ಶನಿವಾರ, ಫೆಬ್ರವರಿ 27, 2021
28 °C

ಆರ್‌ಸಿಬಿ ತಂಡದ ಮುಂದೆ ಭಾರಿ ಸವಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆರ್‌ಸಿಬಿ ತಂಡದ ಮುಂದೆ ಭಾರಿ ಸವಾಲು

ಕೋಲ್ಕತ್ತ (ಪಿಟಿಐ): ಐಪಿಎಲ್‌ ಟ್ರೋಫಿ ಎತ್ತಿ ಹಿಡಿ ಯುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದವರ ಕನಸು ಈ ಬಾರಿಯೂ ಬಹುತೇಕ ಕರಗಿದೆ. ಮುಂದಿನ ಎರಡು ಪಂದ್ಯಗಳಲ್ಲಿ ಗೆದ್ದರೂ ಪ್ಲೇ ಆಫ್‌ ಹಂತ ಪ್ರವೇಶಿಸುವ ಸಾಧ್ಯತೆ ಕಡಿಮೆ.ವಿರಾಟ್‌ ಕೊಹ್ಲಿ ಸಾರಥ್ಯದ ಆರ್‌ಸಿಬಿ ಗುರುವಾರ ಸಂಜೆ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ನಡೆಯಲಿರುವ ಟ್ವೆಂಟಿ–20 ಪಂದ್ಯದಲ್ಲಿ ಕೋಲ್ಕತ್ತ  ನೈಟ್‌ ರೈಡರ್ಸ್‌ (ಕೆಕೆಆರ್‌) ಎದುರು ಪೈಪೋಟಿ ನಡೆಸಲಿದೆ. ಈ ಪಂದ್ಯದಲ್ಲಿ ಸೋತರೆ ರಾಯಲ್‌ ಚಾಲೆಂಜರ್ಸ್‌ ತಂಡ ಟೂರ್ನಿಯಿಂದ ಹೊರಬೀಳಲಿದೆ.ಆರ್‌ಸಿಬಿ ಸದ್ಯ 12 ಪಂದ್ಯಗಳಿಂದ 10 ಪಾಯಿಂಟ್‌ ಹೊಂದಿದೆ. ಇಷ್ಟೇ ಪಂದ್ಯಗಳಿಂದ ನೈಟ್‌ ರೈಡರ್ಸ್‌ 14 ಪಾಯಿಂಟ್‌ ಹೊಂದಿದೆ. ರಾಜಸ್ತಾನ ರಾಯಲ್ಸ್‌ ಕೂಡ 12 ಪಂದ್ಯಗಳಿಂದ 14 ಪಾಯಿಂಟ್‌ ಹೊಂದಿದೆ. ಈ ಎಲ್ಲಾ ತಂಡಗಳಿಗೆ ತಲಾ ಎರಡು ಪಂದ್ಯಗಳಿವೆ. ಹಾಗಾಗಿ ನೈಟ್‌ ರೈಡರ್ಸ್‌ ಹಾಗೂ ರಾಯಲ್ಸ್‌ ತಂಡಗಳು ಪ್ಲೇ ಆಫ್‌ ಹಂತ ಪ್ರವೇಶಿಸುವ ಸನಿಹದಲ್ಲಿವೆ. ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳು ಈಗಾಗಲೇ ಪ್ಲೇ ಆಫ್‌ ಹಂತ ತಲುಪಿವೆ.