ಭಾನುವಾರ, ಮೇ 22, 2022
26 °C
ನಗರ ಸಂಚಾರ

ಇನ್ನಾದರೂ ನೀರಿನ ಯೋಜನೆ ಮುಗಿದೀತೆ?

ಪ್ರಜಾವಾಣಿ ವಾರ್ತೆ/ಉ.ಮ.ಮಹೇಶ್ Updated:

ಅಕ್ಷರ ಗಾತ್ರ : | |

ಬೀದರ್: ಈಚೆಗಷ್ಟೇ ಮುಗಿದ ಬೇಸಿಗೆಯಲ್ಲಿ ಬಿಸಿಲಿನ ಜೊತೆಗೆ ನಗರದ ಜನತೆಯನ್ನು ಕಾಡಿದ್ದು ಕುಡಿಯುವ ನೀರಿನ ಸಮಸ್ಯೆ. ಗಂಭೀರ ಸಮಸ್ಯೆ ಎಂಬಂತೆ ಕಾಡಲಿಲ್ಲವಾದರೂ ಕುಡಿಯುವ ನೀರಿನ ಕೊರತೆ ಕಾಡಿದ್ದು ನಿಜ. ನಗರಸಭೆ ಹೆಚ್ಚುವರಿಯಾಗಿ ಕಾರಂಜಾದಿಂದ ನೀರು ಪಡೆಯುವ ಮಟ್ಟಿಗೆ ಈ ಸಮಸ್ಯೆ ಬಾಧಿಸಿತ್ತು.ನಗರ ಕುಡಿಯುವ ನೀರು ಸರಬರಾಜು ಯೋಜನೆಯ ಜಾರಿಯೊಂದಿಗೆ ಮುಂದಿನ ಬೇಸಿಗೆಗೆ ಈ ಸಮಸ್ಯೆ ಇರುವುದಿಲ್ಲ ಎಂಬ ಭರವಸೆ ಅಧಿಕಾರಿ ವಲಯದಿಂದ ಕಾಡಿತ್ತಾದರೂ, ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದು ಮತ್ತೆ ಮುಂದಿನ ಬೇಸಿಗೆಯಲ್ಲಿಯೂ ನೀರು ಪೂರೈಕೆ ಸಮಸ್ಯೆ ಕಾಡಬಹುದಾ ಎಂಬ ಆತಂಕ ಮೂಡಿಸಿದೆ.ನಗರದಲ್ಲಿ 2026ರ ವೇಳೆಗೆ ಇರಬಹುದಾದ ಜನಸಂಖ್ಯೆ ಮತ್ತು ಬೇಡಿಕೆಗೆ ಅನುಸಾರವಾಗಿ ಕುಡಿಯುವ ನೀರು ಪೂರೈಕೆ ಯೋಜನೆ ಜಾರಿಗೊಳಿಸುತ್ತಿದ್ದು, ವಿಳಂಬವಾಗಿರುವ ಈ ಕಾಮಗಾರಿ ಈ ವರ್ಷದ ಅಕ್ಟೋಬರ್ ವೇಳೆಗೆ ಕಾರ್ಯಾರಂಭ ಮಾಡುವ ಭರವಸೆಯು ವ್ಯಕ್ತವಾಗಿತ್ತು.ಈಚೆಗೆ ಸ್ಥಳ ಪರಿಶೀಲನೆಗಾಗಿ ನೀಲಮ್ಮನಹಳ್ಳಿ ತಾಂಡಾ ಸ್ಥಳಕ್ಕೆ ತೆರಳಿದ್ದ ಜಿಲ್ಲಾಧಿಕಾರಿ ಡಾ. ಪಿ.ಸಿ.ಜಾಫರ್ ಅವರೇ,  ಓವರ್ ಹೆಡ್ ಟ್ಯಾಂಕ್‌ಗಳ ನಿರ್ಮಾಣ, ಪೈಪ್‌ಗಳ ಅಳವಡಿಕೆ ಮತ್ತಿತರ ಕಾಮಗಾರಿ ಪ್ರಗತಿಯಲ್ಲಿದ್ದು,  ವರ್ಷಾಂತ್ಯದ ವೇಳೆಗೆ ಮುಗಿಯಬಹುದು ಎಂಬ ಆಶಯ ವ್ಯಕ್ತಪಡಿಸಿದ್ದರು.