರೆಯುವಂತೆ ಮಾಡುವ ಉದ್ದೇಶ ಇಲಾಖೆಯ ಮುಂದಿದೆ ಎಂದು ಅವರು ತಿಳಿಸಿದರು.ಪಂಚಾಯತ್ ರಾಜ್ ಅನುಷ್ಠಾನದಲ್ಲಿ ಕಳೆದ ವರ್ಷ ದೇಶದಲ್ಲಿಯೇ ರಾಜ್ಯ ದ್ವಿತೀಯ ಸ್ಥಾನ ಪಡೆದಿತ್ತು. ಕೇಂದ್ರ ಸರ್ಕಾರ ರಾಜ್ಯದ ಈ ಸಾಧನೆಯನ್ನು ಮೆಚ್ಚಿ 2 ಕೋಟಿ ರೂಪಾಯಿ ಬಹುಮಾನವನ್ನೂ ನೀಡಿತ್ತು. ಪ್ರಸಕ್ತ ಸಾಲಿನಲ್ಲಿ ರಾಜ್ಯ ಪ್ರಥಮ ಸ್ಥಾನಕ್ಕೆ ಏರುವ ಗುರಿಯನ್ನು ಹೊಂದಿದೆ. ಇದಕ್ಕೆ ಪೂರಕವಾಗಿ ಇಲಾಖೆಯ ನೌಕರರು ಹೆಚ್ಚು ಶ್ರಮವಹಿಸಬೇಕು ಎಂದು ಅವರು ಮನವಿ ಮಾಡಿದರು.ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು (ಪಿಡಿಓ) ವಾರಕ್ಕೆ ಕನಿಷ್ಠ 2 ಬಾರಿ ತಮ್ಮ  ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರವಾಸ ಕೈಗೊಳ್ಳಬೇಕು. ಕುಡಿಯುವ ನೀರು, ರಸ್ತೆ ಮತ್ತು ಮೂಲ ಸೌಕರ್ಯ ವಿಚಾರಗಳ ಬಗ್ಗೆ ಎಚ್ಚರವಹಿಸಬೇಕು ಎಂದು ಅವರು ಸಲಹೆ ನೀಡಿದರು. ಬಜೆಟ್‌ನಲ್ಲಿ ಕಾಲು ಭಾಗದ ಹಣ ಪಂಚಾಯತ್ ರಾಜ್ ಇಲಾಖೆಯ ಮೂಲಕ ವೆಚ್ಚವಾಗುತ್ತಿದೆ. ಸರಾಸರಿ ಪ್ರತಿ ಜಿಲ್ಲಾ ಪಂಚಾಯಿತಿ 100 ರಿಂದ 200 ಕೋಟಿ ರೂಪಾಯಿಗಳ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುತ್ತಿದೆ. ಆದರೂ ಜನಸಮುದಾಯವನ್ನು ಮೆಚ್ಚಿಸಲು ಆಗುತ್ತಿಲ್ಲ. ಇದರ ಬಗ್ಗೆ ಸದಸ್ಯರು ಮತ್ತು ಅಧಿಕಾರಿ ವರ್ಗ ಪರಾಮರ್ಶಿಸಬೇಕು ಎಂದರು.`ಗ್ರಾಮ ಪಂಚಾಯಿತಿಗಳ ಮೂಲಕ ಸರ್ಕಾರಿ ಯೋಜನೆಗಳ ಅನುಷ್ಠಾನದಲ್ಲಿ ದಕ್ಷಿಣ ಕರ್ನಾಟಕದ ಮಟ್ಟಿಗೆ ರಾಮನಗರ ಜಿಲ್ಲೆ ಮುಂಚೂಣಿಯಲ್ಲಿದೆ. ರಾಮನಗರ ಮತ್ತು ದಾವಣಗೆರೆ ಜಿಲ್ಲೆಯ ನಡುವೆ ಪೈಪೋಟಿ ನಡೆಯುತ್ತಿದೆ~ ಎಂದು ಅವರು ಮಾಹಿತಿ ನೀಡಿದರು.ಗ್ರಾಮ ಪಂಚಾಯಿತಿಗಳು ರೂ. 10 ಲಕ್ಷಗಳವರೆಗೆ ಸ್ವತಂತ್ರವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಅವಕಾಶವಿದೆ. ಹೀಗಾಗಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ತಮ್ಮ ಅಧಿಕಾರವ್ಯಾಪ್ತಿಯನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ಕಚೇರಿಯ ಎಲ್ಲ ವ್ಯವಹಾರಗಳನ್ನು ಗಣಕೀಕರಿಸಿ ಎಂದು ಕರೆ ನೀಡಿದ ಅವರು ಪಿಡಿಓಗಳಿಗೆ ತಮ್ಮ ಕರ್ತವ್ಯದ ಸ್ಥಳದಲ್ಲಿ ವಸತಿ ಸೌಕರ್ಯ ಕಲ್ಪಿಸುವ ಬಗ್ಗೆ ಚಿಂತನೆಗಳು ನಡೆಯುತ್ತಿವೆ ಎಂದು ಹೇಳಿದರು.ದಿನದರ್ಶಿಕೆಯನ್ನು ಬಿಡುಗಡೆ ಮಾಡಿದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಸ್. ವೆಂಕಟೇಶಪ್ಪ ಮಾತನಾಡಿ, ಗ್ರಾಮ ಪಂಚಾಯಿತಿಗಳ ಅಧಿಕಾರಿಗಳು ಗ್ರಾಮಸ್ಥರು ಮತ್ತು ಜನಪ್ರತಿನಿಧಿಗಳ ಜತೆ ಸೌಮ್ಯ ರೀತಿಯಲ್ಲಿ ವರ್ತಿಸಬೇಕು. ಅದರ ಜತೆಗೆ ಕಾನೂನನ್ನು ಕಟ್ಟು ನಿಟ್ಟಾಗಿ ಪಾಲಿಸಬೆಕು. ಈ ನಿಟ್ಟಿನಲ್ಲಿ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಬೇಕೇ ಹೊರತು ಪಲಾಯನವಾದ ಸೂಕ್ತವಲ್ಲ ಎಂದು ಕಿವಿಮಾತು ಹೇಳಿದರು.ಇದೇ ಸಂದರ್ಭದಲ್ಲಿ ಜಿಲ್ಲೆಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ನೌಕರರ ಸಂಘ ಕೆಲ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಪ್ರಧಾನ ಕಾರ್ಯದರ್ಶಿ ಡಾ. ಅಮಿತಾ ಪ್ರಸಾದ್ ಅವರಿಗೆ ನೀಡಿದರು.ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಎಂ.ಜಿ.ಶಿವಲಿಂಗಯ್ಯ, ರಾಮನಗರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಸಿ.ನಾರಾಯಣಸ್ವಾಮಿ, ಮಂಚನಾಯ್ಕನ ಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ  ಶೃತಿ ಸಂಪತ್ ಕುಮಾರ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳ ಜಿಲ್ಲಾ ನೌಕರರ ಸಂಘದ ಕಾರ್ಯದರ್ಶಿ ಚಂದ್ರು, ನಾಲ್ಕು ತಾಲ್ಲೂಕು ಘಟಕಗಳ ಅಧ್ಯಕ್ಷರುಗಳು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲಾ ಘಟಕದ ಅಧ್ಯಕ್ಷ ಎಂ.ಹೆಚ್.ಹೊನ್ನಗಿರಿಗೌಡ ಸ್ವಾಗತಿಸಿದರು.

ಪ್ರತಿಕ್ರಿಯಿಸಿ (+)