ಬುಧವಾರ, ಮೇ 18, 2022
27 °C

ಇಂಗ್ಲೆಂಡ್‌ನ ನಿದ್ದೆಗೆಡಿಸಿದ ಯುವಪಡೆ!

ಪ್ರಜಾವಾಣಿ ವಾರ್ತೆ/ ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

ಇಂಗ್ಲೆಂಡ್‌ನ ನಿದ್ದೆಗೆಡಿಸಿದ ಯುವಪಡೆ!

ಮೊಹಾಲಿ: ಇಂಗ್ಲೆಂಡ್ ತಂಡದ ನಾಯಕ ಅಲಿಸ್ಟರ್ ಕುಕ್ ಬಳಗವು ಆತ್ಮವಿಶ್ವಾಸವನ್ನು ತುಂಬಿಕೊಂಡು ತಂದಿದ್ದ ಕೊಡವನ್ನು ಈಗ ದೋನಿ ಬಳಗ ಬರಿದು ಮಾಡಿಬಟ್ಟಿದೆ.ಮೊಹಾಲಿಯ ಅಂಗಳದಲ್ಲಿ ಗುರುವಾರ ನಡೆಯುವ ಪಂದ್ಯವನ್ನು ಭಾರತ ಗೆದ್ದರೆ, ಕುಕ್ ಕೈಯಿಂದ ಸರಣಿ ಕೈಜಾರಿಹೋಗುತ್ತದೆ. ಮುಂದಿನ ಎರಡು ಪಂದ್ಯಗಳಲ್ಲಿ ಸಮಾಧಾನದ ಗೆಲುವಿಗೆ ಶ್ರಮಪಡಬೇಕಾಗುತ್ತದೆ. ಹತ್ತು ದಿನಗಳ ಹಿಂದೆ ಭಾರತಕ್ಕೆ ಬರುವಾಗ ಕುಕ್ ಮುಖದಲ್ಲಿ ಇದ್ದ ನಗೆ ಮಂಗಳವಾರ ಸಂಜೆ ಮೊಹಾಲಿಗೆ ಬಂದಾಗ ಇರಲಿಲ್ಲ. ಕೋಚ್ ಆ್ಯಂಡಿ ಫ್ಲವರ್ ಮುಖ ಕೂಡ ಬಾಡಿತ್ತು.ಇಂಗ್ಲೆಂಡ್‌ನಲ್ಲಿ ಆದ ಸೋಲು ಮತ್ತು ಪ್ರಮುಖ ಆಟಗಾರರಿಲ್ಲದ `ವಿಶ್ವಚಾಂಪಿಯನ್~ ಭಾರತ ತಂಡಕ್ಕೆ ಸೋಲು ಉಣಿಸುವ ಅಪಾರ ಆತ್ಮವಿಶ್ವಾಸದಲ್ಲಿ ಬಂದಿದ್ದ `ಕುಕ್~ ಬೇಳೆ ಬೇಯುತ್ತಿಲ್ಲ. ದೋನಿ ಬಳಗದ ಯುವಪಡೆ ಪ್ರವಾಸಿಗರ ನಿದ್ದೆಗೆಡಿಸಿದೆ. ಮೊಹಾಲಿ ಪಂದ್ಯದಲ್ಲಿಯೂ ತಿರುಗೇಟು ನೀಡದಿದ್ದರೆ ಇಂಗ್ಲೆಂಡ್ ತಂಡಕ್ಕೆ ಸರಣಿ ಕೈಬಿಟ್ಟುಹೋಗುತ್ತದೆ.  