ಮಂಗಳವಾರ, ಆಗಸ್ಟ್ 11, 2020
27 °C

ಇಬ್ಬರು ನಾರಿಯರ ನಡುವೆ ಮುರಾರಿ

ಪ್ರಜಾವಾಣಿ ವಾರ್ತೆ / ಸುಚೇತನಾ ನಾಯ್ಕ Updated:

ಅಕ್ಷರ ಗಾತ್ರ : | |

ಇಬ್ಬರು ನಾರಿಯರ ನಡುವೆ ಮುರಾರಿ

ಬೆಂಗಳೂರು:  ಒಬ್ಬಳು ದೇಶಿ, ಇನ್ನೊಬ್ಬಳು ವಿದೇಶಿ. ಇವರಿಬ್ಬರ ನಡುವೆ ಒಬ್ಬ ಸಾಫ್ಟ್‌ವೇರ್ ಎಂಜಿನಿಯರ್. ಈ ಎಂಜಿನಿಯರ್ ಪತ್ನಿ ಅವಳೋ, ಇವಳೋ...?

ಈ ಕಗ್ಗಂಟು ಈಗ ಹೈಕೋರ್ಟ್‌ನಿಂದ ಕೌಟುಂಬಿಕ ಕೋರ್ಟ್‌ಗೆ ವರ್ಗವಾಗಿದ್ದು, ನ್ಯಾಯಾಲಯವೇ ಅದನ್ನು ಬಿಡಿಸಬೇಕಿದೆ!

`ನನ್ನ ಪತಿ ನೀವೇ~ ಎಂದು ಈ ಮಹಿಳೆ ಹೇಳುತ್ತಿದ್ದರೆ, `ಸುಳ್ಳು ಹೇಳಬೇಡ, ನೀನ್ಯಾರೋ ನಾ ಕಾಣೆ, ಅವಳು ನನ್ನ ಕೈಹಿಡಿದಾಕೆ~ ಎಂದು ಎಂಜಿನಿಯರ್ ಹೇಳುತ್ತಿದ್ದಾರೆ. ನಿಜವಾದ ಪತ್ನಿ ಯಾರೆಂಬ `ರಹಸ್ಯ~ವನ್ನು ದಾಖಲೆ ಪರಿಶೀಲಿಸಿದ ನಂತರ ಭೇದಿಸುವಂತೆ ಹೈಕೋರ್ಟ್, ಕೌಟುಂಬಿಕ ಕೋರ್ಟ್‌ಗೆ ಸೂಚಿಸಿದೆ.

ಇದು ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯ ಹರಿ, ರಮ್ಯಾ ಹಾಗೂ ನೆದರ್‌ಲೆಂಡ್‌ನ ಮಾಯಾ (ಮೂವರ ಹೆಸರು ಬದಲಾಯಿಸಲಾಗಿದೆ) ನಡುವಿನ ತ್ರಿಕೋನ `ದಾಂಪತ್ಯ~ದ ಪ್ರಕರಣ.

ಈಗ ಹರಿ ಮತ್ತು ರಮ್ಯಾ ದೂರವಾಗಿದ್ದಾರೆ. ಮಾಯಾ ಜೊತೆ ಹರಿ ನೆಲೆಸಿದ್ದಾರೆ. ತಮ್ಮ `ಪತಿ~ ತಮ್ಮ ಜೊತೆ ಬಂದು ಸಂಸಾರ ನಡೆಸಲು ಆದೇಶಿಸಬೇಕು ಎಂದು ಕೋರಿ ರಮ್ಯಾ ಕೋರ್ಟ್ ಮೊರೆ ಹೋಗಿದ್ದಾರೆ.

