ಬುಧವಾರ, ಮೇ 12, 2021
17 °C

ಆಸ್ಪತ್ರೆಗೆ ದಾಳಿ: ನಕಲಿ ವೈದ್ಯರ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಷ್ಟಗಿ: ಆರೋಗ್ಯ ಇಲಾಖೆಯಿಂದ ಯಾವುದೇ ಪರವಾನಗಿ ಪಡೆಯದ ಮತ್ತು ವೈದ್ಯಕೀಯ ವೃತ್ತಿಯ ಅನುಭವ ಅಥವಾ ಅರ್ಹತೆ ಇಲ್ಲದಿದ್ದರೂ ತಾಲ್ಲೂಕಿನಲ್ಲಿ ಆಸ್ಪತ್ರೆ ನಡೆಸುತ್ತಿರುವ ನಕಲಿ ವೈದ್ಯರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಅವರ ವಿರುದ್ಧ ಪೊಲೀಸರಿಗೆ ದೂರು ನೀಡುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಹಾದೇವ ಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಶನಿವಾರ ಆಸ್ಪತ್ರೆಗಳ ಮೇಲೆ ದಾಳಿ ನಡೆಸಿದ ನಂತರ ಅವರು ತಾಲ್ಲೂಕು ಆರೋಗ್ಯಾಧಿಕಾರಿಗೆ ದೂರು ನೀಡುವಂತೆ ಸೂಚಿಸಿದರು. ಈ ವಿಷಯ ಕುರಿತು `ಪ್ರಜಾವಾಣಿ'ಗೆ ಮಾಹಿತಿ ನೀಡಿದ ಡಾ.ಮಹಾದೇವ ಸ್ವಾಮಿ, ಮೂರು ಆಸ್ಪತ್ರೆಗಳ ತಪಾಸಣೆ ನಡೆಸಲಾಯಿತು. ಪರವಾನಗಿ ಪಡೆಯದಿರುವುದು, ದಾಖಲೆಗಳು ಇಲ್ಲದಿರುವುದು ಪತ್ತೆಯಾಗಿದ್ದು ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ತಾಲ್ಲೂಕು ಆರೋಗ್ಯಾಧಿಕಾರಿಗೆ ಸೂಚಿಸಿರುವುದಾಗಿ ಹೇಳಿದರು.ಈ ವಿಷಯ ಕುರಿತು ಮಾಹಿತಿ ನೀಡಿದ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಆನಂದ ಗೋಟೂರು, ಪಟ್ಟಣದ ಹಳೆ ಬಜಾರದಲ್ಲಿ ರಾಜೊಳ್ಳಿ ಎಂಬವವರು ಆಸ್ಪತ್ರೆ ತೆರೆದಿದ್ದು ಅದು ಇಲಾಖೆಯಲ್ಲಿ ನೋಂದಣಿಯಾಗಿಲ್ಲ, ಆದರೆ ಅವರ ಬದಲಾಗಿ ಸಿದ್ಧಔಷಧಿ ನೀಡುತ್ತಿದ್ದ ಅವರ ತಂದೆಯ ಪ್ರಮಾಣಪತ್ರ ಇತ್ತು. ಅದೇ ರೀತಿ ಮಾಗಿ ಎಂಬ ವ್ಯಕ್ತಿಯೂ ಆಸ್ಪತ್ರೆ ತೆರೆದಿದ್ದು ಅವರ ಪತ್ನಿಯ ಹೆಸರಿನಲ್ಲಿ ಬಿಯುಎಂಎಸ್ ಪ್ರಮಾಣ ಪತ್ರ ದೊರೆಯಿತು. ಆದರೆ ಪರವಾನಗಿ ಇರಲಿಲ್ಲ, ಅದೇ ರೀತಿ ಬುತ್ತಿಬಸವೇಶ್ವರ ನಗರದ ರೆಡ್ಡಿ ಎಂಬವವರೂ ನೋಂದಣಿ ನೀಡುವುದಕ್ಕೂ ಸಾಧ್ಯವಾಗದ ಬಿಎಎಂಎಸ್ ಪ್ರಮಾಣ ಪತ್ರ ತೋರಿಸಿದರು. ಆದರೆ ಅದಕ್ಕೆ ಮಾನ್ಯತೆಯೇ ಇಲ್ಲ ಎಂದರು.ಹಿಂದೆ ಪಟ್ಟಣದ ಕೆಲ ನಕಲಿ ವೈದ್ಯರಿಗೆ ನೋಟಿಸ್ ನೀಡಿದರೂ ಕೆಲ ದಿನ ಆಸ್ಪತ್ರೆ ಮುಚ್ಚಿ ನಂತರ ಮತ್ತೆ ತೆರೆದಿದ್ದಾರೆ, ನಾಮಫಲಕ, ಬರೆದುಕೊಟ್ಟ ಚೀಟಿ ಸೇರಿದಂತೆ ಆಸ್ಪತ್ರೆ ನಡೆಸುತ್ತಿರುವ ಬಗೆಗಿನ ಎಲ್ಲ ಮಾಹಿತಿಯನ್ನು ಫೋಟೋ ಸಮೇತ ಸಂಗ್ರಹಿಸಿದ್ದು ಸೋಮವಾರ ಪೊಲೀಸರಿಗೆ ದೂರು ನೀಡುವುದಾಗಿ ಡಾ.ಗೋಟೂರು ಸ್ಪಷ್ಟಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.