ಆದರೆ ಕಳೆದ ಮಾರ್ಚ್‌ನಲ್ಲಿ ಐಸಿಸಿ ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಣ ರೋಚಕ ಸೆಮಿಫೈನಲ್‌ಗೆ ವೇದಿಕೆಯಾಗಿದ್ದ ಮೊಹಾಲಿ ಕ್ರಿಕೆಟ್ ಮೈದಾನ ಭಾರತದ ಪಾಲಿಗೆ ಯಾವಾಗಲೂ ಅದೃಷ್ಟದ ತಾಣವೆಂದೇ ಸಾಬೀತಾಗಿದ್ದು, ಯಾರಿಗೆ ಒಲಿಯುವುದೋ ಕಾದು ನೋಡಬೇಕು.ಹೈದರಾಬಾದಿನಲ್ಲಿ ಟಾಸ್ ಸೋತು ಮೊದಲು ಬೌಲಿಂಗ್ ಮಾಡಿ ಇನ್ನೇನು ಭಾರತ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿ, ಗ್ದ್ದೆದೇಬಿಡುತ್ತೇವೆ ಎನ್ನುವಾಗ ಮಹೇಂದ್ರಸಿಂಗ್ ದೋನಿಯ `ಹೆಲಿಕಾಪ್ಟರ್ ಶಾಟ್~ಗಳು ಕನಸನ್ನು ನುಚ್ಚುನೂರು ಮಾಡಿಬಿಟ್ಟವು. ಫಿರೋಜ್ ಶಾ ಕೋಟ್ಲಾದಲ್ಲಿ ಸೋಮವಾರ ಟಾಸ್ ಗೆದ್ದು ಬೃಹತ್ ಮೊತ್ತ ಗಳಿಸುವ ಹಾದಿಯಲ್ಲಿ ವಿನಯಕುಮಾರ್ ಮತ್ತು ಬೌಲರ್‌ಗಳು ಅಡ್ಡ ನಿಂತರು. ಕಷ್ಟಪಟ್ಟು ಗಳಿಸಿದ 237 ರನ್ನುಗಳ ಗುರಿಯನ್ನು ಮುಟ್ಟದಂತೆ ಆತಿಥೇಯರನ್ನು ತಡೆಯಲು ನಡೆಸಿದ ಯತ್ನವನ್ನು ವಿರಾಟ್ ಕೊಹ್ಲಿ ಮತ್ತು ಗೌತಮ್  ಗಂಭೀರ್ ಬಿಡಲಿಲ್ಲ. ಮೊದಲ ಪಂದ್ಯದಲ್ಲಿ 126 ರನ್ನುಗಳ ಜಯ ಬಂದರೆ, ದೆಹಲಿಯಲ್ಲಿ 8 ವಿಕೆಟ್‌ನಿಂದ ಗೆದ್ದಾಗ ಇನ್ನೂ 80 ಎಸೆತಗಳು ಬಾಕಿ ಇದ್ದವು.ಕಾಡಿದ ಕೊಹ್ಲಿ: ಅದರಲ್ಲೂ ಕೊಹ್ಲಿ ಅಂತೂ ಎಲ್ಲ ಬೌಲರ್‌ಗಳಿಗೂ ದುಃಸ್ವಪ್ಪವಾಗಿ ಕಾಡಿಬಿಟ್ಟರು. ಚೆಂಡು ಇರುವುದೇ ಬೌಂಡರಿ ದಾಟಿಸಲು ಎನ್ನುವಂತೆ ಚಚ್ಚಿಹಾಕಿದರು. ಇನ್ನೊಂದು ಬದಿಯಲ್ಲಿ ಗಂಭೀರ್ ಶಾಂತವಾಗಿ ತಮ್ಮ ಸ್ನೇಹಿತನಿಗೆ ಸಾಥ್ ಕೊಟ್ಟರು. ಒಂದೇ ಲಯದಲ್ಲಿ ಆಡುತ್ತ ಹೋದ ಕೊಹ್ಲಿ ತಮ್ಮ ಏಕದಿನ ಕ್ರಿಕೆಟ್ ಜೀವನದ ಏಳನೇ ಶತಕ ಪೂರೈಸಿದರು. ಕಳೆದ ಒಂದು ವರ್ಷದ ಅವಧಿಯಲ್ಲಿ ಇದು ಅವರ ಐದನೇ ಶತಕ.