ಭಾನುವಾರ, ಏಪ್ರಿಲ್ 11, 2021
31 °C

ಈಶ್ವರಪ್ಪ ಟೀಕೆಗೆ ಎಚ್‌ಡಿಕೆ ತಿರುಗೇಟು.ಜೆಡಿಎಸ್ ಬಡ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈಶ್ವರಪ್ಪ ಟೀಕೆಗೆ ಎಚ್‌ಡಿಕೆ ತಿರುಗೇಟು.ಜೆಡಿಎಸ್ ಬಡ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ

 .ರಾಮನಗರ: ಸಾಮಾನ್ಯರಲ್ಲಿ ಸಾಮಾನ್ಯ ಹಾಗೂ ಬಡವರಲ್ಲಿ ಕಡು ಬಡವರೊಬ್ಬರನ್ನು ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನಾಗಿ ಮಾಡುವ ಮೂಲಕ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಅವರಿಗೆ ತಕ್ಕ ಉತ್ತರ ನೀಡಿದ್ದೇನೆ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.ಜೆಡಿಎಸ್ ಅಭ್ಯರ್ಥಿ ಸಿಂ.ಲಿಂ.ನಾಗರಾಜು ಅವರೊಂದಿಗೆ ನಾಮಪತ್ರ ಸಲ್ಲಿಸಲು ಚುನಾವಣಾ ಅಧಿಕಾರಿ ಕಚೇರಿಗೆ ಬುಧವಾರ ಆಗಮಿಸಿದ್ದ ಅವರು ನಂತರ ಸುದ್ದಿಗಾರರ ಜತೆ ಮಾತನಾಡಿದರು.

 

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದವರು ಬಿಟ್ಟರೆ ಜೆಡಿಎಸ್‌ಗೆ ಮತ್ಯಾರೂ ಗತಿ ಇಲ್ಲವೇ ಎಂದು ಈಶ್ವರಪ್ಪ ಅವರ ಪ್ರಶ್ನಿಸಿದ್ದರು. ಅದಕ್ಕೆ ಇಂದು ಜೆಡಿಎಸ್‌ನ ಸಾಮಾನ್ಯ ಕಾರ್ಯಕರ್ತನನ್ನು ಚುನಾವಣೆಗೆ ನಿಲ್ಲಿಸಿದ್ದೇವೆ. ನಮ್ಮ ಪಕ್ಷದ ಈ ಅಭ್ಯರ್ಥಿಗೆ ಮೆರವಣಿಗೆ ಸಂದರ್ಭದಲ್ಲಿ ಜನತೆಯಿಂದ ಅಭೂತ ಪೂರ್ವ ಪ್ರೋತ್ಸಾಹ ದೊರೆತಿದೆ. ಇದರಿಂದ ಈ ಭಾಗದ ಮತದಾರರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಿಗೆ ತಕ್ಕ ಪ್ರತ್ಯುತ್ತರ ನೀಡುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.ದೇವೇಗೌಡರ ಕುಟುಂಬ ಕೇವಲ ನಾಲ್ವರಿಗೆ ಸೀಮಿತವಾದುದಲ್ಲ. ಅದು ಪಕ್ಷದ ಕೋಟ್ಯಂತರ ಕಾರ್ಯಕರ್ತರ ಕುಟುಂಬವಾಗಿದೆ ಎಂದು ಅವರು ತಿರುಗೇಟು ನೀಡಿದರು.ಇತ್ತೀಚಿನ ದಿನಗಳಲ್ಲಿ ರಾಜಕೀಯ ಹಣವಂತರಿಗೆ ಮಾತ್ರ ಎಂಬಂತಾಗಿದೆ. ಆದರೆ ಜೆಡಿಎಸ್ ಪಕ್ಷದ ಅಭ್ಯರ್ಥಿ ಹಣವಂತರಲ್ಲ. ಅವರು ಪಕ್ಷದ ನಿಷ್ಠಾವಂತ ಮತ್ತು ಪ್ರಾಮಾಣಿಕ ಕಾರ್ಯಕರ್ತರು. ಇವರನ್ನು ಈ ಕ್ಷೇತ್ರದ ಜನತೆ ಗುರುತಿಸಿ ಮತ ಹಾಕಬೇಕು. ಈ ಮೂಲಕ ರಾಜಕೀಯದಲ್ಲಿ ಹೊಸ ಬದಲಾವಣೆಗೆ ಅವಕಾಶ ಮಾಡಿಕೊಡಬೇಕು ಎಂದು ಅವರು ಮನವಿ ಮಾಡಿದರು.

