ಬುಧವಾರ, ಮೇ 12, 2021
17 °C

ಇಲ್ಲಗಳ ನಡುವೆ `ಪರಿಸರ ದಿನ'

- ಸುರೇಖಾ ಹೆಗಡೆ Updated:

ಅಕ್ಷರ ಗಾತ್ರ : | |

ಬೆಂಗಳೂರು ದಿನದಿಂದ ದಿನಕ್ಕೆ ಮಾಲಿನ್ಯದ ಗೂಡಾಗುತ್ತಿದೆ. ರಸ್ತೆಯಲ್ಲಿ ತುಂಬಿದ ತ್ಯಾಜ್ಯ, ಗಾಳಿಯಲ್ಲಿನ ಮಾಲಿನ್ಯ, ಕೊಳಚೆ ನೀರಿನ ಪ್ರಮಾಣ ಈ ಬದಲಾವಣೆಯನ್ನು ಪುಷ್ಟೀಕರಿಸುತ್ತದೆ. ವಾಹನಗಳ ಭರಾಟೆಯಲ್ಲಿ ಮಿತಿಗೂ ಮೀರಿದ ದೂಳಿನ ಕಣ ದೇಹವನ್ನು ಸೇರಿ ಮನುಷ್ಯರನ್ನು ಒಂದಿಲ್ಲೊಂದು ಕಾಯಿಲೆಗೆ ದೂಡುತ್ತಿದೆ.ಮಾಲಿನ್ಯಕ್ಕೆ ಪ್ರಮುಖ ಕಾರಣವಾದ ಪ್ಲಾಸ್ಟಿಕ್‌ಗೆ ಒಗ್ಗಿಕೊಂಡ ಮನಸ್ಸುಗಳು ಅದರ ಬಳಕೆಯಿಂದ ವಿಮುಖವಾಗದೇ ಇರುವುದು ಎದ್ದು ಕಾಣುತ್ತಿದೆ. ಏನೆಲ್ಲಾ ಮಾಲಿನ್ಯವಾಗಲಿ, ಗಿಡ ನೆಟ್ಟು ಆಗಬಹುದಾದ ಅನಾಹುತ ತಪ್ಪಿಸುತ್ತೇವೆ ಎನ್ನುವ ಕಾಲ ಇದಲ್ಲ ಎಂದು ಮನಸ್ಸು ಒಂದೆಡೆ ಮರುಗುತ್ತಿದ್ದರೆ, ಪ್ರತಿದಿನ ಬೆಂಗಳೂರನ್ನು ಸೇರುತ್ತಿರುವ ಜನ, ಏರುತ್ತಿರುವ ತ್ಯಾಜ್ಯ ಇವುಗಳನ್ನು ನಿಭಾಯಿಸಲಾಗದೆ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೊರಗುತ್ತಿದೆ. ಈ ಎಲ್ಲಾ ಇಲ್ಲಗಳ ನಡುವೆ ಜನರು ಮಾತ್ರ ಯಾವ ನಿಯಮಗಳಿಗೂ ಬದ್ಧರಾಗದೆ ತಟಸ್ಥರಾಗಿದ್ದಾರೆ. ಇವೆಲ್ಲವುಗಳ ಬೆನ್ನಲ್ಲೇ ನೈರ್ಮಲ್ಯದ ನೂರು ಕನಸು ಹೊತ್ತು `ಪರಿಸರ ದಿನ' ಬಂದಿದೆ. ನಗರದಲ್ಲಿ ಮಾಲಿನ್ಯದ ಸ್ಥಿತಿ-ಗತಿ ಹೀಗಿದೆ ನೋಡಿ...ಗಿಜಿಗಿಜಿ ವಾಹನ