ರಮ್ಯಾರ ಹೇಳಿಕೆ ಏನು?: `ನಾನು ಸ್ನಾತಕೋತ್ತರ ಪದವಿ ಮುಗಿಸಿ ಚಿಕ್ಕನಾಯಕನಹಳ್ಳಿಯಲ್ಲಿ ಕೆಲಸ ಮಾಡುತ್ತಿದ್ದೆ. ಆಗ ಹರಿ ಕೂಡ ಅಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದರು. ನಮ್ಮಿಬ್ಬರ ಪರಿಚಯವಾಗಿ ಅದು ಪ್ರೇಮಕ್ಕೆ ತಿರುಗಿತು. ಅಮೆರಿಕದಿಂದ (ಕ್ಯಾಲಿಫೋರ್ನಿಯಾ) ಬಂದ ಮೇಲೆ ವಿವಾಹ ಆಗುವುದಾಗಿ ವಾಗ್ದಾನ ಮಾಡಿದ್ದ ಹರಿ ಅದರಂತೆ ನಡೆದುಕೊಂಡರು ಕೂಡ. 2001ರ ಅ. 9ರಂದು ತುಮಕೂರಿನಲ್ಲಿ ವಿವಾಹ ಆಯಿತು. ನಂತರ ನನಗೆ ಬೆಂಗಳೂರಿನಲ್ಲಿ ಕೆಲಸ ಸಿಕ್ಕಿತು. ಇದೇ ಕಾರಣಕ್ಕಾಗಿ ಬೆಂಗಳೂರಿನ ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪೆನಿಯಲ್ಲಿ ಎಂಜಿನಿಯರ್ ಆಗಿ ಹರಿ ಕೂಡ ಕೆಲಸಕ್ಕೆ ಸೇರಿದರು. ನಮ್ಮ ಸಂಸಾರ ಚೆನ್ನಾಗಿಯೇ ನಡೆಯುತ್ತಿತ್ತು~ ಎನ್ನುವುದು ರಮ್ಯಾ ಹೇಳಿಕೆ.

`2006ರ ವರೆಗೆ ಎಲ್ಲವೂ ಚೆನ್ನಾಗಿಯೇ ಇತ್ತು. ಅದೇ ಸಾಲಿನ ಆ.2ರಂದು ಮಾಯಾ ಎಂಬ ಮಹಿಳೆಯಿಂದ ನನಗೆ ನೋಟಿಸ್ ಬಂತು. ಅದರಲ್ಲಿ ಹರಿ ಆಕೆಯನ್ನು ವಿವಾಹವಾಗಿರುವ ಬಗ್ಗೆ ತಿಳಿಸಲಾಗಿತ್ತು. ಕಂಪೆನಿಯ ಕೆಲಸದ ನಿಮಿತ್ತ ನೆದರ್‌ಲೆಂಡ್‌ಗೆ ತೆರಳಿದ್ದ ಸಂದರ್ಭದಲ್ಲಿ ಅಲ್ಲಿಯೇ ಪ್ರೇಮವಾಗಿ ತಮ್ಮ ವಿವಾಹ ಆಗಿದೆ ಎಂದು ಆಕೆ ಬರೆದಿದ್ದರು. ನನಗೆ ತೀವ್ರ ಆಘಾತವಾಯಿತು. ಈ ಬಗ್ಗೆ ಹರಿ ಅವರನ್ನು ಕೇಳಿದೆ.

ಅವರು `ಇದೆಲ್ಲ ಸುಳ್ಳು. ಯಾರೋ ಆಗದವರು ಹೀಗೆ ನಿನ್ನನ್ನು ಹೆದರಿಸಲು ನೋಟಿಸ್ ಕೊಟ್ಟಿದ್ದಾರೆ~ ಎಂದು ನನ್ನನ್ನು ಓಲೈಸಿದರು. ನಾನೂ ಸುಮ್ಮನಾದೆ. ಅಂದಿನಿಂದ ಹರಿ ವಿಚಿತ್ರವಾಗಿ ನಡೆದುಕೊಳ್ಳಲು ಆರಂಭಿಸಿದರು. ನನಗೆ ಹಿಂಸೆ ನೀಡತೊಡಗಿದರು. ಇದನ್ನು ತಾಳದೆ ನಾನು ಪೊಲೀಸರಲ್ಲಿ ದೂರು ದಾಖಲು ಮಾಡಬೇಕಾದ ಅನಿವಾರ್ಯತೆ ಉಂಟಾಯಿತು. ಅಂದಿನಿಂದ ಅವರು ನನ್ನನ್ನು ಬಿಟ್ಟು ಮಾಯಾ ಜೊತೆ ವಾಸವಾಗಿದ್ದಾರೆ~ ಎನ್ನುವುದು ಅವರ ಹೇಳಿಕೆ. ಇದೇ ಮಾಹಿತಿಗಳನ್ನು ಕೌಟುಂಬಿಕ ಕೋರ್ಟ್ ಮುಂದಿಟ್ಟು, ಪತಿ ವಾಪಸು ಬರಲು ಆದೇಶಿಸುವಂತೆ ಕೋರಿ ಕೌಟುಂಬಿಕ ಕೋರ್ಟ್‌ಗೆ 2006ರಲ್ಲಿ ಅರ್ಜಿ ಸಲ್ಲಿಸಿದ್ದರು.