 

ಕ್ಷಮೆ ಕೋರಿದ ಎಚ್‌ಡಿಕೆ: ಉಪ ಚುನಾವಣೆಯಲ್ಲಿ ನಾನು ಅಭ್ಯರ್ಥಿಯಾಗಬೇಕು ಎಂದು ಕ್ಷೇತ್ರದ ಮತದಾರರು ಮತ್ತು ಕಾರ್ಯಕರ್ತರು ತೀವ್ರ ಒತ್ತಡ ಹೇರಿದ್ದರು. ಒಂದು ವೇಳೆ ನಾನು ಸ್ಪರ್ಧಿಸಿದರೆ ಲೋಕಸಭೆಗೆ ಮತ್ತೊಂದು ಚುನಾವಣೆ ಎದುರಾಗಿ ಸಾರ್ವಜನಿಕರ ಹಣ ವ್ಯಯವಾಗುತ್ತದೆ ಎಂದು ಈ ನಿರ್ಣಯದಿಂದ ಹಿಂದೆ ಸರಿದಿದ್ದೇನೆ. ಇದಕ್ಕಾಗಿ ಕ್ಷೇತ್ರದ ಜನತೆಯ ಕ್ಷಮೆ ಕೋರುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.

 

ನಾನು ಸ್ಪರ್ಧಿಸುವುದರಿಂದ ಮುಂದೆ ಆಗಬಹುದಾದ ಪರಿಣಾಮಗಳ ಬಗ್ಗೆ ಮಾಧ್ಯಮಗಳಲ್ಲಿ ವಿಶ್ಲೇಷಣೆಗಳು ಬಂದಿವೆ. ಅದಕ್ಕೆ ಗೌರವ ಕೊಟ್ಟು ಸ್ಪರ್ಧಿಸದಿರಲು ನಿರ್ಧರಿಸಿರುವೆ ಎಂದು ಅವರು ತಿಳಿಸಿದರು.

 

ಸಾಮೂಹಿಕ ನಾಯಕತ್ವ: ಪಕ್ಷದ ಅಭ್ಯರ್ಥಿ ಪರ ಕ್ಷೇತ್ರದ ಪ್ರತಿ ಗ್ರಾಮಗಳಲ್ಲಿಯೂ ಸಂಚರಿಸಿ ಮತ ಕೇಳುತ್ತೇನೆ. ಇದಕ್ಕೆಂದು ನಾಲ್ಕು-ಐದು ದಿನ ಚನ್ನಪಟ್ಟಣದಲ್ಲಿಯೇ ನೆಲೆಯೂರುತ್ತೇನೆ. ನನ್ನ ಜತೆಗೆ ಶಾಸಕರಾದ ಜಮೀರ್ ಅಹಮದ್ ಖಾನ್, ಎಚ್.ಸಿ.ಬಾಲಕೃಷ್ಣ, ಪುಟ್ಟಣ್ಣ, ಕೆ.ರಾಜು ಕೂಡ ಪ್ರಚಾರ ನಡೆಸಲಿದ್ದಾರೆ. ಕಾರ್ಯಕರ್ತರ ಜತೆಗೂಡಿ ಸಾಮೂಹಿಕ ನಾಯಕತ್ವದೊಡನೆ ಜನತೆಯ ಬಳಿ ಮತ ಯಾಚನೆ ಮಾಡುತ್ತೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

 

