ಗುರುವಾರ , ಜೂಲೈ 9, 2020
28 °C

ಇದೊಂದು ಅತ್ಯುತ್ತಮ ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇದೊಂದು ಅತ್ಯುತ್ತಮ ಅವಕಾಶ

ಚೆನ್ನೈ: ‘ಇಂಗ್ಲೆಂಡ್ ವಿರುದ್ಧ ಗೆಲ್ಲಲು ನಮಗೆ ಅತ್ಯುತ್ತಮ ಅವಕಾಶ ಲಭಿಸಿದೆ. ಅವರ ದೌರ್ಬಲ್ಯದ ನೆರವು ಪಡೆಯಬೇಕು. ಈ ತಂಡದ ಆಟಗಾರರು ತುಂಬಾ ದಿನಗಳಿಂದ ವಿಶ್ರಾಂತಿ ಇಲ್ಲದೇ ಕ್ರಿಕೆಟ್ ಆಡುತ್ತಿದ್ದಾರೆ. ಅಕಸ್ಮಾತ್ ಅವರು ಇನ್ನೂ ಕೆಲ ದಿನ ಭಾರತದಲ್ಲಿ ಇರಬೇಕೆಂದರೆ ಗುರುವಾರ ಗೆಲ್ಲಲೇಬೇಕು. ಆದರೆ ಹೆಚ್ಚಿನ ಆಟಗಾರು ತವರಿಗೆ ತೆರಳಿ ಕುಟುಂಬದ ಜೊತೆ ಇರಲು ಬಯಸುತ್ತಿದ್ದಾರೆ’ಹಾಗೆಂದು ಹೇಳಿದ್ದು ವೆಸ್ಟ್‌ಇಂಡೀಸ್ ತಂಡದ ನಾಯಕ ಡೆರೆನ್ ಸ್ಯಾಮಿ. ಅವರ ಈ ಮಾತಿನಲ್ಲಿ ತಮಾಷೆಯೂ ಸೇರಿದೆ.ಕಾರಣ ಆರು ತಿಂಗಳಿನಿಂದ ವಿಶ್ರಾಂತಿ ಇಲ್ಲದೇ ಕ್ರಿಕೆಟ್ ಆಡುತ್ತಿರುವ ಇಂಗ್ಲೆಂಡ್ ತಂಡದ ಹೆಚ್ಚಿನವರು ಫಿಟ್‌ನೆಸ್ ಸಮಸ್ಯೆ ಎದುರಿಸುತ್ತಿದ್ದಾರೆ. ಕೆಲವರು ಕುಟುಂಬದವರನ್ನು ಕಾಣಲು ತವಕಿಸುತ್ತಿದ್ದಾರೆ.ಬುಧವಾರ ಅಭ್ಯಾಸದ ಬಳಿಕ ಮಾತನಾಡಿದ ಡೆರೆನ್, ‘ಇದು ಇಂಗ್ಲೆಂಡ್ ಆಟಗಾರರಿಗೆ ಪ್ರಮುಖ ಪಂದ್ಯ. ಹಾಗಾಗಿ ಅವರ ಮೇಲೆ ಈಗ ಹೆಚ್ಚಿನ ಒತ್ತಡವಿದೆ. ಆದರೆ ನಮಗೆ ಐರ್ಲೆಂಡ್, ಹಾಲೆಂಡ್ ಹಾಗೂ ಬಾಂಗ್ಲಾದೇಶ ತಂಡಗಳನ್ನು ಎದುರಿಸಿದ ರೀತಿ ಮತ್ತೊಂದು ಪಂದ್ಯವಷ್ಟೆ. ನಾವು ತಂತ್ರಗಳನ್ನು ಪಂದ್ಯದ ವೇಳೆ ಸರಿಯಾಗಿ ಜಾರಿಗೆ ತರರಬೇಕು ಅಷ್ಟೆ’ ಎಂದರು.ತಮ್ಮ ತಂಡದ ಸ್ಟಾರ್ ಆಲ್‌ರೌಂಡರ್ ಕ್ರಿಸ್ ಗೇಲ್ ಫಿಟ್ ಆಗಿರುವುದು ಸ್ಯಾಮಿಗೆ ತುಂಬಾ ಖುಷಿ ಉಂಟು ಮಾಡಿದೆ. ‘ಗೇಲ್ ಪೂರ್ಣ ಫಿಟ್ ಆಗಿದ್ದಾರೆ ಎಂದು ಫಿಜಿಯೋ ಹೇಳಿದ್ದಾರೆ. ಅವರನ್ನು ಮತ್ತೆ ತಂಡದಲ್ಲಿ ಸೇರಿಸಿಕೊಳ್ಳಲು ಖುಷಿಯಾಗುತ್ತಿದೆ.ಗೇಲ್ ತಂಡದಲ್ಲಿದ್ದರೆ ಅದೊಂಥರ ಸ್ಫೂರ್ತಿ’ ಎಂದು ಹೇಳಿದರು.‘ವರ್ಷ ಹಿಂದೆಯಷ್ಟೇ ಒಟ್ಟಿನ್ ಗಿಬ್ಸನ್ ಇಂಗ್ಲೆಂಡ್ ತಂಡದ ಬೌಲಿಂಗ್ ಕೋಚ್ ಆಗಿದ್ದರು. ಈಗ ಅವರು ನಮ್ಮ ಕೋಚ್.ಅವರಿಗೆ ಇಂಗ್ಲೆಂಡ್ ತಂಡದ ಕೆಲ ಗುಟ್ಟುಗಳು ಗೊತ್ತಿವೆ. ಅವು ನಮ್ಮ ನೆರವಿಗೆ ಬರಲಿವೆ’ ಎಂದು ನುಡಿದರು.ಈ ವಿಶ್ವಕಪ್‌ನಲ್ಲಿ ಸಿಗುವ ಯಶಸ್ಸು ವೆಸ್ಟ್‌ಇಂಡೀಸ್‌ನ ಕ್ರಿಕೆಟ್ ಪುನಶ್ಚೇತನಕ್ಕೆ ನೆರವಾಗಲಿದೆ ಎಂದು ಸ್ಯಾಮಿ ವಿವರಿಸಿದರು. ‘ನಮಗೆ, ನಮ್ಮ ದೇಶಕ್ಕೆ ಹಾಗೂ ದೇಶದ ಜನರಿಗೆ ಈ ಯಶಸ್ಸು ಖಂಡಿತ ಖುಷಿ ನೀಡಲಿದೆ. ಜೊತೆಗೆ ಕ್ರಿಕೆಟ್ ಸುಧಾರಣೆಗೆ ಕಾರಣವಾಗಲಿದೆ.ನಮ್ಮ ಸಾಮರ್ಥ್ಯದ ಅರಿವು ನಮಗಿದೆ. ಗುರಿ ಮುಟ್ಟುವ ವಿಶ್ವಾಸವಿದೆ. ಅದರಲ್ಲಿ ಯಶಸ್ವಿಯಾದರೆ ಅದಕ್ಕಿಂತ ಸಂತೋಷ ಮತ್ತೊಂದಿಲ್ಲ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.