ಬೆಂಗಳೂರಿನಲ್ಲಿ 45 ಲಕ್ಷ ವಾಹನಗಳಿವೆ. ಪ್ರತಿದಿನ 1200ರಷ್ಟು ಹೊಸ ವಾಹನಗಳು ಸೇರಿಕೊಳ್ಳುತ್ತಿವೆ. ಉಸಿರಾಡುವಾಗ ದೇಹದ ಒಳಗೆ ಪ್ರವೇಶಿಸುವ ದೂಳಿನ ಕಣ 60 ಮೈಕ್ರೋ ಗ್ರಾಂನಷ್ಟು ಇರಬೇಕು. ಆದರೆ ವಾಹನ ಉಂಟುಮಾಡುತ್ತಿರುವ ಮಾಲಿನ್ಯದಿಂದ ಇದು ದ್ವಿಗುಣಗೊಂಡಿದೆ. ಈ ಮಾಲಿನ್ಯ ನಿಯಂತ್ರಿಸಲು ಮೆಟ್ರೊ ಉತ್ತಮ ವ್ಯವಸ್ಥೆ ಆಗಬಹುದು. ಗಂಧಕದ ಅಂಶ ಕಡಿಮೆ ಇರುವ ಡೀಸೆಲ್ ಹಾಗೂ ಸೀಸದ ಅಂಶ ಕಡಿಮೆ ಇರುವ ಪೆಟ್ರೋಲ್ ಆಮದಾಗುತ್ತಿರುವುದರಿಂದ ನಿಯಂತ್ರಣ ಸಾಧ್ಯ ಎಂಬ ಚಿಂತನೆ ಮಾಲಿನ್ಯ ನಿಯಂತ್ರಣ ಮಂಡಳಿಯದ್ದು.ಏರುತ್ತಿದೆ ತ್ಯಾಜ್ಯ

`ತ್ಯಾಜ್ಯ ನಗರವನ್ನು ಅಶುದ್ಧವನ್ನಾಗಿಸುತ್ತಿದೆ. ಪ್ರತಿದಿನ 3600 ಟನ್‌ನಷ್ಟು ತ್ಯಾಜ್ಯ ಸಂಗ್ರಹವಾಗುತ್ತಿದೆ. ಇದರ ವಿಲೇವಾರಿಗೆಂದು ಬಿಬಿಎಂಪಿ ವ್ಯಾಪ್ತಿಯಲ್ಲಿ ಆರು ಘಟಕಗಳಿವೆ. ಇಂಥ ಇನ್ನಷ್ಟು ಘಟಕಗಳನ್ನು ಸ್ಥಾಪಿಸಿ, ಅಲ್ಲಿ ವಿದ್ಯುತ್ ತಯಾರು ಮಾಡಬೇಕು ಎಂಬ ಯೋಜನೆಯೂ ಇದೆ' ಎಂದು ಮಾಹಿತಿ ನೀಡುತ್ತಾರೆ ಮಾಲಿನ್ಯ ನಿಯಂತ್ರಣ ಮಂಡಳಿಯ ಮುಖ್ಯ ಪರಿಸರ ಅಧಿಕಾರಿ ನಂದಕುಮಾರ್.ನಿಲ್ಲದ ಪ್ಲಾಸ್ಟಿಕ್ ಗೋಳು

`ಬೆಂಗಳೂರಿನ ಮಾಲಿನ್ಯದಲ್ಲಿ ಪ್ಲಾಸ್ಟಿಕ್ ಬಳಕೆಯ ಪಾಲು ದೊಡ್ಡದಿದೆ. ಅದರ ಬಳಕೆಯನ್ನು ಕಡಿಮೆ ಮಾಡಬೇಕು ಎಂಬ ನಿಯಮ ಜಾರಿಗೆ ಬಂದಿತು. ಅದೂ ಅಲ್ಲದೆ 40 ಮೈಕ್ರಾನ್‌ಗಿಂತ ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್‌ಗಳನ್ನು ಉತ್ಪಾದನೆ ಮಾಡಬಾರದು, ಉತ್ಪಾದನೆ ಮಾಡಿದ ಉತ್ತಮ ಗುಣಮಟ್ಟದ ಪ್ಲಾಸ್ಟಿಕ್‌ಗಳ ಮೇಲೆ ಕಂಪೆನಿಯ ಸೀಲ್ ಇರಬೇಕು ಎಂಬಿತ್ಯಾದಿ ನಿಯಮಗಳಿವೆ. ಆದರೆ ಈ ನಿಯಮವನ್ನು ಚಾಚೂ ತಪ್ಪದೆ ಪಾಲಿಸುತ್ತಿರುವವರ ಸಂಖ್ಯೆ ಕಡಿಮೆ.ಈಗಿನ ಮಾಲಿನ್ಯ ಪ್ರಮಾಣದಲ್ಲಿ ಶೇ 8ರಷ್ಟು ಪಾಲು ಪ್ಲಾಸ್ಟಿಕ್‌ನದ್ದು. ಈ ಬಗ್ಗೆ ಸ್ಥಳೀಯ ಸಂಸ್ಥೆ ಹಾಗೂ ಮಹಾನಗರ ಪಾಲಿಕೆ ಮಟ್ಟದಲ್ಲಿ ಕಾರ್ಯಾಚರಣೆ ನಡೆಯಬೇಕು. ಆದರೆ ಯಾರೂ ಅದನ್ನು ಮಾಡುತ್ತಿಲ್ಲ. ಅಲ್ಲದೆ ಅನೈತಿಕವಾಗಿ ಕರ್ನಾಟಕದಲ್ಲೇ ಪ್ಲಾಸ್ಟಿಕ್ ಉತ್ಪಾದನೆಯಾಗುತ್ತಿದೆಯೇ ಅಥವಾ ಪಾಂಡಿಚೇರಿ, ಡಿಯು, ಡಾಮನ್‌ಗಳಿಂದ ಆಮದಾಗುತ್ತಿದೆಯೇ ಎಂಬ ಮಾಹಿತಿ ದೊರೆಯುತ್ತಿಲ್ಲ' ಎಂಬುದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರ ಅಭಿಪ್ರಾಯ.ಬಿಬಿಎಂಪಿ ನಡೆ

