ಶುಕ್ರವಾರ, ಮೇ 7, 2021
26 °C

ಇಟ್ಟಿಗೆ ಭಟ್ಟಿಯಲ್ಲಿ ಬಾಲ ಕಾರ್ಮಿಕರು

ಪ್ರಜಾವಾಣಿ ವಾರ್ತೆ/ ಬಸವರಾಜ್ ಸಂಪಳ್ಳಿ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಜಿಲ್ಲೆಯಲ್ಲಿ ಕಾರ್ಯಾನಿರ್ವಹಿಸುತ್ತಿರುವ ಇಟ್ಟಿಗೆ ತಯಾರಿಕಾ ಘಟಕಗಳಲ್ಲಿ (ಭಟ್ಟಿಗಳಲ್ಲಿ) ಚಿಕ್ಕಾಸಿಗಾಗಿ ಬಾಲ ಕಾರ್ಮಿಕರು ಬೆವರು ಸುರಿಸುತ್ತಿದ್ದಾರೆ. ಇಟ್ಟಿಗೆ ಘಟಕಗಳ ಮಾಲೀಕರು ಕಾನೂನು ಬಾಹಿರವಾಗಿ ಬಾಲಕಾರ್ಮಿಕರ ಕೈಯಲ್ಲಿ ದುಡಿಮೆ ಮಾಡಿಸಿಕೊಳ್ಳುತ್ತಿದ್ದರೂ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಸ್ಥೆ ಮಾತ್ರ ಮೌನವಾಗಿದೆ.ಗುಣಮಟ್ಟದ ಇಟ್ಟಿಗೆ ತಯಾರಿಕೆಗೆ ಹೆಸರಾದ ಬಾಗಲಕೋಟೆ ಸಮೀಪದ ಗದ್ದನಕೇರಿ ಹಾಗೂ ಜಮಖಂಡಿ ತಾಲ್ಲೂಕಿನ ಆಲಗೂರು, ಚಿಕ್ಕಪಡಸಲಗಿ, ಜಕ್ಕನೂರು, ಕುಂಚನೂರು, ಮೈಗೂರು, ಹಿಪ್ಪರಗಿ ಮತ್ತಿತರ ಕಡೆಗಳಲ್ಲಿ ಮುಖ್ಯರಸ್ತೆಯ ಇಕ್ಕೆಲದ ಹೊಲದಲ್ಲೇ ಹೆಜ್ಜೆಹೆಜ್ಜೆಗೆ ಕಾರ್ಯಾಚರಿಸುತ್ತಿರುವ ಇಟ್ಟಿಗೆ ತಯಾರಿಕಾ ಘಟಕಗಳಲ್ಲಿ ಬಾಲ ಕಾರ್ಮಿಕರು ದುಡಿಯುತ್ತಿರುವುದು ಕಂಡುಬರುತ್ತದೆ.ಆಟ, ಪಾಠದಲ್ಲಿ ಪಾಲ್ಗೊಳ್ಳಬೇಕಿದ್ದ ಬಾಲಕ, ಬಾಲಕಿಯರು ಬಡತನದಲ್ಲಿರುವ ಕುಟುಂಬಕ್ಕೆ ಆಸರೆಯಾಗಲು ಅಂತಹ ಕಠಿಣವೇನಲ್ಲದ ಇಟ್ಟಿಗೆ ತಯಾರಿಕೆ ಕೆಲಸದಲ್ಲಿ ಕೂಲಿಯಾಳುಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ದೊಡ್ಡವರಿಗಿಂತ ಚಿಕ್ಕವರೇ ಹೆಚ್ಚಾಗಿ ಇಟ್ಟಿಗೆ ತಯಾರಿಕಾ ಘಟಕಗಳಲ್ಲಿ ಬೆಳಿಗ್ಗೆಯಿಂದ ಸಂಜೆ ವರೆಗೆ ಇಟ್ಟಿಗೆಗಳನ್ನು ಹೊತ್ತು ಲಾರಿ, ಟ್ರ್ಯಾಕ್ಟರ್‌ಗಳಿಗೆ ತುಂಬುವುದು (ಲೋಡ್), ಮಣ್ಣು ಕಲಿಸುವುದು, ಇಟ್ಟಿಗೆ ಬಿಡುವುದು, ಸುಡುವ ಕೆಲಸವನ್ನು ಮಾಡುತ್ತಿದ್ದಾರೆ.ಇಟ್ಟಿಗೆ ತಯಾರಿಕೆ ಘಟಕಗಳಲ್ಲಿ ಬಾಲಕಾರ್ಮಿಕರನ್ನು ದುಡಿಸಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. ಬಹು ವರ್ಷಗಳಿಂದ ಬಾಲಕಾರ್ಮಿಕರನ್ನು ದುಡಿಸಿಕೊಳ್ಳುತ್ತಿದ್ದರೂ ಇದನ್ನು ತಡೆಯಬೇಕಿರುವ ಕಾರ್ಮಿಕ ಇಲಾಖೆ ಮಾತ್ರ ಕಣ್ಮುಚ್ಚಿಕುಳಿತಿದೆ.