ಯೋಜನೆಯ ಭಾಗವಾಗಿ ಕಾರಂಜಾ ನದಿಯಿಂದ ಎತ್ತುವಳಿಗಾಗಿ ಕಾರಂಜಾ ಜಲಾಶಯದ ಬಳಿ ಜಾಕ್‌ವೆಲ್ ನಿರ್ಮಾಣ, ಅಲ್ಲಿಂದ ನೀರು ಸಂಸ್ಕರಣೆಗಾಗಿ ನೀಲಮ್ಮನಹಳ್ಳಿ ತಾಂಡಾ ಬಳಿ ಫಿಲ್ಟರ್ ಬೆಡ್ ನಿರ್ಮಾಣ ಆಗುತ್ತಿದೆ. ತದನಂತರ ಶುದ್ಧೀಕರಿಸಿದ ನೀರನ್ನು ನೌಬಾದ್ ಬಳಿಯಿರುವ ನೆಲಹಂತದ ಸಂಪ್‌ಗೆ ಪೂರೈಸಲಾಗುತ್ತದೆ.ಮುಂದಿನ ಹಂತದಲ್ಲಿ ಹೀಗೇ ಸಂಗ್ರಹಿಸಿದ ನೀರನ್ನು ನಗರದ ವಿವಿಧೆಡೆ ನಿರ್ಮಾಣ ಆಗುತ್ತಿರುವ ಓವರ್‌ಹೆಡ್ ಟ್ಯಾಂಕ್‌ಗಳಿಗೆ ನೀರು ಸರಬರಾಜು ಮಾಡಿ, ಅಲ್ಲಿಂದ ಬಡಾವಣೆಗಳಿಗೆ ಪೂರೈಸುವುದು ಗುರಿಯಾಗಿದೆ.`ಕಾರಂಜಾ ಜಲಾಶಯದ ಬಳಿಕ ಜಾಕ್‌ವೆಲ್ ನಿರ್ಮಾಣ ಕಾರ್ಯವು ತಳ ನೆಲದಲ್ಲಿ ಕಲ್ಲು ಸಿಕ್ಕ ಕಾರಣ ವಿಳಂಬವಾಗಿದೆ. ಇದರ ಜೊತೆಗೆ, ಫಿಲ್ಟರ್ ಬೆಡ್ (ಶುದ್ಧೀಕರಣ ಘಟಕ) ಸ್ಥಾಪಿಸಲು ಉನ್ನತ ತಂತ್ರಗಾರಿಕೆ ಅಗತ್ಯವಿದೆ. ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಿರುವ ಕಾರಣ ವಿಳಂಬವಾಗಿದೆ' ಎನ್ನುತ್ತಾರೆ ಅಧಿಕಾರಿಗಳು.ಜಿಲ್ಲಾಧಿಕಾರಿಗಳ ಪ್ರಕಾರ, ಈಗಾಗಲೇ ಕಾಮಗಾರಿ ಶೇ 70ರಷ್ಟು ಪೂರ್ಣವಾಗಿದೆ.ಒಮ್ಮೆ ಯೋಜನೆ ಕಾಮಗಾರಿ ಪೂರ್ಣಗೊಂಡಲ್ಲಿ ಶುದ್ಧೀಕರಿಸಲಾದ ಪ್ರಸ್ತುತ ಬೇಡಿಕೆಗೆ ಅನುಗುಣವಾಗಿ ಅಗತ್ಯ ಪ್ರಮಾಣದ ನೀರು ಸಂಗ್ರಹ ಸಾಧ್ಯವಾಗಲಿದೆ.ಉದಗೀರ್ ರಸ್ತೆಯಲ್ಲಿ ಬಸ್ ನಿಲ್ದಾಣ ಸಮೀಪ ಸೇರಿದಂತೆ ವಿವಿಧೆಡೆ ಇನ್ನೂ ಪೈಪ್ ಅಳವಡಿಕೆ ಕಾರ್ಯವು ಇನ್ನೂ ಪ್ರಗತಿಯಲ್ಲಿದೆ. ನಿತ್ಯ ಗಮನಿಸುತ್ತಿರುವವರಿಗೆ ವಿಳಂಬ  ಆಗುತ್ತಿದೆ ಎನಿಸಿದಲ್ಲಿ ಆಶ್ಚರ್ಯವೂ ಇಲ್ಲ.ಅಧಿಕಾರಿಗಳ ಭರವಸೆ ಮತ್ತು ಆಶಯದಂತೆ ವರ್ಷಾಂತ್ಯದ ವೇಳೆಗೆ ಕಾಮಗಾರಿ ಪೂರ್ಣಗೊಂಡು, ಬೇಸಿಗೆಯಲ್ಲಿ ಕುಡಿಯುವ ನೀರಿನ ಪೂರೈಕೆ ಸಮಸ್ಯೆಗೆ ಪರಿಹಾರ ಒದಗಿಸುವುದಾ ಕಾದುನೋಡಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.