ಪ್ರತಿದಿನ ಸಂಗ್ರಹವಾಗುವ 3600ಕ್ಕೂ ಹೆಚ್ಚು ಟನ್ ತ್ಯಾಜ್ಯವನ್ನು ನಿರ್ವಹಣೆ ಮಾಡುತ್ತಿರುವ ಬಿಬಿಎಂಪಿ ಸದ್ಯದಲ್ಲೇ 31 ವಾರ್ಡ್‌ಗಳಲ್ಲಿ ಡಂಪಿಂಗ್ ಘಟಕಗಳನ್ನು ನಿರ್ಮಿಸಲಿದೆ. ಅಲ್ಲಿ ಒಣ ಹಾಗೂ ಹಸಿ ತ್ಯಾಜ್ಯಗಳನ್ನು ಬೇರ್ಪಡಿಸಿ ಹಸಿ ತ್ಯಾಜ್ಯಗಳನ್ನು ಕರ್ನಾಟಕ ಕಾಂಪೋಸ್ಟ್ ಡೆವಲಪ್‌ಮೆಂಟ್ ಕಾರ್ಪೋರೇಶನ್‌ಗೆ ನೀಡುವ ಯೋಜನೆಯನ್ನು ಹಾಕಿಕೊಂಡಿದೆ. 31 ವಾರ್ಡ್‌ಗಳನ್ನು ಕಸಮುಕ್ತ ವಾರ್ಡ್ ಎಂದು ಘೋಷಣೆ ಮಾಡಲಾಗುತ್ತದಂತೆ.`ದಿನದಿಂದ ದಿನಕ್ಕೆ ನಗರಕ್ಕೆ ಆಗಮಿಸುವವರ ಸಂಖ್ಯೆ ಏರುತ್ತಿರುವುದರಿಂದ ಸಮಸ್ಯೆಗಳು ಹೆಚ್ಚುತ್ತಿವೆ. ತ್ಯಾಜ್ಯ ವಿಲೇವಾರಿ ಸವಾಲಿನ ಕೆಲಸವಾಗುತ್ತಿದೆ. ಹೀಗಾಗಿ ಸಂದರ್ಭಕ್ಕೆ ತಕ್ಕಂತೆ ಯಂತ್ರಗಳಲ್ಲಿ ಸುಧಾರಣೆ ಆಗಬೇಕಿದೆ. ಇತ್ತೀಚೆಗೆ ತ್ಯಾಜ್ಯ ನಿರ್ವಹಣೆಯ ವಿಷಯ ಎಲ್ಲಾ ಕಡೆ ಚರ್ಚೆಯಲ್ಲಿದೆ. ಬಿಬಿಎಂಪಿ ಹಲವಾರು ಯೋಜನೆಗಳನ್ನು ರೂಪಿಸಿದ್ದು, ಮುಂದಿನ ದಿನಗಳಲ್ಲಿ ಮಾದರಿ ನಗರ ಆಗಲಿದೆ' ಎನ್ನುತ್ತಾರೆ ಬಿಬಿಎಂಪಿ ಹೆಚ್ಚುವರಿ ಆಯುಕ್ತ ರಮಣ್‌ದೀಪ್ ಚೌಧರಿ.ಗಿಡವೋ ಗಿಡ