ಬಿಜೆಪಿ ಅಭ್ಯರ್ಥಿ ವಿರುದ್ಧ ಕಿಡಿ: ಕ್ಷೇತ್ರದಲ್ಲಿ ಬಿಜೆಪಿ ಹಣ ಬಲದಿಂದ ಗೆಲ್ಲಬಹುದು ಎಂಬ ಉದ್ಧಟತನ ಹೊಂದಿದೆ. ಈಗಾಗಲೇ ಇಲ್ಲಿನ ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಅವರು ತಮ್ಮ ‘ಲೆಟರ್ ಹೆಡ್’ನಲ್ಲಿ ಕ್ಷೇತ್ರದ ಮತದಾರರ ಮನೆಗೆ ಪತ್ರಗಳನ್ನು ಬರೆದಿದ್ದಾರೆ. ಚನ್ನಪಟ್ಟಣವನ್ನು ಗುಡಿಸಲು ರಹಿತಗೊಳಿಸಲು ಕ್ಷೇತ್ರದಲ್ಲಿ 6000 ಮನೆಗಳ ನಿರ್ಮಾಣದ ಯೋಜನೆ ಹಮ್ಮಿಕೊಂಡಿರುವುದಾಗಿ ಹೇಳಿ ಪತ್ರ ಬರೆದಿದ್ದಾರೆ. ಪ್ರತಿ ಮನೆಗೆ 63 ಸಾವಿರ ರೂಪಾಯಿ ಹಣ ಬಿಡುಗಡೆ ಮಾಡಲಾಗಿದೆ ಎಂದು ಸುಳ್ಳು ಹೇಳಿದ್ದಾರೆ. ಇಂತಹ ಆಮಿಷಗಳಿಗೆ ಮತದಾರರು ಕಿವಿಗೊಡಬೇಡಿ ಎಂದು ಅವರು ಕಿವಿಮಾತು ಹೇಳಿದರು.

 

ಕಳೆದ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಅಶ್ವತ್ಥ್ ಅವರು ಮತದಾರರಿಗೆ ಬಣ್ಣದ ಟಿ.ವಿ ನೀಡುವ ಆಮಿಷ ಒಡ್ಡಿದ್ದರೂ. ಯೋಗೇಶ್ವರ್ ಅವರ ಈ ಪತ್ರವೂ ಇದೇ ರೀತಿ ಆಮಿಷ ಅಲ್ಲದೆ ಮತ್ತೇನು ಅಲ್ಲ. ಇದಕ್ಕೆಲ್ಲ ಮರುಳಾಗಬೇಡಿ ಎಂದು ತಿಳಿಸಿದರು. ಇಷ್ಟು ಸಾಲದು ಎಂಬಂತೆ ಇಗ್ಗಲೂರಿನಿಂದ ನೀರಾವರಿ ಯೋಜನೆಗೆಂದು 150 ಕೋಟಿ ರೂಪಾಯಿ ಹಣ ಬಿಡುಗಡೆ ಆಗಿದೆ ಎಂದು ಹೇಳಿಕೊಂಡು ಕರಪತ್ರಗಳನ್ನು ಹೊರಡಿಸಿ ಜನತೆಯ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಅವರು ದೂರಿದರು.

 

ಪಾವಿತ್ರ್ಯ ಕಳೆದುಕೊಂಡ ಕಮಲ: ‘ಆಪರೇಷನ್ ಕಮಲ’ ಕಾರ್ಯಾಚರಣೆಯ ಮೂಲಕ ಕಮಲದ ಹೂವಿನ ಚಿನ್ಹೆ ಪಾವಿತ್ರ್ಯ ಕಳೆದುಕೊಂಡಿದೆ ಎಂದು ಕುಮಾರಸ್ವಾಮಿ ಟೀಕಿಸಿದರು. ಕೆಸರಿನಲ್ಲಿ ಅರಳುವ ಕಮಲ ಪವಿತ್ರವಾದ ಹೂವು. ಆದರೆ ಇದನ್ನು ಪಕ್ಷದ ಚಿನ್ಹೆಯನ್ನಾಗಿ ಹೊಂದಿರುವ ಬಿಜೆಪಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಹಾಗೂ ಹಗರಣಗಳಿಂದ ಕಮಲವನ್ನು ಅವಮಾನಗೊಳಿಸಿ ಅಪವಿತ್ರ ಮಾಡಿದೆ ಎಂದು ಕಿಡಿಕಾರಿದರು.