ಆರ್‌ಸಿಬಿ ಎದುರಿನ ಪಂದ್ಯದಲ್ಲಿ ಗೆದ್ದರೆ ಗೌತಮ್‌ ಗಂಬೀರ್‌ ಸಾರಥ್ಯದ ಕೆಕೆಆರ್‌ ತಂಡದ ಪ್ಲೇ ಆಫ್‌ ಸ್ಥಾನ ಖಚಿತವಾಗಲಿದೆ. ಏಳನೇ ಆವೃತ್ತಿಯ ಆರಂಭದಲ್ಲಿ ಗೆಲುವಿಗಾಗಿ ಪರದಾಡಿದ್ದ ಈ ತಂಡ ಈಗ ಅಮೋಘ ಪ್ರದರ್ಶನ ತೋರುತ್ತಿದೆ. ಇದಕ್ಕೆ ಕಾರಣ ಈ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ರಾಬಿನ್‌ ಉತ್ತಪ್ಪ ಅವರ ಅದ್ಭುತ ಪ್ರದರ್ಶನ. ಸ್ಥಿರ ಪ್ರದರ್ಶನ ನೀಡುತ್ತಿರುವ ಉತ್ತಪ್ಪ ಪ್ರತಿ ಪಂದ್ಯದಲ್ಲೂ ಅಮೂಲ್ಯ ಆಟದ ಮೂಲಕ ತಂಡದ ಗೆಲುವಿಗೆ ಕಾರಣರಾಗುತ್ತಿದ್ದಾರೆ.ಉತ್ತಪ್ಪ ಸದ್ಯ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಎರಡನೇ ಆಟಗಾರ. 12 ಪಂದ್ಯಗಳಿಂದ 489 ರನ್‌ ಗಳಿಸಿದ್ದಾರೆ. ಕೊನೆಯ ಏಳು ಪಂದ್ಯಗಳಲ್ಲಿ ಕ್ರಮವಾಗಿ 47, 65, 47, 46, 80, 40 ಹಾಗೂ 67 ರನ್‌ ಕಲೆಹಾಕಿದ್ದಾರೆ. ಈ ಕಾರಣ ಈಗ ಎಲ್ಲರ ಕಣ್ಣು ಕರ್ನಾಟಕದ ಉತ್ತಪ್ಪ ಅವರ ಮೇಲಿದೆ. ಕೆಕೆಆರ್‌ ತಂಡದ ನಾಯಕ       ಗಂಭೀರ್‌ ಕೂಡ ಚೆನ್ನಾಗಿ ಆಡುತ್ತಿದ್ದಾರೆ. ಈ ಇಬ್ಬರು ಆಟಗಾರರಿಂದ ಉತ್ತಮ ಆಟ ಮೂಡಿಬರುತ್ತಿದೆ.ಬೌಲಿಂಗ್‌ ವಿಭಾಗದಲ್ಲಿ ಸ್ಪಿನ್ನರ್‌ಗಳಾದ ಸುನಿಲ್‌ ನಾರಾಯಣ್‌ ಹಾಗೂ ಶಕೀಬ್‌ ಅಲ್ ಹಸನ್‌ ಪ್ರಭಾವಿ ಪ್ರದರ್ಶನ ನೀಡುತ್ತಿದ್ದಾರೆ. ಹಿಂದಿನ ಪಂದ್ಯದಲ್ಲಿ ಬಲಿಷ್ಠ ಚೆನ್ನೈ ಸೂಪರ್‌ ಕಿಂಗ್ಸ್‌ ಎದುರು ಗೆದ್ದಿರುವ ಕೆಕೆಆರ್‌ ಈಗ ವಿಶ್ವಾಸದಿಂದ ಬೀಗುತ್ತಿದೆ. ಕೊಹ್ಲಿ ಸಾರಥ್ಯದ ಆರ್‌ಸಿಬಿ ಪರಿಸ್ಥಿತಿ ಚಿಂತಾಜನಕವಾಗಿದೆ. ಕ್ರಿಸ್‌ ಗೇಲ್ ಅವರ ವೈಫಲ್ಯವೇ ಇದಕ್ಕೆ ಕಾರಣ. ಜೊತೆಗೆ ಬೌಲಿಂಗ್‌ ವಿಭಾಗವೂ ದುರ್ಬಲವಾಗಿದೆ. ಮುಂದಿನ ಪಂದ್ಯಗಳಲ್ಲಿ ಗೆದ್ದರೂ ಉಳಿದ ತಂಡಗಳ ಫಲಿತಾಂಶದ ಆಧಾರದ ಮೇಲೆ ಆರ್‌ಸಿಬಿ ಭವಿಷ್ಯ ಅಡಗಿದೆ. ಹಾಗಾಗಿ ಈ ತಂಡದ ಮುಂದೆ ಭಾರಿ ಸವಾಲಿದೆ.

ಪಂದ್ಯ ಆರಂಭ: ಸಂಜೆ 4 ಗಂಟೆಗೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.