`ಇತ್ತೀಚೆಗೆ ಮರಗಳನ್ನು ತುಂಬಾ ಕಡಿಯುತ್ತಿದ್ದಾರೆ ಎಂಬುದು ಸುಳ್ಳು. ನಾವು ಹಿಂದಿನ ವರ್ಷದಲ್ಲಿ ಸುಮಾರು ಒಂದು ಲಕ್ಷ 72 ಸಾವಿರ ಗಿಡಗಳನ್ನು ಎಲ್ಲಾ ಜೋನ್‌ಗಳಲ್ಲಿ ಬೆಳೆಸಿದ್ದೇವೆ. ಅವುಗಳೆಲ್ಲಾ ಉತ್ತಮ ಸ್ಥಿತಿಯಲ್ಲಿದ್ದು, ಹಾನಿಗೊಂಡ ಕೆಲವು ಗಿಡಗಳ ಜಾಗದಲ್ಲಿ ಹೊಸ ಗಿಡಗಳನ್ನು ಬೆಳೆಸುತ್ತೇವೆ. ಅದರ ಜೊತೆಗೆ ಈ ಬಾರಿ ಮಳೆ ಪ್ರಾರಂಭವಾಗುತ್ತಿದ್ದಂತೆ ಒಂದು ಲಕ್ಷ ಅರವತ್ತು ಸಾವಿರ ಗಿಡಗಳನ್ನು ಬೆಳೆಸುವ ಯೋಜನೆ ಹಾಕಿಕೊಂಡಿದ್ದೇವೆ.

-ಚಂದ್ರಶೇಖರ್, ಉಪ ಅರಣ್ಯ ಸಂರಕ್ಷಣಾಧಿಕಾರಿವಿಶ್ವ ಪರಿಸರ ದಿನ


1972ರಲ್ಲಿ ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಪರಿಸರ ದಿನಾಚರಣೆ ಆಚರಿಸಬೇಕೆಂದು ತೀರ್ಮಾನಿಸಲಾಯಿತು. 1973ರಿಂದ ಅದರ ಆಚರಣೆ ಪ್ರಾರಂಭ. ಪ್ರತಿ ಬಾರಿ ನಿರ್ದಿಷ್ಟ ವಸ್ತು ವಿಷಯವನ್ನಾಧರಿಸಿ ಆಚರಿಸಲಾಗುತ್ತಿದ್ದು, ಈ ಬಾರಿಯ ಸಿದ್ಧಾಂತ `ಯೋಚಿಸು, ಉಣ್ಣು,  ಉಳಿಸು'. ಆದರೆ ವಿಶ್ವಸಂಸ್ಥೆಯ ಆಹಾರ ಹಾಗೂ ಕೃಷಿ ಸಂಸ್ಥೆಯ (ಎಫ್‌ಎಒ) ಸಮೀಕ್ಷೆ ಪ್ರಕಾರ ಪ್ರತಿವರ್ಷ 130 ಕೋಟಿ ಟನ್‌ನಷ್ಟು ಆಹಾರ ಹಾಳಾಗುತ್ತದೆ. ಅಂದರೆ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ 20 ಸಾವಿರ ಮಕ್ಕಳು ಪ್ರತಿದಿನ ಹಸಿವಿನಿಂದಲೇ ಸಾಯುತ್ತಾರೆ. ಇದು ಜಾಗತಿಕ ಮಟ್ಟದ ಸುದ್ದಿಯಾಯಿತು. ನಂಬುತ್ತೀರೋ ಬಿಡುತ್ತೀರೋ, ಬೆಂಗಳೂರಿನಲ್ಲಿ ಪ್ರತಿದಿನದ ಆಹಾರ ತ್ಯಾಜ್ಯ 1200 ಟನ್! ಹಾಗಿದ್ದರೆ ನಾವು ಸೇವಿಸಿದ್ದೆಷ್ಟು, ಎಸೆದಿದ್ದೆಷ್ಟು?

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.