ಜೊತೆಗೆ ತಮ್ಮ ತವರಿನ ಅಂಗಳದಲ್ಲಿ ಮೊದಲ ಶತಕದ ಸಂಭ್ರಮ ಆಚರಿಸಿದರು. ಆದರೆ ಮತ್ತೊಮ್ಮೆ ಭಾರತದ ಆರಂಭಿಕ ಬ್ಯಾಟಿಂಗ್ ಜೋಡಿ ಎಡವಿತು. ಇಬ್ಬರೂ ಬ್ಯಾಟ್ಸ್‌ಮನ್‌ಗಳು ಇನಿಂಗ್ಸ್ ಕಟ್ಟುವಲ್ಲಿ ಧಾವಂತ ತೋರಿ ದಂಡ ತೆತ್ತಿದ್ದರು. ಪ್ರತಿ ಓವರಿಗೆ ಸರಾಸರಿ 5ಕ್ಕಿಂತ ಕಡಿಮೆ ರನ್ನುಗಳ ಅವಶ್ಯಕತೆ ಇದ್ದಾಗಲೂ ಬಿರುಸಿನ ಆಟಕ್ಕೆ ಇಳಿಯುವ ಅಗತ್ಯ ಇರುವುದಿಲ್ಲ ಎನ್ನುವುದನ್ನು ಮೂರನೇ ಕ್ರಮಾಂಕದಲ್ಲಿ ಬಂದ ಗಂಭೀರ್ ತಮ್ಮ ಬ್ಯಾಟಿಂಗ್‌ನಲ್ಲಿ ತೋರಿಸಿಕೊಟ್ಟರು. ವಿಕೆಟ್ ಹೋಗದಂತೆ ತಡೆದು ಆಡುವ ಅಗತ್ಯವೂ ಇರುತ್ತದೆ. ಆರಂಭದ ಬ್ಯಾಟ್ಸ್‌ಮನ್‌ಗಳು 50-60 ರನ್ ಸೇರಿಸಿದರೆ ನಂತರ ಬ್ಯಾಟ್ಸ್‌ಮನ್‌ಗಳಿಗೆ ಹೊರೆ ಕಡಿಮೆಯಾಗುತ್ತದೆ. ವೀರೇಂದ್ರ ಸೆಹ್ವಾಗ್ ಮತ್ತು ಸಚಿನ್ ತೆಂಡೂಲ್ಕರ್ ಅನುಪಸ್ಥಿತಿಯಲ್ಲಿ ಆರಂಭದ ಕೊರತೆ ಎರಡನೇ ಪಂದ್ಯದಲ್ಲಿಯೂ ಮುಂದುವರೆಯಿತು. ಇದೊಂದು ವಿಭಾಗ ಸರಿಯಾಗಿಬಿಟ್ಟರೆ ತಂಡ ಪರಿಪೂರ್ಣ ಎಂದು ಹೇಳುತ್ತಾರೆ ಭಾರತದ ಕೋಚ್ ಡಂಕೆನ್ ಫ್ಲೆಚರ್.  ಜಹೀರ್‌ಖಾನ್, ಆಶೀಶ್ ನೆಹ್ರಾ, ಮುನಾಫ್ ಪಟೇಲ್ ಅನುಪಸ್ಥಿತಿಯನ್ನು ಕೊರಗು ಕೂಡ ನಿವಾರಣೆಯಾಗಿದೆ. ಉಪ್ಪಳದಲ್ಲಿ ಸ್ಪಿನ್ನರ್‌ಗಳಾದ ಆರ್. ಅಶ್ವಿನ್ ಮತ್ತು ರವೀಂದ್ರ ಜಡೇಜಾ ಮಿಂಚಿದ್ದರು. ಆದರೆ ದೆಹಲಿಯಲ್ಲಿ ಮಾತ್ರ ವಿನಯಕುಮಾರ್ ತಮ್ಮ ನೈಜ ಪ್ರತಿಭೆಯ ಪರಿಚಯ ಮಾಡಿಕೊಟ್ಟರು.