ನದಿ ತೀರದ ಹೊಲದ ಮಣ್ಣನ್ನು ಅಕ್ರಮವಾಗಿ ತಂದು ಇಟ್ಟಿಗೆಗಳನ್ನು ತಯಾರಿಸಿ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಖಾಸಗಿ ಹಾಗೂ ಸರ್ಕಾರಿ ಕಟ್ಟಡ ಕಾಮಗಾರಿಗೆ ಹೆಚ್ಚಾಗಿ ಜಿಲ್ಲೆಯ ಇಟ್ಟಿಗೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ಅಲ್ಲದೇ ವಿಜಾಪುರ, ಹುಬ್ಬಳ್ಳಿ, ಬೆಳಗಾವಿ ನಗರಗಳವರೆಗೂ ಜಿಲ್ಲೆಯಿಂದ ಇಟ್ಟಿಗೆಗಳನ್ನು ಪೂರೈಕೆ ಮಾಡಲಾಗುತ್ತಿದೆ.ಪತ್ತೆ ಹಚ್ಚಲು ಆಗ್ರಹ: `ಪ್ರಜಾವಾಣಿ'ಗೆ ಮಂಗಳವಾರ ಪ್ರತಿಕ್ರಿಯಿಸಿದ ಕಾರ್ಮಿಕ ಸಂಘಟನೆಯ ಮುಖಂಡ ಶ್ರೀನಿವಾಸ ಬಳ್ಳಾರಿ, `ಜಿಲ್ಲೆಯಲ್ಲಿ ಇಟ್ಟಿಗೆ ಭಟ್ಟಿಗಳಲ್ಲಿ ಮಾತ್ರವಲ್ಲದೇ ಹೋಟೆಲ್, ಖಾನಾವಳಿ, ಅಂಗಡಿ, ಗ್ಯಾರೇಜ್‌ಗಳಲ್ಲೂ ಬಾಲಕರಿಂದ ದುಡಿಮೆ ಮಾಡಿಸಿಕೊಳ್ಳಲಾಗುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಪತ್ತೆಹಚ್ಚಿ ರಕ್ಷಿಸುತ್ತಿಲ್ಲ' ಎಂದು ಆರೋಪಿಸಿದರು.`ಬಾಲಕಾರ್ಮಿಕರನ್ನು ರಕ್ಷಿಸುವಲ್ಲಿ ನಿರ್ಲಕ್ಷ್ಯ ತಾಳಿರುವ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ  ಕಾರ್ಮಿಕ ಸಚಿವರ ಗಮನಕ್ಕೆ ತರಲಾಗುವುದು' ಎಂದರು.`ಸರ್ಕಾರ ಮಕ್ಕಳಿಗೆ ಉಚಿತ ಶಿಕ್ಷಣ, ಮಧ್ಯಾಹ್ನದ ಊಟ, ವಿದ್ಯಾರ್ಥಿನಿಲಯಗಳನ್ನು ತೆರೆದು ಕೋಟ್ಯಾಂತರ ರೂಪಾಯಿ ವ್ಯಯಿಸುತ್ತಿದೆ. ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು, ಅಲ್ಪ ಹಣಕ್ಕಾಗಿ ದುಡಿಮೆಗೆ ಕಳುಹಿಸಬಾರದು' ಎಂದು ವಿನಂತಿಸಿದರು.ಸಿಗದ ಅಧಿಕಾರಿ: ಜಿಲ್ಲೆಯ ಇಟ್ಟಿಗೆ ಘಟಕಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬಾಲಕಾರ್ಮಿಕರ ರಕ್ಷಣೆಗಾಗಿ ಇಲಾಖೆ ಕೈಗೊಂಡಿರುವ ಕ್ರಮದ ಕುರಿತು ಮಾಹಿತಿಗಾಗಿ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಸ್ಥೆಯ ಯೋಜನಾ ನಿರ್ದೇಶಕ ಸುಧಾಕರ ಬಡಿಗೇರ ಅವರ ಮೊಬೈಲ್‌ಗೆ `ಪತ್ರಿಕೆ'ಯಿಂದ ಕರೆ ಮಾಡಿದರೂ ಅವರು ಕರೆಯನ್ನು ಸ್ವೀಕರಿಸಲಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.