ಈಕೆ ಯಾರೋ ಗೊತ್ತೇ ಇಲ್ಲ: ಈ ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿದ ಹರಿ ಅವರು, `ಈಕೆ ಯಾರೆಂದು ನನಗೆ ಗೊತ್ತೇ ಇಲ್ಲ. ಇನ್ನು ಮದುವೆಯಾಗುವ ಪ್ರಶ್ನೆ ಎಲ್ಲಿಂದ? ಈ ಮಹಿಳೆ ನೀಡಿರುವ ಹೇಳಿಕೆಗಳೆಲ್ಲ ಶುದ್ಧ ಸುಳ್ಳು. 2002ರ ನ.27ರಂದು ಮಾಯಾ ಜೊತೆ ನನ್ನ ವಿವಾಹ ನಡೆದಿದೆ. 2003ರಲ್ಲಿ ಒಬ್ಬಳು ಮಗಳೂ ಹುಟ್ಟಿದ್ದಾಳೆ. ಈ ಅರ್ಜಿ ವಜಾ ಮಾಡಿ~ ಎಂದು ತಿಳಿಸಿದರು. ಹರಿ ಅವರ ವಾದವನ್ನು ಮಾನ್ಯ ಮಾಡಿದ್ದ ಕೌಟುಂಬಿಕ ಕೋರ್ಟ್, ರಮ್ಯಾರ ಅರ್ಜಿಯನ್ನು ವಜಾ ಮಾಡಿತ್ತು. ಈ ಆದೇಶವನ್ನು ರಮ್ಯಾ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಈ ಅರ್ಜಿ ವಿಚಾರಣೆಗೆ ಬಂದ ಸಂದರ್ಭದಲ್ಲಿ, ರಮ್ಯಾ ಪರ ವಕೀಲರು, `ರಮ್ಯಾ ಅವರೇ ನಿಜವಾದ ಪತ್ನಿ ಎಂದು ಸಾಬೀತುಪಡಿಸಲು ಕೆಲವೊಂದು ದಾಖಲೆಗಳನ್ನು ಕೌಟುಂಬಿಕ ಕೋರ್ಟ್‌ಗೆ ಈ ಮುಂಚೆ ನೀಡಲು ಸಾಧ್ಯವಾಗಿರಲಿಲ್ಲ. ಈಗ ನಮ್ಮ ಬಳಿ ಹೆಚ್ಚಿನ ದಾಖಲೆಗಳು ಇವೆ. ಅವುಗಳನ್ನು ಹಾಜರುಪಡಿಸಲು ಅನುಮತಿ ಕೋರಿ ಕೌಟುಂಬಿಕ ಕೋರ್ಟ್‌ಗೆ ಮನವಿಯೊಂದನ್ನು ಸಲ್ಲಿಸಲಾಗಿದೆ. ಅದನ್ನು ಗಮನಿಸಿದರೆ ನಿಜವಾದ ವಿಷಯ ನ್ಯಾಯಾಧೀಶರಿಗೆ ತಿಳಿಯುತ್ತದೆ~ ಎಂದರು.

ಅದಕ್ಕೆ ಹರಿ ಪರ ವಕೀಲರು ಕೂಡ ಸಮ್ಮತಿ ಸೂಚಿಸಿದರು. ದಾಖಲೆ ನೋಡಿದ ನಂತರ ನಿಜಾಂಶ ನ್ಯಾಯಾಧೀಶರಿಗೆ ತಿಳಿಯಲಿದೆ ಎಂದು ಅವರೂ ವಾದಿಸಿದರು.

ಆದುದರಿಂದ ನ್ಯಾಯಮೂರ್ತಿಗಳಾದ ಎನ್.ಕೆ.ಪಾಟೀಲ್ ಹಾಗೂ ಎಸ್.ಎನ್.ಸತ್ಯನಾರಾಯಣ ಅವರನ್ನು ಒಳಗೊಂಡ ವಿಭಾಗೀಯ ಪೀಠವು ವಿಚಾರಣೆಯನ್ನು ಕೌಟುಂಬಿಕ ಕೋರ್ಟ್‌ಗೆ ಹಿಂದಿರುಗಿಸಿದೆ. ಎಲ್ಲ ದಾಖಲೆಗಳನ್ನು ಪರಿಶೀಲಿಸಿ ನಾಲ್ಕು ವಾರಗಳ ಒಳಗೆ ಪುನಃ ಆದೇಶ ಹೊರಡಿಸುವಂತೆ ಪೀಠ ಸೂಚಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.