ಪ್ರಥಮ ದರ್ಜೆ ಪಂದ್ಯಗಳಲ್ಲಿ ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ಸವಾಲಾಗಿದ್ದ ವಿನಯಕುಮಾರ್, ಕೋಟ್ಲಾದಲ್ಲಿ ನಾಲ್ಕು ವಿಕೆಟ್ ಗಳಿಸಿ ತಮ್ಮ ಎಂಟನೇ ಪಂದ್ಯದಲ್ಲಿಯೇ ಉತ್ತಮ ಸಾಧನೆ ಬರೆದರು. ಸೊನ್ನೆಯ ದಾಖಲೆ; ಮೊದಲ ಓವರ್‌ನಲ್ಲಿ ಪ್ರವೀಣಕುಮಾರ್ ಒಂದು ಮತ್ತು ಎರಡನೇ ಓವರಿನಲ್ಲಿ ವಿನಯ್ ಒಂದು ವಿಕೆಟ್ ಕಿತ್ತಾಗಲೇ ಇಂಗ್ಲೆಂಡ್ ಕೆಲಸ ಕೆಟ್ಟಿತ್ತು. ಭಾರತದ ಎದುರು ಎರಡನೇ ಸಲ ಅವರು ಈ ರೀತಿ ಸೊನ್ನೆ ಮೊತ್ತಕ್ಕೆ ಎರಡು ವಿಕೆಟ್ ಕಳೆದುಕೊಂಡಿದ್ದರು. 2007ರಲ್ಲಿ ಲಾರ್ಡ್ಸ್‌ನಲ್ಲಿಯೂ ಇಂಗ್ಲೆಂಡ್ ಸೊನ್ನೆಗೆ ಎರಡು ವಿಕೆಟ್ ಕಳೆದುಕೊಂಡಿತ್ತು. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಈ ರೀತಿಯಾಗಿರುವುದು ಮೂರೇ ಸಲ. ಎಲ್ಲ ಬಾರಿಯೂ ಇಂಗ್ಲೆಂಡ್ ತಂಡದ ಸ್ಕೋರ್ ಬೋರ್ಡ್ ಮೇಲೆ ಈ ಸಂಖ್ಯೆಗಳು ಮೂಡಿದ್ದು. ಕಳೆದ ವರ್ಷ ಪರ್ಥ್‌ನಲ್ಲಿ ಆಸ್ಟ್ರೇಲಿಯ ವಿರುದ್ಧವೂ ಖಾತೆ ತೆರೆಯುವ ಮುನ್ನವೇ ಇಂಗ್ಲೆಂಡ್ ಎರಡು ವಿಕೆಟ್ ಕಳೆದುಕೊಂಡಿತ್ತು.ಬೌಲರ್‌ಗಳ ಪ್ರದರ್ಶನಕ್ಕೆ ತಕ್ಕಂತೆ ಫೀಲ್ಡರ್‌ಗಳ ಪ್ರದರ್ಶನ ಶಿಸ್ತುಬದ್ಧವಾಗಿತ್ತು. ಸುರೇಶ್ ರೈನಾ ತಮ್ಮ ಮಿಂಚಿನ ಫೀಲ್ಡಿಂಗ್‌ನಿಂದ ಒಂದಷ್ಟು ರನ್ನುಗಳನ್ನು ಉಳಿಸಿದರು. ಭಾರತ ತನ್ನ ನೆಲದಲ್ಲಿ ಎಲ್ಲ ವಿಭಾಗಗಳಲ್ಲಿಯೂ ಪುಟಿದೆದ್ದು ನಿಂತಿರುವುದೇ ಈಗ ಇಂಗ್ಲೆಂಡ್ ತಂಡಕ್ಕೆ ಸಮಸ್ಯೆ ತಂದೊಡ್ಡಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.