 

ಅಭಿವೃದ್ಧಿಯ ನೆಪವೊಡ್ಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿ.ಪಿ.ಯೋಗೇಶ್ವರ್ ಅವರು ಒಂದೂವರೆ ವರ್ಷದಲ್ಲಿ ಕ್ಷೇತ್ರಕ್ಕೆ ಯಾವ ಅಭಿವೃದ್ಧಿ ಕೆಲಸ ಮಾಡಿಸಿಕೊಟ್ಟಿದ್ದಾರೆ ಎಂದು ಪ್ರಶ್ನಿಸಿದ ಅವರು, ಚುನಾವಣೆಗಳು ಬಂದಾಗ ಮಾತ್ರ ಅವರ ಬಾಯಲ್ಲಿ ಕ್ಷೇತ್ರದ ಅಭಿವೃದ್ಧಿಯ ಮಾತುಗಳು ಹೊರ ಹೊಮ್ಮುತ್ತವೆ ಎಂದು ವ್ಯಂಗ್ಯವಾಡಿದರು.ಸಾರ್ವತ್ರಿಕ ಚುನಾವಣೆಯಲ್ಲಿ ನಾನೇ ಅಭ್ಯರ್ಥಿ: ಎಚ್‌ಡಿಕೆ

ರಾಮನಗರ: ಮುಂಬರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಚನ್ನಪಟ್ಟಣದಿಂದಲೇ ಸ್ಪರ್ಧಿಸಿ ವಿಧಾನಸಭೆ ಪ್ರವೇಶಿಸುತ್ತೇನೆ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಪ್ರಕಟಿಸಿದರು.ಜೆಡಿಎಸ್ ಅಭ್ಯರ್ಥಿ ಸಿಂ.ಲಿಂ.ನಾಗರಾಜು ಅವರೊಂದಿಗೆ ನಾಮಪತ್ರ ಸಲ್ಲಿಸಲು ಚುನಾವಣಾ ಅಧಿಕಾರಿ ಕಚೇರಿಗೆ ಬುಧವಾರ ಆಗಮಿಸಿದ್ದ ಅವರು ನಂತರ ಸುದ್ದಿಗಾರರ ಜತೆ ಮಾತನಾಡಿದರು.

 

ಜಿ.ಪಂ ಮತ್ತು ತಾ.ಪಂ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಮತದಾರರಲ್ಲಿ ಮನವಿ ಮಾಡಿದ್ದೆ. ಚನ್ನಪಟ್ಟಣದಲ್ಲಿ ಉಪ ಚುನಾವಣೆ ಎದುರಾಗುವುದಿಲ್ಲ, ಅದಕ್ಕೂ ಮುನ್ನವೇ ಸಾರ್ವತ್ರಿಕ ಚುನಾವಣೆ ಬರುತ್ತದೆ. ಆಗ ನಾನು ಅಭ್ಯರ್ಥಿಯಾಗಿ ಚನ್ನಪಟ್ಟಣದಿಂದ ಸ್ಪರ್ಧಿಸುತ್ತೇನೆ ಎಂದು ಕ್ಷೇತ್ರದ ಮತದಾರರಿಗೆ ವಚನ ನೀಡಿದ್ದೆ. ಈಗಲೂ ಈ ವಚನವನ್ನು ಪಾಲಿಸುತ್ತೇನೆ. ಅದಕ್ಕೆ ಬದ್ಧನಾಗಿದ್ದೇನೆ ಎಂದು ಅವರು ಪ್ರತಿಕ್ರಿಯಿಸಿದರು.ಈ ಉಪ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮತದಾರರು ಮತ್ತು ಕಾರ್ಯಕರ್ತರಿಂದ ಒತ್ತಡ ಬಂದಿತ್ತು. ಹಾಗಾಗಿ ಚಿಂತನೆ ನಡೆಸುತ್ತಿದ್ದೆ. ಆದರೆ ಈಗ ಸ್ಪರ್ಧಿಸುತ್ತಿಲ್ಲ ಎಂದ ಮಾತ್ರಕ್ಕೆ ಜನತೆಯನ್ನು ವಂಚಿಸಿದ್ದೇನೆ ಎಂದು ಕೆಪಿಸಿಸಿ ಮಾಜಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ನೀಡಿರುವ ಹೇಳಿಕೆ ಸರಿಯಾದುದಲ್ಲ ಎಂದು ಅವರು ತಿಳಿಸಿದರು.

 

ನಾನು ಸ್ಪರ್ಧಿಸಲಿಲ್ಲ ಎಂದು ಶಿವಕುಮಾರ್ ಅವರು ಬೇಸರ ಪಡುವುದು ಬೇಡ. ಜನತೆಗೆ ನೀಡಿರುವ ವಚನದಂತೆ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಅವರು ತಿರುಗೇಟು ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.